ಪ್ರಾಣಾಯಾಮ: ಉಸಿರಿನ ಮೂಲಕ ಪಂಚ ಪ್ರಾಣಗಳ, ಮನಸ್ಸಿನ ಹತೋಟಿ

Yoga
Published on
ಪ್ರಶ್ನೆ: ಆಸನಗಳನ್ನು ಕಲಿಯದೆ ನೇರವಾಗಿ ಪ್ರಾಣಾಯಾಮವನ್ನು ಮಾಡಬಹುದೇ? ಪ್ರಾಣಾಯಾಮದ ನಿಯಮಗಳೇನು?

| ಸರಳಾ 38 ವರ್ಷ, ತುಮಕೂರು

ಅಷ್ಟಾಂಗ ಯೋಗದ ನಾಲ್ಕನೆಯ ಮೆಟ್ಟಲೇ ಪ್ರಾಣಾಯಾಮ. ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಅಭ್ಯಾಸವಾಗಿದೆ. ಇದು ಯೋಗದ ಮುಖ್ಯ ಅಂಶವಾಗಿದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ವ್ಯಾಯಾಮ. ಸಂಸ್ಕೃದಲ್ಲಿ ಪ್ರಾಣ ಎಂದರೆ ಜೀವಶಕ್ತಿ ಮತ್ತು ಯಮ ಎಂದರೆ ನಿಯಂತ್ರಣ. ಯೋಗದ ಆರಂಭದ ಮೂರು ಮೆಟ್ಟಲುಗಳನ್ನು ಅರಿತು ಯಮ, ನಿಯಮ, ಆಸನಗಳು, ಆನಂತರ ಪ್ರಾಣಾಯಾಮ ಅಭ್ಯಾಸ ಮಾಡಲು ಸುಲಭವಾಗುತ್ತದೆ.

ಎಲ್ಲ್ಲ ಧಾರ್ವಿುಕ ಕಾರ್ಯಗಳಿಗೆ ದೇಹವೇ ಮೂಲ ಸಾಧನ. ದೇಹವನ್ನು ಮೊದಲು ಹಿಡಿತಕ್ಕೆ ತಂದು ಕೊಳ್ಳಬೇಕು. ಅದಕ್ಕೆ ಭಾರತೀಯ ಯೋಗ ಒಂದು ಸಾಧನ. ಪತಂಜಲಿ ಋಷಿಗಳ ಪ್ರಕಾರ ಯೋಗದಲ್ಲಿ ಒಟ್ಟು ಎಂಟು ಮೆಟ್ಟಿಲುಗಳನ್ನು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಹೇಳಲಾಗಿದೆ. ಯೋಗದಲ್ಲಿ ಪ್ರಾಣಾಯಾಮವನ್ನು ದೈಹಿಕ ಭಂಗಿಗಳು (ಆಸನಗಳು) ಮತ್ತು ಧ್ಯಾನದಂತಹ ಅಭ್ಯಾಸಗಳೊಂದಿಗೆ ಬಳಸಲಾಗುತ್ತದೆ. ಹೊಳ್ಳೆ ಉಸಿರಾಟ ಪತಂಜಲಿಯವರ ಅಷ್ಟಾಂಗ ಯೋಗ ದಲ್ಲಿ ಪ್ರಾಣಾಯಾಮ ನಾಲ್ಕನೇ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಇದರರ್ಥ ಯಮ-ನಿಯಮವನ್ನು ಗಮನಿಸದೆ ಮತ್ತು ಆಸನಗಳನ್ನು ಚೆನ್ನಾಗಿ ಮಾಡದ ಹೊರತು, ಅವನು ಈ ನಾಲ್ಕನೇ ಹಂತವನ್ನು ತಲುಪುವುದು ಸಾಧ್ಯವಿಲ್ಲ.

ಪ್ರಾಣಾಯಾಮ ಅಭ್ಯಾಸ ಮಾಡಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು.

ಪಾಲಿಸಬೇಕಾದ ಸೂಚನೆಗಳು

- ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಆಹಾರ ಸೇವಿಸಿದ 2-3 ಗಂಟೆಯ ಅನಂತರ ಅಭ್ಯಾಸ ಮಾಡಿ.

- ಜಮಖಾನ ಹಾಸಿದ ನೆಲದ ಮೇಲೆ, ಶುದ್ಧ ಪರಿಸರ ವಾತಾವರಣದಲ್ಲಿ ಅಭ್ಯಾಸ ಮಾಡಿ.

- ಅವಸರದಲ್ಲಿ ಪ್ರಾಣಾಯಾಮ ಅಭ್ಯಾಸ ಮಾಡಬಾರದು.

- ಪ್ರಾಣಯಾಮಕ್ಕೆ ಕುಳಿತಾಗ ಬೆನ್ನು ಹುರಿಯು ನೇರವಾಗಿ ಸುಷುಮ್ನಾ ನಾಡಿ ನೆಲಕ್ಕೆ ಲಂಬವಾಗಿರಲು ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿಸಿ. ದೇಹ ಸಡಿಲಗೊಂಡಿರಬೇಕು. ಮುಖದಲ್ಲಿ ಪ್ರಸನ್ನತೆ ಇರಬೇಕು, ಹಾಯಾಗಿ ಅಭ್ಯಾಸ ಮಾಡಿ.

- ಪ್ರಾಣಾಯಾಮದಲ್ಲಿ ನಿರಂತರವಾಗಿ, ನಿಶ್ಯಬ್ದವಾಗಿ, ನಿಧಾನವಾಗಿ ಉಸಿರನ್ನು ತೆಗೆದುಕೊಂಡು (ಪೂರಕ) ಹಾಗೇ ನಿರಂತರವಾಗಿ, ನಿಶ್ಯಬ್ದವಾಗಿ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಿ. (ರೇಚಕ).

- ಅಭ್ಯಾಸ ಮಾಡುವಾಗ ಉಸಿರನ್ನು ಹಿಡಿದು ನಿಲ್ಲಿಸಬಾರದು.

- ಗುರುಗಳ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿಯೇ ಪ್ರಾಣಾಯಾಮ ಕಲಿಯಬೇಕು.

- ಕೊನೆಯಲ್ಲಿ ಶವಾಸನ ಮಾಡಿ.

ಪ್ರಾಣಯಾಮಕ್ಕೆ ಸೂಕ್ತವಾದ ಭಂಗಿ ಸುಖಾಸನ/ಸ್ವಸ್ತಿಕಾಸನ/ಪದ್ಮಾಸನ,/ವಜ್ರಾಸನ/ ವೀರಾಸನ/ ಸಿದ್ಧಾಸನ ಆಗಿರುತ್ತದೆ. ಆದ್ದರಿಂದ ಪ್ರಾಣಯಾಮಕ್ಕೆ ಮೊದಲು ಅಭ್ಯಾಸಿಯು ಕಡ್ಡಾಯವಾಗಿ ಕೆಲವು ಆಸನಗಳನ್ನು ಕಲಿತಿರಲೇಬೇಕು. ಕೆಲವು ಯೋಗಾಸನ ಅಭ್ಯಾಸ ಮಾಡದೇ ಪ್ರಾಣಯಾಮ ಕಲಿಯಲೇಬಾರದು. ಪ್ರಾಣಯಾಮ ಮಾಡುವಾಗ ನೋವಿನ ಅನುಭವ ಬಂದರೆ, ಪ್ರಾಣಾಯಾಮದ ಪ್ರಯೋಜನ ಖಂಡಿತ ದೊರಕಲಾರದು. ಆದ್ದರಿಂದ ಎಲ್ಲಾ ಧಾರ್ವಿುಕ ಕಾರ್ಯಗಳಿಗೆ ದೇಹವೇ ಮೂಲ ಸಾಧನವಾಗಿದೆ.

ಪೂರಕ: ಉಸಿರನ್ನು (ಗಾಳಿಯನ್ನು) ಒಳಗೆ ತೆಗದುಕೊಳ್ಳುವುದರ ಜತೆಗೆ ವಾತಾವರಣದಲ್ಲಿರುವ ಚೈತನ್ಯವನ್ನು ಹೀರಿಕೊಳ್ಳುವ ಕ್ರಮವಾಗಿದೆ. (ಲೀಟರ್ ಗಟ್ಟಲೆ ಆಮ್ಲಜನಕ ತೆಗೆದುಕೊಳ್ಳುವುದು)

ಕುಂಭಕ: ಒಳಗೆ ತೆಗೆದುಕೊಂಡ ಉಸಿರನ್ನು ತಡೆದು ಹಿಡಿದುಕೊಳ್ಳುವುದು. (ಆರಂಭಿಕರು ಮಾಡಲೇಬಾರದು. ಮರಳಿ ಉಸಿರಾಡಲಾಗದಿದ್ದರೆ ಏನೂ ಮಾಡುವಂತಿಲ್ಲ! ಎಚ್ಚರ)

ರೇಚಕ: ಉಸಿರನ್ನು ಪೂರ್ತಿಯಾಗಿ ಹೊರಕ್ಕೆ ಬಿಡುವುದು(ಲೀಟರ್ ಗಟ್ಟಲೆ ಕಾರ್ಬನ್ ಡೈ ಆಕ್ಸೈಡ್ ಹೊರಕ್ಕೆ ಹಾಕುವುದು).

ವಿಶೇಷ ಸೂಚನೆ: ಗುರುಗಳ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿಯೇ ಪ್ರಾಣಾಯಾಮ ಕಲಿಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net