

ಬಾಲ್ಯ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಿಎ ವೃತ್ತಿ ಕುರಿತು ವಿಜಯವಾಣಿಯೊಂದಿಗೆ ಮನದಾಳದ ಮಾತು
ಅದು 1990ರ ದಶಕ. ಆಗ ಬಿಡುಗಡೆಯಾದ ‘ಬೆಳದಿಂಗಳ ಬಾಲೆ’ ಸಿನಿಮಾ ಇಂದಿಗೂ ಪ್ರೇಕ್ಷಕರ ಸ್ಮೃತಿಪಟಲದಲ್ಲಿದೆ. ಪ್ರಸಿದ್ಧ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ತೆಲುಗು ಭಾಷೆಯ ‘ವೆನೆನ್ನೋ ಅಡಪಿಲ್ಲಾ’ ಎಂಬ ಕಥೆಯನ್ನೇ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸಿನಿಮಾ ಮಾಡಿದ್ದರು. ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದ ಯಂಡಮೂರಿ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮುಂತಾದವರ ಜತೆ ಸಿನಿಮಾ ಮಾಡಿ ಗೆದ್ದಿದ್ದರು. ಲೆಕ್ಕ ಪರಿಶೋಧಕರಾಗಿರುವ (ಸಿಎ) ಯಂಡಮೂರಿ ‘ದುಡ್ಡು ಮಾಡುವುದು ಹೇಗೆ’, ‘ಮೈಂಡ್ ಪವರ್ ನಂ.1’ನಂತಹ ಆರ್ಥಿಕ ಕ್ಷೇತ್ರದ ಪುಸ್ತಕಗಳ ಮೂಲಕವೂ ಜನಮನ್ನಣೆ ಗಳಿಸಿರುವ ಖ್ಯಾತ ಲೇಖಕರು.
ಲೇಖಕ, ನಟ, ನಿರ್ದೇಶಕ, ನಾಟಕಕಾರ, ಕಾದಂಬರಿಕಾರ, ವ್ಯಕ್ತಿತ್ವ ವಿಕಸನ ತರಬೇತುದಾರ ಹೀಗೆ ಬಹುಮುಖಿ ವ್ಯಕ್ತಿತ್ವದ ಯಂಡಮೂರಿ ವೀರೇಂದ್ರನಾಥ್ ಅವರು 77ನೇ ವಯಸ್ಸಿನಲ್ಲೂ ಯುವಕರಂತೆ ಕ್ರಿಯಾಶೀಲರಾಗಿದ್ದಾರೆ.
ತಮ್ಮ ‘ಅಮೀಬಾ’ ಕೃತಿಯ ಕನ್ನಡ ಅವತರಣಿಕೆಯ ಬಿಡುಗಡೆಗೆಂದು ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ಯಂಡಮೂರಿ ‘ವಿಜಯವಾಣಿ’ ಕಚೇರಿಗೆ ಭೇಟಿ ನೀಡಿ ತಮ್ಮ ಬಾಲ್ಯ, ಶಿಕ್ಷಣ, ಸಿನಿಮಾರಂಗ, ರಂಗಭೂಮಿ ಒಳಗೊಂಡಂತೆ ಜೀವನದ ಪ್ರಮುಖ ಘಟ್ಟಗಳನ್ನು ಹಂಚಿಕೊಂಡರು.
ನಾಟಕ ರಚನೆಗಳ ಮೂಲಕ ಬರಹ ಆರಂಭಿಸಿದ ಯಂಡಮೂರಿ, ಇದುವರೆಗೂ 75ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ 50ಕ್ಕೂ ಅಧಿಕ ಪುಸ್ತಕಗಳನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ಪ್ರಕಟಿಸಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ‘ಮೈ ಲವ್ ಸ್ಟೋರಿ ವಿತ್ ಡೆವಿಲ್’ ರಚನೆಯಾಗುತ್ತಿದ್ದು ಶೀಘ್ರದಲ್ಲಿ ಕನ್ನಡಕ್ಕೂ ಅನುವಾದಗೊಂಡು ಕನ್ನಡ ಓದುಗರ ಕೈಸೇರಲಿದೆ.
ವಿಜಯವಾಣಿ ಸಂವಾದದಲ್ಲಿ ಯಂಡಮೂರಿ ಮಾತಿನ ಝುಲಕ್: ಬುದ್ಧಿವಂತಿಕೆಯೇ ಬೇರೆ, ಜ್ಞಾಪಕ ಶಕ್ತಿಯೇ ಬೇರೆ: ಶಾಲಾ ದಿನಗಳಲ್ಲಿ ಹೆಚ್ಚಿನ ಬುದ್ಧಿವಂತನಲ್ಲದ ನಾನು 7ನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದೆ. ಚೆನ್ನಾಗಿ ಓದದಿದ್ದರೆ ಊಟ ಹಾಕುವುದಿಲ್ಲ ಎಂದು ಆಗ ಮನೆಯಲ್ಲಿ ಕಟ್ಟಪ್ಪಣೆ ಮಾಡಿದ್ದರು. ಒಮ್ಮೆ 20ರವರೆಗೂ ಮಗ್ಗಿ ಕಲಿತು ಒಪ್ಪಿಸಬೇಕು ಎಂದು ಹೇಳಿದರು. ಆಗ ಒಂದೇ ದಿನದಲ್ಲಿ 40ರವರೆಗೆ ಮಗ್ಗಿ ಕಲಿತು ತಂದೆ ಬಳಿ ಹೋಗಿ ಹೇಳಿದರೆ ಅವರು 23ರ ಮಗ್ಗಿ ಕೇಳಿದರು. ಆಗ ನಾನು ಅದನ್ನು ಹಿಮ್ಮುಖವಾಗಿ ಹೇಳಿದ್ದೆ. ಅದರಿಂದ ಆಶ್ಚರ್ಯಗೊಂಡ ಅವರು, ‘ನೀನು ಬುದ್ಧಿವಂತ ಇದ್ದೀಯಲ್ಲ’ ಎಂದರು. ಅದಕ್ಕೆ ‘ನಾನು ಬುದ್ಧಿವಂತನಲ್ಲ, ನನಗೆ ಜ್ಞಾಪಕ ಶಕ್ತಿ ಇದೆ’ ಎಂದು ಉತ್ತರಿಸಿದ್ದೆ. ನನ್ನ ಪ್ರಕಾರ ಬುದ್ಧಿವಂತಿಕೆಯೇ ಬೇರೆ. ಜ್ಞಾಪಕ ಶಕ್ತಿಯೇ ಬೇರೆ.
ವೈದ್ಯ ಕೋರ್ಸ್ ಶುಲ್ಕಕ್ಕೆ ಹಣವಿಲ್ಲದ್ದರಿಂದ ಬಿ.ಕಾಂ ಆಯ್ಕೆ: ಹೀಗೆ ಮುಂದುವರಿದ ನನ್ನ ವಿದ್ಯಾಭ್ಯಾಸ ಪಿಯುಸಿವರೆಗೂ ತಲುಪಿತು. ನಂತರ ಎಂಬಿಬಿಎಸ್ ಇಲ್ಲವೆ ಇಂಜಿನಿಯರಿಂಗ್ ಸೇರಬಹುದಿತ್ತು. ಆದರೆ, ಆರ್ಥಿಕ ಸಮಸ್ಯೆ. ಬಿಎಸ್ಸಿ ಪ್ರಯೋಗಾಲಯದ ಶುಲ್ಕ ತುಂಬಲು ಸಹ ಹಣವಿರಲಿಲ್ಲ. ಅಂತಿಮವಾಗಿ ಬಿ.ಕಾಂ.ಗೆ ಸೇರಿದೆ. ನಂತರ ಎಂ.ಕಾಂ.ಮುಗಿಸಿ ಸಿಎ ಮಾಡಿದೆ. 28ನೇ ವಯಸ್ಸಿಗೇ ಸ್ಟೇಟ್ ಫೈನಾನ್ಸ್ ಕಾರ್ಪೆರೇಷನ್ನಲ್ಲಿ ಕೆಲಸಕ್ಕೆ ಸೇರಿದೆ. ಕೆಲ ಸಮಯದ ನಂತರ ಕೆಲಸದ ಒತ್ತಡದಿಂದ ಬಿಡುಗಡೆ ಪಡೆಯಲು ಬರವಣಿಗೆ ಆರಂಭಿಸಿದೆ. ಆರಂಭದಲ್ಲಿ 5 ವರ್ಷಗಳ ಕಾಲ ನಾಟಕಗಳ ರಚನೆಯಲ್ಲಿ ತೊಡಗಿದೆ. ಅದಕ್ಕೆ ಗಿರೀಶ್ ಕಾರ್ನಾಡರ ‘ಹಯವದನ’ ಹಾಗೂ ಶಿವರಾಮ ಕಾರಂತರ ‘ಚೋಮನ ದುಡಿ’ ಮುಂತಾದವು ಸ್ಪೂರ್ತಿಯಾಗಿದ್ದವು. ಹೀಗೆ ಆರಂಭವಾದ ಬರವಣಿಗೆ ನನ್ನನ್ನು ಚಲನಚಿತ್ರ ಕ್ಷೇತ್ರಕ್ಕೆ ಕೊಂಡೊಯ್ದಿತು.
ಚಲನಚಿತ್ರಗಳಾದ ಕೃತಿಗಳು: ನನ್ನ ‘ತುಳಸಿ ದಲಂ’ ಕಾದಂಬರಿಯು ’ಕಾಶ್ಮೋರಾ’ ಎಂದು ತೆಲುಗು ಚಲನಚಿತ್ರವಾಗಿ ಯಶಸ್ಸು ಕಂಡಿತು. ಇದು ನನಗೆ ರಾಷ್ಟ್ರವ್ಯಾಪಿ ಮನ್ನಣೆ ದೊರಕಿಸಿಕೊಟ್ಟಿತು. ಇದಲ್ಲದೆ ಅಭಿಲಾಷಾ, ಚಾಲೆಂಜ್ 1984, ಆಖ್ರಿ ಪೋರಾಟಂ, ಮುತ್ಯಮಂತ ಮುದ್ದು, ರಕ್ತಾಭಿಷೇಕಂ, ಸ್ಟೂವರ್ಟ್ಪುರಂ ಪೊಲೀಸ್ ಸ್ಟೇಷನ್, ರಾಕ್ಷಸುಡು, ಮರಣ ಮೃದಂಗಂ ಸೇರಿ ನನ್ನ 18 ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ಸು ಕಂಡಿವೆ. ‘ವೆನ್ನೆಲ್ಲೊ ಅಡಪಿಲ್ಲ’ ಎಂಬ ಕೃತಿಯು ಕನ್ನಡದಲ್ಲಿ ‘ಬೆಳದಿಂಗಳ ಬಾಲೆೆ’ ಚಿತ್ರವಾಯಿತು. ಇದನ್ನು ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ್ದರು. ಇದರೊಂದಿಗೆ ನನ್ನ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡವು. ಅವುಗಳಲ್ಲಿ 50 ಕೃತಿಗಳನ್ನು ಸಾಹಿತ್ಯ ಪ್ರಕಾಶನವೇ ಪ್ರಕಟಿಸಿದೆ.
5ನೇ ಪುಸ್ತಕ ಮುದ್ರಣಕ್ಕೆ ಮುಂದೆ ಬಂದ ಬೈಂಡರ್: ನನ್ನ ಮೊದಲ ನಾಲ್ಕು ಪುಸ್ತಕಗಳು ಸಿದ್ಧಗೊಂಡಿದ್ದರೂ, ಪ್ರಕಟಗೊಂಡಿರಲಿಲ್ಲ. 5ನೇ ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರೊಬ್ಬರ ಬಳಿ ಹೋದಾಗ ನಿರಾಕರಿಸಿದರು. ಆಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬೈಂಡರ್ ಒಬ್ಬರು, ‘ನಾನು ಪುಸ್ತಕ ಪ್ರಕಟಿಸುತ್ತೇನೆ’ ಎಂದು ಮುಂದೆ ಬಂದರು. ಅದಕ್ಕೆ ನನ್ನ ಮೊದಲ ನಾಲ್ಕು ಪುಸ್ತಕಗಳನ್ನೂ ಪ್ರಕಟಿಸುವುದಾದರೆ ಈ ಪುಸ್ತಕ ಕೊಡುವೆ ಎಂಬ ನಿಬಂಧನೆ ಹಾಕಿದೆ. ಅದಕ್ಕೆ ಒಪ್ಪಿದ ಆತ ತನ್ನ ಪತ್ನಿಯ ಮಾಂಗಲ್ಯ ಮಾರಿ ಹಣ ಹೊಂದಿಸಿ ಪುಸ್ತಕ ಪ್ರಕಟಿಸಿದರು. ಒಂದೇ ತಿಂಗಳಲ್ಲಿ ಕೃತಿಗಳು ದಾಖಲೆಯ ಮಾರಾಟ ಕಂಡವು. ಅದರಲ್ಲೂ ‘ಬೆಳದಿಂಗಳ ಬಾಲೆ’ (ವೆನ್ನೆಲ್ಲೊ ಅಡಿಪಿಲ್ಲ) ಬೆಳಗ್ಗೆ ಮುದ್ರಣಕಂಡು ಸಂಜೆಗೆ ಪೂರ್ತಿ ಮಾರಾಟವಾಗಿತ್ತು. ಇದರೊಂದಿಗೆ ನನಗೂ ಹಣ ಸೇರಲು ಆರಂಭವಾಯಿತು. ನನ್ನ ಪುಸ್ತಕಗಳನ್ನು ಪ್ರಕಟಿಸಿದ ಬೈಂಡರ್ ಮನೆ ಮೇಲೆ 7 ವರ್ಷಗಳ ಬಳಿಕ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು. ನನ್ನ ಪುಸ್ತಕಗಳಿಗೆ ಪ್ರಾಮಾಣಿಕವಾಗಿ ನೀಡಬೇಕಿದ್ದ ರಾಯಧನವನ್ನು ಆತ ನೀಡಿರಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂತು. ಆತ ನನಗೆ ಮೋಸ ಮಾಡಿದ್ದ ಎಂಬ ಸತ್ಯ ಆಗಲೇ ತಿಳಿದದ್ದು.
ನನ್ನ ಕಾದಂಬರಿ ಆಧರಿತ ಚಿತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಟ ಚಿರಂಜೀವಿ ಅಭಿನಯಿಸಿದ್ದಾರೆ. ಅವರ ಒಡನಾಟದಿಂದ ನನ್ನ ಆರ್ಥಿಕ ಸ್ಥಿತಿ ಮೇಲ್ಮಟ್ಟಕ್ಕೆ ಏರಲು ಆರಂಭವಾಯಿತು. ಹಾಗಾಗಿ ಕೆಲವೇ ವರ್ಷಗಳಲ್ಲಿ ಉದ್ಯೋಗ ತೊರೆದು, ಪೂರ್ಣವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡೆ. ನಂತರದಲ್ಲಿ ನನ್ನ ಕಾದಂಬರಿಗಳನ್ನು ಅನುವಾದ ಮಾಡಲು ಕನ್ನಡ, ಹಿಂದಿ ಸೇರಿ ಅನೇಕ ಭಾಷೆಗಳ ಅನುವಾದಕರು ಮುಂದೆ ಬಂದರು. ನನ್ನ ಕೃತಿಗಳ ಅನುವಾದದಿಂದ ಅವರು ಬಹಳಷ್ಟು ಲಾಭ ಮಾಡಿಕೊಂಡಿದ್ದಾರೆ. ಆದರೆ ಅದರಿಂದ ನನಗೆ ದೊರೆತ ರಾಯಲ್ಟಿ ಮಾತ್ರ ಅಲ್ಪವಾಗಿತ್ತು.
ಯಂಡಮೂರಿ ವೀರೇಂದ್ರನಾಥ್ ಅವರ ಬರಹ ಓದಲು ಜನರು 70-80ರ ದಶಕದಲ್ಲಿ ಕಾದು ಕುಳಿತಿರುತ್ತಿದ್ದರು. ಈ ಕುರಿತು ಸಾಹಿತಿ ಎಸ್.ಎಲ್. ಭೈರಪ್ಪ ಅವರೇ ವೇದಿಕೆಯೊಂದರಲ್ಲಿ ಹೊಗಳಿದ್ದರು. ಒಂದು ಕಾಲಘಟ್ಟದಲ್ಲಿ ಕನ್ನಡದ ಬಹಳಷ್ಟು ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಯಂಡಮೂರಿಯವರ ಕಾದಂಬರಿ, ಲೇಖನಗಳನ್ನು ಪ್ರಕಟಿಸುವ ಮೂಲಕ ಚೇತರಿಸಿಕೊಂಡಿದ್ದವು. ಪ್ರತಿಗಳ ಮಾರಾಟ ಹಾಗೂ ಜನಪ್ರಿಯತೆ ಕಂಡುಕೊಳ್ಳಲು ಕಾರಣವಾಗಿತ್ತು. ಯಂಡಮೂರಿ ಅವರ ಸಾಹಿತ್ಯವು ಬದುಕಿಗೆ ಚೈತನ್ಯ ನೀಡುವಂತಿತ್ತು ಎಂದು ಹೇಳಿದ್ದನ್ನು ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಸ್ಮರಿಸಿದರು.
ಹಿಂದಿನ ದಿನಗಳಲ್ಲಿ ಅನುವಾದಕರು ಕೇಳಿದಷ್ಟು ಹಣಕ್ಕೆ ಯಂಡಮೂರಿ ಅವರು ತಮ್ಮ ಪುಸ್ತಕಗಳನ್ನು ನೀಡುತ್ತಿದ್ದರು. ಆದರೆ, ಅನುವಾದಕರು ಯಂಡಮೂರಿಯವರಿಗೆ ಕೊಡಬೇಕು ಎಂದು ಸುಳ್ಳು ಹೇಳಿ ಪ್ರಕಾಶಕರಿಂದ ಸಾಕಷ್ಟು ಹಣ ಪಡೆಯುತ್ತಿದ್ದರು. ಹಿಂದೆ ಇಂತಹ ಘಟನೆಗಳೂ ನಡೆದಿವೆ ಎಂದು ಸುಬ್ರಹ್ಮಣ್ಯ ತಮಗಾದ ಅನುಭವಗಳನ್ನು ಹಂಚಿಕೊಂಡರು.
ನಾನು ಈವರೆಗೆ ಯಂಡಮೂರಿ ವೀರೇಂದ್ರನಾಥ್ ಅವರ ಮೂರು ಕೃತಿಗಳನ್ನು ಅನುವಾದ ಮಾಡಿರುವೆ. ಎರಡು ಕೃತಿಗಳು ಪ್ರಕಟವಾಗಿವೆ. ಇನ್ನೊಂದು ಕೃತಿ ಪ್ರಕಟವಾಗಬೇಕಿದೆ. ಯಂಡಮೂರಿ ಅವರ ಕೃತಿಗಳಲ್ಲಿ ಪ್ರಾಚೀನ ಕಾಲದ ಪದ್ಯಗಳು ಕೂಡ ಬಳಕೆಯಾಗಿರುತ್ತವೆ. ಅವುಗಳನ್ನು ಕನ್ನಡಕ್ಕೆ ತರುವುದು ತೀರಾ ಕಷ್ಟದ ಸಂಗತಿ. ಕೆಲವು ಅನುವಾದಕರು ಅವುಗಳನ್ನು ಭಾಷಾಂತರ ಮಾಡುವುದನ್ನೇ ಕೈಬಿಡುತ್ತಿದ್ದರು. ಇದರಿಂದ ಯಂಡಮೂರಿ ಹಾಗೂ ಕನ್ನಡ ಓದುಗರಿಗೆ ನಷ್ಟವಾಗುತ್ತಿತ್ತು. ನಾನು ಇಂಥ ಪದ್ಯಗಳನ್ನೂ ಅನುವಾದಿಸುವ ಕಾರ್ಯ ಮಾಡುತ್ತಿದ್ದೇನೆ. | ಗಣೇಶ ಭಟ್ಟ ಕೊಪ್ಪಲತೋಟ ಅನುವಾದಕ, ಅಷ್ಟಾವಧಾನಿ