ಟ್ರಂಪ್​ಗೆ ದಕ್ಕುವುದೇ ನೊಬೆಲ್ ಗರಿ?

ವಿಜಯವಾಣಿ (7)
Published on

ಮಧ್ಯಸ್ಥಿಕೆ ವಹಿಸಿ ಜಗತ್ತಿನ ವಿವಿಧೆಡೆ ಯುದ್ಧಗಳನ್ನು ನಿಲ್ಲಿಸಿರುವುದರಿಂದ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ತಮಗೇ ದೊರೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಹೇಳಿದ್ದಾರೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದ ಮುಖ್ಯಸ್ಥರಾಗಿದ್ದರೂ ಟ್ರಂಪ್ ನೊಬೆಲ್ ಪ್ರಶಸ್ತಿಗಾಗಿ ಹಂಬಲಿಸುತ್ತಿರುವುದೇಕೆ, ಈ ಪ್ರತಿಷ್ಠಿತ ಪುರಸ್ಕಾರದ ಹಿನ್ನೆಲೆ ಏನು ಎಂಬುದರ ವಿವರ ಇಲ್ಲಿದೆ.

ಈ ವರ್ಷದ (2025) ನೊಬೆಲ್ ರಸಾಯನಶಾಸ್ತ್ರ, ಭೌತಶಾಸ್ತ್ರ ಸೇರಿದಂತೆ ನೊಬೆಲ್ ಸಾಹಿತ್ಯ ಪ್ರಶಸ್ತಿಯೂ ಈಗಾಗಲೇ ಘೋಷಣೆಯಾಗಿದೆ. ಇಂದು (ಶುಕ್ರವಾರ) ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಲಿದೆ. ಇಸ್ರೇಲ್-ಹಮಾಸ್, ರಷ್ಯಾ-ಯೂಕ್ರೇನ್ ನಡುವೆ ಯುದ್ಧ ನಿಲ್ಲಿಸಲು ಹಲವು ಸುತ್ತಿನ ಮಾತುಕತೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ತಮಗೇ ಸಿಗಬೇಕು ಎಂಬುದನ್ನು ಬಹಿರಂಗವಾಗಿಯೇ ಹಲವು ವೇದಿಕೆಗಳಲ್ಲಿ, ಹಲವು ಸನ್ನಿವೇಶಗಳಲ್ಲಿ ಹೇಳಿದ್ದು, ಕುತೂಹಲ ಮೂಡಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದು ಎಂದು ಟ್ರಂಪ್ ಹತ್ತಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದರೂ, ಭಾರತ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ಭಾರತ-ಪಾಕಿಸ್ತಾನ ವಿವಾದದಲ್ಲಿ ಮೂರನೇ ರಾಷ್ಟ್ರದ ಹಸ್ತಕ್ಷೇಪಕ್ಕೆ ಯಾವುದೇ ಆಸ್ಪದವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಈ ಸಂಗತಿ ಟ್ರಂಪ್ ಅವರನ್ನು ಕೆರಳಿಸಿದ್ದೂ ಹೌದು. ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರನ್ನು ಪಾಕಿಸ್ತಾನ ಸೂಚಿಸಿದೆ. ಭಾರತವೂ ಹೀಗೆ ಮಾಡಬೇಕು ಎಂಬ ಅಪೇಕ್ಷೆ ಟ್ರಂಪ್ ಅವರಲ್ಲಿತ್ತು. ಆದರೆ, ಭಾರತ ವಾಸ್ತವಗಳನ್ನು ತೆರೆದಿಟ್ಟಾಗ ಮತ್ತು ಟ್ರಂಪ್​ರ ಬೆದರಿಕೆ ತಂತ್ರಗಳಿಗೆ ಮಣಿಯದಿದ್ದಾಗ ಅವರು ಸುಂಕಾಸ್ತ್ರವನ್ನು ಪ್ರಯೋಗಿಸಿ, ವಾಣಿಜ್ಯ ಸಮರವನ್ನು ಸಾರಿರುವುದು ಗೊತ್ತೇ ಇದೆ.

ಅಮೆರಿಕ ಮತ್ತು ಇಸ್ರೇಲ್ ನಡುವೆ ಹಳೆಯ ಸ್ನೇಹವಿದೆ. ಅಲ್ಲದೆ, ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕ ಇಸ್ರೇಲ್​ಗೆ ನೆರವನ್ನೂ ನೀಡಿದೆ. ಹಾಗಾಗಿಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಟ್ರಂಪ್ ಹೆಸರನ್ನು ಇದೇ ಜುಲೈನಲ್ಲಿ ನಾಮನಿರ್ದೇಶನ ಮಾಡಿದರು. ‘ಡೊನಾಲ್ಡ್ ಟ್ರಂಪ್ ಅವರು ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದು, ಒಂದಾಂದ ನಂತರ ಒಂದು ದೇಶ, ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ, ಈ ಕಾರಣಕ್ಕೆ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅವರ ನಾಮನಿರ್ದೇಶನ ಮಾಡುತ್ತಿದ್ದೇನೆ’ ಎಂದು ಜುಲೈ 8ರಂದು ಹೇಳಿದ ನೆತನ್ಯಾಹು, ಈ ಕುರಿತು ನೊಬೆಲ್ ಸಮಿತಿಗೆ ತಾವು ಕಳುಹಿಸುತ್ತಿರುವ ಪತ್ರದ ಪ್ರತಿಯನ್ನು ಟ್ರಂಪ್ ಅವರಿಗೆ ನೀಡಿದ್ದರು. ಅಷ್ಟೇ ಅಲ್ಲ, ರಿಪಬ್ಲಿಕನ್ ಪಕ್ಷದ ಸಂಸದರೊಬ್ಬರು ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.

ಈ ಕುರಿತು ಜೂನ್ 24ರಂದು ನೊಬೆಲ್ ಸಮಿತಿಗೆ ಪತ್ರ ಬರೆದಿರುವ ರಿಪಬ್ಲಿಕನ್ ಸಂಸದ ಬಡ್ಡಿ ಕಾರ್ಟರ್, ‘ ಇಸ್ರೇಲ್ ಮತ್ತು ಇರಾನ್ ನಡುವಿನ ಸಶಸ್ತ್ರ ಸಂಘರ್ಷವನ್ನು ಕೊನೆಗಾಣಿಸುವಲ್ಲಿ, ಇರಾನ್ ಅತ್ಯಂತ ಮಾರಕ ಆಯುಧವನ್ನು ಪಡೆಯುವುದನ್ನು ತಡೆಯುವಲ್ಲಿ ಟ್ರಂಪ್ ಅವರು ಅಸಾಧಾರಣ ಮತ್ತು ಐತಿಹಾಸಿಕ ಪಾತ್ರ ಹೊಂದಿದ್ದಾರೆ’ ಎಂದು ವಿವರಿಸಿದ್ದಾರೆ. ಆದರೆ, ನೊಬೆಲ್​ಗಾಗಿ ಟ್ರಂಪ್ ಹೆಸರನ್ನು ಪಾಕಿಸ್ತಾನ ಸಂಸತ್ತು ನಾಮನಿರ್ದೇಶನ ಮಾಡಿರುವ ಕ್ರಮದ ಬಗ್ಗೆ ಪಾಕ್​ನಲ್ಲೇ ತೀವ್ರ ಅಪಸ್ವರ ಕೇಳಿಬಂದಿದೆ. ಒಂದು ವೇಳೆ, ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷನೆಯಾದರೆ, ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡ ಅಮೆರಿಕದ ಐದನೇ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ.

ಶಾಂತಿ ಪ್ರಶಸ್ತಿಯಲ್ಲಿ ರಾಜಕಾರಣಿಗಳ ಪ್ರಾಬಲ್ಯ

ನೊಬೆಲ್ ಶಾಂತಿ ಪ್ರಶಸ್ತಿ ಹಲವು ಬಾರಿ ವಿವಾದಕ್ಕೆ ಒಳಗಾಗಿದೆ. ಅದರಲ್ಲೂ, ರಾಜಕಾರಣಿಗಳೇ ಹೆಚ್ಚು ಬಾರಿ ಈ ಪ್ರಶಸ್ತಿಯನ್ನು ಪಡೆದುಕೊಂಡು, ಪಾರಮ್ಯ ಸಾಧಿಸಿದ್ದಾರೆ. ಬರಾಕ್ ಒಬಾಮ 2009ರಲ್ಲಿ ಅಮೆರಿಕ ಅಧ್ಯಕ್ಷರಾದ ಕೆಲ ತಿಂಗಳಲ್ಲೇ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಲ್ಲದೆ, 1973ರಲ್ಲಿ ವಿಯೆಟ್ನಾಮ್ ಯುದ್ಧವನ್ನು ಕೊನೆಗಾಣಿಸಿದ್ದಕ್ಕೆ ಅಮೆರಿಕದ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮತ್ತು ವಿಯೆಟ್ನಾಮ್ ರಾಜಕಾರಣಿ ಡುಕ್ ಥೋ ಅವರಿಗೆ ಪ್ರಶಸ್ತಿ ನೀಡಿದ್ದಕ್ಕಾಗಿ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಈ ಸರಣಿ ಇಲ್ಲಿಗೆ ಕೊನೆಯಾಗಲಿಲ್ಲ. 1994ರಲ್ಲಿ ಪ್ಯಾಲೇಸ್ತಿನ್ ಮುಖ್ಯಸ್ಥ ಯಾಸೀನ್ ಅರಾಫತ್ ಅವರು ಇಸ್ರೇಲಿನ ಶಿಮೊನ್ ಪೀರ್ಸ್ ಮತ್ತು ಯಿತ್​ರkಾಕ್ ರಾಬಿನ್ ಅವರೊಂದಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡಾಗಲೂ ಸಮಿತಿಯ ಸದಸ್ಯರೊಬ್ಬರು ಹುದ್ದೆಯನ್ನು ತೊರೆದಿದ್ದರು.

ನಾಮನಿರ್ದೇಶನ

ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದವರು, ವಿವಿಧ ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರದ ಪ್ರತಿನಿಧಿಗಳು, ಸಂಸದರು, ಇತಿಹಾಸ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳ ಪ್ರಾಧ್ಯಾಪಕರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು. ಸಾಮಾನ್ಯವಾಗಿ, ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರನ್ನು ಯಾರು ನಾಮನಿರ್ದೇಶನ ಮಾಡಿದ್ದಾರೆ ಎಂಬುದನ್ನು 50 ವರ್ಷಗಳ ಕಾಲ ಗೌಪ್ಯವಾಗಿ ಇಡಲಾಗುತ್ತದೆ. ಆದರೆ, ನಾಮನಿರ್ದೇಶನ ಮಾಡಿದವರು ತಮ್ಮ ಆಯ್ಕೆಗಳನ್ನು ಬಹಿರಂಗವಾಗಿ ಘೋಷಿಸಿಕೊಳ್ಳುವ ಅವಕಾಶವೂ ಇದೆ.

ಹೀಗಿದೆ ಪ್ರಕ್ರಿಯೆ

ನಾರ್ವೆ ಸಂಸತ್ತು ನೇಮಿಸಿದ ಐವರು ಸಂಸದರ ಸಮಿತಿಯು ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ. ಈ ಸಮಿತಿಯಲ್ಲಿ ನಿವೃತ್ತ ರಾಜಕಾರಣಿಗಳೂ ಇರುತ್ತಾರೆ. ಆದರೆ, ಇದು ಕಡ್ಡಾಯವೇನೂ ಅಲ್ಲ. ಸಮಿತಿಗೆ ಯಾರನ್ನೆಲ್ಲ ನೇಮಿಸಬೇಕು ಎಂಬುದನ್ನು ನಾರ್ವೆಯ ರಾಜಕೀಯ ಪಕ್ಷಗಳು ನಿರ್ಧರಿಸುತ್ತವೆ.

ಉಯಿಲಿನಲ್ಲಿ ಬರೆದಿದೆ!

ನೊಬೆಲ್ ಶಾಂತಿ ಪ್ರಶಸ್ತಿ ಯಾರಿಗೆಲ್ಲ ನೀಡಬಹುದು ಎಂಬುದನ್ನು ಆಲ್ಪರ್ಡ್ ನೊಬೆಲ್ ತಮ್ಮ ಉಯಿಲಿನಲ್ಲಿ ಬರೆದಿದ್ದಾರೆ. ಜಗತ್ತಿನಲ್ಲೇ ಸರ್ವಶ್ರೇಷ್ಠವಾದದ್ದನ್ನು ಸಾಧಿಸಿದ ವ್ಯಕ್ತಿ, ಸೇನೆಯನ್ನು ನಿಮೂಲನಗೊಳಿಸಿದವರು ಅಥವಾ ಸೇನಾ ಸಂಖ್ಯೆಯನ್ನು ತಗ್ಗಿಸಿದವರು, ಶಾಂತಿ ಸ್ಥಾಪನೆ ಮಾಡಿದವರು ಮತ್ತು ಶಾಂತಿಯ ಸಂದೇಶಗಳನ್ನು ಸಾರುವವರಿಗೆ ಈ ಪ್ರಶಸ್ತಿ ನೀಡಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ‘ಜಗತ್ತಿನ ಎಲ್ಲ ಪ್ರದೇಶಗಳ ಮತ್ತು ಎಲ್ಲ ಸಮಾಜದ ಎಲ್ಲ ಸ್ತರಗಳ ಜನರನ್ನೂ ಈ ಪ್ರಶಸ್ತಿಗೆ ಪರಿಗಣಿಸಿದ ಉದಾಹರಣೆ ಇದೆ’ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಹಾಲಿ ಅಧ್ಯಕ್ಷ ಜಾರ್ಜಿಯನ್ ವಾಟ್ನೆ ಫ್ರೆ ೖಡ್ನೆಸ್ ಹೇಳಿದ್ದಾರೆ.

ಗಾಂಧಿಗೆ ಸಿಗಲಿಲ್ಲ

ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮಹಾತ್ಮ ಗಾಂಧಿ (ಮೋಹನದಾಸ್ ಕರಮಚಂದ್ ಗಾಂಧಿ) ಅವರ ಹೆಸರನ್ನು 1937ರಿಂದ 1948ರ ಅವಧಿಯಲ್ಲಿ 12 ಬಾರಿ ನಾಮನಿರ್ದೇಶನ ಮಾಡಲಾಗಿತ್ತು. ಈ ಪೈಕಿ 9 ನಾಮನಿರ್ದೇಶನಗಳನ್ನು ಭಾರತೀಯರಲ್ಲದವರು ಮಾಡಿದ್ದರು. ಆದರೆ, ಗಾಂಧೀಜಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಲಭಿಸಲೇ ಇಲ್ಲ.

ಇಂದು ಅಧಿಕೃತ ಘೋಷಣೆ

2025ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರ ಹೆಸರು ಇಂದು (ಅಕ್ಟೋಬರ್ 10) ಸ್ವೀಡನ್ನಿನ ಒಸ್ಲೊದಲ್ಲಿರುವ ನಾರ್ವೆ ನೊಬೆಲ್ ಸಂಸ್ಥೆಯಲ್ಲಿ ಘೋಷಣೆಯಾಗಲಿದೆ. ಇದೇ ನಗರದ ಸಭಾಂಗಣದಲ್ಲಿ ಡಿಸೆಂಬರ್ 10ರಂದು ನಡೆಯುವ ಆಲ್​ಫ್ರೆಡ್ ನೊಬೆಲ್ ಅವರ ಸಂಸ್ಮರಣಾ ದಿನದಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

ಏನೆಲ್ಲ ಇರುತ್ತೆ?

ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗುವವರಿಗೆ ಒಂದು ಪದಕ, 1 ಪದವಿ, 11 ದಶಲಕ್ಷ ಸ್ವೀಡಿಶ್ ಕ್ರೌನ್ (10 ಕೋಟಿ ರೂಪಾಯಿ) ಮತ್ತು ಮುಖ್ಯವಾಗಿ, ಜಾಗತಿಕ ಮನ್ನಣೆ ಸಿಗುತ್ತದೆ.

ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಅಮೆರಿಕದ ಹಿಂದಿನ ಅಧ್ಯಕ್ಷರು

  • ಥಿಯೋಡರ್ ರೂಸ್​ವೆಲ್ಟ್
  • ವೂಡ್ರೊವ್ ವಿಲ್ಸನ್
  • ಜಿಮ್ಮಿ ಕಾರ್ಟರ್
  • ಬರಾಕ್ ಒಬಾಮ

ಕನಿಷ್ಠ ಏಳು ಯುದ್ಧಗಳನ್ನು ನಿಲ್ಲಿಸಿದ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅದು ಅಮೆರಿಕಕ್ಕೆ ಮಾಡುವ ಅವಮಾನ. ನನಗೆ ನೊಬೆಲ್ ಪ್ರಶಸ್ತಿ ಬೇಡ. ಆದರೆ ನಮ್ಮ ದೇಶಕ್ಕೆ (ಅಮೆರಿಕ) ಅದು ಸಿಗಬೇಕು ಎಂದು ಬಯಸುತ್ತೇನೆ. ಯಾರೂ ಮಾಡದ ಕೆಲಸವನ್ನು ನಾನು ಮಾಡಿದ್ದೇನೆ. ಆದರೆ, ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುತ್ತದೆಯೇ? ಖಂಡಿತ ಇಲ್ಲ. ಅದನ್ನು ಅವರು ಕೆಟ್ಟ ಕೆಲಸ ಮಾಡಿದ ವ್ಯಕ್ತಿಗೆ ನೀಡುತ್ತಾರೆ.

| ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ (ವರ್ಜೀನಿಯಾದ ಕ್ವಾಂಟಿಕೋದಲ್ಲಿ ಅ.2ರಂದು ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net