

ಈ ಆಸನದತ್ತ, ಎರಡು ದೃಷ್ಟಿಯಿಂದ ನಾವು ನೋಡಬಹುದು- ಒಂದನೆಯದಾಗಿ - ಅಷ್ಟಾಂಗ ಯೋಗದ ಮುಂದಿನ ಅಂಗಗಳಾದ ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಸಾಧನೆಗೆ ತೊಡಗುವ ಪಾರಮಾರ್ಥಿಕ ದೃಷ್ಟಿಯಿಂದ, ಎರಡನೇಯದಾಗಿ ಶರೀರವನ್ನು ದೃಢವಾಗಿಯೂ, ರೋಗ ರಹಿತವಾಗಿಯೂ ಇಟ್ಟುಕೊಳ್ಳಲಪೇಕ್ಷಿಸುವ ಲೌಕಿಕರ ದೃಷ್ಟಿಯಿಂದ. ಎರಡೂ ಉದ್ದೇಶದವರಿಗೆ ಆಸನದ ಅವಶ್ಯಕತೆಯಿದ್ದೇ ಇರುತ್ತದೆ.
ಪ್ರಥಮತಃ ಪಾರಮಾರ್ಥಿಕರ ದೃಷ್ಟಿಯಿಂದ ನೋಡೋಣ. ಸಮಾಧಿ ಪಾದದಲ್ಲಿ ಪತಂಜಲಿ ಮಹರ್ಷಿಯು ಒಂಬತ್ತು ಚಿತ್ತ ವಿಕ್ಷೇಪಗಳನ್ನು ಈ ರೀತಿ ವಿವರಿಸುತ್ತಾರೆ. ‘ವ್ಯಾಧಿ, ಚಿತ್ತದ ನಿಷ್ಕ್ರಿಯತೆ, ಸಂಶಯ, ಉಪಾಯ ಭಾವ ಶೂನ್ಯತೆ, ಶಾರೀರಿಕ ಆಲಸ್ಯ, ವಿಷಯಲಾಲಸೆ, ವಿಪರೀತ ಜ್ಞಾನ, ಸಮಾಧಿಯ ಅಸಿದ್ಧಿ, ಆ ಸ್ಥಿತಿಯಲ್ಲಿಯೂ ಚಿತ್ತ ಚಾಂಚಲ್ಯ. ಇವು ಚಿತ್ತ ವಿಕ್ಷೇಪಗಳು ಅಂತರಾಯಗಳು. ಇವನ್ನೇ ಯೋಗಮಲಗಳು, ಯೋಗ ಪ್ರತಿಪಕ್ಷಗಳು ಎಂದೂ ಕರೆಯುತ್ತಾರೆ. ಇವೆಲ್ಲಾ ಯೋಗ ಸಾಧನೆಗೆ ವಿಘ್ನಗಳು. ಇವು ಉದ್ಭವಿಸುವುದಾದರೂ ದೈಹಿಕ ಮತ್ತು ಮಾನಸಿಕ ವ್ಯಾಪಾರಗಳು ಅಸಮಂಜಸವಾಗಿರುವುದರಿಂದಲೇ.
ಈ ಸೂತ್ರದಲ್ಲಿ ಹೇಳಿರುವ‘ವ್ಯಾಧಿ’ ಬಹುಶಃ ಬೇರೆಲ್ಲಾ ವಿಕ್ಷೇಪಗಳಿಗೂ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ, ಕಾರಣವಾಗಿರುತ್ತದೆ. ವ್ಯಾಧಿ ಎಂದರೇನು? ವ್ಯಾಸರು-‘ವ್ಯಾಧಿಃ ಧಾತು ಕರಣ ವೈಷ ಮ್ಯಂ’ ಎಂದರೆ ‘ಧಾತುಗಳ- ರಸಗಳ ಮತ್ತು ಇಂದ್ರಿಯಗಳ ವೈಷಮ್ಯ’ ಅಂದರೆ ಸಮಸ್ಥಿತಿಯಲ್ಲಿಲ್ಲದೆ ಹೆಚ್ಚು ಕಡಿಮೆಯಾಗುವಿಕೆಯೇ ವ್ಯಾಧಿ ಎನ್ನುತ್ತಾರೆ. ಶರೀರದ ಸರ್ವತೋಮುಖ ಸಮತ್ವವನ್ನು ಕಾಪಾಡಲು ಇಲ್ಲಿ ಆಸನದ ಅವಶ್ಯಕತೆ ಎದ್ದು ತೋರುವುದು. ಶರೀರ ಸ್ವಾಸ್ಥ್ಯವು ಆಸನಗಳ ರೂಪದಲ್ಲಿ ಉಚಿತ ರೀತಿಯಲ್ಲಿ ಲಭಿಸಿ, ದೈಹಿಕದಾರ್ಢ್ಯ ಹಾಗೂ ನಿರೋಗತೆಗೆ ಸಾಧನವಾಗುವುದರಿಂದ ಪಾರಮಾರ್ಥಿಕರೂ ಸಹ ಆಸನಗಳತ್ತ, ಗೌರವಯುತವಾದ ದೃಷ್ಟಿಯಿಂದಲೇ ನೋಡಬೇಕು. ಅಪರೋಕ್ಷ ಅನುಭೂತಿ, ಕೈವಲ್ಯ ಪ್ರಾಪ್ತಿಯನ್ನೇ ಜೀವನಾದರ್ಶವಾಗಿ ಹೊಂದಿರುವ ಪಾರಮಾರ್ಥಿಕರಿಗೆ ‘ಆಸನ’ ವು ಸದೃಢ ಶರೀರ-ಸ್ವಸ್ಥ ಮನಸ್ಸಿಗೆ ಅವಶ್ಯವಾಗಿದೆ. ಯೋಗ ಸಾಧಕರಿಗೂ ಆಸನ ಬೇಕೆ ಬೇಕು. ಅಲ್ಲದೆ ವಿಕ್ಷೇಪಗಳೊಂದಿಗೆ ಉದ್ಭವಿಸುವ ಐದು ಬಾಧಕಗಳು ಹೀಗಿವೆ.
- ದುಃಖ, ಚಿತ್ತ ಕ್ಷೋಭೆ, ಶರೀರ ನಿರ್ಬಲತೆ, ಉಚ್ಛಾ್ವಸ- ನಿಃಶ್ವಾಸ ಈ ಐದು ವಿಕ್ಷೇಪದ ಜತೆಗೆ ಹುಟ್ಟಿದಂತಹುದು ಎನ್ನುತ್ತದೆ ಯೋಗ ಸೂತ್ರ. ಇದರಲ್ಲಿ ಅಂಗಚಲನ ಅಥವಾ ಶರೀರ ನಿರ್ಬಲತೆ ಉಚ್ಛಾ್ವಸ- ನಿಃಶ್ವಾಸ ಈ ಮೂರು ನೇರವಾಗಿ ಶರೀರಕ್ಕೆ ಸಂಬಂಧಿಸಿದ ವಿಘ್ನಗಳಾಗಿವೆ. ಮೊದಲಿನೆರಡು ದುಃಖ, ಚಿತ್ತಕ್ಷೋಭೆ ಮಾನಸಿಕವಾದರೂ ದೇಹ ಅನಾರೋಗ್ಯವನ್ನು ಅಪ್ರತ್ಯಕ್ಷವಾಗಿ ಅವಲಂಬಿಸಿರುತ್ತದೆ. ಈ ರೀತಿ ಮುಖ್ಯವಾಗಿ ವ್ಯಾಧಿ, ಅಂಗಮೇಜಯತ್ವ, ಉಚ್ಛಾ್ವಸ- ನಿಃಶ್ವಾಸಗಳು. ಈ ಯೋಗದ ಅಂತರಾಯಗಳನ್ನು ನಿವಾರಿಸಲು ಅನ್ಯವಿಕ್ಷೇಪಗಳನ್ನೂ ದೂರೀಕರಿಸಲು ಸಾಧಾರಣ ಸ್ವಸ್ಥವೂ, ದೃಢವೂ ಆದ ಶರೀರ ಅವಶ್ಯಕ. ಏಕೆಂದರೆ ಅನಾರೋಗ್ಯಶಾಲಿಯೂ, ದುರ್ಬಲವೂ ಆದ ದೇಹ ಒಂದೇ ಸ್ಥಿತಿಯಲ್ಲಿ ಬಹುಕಾಲ ನಿಶ್ಚಲವಾಗಿ ನಿಲ್ಲಲಾರದು. ಈ ರೀತಿಯ ಅನಿಶ್ಚಲತೆ, ಚಿತ್ತವೃತ್ತಿ ನಿರೋಧಕ್ಕೆ, ಯೋಗ ಸಾಧನೆಗೆ ಸಹಾಯಕವಾಗಲಾರದು. ಪತಂಜಲಿಯು ‘ಪ್ರಯತ್ನ ಶೈಥಿಲ್ಯ ಅನಂತ ಅಮಾಪತ್ತಿಭ್ಯಾಮ್ ಎಂದಿರುವರು. ‘ಆಸನ ಸಿದ್ಧಿಯಲ್ಲಿ ಪ್ರಯತ್ನವು ಸಡಿಲಾಗುವುದರಿಂದಲೂ ಅಥವಾ ಅನಂತರ ಧ್ಯಾನದಿಂದಲೂ’ ಎಂದರೆ, ಆಸನವು ಆಗುತ್ತದೆ ಎಂದು ಸೂತ್ರದ ಅರ್ಥ. ಪ್ರಯತ್ನಗಳೆಲ್ಲ ನಿಂತರೆ ಆಸನವು ಸಿದ್ಧಿಸುತ್ತದೆ. ಆಸನ ಸಿದ್ಧಿಯಿಂದ ದ್ವಂದ್ವಗಳ ಅಭಿಘಾತದ ನಿವಾರಣೆಯಾಗುವುದು. ಆಸನ ಸಿದ್ಧಿಯೆಂದರೆ, ಕನಿಷ್ಠ ಪಕ್ಷ ಮೂರು ಘಂಟೆ, ಮೂವತ್ತಾರು ನಿಮಿಷ ಒಂದು ಸಿತ್ಥಿಯಲ್ಲಿ ಕಷ್ಟವೂ ಇಲ್ಲದೆ ಕುಳಿತುಕೊಳ್ಳಲು ಸಾಧ್ಯವಾದರೆ ಯೋಗ ಸಾಧನೆಗೆ ಬೇಕಾದ ಕನಿಷ್ಠ ಪ್ರಮಾಣದ ಆಸನ ಸಿದ್ಧಿ ಲಭಿಸಿತೆನ್ನಬಹುದು. ಇಂತಹ ಆಸನ ಸಿದ್ಧಿಯಿಂದ ಶೀತ-ಉಷ್ಣ ಮೊದಲಾದ ದ್ವಂದ್ವಗಳನ್ನು ಗೆಲ್ಲುವ ಸಾಮರ್ಥ್ಯ ಬಂದು ಯೋಗಾಭ್ಯಾಸದ ಸಾಧನೆ ಸುಗಮವಾಗುತ್ತದೆ.