

ಲಾಕ್ಡೌನ್ ಸಂಕಷ್ಟ ಎದುರಿಸಲು ಅನುವಾಗುವಂತೆ ಕಟ್ಟಡ ಕಾರ್ವಿುಕರಿಗೆ ತಾತ್ಕಾಲಿಕವಾಗಿ ಮಾಸಿಕ 2000 ರೂಪಾಯಿಗಳ ಸಹಾಯಧನ ಘೊಷಿಸಿರುವ ಸರ್ಕಾರದ ಕ್ರಮಕ್ಕೆ ಅಭಿನಂದನೆಗಳು. ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿ ಮೊದಲನೇ ಕಂತು ಬಿಡುಗಡೆಗೆ ಸಿದ್ಧವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾರ್ವಿುಕ ಸಚಿವರು ಈ ಬಗ್ಗೆ ಹೇಳಿಕೆ ನೀಡುತ್ತ, ‘ಕಟ್ಟಡ ಕಾರ್ವಿುಕರಾಗಿ ನೋಂದಣಿಯಾದ ಎಲ್ಲ ಕಾರ್ವಿುಕರಿಗೂ ಮಾನವೀಯ ದೃಷ್ಟಿಯಿಂದ ಸಹಾಯಧನ ಒದಗಿಸಲಾಗುವುದು’ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ವಿಚಾರಿಸಿದಾಗ, ಪ್ರಸ್ತುತ ಚಾಲ್ತಿಯಲ್ಲಿ ಇರುವ ಕಾರ್ಡದಾರರಿಗೆ ಹಾಗೂ ಒಂದು ವರ್ಷದೊಳಗೆ ನವೀಕರಣ ಆಗದಿರುವ ಕಾರ್ಡದಾರರಿಗೆ ಮಾತ್ರ ಧನಸಹಾಯ ದೊರಕುವುದಾಗಿ ಹಾಗೂ ನವೀಕರಣಗೊಳಿಸಿಕೊಳ್ಳದ ಇತರೆ ಕಾರ್ವಿುಕರಿಗೆ ಸಹಾಯಧನ ದೊರೆಯುವುದಿಲ್ಲವಾಗಿ ತಿಳಿದು ಬಂದಿದೆ. ಇದು ಬಡ ಕಟ್ಟಡ ಕಾರ್ವಿುಕರಿಗೆ ಆಗುತ್ತಿರುವ ಅನ್ಯಾಯ.
ಕೂಲಿ ಇಲ್ಲದೆ ಹಸಿವಿನಿಂದ ನರಳುತ್ತಿರುವ ಬಹುಪಾಲು ಅವಿದ್ಯಾವಂತರೇ ಆಗಿರುವ ಬಡ ಕಟ್ಟಡ ಕಾರ್ವಿುಕರಿಗೆ ಈ ಯಾವ ಕಾನೂನುಗಳೂ ತಿಳಿದಿಲ್ಲವಷ್ಟೇ. ಸರ್ಕಾರದ ಹಾಗೂ ಕಾರ್ವಿುಕ ಸಂಘಟನೆಗಳ ಅವಿರತ ಶ್ರಮದಿಂದ 21 ಲಕ್ಷ ಕಾರ್ವಿುಕರು ನೋಂದಾಯಿಸಿಕೊಂಡಿದ್ದಾರೆ. ಈಗಲೂ ಲಕ್ಷಾಂತರ ಕಾರ್ವಿುಕರು ನೋಂದಣಿ ಮಾಡಿಸಿಲ್ಲ. ಇಂಥ ಸಂದರ್ಭದಲ್ಲಿ ಕನಿಷ್ಠ ನೋಂದಾಯಿಸಿಕೊಂಡಿರುವ ಎಲ್ಲ ಕಾರ್ವಿುಕರಿಗೂ ಸೌಲಭ್ಯ ಒದಗಿಸಬೇಕು. ಜತೆಗೆ ಈಗಾಗಲೇ ನೋಂದಣಿಗೆ ಸಿದ್ಧವಾಗಿರುವ ಸಾವಿರಾರು ಕಟ್ಟಡ ಕಾರ್ವಿುಕರಿದ್ದು, ಅವರನ್ನು ಕೂಡಲೇ ನೋಂದಾಯಿ ಸುವ ಮೂಲಕ ಸಹಾಯಧನ ಒದಗಿಸಬೇಕು. ಇದಕ್ಕಾಗಿ ಸಿಬ್ಬಂದಿ ಕೊರತೆಯ ನೆಪವೊಡ್ಡದೆ ನೋಂದಣಿಯನ್ನು ಶೀಘ್ರ ಪ್ರಾರಂಭಿಸಬೇಕು.
| ಎಸ್.ಎನ್.ವಾಸುದೇವ, ಸಂಚಾಲಕರು, ಬಿಎಂಎಸ್ ಕಟ್ಟಡ ಕಾರ್ವಿುಕರ ಮಜ್ದೂರ್ ಸಂಘ, ಶ್ರೀರಂಗಪಟ್ಟಣ.