ಇಂದು ವಿಶ್ವ ನೃತ್ಯ ದಿನ: ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ನೃತ್ಯೌಷಧ

dance 1
Published on

(ಕರೊನಾದಿಂದಾಗಿ ಈಗ ಮನೆಯಿಂದ ಹೊರಗಡೆ ಹೋಗುವುದು ಅಪಾಯ; ಹೀಗಾಗಿ ಮುಂಚೆ ಮಾಡುತ್ತಿದ್ದ ವ್ಯಾಯಾಮ, ಈಜು, ಸೈಕ್ಲಿಂಗ್ ಇಂಥ ಚಟುವಟಿಕೆಗಳಿಗೆ ಅವಕಾಶ ಕಡಿಮೆ. ಹಾಗೆಂದು ಮನೆಯಲ್ಲೇ ಕುಳಿತರೆ ದೇಹದ ಜತೆ ಮನಸ್ಸೂ ಭಾರ. ಇಂಥ ಸಂದರ್ಭದಲ್ಲಿ ನೃತ್ಯ ಅತ್ಯುತ್ತಮ ಚಟುವಟಿಕೆ.)

  • ಡಾ. ಕೆ.ಎಸ್. ಚೈತ್ರಾ

ವಿಶ್ವ ನೃತ್ಯ ದಿನವನ್ನು ಆಚರಿಸುವ ಸಂದರ್ಭದಲ್ಲಿ ಕರೊನಾದ ರುದ್ರ ತಾಂಡವ ನಡೆದಿದೆ. ಸೋಂಕು ಹರಡಿದರೆ ಎಂದು ಜೋರಾಗಿ ಉಸಿರಾಡಲು ಭಯ, ಏನಾಗುವುದೋ ಎಂಬ ಭೀತಿಯಿಂದ ತಲೆ ಭಾರ, ಕಟ್ಟಿ ಹಾಕಿದಂತಿರುವ ಕೈ-ಕಾಲು-ಮನ! ಮುಂದಿನ ಕ್ಷಣ ಹೇಗೋ ಏನೋ ಎಂಬ ಆತಂಕದಿಂದ ದಿನ ಎಣಿಸುತ್ತಾ, ಎಲ್ಲಿಂದ ಏನು ಸುದ್ದಿ ಬರುತ್ತದೋ ಎಂದು ಹೆದರುತ್ತಾ, ಇಡೀ ಬದುಕೇ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವಾಗ ‘ನೃತ್ಯದ ಪ್ರಸ್ತಾಪವೇ’ ಎನ್ನಬೇಡಿ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ದೇಹ-ಮನಸ್ಸನ್ನು ನಿಯಂತ್ರಣದಲ್ಲಿಡಲು, ಬದುಕಿಗೆ ಹೊಸ ಚೈತನ್ಯ ನೀಡಲು ನೃತ್ಯ ಸಹಾಯಕ. ಏಕೆಂದರೆ ನೃತ್ಯ ಕೇವಲ ಕೈಕಾಲುಗಳ ತಾಳಬದ್ಧ ಚಲನೆಯಲ್ಲ. ಅದು ದೇಹ- ಮನಸ್ಸು- ಭಾವನೆ ಎಲ್ಲವೂ ಒಟ್ಟಾಗಿ ನಡೆಯುವ ಚಟುವಟಿಕೆ. ಆ ಮೂಲಕ ತನ್ನ ಸಂತೋಷ, ಭಯ, ನಿವೇದನೆ, ಪ್ರೀತಿ ಹೀಗೆ ಎಲ್ಲಾ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಳಸುವ ಶಕ್ತಿಯುತ ಸಂವಹನ ಮಾಧ್ಯಮ. ದೇಹ-ಬುದ್ಧಿ-ಭಾವನೆಗಳ ಸಾಮರಸ್ಯ ಬೇಡುವ ನೃತ್ಯ ಯಾವುದೇ ಶೈಲಿಯದ್ದಾದರೂ ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬುದು ನಿರೂಪಿತ ಸತ್ಯ. ಕೋವಿಡ್19ರ ಸಂಕಷ್ಟದ ಸಮಯದಲ್ಲಿ ನೃತ್ಯವು ಮನೆಯಲ್ಲಿದ್ದೇ ದೇಹಕ್ಕೆ ಉತ್ತಮ ವ್ಯಾಯಾಮ, ಒತ್ತಡ ಹೊರಹಾಕುವ ದಾರಿ, ದೈಹಿಕ ಅಂತರವಿದ್ದೂ ಸಾಮಾಜಿಕವಾಗಿ ಬೆರೆಯುವ ಮಾರ್ಗ ಹೀಗೆ ಎಲ್ಲವೂ ಆಗಬಲ್ಲದು!

ಸದೃಢ ದೇಹ: ಯಾವುದೇ ಸಂಗೀತಕ್ಕೆ ಅಥವಾ ಸ್ವತಃ ಹಾಡುತ್ತಾ ನರ್ತಿಸುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಹೊಸ ಹೊಸ ಚಲನೆಗಳು ದೇಹವನ್ನು ಬಗ್ಗಿ ಬಳುಕಿಸಿ ಕ್ರಿಯಾಶೀಲವನ್ನಾಗಿ ಮಾಡುತ್ತವೆ. ಇದರಿಂದ ರಕ್ತಸಂಚಾರ, ಉಸಿರಾಟದ ಗತಿ ಹೆಚ್ಚುತ್ತದೆ. ಹೃದಯದ ಕ್ಷಮತೆ ಹೆಚ್ಚಿ ಶ್ವಾಸಕೋಶ ಬಲವಾಗುತ್ತದೆ. ಹಾಗಾಗಿ ಓಟ, ನಡಿಗೆಗಿಂತ ನರ್ತಿಸುವುದು ಹೆಚ್ಚು ಪರಿಣಾಮಕಾರಿ. ಶಾಲೆಗೆ ಹೋಗದೆ, ಯಾವುದೇ ಚಟುವಟಿಕೆ ಇಲ್ಲದೆ ಸದಾ ಮನೆಯಲ್ಲಿ ಇದ್ದು ಮಂಕಾಗಿರುವ ಮಕ್ಕಳಿಗಂತೂ ಉತ್ಸಾಹ ತುಂಬಲು, ಶಕ್ತಿಯನ್ನು ಸಮರ್ಥವಾಗಿ ಬಳಸಲು ನೃತ್ಯ ಅತ್ಯುತ್ತಮ ಸಾಧನ.

ಒತ್ತಡ ನಿವಾರಣೆ: ಮನೆ-ಮನ, ಒಳಗೆ-ಹೊರಗೆ ಎಲ್ಲೆಡೆಯೂ ಒತ್ತಡ, ಆತಂಕ. ಬೇಡವೆಂದರೂ ಹೆದರಿಕೆ, ಅಸಹನೆ, ಕಿರಿಕಿರಿ ತಲೆದೋರುವುದು ಸಹಜ. ಹಾಗೆಂದು ಎದ್ದು ಹೊರಗೂ ಹೋಗುವಂತಿಲ್ಲ್ಲ ಬದಲಿಗೆ ಮನೆಯ ಕೋಣೆಯಲ್ಲಿ ಸಂಗೀತವನ್ನು ಹಾಕಿ, ತಾಳಬದ್ಧವಾಗಿ ಕುಣಿದು ನರ್ತಿಸಿದರೆ ಚಲನೆಯ ಮೂಲಕ ಉದ್ವೇಗ ಹೊರಬಂದು ಮನಸ್ಸು ಶಾಂತವಾಗುತ್ತದೆ. ದೇಹ ಲಘು- ಮನಸ್ಸೂ ಹಗುರ!

ಬದುಕಿನ ಬಗ್ಗೆ ಅನಿಶ್ಚಿತತೆ ಕಾಡುವಾಗ ಅನೇಕ ಭಾವನೆಗಳನ್ನು ಅದುಮಿಡುವುದು ಅನಿವಾರ್ಯ. ಹೀಗೆ ಅದುಮಿಟ್ಟ ಭಾವನೆಗಳನ್ನು ಅತ್ಯಂತ ಸಕಾರಾತ್ಮಕವಾಗಿ ನೃತ್ಯದ ಮೂಲಕ ಅಭಿವ್ಯಕ್ತಿಸಬಹುದು. ಋಣಾತ್ಮಕ ಭಾವನೆ ಹೊರಹೋಗಿ ಮನಸ್ಸಿಗೆ ಬಿಡುಗಡೆಯಾದ ಸಮಾಧಾನ ಸಿಗುತ್ತದೆ. ನರ್ತಿಸುತ್ತಾ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿ ಬದುಕನ್ನು ಧೈರ್ಯವಾಗಿ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ. ದೈಹಿಕ ಚಲನೆಗಳ ಮೂಲಕ ಅಂತರಂಗದ ಅಭಿವ್ಯಕ್ತಿಯಾಗಿ ಹೊರಹೊಮ್ಮುವ ನೃತ್ಯಕ್ಕೆ ಹೆಜ್ಜೆ, ಗೆಜ್ಜೆ, ರಾಗ, ತಾಳ, ಮೇಳಗಳ ನಿರ್ಬಂಧವಿಲ್ಲ. ನರ್ತಿಸಲು ವಯಸ್ಸು ಎಷ್ಟಾದರೇನು..ಮನಸ್ಸನ್ನು ತೆರೆದರೆ ಸಾಕು!

ಉತ್ತಮ ವೇದಿಕೆ

ದೇಶ-ಕಾಲ- ವಯಸ್ಸು-ಜಾತಿ -ಭಾಷೆ ಎಲ್ಲಾ ಗಡಿಗಳನ್ನು ಮೀರಿ ಹೃದಯಕ್ಕೆ ಮುಟ್ಟುವ ವಿಶ್ವಭಾಷೆ ನೃತ್ಯ. ಒಳ್ಳೆಯ ಸ್ನೇಹ-ಒಡನಾಟಕ್ಕೆ ನೃತ್ಯವೊಂದು ವೇದಿಕೆ. ತಂತ್ರಜ್ಞಾನದ ಸಹಾಯದಿಂದ ಇಂದು ಆನ್​ಲೈನ್ ಕಾರ್ಯಕ್ರಮ ನೋಡಬಹುದು, ಮಾಡಬಹುದು, ಕಲಿಯಬಹುದು. ಸಮಾನ ಆಸಕ್ತಿ-ಅಭಿರುಚಿಯ ಸ್ನೇಹಿತರನ್ನು ಭೇಟಿಯಾಗಲು ಸಾಧ್ಯ.

ಭರವಸೆಯ ಬೆಳಕು

ಕಳೆದ ವರ್ಷ ಇರಾನಿನಲ್ಲಿ ಕೋವಿಡ್ ವಾರ್ಡ್​ಗಳಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿ ತಮಗಾಗುತ್ತಿರುವ ಅತೀವ ಒತ್ತಡ ನಿವಾರಿಸಲು ಸುರಕ್ಷಾ ಕವಚ ಧರಿಸಿಯೇ ನರ್ತಿಸಿದ್ದರು. ತಮ್ಮ ದೇಹ, ಮನಸ್ಸು ದಣಿದಿದ್ದರೂ ಹಾಡು-ನೃತ್ಯ ತಮ್ಮ ಚೈತನ್ಯವನ್ನು ಜೀವಂತವಾಗಿಟ್ಟಿದೆ ಎಂದು ಹೇಳಿದ್ದರು. ಅವರ ನೃತ್ಯ ನೋಡಿ ರೋಗಿಗಳೂ ಸಂತಸಪಟ್ಟಿದ್ದರು. ಭಯದ ಕತ್ತಲಲ್ಲಿ ಇದು ಭರವಸೆಯ ಬೆಳಕು ಎಂದು ರೋಗಿ ಗಳು ಅಭಿಪ್ರಾಯಪಟ್ಟಿದ್ದರು! ಗುಜರಾತ್ ಮತ್ತು ಅಸ್ಸಾಮಿನ ವೈದ್ಯರು ರೋಗಿಗಳಲ್ಲಿ ಉತ್ಸಾಹ ತುಂಬಲು ನರ್ತಿಸಿದ್ದೂ ವರದಿಯಾಗಿತ್ತು.

ಜೀವನ ದೃಷ್ಟಿ

ಯಾವುದೇ ನೃತ್ಯವಾದರೂ ಏಕಾಗ್ರತೆ, ಸಹನೆ ಬೇಕೇಬೇಕು. ಸರಳ ಚಲನೆಗಳೂ ದೇಹಕ್ಕೆ ರೂಢಿಯಾಗಲು ಸಮಯ ಅಗತ್ಯ. ನೃತ್ಯ ಮಾಡುತ್ತಾ ರೂಢಿಯಾಗುವ ಸಹನೆ ಬದುಕಿಗೂ ಅನ್ವಯವಾಗುತ್ತದೆ. ಒಳ್ಳೆಯ ದಿನಗಳಿಗಾಗಿ ಕಾಯುವ ತಾಳ್ಮೆಯನ್ನು ಕಲಿಸುತ್ತದೆ. ಬದುಕಿನ ಬಗ್ಗೆ ಆಶಾಭಾವನೆಯನ್ನು ಮೂಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net