ತೋಳ ಮತ್ತು ಕೊಕ್ಕರೆ: ಮಕ್ಕಳ ಕಥೆ

ತೋಳ ಕೊಕ್ಕರೆ
Published on

ಒಂದು ದಿನ ಒಂದು ಹೊಟ್ಟೆಬಾಕ ತೋಳ ಮಾಂಸವನ್ನು ಗಬಗಬನೆ ತಿನ್ನುತ್ತಿರುವಾಗ ಅಗಿಯದೆ ಹಾಗೇ ಉಳಿದಿದ್ದ ಮಾಂಸ ಗಂಟಲಲ್ಲಿ ಸಿಕ್ಕಿಕೊಂಡಿತು. ಇದರಿಂದಾಗಿ ತೋಳಕ್ಕೆ ಉಸಿರಾಡಲು ಕಷ್ಟವಾಗಿ, ಕಣ್ಣಿನಲ್ಲಿ ನೀರು ತುಂಬಿಕೊಂಡು, ‘ಯಾರಾದರೂ ನನ್ನ ಗಂಟಲಲ್ಲಿ ಸಿಲುಕಿಕೊಂಡಿರುವ ಮೂಳೆಯನ್ನು ತೆಗೆದು ಜೀವ ಉಳಿಸಿ. ನಿಮಗೆ ಅಮೂಲ್ಯವಾದ ಬಹುಮಾನ ಕೊಡುತ್ತೇನೆ’ ಎಂದು ಅಂಗಲಾಚಿತು. ಆದರೆ ತೋಳದ ಮಾತಿಗೆ ಯಾರ ಮನಸ್ಸೂ ಕರಗಲಿಲ್ಲ. ಹಾಗಾಗಿ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ತೋಳದ ಸಂಕಟ ನೋಡಲಾಗದೆ ಕೊಕ್ಕರೆ ಅಯ್ಯೋ ಎನ್ನುತ್ತಾ, ‘ತೋಳಪ್ಪ ದೊಡ್ಡದಾಗಿ ಬಾಯಿ ತೆಗೆ’ ಎಂದಿತು. ತೋಳ ಬಾಯಿ ತೆರೆದು ಕಣ್ಣು ಮುಚ್ಚಿಕೊಂಡಿತು. ಆಗ ಕೊಕ್ಕರೆ ತನ್ನ ಉದ್ದವಾದ ಕೊಕ್ಕಿನಲ್ಲಿ ಗೇಣು ಉದ್ದದ ಮರದ ತುಂಡೊಂದನ್ನು ತೆಗೆದುಕೊಂಡು ತೋಳದ ಬಾಯಿಯೊಳಗೆ ಅಡ್ಡಲಾಗಿ ಇಟ್ಟಿತು.

ನಂತರ ತನ್ನ ಕೊಕ್ಕನ್ನು ಚಾಚಿ ತೋಳದ ಗಂಟಲಲ್ಲಿ ಸಿಲುಕಿದ್ದ ಮೂಳೆಯನ್ನು ಹೊರತೆಗೆಯಿತು. ನಂತರ ಬಾಯಿಗೆ ಅಡ್ಡಲಾಗಿ ಇಟ್ಟಿದ್ದ ಮರದ ತುಂಡನ್ನು ತೆಗೆಯುತ್ತಿದ್ದಂತೆ ತೋಳ ತಟಕ್ಕನೆ ಬಾಯಿ ಮುಚ್ಚಿತು. ‘ಸದ್ಯ ಬಾಯೊಳಗೆ ಕಡ್ಡಿಯಿಟ್ಟಿದ್ದು ಒಳ್ಳೆಯದಾಯಿತು ಎಂದು ಕೊಳ್ಳುತ್ತಾ’, ಕೊಕ್ಕರೆ ತೋಳವನ್ನು ಉದ್ದೇಶಿಸಿ ಹೀಗೆ ಹೇಳಿತು, ‘ನೀನು ಹೇಳಿದಂತೆ ಬಹುಮಾನ ಕೊಟ್ಟರೆ ನಾನು ಹೊರಡುವೆನು’ ಎಂದಿತು. ಆಗ ತೋಳ ನಗುತ್ತಾ, ‘ನಿನಗೆ ಬಹುಮಾನವೇ? ಯಾವ ಕಾರಣಕ್ಕೆ ಕೊಡಲಿ? ನನ್ನ ಬಾಯಿಯೊಳಗೆ ನಿನ್ನ ಕೊಕ್ಕನ್ನು ಇಟ್ಟಾಗ ಅದನ್ನು ಕಡಿಯದೆ ಬಿಟ್ಟಿದ್ದೇನಲ್ಲ ಅದೇ ನಿನಗೆ ಬಹುಮಾನ’ ಎಂದಿತು. ಕೊಕ್ಕರೆ ಪೇಚು ಮುಖ ಮಾಡಿಕೊಂಡು ತನ್ನ ಮನೆಗೆ ಹಿಂದಿರುಗಿತು.

ನೀತಿ: ಕುಬುದ್ಧಿಯವರಿಗೆ ಉಪಕಾರ ಮಾಡಿದರೂ ಅವರ ಬುದ್ಧಿ ಅಷ್ಟೇ!

| ಕೀರ್ತನಾ ಸಿ.ಇ 2ನೇ ತರಗತಿ, ರಾಧಾಕೃಷ್ಣ ವಿದ್ಯಾಶಾಲೆ, ಚನ್ನರಾಯಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net