ಯಶೋದಾಕಂದನ ಬೆಣ್ಣೆ ಪ್ರೀತಿ ಸೂರದಾಸರ ಕೃಷ್ಣ ಭಕ್ತಿ

3-6813bedf97e94
Published on
ಏನ ಪೇಳಲೇ ಗೋಪಿ | ನಿನ್ನ ಮಗನ ಜಾಲ

ಮಾನ ತಪ್ಪಿ ಬಂದ | ಮನೆಯೊಳಗೆ ||

ಕೊಡ ಹಾಲು ಕುಡಿದನೆ | ಗಡಿಗೆಯ ಒಡೆದನೆ

ಅಡಗಿದ್ದನೇ ದೊಡ್ಡ ಕೊಡದೊಳಗೆ ||

ಹುಡುಗ ಸಿಕ್ಕಿದನೆಂದು | ಹೊಡೆಯಲು ಹೋದರೆ

ಬಡವರ ಮಗನೇನೇ ಹೊಡೆಯಲಿಕ್ಕೆ || (ಪುರಂದರದಾಸರು)

ಮಕ್ಕಳು ತಂಟೆ ಮಾಡಿದಾಗ ಅಮ್ಮನ ಬಳಿ ದೂರುವುದು ಲೋಕರೂಢಿ. ನಂದಗೋಕುಲದ ಕೃಷ್ಣನಿಗಿಂತ ತುಂಟ ಬಾಲಕನನ್ನು ಜಗತ್ತಿನಲ್ಲಿ ಕಂಡವರುಂಟೇ? ನಿನ್ನ ಮಗನ ಲೂಟಿ ಘನವಮ್ಮ | ಕರೆದು ರಂಗನ ಬುದ್ಧಿಯ ಪೇಳೆ ಗೋಪಮ್ಮ|| ಎಂದು ದಿನ ಬೆಳಗಾದರೆ ಗೋಪಿಕಾ ಸ್ತ್ರೀಯರಿಂದ ಯಶೋದೆಗೆ ದೂರುಗಳ ಸುರಿಮಳೆಯೇ ಆಗುತ್ತಿತ್ತು. ಬೆಣ್ಣೆ ಕದ್ದ, ಮೊಸರಿನ ಗಡಿಗೆ ಒಡೆದ, ಜಡೆ ಹಿಡಿದೆಳೆದ, ಸ್ನಾನ ಮಾಡುವಾಗ ವಸ್ತ್ರ ಕದ್ದು ಓಡಿದ... ಒಂದೇ ಎರಡೇ... ಕೃಷ್ಣನ ಬಾಲಲೀಲೆಗಳನ್ನು ಆ ಭಾಷೆ, ಈ ಭಾಷೆ ಎನ್ನದೆ ಭಕ್ತಿ ಸಾಹಿತ್ಯದಲ್ಲಿ ನಮ್ಮ ದಾಸರು, ಸಂತರು, ಕವಿಗಳು ಕಟ್ಟಿಕೊಟ್ಟಿರುವ ರೀತಿ ಅನನ್ಯ.

ಒಮ್ಮೆ ಬಾಲಕೃಷ್ಣ ಬೆಣ್ಣೆ ಕದ್ದ ಬಗೆಯನ್ನು ವೈಭವೀಕರಿಸಿ ಗೋಪಿಕೆಯರು ಗಂಭೀರ ಆರೋಪ ಮಾಡುತ್ತಾರೆ. ತಾಯಿ ಯಶೋದೆ ಕಂದನ ಮೇಲೆ ಮುನಿಸಿಕೊಳ್ಳುತ್ತಾಳೆ. ‘ನಿನ್ನಿಂದ ನನ್ನ ಮರ್ಯಾದೆ ಹೋಗುತ್ತಿದೆ, ಅವರಿವರಿಂದ ಕೆಟ್ಟ ಮಾತು ಕೇಳುವಂತಾಗಿದೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಕೋಪ ಪ್ರದರ್ಶಿಸುತ್ತಾಳೆ. ಕೃಷ್ಣ ಎಷ್ಟು ತುಂಟನೋ ಅಷ್ಟೇ ಸೂಕ್ಷ್ಮ. ತಾನು ಎಂಥ ನೋವು, ಕಷ್ಟವನ್ನೂ ಸಹಿಸಬಲ್ಲ. ಆದರೆ, ಅಮ್ಮನ ಕಣ್ಣಲ್ಲಿ ನೀರು ಕಂಡರೆ ಸಹಿಸಲಾರ. ಈಗಂತೂ ಕೋಪ ಬೇರೆ ಮಾಡಿಕೊಂಡಿದ್ದಾಳೆ. ಇಂಥ ಸಂದರ್ಭದಲ್ಲಿ ಅಮ್ಮನನ್ನು ಅನುನಯಿಸುವುದು ಬಿಟ್ಟು ಬೇರೆ ಮಾರ್ಗವೇನಿದೆ?

ಅಮ್ಮಾ ನಾನು ದೇವರಾಣೆ | ಬೆಣ್ಣೆ ಕದ್ದಿಲ್ಲಮ್ಮ||

ಮುಖದ ತುಂಬಾ ಬೆಣ್ಣೆ ಮೆತ್ತಿಕೊಂಡ ಪುಟಾಣಿ ಕೃಷ್ಣ, ಅಮ್ಮಾ ನಾನು ಬೆಣ್ಣೆ ಕದ್ದಿಲ್ಲ. ಬೆಣ್ಣೆ ತಿಂದಿಲ್ಲ ಎಂದು ಸುಳ್ಳು ಹೇಳುತ್ತಾನೆ. ಮಯ್ಯಾ ಮೋರಿ (ನನ್ನ ನೆಚ್ಚಿನ ಅಮ್ಮ) ಮೈ ನಹೀಂ ಮಾಖನ್ ಖಾಯೊ (ನಾನು ಬೆಣ್ಣೆ ತಿಂದಿಲ್ಲಮ್ಮ), ಭೋರ್ ಭಯೊ ಗೈಯನ್ ಕೆ ಪಾಚೆ (ಬೆಳಗ್ಗೆಯಿಂದ ದನ ಮೇಯಿಸುತ್ತಿದ್ದೇನೆ), ಮಧುಬನ್ ಮೋಹಿ ಪಠಾಯೊ (ನೀನೇ ನನ್ನನ್ನು ಮಧುವನಕ್ಕೆ (ಕಾಡಿಗೆ) ಕಳಿಸಿದ್ದಲ್ಲವೇ?) ಎಂದು ಓಲೈಸುತ್ತಾನೆ.

ನನ್ನ ಪ್ರೀತಿಯ ಅಮ್ಮಾ, ಇಡೀ ದಿನ ಕೊಳಲು ಹಿಡಿದುಕೊಂಡು ಅಲೆಯುತ್ತಿರುತ್ತೇನೆ. ಸಂಜೆ ಮನೆಗೆ ಬರುತ್ತೇನೆ. ಹಾಗಿರುವಾಗ ನಾನು ಬೆಣ್ಣೆ ಕದ್ದು ತಿನ್ನುವುದಾದರೂ ಯಾವಾಗ? ನನ್ನ ಮುದ್ದು ಅಮ್ಮ, ನೋಡು ನಾನೆಷ್ಟು ಪುಟ್ಟ ಹುಡುಗ? ನನ್ನ ಈ ಪುಟ್ಟ ಕೈಗಳಲ್ಲಿ ಅಷ್ಟು ಎತ್ತರದಲ್ಲಿರುವ ಗಡಿಗೆಯಿಂದ ಬೆಣ್ಣೆ ತೆಗೆದು ತಿನ್ನುವುದಾದರೂ ಹೇಗೆ? ನೀನೇ ಹೇಳಮ್ಮ... ಎಂದು ಕೃಷ್ಣ ಮುದ್ದುಮಾತುಗಳಲ್ಲಿ ವರದಿ ಒಪ್ಪಿಸುತ್ತಾನೆ.

‘ಹೌದಾ, ಹಾಗಿದ್ದರೆ, ನಿನ್ನ ಮುಖದಲ್ಲಿ ಬೆಣ್ಣೆ ಮೆತ್ತಿಕೊಂಡಿರುವುದು ಹೇಗೆ’ ಎಂದು ಯಶೋದಾ ಕೆನ್ನೆ ಹಿಂಡುತ್ತಾಳೆ. ಅಯ್ಯೋ, ಇಷ್ಟೇನಾ ವಿಷಯ? ಎಲ್ಲ ಸೇರಿ ನನ್ನ ಬಾಯಿಗೆ | ಬೆಣ್ಣೆಯ ಮೆತ್ತಿದರಮ್ಮ || ಗೋಪಾಲ ಬಾಲಕರೆಲ್ಲ ನನ್ನ ಮೇಲೆ ಮುಗಿಬಿದ್ದು ಬಾಯಿಗೆ ಬೆಣ್ಣೆ ತುರುಕಿದರಮ್ಮ ಎಂದು ನೆಪ ಹುಡುಕುತ್ತಾನೆ.

ಕೃಷ್ಣ ಇಷ್ಟು ಅನುನಯಿಸಿದರೂ, ಅಮ್ಮ ಯಶೋದೆಯ ಮುನಿಸನ್ನು ಅದು ಕರಗಿಸಲಿಲ್ಲ. ಕೃಷ್ಣನೂ ಪ್ರಯತ್ನ ಬಿಡಲಿಲ್ಲ. ನೀನು ನನ್ನ ಮುದ್ದು ಅಮ್ಮನಲ್ಲವೇ? ನನ್ನ ಪ್ರೀತಿಯ ಅಮ್ಮ ಅಲ್ಲವೇ? ನೀನೆಷ್ಟು ಒಳ್ಳೆಯವಳು? ಎಷ್ಟು ಚೆನ್ನಾಗಿದ್ದಿ? ಎಷ್ಟು ಪಾಪದವಳು ಅಲ್ಲವೇ? ನನ್ನ ಮುದ್ದಿನ ಅಮ್ಮ, ನನ್ನನ್ನು ನಂಬು ಅಮ್ಮ, ನೀನೇ ನನ್ನ ಹೆತ್ತಮ್ಮ, ನನ್ನ ಸರ್ವಸ್ವ. ನಿನ್ನ ಮನಸ್ಸು ಅದೆಷ್ಟು ಮೃದು ಎಂದು ಗೊತ್ತಮ್ಮ. ನಾನು ಬೆಣ್ಣೆ ಕದ್ದಿಲ್ಲಮ್ಮ...

ಕೃಷ್ಣ ಎಷ್ಟೇ ಗೋಗರೆದರೂ, ಯಶೋದಾ ಬಿಗುಮಾನ ಬಿಡುವುದಿಲ್ಲ. ಒಳಗೊಳಗೇ ಆಕೆಗೆ ನಗು ಬರುತ್ತಿದ್ದರೂ, ಜಗದೋದ್ಧಾರನ ಬಾಯಲ್ಲಿ ಇನ್ನೂ ಏನೇನು ಲಲ್ಲೆಯ ಮಾತುಗಳು ಬರುವುದೋ ಕೇಳುವ ಕುತೂಹಲ ಆಕೆಗೆ. ಅತ್ತ ಕೃಷ್ಣನಿಗೆ ಎಷ್ಟು ಓಲೈಸಿದರೂ, ಅಮ್ಮ ಜಗ್ಗುತ್ತಿಲ್ಲವಲ್ಲ ಎಂಬ ಅಸಹನೆ. ‘ಅರೇ, ಅಮ್ಮ, ಬೆಳ್ಳಂಬೆಳಗ್ಗೆ ದನ ಮೇಯಿಸಲು ನನ್ನ ಕಳಿಸಿದ್ದೇ ನೀನು, ಕೋಲು, ಕಂಬಳಿ ಕೊಟ್ಟಿದ್ದೇ ನೀನು. ನಾಳೆಯಿಂದ ನಾನು ದನ ಮೇಯಿಸುವುದಿಲ್ಲ. ಈ ಕೋಲು, ಕಂಬಳಿ ನೀನೇ ಇಟ್ಟುಕೋ. ನನ್ನನ್ನು ಎಷ್ಟು ಕುಣಿಸುತ್ತಿ...’ ಎಂದು ಮಾತಿನ ವರಸೆ ಬದಲಾಯಿಸುತ್ತಾನೆ. ಊಹೂಂ. ಆದರೂ, ಯಶೋದಾ ಇನ್ನೂ ಕರಗುತ್ತಿಲ್ಲ.

ಈಗ ಕೃಷ್ಣನಿಗೂ ಕೋಪ ಬರುತ್ತದೆ. ‘ಅಮ್ಮ, ನಿನ್ನ ಹೃದಯದಲ್ಲಿ ನನ್ನ ಬಗ್ಗೆ ತಾರತಮ್ಯವಿದೆ. ನಾನು ನಿನಗೆ ದೂರದವನು ಆಗಿಬಿಟ್ಟೆನೇ...’ ಎಂಬ ಭೇದಭಾವದ ದೂರು ಕೃಷ್ಣನ ಬಾಯಿಂದ ಬರುತ್ತಿದ್ದಂತೆಯೇ ಯಶೋದಾ ಕಂಪಿಸುತ್ತಾಳೆ. ಅಯ್ಯೋ, ಕಂದ ಎಂಥ ಮಾತನಾಡಿದೆ ಎಂದು ಕಸಿವಿಸಿಗೊಳ್ಳುತ್ತಾಳೆ. ಮುದ್ದು ಕೃಷ್ಣನನ್ನು ಬರಸೆಳೆದು ಅಪ್ಪಿಕೊಳ್ಳುತ್ತಾಳೆ. ಕಣ್ಣಲ್ಲಿ ನೀರು ತುಂಬಿಕೊಂಡು ನಂದಕಿಶೋರನನ್ನು ಮುದ್ದಾಡುತ್ತಾಳೆ. ಸೂರದಾಸ ಪ್ರಿಯ ಶ್ಯಾಮನ | ಮುತ್ತಿಟ್ಟು ನಕ್ಕಳು ಗೋಪಿ|| ‘ನನ್ನ ಪುಟ್ಟ ಕನ್ಹಯ್ಯ, ನೀನು ಬೆಣ್ಣೆ ತಿಂದಿಲ್ಲ ಕಣೋ’ ಎಂದು ನುಡಿಯುತ್ತಾಳೆ. ಆಗ ಕೃಷ್ಣ ನಗುತ್ತ ಹೇಳುತ್ತಾನೆ. ‘ನನ್ನ ಮುದ್ದು ಅಮ್ಮ, ನಾನೇ ಬೆಣ್ಣೆ ಕದ್ದು ತಿಂದಿದ್ದು’ ಅಮ್ಮ-ಮಗ ಇಬ್ಬರೂ ಪರಸ್ಪರ ಅಪು್ಪಗೆಯಲ್ಲಿ ಜಗತ್ತನ್ನೇ ಮರೆಯುತ್ತಾರೆ.

ಸಂತಕವಿ ಸೂರದಾಸರು ನವನೀತಚೋರ ಕೃಷ್ಣ- ಯಶೋದೆಯರ ನಡುವಿನ ವಿನೋದದ ಈ ಪ್ರಸಂಗವನ್ನು ‘ಮಯ್ಯಾ ಮೋರಿ, ಮೈ ನಹೀಂ ಮಾಖನ್ ಖಾಯೊ’ ಎಂಬ ಹಾಡಿನ ಮೂಲಕ ರಸಮಯವಾಗಿ ವರ್ಣಿಸುತ್ತಾರೆ. ಇದೇ ಪ್ರಸಂಗವನ್ನು ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿಯವರು ‘ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಹಾಡಿನ ರೂಪದಲ್ಲಿ ಕನ್ನಡದಲ್ಲಿ ಸಾಕ್ಷಾತ್ಕರಿಸಿದ್ದಾರೆ.

ಸಂತರ ಜೀವನ ಯಾವಾಗಲೂ ದಂತಕಥೆಯೇ. ಕೃತಿಗಳಿಂದ ಅವರ ಜೀವನವನ್ನು ಅರಿಯಬೇಕೇ ವಿನಾ ಐತಿಹಾಸಿಕ ಪ್ರಮಾಣಗಳು ದೊರೆಯುವುದು ಅಪರೂಪ. 16ನೇ ಶತಮಾನದ ಸಂತಕವಿ ಸೂರದಾಸರ ಜೀವನವನ್ನೂ ಅವರ ಕುರಿತು ಪ್ರಚಲಿತದಲ್ಲಿರುವ ಅನೇಕ ದಂತಕಥೆಗಳ ಮೂಲಕವೇ ಅರ್ಥೈಸಬೇಕು.

ಹುಟ್ಟುಕುರುಡ ಬಾಲಕ ಸೂರದಾಸ ಒಮ್ಮೆ ಬಾವಿಗೆ ಬಿದ್ದುಬಿಡುತ್ತಾನೆ. ಯಾರೊಬ್ಬರೂ ಆತನ ರಕ್ಷಣೆಗೆ ಬರುವುದಿಲ್ಲ. ಕಷ್ಟಕಾಲದಲ್ಲಿ ಜನರು ಕೈಬಿಟ್ಟಾಗ ಇಷ್ಟ ದೈವ ಕೃಷ್ಣನನ್ನು ಬಿಟ್ಟರೆ ಬೇರಿನ್ನಾರು ಗತಿ? ‘ಕಂಡು ಕಂಡು ನೀ ಎನ್ನ, ಕೈ ಬಿಡುವರೇ ಕೃಷ್ಣ | ಪುಂಡರೀಕಾಕ್ಷ ಪುರುಷೋತ್ತಮ ದೇವ||’ ಎಂದು ಬಾಲಕ ಕೃಷ್ಣನಲ್ಲಿ ಮೊರೆಯಿಡುತ್ತಾನೆ. ಏಳು ದಿನಗಳ ಕಾಲ ಪಾಳು ಬಾವಿಯೊಳಗೆ ಸಿಲುಕಿದ್ದ ಸೂರನನ್ನು ಕೊನೆಗೂ ಶ್ರೀಕೃಷ್ಣನೇ ಕೈಹಿಡಿದು ಮೇಲೆತ್ತುತ್ತಾನೆ. ಕೈಗಳ ಸ್ಪರ್ಶ ಮಾತ್ರದಿಂದಲೇ ಸೂರದಾಸನಿಗೆ ತನ್ನನ್ನು ಕಾಪಾಡಿದ್ದು ಸಾಮಾನ್ಯ ಮನುಷ್ಯನಲ್ಲ, ಸ್ವತಃ ಭಗವಂತ ಎಂಬುದು ಅರಿವಿಗೆ ಬರುತ್ತದೆ. ಕೃಷ್ಣನು ಬಾಲಕನಿಗೆ ದೃಷ್ಟಿ ಕರುಣಿಸಿ, ನಿನಗೇನು ವರ ಬೇಕೋ ಕೇಳು ಎಂದು ಅನುಗ್ರಹಿಸುತ್ತಾನೆ.

ಆಗ ಸೂರದಾಸ, ‘ನಿನ್ನ ದರ್ಶನವನ್ನು ಪಡೆದ ಈ ಕಣ್ಣುಗಳು ಜಗತ್ತಿನಲ್ಲಿ ಬೇರೆ ಏನನ್ನೂ ನೋಡುವುದು ನನಗೆ ಇಷ್ಟವಿಲ್ಲ. ದಯವಿಟ್ಟು ಮರಳಿ ಅಂಧತ್ವವನ್ನೇ ಕರುಣಿಸು’ ಎಂದು ವರ ಬೇಡುತ್ತಾನೆ. ಇನ್ನೊಂದು ವಿವರಣೆಯ ಪ್ರಕಾರ, ಕೃಷ್ಣ ಬಾವಿಯಿಂದ ಸೂರದಾಸನನ್ನು ಮೇಲೆತ್ತಿದ ಸಂದರ್ಭದಲ್ಲಿ ರಾಧೆಯೂ ಕೃಷ್ಣನ ಜತೆಯಲ್ಲಿರುತ್ತಾಳೆ. ಇಬ್ಬರಿಗೂ ಸಾಷ್ಟಾಂಗ ನಮಸ್ಕಾರ ಮಾಡಿದ ಸೂರದಾಸ, ರಾಧೆಯ ಕಾಲಿನ ಗೆಜ್ಜೆಗಳನ್ನು ಹಿಡಿದುಕೊಳ್ಳುತ್ತಾನೆ. ರಾಧೆ, ‘ನನ್ನ ಗೆಜ್ಜೆಯನ್ನು ಬಿಡೋ ಮಹರಾಯ’ ಎಂದಾಗ ‘ನೀನೇ ನಿಜವಾದ ರಾಧೆ, ಆತನೇ ಕೃಷ್ಣ ಎಂದು ಹೇಗೆ ತಿಳಿಯಲಿ, ನಾನು ಹುಟ್ಟುಗುರುಡ’ ಎನ್ನುತ್ತಾನೆ. ಆಗ ಕೃಷ್ಣ ಸೂರದಾಸನಿಗೆ ದೃಷ್ಟಿ ಕರುಣಿಸುತ್ತಾನೆ ಹಾಗೂ ನಿನಗೇನು ವರಬೇಕೋ ಕೇಳು ಎನ್ನುತ್ತಾನೆ. ‘ಅಚಲವಾದ ಕೃಷ್ಣಭಕ್ತಿಯನ್ನು ಕೊಡು’ ಎಂದು ಬೇಡುವ ಸೂರದಾಸ, ‘ನಿನ್ನನ್ನು ಕಂಡ ಕಣ್ಣುಗಳಿಂದ ಬೇರೆ ಏನನ್ನೂ ನೋಡುವುದು ನನಗಿಷ್ಟವಿಲ್ಲ. ನನಗೆ ಮತ್ತೆ ಅಂಧತ್ವವನ್ನೇ ಕೊಡು’ ಎಂದು ಬೇಡುತ್ತಾನೆ.

ಸೂರದಾಸ ಜನಿಸಿದ್ದು ಹರಿಯಾಣದ ಸಿಹಿ ಗ್ರಾಮದಲ್ಲಿ ಎಂಬ ಉಲ್ಲೇಖ ಕೆಲವೆಡೆ ಇದೆ. ಆಗ್ರಾ ಸಮೀಪದ ರುಂಕಟ ಎಂಬಲ್ಲಿ ಎಂದೂ ಹೇಳಲಾಗಿದೆ. ಜೀವನದ ಹೆಚ್ಚಿನ ಭಾಗವನ್ನು ಸೂರದಾಸರು ಕಳೆದಿದ್ದು ಮಥುರಾ-ವೃಂದಾವನದಲ್ಲಿ. ಕಡುಬಡತನದ ಬ್ರಾಹ್ಮಣ ಕುಟುಂಬದಲ್ಲಿ ಕುರುಡನಾಗಿ ಜನ್ಮಿಸಿದ ಸೂರದಾಸರನ್ನು ಬಾಲ್ಯದಲ್ಲೇ ಮನೆಯಿಂದ ಹೊರಹಾಕಲಾಯಿತು ಎಂಬರ್ಥದ ಕಥೆಗಳಿವೆ. ಸೂರಜ್ ಚಂದ್ ಹೆಸರಿನ ಬಾಲಕ, ತನ್ನ ಕುಟುಂಬಸ್ಥರನ್ನೆಲ್ಲ ಯುದ್ಧದಲ್ಲಿ ಕಳೆದುಕೊಂಡ ಬಳಿಕ ಅನಾಥನಾಗಿ ಕೃಷ್ಣಭಕ್ತನಾದ ಎಂಬ ಕಥೆಯೂ ಇದೆ.

ಬಾಲಕ ಸೂರದಾಸನಿಗೆ ಕಣ್ಣು ಕಾಣಿಸದಿದ್ದರೂ, ವಿಶೇಷ ಶಕ್ತಿ ಇತ್ತು. ಭವಿಷ್ಯದಲ್ಲಿ ನಡೆಯುವುದನ್ನು ಆತ ಮೊದಲೇ ಹೇಳಬಲ್ಲವನಾಗಿದ್ದ. ಯಾವುದಾದರೂ ವಸ್ತು ಕಳೆದರೆ, ಅದು ಎಲ್ಲಿದೆ ಎಂದು ನಿಖರವಾಗಿ ಹೇಳುತ್ತಿದ್ದ. ತಂದೆ ರಾಮದಾಸನಿಗೆ ದಾನವಾಗಿ ದೊರೆತಿದ್ದ ಎರಡು ಚಿನ್ನದ ನಾಣ್ಯಗಳು ಒಮ್ಮೆ ಕಳೆದುಹೋಗುತ್ತವೆ. ಆದರೆ, ಸೂರದಾಸ, ಆ ನಾಣ್ಯಗಳನ್ನು ಇಲಿಗಳು ಕಚ್ಚಿ ಒಯ್ದಿವೆ ಎಂದು ನಿಖರವಾಗಿ ನಾಣ್ಯ ಬಿದ್ದಿರುವ ಜಾಗ ತೋರಿಸುತ್ತಾನೆ. ಮತ್ತೊಮ್ಮೆ ಮೇಯಲು ಬಿಟ್ಟ ಗೋವುಗಳು ತಪ್ಪಿಸಿಕೊಂಡಿರುತ್ತವೆ. ಸೂರದಾಸ ನಿಖರವಾಗಿ ಹಸುಗಳು ಇರುವ ಜಾಗವನ್ನು ಹೇಳುತ್ತಾನೆ. ಇದರಿಂದ ಸಂತುಷ್ಟನಾಗುವ ಗೋಮಾಲೀಕ, ಸೂರದಾಸರ ಕುಟುಂಬಕ್ಕೆ ಹೊಸ ಗುಡಿಸಲೊಂದನ್ನು ಕಟ್ಟಿಸಿಕೊಡುತ್ತಾನೆ.

ಸೂರದಾಸರು ಹದಿನೆಂಟನೇ ವಯಸ್ಸಿನಲ್ಲಿ ವಲ್ಲಭಾಚಾರ್ಯರ ಸಂಪರ್ಕಕ್ಕೆ ಬರುತ್ತಾರೆ. ಸೂರದಾಸರ ಕೃಷ್ಣಭಕ್ತಿಗೆ, ಕವಿತ್ವ ಶಕ್ತಿಗೆ ವಲ್ಲಭಾಚಾರ್ಯರು ಸ್ಪಷ್ಟ ದಿಕ್ಕನ್ನು ತೋರಿಸುತ್ತಾರೆ. ಅವರ ಪುಷ್ಟಿಮಾರ್ಗದಲ್ಲಿ ಸೂರದಾಸರ ಅಧ್ಯಾತ್ಮ ಪಯಣ ಪ್ರಜ್ವಲಿಸುತ್ತದೆ.

ಒಮ್ಮೆ ಅಕ್ಬರನ ಆಸ್ಥಾನದಲ್ಲಿ ಸಂಗೀತ ದಿಗ್ಗಜ ತಾನ್​ಸೇನ್ ಅದ್ಭುತ ಗೀತೆಯೊಂದನ್ನು ಹಾಡುತ್ತಾನೆ. ಅದನ್ನು ಕೇಳಿ ಪರವಶನಾಗುವ ಅಕ್ಬರ್, ಎಷ್ಟು ಸೊಗಸಾಗಿದೆ ಎಂದು ಹೊಗಳುತ್ತಾನೆ. ಆಗ ತಾನ್​ಸೇನ್, ‘ಇದು ನಾನು ಬರೆದಿರುವುದಲ್ಲ. ಸೂರದಾಸರ ರಚನೆ’ ಎಂದು ಮಾಹಿತಿ ನೀಡುತ್ತಾನೆ. ‘ಹಾಗಾದರೆ, ಅವರನ್ನೇ ಕರೆಸು, ನನ್ನ ಎದುರು ಆತ ಹಾಡಲಿ’ ಎಂದು ಅಕ್ಬರ್ ಆಗ್ರಹಿಸುತ್ತಾನೆ. ‘ಸೂರದಾಸ ಕೃಷ್ಣನ ಭಕ್ತ. ಆತ ವೈರಾಗ್ಯಮೂರ್ತಿ, ಯಾವ ಆಸೆಗಳು ಇಲ್ಲದವ. ಕೃಷ್ಣನನ್ನು ಬಿಟ್ಟು ಬೇರೆಯವರ ಎದುರು ಆತ ಹಾಡುವುದಿಲ್ಲ’ ಎಂದು ತಾನ್​ಸೇನ್ ನುಡಿಯುತ್ತಾನೆ. ‘ಹಾಗಾದರೆ, ನಾವೇ ಅವನಿದ್ದಲ್ಲಿಗೆ ಹೋಗೋಣ’ ಎಂದು ತಾನ್​ಸೇನ್ ಜತೆ ಅಕ್ಬರ್ ಮಥುರಾಗೆ ಆಗಮಿಸುತ್ತಾನೆ.

ಅಲ್ಲಿ ಶ್ರೀನಾಥಜಿ ದೇಗುಲದಲ್ಲಿ ಕೃಷ್ಣನ ಎದುರು ತಾನ್​ಸೇನ್, ಸೂರದಾಸರ ಹಾಡೊಂದನ್ನು ಉದ್ದೇಶಪೂರ್ವಕವಾಗಿ ತಪು್ಪತಪ್ಪಾಗಿ ಹಾಡುತ್ತಾನೆ. ಆಗ ಅಲ್ಲಿದ್ದ ಸೂರದಾಸರು, ತಪು್ಪ ಅರ್ಥದಲ್ಲಿ ಹಾಡಬಾರದು ಎಂದು ತಿದ್ದಿ, ತಾವೇ ಹಾಡುತ್ತಾರೆ. ಅವರ ಕವಿತ್ವ, ಕಂಠಸಿರಿ, ಕೃಷ್ಣ ಭಕ್ತಿಯನ್ನು ಕಂಡು ಅಕ್ಬರ್ ಪ್ರಭಾವಿತನಾಗುತ್ತಾನೆ. ‘ಶ್ರೀ ಹರಿಯೇ ನನ್ನ ಹೃದಯದಲ್ಲಿ ವಿರಾಜಮಾನನಾಗಿದ್ದಾನೆ. ಅಲ್ಲಿ ಬೇರೆಯವರಿಗೆ ಜಾಗ ಇಲ್ಲವಾಗಿದೆ. ನನ್ನ ಕಣ್ಣುಗಳು ಭಗವಂತನ ದಿವ್ಯರೂಪವನ್ನು ಕಾಣುವ ಹಸಿವಿನಿಂದ ದಣಿದಿವೆ’ ಎಂಬ ಸಾಲಿನ ಬಗ್ಗೆ ಅಕ್ಬರ್ ವಿವರಣೆ ಬಯಸುತ್ತಾನೆ. ಸೂರದಾಸರು ಯಾವುದೇ ವಿವರಣೆ ನೀಡುವುದಿಲ್ಲ. ಅವರ ಕಣ್ಣುಗಳು ಹೊರಜಗತ್ತಿಗೆ ಕುರುಡಾಗಿದ್ದರೂ, ದೇವರ ನಿತ್ಯದರ್ಶನ ಅವರ ಒಳಗಣ್ಣಿಗೆ ಆಗುತ್ತಿದೆ ಎಂದು ಅರ್ಥೈಸಿಕೊಂಡು ಅಕ್ಬರ್ ನಿರ್ಗಮಿಸುತ್ತಾನೆ.

ಒಂದು ಲಕ್ಷಕ್ಕೂ ಹೆಚ್ಚು ಕೃಷ್ಣ ಭಕ್ತಿಯ ಕವಿತೆಗಳ ಸುರ್​ಸಾಗರ್, 1107 ಕವಿತೆಗಳ ಸುರ್​ಸರಾವಳಿ, 118 ಕವಿತೆಗಳ ಸಾಹಿತ್ಯ ಲಹರಿ, ರಾಧಾಕೃಷ್ಣರ ಕಲ್ಯಾಣವನ್ನು ವರ್ಣಿಸುವ ಬ್ಯಾಹುಲೊ, ನಳದಮಯಂತಿ ಸಹಿತ ಸರ್ವಕಾಲಕ್ಕೂ ಚಿರಸ್ಥಾಯಿಯಾದ ಕೃಷ್ಣಭಕ್ತಿಯ ಸಾಹಿತ್ಯವನ್ನು ಲೋಕಕ್ಕೆ ನೀಡಿರುವ ಸೂರದಾಸರ ಜನನ, ಪರಿನಿರ್ವಾಣದ ಬಗ್ಗೆ ವಿಭಿನ್ನ ಊಹೆಗಳಿದ್ದರೂ ಪ್ರತೀ ವರ್ಷ ವೈಶಾಖ ಮಾಸ ಶುಕ್ಲ ಪಕ್ಷ ಪಂಚಮಿಯ ದಿನ (ಈ ವರ್ಷ ಮೇ 2) ಅವರ ಜನ್ಮದಿನ ಆಚರಿಸಲಾಗುತ್ತದೆ. ಬ್ರಜ ಭಾಷೆಯಲ್ಲಿ ಅಜರಾಮರ ಕೃಷ್ಣ ಭಕ್ತಿ ರಸಾಯನ ಉಣಬಡಿಸಿದ ಮಹಾ ಸಂತ ಸೂರದಾಸ.

ದೀಪಕ ಪೀರ ನ ಜಾನಿ | ಪಾವಕ ಪರತ ಪತಂಗ ||

ತನು ತೊ ತಿಹಿ ಜ್ವಾಲಾ ಜರಯೊ | ಚಿತ್ತ ನ ಭಯೊ ರಸಭಂಗ||

ದೀಪದ ಬೆಳಕಿನಿಂದ ಆಕರ್ಷಿತವಾಗಿ ಬೆಂಕಿಗೆ ಹಾರುವ ಪತಂಗದ ನೋವು ದೀಪಕ್ಕೇನು ಗೊತ್ತು? ಬೆಂಕಿಯ ಜ್ವಾಲೆಗೆ ಸಮರ್ಪಿಸಿಕೊಂಡು ಪತಂಗ ಭಸ್ಮವಾಗುತ್ತದೆ. ಆದರೆ, ಅದರ ಪ್ರೇಮ ಅಮರವಾಗುತ್ತದೆ. (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net