ಸಂಗೀತವಿದ್ಯೆಗೆ ಆಧಾರಸ್ತಂಭವಾದುದು ಯೋಗವಿದ್ಯೆ

sangeetha
ಮಂಡೆಕೋಲು ಗ್ರಂಥಾಲಯದಲ್ಲಿ ಸಂಗೀತ ಶಿಕ್ಷಣ ನೀಡುತ್ತಿರುವುದು.
Published on

ಯೋಗದ ಯೋಗ ಜೂನ್ 21ಕ್ಕೆ ಸಂದಿದೆಯಲ್ಲವೇ? ಹೀಗಾಗಿ ಯೋಗಸಾರವೆನಿಸುವ ವಿಷಯವನ್ನೇ ತೆಗೆದುಕೊಳ್ಳೋಣ. ಗಾನವು ಯಾರಿಗೆ ಪ್ರಿಯವಲ್ಲ? ಚಂಡಿ ಹಿಡಿದು ಅಳುತ್ತಿರುವ ಮಗುವನ್ನು ಸಹ ಸಂತೈಸಿ ಜೋಗುಳ ಹಾಡಿ ನಿದ್ದೆ ಮಾಡಿಸುವ ಪರಿ ಎಲ್ಲಿಲ್ಲ? ಪ್ರಾಣಿಗಳು ಸಹ ಸಂಗೀತಕ್ಕೆ ವಶವಾಗುವುವಲ್ಲವೇ? ಕೆಲವು ರಾಗಗಳಿಂದ ಜಿಂಕೆಗಳನ್ನು ವಶಪಡಿಸಿಕೊಳ್ಳುವುದುಂಟೆಂದು ಕೇಳಿರುತ್ತೇವೆ. ಭಾಸಮಹಾಕವಿಯ ನಾಟಕವೊಂದರಲ್ಲಿ ಉದಯನ ಮಹಾರಾಜನು ತನ್ನ ವೀಣಾ ವಾದನದಿಂದಲೇ ಆನೆಗಳನ್ನು ಮಂತ್ರಮುಗ್ಧವಾದಂತಾಗಿಸಿ ಹಿಡಿಯುತ್ತಿದ್ದುದರ ಉಲ್ಲೇಖವಿದೆ.

ಶಿಶು-ಪಶುಗಳಿರಲಿ, ದೇವತೆಗಳೂ ಸಂಗೀತಪ್ರಿಯರೇ. ಸರ್ವಜ್ಞನಾದ ಪಾರ್ವತೀಪತಿಯು ಗೀತದಿಂದ ಸಂತೋಷಪಡುತ್ತಾನೆ. ಗೋಪೀಪತಿಯಾದ ಕೃಷ್ಣನು ಕೊಳಲಿನ ದನಿಗೆ ಮಾರುಹೋಗಿದ್ದಾನೆ. ಬ್ರಹ್ಮನು ಸಾಮಗಾನದಲ್ಲಿ ನಲಿಯುತ್ತಾನೆ. ಸರಸ್ವತಿಯು ವೀಣಾಸಕ್ತಳು. ಇನ್ನುಳಿದ ಯಕ್ಷ, ಗಂಧರ್ವ, ದೇವ- ದಾನವ- ಮಾನವರ ವಿಷಯವನ್ನು ಹೇಳುವುದೇನು? ಎಂದು ಕೇಳುತ್ತದೆ, ಸಂಗೀತ-ರತ್ನಾಕರವೆಂಬ ಉತ್ಕೃಷ್ಟ ಗ್ರಂಥ. ಸಂಗೀತವೆಂಬುದಕ್ಕೆ ಆಧಾರವೇ ನಾದವಲ್ಲವೇ? ನಾದವಲ್ಲದೆ ಗೀತವಿಲ್ಲ, ನಾದವಿಲ್ಲದೆ ಸ್ವರವಿಲ್ಲ, ನಾದವಿಲ್ಲದೆ ನೃತ್ತವಿಲ್ಲ. ಎಂದೇ, ಜಗತ್ತೇ ನಾದಾತ್ಮಕ ಎಂಬುದಾಗಿ ಮತಂಗನ ‘ಬೃಹದ್ದೇಶಿ’ ಗ್ರಂಥವು ಹೇಳುತ್ತದೆ. ಗೀತವು ನಾದಾತ್ಮಕವಾದರೆ, ವಾದ್ಯದ ಸಾಫಲ್ಯವಿರುವುದೇ ನಾದದ ಅಭಿವ್ಯಕ್ತಿಯಲ್ಲಿ. ಇನ್ನು ನೃತ್ತವಾದರೋ ಗೀತ-ವಾದ್ಯಗಳನ್ನು ಅನುಸರಿಸಿ ಬರುವಂತಹುದೇ ಸರಿ. ಹೀಗೆ ಗೀತ-ವಾದ್ಯ-ನೃತ್ತಗಳು ಮೂರೂ ನಾದಾಧೀನವೇ. ವಾಸ್ತವವಾಗಿ ಸಂಗೀತ ಎಂಬ ಪದವನ್ನು ನಾವಿಂದು ಸಾಧಾರಣ ವಾಗಿ ಬಳಸುತ್ತಿರುವುದು ಅಷ್ಟೊಂದು ಯುಕ್ತವಲ್ಲ. ಏಕೆ? ಗೀತ- ವಾದ್ಯ- ನೃತ್ಯಗಳು ಮೂರೂ ಸೇರಿದರೇ ಅದು ಸಂಗೀತವೆನಿಸಿಕೊಳ್ಳುವುದು ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ನಾವೆಲ್ಲರೂ ವ್ಯವಹರಿಸುವುದು ಪ್ರಧಾನವಾಗಿ ನಮ್ಮ ಮಾತುಗಳ ಮೂಲಕವೇ.

ಇದನ್ನೇ ವಾಕ್ಕೆನ್ನುವುದು. ವಾಕ್ಕೆಲ್ಲವೂ ವಾಕ್ಯಗಳಿಂದಲ್ಲವೇ ತುಂಬಿರುವುದು? ವಾಕ್ಯಗಳು ಪದ ಗಳಿಂದ ಕೂಡಿರುವುವು. ಪದಗಳು ವರ್ಣಗಳಿಂದಾ ಗುವುವು. ವರ್ಣಕ್ಕೆ ಆಧಾರಭೂತವಾದದ್ದೇ ನಾದ. ಹೀಗಾಗಿ ಜಗತ್ತಿನ ವ್ಯವಹಾರವೆಲ್ಲವೂ ನಾದಾಧೀನವೆನ್ನಬಹುದಲ್ಲವೇ? ಶಾಸ್ತ್ರಕಾರರ ಮಾತನ್ನೇ ಇಲ್ಲಿ ಹೇಳಿರುವುದು. ಸಂಗೀತಕ್ಕೆ ಆಧಾರವೇ ನಾದ ಎಂಬುದನ್ನು ಕಂಡುಕೊಂಡದ್ದಾಯಿತು. ಸಂಗೀತಪ್ರಿಯರಾದ ನಮ್ಮ ದೇವತೆಗಳನ್ನು ಯೋಗಜ್ಞರಾದ ನಮ್ಮ ವಾಗ್ಗೇಯಕಾರರು ಹೇಗೆ ಚಿತ್ರಿಸಿರುವರೆಂಬುದನ್ನು ಒಂದೆರಡು ಉದಾಹರಣೆಗಳಿಂದ ನೋಡಬಹುದು. ದೇವಿಯನ್ನು ಸಂಗೀತ ರಸಿಕೆಯೆಂದು ಕಾಳಿದಾಸನು ಕರೆದಿರುವನು. ಹೆಸರಿಗೆ ತಕ್ಕಂತೆ ಚಿತ್ತರಂಜಕವಾದ ಚಿತ್ತರಂಜನೀ ರಾಗದಲ್ಲಿಯ ತಮ್ಮ ಕೃತಿಯಲ್ಲಿ ತ್ಯಾಗರಾಜರು ‘ನಾದತನುಂ ಅನಿಶಂ’ ಎಂಬುದಾಗಿ ಶಂಕರನನ್ನು ಸ್ತುತಿಸಿದ್ದಾರೆ. ಇನ್ನು ಕೃಷ್ಣನ ವೇಣುಗಾನವನ್ನು ಹೃದ್ಯವಾಗಿ ಚಿತ್ರಿಸಿರುವ ಲೀಲಾಶುಕನು ವೃಕ್ಷಗಳ ಮೇಲೂ ಮೃಗಗಳ ಮೇಲೂ ಗೋಪಾಲಕರ ಮೇಲೂ ಅದರಿಂದಾದ ಪರಿಣಾಮವನ್ನು ಹೇಳುತ್ತಾನೆ. ಅಷ್ಟೇ ಅಲ್ಲ. ಮುನಿಗಳನ್ನೂ ಅದು ಅಂತ ಮುಖ ಮಾಡುವುದೆಂದೂ, ವಸ್ತುತಃ ವೇದಗಳನ್ನೇ ಅದು ಪ್ರತಿಧ್ವನಿಸುತ್ತದೆಂದೂ ನಿರೂಪಿಸುತ್ತಾನೆ. ಅದು ಓಂಕಾರಾರ್ಥವನ್ನೇ ಹೊಮ್ಮಿಸುತ್ತದೆಂದೂ ಚಿತ್ರಿಸಿದ್ದಾನೆ. ಲೋಕವನ್ನೇ ಅದು ಉನ್ಮತ್ತಗೊಳಿಸುವುದೆಂದರೆ ಯೋಗಶಾಸ್ತ್ರಗಳು ಹೇಳುವ ಉನ್ಮನೀ ಎಂಬ ಅವಸ್ಥೆಯನ್ನುಂಟುಮಾಡುವದು ಎಂದು ಯೋಗಿವರೇಣ್ಯರೂ ಗಾನ ಪ್ರವೀಣರೂ ಆದ ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ.

ಇಲ್ಲಿ ಮುನಿಗಳು ಅಂತಮುಖರಾಗುವುದೂ ಪ್ರಣವಾರ್ಥವು ವೇಣುಗಾನದಿಂದ ಬರುವುದೂ ಯೋಗಶಾಸ್ತ್ರದ ವಿಷಯಗಳೇ. ವಾಸ್ತವವಾಗಿ ಇವೆಲ್ಲಕ್ಕೂ ಮೂಲವಾದ ನಾದವೆಂಬುದೇ ಯೋಗ ಶಾಸ್ತ್ರದ ವಿಷಯ. ನಕಾರವೆಂಬುದು ಪ್ರಾಣ, ದಕಾರವು ಅಗ್ನಿ. ಪ್ರಾಣ ಹಾಗೂ ಅಗ್ನಿ (ಅರ್ಥಾತ್ ಪ್ರಾಣ ಮತ್ತು ಅಪಾನ) - ಇವುಗಳ ಸೇರುವೆಯಿಂದಲೇ ಪ್ರಣವನಾದವೂ ಸಪ್ತಸ್ವರಗಳೂ ಜನಿಸುವು ದೆಂಬುದನ್ನು ತ್ಯಾಗರಾಜರು ‘ಮೋಕ್ಷಮು ಗಲದಾ’ ಎಂಬ ಸಾರಮತಿ ರಾಗದ ತಮ್ಮ ಕೃತಿಯಲ್ಲಿ ಹಾಡಿದ್ದಾರೆ. ನಾದಬ್ರಹ್ಮವು ಅದ್ವಿತೀಯವಾದ ಆನಂದವೇ ಆಗಿರುವ (ನಾದಬ್ರಹ್ಮ ತದಾನಂದಂ) ಸರ್ವಭೂತ ಚೈತನ್ಯ ಎನ್ನುವುದು ಶಾಱವನ ಸಾರೋಕ್ತಿ.ನಾದವೆಂಬುದು ಮೂಲಾಧಾರಚಕ್ರದಲ್ಲಿ ಜನಿಸುವುದೆಂಬುದನ್ನು ಯೋಗಿವರ್ಯರಾದ ತ್ಯಾಗರಾಜರು ತಮ್ಮ ಸ್ವರರಾಗಸುಧಾರಸ (ಶಂಕರಾಭರಣ-ರಾಗ) - ಎಂಬ ಕೃತಿಯಲ್ಲಿ ಹೇಳಿ, ಅದರ ಪರಮಾನಂದತತ್ತ್ವವನ್ನು ಹೇಳಿದ್ದಾರೆ.

ಸಾಧಕರ ಜೀವನದಲ್ಲಿ ಯೋಗಸಾಧನೆಯು ಎಷ್ಟು ಮುಖ್ಯವೆಂಬುದನ್ನು ಪುರಂದರದಾಸರು ತಮ್ಮ ಊರದೇವರ ಮಾಡಬೇಕಣ್ಣಾ - ಎಂಬ (ನಾದನಾಮಕ್ರಿಯಾ-ರಾಗ) ಕೃತಿಯಲ್ಲಿ ‘ದ್ವಾರಗಳೊಂಭತ್ತು ಮುಚ್ಚಿ, ನಿಲ್ಲಿಸಿ ಭ್ರೂಮಧ್ಯದಲ್ಲಿ’ ಎಂಬುದಾಗಿ ಚಿತ್ರಿಸಿದ್ದಾರೆ. ಆಜ್ಞಾಚಕ್ರದವರೆವಿಗೂ ಮನಸ್ಸನ್ನೊಯ್ಯುವ ಯೋಗಪ್ರಕ್ರಿಯೆಯನ್ನು ಇದು ಹೇಳು ತ್ತದೆ. ವೀಣಾವಾದನ-ತತ್ತ್ವಜ್ಞನು ಮೋಕ್ಷಮಾರ್ಗವನ್ನು ಹೊಂದುವನೆಂದು ಯಾಜ್ಞವಲ್ಕ್ಯಸ್ಮೃಯು ತಿಳಿಸುತ್ತದೆ. ‘ನಾದದಿಂದಲೇ ಮಂತ್ರ ಶಾಸ್ತ್ರ, ಯೋಗಶಾಸ್ತ್ರ, ವ್ಯಾಕರಣಶಾಸ್ತ್ರ, ಸಂಗೀತಶಾಸ್ತ್ರ ಇವುಗಳೆಲ್ಲವೂ ಹೊರಡುತ್ತವೆ’ ಎಂಬ ಶ್ರೀರಂಗಮಹಾಗುರುಗಳ ಮಾತು ಈ ಎಲ್ಲ ವಿದ್ಯೆಗಳ ಸಾರಕ್ಕೆ ಕನ್ನಡಿ ಹಿಡಿಯುತ್ತದೆ. ಯೋಗಶಾಸ್ತ್ರದಿಂದಲೇ ಹೊಮ್ಮಿದ ಸಂಗೀತವಿದ್ಯೆಯನ್ನು ವಿಶ್ವಯೋಗದಿನದಂದು ಸ್ಮರಿಸಿಕೊಳ್ಳುವುದು ಉಚಿತವೇ ಆಗಿದೆಯಲ್ಲವೇ?

(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net