

| ಡಾ. ರಕ್ಷಾ ಯು.ರಾವ್
ಕರೊನಾ ವೈರಸ್ನಿಂದ ಇಡೀ ಜಗತ್ತೇ ತತ್ತರಿಸಿದೆ. ದೇಶ, ಜಾತಿ, ಜನಾಂಗ, ಧರ್ಮ, ವಯಸ್ತು, ಮೇಲು, ಕೀಳು ಯಾವುದನ್ನೂ ನೋಡದೆ ಅದು ಅಟ್ಟಹಾಸ ಮೆರೆಯುತ್ತಿದೆ. ಆದರೆ ಅದರಲ್ಲೂ ಒಂದು ಆಶ್ಚರ್ಯಕರ ಸಂಗತಿಯೆಂದರೆ, ಕರೊನಾ ಸೋಂಕು ತಗುಲಿದ್ದು ಮತ್ತು ಸಾವಿನ ಪ್ರಮಾಣ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು!
ಇದಕ್ಕೆ ಕಾರಣವಾಗಿರುವ ಜೈವಿಕ ಅಂಶಗಳು ಯಾವುವು ಎಂಬುದನ್ನು ವಿಶ್ಲೇಷಿಸೋಣ. ಸಹಜ ಹಾಗೂ ಹೊಂದಾಣಿಕೆಯ ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಭಿನ್ನವಾಗಿರುತ್ತವೆ. ಬಹುಶಃ ಇದು ಲೈಂಗಿಕ ನಿರ್ದಿಷ್ಟತೆಗೆ ಸಂಬಂಧಿಸಿದೆ. ಎಕ್ಸ್ ಕ್ರೋಮೋಸೋಮ್ ಹೆಚ್ಚಿನ ಸಾಂದ್ರತೆಯನ್ನು ಹಾಗೂ ರೋಗನಿರೋಧಕ ಸಂಬಂಧಿತ ವಂಶವಾಹಿಗಳನ್ನು ಒಳಗೊಂಡಿದೆ. ಆದ್ದರಿಂದ ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ತಮ್ಮಲ್ಲಿರುವ ಎಕ್ಸ್ ಕ್ರೋಮೋಸೋಮ್ ಸಹಾಯದಿಂದ ಪಡೆಯುತ್ತಾರೆ.
ಪುರುಷರಲ್ಲಿ ರೋಗನಿರೋಧಕ ಪ್ರತಿಕ್ರಿಯೆಗಳ ಈ ಭೇದಾತ್ಮಕ ನಿಯಂತ್ರಣ ಹಾಗೂ ಆಂಡ್ರೋಜನ್ ಹಾಮೋನುಗಳು, ಮಹಿಳೆಯರಲ್ಲಿನ ಲೈಂಗಿಕ ವರ್ಣತಂತು ಜೀನ್ಗಳ ಹಾಗೂ ಈಸ್ಟ್ರೋಜನ್-ಪ್ರೋಜಸ್ಟರಾನ್ ಹಾಮೋನುಗಳು ಸೋಂಕು ತಗುಲಿದ ನಂತರ ಲೈಂಗಿಕ ನಿರ್ದಿಷ್ಟ ರೋಗದ ಫಲಿತಾಂಶಗಳಿಗೆ ಹಾಗೂ ಲೈಂಗಿಕ ಅವಲಂಬಿತ ಉತ್ಪಾದನೆಗೆ ಕಾರಣವಾಗಿವೆ. ಸಾರ್ಸ್ ಕರೊನಾ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ೆ ಕಾರಣವಾಗುವ ಪರಿಯನ್ನು ಗಮನಿಸಿದರೆ ಈ ವೈರಾಣು ಅತಿಥಿ ದೇಹದಲ್ಲಿನ ಕಣಗಳನ್ನು ಪ್ರವೇಶಿಸಲು ಮತ್ತು ಎಸಿಇ-2ಗೆ (ಆಂಜಿಯೋಟೆನ್ಸಿನ್- ಪರಿವರ್ತಿಸುವ ಕಿಣ್ವ-2) ಅಂಟಿಕೊಳ್ಳಲು ತನ್ನ ಸ್ಪೈಕ್ ಪ್ರೊಟೀನ್ ಅನ್ನು ಬಳಸುತ್ತದೆ. ಅತಿಥಿ ದೇಹದ ಕಣಗಳ ಎಸಿಇ-2 ಹಾಗೂ ಕರೊನಾ ವೈರಸ್ಗೆ ಪ್ರಬಲವಾದ ಸಂಬಂಧವನ್ನು ಈಗಾಗಲೇ ವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ. ಈ ಎಸಿಇ-2 ಹುಡುಕಾಟದಲ್ಲಿ ವೈರಸ್ ಶ್ವಾಸಕೋಶ, ಕರುಳು, ಮೂತ್ರಪಿಂಡ, ಹೃದಯ, ಕೇಂದ್ರ ನರಮಂಡಲಗಳೆಲ್ಲವನ್ನೂ ಆವರಿಸುತ್ತದೆ.
ಮಹಿಳೆಯರಿಗಿಂತ ಪುರುಷರು ಹೆಚ್ಚಿನ ಪ್ಲಾಸ್ಮಾ ಎಸಿಇ-2 ಮಟ್ಟವನ್ನು ಹೊಂದಿರುತ್ತಾರೆ. ಹಾಗೆಯೇ ಹೃದಯ ತೊಂದರೆ ಇರುವ ರೋಗಿಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಎಸಿಇ-2 ಮಟ್ಟ ಇರುತ್ತದೆ. ಹಾಗಾಗಿ ಪುರುಷರು ಮಹಿಳೆಯರಿಗಿಂತ ಹೆಚ್ಚಾಗಿ ಈ ವೈರಾಣುವಿನ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುತ್ತಾರೆ. ಆದ್ದರಿಂದ ಪುರುಷರು ಸೋಂಕಿಗೆ ಹೆಚ್ಚು ಒಳಗಾಗಬಹುದು. ಅಥವಾ ರೋಗದ ಪರಿಣಾಮ ಮತ್ತು ತೀವ್ರತೆ, ಮರಣ, ಮಾನಸಿಕ ಪ್ರಭಾವಗಳನ್ನು ಹೆಚ್ಚಾಗಿ ಅನುಭವಿಸಬಹುದು.
ವರ್ತನೆ ಮತ್ತು ಮಾನಸಿಕ ಅಂಶಗಳು: ಪುರುಷರು ಹಾಗೂ ಮಹಿಳೆಯರಲ್ಲಿ ಕೋವಿಡ್ನ ಪ್ರತಿರಕ್ಷಣಾ ಪ್ರತಿಕ್ರಿಯೆಗಳ ಭಿನ್ನತೆಯಲ್ಲಿ ಸಾಮಾಜಿಕ ವರ್ತನೆಯ ಪ್ರಭಾವಗಳೂ ಕಂಡುಬರುತ್ತವೆ. ಮಹಿಳೆಯರೊಂದಿಗೆ ಹೋಲಿಸಿದರೆ, ಪುರುಷರು ಗಂಡಾಂತರ ಉಂಟು ಮಾಡುವ ಅಪಾಯದ ನಡವಳಿಕೆಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ ಎಂಬ ಅಂಶ ಕೋವಿಡ್ ಪ್ರಕರಣಗಳ ಮೊದಲ ತರಂಗದ ಆರಂಭದಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ ದೃಢಪಟ್ಟಿದೆ.
ಮತ್ತೊಂದು ಅಧ್ಯಯನದ ಪ್ರಕಾರ ದೊಡ್ಡ ಸಾರ್ವಜನಿಕ ಸಭೆಗಳಿಂದ ದೂರ ಇರುವುದು ಹಾಗೂ ಇತರರ ಜತೆ ನಿಕಟ ದೈಹಿಕ ಸಂಪರ್ಕವನ್ನು ತಪ್ಪಿಸಿಕೊಳ್ಳುವಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಳಜಿ ವಹಿಸುತ್ತಾರೆ. ಅದಲ್ಲದೆ ಕೋವಿಡ್ ಕಾಯಿಲೆಯ ತೀವ್ರತೆ ಹೆಚ್ಚಿಸುವ ತಂಬಾಕು ಸೇವನೆ ಹಾಗೂ ಕುಡಿತದ ವ್ಯಸನಗಳಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.
ಮಹಿಳೆಯರಿಗೆ ಹೋಲಿಸಿದರೆ ಪುರುಷರು ಕೋವಿಡ್ ತಡೆಗಟ್ಟುವ ಕ್ರಮಗಳಾದ ಕೈಶುಚಿತ್ವ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮುಖ ಗವಸು ಬಳಸುವುದನ್ನು ಹೆಚ್ಚಾಗಿ ಪಾಲಿಸುವುದಿಲ್ಲ. ಆರೋಗ್ಯ ಸೇವೆಯನ್ನು ಅಗತ್ಯವಿದ್ದಾಗ ತಕ್ಷಣವೇ ಬಳಸುವುದಿಲ್ಲ. ಲಿಂಗ ತಾರತಮ್ಯದ ಜತೆಗೆ ಈ ವಿಷಯದಲ್ಲಿ ವಯಸ್ಸು ಕೂಡ ಒಂದು ಅಂಶವಾಗಿ ಕಂಡುಬಂದಿದೆ. ಕೆಲವು ಅಧ್ಯಯನಗಳ ಪ್ರಕಾರ, ಹೆಚ್ಚಿನ ವಯಸ್ಕ ಪುರುಷರು, ಕೋವಿಡ್ನ ತೀವ್ರತೆ ಪ್ರಭಾವವನ್ನು ಗ್ರಹಿಸಿದರೂ ವಯಸ್ಸಿಗೆ ಅನುಗುಣವಾಗಿ ಬೇಕಾದ ಸೂಕ್ತ ನಿಯಮಗಳನ್ನು ಪಾಲಿಸುವ ಬದಲಾವಣೆಗಳನ್ನು ತಮ್ಮ ಜೀವನದಲ್ಲಿ ತಂದುಕೊಳ್ಳುವಲ್ಲಿ ಸೋಲುತ್ತಾರೆ. ಇಲ್ಲವೆ, ಅಳವಡಿಸಿಕೊಳ್ಳಲು ನಿರಾಕರಿಸುತ್ತಾರೆ.
ಲಿಂಗ, ವಯಸ್ಸು, ಸಾಮಾಜಿಕ ವರ್ತನೆ ಹೊರತುಪಡಿಸಿ ಇತರ ಅಂಶಗಳನ್ನು ಹುಡುಕಿದಾಗ ಉದ್ಯೋಗವೂ ಮುಖ್ಯವಾಗುತ್ತದೆ. ಮಹಿಳೆಯರು ಬಹುಪಾಲು ಆರೋಗ್ಯ ರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿ ಅಗತ್ಯ ಕಾರ್ವಿುಕರಾಗಿ ಕೆಲಸ ಮಾಡುತ್ತಾರೆ. ಪುರುಷರು ಕಡಿಮೆ ನುರಿತ ಅಥವಾ ಕಡಿಮೆ ಸಂಬಳದ ಅಗತ್ಯ ಕಾರ್ವಿುಕರೆಂದು ಪರಿಗಣಿಸಲಾದ ಉದ್ಯೋಗಗಳಲ್ಲಿ (ಉದಾಹರಣೆಗೆ, ಆಹಾರ ಸಂಸ್ಕರಣೆ, ಸಾರಿಗೆ, ಉಗ್ರಾಣ, ವಿತರಣೆ, ನಿರ್ವಣ, ಉತ್ಪಾದನೆ ಮುಂತಾದವು) ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಅಲ್ಲಿರುವ ಸಹಜ ಅಪಾಯದೊಂದಿಗೆ ಸೋಂಕಿಗೆ ಈಡಾಗುತ್ತಾರೆ.
ಅಂತೆಯೇ, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಾದ ಸಿಒಪಿಡಿ (ಶ್ವಾಸಕೋಶದ ತೊಂದರೆ), ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ, ಹೃದಯ ರಕ್ತನಾಳದ ಕಾಯಿಲೆ ಇವೆಲ್ಲವೂ ಪುರುಷರಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಕೋವಿಡ್ ಕಾಯಿಲೆ ಬಂದಾಗ ಅದರ ತೀವ್ರತೆ, ಅಸ್ವಸ್ಥತೆಯಿಂದ ಮರಣದ ಪ್ರಮಾಣವೂ ಅಧಿಕವಾಗಿ ಪುರುಷರಲ್ಲಿ ಕಾಣಸಿಗುತ್ತದೆ. ಹೀಗೆ, ಸಂಕ್ಷಿಪ್ತವಾಗಿ ಜೈವಿಕ, ಮಾನಸಿಕ ವರ್ತನೆಯ ವ್ಯತ್ಯಾಸಗಳಿಂದ ಪುರುಷರಲ್ಲಿ ಕೋವಿಡ್ ಪ್ರಭಾವ ಅಧಿಕ ಎಂಬುದನ್ನು ವೈಜ್ಞಾನಿಕವಾಗಿ ವಿವರಿಸಬಹುದಾಗಿದೆ.
(ಲೇಖಕರು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ, ಉಷಾ ನರ್ಸಿಂಗ್ ಹೋಮ್ ಶಿವಮೊಗ್ಗ)