

ದೇಶದ ಯಾವುದೇ ರಾಜ್ಯವನ್ನು ಗಮನಿಸಿದರೂ, ಅಲ್ಲಿ ಮತದಾರರ ಸಂಖ್ಯೆಯಲ್ಲಿ ಹತ್ತಿರಹತ್ತಿರ ಅರ್ಧದಷ್ಟು ಅಂದರೆ ಶೇಕಡ 50ರಷ್ಟು ಮಹಿಳೆಯರೇ. ಹಾಗಾಗಿಯೇ, ಮಹಿಳಾ ಮತದಾರರನ್ನು ಸೆಳೆಯಲು ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ಹೊಸತಂತ್ರದ ಮೊರೆ ಹೋಗಿವೆ. ಅದುವೇ, ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ಹಣಕಾಸು ನೆರವು ತಲುಪಿಸುವ ಯೋಜನೆ. ತಮ್ಮ ಖಾತೆಗೇ ಹಣ ಜಮೆಯಾಗುವುದರಿಂದ ಮಹಿಳೆಯರಿಗೂ ಈ ಭರವಸೆ/ಯೋಜನೆ ಆಕರ್ಷಕವಾಗಿ ಕಂಡಿದೆ. ಇದು ರಾಜಕೀಯದ ಸಮೀಕರಣಗಳನ್ನೇ ಬದಲಿಸಿದ್ದು, ಈವರೆಗೆ 10 ರಾಜ್ಯಗಳಲ್ಲಿ ಗೇಮ್ ಚೇಂಜರ್ ಆಗಿ ಬದಲಾಗಿದೆ. ‘ಬಿಹಾರದಲ್ಲಿ ಐಎನ್ಡಿಐಎ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಜನವರಿ 14ರಂದು ಮಹಿಳೆಯರ ಖಾತೆಗೆ ಒಂದೇ ಬಾರಿಗೆ 30 ಸಾವಿರ ರೂ. ಜಮೆ ಮಾಡಲಾಗುವುದು’ ಎಂದು ಆರ್ಜೆಡಿ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹೇಳಿದ್ದು, ಸಂಚಲನ ಮೂಡಿಸಿದೆ. ಉಳಿದ ರಾಜ್ಯಗಳಲ್ಲೂ ಇದು ಹೇಗೆ ಪರಿಣಾಮ ಬೀರಿತು ಎಂಬುದರ ವಿವರ ಇಲ್ಲಿದೆ.
| ರವೀಂದ್ರ ಎಸ್. ದೇಶಮುಖ್
ರಾಜಕೀಯದ ಸಮೀಕರಣಗಳನ್ನೇ ಬದಲಿಸುತ್ತಿದೆ ಸ್ತ್ರೀಶಕ್ತಿ. ಹೌದು, ರಾಜಕೀಯ ತಂತ್ರಗಾರಿಕೆ ಬದಲಾಗಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಮತದಾನ ಪ್ರಮಾಣದಲ್ಲೂ ಏರಿಕೆಯಾಗಿರುವುದು ಈ ಬದಲಾವಣೆಗೆ ಪ್ರಮುಖ ಕಾರಣ. ಅಲ್ಲದೆ, ಮಹಿಳೆಯರು ರಾಜಕೀಯ ಭರವಸೆಗಳನ್ನು ನಂಬಿ ಮತ ಹಾಕುವುದಿಲ್ಲ ಎಂಬ ಸಂಗತಿ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಹೀಗಾಗಿಯೇ, ಮಹಿಳಾ ಮತದಾರರ ಮನ ಗೆಲ್ಲಲು ‘ಸಹಾಯಧನ’ದ ಅಸ್ತ್ರ ಪ್ರಯೋಗಿಸಲಾಗಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಆದ್ದರಿಂದಲೇ ಯಾವುದೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಅಲ್ಲಿ ಮೊದಲು ಗಮನ ಸೆಳೆಯುವುದು ಮಹಿಳೆಯರ ಕುರಿತಾದ ಭರವಸೆಗಳು/ಘೋಷಣೆಗಳು. 2023ರ ಮೇ ತಿಂಗಳಿಂದ ಈವರೆಗೆ ದೇಶದ 14 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿವೆ. ಈ ಪೈಕಿ 10 ರಾಜ್ಯಗಳಲ್ಲಿ ಮಹಿಳೆಯರಿಗೆ ನಗದು ವರ್ಗಾವಣೆಯ ಭರವಸೆ ನೀಡಿ, ಚುನಾವಣೆಯ ಬಳಿಕ ಅದನ್ನು ಜಾರಿಗೆ ತರಲಾಗಿದೆ. ಹತ್ತು ರಾಜ್ಯಗಳ ಪೈಕಿ ಆರು ರಾಜ್ಯಗಳಲ್ಲಿ ಸರ್ಕಾರವೇ ಬದಲಾಗಿದ್ದರೆ, ‘ಮಹಿಳೆಯರಿಗೆ ನೇರ ನಗದು ಯೋಜನೆ ಜಾರಿಗೆ ತರಲಾಗುವುದು’ ಎಂದು ಘೋಷಿಸಿ ನಾಲ್ಕು ರಾಜ್ಯಗಳಲ್ಲಿನ ಪಕ್ಷಗಳು ಅಧಿಕಾರ ಉಳಿಸಿಕೊಂಡು, ಮತ್ತೆ ಸರ್ಕಾರ ರಚಿಸಿವೆ.
ಕರ್ನಾಟಕ, ಗ್ಯಾರಂಟಿಗಳ ಯುಗ
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ನಂತರ 2023ರ ಮೇನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಚುನಾವಣೆ ಪ್ರಣಾಳಿಕೆಯಲ್ಲೇ ಕಾಂಗ್ರೆಸ್ ಮಹಿಳೆಯರಿಗೆ ಹಲವು ಕೊಡುಗೆ ಘೋಷಿಸಿತ್ತು. ಅದರಂತೆ ಅಧಿಕಾರಕ್ಕೆ ಬಂದೊಡನೆ ‘ಶಕ್ತಿ’ ಯೋಜನೆಯಡಿಯಲ್ಲಿ ರಾಜ್ಯ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ‘ಗೃಹಲಕ್ಷ್ಮಿ’ ಯೋಜನೆಯಡಿ ತಿಂಗಳಿಗೆ 2 ಸಾವಿರ ರೂ.ಗಳ ನೆರವು ನೀಡಲಾಗುತ್ತಿದೆ.
ದೆಹಲಿ, ಪೊರಕೆಯನ್ನೇ ಗುಡಿಸಿದ ‘ಕಮಲ’
ರಾಜಧಾನಿ ದೆಹಲಿಯಲ್ಲಿ ಇದೇ ವರ್ಷದ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಆಗ ಆಡಳಿತದಲ್ಲಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಅದ್ಮಿ ಪಕ್ಷ ‘ಮಹಿಳೆಯರಿಗೆ ಪ್ರತಿ ತಿಂಗಳು 2100 ರೂ. ನೀಡಲಾಗುವುದು’ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತು. ದೆಹಲಿಯಲ್ಲಿ ಸಂಘಟನಾ ಬಲವನ್ನೇ ಕಳೆದುಕೊಂಡಿರುವ ಕಾಂಗ್ರೆಸ್ ಕೂಡ ಘೋಷಣೆಯಲ್ಲಿ ಹಿಂದೆ ಬೀಳದೆ, ಮಹಿಳೆಯರಿಗೆ 2500 ರೂ. ನೀಡುವುದಾಗಿ ಹೇಳಿತು. ಆಮ್ ಆದ್ಮಿ ಪಕ್ಷಕ್ಕೆ ಪ್ರಬಲ ಪೈಪೋಟಿ ಒಡ್ಡಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೂಡ 2500 ರೂ. ಘೋಷಿಸಿತು.
ಫಲಿತಾಂಶ: 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 48 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತ ಪಡೆದುಕೊಂಡಿತು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದೇ ‘ಮಹಿಳಾ ಸಮೃದ್ಧಿ ಯೋಜನೆ’ಯನ್ನು ಉದ್ಘಾಟಿಸಿ, ನೇರ ನಗದು ವರ್ಗಾವಣೆಗೆ ಚಾಲನೆ ನೀಡಿದರು. ದೆಹಲಿ ಸರ್ಕಾರ ಈ ಯೋಜನೆಗೆ ವರ್ಷಕ್ಕೆ 5100 ರೂ. ಕೋಟಿ ರೂ. ಮೀಸಲಿಟ್ಟಿದೆ. ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗುತ್ತಿದೆ.
ಆಂಧ್ರಪ್ರದೇಶ, ಸರ್ಕಾರವೇ ಬದಲಾಯಿತು
ಆಂಧ್ರಪ್ರದೇಶದಲ್ಲಿ ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಜನಪ್ರಿಯತೆ ಹೊಂದಿತ್ತು. ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಮರಳಲು ಹಲವು ಆಶ್ವಾಸನೆಗಳನ್ನು ನೀಡಿತು. ಮುಖ್ಯವಾಗಿ, ಮಹಿಳೆಯರಿಗೆ ಸ್ತ್ರೀಶಕ್ತಿ ಯೋಜನೆಯಡಿ ಆಂಧ್ರ ಸಾರಿಗೆಯ ಬಸ್ಗಳಲ್ಲಿ ಉಚಿತ ಪ್ರಯಾಣ ಮತ್ತು ಮಹಾಶಕ್ತಿ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ತಿಂಗಳು 1500 ರೂ. ಆರ್ಥಿಕ ನೆರವು. ಇದಲ್ಲದೆ, ಬಡ ಕುಟುಂಬಗಳ ಮಹಿಳೆಯರಿಗೆ ವರ್ಷಕ್ಕೆ ಮೂರು ಎಲ್ಪಿಜಿ ಸಿಲಿಂಡರ್ ಉಚಿತ ಕೊಡುಗೆ. 2024ರ ಮೇ ತಿಂಗಳಲ್ಲಿ ಚುನಾವಣೆ ನಡೆಯಿತು.
ಅಚ್ಚರಿಯ ಫಲಿತಾಂಶ: ಚುನಾವಣೆಯ ಮುನ್ನ ನೀಡಲಾದ ಈ ಆಶ್ವಾಸನೆಗಳು ಭಾರಿ ಮೋಡಿ ಮಾಡಿದವು. 175ರಲ್ಲಿ 164 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತೆಲುಗುದೇಶಂ ಅಧಿಕಾರಕ್ಕೆ ಬಂತು. ಸಿಎಂ ಚಂದ್ರಬಾಬು ನಾಯ್ಡು ಈ ಮೂರೂ ಆಶ್ವಾಸನೆಗಳನ್ನು ಈಡೇರಿಸಿದ್ದಾರೆ.
ಒಡಿಶಾ, ಬಿಜೆಪಿಗೆ ಮೊದಲ ಬಾರಿ ಅಧಿಕಾರ
ಒಡಿಶಾದಲ್ಲಿ ಬಿಜು ಜನತಾದಳ ಪಕ್ಷ ದೀರ್ಘಾವಧಿಗೆ ಆಳ್ವಿಕೆ ನಡೆಸಿತು. ನವೀನ್ ಪಟ್ನಾಯಕ್ 17ಕ್ಕೂ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. 2024ರ ಮೇ-ಜೂನ್ನಲ್ಲಿ ಇಲ್ಲಿನ ವಿಧಾನಸಭೆಗೆ ಚುನಾವಣೆ ನಡೆಯಿತು. ಪ್ರಚಾರದ ಸಮಯದಲ್ಲೇ ಬಿಜೆಪಿ, ಗೆದ್ದುಬಂದರೆ ಬಡ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿತು.
ಮೋದಿಯಿಂದ ಉದ್ಘಾಟನೆ: ಫಲಿತಾಂಶ ಘೋಷಣೆಯಾದಾಗ ಬಿಜು ಜನತಾದಳದ (ಬಿಜೆಡಿ) 24 ವರ್ಷಗಳ ಆಳ್ವಿಕೆ ಕೊನೆಗೊಂಡಿತ್ತು. 147ರಲ್ಲಿ 78 ಸ್ಥಾನಗಳನ್ನು ಗೆದ್ದ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂತು. 2024ರ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಭುವನೇಶ್ವರದಲ್ಲಿ ‘ಸುಭದ್ರಾ’ ಯೋಜನೆಯನ್ನು ಉದ್ಘಾಟಿಸಿದರು. ಇದರನ್ವಯ 21ರಿಂದ 60 ವರ್ಷದ ಬಡ ಮಹಿಳೆಯರಿಗೆ ವರ್ಷಕ್ಕೆ 10 ಸಾವಿರ ರೂ. ನೆರವನ್ನು ಎರಡು ಕಂತುಗಳಲ್ಲಿ ಒದಗಿಸಲಾಗುತ್ತಿದೆ.
ಮಧ್ಯಪ್ರದೇಶ, ತಾವರೆ ಅರಳಿತು
ಬಿಜೆಪಿ ಸರ್ಕಾರ 2023ರ ಜನವರಿ 28ರಂದು ‘ಲಾಡಲಿ ಬಹನಾ’ ಯೋಜನೆಯನ್ನು ಉದ್ಘಾಟಿಸಿತು. 1.2 ಕೋಟಿ ಬಡ ಮಹಿಳೆಯರಿಗೆ ತಿಂಗಳಿಗೆ 1250 ರೂ. ನೆರವು ಈ ಮೂಲಕ ದೊರೆಯಿತು. 2023ರ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರು ಬಿಜೆಪಿಯತ್ತ ಒಲವು ತೋರಿದರು. ಪರಿಣಾಮ, 230 ಕ್ಷೇತ್ರಗಳ ಪೈಕಿ 164ರಲ್ಲಿ ಗೆದ್ದು ಬಿಜೆಪಿ ಅಧಿಕಾರ ಉಳಿಸಿಕೊಂಡಿತು.
ಈಗಿನ ಸ್ಥಿತಿ: ಮುಖ್ಯಮಂತ್ರಿ ಮೋಹನ್ ಯಾದವ್ ನೆರವಿನ ಮೊತ್ತವನ್ನು 1250 ರೂ.ನಿಂದ 1500 ರೂ.ಗೆ ಹೆಚ್ಚಿಸಿದ್ದಾರೆ.
ತೆಲಂಗಾಣ, ಬಂಪರ್ ಉಡುಗೊರೆ
ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಅಧಿಕಾರವಿತ್ತು. 2023ರ ನವೆಂಬರ್ನಲ್ಲಿ ಚುನಾವಣೆ ನಡೆಯಿತು. ಚುನಾವಣೆಯ ಕೆಲ ತಿಂಗಳು ಮುನ್ನವೇ ಕಾಂಗ್ರೆಸ್ ಮಹಿಳೆಯರಿಗೆ ಭರ್ಜರಿ ಕೊಡುಗೆ ಘೋಷಿಸಿತು. ಪರಿಣಾಮ, 119ರಲ್ಲಿ 64 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿತು.
ಈಡೇರಿದ ಭರವಸೆ: ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಹಿಳೆಯರಿಗೆ ನೀಡಿದ ಭರವಸೆ ಈಡೇರಿಸಿದ್ದಾರೆ. ಮಹಿಳೆಯರಿಗೆ ತೆಲಂಗಾಣ ಸಾರಿಗೆಯಲ್ಲಿ ಉಚಿತ ಪ್ರಯಾಣ, 500 ರೂ.ಗೆ ಎಲ್ಪಿಜಿ ಸಿಲಿಂಡರ್ ಒದಗಿಸಲಾಗಿದೆ. ‘ಮಹಾಲಕ್ಷ್ಮಿ’ ಯೋಜನೆಯಡಿ ಬಡ ಮಹಿಳೆಯರಿಗೆ ತಿಂಗಳಿಗೆ 2500 ರೂ. ನೆರವು ನೀಡಲಾಗುತ್ತಿದೆ.
ಜಾರ್ಖಂಡ್, ಗೆಲುವಿನಲ್ಲಿ ನಿರ್ಣಾಯಕ ಅಂಶ
ಬುಡಕಟ್ಟು ರಾಜ್ಯ ಜಾರ್ಖಂಡ್ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸರ್ಕಾರವು ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳ ಮುನ್ನ ಅಂದರೆ 2024ರ ಆಗಸ್ಟ್ 18ರಂದು ‘ಜಾರ್ಖಂಡ್ ಮುಖ್ಯಮಂತ್ರಿ ಮಯ್ಯಾ ಸಮ್ಮಾನ್ ಯೋಜನೆ’ಯನ್ನು ಆರಂಭಿಸಿತು. ಇದರನ್ವಯ ತಿಂಗಳಿಗೆ 1 ಸಾವಿರ ರೂ. ನೆರವನ್ನು ಮಹಿಳೆಯರಿಗೆ ಒದಗಿಸಲಾಯಿತು. ನವೆಂಬರ್ನಲ್ಲಿ ಚುನಾವಣೆ ನಡೆಯುವ ಮುನ್ನ ನಾಲ್ಕು ಕಂತುಗಳಲ್ಲಿ ಒಟ್ಟು 4 ಸಾವಿರ ರೂ. ಮಹಿಳೆಯರ ಖಾತೆಗಳಿಗೆ ಜಮೆಯಾಯಿತು.
ಗೆಲುವು ಒಲಿಯಿತು: ಜೆಎಂಎಂ ನೇತೃತ್ವದ ಐಎನ್ಡಿಐಎ ಒಕ್ಕೂಟ 81ರಲ್ಲಿ 56 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಹೇಮಂತ್ ಸೊರೇನ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಜೆಎಂಎಂ ಚುನಾವಣೆಯ ಮುನ್ನ ನೀಡಿದ ಆಶ್ವಾಸನೆಯಂತೆ ಪ್ರಸಕ್ತ ಮಹಿಳೆಯರ ಖಾತೆಗೆ 2500 ರೂ. 2025ರ ಜನವರಿಯಿಂದ ಜಮೆಯಾಗುತ್ತಿದೆ.
ಮಹಾರಾಷ್ಟ್ರ, ನಂಬಿಕೆ ಹುಸಿಯಾಗಲಿಲ್ಲ
ಮಹಾರಾಷ್ಟ್ರದಲ್ಲಿ ಎನ್ಡಿಎ ‘ಮಹಾಯುತಿ’ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರ ವಿಧಾನಸಭೆಗೆ 2024ರ ನವೆಂಬರ್ನಲ್ಲಿ ಚುನಾವಣೆ ನಡೆಯಿತು. ಅದಕ್ಕೂ ಮುನ್ನವೇ ಆಗಿನ ಮುಖ್ಯಮಂತ್ರಿ ಏಕನಾಥ್ ಸಂಭಾಜಿ ಶಿಂಧೆ, ಬಡ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1500 ರೂ. ವಿತರಿಸುವ ‘ಮಾಝಿ ಲಾಡಕಿ ಬಹಿಣ್ ಯೋಜನಾ’ಗೆ ಚಾಲನೆ ನೀಡಿದರು. 2024ರ ಜೂನ್ನಲ್ಲಿ ಕ್ಯಾಬಿನೇಟ್ ಸಮ್ಮತಿ ಬಳಿಕ, 2024ರ ಆಗಸ್ಟ್ 17ರಂದು ಪುಣೆಯಲ್ಲಿ ಯೋಜನೆಯನ್ನು ಉದ್ಘಾಟಿಸಲಾಯಿತು. ಚುನಾವಣೆಗೆ ಎರಡು ತಿಂಗಳಿರುವಾಗಲೇ ಇದನ್ನು ಜಾರಿಗೆ ತಂದಿದ್ದರಿಂದ ಮಹಾಯುತಿ ಪಾಲಿಗೆ ಗೇಮ್ ಚೇಂಜರ್ ಆಗಿ ಸಾಬೀತಾಯಿತು.
ಏನಾಯಿತು?: 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಗೆದ್ದ ಮಹಾಮೈತ್ರಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿತು. ಆಗ ಉಪಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ದೇವೇಂದ್ರ ಫಡ್ನವೀಸ್ ಈಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರೆ, ಸಿಎಂ ಆಗಿದ್ದ ಏಕನಾಥ್ ಶಿಂಧೆ ಈಗಿನ ಸರ್ಕಾರದಲ್ಲಿ ಡಿಸಿಎಂ ಆಗಿದ್ದಾರೆ. ಮಹಿಳೆಯರಿಗೆ ನಗದು ವರ್ಗಾವಣೆ ಯೋಜನೆ ಮುಂದುವರಿದಿದ್ದು, ಪ್ರಸ್ತುತ ಮಹಾರಾಷ್ಟ್ರದ 2.1 ಕೋಟಿ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. 1500 ರೂ. ನೆರವನ್ನು 2100 ರೂ.ಹೆಚ್ಚಿಸಲು ನಿರ್ಧರಿಸಲಾಗಿದ್ದು, ಶೀಘ್ರ ಅನುಷ್ಠಾನಕ್ಕೆ ಬರಲಿದೆ.
ಹರಿಯಾಣ, ವಿಜಯ ಕೊಡಿಸಿದ ಲಾಡೋ ಲಕ್ಷ್ಮಿ
ಹರಿಯಾಣದಲ್ಲಿ 2024ರ ಅಕ್ಟೋಬರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಚುನಾವಣೆ ಮುನ್ನ ಹೊರಡಿಸಲಾದ ಪ್ರಣಾಳಿಕೆಯಲ್ಲಿ ಬಿಜೆಪಿ ಬಡ ಮಹಿಳೆಯರಿಗೆ ಪ್ರತಿ ತಿಂಗಳು 2100 ರೂ. ನೀಡುವ ಆಶ್ವಾಸನೆ ನೀಡಿತು ಮತ್ತು ಪ್ರಚಾರ ಸಭೆಗಳಲ್ಲೂ ಇದನ್ನು ಪ್ರಮುಖವಾಗಿ ಬಿಂಬಿಸಿ, ಹೆಣ್ಣುಮಕ್ಕಳ ಮತ ಸೆಳೆಯಲು ಯತ್ನಿಸಿತು.
ಏನಾಯಿತು?: 90ರಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ‘ದೀನದಯಾಳ ಲಾಡೋ ಲಕ್ಷ್ಮಿ’ ಯೋಜನೆಯನ್ನು 2025ರ ಸೆಪ್ಟೆಂಬರ್ನಲ್ಲಿ ಉದ್ಘಾಟಿಸಿದರು. 23 ವರ್ಷ ತುಂಬಿದ ಹಾಗೂ ಮೇಲ್ಪಟ್ಟ ಬಡ ಮಹಿಳೆಯರಿಗೆ ತಿಂಗಳಿಗೆ 2100 ರೂ. ನೆರವು ನೀಡಲಾಗುತ್ತಿದ್ದು, ಈ ಯೋಜನೆಯ ಮೂಲಕ ಮೊದಲ ಕಂತಿನ ಹಣವನ್ನು ನವೆಂಬರ್ 1ರಂದು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.
ವಿಧಾನಸಭೆ ಚುನಾವಣೆ 2023ರ ನವೆಂಬರ್ನಲ್ಲಿ ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಮಹಿಳೆಯರಿಗೆ ಆರ್ಥಿಕ ನೆರವಿನ ಭರವಸೆ ನೀಡಿ, ಪ್ರಚಾರಸಭೆಗಳಲ್ಲಿ ಪ್ರಸ್ತಾಪಿಸಿದವು. ಕೊನೆಗೂ, 90ರಲ್ಲಿ 54 ಕ್ಷೇತ್ರಗಳನ್ನು ಗೆದ್ದ ಬಿಜೆಪಿ ಅಧಿಕಾರ ಹಿಡಿಯಿತು. ‘ಮಹತಾರಿ ವಂದನ ಯೋಜನಾ’ ಮೂಲಕ ಬಡ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂ. ನೆರವು ನೀಡಲಾಗುತ್ತಿದೆ.
ಪರಿಣಾಮಗಳು
1.ಮಹಿಳಾ ಮತಬ್ಯಾಂಕ್ ಪ್ರಬಲವಾಗಿ ಹೊಮ್ಮಲು ಸಾಧ್ಯವಾಗಿದ್ದು, ಮಹಿಳೆಯರು ತಮ್ಮ ವೋಟಿನ ಶಕ್ತಿಯನ್ನು ಅರಿತುಕೊಂಡಿದ್ದಾರೆ ಮತ್ತು ತಾವು ಮಾಡುವ ಮತದಾನ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಭಾವಿಸಿದ್ದಾರೆ.
2.ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೂರನೇ ಅವಧಿಯ 100 ದಿನಗಳಲ್ಲಿ 11 ಲಕ್ಷ ಹೊಸ ‘ಲಖ್ಪತಿ ದೀದಿ’ಗಳಿಗೆ ಪ್ರಮಾಣಪತ್ರ ನೀಡಿದ್ದಾರೆ. ಸರ್ಕಾರದ ಅಂಕಿಅಂಶದ ಪ್ರಕಾರ 1 ಕೋಟಿಗಿಂತ ಅಧಿಕ ಲಖ್ಪತಿ ದೀದಿಯರು ಈಗ ವರ್ಷಕ್ಕೆ ಒಂದು ಲಕ್ಷ ರೂ.ಗಿಂತ ಅಧಿಕ ಗಳಿಕೆ ಮಾಡುತ್ತಿದ್ದಾರೆ.
3,ಪ್ರಧಾನಮಂತ್ರಿ ಆವಾಸ್ ಯೋಜನೆ’ಯಡಿ ಶೇಕಡ 70ಕ್ಕಿಂತ ಹೆಚ್ಚು ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ.
4.ಪ್ರಧಾನಮಂತ್ರಿ ಉಜ್ವಲಾ ಯೋಜನೆ’ಯಡಿ 10 ಕೋಟಿಗೂ ಅಧಿಕ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ.
5.ಮೋದಿ ಸರ್ಕಾರ 2023ರ ಸೆಪ್ಟೆಂಬರ್ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದೆ. ಇದರನ್ವಯ 33% ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಲಿವೆ. ಅಂದರೆ ಲೋಕಸಭೆಯ 543 ಕ್ಷೇತ್ರಗಳ ಪೈಕಿ 181 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಲಿವೆ.