

ಕೂಡಿ ಬಾಳುವುದರಲ್ಲಿ ಸ್ವರ್ಗಸುಖವಿದೆ ಎಂಬುದನ್ನು ಇಂದಿನ ಜಮಾನಕ್ಕೆ ಸಾರಿ ಹೇಳುತ್ತಿದೆ ಹೊಸಪೇಟೆಯ ಕುಡತಿನಿ ವೀರಣ್ಣನವರ ಕುಟುಂಬ. ಕುಡತಿನಿ ಕುಟುಂಬದ ಸದಸ್ಯರು ಕಳೆದ 78 ವರ್ಷದಿಂದ ಒಂದೇ ಕಡೆ ನೆಲೆಸಿದ್ದಾರೆ. ತನ್ನ ಮಕ್ಕಳೆಲ್ಲರೂ ಕೂಡಿ ಬಾಳಬೇಕೆಂಬ ಕನಸು ಕಂಡ ವೀರಣ್ಣ-ಹಂಪಮ್ಮ ದಂಪತಿ, ಭಿನ್ನಾಭಿಪ್ರಾಯಗಳಿಲ್ಲದಂತೆ ಬದುಕು ನಡೆಸುವುದನ್ನು ಮಕ್ಕಳಾದ ಹನುಮಂತಪ್ಪ, ಭೂಪತಿ, ಶಿವಾನಂದ ಮತ್ತು ವೆಂಕಟೇಶಗೆ ಕಲಿಸಿಕೊಟ್ಟಿದ್ದಾರೆ. ಮಕ್ಕಳು ಸಹ ತಂದೆಯ ಆಶಯದಂತೆ ಸಾಗುತ್ತಿದ್ದಾರೆ. ಕುಡತಿನಿ ಕುಟುಂಬದಲ್ಲಿ ಹಿರಿಯರಾಗಿ ವೆಂಕಟೇಶ ಕುಡತಿನಿ ಒಳಗೊಂಡಂತೆ ನಾಲ್ವರು ಸಹೋದರರು, ಪತ್ನಿಯರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ಸೇರಿ 42 ಜನ ಒಂದೇ ಸೂರಿನಲ್ಲಿ ಬದುಕನ್ನು ಸಂಭ್ರಮಿಸುತ್ತಿದ್ದಾರೆ.
ಇಂದಿನ ಆಧುನಿಕ ಪದ್ಧತಿಯಿಂದ ಅವಿಭಕ್ತ ಕುಟುಂಬಗಳು ಮರೆಯಾಗಿವೆ. ಆದರೆ, ಮನುಷ್ಯ ಕೂಡಿ ಬಾಳಿದರೆ ಹೆಚ್ಚು ಸಂತೋಷ ಎಂಬುದನ್ನು ಅರ್ಥೈಸಿಕೊಳ್ಳಬೇಕು. ನಮ್ಮ ತಂದೆ ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲರೂ ಒಂದಾಗಿ ಒಂದೇ ಕಡೆ ನೆಲೆಸಿ ಜೀವನದ ಬಂಡಿ ಸಾಗಿಸುತ್ತಿದ್ದೇವೆ. | ವೆಂಕಟೇಶ ಕುಡತಿನಿ
ಮನೆಯಲ್ಲಿ ಮೂರ್ನಾಲ್ಕು ಜನರಿದ್ದರೆ ಭಿನ್ನಾಭಿಪ್ರಾಯ ಮೂಡುವುದು ಸಹಜ ಎಂಬಂತಾಗಿದೆ. ಆದರೆ, ಈ ಕುಟುಂಬದಲ್ಲಿ ಮೂರು ಡಜನ್ಗೂ ಹೆಚ್ಚು ಜನರಿದ್ದರೂ ಭಿನ್ನಾಭಿಪ್ರಾಯ ಕಂಡುಬಂದಿಲ್ಲ. ಊಟ, ತಿಂಡಿ, ದುಡಿಮೆ ಹೀಗೆ ಯಾವುದರಲ್ಲಿಯೂ ತಕರಾರು ಇಲ್ಲವೇ ಇಲ್ಲ. ಮನೆಗೆಲಸವನ್ನು ಎಲ್ಲರೂ ಸೇರಿ ಮಾಡುತ್ತಾರೆ. ವಿಶೇಷ ಕಾರ್ಯಕ್ರಮವಿದ್ದ ದಿನ ಮನೆಯಲ್ಲಿ ಸಮಾವೇಶವೊಂದು ಮೈದಳೆದಂತೆ ಕಾಣುತ್ತದೆ. ಮುಖ್ಯವಾಗಿ ಮನೆಯಲ್ಲಿ ಶಿಸ್ತು, ಸಂಪ್ರದಾಯ ಹೊಂದಾಣಿಕೆ, ಅನುಕಂಪ, ಪ್ರೀತಿ ಇದೆ. ಇದೇ ತುಂಬಿದ ಕುಟುಂಬದ ಪ್ರೀತಿಯ ಗುಟ್ಟು. ‘ಅವಿಭಕ್ತ ಕುಟುಂಬಗಳು ಒಂದು ಸಾಮಾಜಿಕ ಶಕ್ತಿ ಎನ್ನುತ್ತಿದ್ದ ನಮ್ಮ ತಂದೆಯೇ ನಮಗೆ ದೊಡ್ಡ ಆಸ್ತಿ. ಇಂದು ಅವರಿಲ್ಲದಿದ್ದರೂ ಅವರು ಆರಂಭಿಸಿದ ದಿನಪತ್ರಿಕೆ ವಿತರಣೆ ಕೆಲಸ ನಮ್ಮೆನ್ನೆಲ್ಲ ಸಲುಹಿದೆ. ನಾಲ್ಕು ಜನ ಸೇರಿ ನಿರ್ಧಾರ ಕೈಗೊಳ್ಳುವುದರಿಂದ ಎಲ್ಲಿಯೂ ವೈಮನಸ್ಸು ಉಂಟಾಗಿಲ್ಲ. ಬದುಕು ಮತ್ತು ವ್ಯವಹಾರ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳು, ಮೊಮ್ಮಕ್ಕಳಿಗೆ ಮುಂದೆಯೂ ಕೂಡಿ ಬಾಳುವುದನ್ನೇ ಕಲಿಸಿಕೊಡುತ್ತೇವೆ’ ಎನ್ನುತ್ತಾರೆ ಕುಟುಂಬದ ಹನುಮಂತಪ್ಪ, ಶಿವಾನಂದ, ಭೂಪತಿ, ವೀರಣ್ಣ.
ರಟ್ಟಿಹಳ್ಳಿ ತಾಲೂಕು ಶಿರಗಂಬಿ ಗ್ರಾಮದ ಹನುಮಂತಪ್ಪ ಶಿವಪ್ಪ ಮಾಳಗಿ ಅವರದ್ದು 56 ಸದಸ್ಯರ ಕುಟುಂಬ. ಅನ್ಯೋನ್ಯತೆ ಇವರ ಮನೆಮಂತ್ರ. ಕೆಲವರು ಉದ್ಯೋಗ ನಿಮಿತ್ತ ಬೇರೆ ಕಡೆ ಇರುವುದರಿಂದ ಪ್ರಸ್ತುತ ಒಂದೇ ಸೂರಿನಡಿ 35ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಹನುಮಂತಪ್ಪ, ಚೆನ್ನಬಸಪ್ಪ, ಮಲ್ಲನಗೌಡ, ಬಸವರಾಜ, ಚಂದ್ರಶೇಖರ ಈ ಐವರು ಸಹೋದರರು ಮತ್ತು ಮೂವರು ಸಹೋದರಿಯರು ಮೂಲಕುಟುಂಬದ ಸದಸ್ಯರು. ಹನುಮಂತಪ್ಪ ಶಿವಪ್ಪ ಮಾಳಗಿ ಕುಟುಂಬ ಹಲವು ವರ್ಷಗಳಿಂದ ವ್ಯವಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದೆ. 68 ಎಕರೆ ಕೃಷಿ ಜಮೀನು ಇದೆ. ಕುಟುಂಬದ ಎಲ್ಲ ಗೃಹಿಣಿಯರು ಅಡುಗೆ ಕೆಲಸದೊಂದಿಗೆ ಕೃಷಿ ಚಟುವಟಿಕೆಯಲ್ಲೂ ಕೈ ಜೋಡಿಸುತ್ತಾರೆ. ಎಲ್ಲ ಸದಸ್ಯರಿಗೆ ಒಂದೇ ಅಡುಗೆಮನೆ ಇದ್ದು ಎಲ್ಲರಿಗೂ ಒಂದೇ ಒಲೆಯಲ್ಲಿ ಅಡುಗೆ ಮಾಡಲಾಗುತ್ತಿದೆ.
ಹಲವು ವರ್ಷಗಳಿಂದ ಒಟ್ಟಾಗಿ ಬಾಳುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ಮನೆಯೆಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಇರುವುದು ಸಹಜ. ಆದರೆ, ಈ ಸಮಸ್ಯೆಗಳನ್ನು ಎಲ್ಲರೂ ತಾಳ್ಮೆಯಿಂದ ಬಗೆಹರಿಸಿಕೊಂಡು ಸಂತೋಷದಿಂದ ಬದುಕಬೇಕು. ಮನೆಯಲ್ಲಿನ ಮಕ್ಕಳು ಸೇರಿದಂತೆ ಎಲ್ಲರೂ ಗುರು-ಹಿರಿಯರಿಗೆ ಗೌರವ ನೀಡುತ್ತಾರೆ. ದ್ವೇಷ, ಸಿಟ್ಟು, ಕೋಪಗಳನ್ನು ಕುಟುಂಬದಲ್ಲಿ ಸಾಧಿಸಬಾರದು. ಎಲ್ಲರೂ ಒಟ್ಟಾಗಿ ಇದ್ದು ಶುಭಸಮಾರಂಭ, ಹಬ್ಬ ಹರಿದಿನಗಳನ್ನು ಆಚರಿಸಿಕೊಂಡಾಗ ಅದರಲ್ಲಿನ ಸಂತೋಷ ಅನುಭವಸಿದವರಿಗೆ ಮಾತ್ರ ಗೊತ್ತು. | ಹನುಮಂತಪ್ಪ ಶಿವಪ್ಪ ಮಾಳಗಿ
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಸಾಕ್ಷಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಯರಗಟ್ಟಿ ಕುಟುಂಬ. ಗುರುಪಾದಪ್ಪ ದುಂಡಪ್ಪ ಯರಗಟ್ಟಿ (92) ಈ ಕುಟುಂಬದ ಯಜಮಾನ. ಅವರ ಕುಟುಂಬದಲ್ಲಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಒಟ್ಟು 36 ಸದಸ್ಯರು ಇದ್ದಾರೆ. 70 ವರ್ಷಗಳ ಹಿಂದೆ ಅನ್ಯರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗುರುಪಾದಪ್ಪ ಯರಗಟ್ಟಿ ಅವರು ಈಗ ನಲವತ್ತು ಎಕರೆ ಜಮೀನಿನ ಮಾಲೀಕರು. ಅವರ ಈ ಸಾಧನೆಗೆ ಮೂಲಕಾರಣವೇ ಕೃಷಿ ಹಾಗೂ ಅವರ ಕುಟುಂಬದ ಒಗ್ಗಟ್ಟು. ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಎಲ್ಲರೂ ಕೃಷಿಕಾಯಕದಲ್ಲಿ ತೊಡಗಿದ್ದಾರೆ. ಒಬ್ಬರು ಟ್ರ್ಯಾಕ್ಟರ್ ಮೂಲಕ ನೇಗಿಲು ಹೊಡೆಯುವುದು, ಬಿತ್ತುವುದು, ಕಸ ತೆಗೆಯುವುದು ಮಾಡಿದರೆ ಮತ್ತೊಬ್ಬರು ಕೃಷಿಗೆ ಬೇಕಾದ ಎಲ್ಲ ಪತ್ರವ್ಯವಹಾರ, ಕಚೇರಿ ಕೆಲಸ ಮಾಡಿಕೊಂಡು ಬರುತ್ತಾರೆ. ಇನ್ನಿಬ್ಬರು ತೋಟದ ಕಾರ್ಯ ಹಾಗೂ ಕೆರೆ ನಿರ್ವಹಣೆ ಮಾಡುತ್ತಾರೆ. ಉಳಿದ ಎಲ್ಲ ಕಾರ್ಯವನ್ನೂ ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಅಳಿಯಂದಿರು ಹಾಗೂ ಹೆಣ್ಣುಮಕ್ಕಳು ಮಾಡುತ್ತಾರೆ.
ಮಕ್ಕಳ ಜತೆಗೆ ಸೊಸೆಯಂದಿರೂ ತೋಟದಲ್ಲಿ ಕೆಲಸ ಮಾಡಿದ್ದರಿಂದ ಪ್ರತಿವರ್ಷ ಒಂದು ಎಕರೆ, ಎರಡು ಎಕರೆ ಹೀಗೆ ಜಮೀನು ಖರೀದಿ ಮಾಡುತ್ತಿದ್ದೆ. ಈಗ 40 ಎಕರೆ ನೀರಾವರಿ ಜಮೀನು ಇದೆ. ಒಂದೇ ಒಂದು ಸಲ ನಮ್ಮ ಮನೆಯಲ್ಲಿ ಯಾವ ವಿಚಾರವಾಗಿಯೂ ಜಗಳ ನಡೆದಿಲ್ಲ. ಎಲ್ಲರೂ ಅವರವರ ಕೆಲಸ ಮಾಡುತ್ತಿರುವುದರಿಂದ ಇಲ್ಲಿ ಯಾರೂ ಹೆಚ್ಚು-ಕಡಿಮೆ ಎನ್ನುವ ಪ್ರಶ್ನೆಯೇ ಬಂದಿಲ್ಲ. | ಗುರುಪಾದಪ್ಪ ಯರಗಟ್ಟಿ
ನಮ್ಮ ಅಪ್ಪ-ಚಿಕ್ಕಪ್ಪ ಕೂಡ ಒಂದೇ ಸೂರಿನಲ್ಲಿದ್ದು ಕೊಂಡು ಸಂಸಾರದ ಬಂಡಿ ಎಳೆದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನ ದಲ್ಲಿ ನಾವೂ ಜೀವನ ಸಾಗಿಸುತ್ತಿದ್ದೇವೆ. | ಶ್ರೀಶೈಲ ಬಡಿಗೇರ
ನಮ್ಮ ಕುಟುಂಬ ಗುರುಪರಂ ಪರೆಯನ್ನು ಪಾಲಿಸಿಕೊಂಡು ಬಂದಿದೆ. ಕುಟುಂಬದ ಹಿರಿಯರು ಹೇಳುವ ಮಾತೇ ಕೊನೆ. ಅದನ್ನು ಎಲ್ಲರೂ ಅನುಸರಿಸುತ್ತೇವೆ. ವಿಶೇಷ ದಿನದಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತೇವೆ. | ಚಿದಾನಂದ ಒಡೆಯರ್
ನಾವು ಒಂದೇ ಸೂರಿನಡಿ 15 ರಿಂದ 20 ಜನರಿದ್ದರೂ ಹಬ್ಬ ಹರಿದಿನಗಳಿಗೆ ಐವತ್ತರಷ್ಟು ಜನರು ಒಟ್ಟಿಗೆ ಸೇರುತ್ತೇವೆ. ಒಂದೇ ಕುಟುಂಬದಲ್ಲಿ ಹಲವು ಕಾಲದಿಂದ ಇದ್ದು, ಕೆಲಸಕಾರ್ಯಗಳನ್ನು ಹಂಚಿಕೊಂಡು ಮಾಡುತ್ತೇವೆ. | ಕೃಷ್ಣಕುಮಾರ್