ನೆಮ್ಮದಿಯ ಬದುಕಿಗೆ ಬೇಕು ವಿವೇಕಯುತ ಚಿಂತನೆ

Colom
Published on
ಒಮ್ಮೆ ವ್ಯಕ್ತಿಯೊಬ್ಬರು- ‘ನಾನೊಂದು ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ನಮ್ಮ ಪಕ್ಷದ ನಾಯಕರಿಗೆ ನಾವು ಅನೇಕ ಮಾಹಿತಿ ಕೊಡುತ್ತೇವೆ, ಆದರೆ ಅದನ್ನು ಕೆಲವು ಬಾರಿ ನಗಣ್ಯವಾಗಿ ಪರಿಗಣಿಸುತ್ತಾರೆ. ಯಾವ ವಿಷಯ ಹೇಳಿದರೂ ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಅನೇಕ ಬಾರಿ ನಮಗೆ ಯಾರ ಮೇಲಾದರೂ ದೂರು ಹೇಳಿ, ವ್ಯಕ್ತಿಯ ಮೇಲಿನ ನಾಯಕರ ಮನಸ್ಸನ್ನು ಕೆಡಿಸಬೇಕೆಂದಿರುತ್ತೆ. ಆದರೆ ಅವರು ಅದಕ್ಕೆ ಗಮನ ಕೊಡುವುದಿಲ್ಲ’ ಎಂದು ಅಲವತ್ತುಕೊಂಡರು. ಇದು ನಿಜವಾಗಿ ನಾಯಕತ್ವದ ಮಹಾಲಕ್ಷಣ. ಏನೆಂದರೆ ‘ವಿಷಯವನ್ನು ಸಂಗ್ರಹಿಸು, ಪ್ರತಿಕ್ರಿಯೆ ಕೊಡಬೇಡ’.

ಕೇಚಿತ್ ಅಜ್ಞಾನತೋ ನಷ್ಟಾಃ ಕೇಚಿತ್ ನಷ್ಟಾಃ ಪ್ರಮಾದತಃ

ಕೇಚಿತ್ ಜ್ಞಾನಾವಲೇಪೇನ ಕೇಚಿತ್ ನಷ್ಟೈಸ್ತು ನಾಶಿತಾಃ

‘ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪು್ಪ ಕಾರ್ಯಗಳನ್ನು ಮಾಡಿ. ಮತ್ತೆ ಕೆಲವರು ತಾವು ಮಹಾ ಬುದ್ಧಿವಂತರೆಂಬ ಅಹಂಕಾರದಿಂದ ಹಾಳಾಗುವರು. ಆದರೆ ಅನೇಕರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು’ ಎಂದು ಸುಭಾಷಿತ ಹೇಳುತ್ತದೆ.

ಪಾಪ, ಅಜ್ಞಾನಿಗಳಿಗೆ ತಾವು ಅಜ್ಞಾನಿಗಳೆಂದು ತಿಳಿದಿರುವುದಿಲ್ಲ. ಬೇರೆಯವರು ತಿಳಿಸಿ ಹೇಳಿದರೂ ತಿಳಿಯುವುದಿಲ್ಲ. ಆದ್ದರಿಂದ ಅವರು ತಪು್ಪ ದಾರಿ ಹಿಡಿಯುವರು. ಕೆಲವು ಸಂದರ್ಭಗಳಲ್ಲಿ ಅವರಿಗೆ ತಪು್ಪ ದಾರಿ ಹಿಡಿಯಲು ಪುಸಲಾಯಿಸುವವರೂ ಇರುವರು. ಇನ್ನು ಕೆಲವರು ಅಷ್ಟೇನೂ ಅಜ್ಞಾನಿಗಳಲ್ಲದಿದ್ದರೂ ಕೆಲವು ಪ್ರಲೋಭನೆಗಳಿಂದಾಗಿ ತಪು್ಪ ದಾರಿ ಹಿಡಿಯುವರು. ದುಷ್ಟ ಸ್ವಭಾವದಿಂದಾಗಿ ತಪು್ಪ ಕಾರ್ಯಗಳನ್ನು ಮಾಡುವವರೂ ಇರುವರು. ವಂಚಕರ ದಾಕ್ಷಿಣ್ಯಕ್ಕೆ ಒಳಗಾಗಿ ತಪು್ಪ ಮಾಡುತ್ತಾರೆ. ಹೀಗೆ ತಪು್ಪ ದಾರಿ ತುಳಿದವರೆಲ್ಲ ಅದರಿಂದ ಹಾಳಾಗುವರು. (ಸಂಗ್ರಹ: ವಿಚಾರ ಜ್ಯೋತಿ ಗ್ರಂಥದಿಂದ)

ಇದು ರಾಜಕಾರಣಿಗೆ, ದೊಡ್ಡ ಹುದ್ದೆ, ಅಧಿಕಾರದಲ್ಲಿ ಇರುವವರಿಗೆ ಮಾತ್ರವೇ ಸಂಬಂಧಪಟ್ಟ ವಿಷಯವಲ್ಲ. ಸಾಮಾನ್ಯವಾಗಿ ಪ್ರತಿ ಮನೆಯ ಯಜಮಾನ ಅಥವಾ ಯಜಮಾನತಿಗೆ ಅನೇಕ ಮಾಹಿತಿಗಳು ಬರುತ್ತವೆ. ಕೆಲವರು ಮಾಹಿತಿ ಕೇಳಿದಾಕ್ಷಣ ಪ್ರತಿಕ್ರಿಯೆ ಕೊಟ್ಟುಬಿಡುತ್ತಾರೆ. ‘ಹೌದು’ ಎಂದು ಒಪ್ಪಬಹುದು. ನೋವು ಪಟ್ಟುಕೊಳ್ಳಬಹುದು, ನೋವಿನಿಂದ ಅನೇಕ ಸಮಯ ಸಂಕಟ ಪಟ್ಟುಕೊಳ್ಳಬಹುದು. ಅಥವಾ ದ್ವೇಷ, ಅಸೂಯೆ ಮನಸ್ಸಿನೊಳಗೇ ಇಟ್ಟುಕೊಂಡು ಆ ವ್ಯಕ್ತಿಯನ್ನು ದೂರವಿಡಬಹುದು. ಇಂತಹ ಅನೇಕ ವಿಚಾರಗಳು ಸಂಸಾರ, ವ್ಯವಹಾರ, ಅಧಿಕಾರದಲ್ಲಿ ಇರುವವರಿಗೆಲ್ಲ ಬರುತ್ತವೆ. ಯಾವುದೇ ವಿಷಯ, ಮಾಹಿತಿ ಬಂದರೂ ಅದನ್ನು ಪರಾಮಶಿಸಿ, ಸತ್ಯಾಸತ್ಯತೆ ತಿಳಿದು, ಆಮೇಲೆ ಅದನ್ನು ಒಪ್ಪಿಕೊಳ್ಳುವುದರಿಂದ ಅನೇಕ ಸಮಸ್ಯೆ ಪರಿಹಾರವಾಗುತ್ತವೆ.

ಮೂರು ಮಂಗಗಳ ಸಂದೇಶ: ಗಾಂಧೀಜಿ ಬಳಿ ಎಂದೂ ಇರುತ್ತಿದ್ದ ಮೂರು ಮಂಗಗಳ ಮೂರ್ತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಒಂದು ಮಂಗ ಬಾಯಿ ಮುಚ್ಚಿಕೊಂಡಿದೆ (ಕೆಟ್ಟದ್ದನ್ನು ಮಾತನಾಡುವುದಿಲ್ಲ) ಇನ್ನೊಂದು ಕಿವಿ ಮುಚ್ಚಿಕೊಂಡಿದೆ (ಕೆಟ್ಟದ್ದನ್ನು ಕೇಳುವುದಿಲ್ಲ) ಮತ್ತೊಂದು ಕಣ್ಣು ಮುಚ್ಚಿಕೊಂಡಿದೆ (ಕೆಟ್ಟದ್ದನ್ನು ನೋಡುವುದಿಲ್ಲ). ಎಂತಹ ಸಂದೇಶ!.

ಈಗ ಮೊಬೈಲ್ ಯುಗ. ಅನೇಕ ಮಾಹಿತಿ, ವಿಷಯಗಳು ವಾಟ್ಸ್​ಆಪ್, ಫೇಸ್​ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಿಂದ ಬರುತ್ತವೆ. ಕೆಲವೊಮ್ಮೆಅಷ್ಟೂ ವಿಷಯಗಳನ್ನು ಸಂಸಾರಸ್ಥರು ತಕ್ಷಣ ಒಪ್ಪಿಕೊಂಡುಬಿಡುತ್ತಾರೆ. ಉದಾಹರಣೆಗೆ, ಈ ಕರೊನಾ ಸಮಯದಲ್ಲಿ ಕೋವಿಡ್ ಲಸಿಕೆ ಬಗ್ಗೆ, ಕೋವಿಡ್ ಬರದಂತೆ ತಡೆಯುವ ಆಹಾರದ ಬಗ್ಗೆ, ಅಥವಾ ಕೆಲವು ಯೋಗಾಸನಗಳ ಬಗ್ಗೆ ಅಥವಾ ಅನೇಕ ಪರಿಹಾರಗಳನ್ನು ಕೆಲವು ಬುದ್ಧಿವಂತರು ಕೊಡುತ್ತಾರೆ. ಅದನ್ನು ಮನೆಯವರು ಒಂದೆರಡು ದಿವಸಗಳ ಕಾಲ ಪಾಲನೆ ಮಾಡುತ್ತಾರೆ. ಆ ಬಳಿಕ ಇದ್ದಕ್ಕಿದ್ದಂತೆ ಅದನ್ನು ಬಿಟ್ಟುಬಿಡುತ್ತಾರೆ. ಇಲ್ಲದಿದ್ದಲ್ಲಿ ಮೊಬೈಲ್​ನಲ್ಲಿ ಬಂದ ಸಂದೇಶಕ್ಕೆ ವಿರೋಧವಾಗಿ ಯಾರೋ ಏನನ್ನೋ ಬರೆದಿರುತ್ತಾರೆ. ಈ ಮೊಬೈಲ್​ನಲ್ಲಿ ಬಂದ ವಿಷಯ ಒಳ್ಳೆಯದೇ ಇರಬಹುದು. ಸತ್ಯ ಅಥವಾ ನಂಬಿಕಾರ್ಹವೇ ಆಗಿರಬಹುದು. ಆದರೆ ಯಾರೋ ಒಬ್ಬ ‘ಅದೇನು ಮಹಾ’ ಎಂದು ಅದರ ವಿರೋಧವಾಗಿ ಬರೆದುಬಿಡಬಹುದು. ಆಗ ಇದನ್ನು ನೋಡಿದವರು, ಸನ್ಮಾರ್ಗದಲ್ಲಿ ಹೋಗುತ್ತಿದ್ದವರೂ, ‘ಅದರ ಬಗ್ಗೆ ಏನೋ ವಿರೋಧವಾಗಿ ಬರೆದಿದ್ದಾರೆ, ಅದನ್ನು ಬಿಟ್ಟು ಬಿಡಿ’ ಎನ್ನುತ್ತಾರೆ. ಇದು ಈಗಿನ ಹೊಸ ಸಮಸ್ಯೆ. ಈ ನಂಬಿಕೆ ಮತ್ತು ಅಪನಂಬಿಕೆ, ವಿಶ್ವಾಸ ಮತ್ತು ಅವಿಶ್ವಾಸ, ಪಾಲನೆ ಮತ್ತು ಧೋರಣೆ ಇವೆಲ್ಲ- ವೈಯಕ್ತಿಕವಾಗಿರುತ್ತವೆ. ಹಸು ಗಬಗಬನೆ ತಿನ್ನುತ್ತದೆ. ಹೀಗೆ ತಿಂದ ಆಹಾರವನ್ನು ಹೊಟ್ಟೆಯಿಂದ ಬಾಯಿಗೆ ತಂದು, ಅನೇಕ ಬಾರಿ ಜಗಿದು, ಜೀರ್ಣಿಸಿಕೊಳ್ಳುತ್ತದೆ. ಇದರಿಂದ ಪೌಷ್ಟಿಕಾಂಶಗಳು ದೇಹದ ಎಲ್ಲ ಭಾಗಗಳಿಗೂ ದೊರೆಯುತ್ತವೆ. ಇದೇ ರೀತಿ ನಾವು ಯಾವುದೇ ವಿಚಾರವನ್ನು ತಿಳಿದುಕೊಂಡು ಅದನ್ನು ಅನೇಕ ಬಾರಿ, ಅನೇಕ ರೀತಿಯಲ್ಲಿ ವಿಮಶಿಸಬೇಕು. ಆಗ ಅದರ ಸತ್ಯಾಸತ್ಯತೆ ತಿಳಿಯಲು ಸಾಧ್ಯ.

ಇಂತಹ ಅನೇಕ ವಿಷಯಗಳು ನಮ್ಮ ಪುರಾಣದಲ್ಲಿ, ವ್ಯವಹಾರದಲ್ಲಿ ಸಿಗುತ್ತವೆ. ನಮ್ಮ ನಂಬಿಕೆಗಳೇನೆಂದರೆ, ವ್ಯವಹಾರದಲ್ಲಿ ಯಾವುದೋ ಕಾರಣಕ್ಕೆ ವಿರೋಧವಾಗಿರಬಹದು, ಉದಾಹರಣೆಗೆ ಯಾರಿಗೋ ಒಬ್ಬರಿಗೆ ಹಣ ಕೊಟ್ಟಿರುತ್ತೀರಿ, ಅದನ್ನು ಹಿಂದಿರುಗಿಸಲು ಹೇಳಿದಾಗ, ‘ನಾಳೆ ಕೊಡುತ್ತೇನೆ, ನಾಳಿದ್ದು ಕೊಡುತ್ತೇನೆ’ ಎಂದು ಮುಂದೂಡುತ್ತ ಹೋಗಬಹುದು. ಇಂತಹ ಸಂದರ್ಭದಲ್ಲಿ ತಕ್ಷಣ ಪ್ರತಿಕ್ರಿಯೆಯನ್ನು ಕಾಣುತ್ತೇವೆ. ಸಿಕ್ಕಾಪಟ್ಟೆ ಬೈದು ಬಿಡುತ್ತಾರೆ, ಹೊಡೆದಾಡಿಕೊಳ್ಳುತ್ತಾರೆ, ದೇವರ ಹೆಸರು ಹೇಳಿ ಶಾಪ ಕೊಟ್ಟು ಬಿಡುತ್ತಾರೆ. ಅಥವಾ ಈ ಹಣ ವಸೂಲಿ ಮಾಡೋದಕ್ಕೆ ಅಂತ ಇರುವ ಕೆಲವು ಏಜೆನ್ಸಿ ಅಥವಾ ವ್ಯಕ್ತಿಗಳಿಗೆ ಹೇಳಿ, ‘ಹೇಗಾದರೂ ಮಾಡಿ ವಸೂಲಿ ಮಾಡಿಕೊಂಡು ಬಾ, ನಿನಗೆ ಇಷ್ಟು ಕಮಿಶನ್ ಕೊಡುತ್ತೇನೆ’ ಎನ್ನುತ್ತಾರೆ, ಇದರಿಂದಾಗಿ, ಈ ವಸೂಲಿಗಾರ ಸಾಲ ಪಡೆದವರನ್ನು ಕೆಟ್ಟ ಮಾತುಗಳಿಂದ ಹೀಯಾಳಿಸಬಹುದು. ಮನಸ್ಸು ನೋಯಿಸಬಹುದು, ಹಲ್ಲೆ ಮಾಡಬಹುದು. ಆದರೆ, ಇಲ್ಲಿ ಅವರ ವ್ಯವಹಾರದ ಸತ್ಯತೆ ಅರಿಯುವುದು ಅವಶ್ಯ. ಅನೇಕ ಮಂದಿ ವ್ಯವಹಾರದಲ್ಲಿ ಸಮಸ್ಯೆಗಳನ್ನು ಉಂಟು ಮಾಡಿಕೊಂಡಿರುತ್ತಾರೆ. ಅವರು ಸಾಲಗಾರರ ಬಳಿ ಸಮಸ್ಯೆಯನ್ನು ವಿವರಿಸಿದಾಗ, ಸರಿಯಾದ ಉತ್ತರ ನೀಡಿದಾಗ ಸಮಸ್ಯೆ ಪರಿಹಾರವಾಗುತ್ತದೆ.

ನಮ್ಮ ಕ್ಷೇತ್ರಕ್ಕೆ ಬಂದು ಅನೇಕರು ಹೇಳುವುದಿದೆ. ಧರ್ಮಸ್ಥಳಕ್ಕೆ ದೂರು ಕೊಟ್ಟಿದ್ದಾರೆ, ಹೊೖಲು ಕೊಟ್ಟಿದ್ದಾರೆ. ಇಲ್ಲಿ ಸ್ವಾಮಿ ಹೇಳಿಕೆ ಮಾಡಿದ್ದಾರೆ. ಆದರೆ ‘ನನಗೆ ನಿಜವಾಗಿ ಅವರಿಗೆ ಮೋಸ, ವಂಚನೆ ಮಾಡುವ ಉದ್ದೇಶವಿಲ್ಲ. ಸ್ವಲ್ಪ ಕೈ ಕಟ್ಟಿದೆ. ಆ ಬಳಿಕ ಕೊಡುತ್ತೇನೆ’ ಎನ್ನಬಹುದು. ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದಾಹರಣೆ ಕೊಡುವುದಾದರೆ, ನೂರಾರು ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದು ಹಿಂದೆ ಕೊಡುವಾಗ ಸ್ವಲ್ಪ ವಿಳಂಬವಾದರೆ ಹೇಳಿಕೊಳ್ಳುತ್ತಾರೆ. ‘ಸ್ವಲ್ಪ ಸಮಸ್ಯೆಯಾಗಿದೆ ಮುಂದಿನ ಸಲ ಕೊಡುತ್ತೇವೆ’ ಎಂದು ಹೇಳಿ ಅದರಂತೆ ನಡೆದುಕೊಳ್ಳುತ್ತಾರೆ.

ಮುಖ್ಯವಾಗಿ ಪ್ರತಿಯೊಬ್ಬರೂ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆದಾಯದ ಶೇಕಡ 5ರಿಂದ 25ರಷ್ಟನ್ನು ಉಳಿಸಲು ಪ್ರಯತ್ನಿಬಹುದು. ಹೀಗೆ ಉಳಿತಾಯ ಮಾಡಿದ್ದು, ಆಪತ್ಕಾಲದಲ್ಲಿ ನೆರವಾಗುತ್ತದೆ, ಇದರ ಕುರಿತಾಗಿ ನಾನು ಯಾವಾಗಲೂ ಕೊಡೆಯ ಉದಾಹರಣೆ ಕೊಡುತ್ತಿರುತ್ತೇನೆ. ಮನೆಯಲ್ಲಿ ಕೊಡೆಯನ್ನು ಕವಾಟಿನ ಹಿಂಭಾಗ, ಬಾಗಿಲಿನ ಹಿಂಭಾಗ, ಒಳಗಡೆ ಕೋಣೆಯಲ್ಲಿ ಇಡುವುದು ಸಾಮಾನ್ಯ. ಯಾಕೆಂದರೆ ಮಳೆ ಬಂದಾಗ ಮಾತ್ರ ಅದರ ಅಗತ್ಯ. ಭಾರೀ ಬಿಸಿಲಿದ್ದರೆ ಒಮ್ಮೊಮ್ಮೆ ಬೇಕಾಗುತ್ತದೆ. ಹಾಗಾಗಿ ದಿನವೂ ಬಳಕೆ ಇಲ್ಲದ ಕಾರಣ ಒಳಗಡೆ ತೆಗೆದಿಡುತ್ತಾರೆ. ಆದರೆ ಆ ಛತ್ರಿ ಅಮೂಲ್ಯವಾದ, ಅಗತ್ಯವಾದ ಹಾಗೂ ಅನಿವಾರ್ಯವಾದ ರಕ್ಷೆಯಾಗಿದೆ. ಉಳಿತಾಯವೂ ಛತ್ರಿಯ ಹಾಗೆಯೇ. ಜೀವವಿಮೆ ಅಥವಾ ಆರೋಗ್ಯ ವಿಮೆ ಅವಶ್ಯವಾದಾಗ ರಕ್ಷೆಯನ್ನು ನೀಡುತ್ತವೆ. ಆರೋಗ್ಯವಾಗಿ ಇರುವಂಥ ವ್ಯಕ್ತಿ ವಿಮೆಯನ್ನು ನಗಣ್ಯ ಮಾಡುವುದುಂಟು.

ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ವಿಮಾ ಯೋಜನೆಗಳನ್ನು ಮಾಡಿದ್ದೇವೆ, ಅದರಲ್ಲಿ ಒಂದು ಕುಟುಂಬದಲ್ಲಿ ಐದು ಅಥವಾ ಏಳು ಜನರಿದ್ದರೆ ಎಲ್ಲರಿಗೂ ವಿಮೆ ಮಾಡಿಕೊಳ್ಳಬಹುದು.

ಯೋಜನೆ ಸದ್ಬಳಕೆ: ಸರ್ಕಾರದ ಅನೇಕ ಯೋಜನೆಗಳಿವೆ. ಅದನ್ನು ನಂಬದಿರುವವರೂ ಇದ್ದಾರೆ. ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ, ಅನೇಕ ರೀತಿಯ ವಿಮೆಗಳು ಇವೆ. ಅದನ್ನು ರಾಜಕೀಯ ದೃಷ್ಟಿಯಲ್ಲಿ ನೋಡುವವರೂ ಇದ್ದಾರೆ. ‘ಆಡಳಿತ ಪಕ್ಷದವರು ಈ ಯೋಜನೆ ಮಾಡಿದ್ದು, ನಾನು ವಿರೋಧ ಪಕ್ಷವನ್ನು ಬೆಂಬಲಿಸುವ ಕಾರಣದಿಂದ ಈ ಯೋಜನೆ ಬೆಂಬಲಿಸುವುದಿಲ್ಲ’ ಎಂದು ಅದರ ಸೌಲಭ್ಯಗಳನ್ನು ಪಡೆಯುವುದಿಲ್ಲ. ಕೆಲವರು ತಾವೂ ಪಡೆಯುವುದಿಲ್ಲ, ಇತರರಿಗೂ ಪಡೆಯಲು ಬಿಡದೆ, ತಪು್ಪ ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಾರೆ. ಯಾರದೋ ಮಾತು ಕೇಳಿ, ಹೌದೇ ಅಲ್ಲವೇ ಎಂದು ತಿಳಿದುಕೊಳ್ಳದೆ, ಅನೇಕ ಒಳ್ಳೆಯ ಯೋಜನೆಗಳಿಂದ ಜನ ವಂಚಿತರಾಗುತ್ತಾರೆ. ಅದರ ಬದಲು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ವಿಷಯ ಸಂಗ್ರಹಿಸಿ, ಬಳಿಕ ಅದನ್ನು ವಿಮರ್ಶೆ ಮಾಡಿ. ಅದು ನನಗೆ ಸಂಬಂಧಿಸಿದ್ದೆ? ವೃತ್ತಿ ಅಥವಾ ಸಂಸಾರಕ್ಕೆ ಸಂಬಂಧಿಸಿದ್ದೇ? ಇದರಿಂದ ಪ್ರಯೋಜನವಿದೆಯೇ? ಇದು ಸತ್ಯವೇ? ಸುಳ್ಳೇ? ಎಂಬಿತ್ಯಾದಿ ವಿಚಾರಗಳನ್ನು ಅರಿತುಕೊಳ್ಳಿ. ಸರ್ಕಾರದಿಂದ ದೊರೆಯುವ ಯೋಜನೆ, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ.

ನಮಗೊಪ್ಪಿಗೆಯಾದ ಕಾರಣಕ್ಕೆ ಇನ್ಯಾರನ್ನೋ ಹೊಗಳಲು ಶುರು ಮಾಡುತ್ತೇವೆ. ಯಾವುದು ಸರಿಯೆಂದು ತಿಳಿಯುವ ಗೋಜಿಗೆ ಹೋಗದೆ ಇಂಥದ್ದನ್ನೆಲ್ಲ ಶ್ರದ್ಧೆಯಿಂದ ಮಾಡುತ್ತೇವೆ. ನಮಗಿರುವ ಬುದ್ಧಿವಂತಿಕೆಯಿಂದಲೇ ಒಮ್ಮೆ ಕುಳಿತು ವಿಚಾರ ಮಾಡಿದರೆ, ಬಹಳಷ್ಟು ನಮಗೇ ಅರಿವಾಗುತ್ತದೆ. ನಮಗೆ ಕೇಡು ಮಾಡುವ, ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ, ಅಸಹನೆಯಿಂದ ವರ್ತಿಸುವ, ನಮ್ಮ ಏಳಿಗೆ ಕಂಡು ಅಸೂಯೆಯಿಂದ ಹುಚ್ಚರಾಗುವವರನ್ನೆಲ್ಲ ಕಂಡಾಗ ಕೋಪ ಬರುತ್ತದೆ. ಆದರೆ ಅವರೇಕೆ ಹಾಗೆ ಮಾಡುತ್ತಾರೆ? ಎಂದು ತಿಳಿದಾಗ ಕೋಪದ ತೀವ್ರತೆ ಕಮ್ಮಿಯಾಗುತ್ತದೆ. ಅದಕ್ಕೆ ಕಾರಣ ಅವರ ಹುಟ್ಟುಗುಣ. ಬೆಳೆದು ಬಂದ ರೀತಿ. ಅಸೂಯೆ ಎನ್ನುವುದು ಹೇಗೆ ಅವರನ್ನೇ ಸುಡುತ್ತದೆ ಎನ್ನುವುದು ತಿಳಿದಾಗ ಖಂಡಿತ ಕೋಪದ ಜಾಗದಲ್ಲಿ ಸ್ವಲ್ಪ ಅನುಕಂಪ ಮೂಡುತ್ತದೆ. ಎಲ್ಲ ವಿಕೃತ ಮನಸ್ಸುಗಳ ಹಿಂದೂ ಒಂದು ಕತೆಯಿರುತ್ತದೆ. ಮತ್ತು ಆ ಕತೆಗೆ ಕಾರಣವಿರುತ್ತದೆ. ಅದರ ಅರಿವಿದ್ದರೆ ನಮ್ಮ ಕೋಪ-ತಾಪ, ದುಃಖ, ಸಂಕಟಗಳಿಗೂ ಕಡಿವಾಣ ಹಾಕಿಕೊಳ್ಳಬಹುದು. ಅವರು ಕೆಡುಕು ಮಾಡಿದಾಗ, ನಮ್ಮನ್ನು ತೆಗಳಿದಾಗ ಮನಸ್ಸು ಕೆಡಿಸಿಕೊಳ್ಳದೆ, ಹೊಗಳಿದಾಗ ಉಬ್ಬದೆ ಅಂಥದ್ದನ್ನೆಲ್ಲ ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಅರಿತಿದ್ದರೆ ನಿಜಕ್ಕೂ ನಮ್ಮ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net