ಹೊಯ್ದಾಡುವ ದೀಪ ಸ್ಥಿರವಾಗಲೆಂದು ಬಯಸುತ್ತ...

5-67f959d6735a9
Published on
‘ಬೇಬಿ ತು ಆಯಾ ಕ್ಯೂಂ ನಹಿ ಮುಝೆ ಲೇನೆ’ (ನೀನು ನನ್ನನ್ನು ಕರೆದುಕೊಂಡು ಹೋಗಲು ಏಕೆ ಬರಲಿಲ್ಲ? ಬರುತ್ತೇನೆ ಅಂತ ಮಾತುಕೊಟ್ಟಿದ್ದೆ ಅಲ್ವಾ?’) - ಹೀಗೆನ್ನುತ್ತ ಸಾನಿಯಾ ಎಂಬ ಆ ಯುವತಿ ಗೋಳೋ ಎಂದು ಅಳತೊಡಗಿದಾಗ ಅಲ್ಲಿ ನೆರೆದಿದ್ದವರ ಕಣ್ಣಲ್ಲೂ ನೀರೂರಿತು.

ಅವಳಾದರೂ ಏನು ಮಾಡಿಯಾಳು? ಇನ್ನು ಕೆಲ ತಿಂಗಳು ಕಳೆದಿದ್ದರೆ ಅವಳ ಬದುಕಿನ ಗತಿಯೇ ಬೇರೆಯಾಗಿರುತ್ತಿತ್ತು. ಸಂಗಾತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೊಸಜೀವನ ಆರಂಭಿಸುವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಳು. ಕನಸುಗಳ ಮಾಲೆಯನ್ನು ಹೆಣೆಯುತ್ತ ಖುಷಿಯಿಂದಿದ್ದಳು.

ಬಹಳ ದಿನವೇನೂ ಆಗಿರಲಿಲ್ಲ. ಮಾರ್ಚ್ 23ಕ್ಕೆ ನಿಶ್ಚಿತಾರ್ಥ ನೆರವೇರಿತ್ತು. ನವೆಂಬರ್ 3ರಂದು ವಿವಾಹ ನೆರವೇರಿಸುವುದೆಂದು ಹಿರಿಯರು ನಿಶ್ಚಯಿಸಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. ಆಕೆ ಕೈಹಿಡಿಯಬೇಕಿದ್ದ ಸಿದ್ಧಾರ್ಥ ಯಾದವ್ ಎಂಬ 28 ವರ್ಷದ ಯುವಕ ಶವಪೆಟ್ಟಿಗೆಯಲ್ಲಿ ಮಲಗಿದ್ದ. ‘ಒಮ್ಮೆ ಕೊನೆಯ ಬಾರಿ ಅವನ ಮುಖ ನೋಡಲು ಬಿಡಿ’ ಎಂದು ಸಾನಿಯಾ ಹೇಳುವಾಗ ಅವಳನ್ನು ಸಮಾಧಾನಪಡಿಸುವುದಾದರೂ ಹೇಗೆ? ಪೈಲಟ್ ಆಗಿದ್ದ ಆತ ನಕ್ಷತ್ರ ತೋರಿಸುವುದಾಗಿ ಭಾವಿ ಸಂಗಾತಿಗೆ ಭರವಸೆ ನೀಡಿದ್ದನೋ ಏನೋ. ಕನಸೆಲ್ಲ ಹೀಗೆ ರೆಕ್ಕೆ ಮುರಿದುಕೊಂಡು ಬಿದ್ದಾಗ ಆ ಯುವತಿಯ ನೋವಿನ ಆಳವನ್ನು ಯಾರಾದರೂ ಅಳೆಯಲು ಸಾಧ್ಯವೇ? ಅವಳ ಪ್ರಶ್ನೆಗೆ ಬಹುಶಃ ವಿಧಿಯಲ್ಲೂ ಉತ್ತರವಿಲ್ಲ.

ಗುಜರಾತ್​ನ ಜಾಮ್ಗರದಲ್ಲಿ ಈಚೆಗೆ ಯುದ್ಧ ವಿಮಾನವೊಂದು ಪತನಗೊಂಡಿತು. ಆ ದುರಂತದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ ಯಾದವ್ ಸಾವನ್ನಪ್ಪಿದರು. ಆ ಆಪತ್ತಿನ ಕ್ಷಣದಲ್ಲೂ ಅವರು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯ ಸ್ಮರಣೀಯ. ತಾಂತ್ರಿಕ ದೋಷಕ್ಕೆ ಒಳಗಾಗಿ ವಿಮಾನ ಪತನಗೊಳ್ಳುತ್ತಿದ್ದ ಸಂದರ್ಭದಲ್ಲಿ ಅದನ್ನು ಜನನಿಬಿಡ ಪ್ರದೇಶದಿಂದ ದೂರಕ್ಕೆ ಚಲಾಯಿಸಿಕೊಂಡು ಹೋಗುವ ಮೂಲಕ ಇನ್ನಷ್ಟು ಅಪಾಯವನ್ನು ತಪ್ಪಿಸಿದರು.

ವಿಮಾನವೇನಾದರೂ ಜನವಸತಿ ಪ್ರದೇಶದಲ್ಲಿ ಬಿದ್ದಿದ್ದರೆ...? ಅಷ್ಟೇ ಅಲ್ಲ, ಸಹ-ಪೈಲಟ್ ಮನೋಜ್ ಕುಮಾರ್ ಸಿಂಗ್ ಅವರ ಸುರಕ್ಷತೆಯನ್ನು ಖಾತ್ರಿಪಡಿಸಿದರು. ಆದರೆ ಈ ಸಾಹಸದಲ್ಲಿ ಸಿದ್ಧಾರ್ಥ ಯಾದವ್ ತಮ್ಮ ಜೀವ ಉಳಿಸಿಕೊಳ್ಳಲಾಗದೆ ದುರಂತಕ್ಕೀಡಾದರು.

ಹರ್ಯಾಣದ ರೇವಾರಿಯವರಾದ ಸಿದ್ಧಾರ್ಥ ಯಾದವ್ ಫೈಟರ್ ಪೈಲಟ್ ತರಬೇತಿ ಪೂರ್ಣಗೊಳಿಸಿ 2016ರಲ್ಲಿ ಎನ್​ಡಿಎ ಪರೀಕ್ಷೆ ಉತ್ತೀರ್ಣರಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಯಾಗಿದ್ದರು. ಎರಡು ವರ್ಷಗಳ ಹಿಂದೆ ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ಪಡೆದಿದ್ದರು. ಇದೇ ಮಾರ್ಚ್ 23ರಂದು ಸಾನಿಯಾ ಜೊತೆಗೆ ಅವರ ನಿಶ್ಚಿತಾರ್ಥ ನಡೆದಿತ್ತು. ಮಾ.31ರಂದು ಕರ್ತವ್ಯಕ್ಕೆ ವಾಪಸಾಗಿದ್ದರು. ಅದಾದ ಎರಡೇ ದಿನದಲ್ಲಿ ಈ ದುರಂತವಾಯಿತು. ರೇವಾರಿಯ ಭಾಲ್ಕಿ ಮಾಜ್ರಾ ಗ್ರಾಮದಲ್ಲಿ ಸಿದ್ಧಾರ್ಥ ಯಾದವ್ ಅಂತ್ಯಸಂಸ್ಕಾರ ನೆರವೇರಿತು.

‘ಶಾಲಾದಿನಗಳಲ್ಲಿ ಆತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ನನ್ನ ತಂದೆ ಮತ್ತು ಅಜ್ಜ ಸಹ ಸೇನೆಯಲ್ಲಿದ್ದರು. ನಾನೂ ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡಿದ್ದೆ. ಇನ್ನೊಂದು ಜೀವವನ್ನು ಕಾಪಾಡುವ ಕಾಯಕದಲ್ಲಿ ಆತ ಪ್ರಾಣತ್ಯಾಗ ಮಾಡಿದ. ಅವನ ಈ ಕಾಯಕಪ್ರಜ್ಞೆ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ, ನಮ್ಮ ಏಕೈಕ ಪುತ್ರನಾಗಿದ್ದ ಆತನನ್ನು ಕಳೆದುಕೊಂಡಿರುವುದು ಹೃದಯಹಿಂಡುವ ಸಂಗತಿ’ ಎಂದು ಸಿದ್ಧಾರ್ಥ ಯಾದವ್ ತಂದೆ ಸುಶೀಲ್ ಯಾದವ್ ಹೇಳಿದ್ದು, ಯಾವುದೇ ತಂದೆಯ ಅಂತರಂಗದ ಮಾತೇ ಆಗಿತ್ತು.

ಜೀವನವೇ ಹಾಗೆ. ಸುಖದ ಸೂರೆಹೊಡೆದು ಎನಗಿಂತ ಭಾಗ್ಯವಂತನಿಲ್ಲ ಎಂದು ಆನಂದಿಸುತ್ತಿರುವಾಗಲೇ, ಯಾವುದೋ ರೂಪದಲ್ಲಿ ದುಃಖ ಹಾಜರಿಹಾಕಿರುತ್ತದೆ. ಸಾವಿಲ್ಲದ ಮನೆಯಿಂದ ಸಾಸಿವೆ ತರುವ ಪ್ರಯತ್ನ ವ್ಯರ್ಥ. ಇದಕ್ಕೆ ಆ ಕ್ಷೇತ್ರ ಈ ಕ್ಷೇತ್ರ- ಮೇಲುಕೀಳು ಎಂಬೆಲ್ಲ ಭೇದವಿಲ್ಲ. ಆ ಲೆಕ್ಕದಲ್ಲಿ ಸಾವು ಸಮತಾವಾದಿ. ವಿಶೇಷವಾಗಿ ಭದ್ರತಾ ಕಾರ್ಯದ ಹೊಣೆ ಹೊತ್ತಿರುವ ಸೇನೆ ಇತ್ಯಾದಿ ಪಡೆಗಳಲ್ಲಿ ಇಂಥ ಮನಕಲಕುವ ಕಥೆಗಳು ಆಗೀಗ ವರದಿಯಾಗುತ್ತಿರುತ್ತದೆ.

ಶತ್ರುದೇಶದ ಸೈನಿಕರ ಜೊತೆಗಿನ ಹೋರಾಟ, ಅಪಾಯಕಾರಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸನ್ನಿವೇಶ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ- ಇಂಥ ಸಂದರ್ಭದಲ್ಲಿ ಸಾವುನೋವು ಸಾಮಾನ್ಯ. ಇಂಥ ವರದಿಗಳ ಆಳದಲ್ಲಿ ನೋಡಿದಾಗ ಮನಕಲಕುವ ಕಥೆವ್ಯಥೆಗಳು ಬಿಚ್ಚಿಕೊಳ್ಳತೊಡಗುತ್ತವೆ. ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿಯ ನೋವು, ಮಗನ ಚಿತೆಗೆ ಕೊಳ್ಳಿಯಿಡಬೇಕಾದ ತಂದೆಯ ಸಂಕಟ, ಅತ್ತು ಅತ್ತು ಕಣ್ಣೀರೇ ಇಂಗಿಹೋದಂತಿರುವ ತಾಯಿ... ಇಂಥ ದೃಶ್ಯಗಳು ಎಂಥವರನ್ನೂ ಕರಗಿಸುತ್ತವೆ.

ಈ ಮೇಲೆ ಉಲ್ಲೇಖಿಸಿದ ಸಿದ್ಧಾರ್ಥ ಯಾದವ್ ದುರ್ಘಟನೆ ಮಾನವಕೃತವಲ್ಲ. ಅಕಸ್ಮಾತ್ ಆದುದು. ಹಾಗಂತ ಅದರಿಂದಾದ ನೋವು-ಸಂಕಟ ಕಡಿಮೆಯಲ್ಲ. ಇನ್ನು ಕೆಲವು ಮಾನವ ಬೇಕೆಂದೇ ಮಾಡುವಂಥದು. ಮಾನವನ ದುರಾಸೆ, ಅಹಂಕಾರ, ವಿವೇಚನೆಯ ಕೊರತೆ, ಹಿಂಸಾಪ್ರವೃತ್ತಿ, ಅತಿಯಾದ ಮಹತ್ವಾಕಾಂಕ್ಷೆ... ಇತ್ಯಾದಿ ಕಾರಣಕ್ಕೆ ಮನುಕುಲ ಅನೇಕ ತೊಂದರೆ ಸಮಸ್ಯೆಗಳನ್ನು ಎದುರಿಸಿದ್ದನ್ನು ಇತಿಹಾಸದಲ್ಲಿ ನೋಡಿದ್ದೇವೆ; ಅದು ಈಗಲೂ ಇದೆ; ಮುಂದೆಯೂ ಇರುತ್ತದೆ. ಏಕೆಂದರೆ ಇವೆಲ್ಲ ಮಾನವನ ಮೂಲಭೂತ ಗುಣಸ್ವಭಾವಗಳು.

***

2008ರ ನವೆಂಬರ್ 26ರ ರಾತ್ರಿಯಿಂದ 29ರ ಬೆಳಗಿನವರೆಗೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿ ಒಂದು ಭೀಕರ ಕೃತ್ಯ. ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಬಂದ ಹತ್ತು ಮಂದಿ ಲಷ್ಕರ್ ಎ ತೊಯ್ಬಾ ಭಯೋತ್ಪಾದಕರು ಮುಂಬೈನಲ್ಲಿ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದರು. ಛತ್ರಪತಿ ಶಿವಾಜಿ ಮಹಾರಾಜ್ ಟರ್ವಿುನಸ್, ತಾಜ್​ವುಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೖೆಡಂಟ್ ಹೋಟೆಲ್, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ಮುಂತಾದ ಕಡೆಗಳಲ್ಲಿ ಮನಬಂದಂತೆ ಗುಂಡುಹಾರಿಸುತ್ತ ಸಾಗಿದ್ದರಿಂದ 166 ಜನರು ಸಾವನ್ನಪ್ಪಿದರು.

ಇದರಲ್ಲಿ 20 ಭದ್ರತಾ ಸಿಬ್ಬಂದಿ ಮತ್ತು 26 ವಿದೇಶಿಯರು ಸೇರಿದ್ದರು. ಸುಮಾರು 300 ಮಂದಿ ಗಾಯಗೊಂಡರು. ಮುಂಬೈಯಲ್ಲಿ ಉಗ್ರರ ಹಾವಳಿ ಮುಂದುವರಿದಿರುವಾಗ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಬಹು ಕಷ್ಟಕರವಾಗಿತ್ತು. ಈ ಸಮಯದಲ್ಲಿ ಐಪಿಎಸ್ ಅಧಿಕಾರಿಗಳು ಸೇರಿ ಹಲವರನ್ನು ಕಳೆದುಕೊಳ್ಳಬೇಕಾಯಿತು. ಹತ್ತು ಮಂದಿ ಉಗ್ರರ ಪೈಕಿ ಅಜ್ಮಲ್ ಕಸಬ್ ಎಂಬಾತ ಜೀವಂತವಾಗಿ ಸೆರೆಯಾದ. ಇತರ ಉಗ್ರರನ್ನು ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದರು.

ಆ ಹೊತ್ತಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಂದನ್ನು ಈ ಹೊತ್ತಿನಲ್ಲಿ ನೆನೆಸಿಕೊಳ್ಳುವುದಾದರೆ: ಕೆ. ಉನ್ನಿಕೃಷ್ಣನ್ ಎಂಬುವವರು ಇಸ್ರೋದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರು. ಮೂಲತಃ ಕೇರಳದವರು. ಬೆಂಗಳೂರಲ್ಲಿ ನೆಲೆಸಿದ್ದಾರೆ. ಇವರ ಏಕೈಕ ಪುತ್ರ ಸಂದೀಪ್. ಸೇನೆಗೆ ಸೇರಬೇಕೆಂಬುದು ಸಂದೀಪ್ ಬಾಲ್ಯದಿಂದಲೇ ಕಂಡ ಕನಸು. ಮುಂದೆ ಅದನ್ನು ನನಸಾಗಿಸಿಕೊಂಡರು. ಪುಣೆಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್​ಡಿಎ) ಸೇರಿದರು. ನಂತರ ಇಂಡಿಯನ್ ಮಿಲಿಟರಿ ಅಕಾಡೆಮಿ(ಐಎಂಎ)ಯಲ್ಲಿ ಪದವಿ ಪಡೆದು, ಲೆಫ್ಟಿನೆಂಟ್ ಆಗಿ ಸೇನೆಗೆ ಸೇರ್ಪಡೆಯಾದರು. 1999ರ ಕಾರ್ಗಿಲ್ ಸಮರದಲ್ಲಿ ಭಾಗಿಯಾಗಿದ್ದರು. 2003ರಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಪಡೆದ ಅವರು, 2005ರಲ್ಲಿ ಮೇಜರ್ ಹುದ್ದೆಗೇರಿದರು. ಮುಂಬೈಯಲ್ಲಿ ಭಯೋತ್ಪಾದನಾ ದಾಳಿಯಾದಾಗ, 51 ಸ್ಪೆಷಲ್ ಆಕ್ಷನ್ ಗ್ರೂಪ್ ಕಮಾಂಡರ್ ಆಗಿ ಅವರಿಗೆ ಕಾರ್ಯಾಚರಣೆ ಜವಾಬ್ದಾರಿ ನೀಡಲಾಯಿತು. ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್​ನಲ್ಲಿ ಉಗ್ರರು ಹಲವರನ್ನು ಒತ್ತೆಯಾಗಿಸಿಕೊಂಡಿದ್ದರು. ಹತ್ತು ಕಮಾಂಡೊಗಳ ಜೊತೆ ಹೋಟೆಲಿಗೆ ನುಗ್ಗಿದ ಸಂದೀಪ್ ಉನ್ನಿಕೃಷ್ಣನ್ ಆರು ಹಾಗೂ ಐದನೇ ಮಹಡಿಗಳಲ್ಲಿದ್ದ ಒತ್ತೆಯಾಳುಗಳನ್ನು ಬಿಡಿಸಿದರು.

ನಾಲ್ಕನೇ ಮಹಡಿಯಲ್ಲಿನ ಕೋಣೆಯಲ್ಲಿ ಭಯೋತ್ಪಾದಕರು ಅಡಗಿಕೊಂಡಿರಬಹುದೆಂಬ ಸಂಶಯ ಉಂಟಾಯಿತು. ಕಮಾಂಡೊಗಳು ಆ ಕೋಣೆಯ ಬಾಗಿಲು ಮುರಿದು ಒಳನುಗ್ಗಿದಾಗ ಉಗ್ರರು ಹಾರಿಸಿದ ಗುಂಡಿನಿಂದಾಗಿ ಕಮಾಂಡೊ ಸುನೀಲ್ ಕುಮಾರ್ ಯಾದವ್ ಗಾಯಗೊಂಡರು. ಸಂದೀಪ್ ಅವರು ಯಾದವ್​ರನ್ನು ರಕ್ಷಿಸಿ ಅಲ್ಲಿಂದ ಕಳಿಸಿ, ಸುಮಾರು 15 ತಾಸುಗಳ ಕಾಲ ಒತ್ತೆಯಾಳುಗಳನ್ನು ರಕ್ಷಿಸುವ ಕೆಲಸ ಮುಂದುವರಿಸಿದರು. ಉಗ್ರರನ್ನು ನಿಗ್ರಹಿಸಿ, ಜನರನ್ನು ರಕ್ಷಿಸುವ ಉದ್ದೇಶದಿಂದ ನವೆಂಬರ್ 27ರ ರಾತ್ರಿ ಮೆಟ್ಟಿ್ಟುಗಳ ಮೂಲಕ ಮೇಲೇರಲು ಮುಂದಾದಾಗ ಉಗ್ರರು ಗುಂಡಿನ ದಾಳಿ ನಡೆಸಿದರು.

ಆಗ ಸುನೀಲ್ ಕುಮಾರ್ ಜೋಧಾ ಎಂಬ ಕಮಾಂಡೊಗೆ ಏಳು ಬುಲೆಟ್​ಗಳು ಹೊಕ್ಕವು. ಅವರನ್ನು ಅಲ್ಲಿಂದ ರಕ್ಷಿಸಿ ಕಳಿಸಿದ ಸಂದೀಪ್, ಮೇಲಿನ ಅಂತಸ್ತಿಗೆ ತೆರಳಲೆತ್ನಿಸಿದ ಭಯೋತ್ಪಾದಕರನ್ನು ಬೆನ್ನಟ್ಟಿದರು. ಕೆಚ್ಚೆದೆಯಿಂದ ಹೋರಾಡಿ ನಾಲ್ವರು ಉಗ್ರರನ್ನು ಹೋಟೆಲಿನ ಬಾಲ್ ರೂಮ್ೆ ತರುವಲ್ಲಿ ಯಶಸ್ವಿಯಾದ ಸಂದೀಪ್, ಆಗ ನಡೆದ ಹೋರಾಟದಲ್ಲಿ ಅಸುನೀಗಿದರು. ‘ನೀವು ಮೇಲೆ ಬರಬೇಡಿ, ನಾನು ಇವರನ್ನು ಎದುರಿಸುತ್ತೇನೆ’ ಎಂಬುದು ಅವರು ತಮ್ಮ ಸಂಗಡಿಗರಿಗೆ ಹೇಳಿದ ಕೊನೆಯ ಮಾತಾಗಿತ್ತು.Leading from the front ಎಂಬೊಂದು ನುಡಿಗಟ್ಟಿದೆ.

ಅಂದರೆ, ಎಂಥದೇ ಸನ್ನಿವೇಶವಿದ್ದರೂ, ನಾಯಕನಾದವನು ಮುಂಚೂಣಿಯಲ್ಲಿರಬೇಕು ಎಂದು. ಸಂದೀಪ್ ನಡೆ ಇದಕ್ಕೆ ಅನುಗುಣವಾಗಿತ್ತು. ಬಳಿಕ, ಎನ್​ಎಸ್​ಜಿ ಕಮಾಂಡೋಗಳು ಆ ನಾಲ್ವರೂ ಉಗ್ರರನ್ನು ಹೊಡೆದುರುಳಿಸಿದರು. ಆಗ ತೋರಿದ ಧೈರ್ಯ, ಶೌರ್ಯಕ್ಕಾಗಿ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪುರಸ್ಕಾರ ಘೋಷಿಸಲಾಯಿತು. ಸಂದೀಪ್ ಜೀವನಾಧಾರಿತ ‘ಮೇಜರ್’ ಎಂಬ ಚಲನಚಿತ್ರ ಸಹ ತೆರೆಕಂಡಿತ್ತು.

ಮತ್ತೆ ಮುಂಬೈ ದಾಳಿಯತ್ತ ನೋಡುವುದಾದರೆ, 2009ರ ಫೆಬ್ರವರಿ 25ರಂದು ಕಸಬ್ ವಿರುದ್ಧ 11,000 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಲಾಯಿತು. ಕೊಲೆ, ಸಂಚು ಹಾಗೂ ದೇಶದ ವಿರುದ್ಧ ಯುದ್ಧ ಸಾರಿದ್ದು ಇತ್ಯಾದಿ ಆರೋಪಗಳನ್ನು ಹೊರಿಸಲಾಗಿತ್ತು. ವಿವಿಧ ಹಂತದ ಕೋರ್ಟುಗಳಲ್ಲಿ ಗಲ್ಲು ಶಿಕ್ಷೆ ತೀರ್ಪು ಪ್ರಕಟವಾಗಿ, ರಾಷ್ಟ್ರಪತಿಗಳಿಗೆ ಸಲ್ಲಿಸಿದ ಕ್ಷಮಾದಾನ ಅರ್ಜಿಯೂ ತಿರಸ್ಕೃತವಾದ ಮೇಲೆ, 2012ರ ನವೆಂಬರ್ 21ರ ಬೆಳಗ್ಗೆ 7.30 ಗಂಟೆಗೆ ಆತನನ್ನು ಪುಣೆಯ ಯೆರವಡಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು ಎಂದು ಕೇಂದ್ರ ಗೃಹ ಸಚಿವಾಲಯವು ಅಧಿಕೃತವಾಗಿ ಪ್ರಕಟಿಸಿತು. ಅಲ್ಲಿಗೆ ಮುಂಬೈ ದಾಳಿ ಪ್ರಕರಣ ಒಂದು ಹಂತ ಕಂಡಿತು.

ಮುಂಬೈ ದಾಳಿ ಸಂಚುಕೋರ ಎನ್ನಲಾದ ತಹವ್ವುರ್ ರಾಣಾನನ್ನು ಇದೀಗ ಅಮೆರಿಕದಿಂದ ಭಾರತಕ್ಕೆ ಕರೆತರುವುದೊಂದಿಗೆ ಈ ಪ್ರಕರಣದ ಮತ್ತೊಂದು ಅಧ್ಯಾಯ ತೆರೆದುಕೊಂಡಿದೆ. ಮುಂಬೈ ಭಯೋತ್ಪಾದಕ ದಾಳಿ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್​ಐಎ) 2011ರ ಡಿಸೆಂಬರ್​ನಲ್ಲೇ ರಾಣಾ, ಡೇವಿಡ್ ಹೆಡ್ಲಿ ಹಾಗೂ ಇತರ ಆರು ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. 134 ಸಾಕ್ಷಿಗಳ ಹೇಳಿಕೆ, 210 ದಾಖಲೆಗಳು, 106 ಇ-ಮೇಲ್ ವಿವರಗಳನ್ನು ಆರೋಪಪಟ್ಟಿಯು ಒಳಗೊಂಡಿದೆ. ಇನ್ನು ಮುಂದೆ ತನಿಖೆ, ನ್ಯಾಯಾಲಯದಲ್ಲಿ ವಿಚಾರಣೆ, ತೀರ್ಪು ಪ್ರಕಟವಾಗುವುದು- ಇವೆಲ್ಲ ಒಂದು ದೀರ್ಘ ಪ್ರಕ್ರಿಯೆ ಎಂಬುದು ಹೌದಾದರೂ, ದೇಶದ ಕಾನೂನು ಚೌಕಟ್ಟಿನಲ್ಲಿಯೇ ಎಲ್ಲವೂ ನಡೆಯಬೇಕಾಗುತ್ತದೆ.

ಕೊನೇ ಮಾತು: ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಸಾವಿರ ದಿನಗಳನ್ನು ದಾಟಿ ಮುಂದುವರಿದಿದೆ. ಯಾರೂ ಸೋತಿಲ್ಲ, ಯಾರೂ ಗೆದ್ದಿಲ್ಲ ಎಂಬ ಸ್ಥಿತಿ. ಅತ್ತ, ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವೆ ಕದನ ವಿರಾಮ ಎನ್ನುತ್ತಲೇ ಕದನ ಜಾರಿಯಲ್ಲಿದೆ. ಜಾಗತಿಕವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಭಿನ್ನ ಬಗೆಯಲ್ಲಿ ಸಂಘರ್ಷ, ದಾಳಿ ಇವೆಲ್ಲ ಕಾಣಸಿಗುತ್ತಿವೆ. ದಾಳಿ ನಡೆಸುವ ಗೀಳು, ಸಮರೋತ್ಸಾಹ ಇದ್ದಾಗ ಕಾರಣ-ಸಮರ್ಥನೆಗಳು ಬೇಕಷ್ಟು ಲಭಿಸುತ್ತವೆ. ಪಾಂಡವರಿಗೆ ಅರ್ಧ ರಾಜ್ಯ ಹೋಗಲಿ, ಕೊನೇ ಪಕ್ಷ ಐದು ಗ್ರಾಮಗಳನ್ನು ನೀಡಲೂ ದುರ್ಯೋಧನ ಒಪ್ಪದಿದ್ದುದು ಇಂಥದೇ ಮನಸ್ಥಿತಿಯಿಂದಾಗಿ. ಹೀಗಾಗಿ ಅತ್ತ ಸಮರಕಣದಲ್ಲಿ ಸೈನಿಕರು, ಇತ್ತ ಆಮಾಯಕ ಜನರು ಪ್ರಾಣಚೆಲ್ಲುವುದು, ಗಾಯಗೊಳ್ಳುವುದು ನಿರಂತರ ವಿದ್ಯಮಾನ. ಹೀಗಾಗಿ ಮನೆಗಳಲ್ಲಿ ದೀಪ ಹೊಯ್ದಾಡುತ್ತಲೇ ಇರುತ್ತದೆ,.. ಅಳುವಿನ ಶಬ್ದ ಕೇಳುತ್ತಲೇ ಇರುತ್ತದೆ. ದೀಪ ಸ್ಥಿರವಾಗಿ, ನಗುವಿನ ಶಬ್ದ ಕೇಳುವಂಥಾದರೆ ಎಷ್ಟು ಚೆನ್ನ! (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net