

ನಾನಾಗ 10ನೇ ತರಗತಿಯಲ್ಲಿದ್ದೆ. ಹಾಸ್ಟೆಲ್ ಜೀವನ ಬೇರೆ. ಫಿಲ್ಟರ್ ಇಲ್ಲದೆ ಮಾತಾಡುವಂತಹ ಹಠಮಾರಿ ಹೆಣ್ಣಾಗಿದ್ದೆ. ನನ್ನ ಜ್ಯೂನಿಯರ್‌ಗಳು ಮನೆಗೆ ಹೋಗಲು ಅನುಮತಿ ಕೇಳಿದರೆ ವಾರ್ಡನ್ ಅನುಮತಿ ನೀಡುತ್ತಿರಲಿಲ್ಲ. ವಾರ್ಡನ್‌ಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಅಂತ ಹೊಂಚು ಹಾಕುತ್ತಿದ್ದೆ. ಒಮ್ಮೆ ಹಾಸ್ಟೆಲ್ ತಪಾಸಣೆಗೆ ಅಧಿಕಾರಿಗಳು ಬಂದರು. ಅವರ ಬಳಿ ನಾನು ವಾರ್ಡನ್ ವಿರುದ್ಧ ಇರೋದು ಇಲ್ದಿರೋದು ಎಲ್ಲಾ ಸೇರಿಸಿ ಆರೋಪ ಮಾಡಿಬಿಟ್ಟೆ. ಆ ಅಧಿಕಾರಿಗಳು ಸೀದಾ ಹೋಗಿ ಇಂಗ್ಲಿಷ್ ಮೇಷ್ಟ್ರಿಗೆ ವಿಷಯ ತಿಳಿಸಿದರು.
ಅವರು ನನ್ನ ಅಪ್ಪನ ಸ್ನೇಹಿತ. ನನ್ನನ್ನು ಕರೆಸಿ, ಹಿತವಚನ ಹೇಳತೊಡಗಿದರು. ‘ಅಪ್ಪನಿಗೆ ಹೇಳ್ತೀನಿ’ ಅಂತ ಬೇರೆ ಹೆದರಿಸಿದರು. ಅಪ್ಪನ ಕೈಲಿ ಏಟು ತಿನ್ನೋದು ಗ್ಯಾರಂಟಿ ಎಂದೆನಿಸಿ ನಾನು ಆ ವಾರ ಮನೆಗೇ ಹೋಗದೆ ಹಾಸ್ಟೆಲ್ನಲ್ಲೇ ಉಳಿದೆ. ವಾರ ಬಂತೆಂದರೆ ನನ್ನ ದಾರಿ ನೋಡುತ್ತಿದ್ದ ಅಮ್ಮ ಕರೆ ಮಾಡಿದರೂ ನಾನು ಮಾತಾಡಲಿಲ್ಲ. ಅಪ್ಪ ಸೀದಾ ಶಾಲೆಗೆ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗಿ ಬೈದರು. ಅಮ್ಮ ಮಾತ್ರ ಸಮಾಧಾನದಿಂದ, ‘ಮಗಳೇ, ಹಾಗೆಲ್ಲ ದೊಡ್ಡವರ ಬಗ್ಗೆ ಹೇಳಬಾರದು. ಅವರೇನು ಮಾಡಿದರೂ ನಿಮ್ಮ ಒಳಿತಿಗಾಗಿ ಮಾಡ್ತಾರೆ. ವಾರ್ಡನ್‌ಗೂ ಜವಾಬ್ದಾರಿ ಇರುತ್ತೆ..’ ಅಂತ ಬುದ್ಧಿ ಹೇಳುತ್ತ ಕಣ್ಣೀರು ಹಾಕಿದರು. ನಾನು ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡು ಕ್ಷಮೆ ಕೇಳಿದೆ. ಅಂದಿನಿಂದ ಸಿಟ್ಟು, ಸೇಡು ಬಿಟ್ಟುಬಿಟ್ಟೆ.
| ಚೈತ್ರ ಕುಂದರ್ ಉಡುಪಿ