ಕರ್ನಾಟಕದ ಪ್ರತಿಭಾ ರತ್ನಗಳು | ಗುರಿಯೊಂದಿದ್ದರೆ ಭಯವೇ ಇಲ್ಲ!

Yash Aradhya
Published on

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುವ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಈ ಬಾರಿ ದೇಶದ 49 ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಮೂವರು ಕರ್ನಾಟಕದ ಪ್ರತಿಭೆಗಳು. ಇವರು ಹೇಗೆ ಸಾಧನೆ ಮಾಡಿದರು? ರಾಷ್ಟ್ರಪತಿ, ಪ್ರಧಾನಿಯನ್ನು ಭೇಟಿಯಾದ ಅವರ ಅನುಭವ ಹೇಗಿದೆ? ಮಕ್ಕಳ ಮಾತಲ್ಲೇ ಕೇಳಿ...

ನನಗಾಗ ಏಳು ವರ್ಷ. ಅಪ್ಪನ ಕಾರಿನಲ್ಲಿ ಹೋಗುತ್ತಿದ್ದಾಗ ನೂರೆಂಟು ಪ್ರಶ್ನೆ. ಗಾಡಿ ಹೇಗೆ ಓಡುತ್ತದೆ, ಲಾರಿ ಸ್ಲೋ ಏಕೆ? ನನ್ನ ಪ್ರಶ್ನೆಗೆ ಅಪ್ಪ ಪೇಷನ್ಸ್ ನಿಂದ ಉತ್ತರ ಕೊಡುತ್ತಿದ್ದರು. ಅಲ್ಲಿಂದಲೇ ವಾಹನದ ಮೇಲೆ ವ್ಯಾಮೋಹ ಶುರುವಾಗತೊಡಗಿತು. ರೇಸರ್ ಆಗಬೇಕು ಎಂಬ ಆಸೆ ಉಂಟಾಯಿತು. ನನ್ನ ಸ್ಪೈನಲ್ ಕಾರ್ಡ್ ಎಳೆಯದಾಗಿರುವ ಕಾರಣ, 9 ವರ್ಷ ಆಗಲಿ ಎಂದು ಕ್ರೀಡಾಪಟುಗಳು ತಿಳಿಸಿದರು. ಎರಡು ವರ್ಷ ಅಪ್ಪ ಫನ್ ಕಾರ್ಟ್ ತರಬೇತಿ ಕೊಡಿಸಿದ್ದರು. ನಂತರ ರೇಸಿಂಗ್ ಕೋರ್ಸ್ ಗೆ ಹೋದೆ. ಫಾಮುಲಾ-1 ರೇಸರ್ ಆಗಲೇಬೇಕೆಂದು ಅದಾಗಲೇ ಪಣತೊಟ್ಟ್ಟುಬಿಟ್ಟಿದ್ದೆ ನಾನು. ‘ಅಷ್ಟು ಚಿಕ್ಕ ವಯಸ್ಸಿನಲ್ಲಿ ಗಾಡಿ ಓಡಿಸುವಾಗ ಭಯವಾಗಿಲ್ಲವಾ’ ಎಂದು ತುಂಬಾ ಮಂದಿ ಕೇಳುತ್ತಾರೆ. ಗುರಿ ನನ್ನ ಕಣ್ಣೆದುರು ಇತ್ತು, ಇನ್ನೆಲ್ಲಿಯ ಭಯ? ಇದಾಗಲೇ 13 ಚಾಂಪಿಯನ್​ಷಿಪ್ ಗೆದ್ದಿದ್ದೇನೆ. 65 ಬಾರಿ ಪೋಡಿಯಂ ಫಿನಿಶ್ ಮಾಡಿದ್ದು, 12 ಪ್ರಶಸ್ತಿಗಳನ್ನು ಪಡೆದಿದ್ದೇನೆ. ಸ್ಪೇನ್, ಬೆಲ್ಜಿಯಂ ಹಾಗೂ ಫ್ರಾನ್ಸ್ನಲ್ಲಿ ನಡೆದ ಸಿಐಕೆಎಫ್​ಐಎ ಅಕಾಡೆಮಿ ಟ್ರೋಫಿ ಸೇರಿದಂತೆ ಅಂತಾರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ಪಾಲ್ಗೊಂಡಿದ್ದೇನೆ. 2017ರಲ್ಲಿ ಪೋರ್ಚುಗಲ್​ನಲ್ಲಿ ನಡೆದ ರೋಟಾಕ್ಸ್ ವಿಶ್ವ ಫೈನಲ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಎಫ್​ಎಂಎಸ್ಸಿಐನಿಂದ ನಾಮನಿರ್ದೇಶನಗೊಂಡಿದ್ದೆ. 2019ರಲ್ಲಿ ರೋಮ್ಲ್ಲಿ ನಡೆದ ಎಫ್​ಐಎ ಮೋಟಾರ್ ಸ್ಪೋರ್ಟ್ಸ್​ಗೇಮ್ಸ್ನಲ್ಲೂ ಸ್ಪರ್ಧಿಸಿದ್ದೆ. ನನ್ನ ವಯಸ್ಸಿನ ಮಕ್ಕಳಂತೆ ಸಿನಿಮಾ ನೋಡುವುದು, ಕುರುಂಕುರುಂ ತಿನ್ನುವುದು ಇತ್ಯಾದಿಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ನನ್ನ ಗುರಿ ಸಾಧನೆಗೆ, ನನ್ನ ಬಾಡಿ ಹಾಗೂ ಮನಸ್ಸನ್ನು ಫಿಟ್ ಇಟ್ಟುಕೊಳ್ಳಬೇಕು. ಸಿನಿಮಾ, ಫನ್ ಟೈಂಗಳಲ್ಲಿ ಓದಿನ ಕಡೆ ಗಮನ ಕೊಡುತ್ತೇನೆ. ಇದರಿಂದ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಶಾಲೆ ಮತ್ತು ರೇಸ್ ಎರಡನ್ನೂ ನಿಭಾಯಿಸಲು ಯಾವುದೇ ತೊಂದರೆ ಆಗುತ್ತಿಲ್ಲ.

ಪ್ರಧಾನಿಯ ಮಾತು ನಿಜ ಮಾಡುತ್ತೇನೆ: ‘ಪ್ರಧಾನಿ ಮೋದಿಯವರು ನೀವು ಇನ್ನೂ ಹೆಚ್ಚಿನ ಸಾಧನೆ ಮಾಡುವುದನ್ನು ನಾನು ನೋಡಬೇಕು. ಆ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂದು ಮಕ್ಕಳ ಬಳಿ ಹೇಳಿದ್ದಾರೆ. ಪ್ರಧಾನಿಯೊಬ್ಬರು ಇಷ್ಟು ಪ್ರೀತಿಯಿಂದ ಬಳಿಗೆ ಕರೆದು ಈ ರೀತಿ ಹೇಳುವಾಗ ನನಗಾದ ಅನುಭವವನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಅವರ ಮಾತನ್ನು ನಾನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಇನ್ನು ಐದೇ ವರ್ಷ, ಅವರ ಮಾತನ್ನು ಸಾಕಾರ ಮಾಡಿ ತೋರಿಸುತ್ತೇನೆ. ನಂ.1 ಆಗಿಯೇ ಆಗುತ್ತೇನೆ’ ಎನ್ನುತ್ತಾನೆ ಯಶ್ ಆರಾಧ್ಯ.

ಯಶ್ ಆರಾಧ್ಯ (ಕ್ರೀಡಾ ಕ್ಷೇತ್ರದಲ್ಲಿ ಬಹುಮಾನ) 11ನೇ ತರಗತಿ, ಬಿಷಪ್ ಕಾಟನ್ ಸ್ಕೂಲ್, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net