

| ರಘುನಾಥ್ ಡಿ.ಪಿ.
ಭಾರತೀಯರಿಗೂ ಹಾಕಿ ಕ್ರೀಡೆಗೂ ಅವಿನಾಭಾವ ಸಂಬಂಧ. 80ರ ದಶಕದವರೆಗೂ ಈ ಕ್ರೀಡೆಯಲ್ಲಿ ಪುರುಷರೇ ಮಿಂಚುತ್ತಿದ್ದು, ವನಿತೆಯರು ಅಷ್ಟು ಆಸಕ್ತಿ ತೋರಿರಲಿಲ್ಲ. ಅ ವಾತಾವರಣಕ್ಕೀಗ ಫುಲ್ಸ್ಟಾಪ್ ಬಿದ್ದಿದೆ. ಮಹಿಳಾ ತಂಡವೂ ವಿಶ್ವದ ಬಲಿಷ್ಠ ತಂಡಗಳ ಜತೆ ಸೆಣಸಲು ಸಜ್ಜಾಗಿದೆ. ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಇದ್ದ ಅಡ್ಡಿ ಆತಂಕಗಳು ಅಷ್ಟಿಷ್ಟಲ್ಲ. ಆಟಗಾರ್ತಿಯರ ಛಲ ಹಾಗೂ ಹೋರಾಟದ ಮನೋಭಾವದಿಂದಾಗಿ ಸತತ 2ನೇ ಬಾರಿಗೆ ಭಾರತದ ಮಹಿಳೆಯರು ಒಲಿಂಪಿಕ್ಸ್ನಲ್ಲಿ ಆಡಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಫಲಿತಾಂಶ ಅಥವಾ ತಂಡದ ನಿರ್ವಹಣೆ ಏನೇ ಇರಲಿ, ಮುಂಬರುವ ಯುವ ಪೀಳಿಗೆಗೆ ಭಾರತ ಮಹಿಳಾ ತಂಡ ಮಾದರಿಯಾಗಿರುವುದಂತೂ ಸತ್ಯ. ಭವಿಷ್ಯದ ದೃಷ್ಟಿಯಿಂದ ತಂಡದಲ್ಲಿ ಅರ್ಧದಷ್ಟು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬಲಿಷ್ಠ ಯುರೋಪ್ ತಂಡಗಳ ಎದುರು ಹೋರಾಟಕ್ಕೆ ಸಜ್ಜಾಗಿದೆ. ಕರೊನಾ ಕಾಲದಲ್ಲಿ ಟೂರ್ನಿಯ ಪೂರ್ವಸಿದ್ಧತೆಗಾಗಿ ವಿದೇಶಗಳಲ್ಲೂ ಸರಣಿ ಆಡುವ ಮೂಲಕ ಸಜ್ಜಾಗಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಭಾರತ ಮಹಿಳಾ ತಂಡ ಮೊದಲ ಬಾರಿಗೆ ಸತತ 2ನೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದೆ. 1980ರ ಮಾಸ್ಕೋ ಒಲಿಂಪಿಕ್ಸ್ಗೆ ಮೊದಲ ಬಾರಿಗೆ ಭಾರತದ ಮಹಿಳೆಯರು ಅರ್ಹತೆ ಪಡೆದಿದ್ದರು. ಆ ಬಳಿಕ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು 36 ವರ್ಷ ಕಾಯಬೇಕಾಯಿತು. ಏಷ್ಯಾಡ್ ಹಾಗೂ ಕಾಮನ್ವೆಲ್ತ್ ಗೇಮ್ಸ್ಗಳಲ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದರೂ ಪ್ರತಿಷ್ಠಿತ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದೇ ಭಾರತದ ಪಾಲಿಗೆ ದೊಡ್ಡ ಸಾಧನೆಯಾಗಿದೆ. 2016ರ ರಿಯೋ ಒಲಿಂಪಿಕ್ಸ್ಗೆ ಭಾರತ ತಂಡ ಅರ್ಹತೆ ಗಿಟ್ಟಿಸಿಕೊಂಡಾಗ ಐತಿಹಾಸಿಕ ಸಾಧನೆ ಎಂದೇ ವಿಶ್ಲೇಷಿಸಲಾಗಿತ್ತು. ಇದಾದ ಬಳಿಕ 2016ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, 2017ರ ಏಷ್ಯಾಕಪ್ ಟೂರ್ನಿಗಳಲ್ಲಿ ಪ್ರಶಸ್ತಿ, 2018ರ ಏಷ್ಯಾಡ್ನಲ್ಲಿ ಬೆಳ್ಳಿ ಪದಕ ಗಳಿಸಿದ್ದಲ್ಲದೆ 2018ರ ಮಹಿಳಾ ವಿಶ್ವಕಪ್ನಲ್ಲಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿತ್ತು. ಇದರಿಂದ ವರ್ಷದಿಂದ ವರ್ಷಕ್ಕೆ ಮಹಿಳಾ ಹಾಕಿ ಪ್ರಗತಿಯತ್ತ ಸಾಗುತ್ತಿರುವುದು ಮಾತ್ರ ನಿಜ. ಇದೀಗ ಸತತ 2ನೇ ಬಾರಿ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಮೂಲಕ ಭರವಸೆ ಮೂಡಿಸಿದೆ.
ಯುವ ಆಟಗಾರ್ತಿಯರಿಗೆ ಮಣೆ: ಭವಿಷ್ಯದ ದೃಷ್ಟಿಯಿಂದ ಟೋಕಿಯೊ ಒಲಿಂಪಿಕ್ಸ್ ತಂಡದಲ್ಲಿ ಅರ್ಧದಷ್ಟು ಯುವ ಆಟಗಾರ್ತಿಯರಿಗೆ ಮಣೆ ಹಾಕಲಾಗಿದೆ. ತಂಡಕ್ಕೆ ಆಯ್ಕೆ ಮಾಡಲಾಗಿರುವ 16 ಆಟಗಾರ್ತಿಯರ ಪೈಕಿ 8 ಮಂದಿ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಆಡಲಿದ್ದಾರೆ. ಅನುಭವಿ ಆಟಗಾರ್ತಿ ರಾಣಿ ರಾಂಪಾಲ್ ತಂಡ ಮುನ್ನಡೆಸುತ್ತಿದ್ದು, ಉಳಿದ 8 ಮಂದಿ ರಿಯೋ ಒಲಿಂಪಿಕ್ಸ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಡ್ರಾ್ಯಗ್ ಫ್ಲಿಕರ್ ಗುರ್ಜಿತ್ ಕವರ್, ಉದಿತಾ, ನಿಶಾ, ನೇಹಾ, ನವನೀತ್ ಕೌರ್, ಶರ್ವಿುಳಾ ದೇವಿ ಲಾಲ್ರೆಮ್ ಸಿಯಾಮಿ ಹಾಗೂ ಸಲಿಮಾ ಟೆಟೆ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಆಡುತ್ತಿರುವ ಆಟಗಾರ್ತಿಯರು. ಈ ಪೈಕಿ ಲಾಲ್ರೆಮ್ ಸಿಯಾಮಿ, ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿರುವ ಮಣಿಪುರದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಸಲಿಮಾ ಟೆಟೆ 2018ರ ಯೂತ್ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ತಂಡ ಮುನ್ನಡೆಸಿದ್ದರು.