

ಭಾರತ ಕಂಡ ಮಹಾನ್ ಆಚಾರ್ಯ ತ್ರಯರುಗಳಲ್ಲಿ ದೀರ್ಘಕಾಲ ಬಾಳಿ-ಬದುಕಿ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ಶ್ರೀರಾಮಾನುಜಾಚಾರ್ಯರು. ಆಚಾರ್ಯರು 12 ವರ್ಷ ವಾಸ್ತವ್ಯ ಮಾಡಿ ಶ್ರೀಚೆಲುವನಾರಾಯಣಸ್ವಾಮಿಯನ್ನು ಆರಾಧಿಸಿದ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ತಿರುನಕ್ಷತ್ರ ವೈಭವಯುತವಾಗಿ ನಡೆಯುತ್ತದೆ.
ಆಚಾರ್ಯ ರಾಮಾನುಜರು ತಮಿಳುನಾಡಿನ ಪೆರಂಬದೂರಿನಲ್ಲಿ ಕ್ರಿ.ಶ. 1017 ಚಂದ್ರಮಾನ ರೀತಿಯ ಚೈತ್ರಮಾಸದ ಶುಕ್ಲಪಕ್ಷದ ಆರಿದ್ರಾ ನಕ್ಷತ್ರದಲ್ಲಿ ಜನಿಸಿದರು. ಸೋಮಯಾಜಿ ಮತ್ತು ಕಾಂತಿಮತಿ ಇವರ ತಂದೆ-ತಾಯಿ. ಪುತ್ರಕಾಮೇಷ್ಠಿಯಾಗ ಮಾಡಿದ ನಂತರ ಪೆರಂಬದೂರಿಗೆ ರಾಮಾನುಜರ ಪಾಲಕರು ಬರುತ್ತಾರೆ.
ಅದಾದ ಕೆಲ ತಿಂಗಳಲ್ಲಿ ಆಚಾರ್ಯರ ಜನನವಾಗುತ್ತದೆ. ಹುಟ್ಟಿದಾಗ ಅವರಿಗೆ ಇಟ್ಟ ಹೆಸರು ಇಳೆಯ ‘ಪೆರುಮಾಳ್’. ಸಂಸ್ಕೃತದಲ್ಲಿ ಅದಕ್ಕೆ ಲಕ್ಷ್ಮಣ ಎನ್ನುತ್ತಾರೆ. ಆದಕಾರಣವೇ ರಾಮಾನುಜರನ್ನು ರಾಮನಿಗೆ ಅನುಜನಾದವನು ಲಕ್ಷ್ಮಣ ಎನ್ನುತ್ತಾರೆ. ಹಾಗಾಗಿಯೇ ಅವರನ್ನು ರಾಮಾನುಜ ಎಂದು ತಿರುಮಲೆಯ ನಂಬಿ ಎಂದೇ ಪ್ರಸಿದ್ಧರಾದ ಶೈಲಪೂರ್ಣರು (ರಾಮಾನುಜಾಚಾರ್ಯರ ಸೋದರಮಾವ) ಮಗುವಿಗೆ ನಾಮಕರಣ ಮಾಡಿದರು. ಸಕಲ ಶಾಸ್ತ್ರವನ್ನು ರಾಮಾನುಜರಿಗೆ ಆಯಾಯ ಕಾಲಘಟ್ಟದಲ್ಲಿ ಬೋಧಿಸಲಾಯಿತು. ಚೌಲ ಉಪನಯನ, ವಿದ್ಯಾಭ್ಯಾಸ, ವೇದಭ್ಯಾಸ, ವೇದ-ವೇದಾಂಗಗಳನ್ನು 16ನೇ ವರ್ಷಕ್ಕೇ ಕರತಲಾಮಲಕ ಮಾಡಿಕೊಂಡಿದ್ದರು.
ಚಿಕ್ಕಂದಿನಲ್ಲಿಯೇ ರಾಮಾನುಜರು ಯಾದವ ಪ್ರಕಾಶರ ವ್ಯಾಖ್ಯಾನದಲ್ಲಿನ ಸರಿ-ತಪ್ಪುಗಳನ್ನು ತೂಗಿಸಿ, ತೋರಿಸಿ ಹೇಳಿದಾಗ ಯಾದವ ಪ್ರಕಾಶರಿಗೆ ಅದು ಇಷ್ಟವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಮಾನುಜರು ಅವರ ಬಳಿ ಅಧ್ಯಯನ ಮಾಡುವುದನ್ನು ನಿಲ್ಲಿಸಿ, ಯಾಮುನಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸಿದರು. ಅವರ ಗುರುಗಳು ದೈವಾಧೀನರಾದ ನಂತರ ರಾಮಾನುಜರು ಪಂಚಸಂಸ್ಕಾರ ಮತ್ತು ವೈಷ್ಣವ ದೀಕ್ಷೆ ಸನ್ಯಾಸ ದೀಕ್ಷೆಯನ್ನು ಕಂಚಿಯ ವರದರಾಜಸ್ವಾಮಿಯ ಬಳಿ ಸ್ವೀಕರಿಸಿ ಶ್ರೀರಂಗದೆಡೆಗೆ ಪ್ರಯಾಣ ಬೆಳೆಸಿದರು. ಶ್ರೀರಂಗನಾಥನ ಕೈಂಕರ್ಯವನ್ನು ಮಾಡುತ್ತ ಅಲ್ಲಿಯೇ ನೆಲೆಸಿದರು. ಆಗ ರಾಮಾನುಜರಿಗೆ 24 ವರ್ಷ. ಅನೇಕ ತತ್ವ ರಹಸ್ಯಗಳನ್ನು ಕಲಿತಂಥ ರಾಮಾನುಜರು ಗೋಷ್ಠಿಪೂರ್ಣರು ಎಂಬುವರ ಬಳಿ ಮಂತ್ರ ರಹಸ್ಯ ತಿಳಿದುಕೊಳ್ಳಲು ಹೋದರು.
ಆದರೆ 17 ಬಾರಿ ಹೋದರೂ ಭೇಟಿಯಾಗಲಿಲ್ಲ. ‘ನಾನು ಮಂತ್ರಗಳ ರಹಸ್ಯ ಪಡೆದುಕೊಳ್ಳಲು ಅರ್ಹನಾಗಿಲ್ಲವೋ’ ಎಂಬ ದುಃಖಿಸುತ್ತಾರೆ. ಆದರೆ ಗೋಷ್ಠಿಪೂರ್ಣರಿಗೂ ರಾಮಾನುಜರಂಥ ಬಹಳ ಶ್ರದ್ಧೆ, ಕೋಮಲ ಹೃದಯ ಇರುವ ಒಬ್ಬ ಶಿಷ್ಯ ಬೇಕಾಗಿತ್ತು. ಅದೊಂದು ದಿನ ರಾತ್ರಿ ರಾಮಾನುಜರಿಗೆ ತಾವು ಉಪದೇಶ ಮಾಡಲೇಬೇಕೆಂದು ನಿರ್ಧರಿಸಿದರು.
‘ಸಾಮಾನ್ಯ ಜನರಿಗೆ, ಬೇರೆಯವರಿಗೆ ಈ ಮಂತ್ರವನ್ನು ಉಪದೇಶಿಸಿದರೆ ನೀನು ನರಕಕ್ಕೆ ಹೋಗುವೆ’ ಎಂದು ಹೇಳಿ ನಂತರ ಗೋಷ್ಠಿಪೂರ್ಣರು ರಾಮಾನುಜರಿಗೆ ‘ಓಂ ನಮೋ ನಾರಾಯಣಾಯ’ ಎಂಬ ಪ್ರಣವ ಮಂತ್ರವನ್ನು ಉಪದೇಶಿಸಿದರು. ಮಾತ್ರವಲ್ಲ, ಅಷ್ಟಾಕ್ಷರಿಮಂತ್ರದ ಉಪದೇಶವನ್ನು, ಮಂತ್ರರಾಜ ಎಂದು ಕೂಡ ಕರೆಯಲ್ಪಡುವ ದ್ವಯಮಂತ್ರವನ್ನು ಉಪದೇಶಿಸಿದರು. ಮಂತ್ರೋಪದೇಶವನ್ನು ರಹಸ್ಯವಾಗಿ ಇಡಬೇಕೆಂದು ಆದೇಶಿಸಿದರು.
ಆದರೂ ಸಮಾಜದ ಉನ್ನತಿಗಾಗಿ ಅಂದೇ ರಾಮಾನುಜಾಚಾರ್ಯರು ದೇವಸ್ಥಾನದ ಮೇಲ್ಭಾಗಕ್ಕೆ ಹೋಗಿ ಭಕ್ತಿಯಲ್ಲಿ ಆಸಕ್ತರಾಗಿರುವಂತಹ ಎಲ್ಲ ಜನರಿಗೂ ಕೇಳಿಸುವಂತೆ, ತಾನೊಬ್ಬ ನರಕಕ್ಕೆ ಹೋದರೂ ಪರವಾಗಿಲ್ಲ ಅದರ ಅರ್ಥವನ್ನು ತಿಳಿದಂಥ ಎಲ್ಲ ಜನರು ಒಳಿತನ್ನು ಪಡೆಯಲಿ ಎಂಬ ಉದ್ದೇಶದಿಂದ ಆ ಮಂತ್ರವನ್ನು ಹೇಳಿದರು. ತಾನು ಕಷ್ಟಪಟ್ಟರೂ ಪರವಾಗಿಲ್ಲ, ಇನ್ನೊಬ್ಬರಿಗೆ ಸುಖ, ಸಂತೋಷವನ್ನು ಭಗವಂತ ನೀಡಲಿ ಎಂಬ ಒಳ್ಳೆಯ ಮನಸ್ಸಿನ ಭಾವ ಆಚಾರ್ಯ ರಾಮಾನುಜರಲ್ಲಿ ನೆಲೆಯೂರಿತ್ತು.
ರಾಮಾನುಜರು ಶ್ರೀರಂಗಂ ದೇವಸ್ಥಾನದ ಆಡಳಿತವನ್ನು ಸುಧಾರಣೆ ಮಾಡಿ, ದೇವಾಲಯಕ್ಕೆ ಸರ್ವ ಮತದವರು ಪ್ರವೇಶ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಬದಲಿಸಿದರು. ಹಲವು ಕಷ್ಟಗಳನ್ನೆಲ್ಲ ಮೆಟ್ಟಿ ಜಾತಿ ವ್ಯವಸ್ಥೆ ಸುಧಾರಿಸಿದರು. ಇದರಿಂದಾಗಿ ಆಚಾರ್ಯರಿಗೆ ಭಿಕ್ಷೆಯಲ್ಲಿ ವಿಷವನ್ನು ನೀಡಿ ಕೊಲ್ಲಲು ವಿಫಲ ಯತ್ನ ನಡೆಯಿತು. ಇದಾದ ನಂತರ ಯಾರ ಮನೆಗೂ ಭಿಕ್ಷೆಗೆ ಹೋಗದೆ ನೀರನ್ನು ಮಾತ್ರ ಕುಡಿದು ನೀರಾಹಾರರಾಗಿರುತ್ತಾರೆ. ಅವರನ್ನು ಕೊಲ್ಲಲು ಬಂದವರೇ ಮುಂದೆ ಶರಣಾಗತರಾಗಿ ಶಿಷ್ಯರಾದರು.
ಆಚಾರ್ಯ ರಾಮಾನುಜರು ಸಮಾನತೆಯ ತಳಹದಿಯೊಂದಿಗೆ ವೈಷ್ಣವ ಸಿದ್ಧಾಂತವನ್ನು ಬೋಧಿಸುತ್ತಿದ್ದರಿಂದ ಶೈವಪಂಥಗಳು ಕಳೆಗುಂದುವ ಹಂತದಲ್ಲಿದ್ದವು. ಅಲ್ಲಿ ಆಳ್ವಿಕೆಯಲ್ಲಿದ್ದ ಕ್ರಿಮಿಕಂಠ ಚೋಳ ಮತ್ತು ಅದಿರಾಜೇಂದ್ರಚೋಳ ಶೈವನಾಗಿದ್ದು, ರಾಮಾನುಜರ ಉಪಕ್ರಮದಿಂದ ಕೋಪಗೊಂಡು ರಾಮಾನುಜರು ಶೈವಪರವಾಗಿರಬೇಕು ಇಲ್ಲವೆ ಅವರ ಕಣ್ಣು ಕಿತ್ತುಹಾಕಿ ಎಂದು ಆದೇಶಿಸಿದ. ರಾಮಾನುಜರ ಶಿಷ್ಯ ಕುರತ್ತಾಳ್ವಾನ್ ಆಚಾರ್ಯರ ಪರವಾಗಿ ತಾನೇ ರಾಮಾನುಜ ಎಂದು ಹೇಳಿ ಕಣ್ಣುಕಳೆದುಕೊಂಡು ಆಚಾರ್ಯರನ್ನು ಪಾರು ಮಾಡಿ ಕರ್ನಾಟಕಕ್ಕೆ ಕಳುಹಿಸಿದರು.
ಕರ್ನಾಟಕಕ್ಕೆ ಬಂದಾಗ ಹೊಯ್ಸಳ ದೊರೆಗಳು ಆಶ್ರಯ ನೀಡಿದರು. ತಮ್ಮ ಪ್ರಾಣವನ್ನೇ ಒತ್ತೆಯಾಗಿ ಇಟ್ಟು ರಾಮಾನುಜರನ್ನು ರಕ್ಷಿಸಲು ನಿಂತ ನಾಲ್ಕು ಕುಟುಂಬಗಳು ಆಚಾರ್ಯರೊಡನೆ ಬಂದವು. ಇದೇ ಪ್ರಿಯಶಿಷ್ಯರನ್ನು ಇಂದಿಗೂ ಮೇಲುಕೋಟೆಯಲ್ಲಿ ಸ್ಥಾನಿಕರು ಎಂದೇ ಕರೆಯಲಾಗುತ್ತದೆ. ಅಂದು ರಾಮಾನುಜರು ನಂಬಿಕಸ್ಥರಾದ ಇದೇ ಶಿಷ್ಯರಿಂದ ಮಾತ್ರ ಭಿಕ್ಷೆ ಸ್ವೀಕರಿಸುತ್ತಿದ್ದರು. ಈ ಐತಿಹಾಸಿಕ ಕಾರಣಕ್ಕಾಗಿಯೇ ರಾಮಾನುಜಾಚಾರ್ಯರ ಜಯಂತಿಯ ಸಮಯದಲ್ಲಿ ನಾಲ್ಕೂ ಸ್ಥಾನಿಕರು ಭಿಕ್ಷಾ ಕೈಂಕರ್ಯವನ್ನು ನೆರವೇರಿಸುವುದನ್ನು ಕಾಣಲಾಗುತ್ತದೆ.
ಹಲವು ಅಮೂಲ್ಯ ಗ್ರಂಥಗಳ ರಚನೆ: ರಾಮಾನುಜರು ಧಾರ್ವಿುಕ ಸಾಹಿತ್ಯಕ್ಷೇತ್ರಕ್ಕೂ ಅಪಾರಕೊಡುಗೆ ನೀಡಿದ್ದಾರೆ. ಭಾಷ್ಯ ವೇದಾಂತ, ವೇದಾಂತ ಸಂಗ್ರಹ ಗೀತಾಭಾಷ್ಯ, ವೇದಾಂತ ದೀಪ ಗ್ರಂಥ ರಚಿಸಿದ್ದಾರೆ. ಅವರು ರಚಿಸಿದ ಶರಣಾಗತಿಗದ್ಯ, ಶ್ರೀರಂಗಗದ್ಯ, ವೈಕುಂಠ ಗದ್ಯ ಸ್ತೋತ್ರಗಳನ್ನು ಗದ್ಯತ್ರಯಗಳೆನ್ನಲಾಗುತ್ತದೆ. ಭಕ್ತಿಯ ಮೂಲಕ ಸರ್ವಜನರಲ್ಲೂ ಸಮಾನತೆ ಭಾವ ಸಾರಿದ, ಸನಾತನ ಧರ್ಮದ ಆಚರಣೆಗಳನ್ನು ಉಳಿಸಿ ಬೆಳೆಸುವ ಜತೆಗೆ ಭಗವಂತ ಎಲ್ಲರಿಗೂ ಒಲಿಯುತ್ತಾನೆ ಎಂಬ ಆತ್ಮಸೆ ೖ ್ಥ ರ್ಯವನ್ನು ತುಂಬಿದವರು ರಾಮನುಜರು. ಭಾರತದಾದ್ಯಂತ ಸಂಚರಿಸಿ ತಮ್ಮ ಸಿದ್ಧಾಂತವನ್ನು ಪಸರಿಸಿ ದೇವಾಲಯಗಳನ್ನು ನಿರ್ವಿುಸಿದರು. ಕೆರೆಕಟ್ಟೆಗಳು, ಗೋಶಾಲೆ, ಪರಿಸರ ರಕ್ಷಣೆ, ದೇವಾಲಯದ ಆಡಳಿತದ ಸುಧಾರಣೆ ಮಾಡಿ ಯತಿ ಸಾರ್ವಭೌಮರೆನಿಸಿಕೊಂಡ ರಾಮಾನುಜರು 120 ವರ್ಷ ಜೀವಿಸಿ 1137ರಲ್ಲಿ ಭಗವಂತನಲ್ಲಿ ಲೀನರಾದರು. (ಲೇಖಕರು ಹವ್ಯಾಸಿ ಬರಹಗಾರರು)