ಇಚ್ಛೆ, ಕಠಿಣ ಪರಿಶ್ರಮ ಮತ್ತು 3, 6, 9ರ ತಂತ್ರ...

Column F 2
ನಿಕೋಲಾ ಟೆಸ್ಲಾ
Published on
| ಡಾ. ಪ್ರಿಯಾಂಕಾ ಎಂ.ಜಿ.

ಜಗತ್ತು ವೇಗದ ಗತಿಯಲ್ಲಿ ಓಡುತ್ತಿದೆ. ಪ್ರತಿಯೊಬ್ಬರಿಗೂ ಯಶಸ್ಸು ಬೇಕು. ಅದಕ್ಕಾಗಿ ತಂತ್ರ-ಕುತಂತ್ರಗಳನ್ನಾದರೂ ಮಾಡಿ ಅದನ್ನು ಪಡೆಯಲು ಯತ್ನಿಸುತ್ತಾರೆ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ತನ್ನ ಕನಸುಗಳನ್ನು ಅತಿ ಸುಲಭವಾಗಿ ತನ್ನದಾಗಿಸಿಕೊಳ್ಳುವ ಮಾರ್ಗ ಇದ್ದೇ ಇದೆ. ಹೇಗೆ ಅಂತಿರಾ? ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ತನ್ನದೇ ಆವಿಷ್ಕಾರದಿಂದ ಪ್ರಪಂಚದ ದಿಕ್ಕನ್ನೇ ಬದಲಾಯಿಸಿದ ವಿಜ್ಞಾನಿ, ಗಣಿತಜ್ಞ, ಇಂಜಿನಿಯರ್, ಇದೆಲ್ಲದಕ್ಕೂ ಮಿಗಿಲಾಗಿ ಬ್ರಹ್ಮಾಂಡದ ಶಕ್ತಿಯನ್ನು ಅರಿತು ಯಶಸ್ಸಿನ ರಹದಾರಿಯನ್ನು ಕಂಡುಕೊಂಡ ನಿಕೋಲಾ ಟೆಸ್ಲ್ಲಾ ಈ ಪಥವನ್ನು ದರ್ಶಿಸಿದ್ದಾರೆ. 1856 ಜುಲೈ 10ರಂದು ಯುರೋಪಿನ ಕ್ರೊವಾಟಿಯಾದಲ್ಲಿ ಜನಿಸಿದ ಟೆಸ್ಲಾ ಮೊದಲ ಬಾರಿಗೆ ಪರ್ಯಾಯ ಪ್ರವಾಹ (ಆಲ್ಟರ್ನೆಟಿಂಗ್ ಕರೆಂಟ್)ವನ್ನು ಅಂದರೆ ನಾವು ಇಂದು ಬಳಸುತ್ತಿರುವ ವಿದ್ಯುತ್ ಕಂಡುಹಿಡಿದವರು. ಥಾಮಸ್ ಆಲ್ವ ಎಡಿಸನ್​ರ ಬಹುಪಾಲು ಪೇಟೆಂಟ್​ಗಳ ಹಿಂದೆ ಕೆಲಸ ಮಾಡಿದ್ದ ಮಿದುಳು ಟೆಸ್ಲಾರದ್ದು.

ಇಂಥ ಟೆಸ್ಲಾ ನಮ್ಮ ವೇದಾಂತಕ್ಕೆ ಮಾರುಹೋಗಿ ದ್ರವ್ಯ ಮತ್ತು ಶಕ್ತಿಗಳ ನಡುವಿನ ಸಂಬಂಧಕ್ಕೆ ಉತ್ತರ ಹುಡುಕುತ್ತ ಸ್ವಾಮಿ ವಿವೇಕಾನಂದರ ಬಳಿ ಬಂದಿದ್ದರು. ಟೆಸ್ಲಾ ಬಗ್ಗೆ ಸ್ವಾಮಿ ವಿವೇಕಾನಂದರು ಹೀಗೆ ಉಲ್ಲೇಖ ಮಾಡಿದ್ದಾರೆ: ‘ತನ್ನ ಊಟನಿದ್ದೆಗಳನ್ನು ಮಾಡಲಿಕ್ಕೂ ಪುರುಸೊತ್ತಿಲ್ಲದಂತೆ ದುಡಿಯುತ್ತಿದ್ದ; ದಿನದ 24 ಗಂಟೆಗಳನ್ನೂ ಆನಂದದಿಂದ ಪ್ರಯೋಗಶಾಲೆಯಲ್ಲಿ ಕಳೆಯಬಲ್ಲವರಾಗಿದ್ದ ಟೆಸ್ಲಾ ಧರ್ಮಸಂಸತ್ತಿನಲ್ಲಿ ನನ್ನ ಭಾಷಣ ಕೇಳಲು ಗಂಟೆಗಟ್ಟಲೆ ನಿಂತು ಕಾಯುತ್ತಿದ್ದರು. ವಿಜ್ಞಾನದ ಯಾವುದೋ ನಿಗೂಢ ಸತ್ಯವನ್ನು ವೇದಾಂತ ಹೇಳಿದೆ ಎಂಬುದನ್ನು ಅವರು ಆಗಲೇ ಕಂಡುಕೊಂಡಿದ್ದರು’. ಹೌದು ಟೆಸ್ಲಾ 100 ವರ್ಷಗಳ ಮುಂದಕ್ಕೆ ಯೋಚಿಸಬಲ್ಲ ಮೇಧಾವಿಯಾಗಿದ್ದರು. ಅಂಥ ಟೆಸ್ಲಾ ಮೂರು ಶಕ್ತಿಯುತವಾದ ಸಂಖ್ಯೆಗಳ ಆವಿಷ್ಕಾರ ಮಾಡಿ ಅದನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟರು. ಟೆಸ್ಲಾ ಪ್ರಕಾರ ಈ ಸೃಷ್ಟಿಯನ್ನು ಮುನ್ನಡೆಸುತ್ತಿರುವುದು ಈ ಮೂರು ಸಂಖ್ಯೆಗಳೇ. ಅವು 3, 6, 9. ಈ ಸಂಖ್ಯೆಗಳು ಬ್ರಹ್ಮಾಂಡದ ಜೊತೆ ತಳುಕು ಹಾಕಿಕೊಂಡಿವೆ. ಜಗತ್ತು ಈ ಸಂಖ್ಯೆಯ ಆಧಾರದ ಮೇಲೆ ನಿಂತಿದೆ ಎಂದು ಉಲ್ಲೇಖಿಸಿದ್ದಾರೆ ಟೆಸ್ಲಾ.

ಈ ಸಿದ್ಧಾಂತವನ್ನು ‘3, 6, 9 ಮ್ಯಾನಿಫೆಸ್ಟೇಶನ್ ಟೆಕ್ನಿಕ್’ ಎಂದೂ ಕರೆಯುತ್ತಾರೆ. ಸ್ಟೀವ್ ಜಾಬ್ಸ್, ಬಿಲ್ ಗೆಟ್ಸ್ ಹೀಗೆ ಜಗತ್ತಿನಾದ್ಯಂತ ಅನೇಕ ಪ್ರಸಿದ್ಧ ವ್ಯಕ್ತಿಗಳು ಈ ತಂತ್ರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಯಶಸ್ಸನ್ನು ಪಡೆದಿದ್ದಾರೆ. ‘ಯಥಾ ದೃಷ್ಟಿ ತಥಾ ಸೃಷ್ಟಿ’ ಎನ್ನುವ ಹಾಗೆ ನಾವು ಯಾವ ರೀತಿ ಜಗತ್ತನ್ನು ನೋಡುತ್ತೇವೋ ಜಗತ್ತು ಅದೇ ಆಗಿರುತ್ತದೆ. ಅಂದರೆ ನಮ್ಮ ಇಚ್ಛೆಯ ಅನುಸಾರ ನಮಗೆ ಎಲ್ಲವೂ ಲಭಿಸುತ್ತದೆ. ಸ್ವಾಮಿ ವಿವೇಕಾನಂದರು ಹೇಳುವ ಹಾಗೆ, ‘ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ, ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ’. ಅದನ್ನೇ ಟೆಸ್ಲ್ಲಾ ‘ಲಾ ಆಫ್ ಮ್ಯಾನಿಫೆಸ್ಟೇಸನ್’ ಎಂದು ಕರೆಯುವುದು. ಆದರೆ ಇಲ್ಲಿ ನಮಗೆ ಅದರ ಬಗ್ಗೆ ಸಂಪೂರ್ಣ ಅರಿವು ಮತ್ತು ಗಾಢವಾದ ನಂಬಿಕೆ ಇರಬೇಕು. ಸಕಾರಾತ್ಮಕ ಆಲೋಚನೆಯೊಂದಿಗೆ ಜೀವನದಲ್ಲಿ ಹಣ, ವಿದ್ಯಾಭ್ಯಾಸ, ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

ಟೆಸ್ಲಾ ಪ್ರಕಾರ ವೃತ್ತಗಳ ಬಗ್ಗೆ ಅಧ್ಯಯನ ಮಾಡಲು ಹೊರಟರೆ ಅದರ 3600 ಬಗೆ ತಿಳಿಯುತ್ತದೆ. ಉದಾಹರಣೆಗೆ ಒಂದು ವೃತ್ತವನ್ನು ಭಾಗಿಸಿದರೆ ಅಲ್ಲಿ 3, 6, 9 ಸಂಖ್ಯೆಗಳೇ ಸಿಗುವುದು. ಅಂದರೆ 900, 600 ಅಥವಾ 300 ಈ ರೀತಿಯ ಸಂಖ್ಯೆಗಳೇ ಸಿಗುವುದು. ಉಳಿದಿರುವುದು 2700. ಇವು 3, 6, 9ರ ಗುಣಾಕಾರವೇ ಆಗಿರುತ್ತವೆ. ಇದನ್ನೆಲ್ಲ ಡಿಕೋಡ್ ಮಾಡಿದ ಟೆಸ್ಲಾ ಜಗತ್ತಿಗೆ ಹೇಳಿದ್ದು ಹೀಗೆ- ‘ಒಂದು ವೇಳೆ ಯಾರಾದರೂ ಈ 3, 6, 9 ಸಂಖ್ಯೆಗಳ ಶಕ್ತಿಯನ್ನು ತಿಳಿದುಕೊಂಡರೆ ಅವರು ಈ ಬ್ರಹ್ಮಾಂಡ ರಹಸ್ಯದ ದಾರಿಯನ್ನು ತಿಳಿದು ಕೊಂಡಂತಾಗುತ್ತದೆ. ಇದರಿಂದಾಗಿ ಜೀವನ ಬದಲಾಗಿ ಬಯಸಿದ್ದೆಲ್ಲ ಸಿಗುತ್ತ ಹೋಗುತ್ತದೆ’.

ಮೂರರ ಶಕ್ತಿ: ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆ 3 ನೇರವಾಗಿ ಬ್ರಹ್ಮಾಂಡಕ್ಕೆ ಸಂಬಂಧಿಸಿದ್ದಾಗಿದೆ. ಹಿಂದೂ ಧರ್ಮದಲ್ಲಿ ಸಂಖ್ಯೆ ಮೂರನ್ನು ಸಕಾರಾತ್ಮಕ ಸಂಖ್ಯೆ ಎಂದು ತಿಳಿಯಲಾಗಿದೆ. ನಮಗೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಬಗ್ಗೆ ಗೊತ್ತಿದೆ. ಮತ್ತು ತ್ರಿಮೂರ್ತಿಗಳ ತ್ರಿದೃಷ್ಟಿ ಅಂದರೆ ಸಚ್ಚಿದಾನಂದ, ಅದರರ್ಥ- ಸತ್ ಅಂದರೆ ಸತ್ಯ, ಚಿತ್ ಅಂದರೆ ಆತ್ಮ ಮತ್ತು ಆನಂದ. ಮತ್ತೊಂದು ತ್ರಿವೇಣಿಸಂಗಮ ಅದೇ ನಮ್ಮ ಗಂಗಾ, ಯಮುನಾ ಮತ್ತು ಸರಸ್ವತಿ.

ಆರರ ಶಕ್ತಿ: ಈ ಸಂಖ್ಯೆ ಮನುಷ್ಯನ ಆಂತರಿಕ ಶಕ್ತಿಯನ್ನು ಸೂಚಿಸುತ್ತದೆ. ಇಲ್ಲಿ ನಮ್ಮ ಕುಂಡಲಿನಿ ಚಕ್ರವನ್ನು ಜಾಗೃತಗೊಳಿಸಿ ಅದರ ಶಕ್ತಿಯನ್ನು ಪಡೆಯಬಹುದು. ಪುರಾಣದ ಪ್ರಕಾರ ಈ ಬ್ರಹ್ಮಾಂಡವನ್ನು ಸೃಷ್ಟಿಸಲು ಒಟ್ಟು ಆರು ದಿನ ಬೇಕಾಯ್ತಂತೆ. ಜ್ಯೋತಿಷ್ಯದ ಪ್ರಕಾರ ಈ ಸಂಖ್ಯೆ 6ನೇ ಗ್ರಹವಾದ ಶುಕ್ರನೊಂದಿಗೆ ಸಂಬಂಧ ಹೊಂದಿದೆ. ಶುಕ್ರ ಅಂದರೆ ಪ್ರೀತಿಯ ಪ್ರತೀಕವಾಗಿದೆ. ಮತ್ತೊಂದು ವಿಸ್ಮಯವೆಂದರೆ ನಮ್ಮ ಪರಿಸರ ಕಾರ್ಬನ್​ನಿಂದ ರಚಿಸಲ್ಪಟ್ಟಿದೆ. ಇದರ ಅಟೊಮಿಕ್ ಸಂಖ್ಯೆಯೂ 6.

ಒಂಬತ್ತರ ಶಕ್ತಿ: ಈ ಸಂಖ್ಯೆ ನಾವು ಖಿನ್ನತೆಗೆ ಒಳಗಾಗದೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ನಮ್ಮೊಳಗೆ ಇರುವ ನಕಾರಾತ್ಮಕ ಆಲೋಚನೆಗಳನ್ನು ತಡೆಯುತ್ತದೆ. ಈ ಮೂಲಕ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಏರಲು ಸಹಾಯ ಮಾಡುತ್ತದೆ. ಭಗವದ್ಗೀತೆಯಲ್ಲಿ ಜೀವನದ ಸಾರ ತುಂಬಿದ 18 ಅಧ್ಯಾಯಗಳಿವೆ. ಅಂದರೆ 1+8 =9. ಬೈಬಲ್​ನಲ್ಲೂ ಭಗವಂತನ ಒಂಬತ್ತು ಸತ್ಯಗಳಾದಂತಹ ನಿಷ್ಠೆ, ಸೌಮ್ಯತೆ, ಸದ್ಗುಣ, ಸಂತೋಷ, ಕರುಣೆ, ದುಃಖ, ಪ್ರೀತಿ, ಶಾಂತಿ, ಸ್ವನಿಯಂತ್ರಣದ ಬಗ್ಗೆ ತಿಳಿಸಲಾಗಿದೆ.

ನಾವು ಮಾಡಬೇಕಾಗಿರುವುದೇನು?: ನಾವು ವಿಶ್ವಾಸದಿಂದ ಬ್ರಹ್ಮಾಂಡಕ್ಕೆ ನಮ್ಮ ಬಯಕೆಯನ್ನು ತಿಳಿಸಬೇಕು. ಏನನ್ನು ಯೋಚಿಸುತ್ತೇವೋ ಅದು ನಮಗೆ ಸಿಗುತ್ತದೆ ಎಂಬ ನಂಬಿಕೆ ಜೊತೆಗೆ ಅದು ನಮಗೆ ಸಿಕ್ಕೆಬಿಟ್ಟಿತು ಎಂಬ ಕಲ್ಪನೆಯೂ ನಮ್ಮಲ್ಲಿರಬೇಕು. ಅದಕ್ಕಾಗಿ ಕೃತಜ್ಞತೆಯನ್ನು ತಿಳಿಸಬೇಕು. ಇದನ್ನು ‘ಕೃತಜ್ಞತಾ ತತ್ತ್ವ’ ಎಂದು ಕರೆಯಲಾಗುತ್ತದೆ. ಆದಷ್ಟೂ ಒಂದೇ ವಿಷಯದ ಬಗ್ಗೆ ಇಚ್ಛಿಸುತ್ತಿರಬೇಕು. ಈ ಕ್ರಿಯೆಯನ್ನು ನಿತ್ಯವೂ ಮಾಡುವುದರಿಂದ ಇದು ನಮ್ಮ ‘ಸಬ್​ಕಾನ್ಶಿಯಸ್​ವೆುೖಂಡ್’ಗೆ ಆಗಾಗ ನೆನಪಿಸುತ್ತಿರುತ್ತದೆ. ಇದರಿಂದಾಗಿ ಅದು 10 ಪಟ್ಟು ವೇಗವಾಗಿ ಸಂಭವಿಸಲು ಕಾರಣವಾಗುತ್ತದೆ. ಈ ತಂತ್ರ ಮೊಬೈಲ್ ಮತ್ತು ಅದರ ಟವರ್ ರೀತಿಯಲ್ಲಿ ಕೆಲಸ ಮಾಡುತ್ತದೆ.

‘ಪ್ರತಿದಿನ ನಮ್ಮ ಬಯಕೆಯನ್ನು ಮುಂಜಾನೆ ಎದ್ದ ಕೂಡಲೆ ಮೂರು ಬಾರಿ, ಮಧ್ಯಾಹ್ನ ಆರು ಬಾರಿ ಮತ್ತು ರಾತ್ರಿ ಮಲಗುವ ಮುನ್ನ ಒಂಬತ್ತು ಬಾರಿ ಪುನರುಚ್ಚರಿಸುತ್ತ, ನಲವತೆôದು ದಿನ ಒಂದು ಪುಸ್ತಕದಲ್ಲಿ ಬರೆಯಬೇಕು. ಆಗ ನಮ್ಮ ಇಚ್ಛೆಯನ್ನು ಖಂಡಿತವಾಗಿಯೂ ಈಡೇರಿಸಿಕೊಳ್ಳಬಹುದು’ ಎಂದಿದ್ದಾರೆ ಟೆಸ್ಲ್ಲಾ. ಇಚ್ಛೆ, ಕಠಿಣ ಪರಿಶ್ರಮ ಮತ್ತು ಈ ‘3, 6,9ರ ತಂತ್ರ’ -ಈ ಮೂರರ ಸಂಯೋಜನೆಯೊಂದಿಗೆ ಯಶಸ್ಸಿನ ಪಥದಲ್ಲಿ ಸಾಗಬಹುದು.

(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net