

ಒಂದು ಊರಿನಲ್ಲಿ ಬಸಣ್ಣ ಎಂಬ ರೈತನಿದ್ದನು. ಅವನಿಗೆ ಲೀಲಾ ಎಂಬ ಒಬ್ಬಳೇ ಮಗಳು ಇದ್ದಳು. ಅವರಿಗೆ ಪ್ರತಿ ತಿಂಗಳಿಗೊಮ್ಮೆ ಸಂತೆಗೆ ಹೋಗಿ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ತರುವ ಅಭ್ಯಾಸವಿತ್ತು. ಸಂತೆಯ ದಿನ ಬಂತೆಂದರೆ ಲೀಲಾಳಿಗೆ ಖುಷಿಯೋ ಖುಷಿ. ಏಕೆಂದರೆ ಆ ದಿನ ಐಸ್ ಕ್ರೀಂ, ಕಡ್ಲೆ ಮಿಠಾಯಿ ಹೀಗೆ ಬೇಕು ಬೇಕಾದ ತಿಂಡಿ-ತಿನಿಸುಗಳನ್ನು ಅಪ್ಪ ಕೊಡಿಸುತ್ತಿದ್ದನು. ಒಮ್ಮೆ ಲೀಲಾ ತಂದೆಯೊಂದಿಗೆ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದಳು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಎದುರಿಗೆ ಒಬ್ಬ ಅಪರಿಚಿತ ಯುವಕ ಎದುರಾದನು. ಅವನ ಉಡುಪು ಅಲ್ಲಲ್ಲಿ ಹರಿದುಹೋಗಿತ್ತು. ಆದರೆ ಅವನ ಕೈಯಲ್ಲಿ ಹಳದಿ ಬಣ್ಣದ ಸೇಬು ಇತ್ತು.
ಲೀಲಾ ತನ್ನ ತಂದೆಗೆ ಗಾಡಿ ನಿಲ್ಲಿಸಲು ಹೇಳಿ ಹಳದಿ ಬಣ್ಣದ ಸೇಬು ಬೇಕೆಂದು ಹಠ ಹಿಡಿದಳು. ತಂದೆ ಗಾಡಿ ನಿಲ್ಲಿಸಿ, ಯುವಕನಿಗೆ ‘ನಿನ್ನ ಕೈಯಲ್ಲಿರುವ ಹಳದಿ ಬಣ್ಣದ ಸೇಬುವಿಗೆ ಎಷ್ಟು ರೂಪಾಯಿ’ ಎಂದು ಕೇಳಿದನು. ಆತ ಸಾವಿರ ರೂ. ಎಂದನು. ಬಸಣ್ಣ ‘ಸಾವಿರ ರೂಪಾಯಿ ಕೊಡಲು ನನ್ನಿಂದಾಗದು. 100 ರೂಪಾಯಿ ಕೊಡುವೆ’ ಎಂದನು. ಆಗ ಯುವಕ, 300 ರೂ. ಕೊಟ್ಟರೆ ಕೊಡುವುದಾಗಿ ಹೇಳಿದನು. ಆಗ ಬಸಣ್ಣ ಬೇರೆ ದಾರಿಕಾಣದೆ 300 ರೂ. ಕೊಟ್ಟು ಸೇಬನ್ನು ಕೊಂಡುಕೊಂಡನು. ಲೀಲಾ ಆಸೆಯಿಂದ ಸೇಬನ್ನು ಕಚ್ಚಿದಳು. ಮರುಕ್ಷಣವೇ ಉಗಿದು, ‘ಅಪ್ಪ ಇದು ಮಣ್ಣಿನ ಸೇಬು’ ಎಂದು ಕೂಗಿದಳು. ಬಸಣ್ಣ ಅದನ್ನು ಸರಿಯಾಗಿ ಪರೀಕ್ಷಿಸಿ ‘ಯುವಕ ಇದಕ್ಕೆ ಹಳದಿ ಬಣ್ಣ ಬಳಿದು ನಮಗೆ ಮೋಸ ಮಾಡಿದ್ದಾನೆ’ ಎಂದುಕೊಂಡು ಯುವಕನಿಗಾಗಿ ಅಲ್ಲೆಲ್ಲ ಹುಡುಕಿದರೂ ಆತ ಸಿಗಲಿಲ್ಲ. ಬಸಣ್ಣ ಕೊನೆಗೆ ಸಾವಿರ ರೂಪಾಯಿಗಳ ಬದಲು 300 ರೂಪಾಯಿಗಳ ನಷ್ಟ ಮಾತ್ರವೇ ಆಯಿತು ಎಂದು ತನ್ನಷ್ಟಕ್ಕೆ ಸಮಾಧಾನಪಟ್ಟನು.
| ತೇಜಸ್ವಿನಿ ಕಾಮತ್ 5ನೇ ತರಗತಿ, ಎನ್ಎಸ್ಎಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ನಿಟ್ಟೆ, ಪಳ್ಳಿ