ಆರೋಗ್ಯಕರ ಜೀವನಶೈಲಿಗೆ ಯೋಗ, ಧ್ಯಾನ: ಧರ್ಮದರ್ಶನ

Heggade column
Published on
ಬದಲಾವಣೆ ಜಗದ ನಿಯಮ. ಇದು ನಿತ್ಯ ಸತ್ಯ. ಜಗತ್ತು ಜಡವಾಗಿರಬಾರದು. ಬದಲಾವಣೆ ಆಗುತ್ತಿರಬೇಕು. ಅಡುಗೆಮನೆಯಲ್ಲಿ ಇನ್ನೂ ಕಟ್ಟಿಗೆ, ಇದ್ದಿಲನ್ನೇ ಬಳಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಆಹಾರ-ವಿಹಾರ ವಿಚಾರದಲ್ಲಿ ಬದಲಾವಣೆ ಆಗುತ್ತಿರಬೇಕು. ಆದರೆ ಅದರಿಂದ ಸೋಮಾರಿತನ, ದೈಹಿಕ ಆಲಸ್ಯ ಉಂಟಾಗಬಾರದು. ಇಂದು ಆಹಾರ-ವಿಹಾರದ ವಿಚಾರದಲ್ಲಿ ನಾವೆಷ್ಟು ಬದಲಾಗಿದ್ದೇವೆಂದರೆ ನಮ್ಮ ಬದಲಾವಣೆ ಆರೋಗ್ಯದ ದೃಷ್ಟಿಯಲ್ಲಿ ಮಾರಕ ಪರಿಣಾಮ ಬೀರುತ್ತಿದೆ. ಆರಾಮದ ಜೀವನಶೈಲಿಯಿಂದ ಅನೇಕ ವ್ಯಾಧಿಗಳು ಬರುತ್ತಿವೆ.

ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಮುಖ್ಯವಾಗಿ ಆಲಸ್ಯವನ್ನು ದೂರ ಮಾಡಬೇಕು. ಮನೆಯಲ್ಲಿ ಭೋಗಜೀವನಕ್ಕೆ ಬೇಕಾದ ವ್ಯವಸ್ಥೆಗಳಿದ್ದರೂ ಕನಿಷ್ಠ ವ್ಯಾಯಾಮ ಮಾಡಲೇಬೇಕು. ಆಧುನಿಕತೆಯ ರಭಸಕ್ಕೆ ಹಳೆಯ ಉತ್ತಮ ಸಂಪ್ರದಾಯಗಳನ್ನು ಗಾಳಿಗೆ ತೂರಬಾರದು. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಜೀವನ ನಮಗೆ ಹೆಚ್ಚು ಸಹಕಾರಿ.

ಯೋಗದ ಅನುಷ್ಠಾನ ಜೀವನಶೈಲಿಯನ್ನು ಉತ್ತಮವಾಗಿರಿಸಬಲ್ಲುದು. ನಾನು ವಿದೇಶ ಪ್ರವಾಸ ಕೈಗೊಂಡಾಗ ಅಲ್ಲಿ ಇರುವವರು ಮತ್ತು ಭಾರತೀಯರ ಜೀವನಶೈಲಿ ಬಗ್ಗೆ ಗಮನಿಸುತ್ತೇನೆ. ವಿದೇಶದ ಮುಂದುವರಿದ ರಾಷ್ಟ್ರಗಳು 35 ವರ್ಷಗಳ ಹಿಂದೆಯೇ ಆಧುನಿಕತೆಯನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಂಡಿದ್ದವು. ವಿಶೇಷವಾಗಿ ನಾನು ಅಮೆರಿಕ ಹೋಗಿದ್ದಾಗ ಗಮನಿಸಿದ್ದೇನೆಂದರೆ ಅಲ್ಲಿ ಅವರ ಮನೆಯನ್ನು ಅವರೇ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ಮನೆಯ ಹಿಂದಿರುವ ಹೂದೋಟವನ್ನು ಅವರೇ ಶುಚಿ ಮಾಡುವುದು, ಕಳೆ ತೆಗೆಯುವುದು, ಹೊಸ ಗಿಡ ನೆಡುವುದು ಹೀಗೆ ಎಲ್ಲವನ್ನೂ ಅವರೇ ಮಾಡುತ್ತಿದ್ದರು. ನಾನು ಅವರಲ್ಲಿ ಕೇಳಿದೆ- ‘ತೋಟಗಾರಿಕೆಯ ಎಲ್ಲ ಕೆಲಸವನ್ನೂ ನೀವೇ ಮಾಡುತ್ತಿದ್ದೀರಲ್ಲ, ಕೆಲಸಗಾರರು ಬರುವುದಿಲ್ಲವೇ?’ ಅದಕ್ಕೆ ಅವರು, ‘ಇಲ್ಲಿ ಯಾರೂ ಕೆಲಸಕ್ಕೆ ಜನ ಸಿಗೋದಿಲ್ಲ. ವಾರವಿಡೀ ನಾವು ದುಡಿಯುತ್ತೇವೆ, ಆದರೆ ಶನಿವಾರ, ಭಾನುವಾರ ಮನೆಯ ಕೆಲಸ ಮಾಡಿಕೊಳ್ಳುತ್ತೇವೆ’ ಎಂದು ಉತ್ತರಿಸಿದರು. ಭಾರತ ಇತ್ತೀಚೆಗೆ ಆಧುನಿಕ ಜೀವನಶೈಲಿಗೆ ತೆರೆದುಕೊಂಡಿದೆ. ಯಂತ್ರಗಳು ನಮ್ಮ ಕೆಲಸವನ್ನು ಕಡಿಮೆ ಮಾಡುತ್ತಿವೆ. ಇದರಿಂದ ದೇಹಕ್ಕೆ ಸಮರ್ಪಕ ವ್ಯಾಯಾಮ ದೊರೆಯುತ್ತಿಲ್ಲ. ಬೊಜ್ಜು ಬೆಳೆಯುತ್ತಿದೆ. ಆರೋಗ್ಯಕರ ದೇಹ ಹೊಂದಲು ಕಷ್ಟವಾಗುತ್ತಿದೆ. ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ಪರಿಣಾಮಕಾರಿಯಾದ ಮದ್ದು ಎಂದರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ. ಯೋಗ-ಪ್ರಾಣಾಯಾಮ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಅಗತ್ಯವಾಗಿದೆ.

ನಾವು ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾರಂಭಿಸುವಾಗ ಭಾರತದಲ್ಲಿ ಬದಲಾವಣೆಯ ಕಾಲಘಟ್ಟ ಆರಂಭವಾಗಿತ್ತು. ಪಾಶ್ಚಾತ್ಯ ಸಂಸ್ಕೃತಿಯತ್ತ ನಮ್ಮ ಒಲವು ಜಾಸ್ತಿಯಾಗುತ್ತಿತ್ತು. ನಮ್ಮತನವನ್ನು, ನಮ್ಮ ಸಂಸ್ಕೃತಿಯ ಅಡಿಪಾಯವನ್ನು ತೊರೆದು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳಲು ಉತ್ಸುಕರಾಗಿದ್ದೆವು. ಆಗ ಎಲ್ಲರ ಬಾಯಲ್ಲೂ ಒಂದೇ ಮಾತು, ‘ವೆಸ್ಟ್ ಈಸ್ ಬೆಸ್ಟ್’ ಎನ್ನುತ್ತಿದ್ದರು. ವಿದೇಶಿ ಸಂಸ್ಕೃತಿಯನ್ನು ಅನುಸರಿಸುವ ಧಾವಂತ ಎಲ್ಲರಲ್ಲೂ ಇತ್ತು. ಆಗ ನನಗೆ ಚಿಂತೆ ಕಾಡಿತು. ನಮ್ಮತನ, ನಮ್ಮ ಸಂಸ್ಕೃತಿ ದುರ್ಬಲವಾದುದು ಎಂದು ನಮಗೆ ಅನ್ನಿಸಿದರೆ ಹೇಗೆ? ವಿದೇಶಿ ಸಂಸ್ಕೃತಿ ವೈಭವೀಕರಿಸಿ ನಮ್ಮತನವನ್ನು ಕೀಳು ಮಾಡುವುದು ಉಚಿತವಾದುದಲ್ಲ. ನಾವು ಇತರರಿಗಿಂತ ಕಡಿಮೆ ಅಲ್ಲ ಎಂದು ತೋರಿಸಿಕೊಡಬೇಕಾಗಿತ್ತು. ಹಾಗಾಗಿ ನಮ್ಮ ವಿಚಾರಧಾರೆಗಳನ್ನು ಜಗತ್ತಿಗೆ ತೆರೆದಿಡಬೇಕು ಎಂಬ ಮಹತ್ವಾಕಾಂಕ್ಷೆ ನನ್ನಲ್ಲಿ ಬೆಳೆಯಿತು. ಗ್ರಾಮಾಭಿವೃದ್ಧಿ, ಸ್ವಾವಲಂಬನೆಯ ಕಾರ್ಯಕ್ರಮಗಳ ಮೂಲಕ ಜಗತ್ತಿನ ಪ್ರತಿ ಪ್ರಜೆಗೂ ಭಾರತೀಯ ಸರಿಸಾಟಿ ಎಂದು ತೋರಿಸಿಕೊಡುವಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆವು. ಹೀಗೆ ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿದೆವು. ಈಗ ಎಲ್ಲರೂ ಅದನ್ನು ಅಪ್ಪಿಕೊಂಡಿದ್ದಾರೆ, ಒಪ್ಪಿಕೊಂಡಿದ್ದಾರೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ನಮ್ಮ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತದೆ. ಈಗಿನ ಕರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ನಾನು ಸದಾ ಚಟುವಟಿಕೆಯಲ್ಲಿರುತ್ತಿದ್ದೆ. ಆದರೆ ಈಗ ನನ್ನ ಧರ್ಮಪತ್ನಿ, ಮಗಳು, ಕುಟುಂಬದವರೆಲ್ಲ ‘ನೀವು ಎಲ್ಲಿಗೂ ಹೋಗಬೇಡಿ, ಏನೂ ಮಾಡಬೇಡಿ’ ಎಂದು ಹೇಳುತ್ತಾರೆ. ಇದು ಎಲ್ಲರಿಗೂ ಬಂದಿರುವ ಸಮಸ್ಯೆ. ಕರೊನಾದಿಂದ ಬಂದ ಆಘಾತಗಳನ್ನು ಸಮಚಿತ್ತದಿಂದ ಎದುರಿಸಬೇಕಿದೆ. ಮನಸ್ಸಲ್ಲಿ ಏಕಾಗ್ರತೆ ಮತ್ತು ದೃಢತೆ ಬೆಳೆಸಿಕೊಳ್ಳಬೇಕಿದೆ. ಯೋಗ-ಪ್ರಾಣಾಯಾಮ ಮಾಡುತ್ತ ಸ್ವಾದಿಷ್ಟ ಆಹಾರ ಪದಾರ್ಥ ಸೇವಿಸುತ್ತ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಾವೆಲ್ಲ ಹೆಜ್ಜೆ ಇರಿಸಬೇಕು.

ಪ್ರಕೃತಿ ಚಿಕಿತ್ಸೆ ಆರಂಭಿಸಿದಾಗ ಅದಕ್ಕೆ ಇಷ್ಟೊಂದು ಪ್ರೋತ್ಸಾಹ ದೊರೆಯುತ್ತದೆ ಎಂಬುದರ ಕಲ್ಪನೆ ಸ್ವಾಭಾವಿಕವಾಗಿ ನನಗೆ ಇರಲಿಲ್ಲ. ಪ್ರಕೃತಿ ಚಿಕಿತ್ಸೆ ಎಂದರೆ ಶ್ರೀಮಂತರಿಗೆ ಮಾತ್ರ ಎನ್ನುವ ತಪು್ಪ ಅಭಿಪ್ರಾಯವೂ ಅನೇಕರಲ್ಲಿತ್ತು. ಶ್ರೀಮಂತರಿಗೆ ಕಾಯಿಲೆ ಜಾಸ್ತಿ, ಮಧ್ಯಮವರ್ಗಕ್ಕೆ ಅನಿವಾರ್ಯತೆ ಜಾಸ್ತಿ ಹೀಗೆ ಅನೇಕ ತಪು್ಪಕಲ್ಪನೆಗಳು ಇದ್ದವು. ಮನುಷ್ಯ ಎಂದರೆ ಮನುಷ್ಯ ಅಷ್ಟೇ. ಅವನು ಬಡ, ಮಧ್ಯಮ ಅಥವಾ ಶ್ರೀಮಂತ ವರ್ಗದವನೇ ಇರಬಹುದು. ಸಂಪತ್ತಿನಿಂದ ಆರೋಗ್ಯವನ್ನು ಗಮನಿಸುವುದಕ್ಕೆ ಆಗುವುದಿಲ್ಲ. ನಾವು ಬಡ-ಮಧ್ಯಮ ವರ್ಗದವರನ್ನೇ ಗಮನದಲ್ಲಿರಿಸಿ ಆಸ್ಪತ್ರೆ ಪ್ರಾರಂಭ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಇವತ್ತು ಧರ್ಮಸ್ಥಳದ ಶಾಂತಿವನ ಹಾಗೂ ಮಣಿಪಾಲದ ಸಮೀಪವಿರುವ ಪರೀಕಾ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಯಾವ ರೀತಿ ವ್ಯವಸ್ಥೆಗಳನ್ನು ಮಾಡಿದ್ದೇವೆಂದರೆ ಆಸ್ಪತ್ರೆ ಎನ್ನುವ ಶಬ್ದವನ್ನೇ ನಾವು ಉಪಯೋಗಿಸುವುದಿಲ್ಲ. ಬದಲಾಗಿ ಇದೊಂದು ‘ಸಾಧಕ ಕೇಂದ್ರ’ ಎಂದು ನಾವು ಹೇಳುತ್ತೇವೆ. ಬಳಕೆಯ ಭಾಷೆಯಲ್ಲಿ ಇದನ್ನು ‘ಆಸ್ಪತ್ರೆ’ ಎನ್ನಬಹುದು ಆದರೆ ಇವು ಆಸ್ಪತ್ರೆ ಅಲ್ಲ. ಇವು ಪ್ರಕೃತಿ ಚಿಕಿತ್ಸಾ ಕೇಂದ್ರ. ಅಂದರೆ ಇಲ್ಲಿ ಬರುವವರು ರೋಗಿಗಳಲ್ಲ, ಸಾಧಕರು, ಅವರಿಗೆ ಅವರೇ ಸಹಕಾರ ನೀಡಿ ಸಾಧನೆ ಮಾಡಲು ಬರುವವರು. ಕೆಳಗಿನ ಹಂತದಿಂದ ನಾವು ಇವತ್ತು ಮೇಲೆ ಬಂದಿದ್ದೇವೆ. ಎಲ್ಲ ವರ್ಗದವರೂ ಈ ಪದ್ಧತಿಯನ್ನು ಒಪ್ಪಿಕೊಂಡಿದ್ದಾರೆ.

ಭಾರತೀಯ ಆಯುರ್ವೆದ ಮತ್ತು ಪ್ರಕೃತಿಚಿಕಿತ್ಸಾ ಕಾಲೇಜುಗಳಲ್ಲಿ ತೀವ್ರ ಬದಲಾವಣೆ ತರಬೇಕಾದ ಕಾಲವಿದು. ವೈದ್ಯಕೀಯ ಪದ್ಧತಿಯಲ್ಲಿ ಬಂಡವಾಳ ಹೂಡಿ ಅದನ್ನು ಹಿಂಪಡೆಯುವ ಸಂಪತ್ತಿನ ಬಗ್ಗೆ ಎಲ್ಲರೂ ಯೋಚನೆ ಮಾಡುತ್ತಾರೆ. ನಾವು ಬಂಡವಾಳ ಹೂಡಿದರೆ ಅದಕ್ಕೆ ಯೋಗ್ಯ ರೀತಿಯಲ್ಲಿ ಮರಳಿ ಸಂಪತ್ತು ಬರಬೇಕು ಎನ್ನುವುದು ಎಲ್ಲರ ಆಶಯ. ಅದು ಸರಿಯಾದ ವಿಚಾರವೇ. ಆದರೆ ನಮ್ಮ ವೈದ್ಯಕೀಯ ವ್ಯವಸ್ಥೆಗೆ ಒಂದು ಗೌರವ ತರಬೇಕಾದ ಕಾಲವಿದು. ನಾವು ನಮ್ಮದು ಎನ್ನುವ ಭಾವನೆ ಇದ್ದರೆ ಎಲ್ಲವು ಸಾಧ್ಯ. ನಮ್ಮ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಲು ಪ್ರೀತಿ ಸಹಕಾರಿಯಾಗುತ್ತದೆ. ಭಾರತೀಯ ವೈದ್ಯಕೀಯ ವ್ಯವಸ್ಥೆ ಮೇಲೆ ನಮಗೆ ಆ ಪ್ರೀತಿ ಬೆಳೆಯಬೇಕು. ಯೋಗ, ಆಯುರ್ವೆದದ ಮೇಲೆ ಒಲವು ಮೂಡಬೇಕು. ಕೃಷಿಯಲ್ಲಿ ಆಸಕ್ತಿ ಇದ್ದವರಿಗೆ ಎಷ್ಟೇ ಕೃಷಿ ಮಾಡಿದರೂ ಸುಸ್ತಾಗುವುದಿಲ್ಲ, ಬದಲಾಗಿ ನವನವೀನ ವೈವಿಧ್ಯತೆಯನ್ನು ಬಯಸು ತ್ತಾರೆ, ಪ್ರಯೋಗಗಳನ್ನು ಮಾಡುತ್ತಾರೆ. ಒಬ್ಬ ಚಾಲಕ ಆತನ ಕೆಲಸವನ್ನು ಪ್ರೀತಿಸಿದರೆ ನಿತ್ಯ 18 ಗಂಟೆ ವಾಹನ ಚಲಾಯಿಸಿದರೂ ಆತನಿಗೆ ಸುಸ್ತಾಗುವುದಿಲ್ಲ. ಇದಕ್ಕೆ ಜೀವನೋತ್ಸಾಹ ಎನ್ನುತ್ತೇವೆ. ಜೀವನೋತ್ಸಾಹ ಎಂದರೆ ಮಾಡುವ ಕೆಲಸವನ್ನು ಸಂತೋಷದಿಂದ ಮಾಡಬೇಕು ಮತ್ತು ಅದರಿಂದ ಧನ್ಯತೆ ದೊರೆಯಬೇಕು. ಎಲ್ಲಿ ಸಂತೋಷ ದೊರೆಯುತ್ತದೋ ಅಲ್ಲಿ ನಾವು ವಿಶ್ರಾಂತಿಯನ್ನು ಅಪೇಕ್ಷಿಸುವುದಿಲ್ಲ. ನಮಗೆ ಇಷ್ಟವಿಲ್ಲದ ಸಣ್ಣ ಕೆಲಸ ಮಾಡಿದರೂ ನಮಗೆ ಆಯಾಸವಾಗುತ್ತದೆ. ಹೊಸ ಹೊಸ ವಿಚಾರಗಳಿಗೆ ಮನಸ್ಸನ್ನು ತೆರದಿರಿಸಿಕೊಳ್ಳಬೇಕು.

ಎಲ್ಲ ವೈದ್ಯಕೀಯ ವಿಭಾಗವೂ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ನಾನೊಮ್ಮೆ ಆಯುರ್ವೆದ ಕಾಲೇಜಿನ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬರು ಭಾಷಣದಲ್ಲಿ ಸ್ವ-ಅನುಭವವನ್ನು ಹೇಳುತ್ತಿದ್ದರು. ಅವರು ಕ್ಯಾನ್ಸರ್ ಪೀಡಿತರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರಂತೆ. ಅಲ್ಲಿ ವೈದ್ಯರು ಎಲ್ಲ ರೀತಿಯ ತಪಾಸಣೆ ಮಾಡಿ, ‘ಇದನ್ನು ಗುಣಪಡಿಸಲು ಕಷ್ಟಸಾಧ್ಯ. ಇನ್ನು ಹೆಚ್ಚು ದಿನ ಬದುಕಲು ಕೂಡ ಸಾಧ್ಯವಿಲ್ಲ’ ಎಂದು ಹೇಳಿ ಕಳುಹಿಸಿದರಂತೆ. ಆಗ ತುಂಬ ದುಃಖಿತರಾಗಿದ್ದ ಅವರಿಗೆ ಯಾರೋ ಒಬ್ಬರು ಧರ್ಮಸ್ಥಳದ ಆಯುರ್ವೆದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ ನೀಡಿದರಂತೆ. ಅದರಂತೆ, ‘6 ವರ್ಷಗಳ ಹಿಂದೆ ಚಿಕಿತ್ಸಾಲಯಕ್ಕೆ ಹೋಗಿ ಚಿಕಿತ್ಸೆ ಪಡೆದು ಆರೋಗ್ಯವಾಗಿ ನಿಮ್ಮ ಮುಂದೆ ಇದ್ದೇನೆ’ ಎಂದರು. ಹೀಗೆ ಕೆಲವೊಮ್ಮೆ ಅಲೋಪಥಿಯಲ್ಲಿ ವಾಸಿಯಾಗದ ನೋವು, ಕಾಯಿಲೆ ಆರ್ಯುವೇದದಲ್ಲಿ ವಾಸಿಯಾಗಬಹುದು, ಆರ್ಯುವೇದದಲ್ಲಿ ಗುಣವಾಗದ ರೋಗವು ಅಲೋಪಥಿ, ನ್ಯಾಚುರೋಪಥಿಯಲ್ಲಿ ಗುಣವಾಗಬಹುದು. ಹೀಗೆ ಯಾವುದೂ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ತಮ್ಮದೇ ನೆಲೆಯಲ್ಲಿ ಎಲ್ಲವೂ ಮಹತ್ವವುಳ್ಳದ್ದೇ ಆಗಿವೆ.

ಈ ವ್ಯಕ್ತಿಗತವಾಗಿ ಹಾಗೂ ರೋಗಮೂಲವಾಗಿ ಸೇರುವ ಚಿಕಿತ್ಸೆಗೆ ಹೊಸ ಭಾಷ್ಯ ಬರೆಯಲಾಗಿದೆ. ಅದೇನೆಂದರೆ ‘ಹೋಲಿಸ್ಟಿಕ್ ಅಪ್ರೋಚ್’ ಅಂದರೆ ಅಲೋಪಥಿ, ಆಯುರ್ವೆದ, ಯುನಾನಿ ಹೀಗೆ ಯಾವುದೂ ಇರಬಹುದು, ಅಥವಾ ಹಿಮಾಲಯಕ್ಕೆ ಹೋಗಿ ತಪಸ್ಸು, ಧ್ಯಾನ ಮಾಡಿ ಎನ್ನಬಹುದು. ಇದರ ಪ್ರಕಾರ ಚಿಕಿತ್ಸೆಗಾಗಿ ರೋಗಿಯಲ್ಲ, ರೋಗಿಗಾಗಿ ಚಿಕಿತ್ಸೆ. ಸಾಮಾನ್ಯವಾಗಿ ಚಿಕಿತ್ಸೆ ಪಡೆಯುವಾಗ ರೋಗಿಯೇ ತಾನು ಯಾವ ಪದ್ಧತಿಯ ಚಿಕಿತ್ಸೆ ಬೇಕೆಂದು ನಿಶ್ಚಯಿಸಿ ಅದರಂತೆ ಮುಂದುವರಿಯುತ್ತಾನೆ. ಇಲ್ಲವೇ ವೈದ್ಯರೂ ಇಂಥ ಚಿಕಿತ್ಸೆ ಪಡೆದುಕೊಳ್ಳಿ ಎಂದು ಶಿಫಾರಸ್ಸು ಮಾಡಬಹುದು. ಈಗಾಗಲೇ ಧಾರವಾಡದ ಎಸ್​ಡಿಎಂ ವಿಶ್ವವಿದ್ಯಾಲಯದಲ್ಲಿ ಅಲೋಪಥಿ ಜೊತೆಗೆ ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೆದ ಕೇಂದ್ರಗಳೂ ಇವೆ. ಉದಾಹರಣೆಗೆ ಇಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ರೋಗಿ ಬಂದಾಗ ಆತನಿಗೆ ಅಲೋಪಥಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಆರ್ಯುವೇದದಲ್ಲಿ ರೋಗಮುಕ್ತಗೊಳಿಸಿ, ಮುಂದೆ ರೋಗ ಬಾರದಂತೆ ಹಾಗೂ ಕೆಲಸ-ಕಾರ್ಯಗಳನ್ನು ಮಾಡಲು ಅನುವಾಗುವಂತೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮೂಲಕ ರೋಗಿಗೆ ಸಹಕರಿಸುವುದಾಗಿದೆ. ನನ್ನ ಮುಂದಿನ ಯೋಜನೆಯೆಂದರೆ ಈ ರೀತಿಯ ಹೋಲಿಸ್ಟಿಕ್ ಆಸ್ಪತ್ರೆಗಳು ಹೆಚ್ಚಾಗಬೇಕು. ಹಾಗೂ ಉತ್ತಮ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ಎಲ್ಲರಿಗೂ ದೊರೆಯಬೇಕು.

ಈ ಕರೊನಾದಂಥ ಮಾರಕ ರೋಗ ಆದಷ್ಟು ಬೇಗ ನಿಮೂಲನೆಯಾಗಲಿ. ಪ್ರಕೃತಿಯನ್ನು ಸಂರಕ್ಷಿಸಿ ಅನುಸರಿಸೋಣ. ರೋಗ ತಡೆಗಟ್ಟಲು ನಮ್ಮ ಪ್ರಯತ್ನವನ್ನು ಮಾಡೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net