ಬಹುಮುಖಿ ಯೋಗಾನರಸಿಂಹ

dddddddddddddd
Published on

ಯೋಗಣ್ಣ ಎಂದು ವೃತ್ತಿರಂಗ ವಲಯದಲ್ಲಿ ಚಿರಪರಿಚಿತರಾಗಿರುವ ಎಚ್.ಕೆ. ಯೋಗಾನರಸಿಂಹ ಹೆಸರಾಂತ ನಟ, ಹಾಡುಗಾರ, ಗೀತರಚನಕಾರ, ರಾಗ ಸಂಯೋಜಕ, ನಾಟಕಕಾರ, ಸಂಘಟಕ, ನಿರ್ದೇಶಕ ಹಾಗೂ ನೇಪಥ್ಯ ರಂಗಕರ್ವಿು. ವೃತ್ತಿ ರಂಗಭೂಮಿಯಲ್ಲಿ ಅವರು ‘ಆಲ್ ಇನ್ ಆಲ್.’ ಯೋಗಣ್ಣನ ರಂಗಸೇವೆಯ ಬಹುಪಾಲು ವೃತ್ತಿರಂಗಭೂಮಿಗೂ, ಸ್ವಲ್ಪಪಾಲು ಹವ್ಯಾಸಿ ರಂಗಭೂಮಿಗೂ ಸಂದಿದೆ.

ಬೀದಿಕಾಮಣ್ಣ, ಬಿಕನಾಸಿ, ಭೂಮಿ ತೂಕದ ಬಾಮೈದ, ಕಳ್ಳಬಟ್ಟಿ, ಅಡುಗೆಭಟ್ಟ, ಚಂದ್ರಹಾಸ ಸೇರಿದಂತೆ 30ಕ್ಕೂ ಅಧಿಕ ನಾಟಕ ರಚಿಸಿದರು. ನೂರಾರು ರಂಗಗೀತೆಗಳನ್ನು ರಚಿಸಿ, ಅವಕ್ಕೆ ರಾಗಸಂಯೋಜಿಸಿದರು. ಬೇರೆಯವರ ಗೀತೆಗಳಿಗೆ ಹಾಡಿನ ಮಾಧುರ್ಯ ಕೊಟ್ಟರು. ಹಿಂದೂಸ್ತಾನಿ, ಕರ್ನಾಟಕಿ ಎರಡೂ ಪದ್ದತಿಗಳಲ್ಲಿ ಪದ ಕಟ್ಟುತ್ತಿದ್ದರು. ಒಳ್ಳೆಯ ನಟರಾಗಿದ್ದರು. ನೇಪಥ್ಯದಲ್ಲಿ ಎಲ್ಲ ಕೆಲಸಕ್ಕೂ ಸೈ. ಕರ್ನಾಟಕದ ಹತ್ತಾರು ನಾಟಕ ಮಂಡಳಿಗಳು ಅವರ ರಂಗಸೇವೆ ಪಡೆದಿವೆ. ಸ್ವತಃ ನಾಟಕ ಕಂಪನಿ ಕಟ್ಟಿ ನಡೆಸಿದರು. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಯಶಸ್ಸಿನ ಹಿಂದೆ ಇದ್ದ ಕೆಲವು ಪ್ರತಿಭಾವಂತರ ಸಾಲಿನಲ್ಲಿ ಯೋಗಣ್ಣನದು ಎದ್ದು ಕಾಣುವ ಹೆಸರು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿ ಹಳೇಬೀಡುನಲ್ಲಿ ಪ್ರವಚನಕಾರ ಎಚ್. ಕೃಷ್ಣಶಾಸ್ತ್ರಿ- ಶಂಕರಮ್ಮ ದಂಪತಿಗೆ 1927ರಲ್ಲಿ ಜನಿಸಿದ ಯೋಗಣ್ಣ ಅವರ ವಿದ್ಯಾಭ್ಯಾಸ ಪಾಂಡವಪುರ, ಮೈಸೂರಲ್ಲಿ ಜರುಗಿತು. ಬಾಲ್ಯದಿಂದಲೇ ಹಾಡು, ರಚನೆಯಲ್ಲಿ ಒಲವು ಬೆಳೆಸಿಕೊಂಡಿದ್ದ ಯೋಗಣ್ಣ ತಮ್ಮ ಹದಿಹರೆಯದಲ್ಲಿ ಶ್ರೀ ಮಂಜುನಾಥೇಶ್ವರ ನಾಟಕ ಮಂಡಳಿಯ ‘ಕೃಷ್ಣಲೀಲೆ’ ನಾಟಕದ ಬಲರಾಮನಾಗಿ ರಂಗಪ್ರವೇಶ ಮಾಡಿದ್ದರು. ವರನಟ ಡಾ. ರಾಜಕುಮಾರ್ ಕ್ಯಾಂಪಿನ ಪ್ರಸಿದ್ಧ ನಟ ಎಚ್.ಆರ್. ಶಾಸ್ತ್ರಿ (ಯೋಗಣ್ಣನ ಚಿಕ್ಕಪ್ಪ) ಅವರ ಕಂಪನಿ ಅದು. ಪಿ.ಕಾಳಿಂಗರಾಯ, ಮೋಹನ್​ಕುಮಾರಿ, ಸೋಹನ್​ಕುಮಾರಿ ಅವರಿಂದ ಗೀತೆ, ರಂಗಗೀತೆಗಳನ್ನು; ಕಂಪನಿಯಲ್ಲಿ ಪಾತ್ರ ಮಾಡುವುದನ್ನು ಕಲಿತು ಕೆಲ ದಿನಗಳ ನಂತರ ಬಸವಾಪಟ್ಟಣದ ಕಾಶಿ ದಾಳಪ್ಪಶೆಟ್ಟರ ಸುದರ್ಶನ ನಾಟಕ ಮಂಡಳಿ ಸೇರಿದರು.

ನಟನಾಗಿ ಮಾತ್ರವಲ್ಲ!: 1942ರಲ್ಲಿ ಆ ಕಾಲದ ಹೆಸರಾಂತ ನಾಟಕ ಕಂಪನಿಗಳಾದ ಶೇಷಕಮಲ, ಕರ್ನಾಟಕ ನಾಟಕ ಸಭಾ, ಮಹಾದೇವಸ್ವಾಮಿ ನಾಟಕ ಕಂಪನಿಗಳಲ್ಲಿ ಬಹುಮುಖ ಸೇವೆ ಸಲ್ಲಿಸಿದರು. ವಿಜಯ ನಾರಸಿಂಹ ಅವರ ‘ಸ್ವಾರ್ಥಿ’ ನಾಟಕಕ್ಕೆ ಹಾಡು ಬರೆದು ಸಂಗೀತ ಹಾಕಿದರು. ಈ ಮಧ್ಯೆ ರಂಗವಿಲಾಸಿ ಸಂಘ ಮೇಲುಕೋಟೆ ಸ್ಥಾಪಿಸಿ ಕೆಲಕಾಲ ನಡೆಸಿದರು. ಮಹಾದೇವಸ್ವಾಮಿ ಅವರಿಗೆ ಬರೆದುಕೊಟ್ಟ ‘ಚಂದ್ರಹಾಸ’ ಹತ್ತು ವರ್ಷ ನಿರಂತರ ಪ್ರದರ್ಶನ ಕಂಡಿತು. ಮಾಸ್ಟರ್ ಹಿರಣ್ಣಯ್ಯನವರೊಂದಿಗೆ ಹಲವು ವರ್ಷ ದುಡಿದರು. 1963ರಲ್ಲಿ ಸವೋದಯ ನಾಟಕ ಮಂಡಳಿ ಸ್ಥಾಪಿಸಿ- 12 ವರ್ಷ ಏಳುಬೀಳುಗಳೊಂದಿಗೆ ನಡೆಸಿ ಹಲವು ರಂಗದಾಖಲೆ ಬರೆದರು. ಹಳೇ ಮೈಸೂರು ಭಾಗದಲ್ಲಿ ಹಾಲಿ ಉಳಿದಿರುವ ಚಿತ್ರದುರ್ಗದ ಕುಮಾರಸ್ವಾಮಿ, ಮಾಸ್ಟರ್ ಹಿರಣ್ಣಯ್ಯ ಮುಂತಾದವರು ಯೋಗಣ್ಣನ ಪ್ರತಿಭೆ ಸೂರೆ ಹೊಡೆದರು.

ರಂಗಾಯಣದ ನಂಟು: ವೃತ್ತಿರಂಗದಿಂದ ಒಂದು ರೀತಿ ಬಿಡುಗಡೆ ಪಡೆದ ಮೇಲೆ ಮೈಸೂರಿನ ಹವ್ಯಾಸಿ ರಂಗಚಳವಳಿಯಲ್ಲಿ ಯೋಗಾನರಸಿಂಹ ತೊಡಗಿಕೊಂಡಿದ್ದರು. ಅಮರ ಕಲಾಸಂಘದ ವಾಸುದೇವಮೂರ್ತಿ, ಸಮತೆಂತೋ ತಂಡದ ಜೊತೆ ಕೆಲಸ ಮಾಡಿದರು. ‘ಕೈಕಾರಾಣಿ’ ‘ರಣಧೀರ ಕಂಠೀರವ’ ನಾಟಕಗಳನ್ನು ವಿಭಿನ್ನವಾಗಿ ಕಟ್ಟಿಕೊಟ್ಟರು. ಮೈಸೂರು ವಿವಿ ಲಲಿತ ಕಲಾ ಕಾಲೇಜಿನ ಗುಬ್ಬಿ ವೀರಣ್ಣ ಅಧ್ಯಯನ ಪೀಠದಲ್ಲಿ ರಂಗತಜ್ಞರಾಗಿದ್ದರು. ಯೋಗಣ್ಣನವರನ್ನು ಬಿ.ವಿ.ಕಾರಂತರು ಜೊತೆಗೂಡಿಸಿಕೊಂಡರು. ಮೈಸೂರು ರಂಗಾಯಣದವರು ಮೊದಲು ಕಂಪನಿ ರಂಗಗೀತೆಗಳನ್ನು ಕಲಿತದ್ದು ಯೋಗಣ್ಣನವರ ಬಳಿ. ಕರ್ನಾಟಕ ನಾಟಕ ಅಕಾಡೆಮಿ ಪ್ರಥಮ ಬಾರಿಗೆ ಪ್ರಕಟಿಸಿದ ರಂಗಸಂಗೀತ ಪುಸ್ತಕಕ್ಕೆ ಸ್ವರ ಪ್ರಸ್ತಾರ ಹಾಕಿಕೊಟ್ಟವರು ಯೋಗಣ್ಣ. ಕರ್ನಾಟಕ ನಾಟಕ ಅಕಾಡೆಮಿ, ರಾಜ್ಯೋತ್ಸವ, ಗುಬ್ಬಿ ವೀರಣ್ಣ, ಕೆ.ವಿ.ಶಂಕರಗೌಡ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಯೋಗಣ್ಣನವರ ಕುರಿತು ರಂಗಸಂಪನ್ನರು ಮಾಲಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯೂ ಡಾ. ಎಚ್.ಎ. ಪಾರ್ಶ್ವನಾಥ್ ಅವರಿಂದ ಪುಸ್ತಕ ಬರೆಸಿದೆ. ಪತ್ನಿ ನಾಗರತ್ನಮ್ಮ; ಏಳು ಜನ ಮಕ್ಕಳಲ್ಲಿ ರಾಜೇಶ್ವರ, ಕಾತ್ಯಾಯನಿ ಕಲಾವಿದರಾಗಿದ್ದಾರೆ.

ಎಲ್ಲಿಯ ಲಂಚಾವತಾರ! ಎಲ್ಲಿಯ ಅಕ್ಕಮಹಾದೇವಿ!: ನಾಡಿನ ಶ್ರೇಷ್ಠ ನಟಿಯರ ಸಾಲಿನಲ್ಲಿ ಎದ್ದುಕಾಣುವ ಹೆಸರು ಎಂಬತ್ತೊಂದು ವರ್ಷದ ಸುಭದ್ರಮ್ಮ ಮನ್ಸೂರು ಅವರದು. ಈಗಲೂ ಅವರು ಎಲ್ಲಿಯೇ ನಾಟಕ ಮಾಡಲಿ- ‘ಬೆಟ್ಟದ ಮೇಲೊಂದು ಮನೆಯ ಮಾಡಿ...’ ಎಂಬ ಅಕ್ಕಮಹಾದೇವಿ ವಚನ ಹಾಡುವಂತೆ ಸಹೃದಯ ಪ್ರೇಕ್ಷಕರು ಒಕ್ಕೊರಲಿನಿಂದ ಕೇಳುತ್ತಾರೆ. ನಾಡಿನ ಎಷ್ಟೋ ಜನ ಗಾಯಕರು ಈ ಹಾಡು ಹಾಡಿದ್ದಾರೆ. ಸುಭದ್ರಮ್ಮನವರಿಂದಲೇ ಕೇಳಲು ಅಪೇಕ್ಷೆ ಪಡಲು ಅದಕ್ಕಿರುವ ಯೋಗಣ್ಣನ ರಾಗ ಸಂಯೋಜನೆಯೂ ಒಂದು ಕಾರಣ. ಹಿರಣ್ಣಯ್ಯನವರ ಅತ್ಯಂತ ಜನಪ್ರಿಯ ನಾಟಕ ‘ಲಂಚಾವತಾರ’ಕ್ಕೆ ಯೋಗಣ್ಣ ಇದನ್ನು ಸಂಯೋಜಿಸಿದರು. ಯೋಗಣ್ಣನವರ ಸಂಗೀತ ಸ್ಪರ್ಶದ ವಿಶೇಷತೆ ಎಂದರೆ ಮೊದಲ ಚರಣವನ್ನು ದಾನಿಯಲ್ಲಿ ಆರಂಭಿಸಿ; ಎರಡನೇ ಚರಣವನ್ನು ತಿಲಂಗದಲ್ಲಿ ವಿಹರಿಸಿ; ಮೂರನೇ ಚರಣವನ್ನು ದರ್ಬಾರಿ ಕಾನಡಾದಲ್ಲಿ ಸುಮಧುರವಾಗಿ ಮತ್ತು ಅರ್ಥಪೂರ್ಣವಾಗಿ ಕಟ್ಟಿಕೊಡುತ್ತಾರೆ. ಆದ್ದರಿಂದಲೇ ಸುಭದ್ರಮ್ಮನ ಮಧುರ ಧ್ವನಿಯಲ್ಲಿ ಯೋಗಣ್ಣನ ಈ ಸಂಯೋಜನೆ ಕೇಳಲು ಪ್ರೇಕ್ಷಕರು ಮುಗಿಬೀಳುತ್ತಾರೆ.

ವೃತ್ತಿರಂಗಭೂಮಿಯ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಹೆಸರು ಯೋಗಣ್ಣ ಅಲಿಯಾಸ್ ಎ.ಕೆ.ಯೋಗಾನರಸಿಂಹ ಅವರದು. 75 ವರ್ಷ ಬದುಕಿದ್ದ ಅವರು ಆ ಪೈಕಿ 60 ವರ್ಷಗಳನ್ನು ರಂಗಭೂಮಿಯಲ್ಲೇ ಕಳೆದರು. ಮೈಸೂರಿನ ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡದ ಬಿ.ಎಂ. ರಾಮಚಂದ್ರ ಅವರು ಯೋಗಣ್ಣನ ‘ಪ್ರತಿಶೋಧ’, ‘ಬಸವಜ್ಯೋತಿ’, ‘ನೃಪತುಂಗ’, ‘ಭಾರತೇಯ’, ‘ಪಾದುಕಾಸ್ವಾಮಿ’ ಪ್ರಕಟಿಸಿ ಇತ್ತೀಚೆಗೆ ಬಿಡುಗಡೆ ಮಾಡಿದರು. ಎಚ್.ಎಸ್. ಉಮೇಶ, ಬಿ.ಆರ್. ರವೀಶ, ಅರಸೀಕೆರೆ ಯೋಗಾನಂದ ಮುಂತಾದವರು ಇವರೊಂದಿಗೆ ಕೈಗೂಡಿಸಿದರು. ಸದಾ ಸ್ಮರಣೀಯ ಯೋಗಣ್ಣನಿಗೆ ಹೀಗೊಂದು ನುಡಿನಮನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net