

ಜಗತ್ತಿನ ಏಕೈಕ ಯಹೂದಿ ರಾಷ್ಟ್ರ ಇಸ್ರೇಲ್. ಸಾಲು ಸಾಲು ಸವಾಲುಗಳನ್ನು ನಿರಂತರವಾಗಿ ಮೈಮೇಲೆ ಎಳೆದುಕೊಳ್ಳುತ್ತಲೇ, ಅಭಿವೃದ್ಧಿಯಲ್ಲಿಯೂ ವೇಗವಾಗಿ ಹೆಜ್ಜೆ ಇಡುತ್ತಿರುವ ಇಸ್ರೇಲ್ಗೆ ಪ್ರಪಂಚ ಭೂಪಟದಲ್ಲಿರುವುದು ಅಂಗೈ ಅಗಲದ ಜಾಗವಷ್ಟೆ! ಆದರೆ ಈ ದೇಶ ಎಂದೂ ಕೀಳರಿಮೆಯಿಂದ ಕೊರಗಲಿಲ್ಲ. ಎದುರಾದ ಸವಾಲುಗಳಿಗೆ ಜಗ್ಗಲಿಲ್ಲ. ಬಿದ್ದರೂ, ತಟಕ್ಕನೇ ಎದ್ದು ನಿಲ್ಲುವ ತಾಕತ್ತನ್ನು ತನ್ನ ಆಂತರ್ಯದಲ್ಲಿಯೇ ಗಟ್ಟಿಯಾಗಿ ಹುದುಗಿಸಿ ಇಟ್ಟುಕೊಂಡಿರುವ ವಿಶಿಷ್ಟ ರಾಷ್ಟ್ರವಿದು.
ಸುತ್ತಲೂ ಶತ್ರು ದೇಶಗಳನ್ನು ಸೃಷ್ಟಿ ಮಾಡಿಕೊಂಡಿರುವ ಇಸ್ರೇಲ್ಗೆ ಮಿತ್ರ ರಾಷ್ಟ್ರಗಳು ಕಡಿಮೆಯೇ. ಇರಾನ್, ಇರಾಕ್ ಸೇರಿದಂತೆ ತನ್ನ ಶತ್ರು ರಾಷ್ಟ್ರಗಳೆಲ್ಲವೂ ಒಟ್ಟಾಗಿ ದಾಳಿ ಮಾಡಿದರೆ ದಿನ ಬೆಳಗಾಗುವುದರೊಳಗೆ ನಾಶವಾಗಿಬಿಡಬಹುದಾದ ಆತಂಕವನ್ನು ನಿತ್ಯವೂ ಇಸ್ರೇಲ್ ಎದುರಿಸುತ್ತಿದೆ. ಆ ಕಾರಣಕ್ಕಾಗಿಯೇ ದೇಶ ರಕ್ಷಣೆ ವಿಷಯದಲ್ಲಿ ಈ ದೇಶ ಒಂದು ಕ್ಷಣವೂ ಮೈಮರೆಯುವುದಿಲ್ಲ. ಅದು ನಿಜಕ್ಕೂ ಆ ದೇಶದ ತಾಕತ್ತು ಕೂಡ. ಎಂಥದ್ದೇ ಸವಾಲುಗಳನ್ನು ಎದುರಿಸುವ ಮತ್ತು ಸಂಘರ್ಷದ ಸನ್ನಿವೇಶದಲ್ಲಿಯೂ ತಮ್ಮ ದೇಶವನ್ನು ಉಳಿಸಿಕೊಳ್ಳಬಹುದಾದ ಬದ್ಧತೆ ಅಲ್ಲಿ ನೆಲೆಸಿರುವ ಪ್ರತಿಯೊಬ್ಬ ಇಸ್ರೇಲಿಗರಿಗೂ ರಕ್ತಗತವಾಗಿ ಹೋಗಿದೆ. ಮೂಲ ದೇಶವಾಸಿಗಳು ಯುದ್ಧಗಳಿಗೆ ಹೆದರುವುದೇ ಇಲ್ಲ. ಆಗಸದಲ್ಲಿ ಎಷ್ಟೇ ಮಿಸೈಲ್ಗಳು ಬಂದರೂ, ಬಾಂಬ್ ದಾಳಿ ನಡೆದರೂ ಅವುಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದು ಉರುಳಿಸಬಹುದಾದ ತಂತ್ರಜ್ಞಾನವನ್ನು ಈ ದೇಶ ಅಭಿವೃದ್ಧಿಪಡಿಸಿಕೊಂಡಿದೆ. ಕೃಷಿಯಲ್ಲಿ ಜಗತ್ತಿನಲ್ಲಿಯೇ ನಂಬರ್ ಒನ್ ದೇಶವಿದು. ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತವಾದರೂ, ಕಡಿಮೆ.
77 ವಸಂತ ಕಂಡ ದೇಶ: ಮೆಡಿಟೆರೇನಿಯನ್ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶವಾಗಿರುವ ಇಸ್ರೇಲ್, ಉತ್ತರಕ್ಕೆ ಲೆಬನಾನ್, ಪೂರ್ವಕ್ಕೆ ಸಿರಿಯಾ ಮತ್ತು ಜೋರ್ಡಾನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ, ಈಜಿಪ್ಟ್ ದೇಶಗಳೊಂದಿಗೆ ತನ್ನ ಗಡಿ ಹಂಚಿಕೊಂಡಿದೆ. ಇಸ್ರೇಲ್ ಗಣರಾಜ್ಯವಾಗಿದ್ದು 1948ರ ಮೇ 15ರಂದು. ಕಳೆದ 77 ವರ್ಷಗಳ ಅವಧಿಯಲ್ಲಿ ಸ್ವತಂತ್ರ ರಾಷ್ಟ್ರವಾಗಿ ಇಸ್ರೇಲ್ ಹಲವು ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ತಂತ್ರಜ್ಞಾನದಲ್ಲಿ ಜಗತ್ತಿನ ಎತ್ತರದ ಸ್ತರಗಳಲ್ಲಿ ತನ್ನದೇ ಛಾಪು ಮೂಡಿಸಿದೆ. ಎಷ್ಟೇ ಅಭಿವೃದ್ಧಿ ಹೊಂದಿದರೂ ಇಸ್ರೇಲ್, ಎರಡನೇ ಮಹಾಯುದ್ಧದ ಕಾಲದಲ್ಲಿ ಸರ್ವಾಧಿಕಾರಿ ಹಿಟ್ಲರ್ ಯಹೂದಿ ಜನಾಂಗದ ಮೇಲೆ ನಡೆಸಿದ ಭೀಕರ ದಾಳಿ, ಹತ್ಯಾಕಾಂಡದ ಇತಿಹಾಸವನ್ನು ಸದಾ ಒಡಲಲ್ಲಿರಿಸಿಕೊಂಡು ಮುಂದೆ ಸಾಗುತ್ತಿದೆ.
ಕಳೆದೆರಡು ವರ್ಷಗಳ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಸ್ರೇಲ್ ಭಾರಿ ಸವಾಲುಗಳನ್ನು ಎದುರಿಸಿದೆ. ಪ್ಯಾಲೆಸ್ತೆನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಜಗತ್ತಿನಲ್ಲಿಯೇ ಹೆಚ್ಚು ಚರ್ಚೆಯಲ್ಲಿರುವ ಇಸ್ರೇಲ್ಗೆ ಭಾರತೀಯ ಪತ್ರಕರ್ತರ ನಿಯೋಗ ಇತ್ತೀಚೆಗೆ ಭೇಟಿ ನೀಡಿತ್ತು. ಆ ನಿಯೋಗದ ಭಾಗವಾಗಿದ್ದ ನಮ್ಮನ್ನು ಟೆಲ್ಅವಿವ್ನಲ್ಲಿರುವ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವಾಗತಿಸಿತು.
ನಾವು ಇಸ್ರೇಲ್ನಲ್ಲಿರುವ ಸಂದರ್ಭದಲ್ಲಿಯೇ ಜೇರುಸಲೇಂನಲ್ಲಿ ಬಂದೂಕುಧಾರಿಗಳಾದ ಹಮಾಸ್ ಉಗ್ರರಿಬ್ಬರು ಎರಡು ಬಸ್ಗಳ ಮೇಲೆ ಗುಂಡಿನ ದಾಳಿ ನಡೆಸಿ 6 ಜನರನ್ನು ಕೊಂದರು. ಸುಮಾರು 20 ಜನರು ಗಾಯಗೊಂಡರು. ಇದಕ್ಕೆ ಮಾರನೇ ದಿನ ಹಮಾಸ್ನ ಕೇಂದ್ರ ಕಚೇರಿ ಇರುವ ಕತಾರ್ ಮೇಲೆ ಇಸ್ರೇಲ್ ಪ್ರತಿದಾಳಿ ನಡೆಸಿದ ಪರಿಣಾಮ ಅಲ್ಲಿ ಐವರು ಮೃತಪಟ್ಟರು. ಈ ಎರಡು ಘಟನೆಗಳು ನಮ್ಮ ಎದೆಬಡಿತ ಹೆಚ್ಚಿಸಿತು. ಈ ಮಧ್ಯೆ ನಮ್ಮ ಗೈಡ್, ‘ಶತ್ರು ರಾಷ್ಟ್ರಗಳು ದಾಳಿ ನಡೆಸಿದರೆ, ಸೈರನ್ ಮೊಳಗುತ್ತದೆ. ಆಗ ನೀವು ಕೂಡಲೇ ಬಂಕರ್ಗೆ ಧಾವಿಸಿ ರಕ್ಷಣೆ ಪಡೆಯಬೇಕು’ ಎಂದು ಹೇಳಿದಾಗ ನಮಗೆ ಜೀವ ಬಾಯಿಗೆ ಬಂದಂತೆ ಆಗಿತ್ತು.
ಜಗತ್ತಿಗೆ ಪ್ರೀತಿ, ಶಾಂತಿಯನ್ನು ಬೋಧಿಸಿದ ಕ್ರೖೆಸ್ತ ಧರ್ಮ ಹುಟ್ಟಿದ್ದು ಜೇರುಸಲೇಂ ನೆಲದಿಂದಲೇ. ಪ್ರವಾದಿ ಮೊಹಮದ್ ಪೈಗಂಬರ್ಗೂ ಇದು ನೆಚ್ಚಿನ ತಾಣ. ಯಹೂದಿಗಳಿಗೆ ಸಾವಿರಾರು ವರ್ಷಗಳ ಇತಿಹಾಸದ ಹೆಜ್ಜೆ ಗುರುತು ಮೂಡಿಸಿರುವ ಧಾರ್ವಿುಕ ನಂಬಿಕೆ ಇರುವ ಮಹತ್ವದ ಜಾಗ. ಈ ಮೂರು ಧರ್ವಿುಯರ ಪ್ರಾರ್ಥನಾ ಮಂದಿರಗಳು ಕೂಗಳತೆಯ ದೂರದಲ್ಲಿಯೇ ಇವೆ. ಈ ಜಾಗಕ್ಕಾಗಿ ಶತಮಾನಗಳಿಂದ ನಡೆಯುತ್ತಿರುವ ಸಂಘರ್ಷ ಮಾತ್ರ ಇನ್ನೂ ನಿಂತಿಲ್ಲ. ಏಸು ಕ್ರಿಸ್ತನನ್ನು ಬಂಧಿಸಿ ಜೈಲಿನಲ್ಲಿ ಹಾಕಿ, ಬಳಿಕ ಶಿಲುಬೆಗೇರಿಸಿದ ಜಾಗಗಳೆಲ್ಲವೂ ಇಂದು ಧಾರ್ವಿುಕ ಶ್ರದ್ಧಾ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಅಲ್ಲಿರುವ ಇತಿಹಾಸ ಪ್ರಸಿದ್ಧ ಚರ್ಚ್ಗೆ ಭೇಟಿ ಕೊಡಲು ಜಗತ್ತಿನ ವಿವಿಧೆಡೆಯಿಂದ ಜನರು ಇಲ್ಲಿಗೆ ಬರುತ್ತಾರೆ. ಜೇರುಸಲೇಂ ನಗರದ ಗಲ್ಲಿಗಳಲ್ಲಿ ಓಡಾಡುವ ಸಂದರ್ಭದಲ್ಲಿ ವಿಭಿನ್ನ ಅನುಭವ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇಸ್ರೇಲ್ನ ಮಹತ್ವದ ಪ್ರಮುಖ ನಗರಗಳಲ್ಲಿ ಹೈಫಾ, ಟೆಲ್ಅವಿವ್ ಮತ್ತು ಜೇರುಸಲೇಂ ಮುಖ್ಯವಾದವುಗಳು.
400 ಅಮಾಯಕರ ಮಾರಣಹೋಮ ನಡೆದ ಜಾಗವನ್ನು ದುರ್ಘಟನೆಯ ಕರಾಳ ನೆನಪಿನ ಸ್ಮಾರಕವನ್ನಾಗಿ ಇಸ್ರೇಲ್ ಸರ್ಕಾರ ರೂಪಿಸಿದೆ. ಅಲ್ಲಿ ಅಂದು ಮಡಿದ ಪ್ರತಿಯೊಬ್ಬರ ಫೋಟೋ, ವಿವರ, ಕುಟುಂಬದ ಮಾಹಿತಿ ಹಾಕಿದೆ. ಹತ್ಯೆಯಾದವರಲ್ಲಿ ಇಂಜಿನಿಯರ್ಗಳು, ಸಾಫ್ಟ್ವೇರ್ ವೃತ್ತಿಪರರು, ಹಾಡುಗಾರರು, ಸಂಗೀತ ಪ್ರೇಮಿಗಳು, ಯುವ ಉದ್ಯಮಿಗಳು, ಭವಿಷ್ಯದ ಕನಸುಗಳನ್ನು ಹೊತ್ತ ನೂರಾರು ಜನರು ಇದ್ದರು. ಒಬ್ಬೊಬ್ಬರದೂ ಒಂದೊಂದು ದುರಂತ ಕತೆ. ಜನ ಅಲ್ಲಿಗೆ ಬಂದು ಕಳೆದುಕೊಂಡ ತಮ್ಮ ಪ್ರೀತಿಪಾತ್ರರನ್ನು ಸ್ಮರಿಸಿ ಹೂವುಗಳನ್ನಿಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ಯಾಲೆಸ್ತೆನ್ ಮೇಲೆ ಇಸ್ರೇಲ್ ಮುಗಿಬಿದ್ದಿದ್ದು, ಗಾಜಾ ಪಟ್ಟಿ ಮೇಲೆ ಪ್ರತಿದಾಳಿ ನಡೆಸಲು ಆರಂಭಿಸಿದ್ದು ಈ ಘಟನೆಯ ಬಳಿಕವೇ.
ಇಸ್ರೇಲ್ಗೆ ಪ್ಯಾಲೆಸ್ತೆನ್ ಗಡಿ ಸಮಸ್ಯೆ ಮಾತ್ರವಲ್ಲ, ಲೆಬನಾನ್ ಗಡಿ ಸಮಸ್ಯೆಯೂ ತೀವ್ರವಾಗಿದೆ. ಇರಾಕ್ ಮತ್ತಿತರ ಕಡೆಗಳಲ್ಲಿ ಸಕ್ರಿಯವಾಗಿರುವ ಹೆಜ್ಬುಲ್ಲಾ ಉಗ್ರ ಸಂಘಟನೆ, ಲೆಬನಾನ್ ನೆರವಿನಿಂದ ಇಸ್ರೇಲ್ ಪ್ರವೇಶಿಸಿ ಗಡಿ ಭಾಗದ ಹಳ್ಳಿಗಳನ್ನು ವಶಪಡಿಸಿಕೊಂಡಿತ್ತು. ಯುದ್ಧದ ಬಳಿಕ ಈಗ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗಿದೆ. ಅಲ್ಲಿ ಎತ್ತರದ ಗಡಿ ಗೋಡೆಯನ್ನು ನಿರ್ಮಾಣ ಮಾಡಲಾಗಿದ್ದು, ಸದ್ಯಕ್ಕೆ ಶಾಂತಿ ನೆಲೆಸಿದೆ.
ಇಸ್ರೇಲ್ನ ಪ್ರಮುಖ ಆಕರ್ಷಣೆ ನಗರದಲ್ಲಿ ಕಡಲ ತೀರದ ಹೈಫಾ ಕೂಡ ಒಂದು. ಇದು ಎಲ್ಲಾ ಧರ್ಮೀಯರು ಸಂಘರ್ಷವಿಲ್ಲದೆ ನೆಮ್ಮದಿಯಾಗಿ ಜೀವಿಸುತ್ತಿರುವ ನಗರವೂ ಹೌದು. ಈ ಹೈಫಾ ನಗರಿಗೂ ಕನ್ನಡಿಗರಿಗೂ ಸಂಬಂಧವಿದೆ. ಮೊದಲನೇ ಮಹಾಯುದ್ಧದ ಕಾಲದಲ್ಲಿ ಹೈಫಾ ನಗರಕ್ಕೆ ಹೈದರಾಬಾದ್ ನಿಜಾಮನ ಮೂಲಕ ಒಂದು ತುಕಡಿಯನ್ನು ಮೈಸೂರು ಮಹಾರಾಜರು ಕಳುಹಿಸಿಕೊಟ್ಟಿದ್ದರು. ಹೈಫಾ ನಗರವನ್ನು ಬಂಧಮುಕ್ತ ಮಾಡಿದ ಮೇಲೆ ಮೈಸೂರು ತುಕಡಿ ವಾಪಸ್ಸಾಯಿತು. ಅಂದಿನಿಂದ ಇಂದಿನತನಕ ಕನ್ನಡ ನೆಲದ ನಂಟು ಹೈಫಾ ಜೊತೆ ಬೆಸೆದುಕೊಂಡಿದೆ.
400 ಅಮಾಯಕರ ಮಾರಣಹೋಮ ನಡೆದ ಜಾಗವನ್ನು ದುರ್ಘಟನೆಯ ಕರಾಳ ನೆನಪಿನ ಸ್ಮಾರಕವನ್ನಾಗಿ ಇಸ್ರೇಲ್ ಸರ್ಕಾರ ರೂಪಿಸಿದೆ. ಅಲ್ಲಿ ಅಂದು ಮಡಿದ ಪ್ರತಿಯೊಬ್ಬರ ಫೋಟೋ, ವಿವರ, ಕುಟುಂಬದ ಮಾಹಿತಿ ಹಾಕಿದೆ. ಹತ್ಯೆಯಾದವರಲ್ಲಿ ಇಂಜಿನಿಯರ್ಗಳು, ಸಾಫ್ಟ್ವೇರ್ ವೃತ್ತಿಪರರು, ಹಾಡುಗಾರರು, ಸಂಗೀತ ಪ್ರೇಮಿಗಳು, ಯುವ ಉದ್ಯಮಿಗಳು, ಭವಿಷ್ಯದ ಕನಸುಗಳನ್ನು ಹೊತ್ತ ನೂರಾರು ಜನರು ಇದ್ದರು. ಒಬ್ಬೊಬ್ಬರದೂ ಒಂದೊಂದು ದುರಂತ ಕತೆ. ಜನ ಅಲ್ಲಿಗೆ ಬಂದು ಕಳೆದುಕೊಂಡ ತಮ್ಮ ಪ್ರೀತಿಪಾತ್ರರನ್ನು ಸ್ಮರಿಸಿ ಹೂವುಗಳನ್ನಿಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ಯಾಲೆಸ್ತೆನ್ ಮೇಲೆ ಇಸ್ರೇಲ್ ಮುಗಿಬಿದ್ದಿದ್ದು, ಗಾಜಾ ಪಟ್ಟಿ ಮೇಲೆ ಪ್ರತಿದಾಳಿ ನಡೆಸಲು ಆರಂಭಿಸಿದ್ದು ಈ ಘಟನೆಯ ಬಳಿಕವೇ.
ಪ್ರತೀಕಾರವಾಗಿ ಗಡಿಯೊಳಕ್ಕೆ ನುಗ್ಗಿ ಗಾಜಾವನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಇಸ್ರೇಲಿ ಪಡೆಗಳು ಅಲ್ಲಿ ನಿತ್ಯವೂ ದಾಳಿ ನಡೆಸುತ್ತಲೇ ಇವೆ. ಪರಿಣಾಮವಾಗಿ 56 ಸಾವಿರಕ್ಕೂ ಹೆಚ್ಚು ಜನರ ನರಮೇಧ ನಡೆದಿದೆ ಎನ್ನುತ್ತದೆ ಪ್ಯಾಲೆಸ್ತೆನ್. ಆದರೆ, ಈ ಆರೋಪವನ್ನು ಇಸ್ರೇಲ್ ಸ್ಪಷ್ಟವಾಗಿ ನಿರಾಕರಿಸುತ್ತದೆ. ‘15 ಸಾವಿರ ಜನರ ಹತ್ಯೆಯಾಗಿರಬಹುದು. ಪ್ಯಾಲೆಸ್ತೆನ್ ನಾಲ್ಕೈದು ಪಟ್ಟು ಜಾಸ್ತಿ ಹೇಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ’ ಎನ್ನುತ್ತಾರೆ ಇಸ್ರೇಲ್ ವಿದೇಶಾಂಗ ಕಾರ್ಯದರ್ಶಿ ಈಡನ್ ಬಾರ್ ಟಾಲ್.
ಇಸ್ರೇಲ್ ಗಡಿಯಲ್ಲಿ ನಿಂತು ಜೋರಾಗಿ ಕೂಗಿದರೆ, ಗಾಜಾದವರಿಗೆ ಕೇಳುತ್ತದೆ. ಅಷ್ಟು ಹತ್ತಿರದಲ್ಲಿರುವ ಗಡಿ ಈಗ ನಿತ್ಯವೂ ಸುದ್ದಿಯಲ್ಲಿದೆ. ಯಾಕೆಂದರೆ, ಈ ಗಡಿ ದಾಟಿಯೇ ಇಸ್ರೇಲ್ ಯೋಧರು ಗಾಜಾದೊಳಗೆ ನುಗ್ಗಬೇಕು. ಹಾಗೆಯೇ ಗಾಜಾದವರು ಕೂಡ ಈ ಗಡಿ ದಾಟಿಯೇ ಇಸ್ರೇಲ್ ಒಳಕ್ಕೆ ನುಗ್ಗಬೇಕು. 2023ರ ಅ. 7ರಂದು ಹಮಾಸ್ ಉಗ್ರರು ದಂಡುದಂಡಾಗಿ ನುಗ್ಗಿ ಬಂದಿದ್ದು ಕೂಡ ಇದೇ ಗಡಿಯಲ್ಲಿ. ಇಡೀ ಬೇಲಿಯನ್ನು ಗ್ರೆನೇಡ್ ಮೂಲಕ ಉಡಾಯಿಸಿ, ಶಸ್ತ್ರಸಜ್ಜಿತರಾಗಿ ಬಂದು ನಡೆಸಿದ ನರಮೇಧ ಇತಿಹಾಸದ ಕಪು್ಪ ಚುಕ್ಕೆ.
ನಿಜ. ಆ ಜಾಗದಲ್ಲಿ ನಿಂತಾಗ ಎದೆ ನಡುಗುತ್ತದೆ. ಗಾಜಾ ಪಟ್ಟಿಯಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಜಾಗವದು. ಹಮಾಸ್ ಉಗ್ರರಿಂದ ಸಾಮೂಹಿಕ ನರಮೇಧ ನಡೆದದ್ದು ಈ ಜಾಗದಲ್ಲೇ. ನಾವೆಲ್ಲ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡೆವು ಎಂದು ರಕ್ತದೋಕುಳಿಯ ಕಣ್ಣೀರಿನ ಘಟನೆಗಳನ್ನು ಮೆಲುಕು ಹಾಕುತ್ತಲೇ ನಮಗೆ ಎದುರಾದ ಸ್ಥಳೀಯ ಪ್ರತ್ಯಕ್ಷದರ್ಶಿಗಳು, 2023ರ ಅಕ್ಟೋಬರ್ 7ರಂದು ನಡೆದ ಘಟನೆಯನ್ನು ವಿವರಿಸಿದರು. ಅಂದು ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಸುಮಾರು 250 ಜನರನ್ನು ಒತ್ತೆಯಾಳಾಗಿ ಗಾಜಾಕ್ಕೆ ಕರೆದೊಯ್ದಿದ್ದರು.