ನನ್ನ ಕೈಗೆ ಸಿಕ್ಕಿಬಿದ್ದಿ ಛಲೋ ಆತು, ನಿಮ್ಮಪ್ಪನ ಕೈಗೆ ಸಿಕ್ಕಿದ್ದರೆ ಏನ್ ಗತಿ?: ಬಸವರಾಜ

Basavaraj
Published on

ಬಾಲ್ಯದಿಂದಲೂ ನನಗೆ ಪಟಾಕಿ ಹಾರಿಸುವುದು ಎಂದರೆ ಬಲು ಪ್ರೀತಿ. ಪಟಾಕಿ ತರಲು ಅಪ್ಪ ಹಣ ಕೊಡುತ್ತಿರಲಿಲ್ಲ. ಹಾಗಾಗಿ ದೇವರಮನೆ ಜಗುಲಿ ಮೇಲೆ ಅಮ್ಮ ಕಟ್ಟಿದ ತೆಂಗಿನಕಾಯಿ ಬಟ್ಟೆಯೊಳಗೆ ಇಟ್ಟ ಚಿಲ್ಲರೆ ಹಣವನ್ನು ನಾನು ದಿನವೂ ತೆಗೆದುಕೊಳ್ಳುತ್ತಾ ಪಟಾಕಿ ಖರೀದಿಸಿ ದೂರದ ಪ್ರದೇಶದಲ್ಲಿ ಹಾರಿಸುತ್ತಿದ್ದೆ. ಒಂದು ದಿನ ಹಾಗೆಯೇ ತೆಂಗಿನಕಾಯಿಯ ಗಂಟಿನಲ್ಲಿರುವ ಹಣವನ್ನು ತೆಗೆದುಕೊಳ್ಳಲು ಹೋದಾಗ ಅಮ್ಮನ ಕೈಗೆ ಸಿಕ್ಕಿ ಬಿದ್ದೆ. ಅಮ್ಮ ಒಂದು ವೇಳೆ ನನ್ನನ್ನು ಅಪ್ಪನ ಕೈಗೆ ಒಪ್ಪಿಸಿದ್ದರೆ ಸಿಕ್ಕಾಪಟ್ಟೆ ಏಟು ತಿನ್ನುತ್ತಿದ್ದೆ. ಆದರೆ ತಾಯಿ ಪ್ರೀತಿಯೇ ಬೇರೆ. ಪಕ್ಕದ ಕೊಠಡಿಗೆ ನನ್ನನ್ನು ಎಳೆದುಕೊಂಡು ಹೋಗಿ ಕೆನ್ನೆಗೆ ಎರಡು ಏಟು ಬಾರಿಸಿದಳು.

‘ನನ್ನ ಕೈಗೆ ಸಿಕ್ಕಿಬಿದ್ದಿ ಛಲೋ ಆತು, ನಿಮ್ಮಪ್ಪನ ಕೈಗೆ ಸಿಕ್ಕಿದ್ದರೆ ಏನ್ ಗತಿ? ದೇವರ ಮುಂದೆ ಇಡ್ತಿರೋದು ನಿನ್ನ ವಿದ್ಯಾಭ್ಯಾಸಕ್ಕೆ ಕೂಡಿಸ್ತಿರೋ ದುಡ್ಡು. ನೀನು ಕದಿಯೋದನ್ನು ದೇವರು ನೋಡ್ತಿರ‌್ತಾನೆ. ತನ್ನ ಮಗ ಕಳ್ಳ ಅನ್ನೋದನ್ನ ಪ್ರಪಂಚದಲ್ಲಿ ಯಾವ ತಾಯಿಯೂ ಅರಗಿಸಿಕೊಳ್ಳೋದಿಲ್ಲ ಕಣೋ. ಅಪ್ಪನಂತೆ ನೀನೂ ಶಿಕ್ಷಕನಾಗಿ ಸಮಾಜ ಮೆಚ್ಚುವಂತೆ ಬಾಳಬೇಕು’ ಎಂದು ಬುದ್ಧಿ ಹೇಳಿದ್ದಲ್ಲದೆ ಇನ್ನೊಮ್ಮೆ ಮಾಡುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಂಡಳು. ನಾನು ಅಳುತ್ತಲೇ ಅಮ್ಮನ ಪಾದಕ್ಕೆರಗಿದೆ. ಮುಂದೆ ಚೆನ್ನಾಗಿ ಓದಿ ಕಾಲೇಜು ಉಪನ್ಯಾಸಕನಾದೆ.

| ಬಸವರಾಜ ಜಿ. ಪುರಾಣಿಕಮಠ ಬೈಲಹೊಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net