

ಅದೊಂದು ಇಂಪಾರ್ಟೆಂಟು ಪ್ರಶ್ನೆ.
ನೀವು ನಿಮ್ಮ ಒಂದು ದಿನದ ಅತಿ ಹೆಚ್ಚಿನ ಅವಧಿಯನ್ನು ಯಾರೊಂದಿಗೆ ಕಳೆಯುತ್ತೀರಿ? ಮನೆಯವರು, ಸಹೋದ್ಯೋಗಿಗಳು, ಕ್ಲೈಂಟ್ಸ್, ಗೆಳೆಯರು- ಓಕೆ, ಓಕೆ. ನಾನು ಕೇಳಿದ್ದು ಅದನ್ನಲ್ಲ. ನಿತ್ಯ ರೂಟೀನಿನಲ್ಲಿ ನಾವು ಬೇಕಿದ್ದೋ ಬೇಕಿಲ್ಲದೆಯೋ ಒಂದಷ್ಟು ಜನರೊಂದಿಗೆ ಟೈಮು ಕಳೆಯಲೇಬೇಕು. ಅದನ್ನು ಬಿಟ್ಟು ಮಾತಾಡೋಣ. ನಮ್ಮ ಬದುಕಿಗೊಂದು ಪ್ರೖೆಮ್ ಟೈಮ್ ಅಂತ ಇರುವ ಹಾಗೆಯೇ ಒಂದು ದಿನದ ಇಪ್ಪತ್ನಾಲ್ಕು ಗಂಟೆಗಳಿಗೂ ಒಂದು ಪ್ರೖೆಮ್ ಟೈಮ್ ಅಂತ ಇರುತ್ತದೆ. ಸಂಜೆಗೆ ಸಿಗುವ ಗೆಳೆಯನೊಂದಿಗೆ ಕಳೆಯುವ ಕಾಲ. ಭಾನುವಾರ ಭೇಟಿಯಾಗುವ ಬಂಧು. On appointment ಸಿಕ್ಕುವ ಫ್ರೆಂಡ್-ಫಿಲಾಸಫರ್-ಗೈಡ್- ಹೀಗೆ ಯಾರು ಬೇಕಾದರೂ ಆಗಬಹುದು.
ಅಂಥದೊಂದು ಪ್ರೖೆಮ್ ಟೈಮ್ ನೀವು ಯಾರೊಂದಿಗೆ ಕಳೆಯುತ್ತೀರಿ ಎಂಬುದು ತುಂಬ ಮುಖ್ಯ. ಅದು ನಿಮ್ಮ ಬದುಕನ್ನು ಬದಲಿಸಬಲ್ಲುದು. ಆ ಸಮಯಕ್ಕೆ ಸಿಗುವ ಮಿತ್ರನ ಬಗ್ಗೆ ತುಂಬ ಚೂಸಿ ಆಗಿರಿ. ಕೆಲವು ಸಲ ನಮಗೇ ಗೊತ್ತಿಲ್ಲದೆ ಒಂದು ಕೆಟ್ಟ ಸೆಲೆಕ್ಷನ್ ಮಾಡಿಕೊಂಡುಬಿಟ್ಟಿರುತ್ತೇವೆ. ಉದಾಹರಣೆಗೆ, ಮನೆಯಲ್ಲಿ ಸಂಭಾವಿತ ತಾಯಿ ಇರುತ್ತಾಳೆ. ಅಪ್ಪ ತುಂಬ ಓದಿಕೊಂಡ, ಪ್ರಾಮಾಣಿಕ ಅಧಿಕಾರಿ. ಅಣ್ಣ ಇಂಜಿನಿಯರಿಂಗ್ ಮಾಡುತ್ತಿರುತ್ತಾನೆ. ಆದರೆ ಈ ಹುಡುಗಿ ಪೋಲಿ ಬಿದ್ದುಹೋದ ಒಬ್ಬ ಡ್ರಾಪೌಟ್ ಹುಡುಗನೊಂದಿಗೆ ತನ್ನ ಸಾಯಂಕಾಲಗಳನ್ನು ಕಳೆಯುತ್ತಿರುತ್ತಾಳೆ.
‘ನೋಡಕ್ಕೆ ಚೆನ್ನಾಗಿದ್ದಾನೆ ಮತ್ತು ಅವ್ನು ನನ್ನನ್ನ ಪ್ರೀತಿಸ್ತಾನೆ’ ಅನ್ನೋದಷ್ಟೆ ಇವಳ ಮೆಚ್ಚುಗೆಗೆ ಕಾರಣ. ಮೊದಮೊದಲು ಅಪ್ಪ-ಅಮ್ಮನಿಗೆ ಮೋಸ ಮಾಡ್ತಿದೀನೇನೋ ಅನ್ನಿಸುತ್ತಿರುತ್ತದೆ. ಅವರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದೇನೇನೋ ಎಂಬ ಗಿಲ್ಟು. ಆದ್ರೆ ಕ್ರಮೇಣ ಅವಳು ಬದಲಾಗುತ್ತಾಳೆ. ನಿಜ ಹೇಳಬೇಕೆಂದರೆ, ಅವನೊಂದಿಗೆ ಕಳೆಯುವ ದಿನನಿತ್ಯದ ಪ್ರೖೆಮ್ ಟೈಮ್ ಅವಳನ್ನು ಬದಲಿಸುತ್ತದೆ. ತನ್ನ ಹುಡುಗ ಸಿಗರೇಟು ಸೇದುತ್ತಾನೆ, ಕುಡಿಯುತ್ತಾನೆ, ಬೇರೆ ಗರ್ಲ್ ಫ್ರೆಂಡ್ ‘ಇದ್ದರು’ (ಈಗಿಲ್ಲ ಅಂದುಕೊಂಡಿರುತ್ತಾಳೆ.) ಇವುಗಳೆಲ್ಲದರ ಸಮೇತ ಅವಳಿಗೆ ಅವನು ಇಷ್ಟವಾಗಿರುತ್ತಾನೆ. ಏಕೆಂದರೆ ಅವನೆಡೆಗೆ ಮೋಹ ಬೆಳೆದಿದೆ. ಪ್ರೖೆಮ್ ಟೈಮಿನ ಇಂಪ್ರೆಷನ್ ತುಂಬ ಗಾಢವಾಗಿ ಅವಳ ಮೇಲಾಗಿದೆ. ಅವಳಿಗೆ ಸಿಗರೇಟು, ಕುಡಿತ ಇಷ್ಟ ಇಲ್ಲದಿದ್ದರೂ ಸಹಿಸಿಕೊಳ್ಳುತ್ತಾಳೆ. ಪ್ರೀತಿಯಿಂದ ಅವನನ್ನು ಗೆದ್ದು, ಅವುಗಳನ್ನೆಲ್ಲ ಬಿಡಿಸಿ, ‘ಒಳ್ಳೆಯವ’ನನ್ನಾಗಿ ಮಾಡಿ, ತನ್ನವನನ್ನಾಗಿ ಮಾಡಿಕೊಳ್ಳುತ್ತೇನೆ ಅಂದುಕೊಳ್ಳುತ್ತಾಳೆ. ಆದರೆ ಜಗತ್ತಿನಲ್ಲಿ ಹೀಗೆ ಬದಲಾದ ಹುಡುಗರು ಎಷ್ಟು ಜನರಿದ್ದಾರೆ ಹೇಳಿ? ಬದಲಿಗೆ ಹುಡುಗಿಯೇ ಬದಲಾಗುತ್ತಾಳೆ. ‘ಸಿಗರೇಟು ಆರೋಗ್ಯ ಕೆಡಿಸುತ್ತಂತೆ. ಒಂದೆರಡು ಪೆಗ್ ವಿಸ್ಕಿ ಓಕೆ’ ಅನ್ನತೊಡಗುತ್ತಾಳೆ. ಅವನು ಎರಡನ್ನೂ ಬಿಡುವುದಿಲ್ಲ. ಈ ಹುಡುಗಿ, ತುಂಬ ಸಂಭಾವಿತ ಮನೆಯಿಂದ ಬಂದವಳು. ಸುಳ್ಳು ಹೇಳುವುದನ್ನು ಕಲಿಯುತ್ತಾಳೆ. ಕಳ್ಳಬೀಳುತ್ತಾಳೆ.
‘ಪ್ರೀತಿಗಾಗಿ ಇದನ್ನೆಲ್ಲ ಮಾಡುತ್ತಿದ್ದೇನಾದ್ದರಿಂದ ಅದು ತಪ್ಪಲ್ಲ’ ಅಂತ ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಳ್ಳುತ್ತಾಳೆ. ನೋಡನೋಡುತ್ತ ಅವಳು ತನ್ನ ಗೆಳೆಯನಷ್ಟೇ ನೆಗೆಟಿವ್ ಆಗಿ ಯೋಚಿಸಲಿಕ್ಕೆ, ಬದುಕಲಿಕ್ಕೆ ಶುರು ಮಾಡುತ್ತಾಳೆ.
ದುರಭ್ಯಾಸ ಕಲಿಯುವ ಹುಡುಗರದು, ಆರಂಭದಲ್ಲಿ ತುಂಬ ಪ್ರಾಮಾಣಿಕರಾಗಿದ್ದು, ಆ ನಂತರ ಕೆಟ್ಟು ಕೆರ ಹಿಡಿಯುವ ಅಧಿಕಾರಿಗಳದು, ದಾಂಪತ್ಯ ಚೆನ್ನಾಗಿದ್ದೂ ಹಾದರದ ದಾರಿ ತುಳಿಯುವ ಗೃಹಿಣಿಯರದು-ಇವರದೆಲ್ಲ ಒಂದೇ ಕತೆ. ಇವರು ಕಳೆಯುವ ಪ್ರೖೆಮ್ ಟೈಮ್ ಇವರ ದಾರಿ ತಪ್ಪಿಸಿರುತ್ತದೆ. ನಿಮ್ಮ ಕೈಲೊಂದಿಷ್ಟು ಹಣ, ಹೆಣ್ಣುಮಕ್ಕಳಾದರೆ ಸೌಂದರ್ಯ -ಇದ್ದು ಬಿಟ್ಟರೆ ಸಾಕು: ಜೊತೆಗಿದ್ದು ಸಮಯ ಕಳೆಯೋದಕ್ಕೆ ಸಾವಿರ ಮಂದಿ ಸಿಗುತ್ತಾರೆ. ಅದರಲ್ಲಿ ಅವರಿಗೆ ಫಾಯಿದೆ ಇದೆ. ಆದರೆ ಎಂಥ ನಷ್ಟವಿದೆ ಎಂಬುದು ಅಂಥವರೊಂದಿಗೆ ಸಮಯ ಕಳೆಯುವ ನಮಗೆ ಗೊತ್ತೇ ಆಗಿರುವುದಿಲ್ಲ. ಮೊದಲನೆಯದಾಗಿ ನಮ್ಮ ಸಮಯ ಹಾಳಾಗಿ ಹೋಗಿರುತ್ತದೆ. ಎರಡನೆಯದಾಗಿ, ಮನಸ್ಸು. ನಮಗೇ ಗೊತ್ತಿಲ್ಲದೆ ನೆಗೆಟಿವ್ ಯೋಚನೆಗಳ ಜನ ನಮ್ಮನ್ನು ಪ್ರಭಾವಿತರನ್ನಾಗಿ ಮಾಡುತ್ತ ಹೋಗುತ್ತಾರೆ. ವಿಪರೀತ ಕುಡಿಯುವವರು, ಆಗಷ್ಟೆ ಬಿಯರ್ ಕುಡಿಯಲು ಕಲಿತವರ ಕಣ್ಣಿಗೆ ಟಾರ್ಜನ್ನುಗಳ ಹಾಗೆ ಕಂಡಿರುತ್ತಾರೆ. ‘ಏನ್ ಕೆಪ್ಯಾಸಿಟೀನಮ್ಮ ಅವನ್ದೂ!’ ಅಂತ ಉದ್ಗರಿಸುತ್ತಿರುತ್ತಾರೆ. ಚುಲ್ಟು ರೌಡಿಗಳಿಗೆ ದೊಡ್ಡ ಪಾತಕಿಗಳು ಹೀರೋಗಳಂತೆ ಕಂಡಿರುತ್ತಾರೆ. ಸ್ವಚ್ಛಂದವಾಗಿ ಐದಾರು ಅನೈತಿಕ ಸಂಬಂಧಗಳನ್ನು ಇರಿಸಿಕೊಂಡ ಶ್ರೀಮಂತ ಆಂಟಿಯೊಬ್ಬಳು, ಮಧ್ಯಮ ವರ್ಗದ ಪುಟ್ಟ ಯುವತಿಗೆ ಭಯಂಕರ ಇಂಪ್ರೆಸಿವ್ ಆಗಿ ಕಂಡಿರುತ್ತಾಳೆ.
ಒಳ್ಳೆಯದು, ಸುಂದರವಾದದ್ದು, ಮಧುರವಾದದ್ದು ಹೇಗೆ ನಮ್ಮನ್ನು ನಮಗೇ ಗೊತ್ತಿಲ್ಲದಂತೆ ಸೆಳೆದುಬಿಡಬಲ್ಲುದೋ ನೆಗೆಟಿವ್ ಆದದ್ದೂ ಹಾಗೇ ಸೆಳೆದುಬಿಡಬಲ್ಲುದು. ಅಂಥದೊಂದು ನೆಗೆಟಿವ್ ಸೆಳೆತನಕ್ಕೆ ಸಿಕ್ಕ ಕೂಡಲೇ ಅದನ್ನು ಗುರುತಿಸಬೇಕು. ನಾವು ಸಿಲುಕುತ್ತಿರುವುದು ನೆಗೆಟಿವ್ ಆದ ಸೆಳೆತಕ್ಕೆ ಎಂಬುದರ ಮೊದಲ ಇಂಡಿಕೇಶನ್ ಅಂದರೆ, ನಮ್ಮನ್ನು ಗಿಲ್ಟ್ ಕಾಡತೊಡಗುತ್ತದೆ. ‘ತಂದೆಗೆ ಮೋಸ ಮಾಡುತ್ತಿದ್ದೇನಾ?’ ಅನ್ನಿಸಿದ ಕೂಡಲೇ ಆ ಸೆಳೆತದಿಂದ ದೂರವಾಗಿ ಬಿಡಿ. ಆರೋಗ್ಯಕರವಾದ ಗಿಲ್ಟು ಒಂಥರಾ ಮಗುವಿನಂತಹುದು. ಪ್ರೀತಿ ತೋರಿಸದಿದ್ದರೆ, ಉದಾಸೀನ ಮಾಡಿದರೆ ಅದು ಪದೇಪದೆ ಬಂದು ಕಾಡುವುದಿಲ್ಲ. ಒಂದು ಸಲ ಗಿಲ್ಟು ಆವರಿಸಿಕೊಳ್ಳುತ್ತಿದ್ದಂತೆಯೇ ನೆಗೆಟಿವ್ ಸೆಳೆತದಿಂದ ದೂರವಾಗಿಬಿಡಿ.
ಅಂಥದೊಂದು ಸೆಳೆತಕ್ಕೆ ನಿಮ್ಮನ್ನು ಈಡು ಮಾಡಿದವರೊಂದಿಗೆ ದಿನದ ಪ್ರೖೆಮ್ ಟೈಮ್ ಕಳೆಯುವುದನ್ನು ತಕ್ಷಣ ಬಿಡಿ. ಒಳ್ಳೆಯ ಜನರನ್ನು ಆರಿಸಿಕೊಳ್ಳಿ. ಅಂಥವರನ್ನು ಹುಡುಕಿಕೊಂಡು ಹೋಗಿ. ಜೊತೆಯಲ್ಲಿ ಕಾಲ ಕಳೆಯಿರಿ. ಅವರು ನಿಮಗೇನು ಕೊಡದಿದ್ದರೂ ಅಡ್ಡಿಯಿಲ್ಲ: ಕೆಲವರೊಂದಿಗೆ ಕಳೆದ ಸಮಯವೇ ನಮ್ಮನ್ನು ಸರಿದಾರಿಗೆ ತಂದಿರುತ್ತದೆ. ಒಳ್ಳೆಯ ವಿಚಾರ ಮೂಡಿಸಿರುತ್ತದೆ. ಬದುಕಿನ ದಿಕ್ಕು ಬದಲಿಸಿರುತ್ತದೆ. ಹಾಗೇನೇ ಪುಸ್ತಕಗಳ ಜೊತೆಯಲ್ಲಿರಿ. ಬೇಡವೆಂದರೂ ಕಣ್ಣು ಅವುಗಳತ್ತ ಸರಿಯುತ್ತದೆ. ಮನಸ್ಸು ತೆರೆದುಕೊಳ್ಳುತ್ತದೆ. ಇಷ್ಟೆಲ್ಲ ಹೇಳಿದ ಮೇಲೂ ಕೆಲವರು ವಾದಿಸುತ್ತಾರೆ- ‘ನಾನು ಕುಡುಕರ ಜೊತೆ ಗಂಟೆಗಟ್ಲೆ ಕಳೀತೇನೆ. ಇವತ್ತಿನ ತನಕ ಕುಡಿದಿಲ್ಲ. ಆಫೀಸಿನ ತುಂಬ ಅಪ್ರಾಮಾಣಿಕರಿದ್ದಾರೆ. ಆದರೆ ನಾನು ಲಂಚಕೋರನಾಗಿಲ್ಲ. ನಂಗೆ ಎಲ್ಲ ತರಹದ ಗೆಳೆಯರಿದ್ದಾರೆ. ಆದರೆ ನಾನು ಬದಲಾಗಿಲ್ಲ’ Fine!
ಅವರು ಹೀಗೇಕೆ ಮಾತನಾಡುತ್ತಾರೆಂದರೆ, ಅವರು ತಮ್ಮ ಪ್ರೖೆಮ್ ಟೈಮನ್ನು ಕೇವಲ ತಮ್ಮೊಂದಿಗೇ ಕಳೆದಿರುತ್ತಾರೆ. ತಾವಾಗಿಯೇ ಉಳಿದಿರುತ್ತಾರೆ. ಅದೂ ಒಳ್ಳೆಯದೇ.