

ಕಾಶ್ಮೀರಿ ಪಂಡಿತರ ಸರಣಿ ಹತ್ಯೆಗಳು ನಡೆದು ಮೂರೂವರೆ ದಶಕಗಳೇ ಕಳೆದಿವೆ. ಆದರೆ, ಇತ್ತೀಚೆಗೆ ಕೆಲ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ, ಹಳೆಯ ಹತ್ಯಾಕಾಂಡದ ಕುರಿತಂತೆ ಮಹತ್ವದ ವಿವರಗಳು ಲಭ್ಯವಾಗುತ್ತಿವೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸರಳಾ ಭಟ್ ಮತ್ತು ನೀಲಕಂಠ ಗಂಜು ಹತ್ಯೆ ಪ್ರಕರಣಗಳ ತನಿಖೆಯನ್ನು 2023ರಲ್ಲಿ ಮರು ಆರಂಭಿಸಲಾಗಿದ್ದು, ಇನ್ನಾದರೂ ನ್ಯಾಯ ಸಿಗುವುದೆ ಎಂಬ ನಿರೀಕ್ಷೆ ಮನೆಮಾಡಿದೆ.
ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ತನ್ನ ಕರಾಳಬಾಹುಗಳನ್ನು ಚಾಚಿದ್ದ ಭಯಾನಕ ಕಾಲವದು. ಈ ಹಿಂದೆ ಸ್ವರ್ಗಸದೃಶವಾಗಿದ್ದ ಕಾಶ್ಮೀರ ಎಲ್ಲೆಲ್ಲೂ ಹಿಂಸೆ, ರಕ್ತಪಾತ, ಕೊಲೆ, ಅತ್ಯಾಚಾರಗಳಿಂದ ನರಕದಂತಾಯಿತು. ಅಲ್ಲಿಯವರ ಯಾತನೆ, ನೋವು, ಸಂಕಟ ಹೇಳಿತೀರದು. ತಮ್ಮದೇ ಮೂಲನೆಲದಲ್ಲಿ ಅನಾಥರಂತೆ ಬದುಕುವ ಸ್ಥಿತಿ ಸೃಷ್ಟಿಯಾಯಿತು. ಮಸೀದಿಗಳಿಂದ ಪ್ರತಿನಿತ್ಯ ಬೆದರಿಕೆಗಳು ಬರತೊಡಗಿದವು. ‘ಹಿಂದು ಧರ್ಮ ತೊರೆದು ಮುಸ್ಲಿಮರಾಗಿ ಇಲ್ಲವೆ ಕೂಡಲೇ ಕಾಶ್ಮೀರ ಕಣಿವೆಯನ್ನು ತೊರೆಯಿರಿ. ಇಲ್ಲವಾದಲ್ಲಿ ನಿಮ್ಮ ಪ್ರಾಣ ಉಳಿಸುವುದಿಲ್ಲ...’ ಎಂಬ ಬೆದರಿಕೆಗಳು ಅಷ್ಟದಿಕ್ಕುಗಳಲ್ಲಿ ಚಿತ್ಕರಿಸಿದವು.
ಅಂದು 1990ರ ಜನವರಿ 4. ಜಮ್ಮು-ಕಾಶ್ಮೀರದ ಹಿಂದುಗಳ ಮನೆ ಬಾಗಿಲಿಗೆ ರಕ್ಕಸ ಭಯೋತ್ಪಾದಕರು ಚೀಟಿಯನ್ನು ಅಂಟಿಸಿದ್ದರು. ‘ಕಾಶ್ಮೀರ ಬಿಟ್ಟು ಹೋಗದಿದ್ದರೆ ಕೊಲ್ಲಲ್ಪಡುತ್ತೀರಿ’ ಎಂದು ಆ ಚೀಟಿಯಲ್ಲಿ ಬೆದರಿಕೆ ಹಾಕಲಾಗಿತ್ತು. ಅದಾದ ಬಳಿಕವೂ ಆಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಂಡಿತರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪರಿಣಾಮ, ಮುಂದೆ ಕೆಲ ದಿನಗಳಲ್ಲೇ ಹಿಂದು ಮುಖಂಡರ, ಅಧಿಕಾರಿಗಳ ಸರಣಿ ಹತ್ಯೆ ನಡೆಯಿತು. ಹಿಂದು ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಲಾಯಿತು. ಮಕ್ಕಳ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಓಡಿಸಲಾಯಿತು.
ಈ ಭೀಕರ ಪರಿಸ್ಥಿತಿಯನ್ನು ಕಂಡು 2ರಿಂದ 3.5 ಲಕ್ಷ ಹಿಂದುಗಳು ಅಲ್ಲಿಂದ ಪಲಾಯನಗೈದಿದ್ದರು. ಆದರೆ, ಕಂಗಳಲ್ಲಿ ಭಾರಿ ದಿಟ್ಟತನ, ಭವಿಷ್ಯದ ಬಗ್ಗೆ ಅಷ್ಟೇ ಸುಂದರ ಕನಸುಗಳನ್ನು ತುಂಬಿಕೊಂಡಿದ್ದ 27 ವರ್ಷದ ಯುವತಿ ಸರಳಾ ಭಟ್ ಭಯೋತ್ಪಾದಕರ ಬೆದರಿಕೆಗೆ ಮಣಿಯಲಿಲ್ಲ. ‘ಇದು ತಾನು ಹುಟ್ಟಿ, ಬೆಳೆದ ನಾಡು. ತಾನೇಕೆ ಈ ನೆಲವನ್ನು ತೊರೆಯಬೇಕು...’ ಎಂದು ಕಾಶ್ಮೀರವಾಸ ಮುಂದುವರಿಸಿದಳು. ಲಕ್ಷಾಂತರ ಜನರು ಪಲಾಯನಗೈದಿರುವಾಗ, ಉಳಿದಿರುವ ಸಾವಿರಾರು ಜನರು ಗಂಟುಮೂಟೆ ಕಟ್ಟುತ್ತಿರುವಾಗ ಈ ಯುವತಿ ಯಾವುದೇ ಬೆದರಿಕೆಗೆ ಮಣಿಯದಿದ್ದದ್ದು ದುರುಳ ಭಯೋತ್ಪಾದಕರಿಗೆ ಸಹಿಸಲಾಗಲಿಲ್ಲ.
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪುಟ್ಟಗ್ರಾಮ ಕಾಜಿಬಾಗ್ನಲ್ಲಿ ನೆಲೆಸಿದ್ದ ಸರಳಾ ಜನರ ಸೇವೆ ಮಾಡಲೆಂದೇ ನರ್ಸಿಂಗ್ ವೃತ್ತಿ ಆಯ್ಕೆ ಮಾಡಿಕೊಂಡಿದ್ದಳು. ಶ್ರೀನಗರದ ಶೇರ್-ಎ-ಕಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ (ಎಸ್ಕೆಐಎಂಎಸ್) ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸರಳಾ ತನ್ನ ಆಕರ್ಷಕ ನಗು ಮತ್ತು ರೋಗಿಗಳಿಗೆ ಕರುಣೆಯಿಂದ ಮಾಡುತ್ತಿದ್ದ ಸೇವೆಯಿಂದ ಗುರುತಿಸಲ್ಪಟ್ಟಿದ್ದಳು. ಬೇರೆಯವರ ನೋವನ್ನು ಕಡಿಮೆ ಮಾಡುವುದರಲ್ಲಿ ಆನಂದ ಪಡುತ್ತಿದ್ದ ಸರಳಾ ಭಾರಿ ಉತ್ಸಾಹಿ ಮತ್ತು ಸದಾ ಕೆಲಸದಲ್ಲೇ ಮುಳುಗಿರುತ್ತಿದ್ದ ಹುಡುಗಿ. ಈ ಸೇವಯನ್ನೇ ನಿಜವಾದ ‘ಕಶ್ಮೀರಿಯತ್’ ಎಂದು ನಂಬಿದ್ದ ಸರಳಾ ಬದುಕು ಕೂಡ ಆಕೆ ಹೆಸರಿನಂತೆ ಸರಳವಾಗಿತ್ತು, ಅಷ್ಟೇ ಸಾರ್ಥಕವಾಗಿತ್ತು.
ಸರಳಾ ಕೆಲಸ ಮಾಡುತ್ತಿದ್ದ ಎಸ್ಕೆಐಎಂಎಸ್ ಆಸ್ಪತ್ರೆಯಲ್ಲೇ ಅಬ್ದುಲ್ ಅಹದ್ ಮತ್ತು ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ನ (ಜೆಕೆಎಲ್ಎಫ್) ಡೆಪ್ಯುಟಿ ಕಮಾಂಡರ್ ಹಮೀದ್ ಶೇಖ್ ಸಕ್ರಿಯರಾಗಿದ್ದರು. ಸರಳಾ ಚಟುವಟಿಕೆಗಳ ಮೇಲೆ, ಚಲನವಲನಗಳ ಮೇಲೆ ಗಮನ ಇರಿಸಿದ್ದ ಅವರು, ಸರಳಾ ಪೊಲೀಸರಿಗೆ ಮಾಹಿತಿ ಒದಗಿಸುತ್ತಿದ್ದಾಳೆ ಎಂದೇ ನಂಬಿದ್ದರು. ಹಾಗಾಗಿಯೇ, ಆಸ್ಪತ್ರೆಯ ಉದ್ಯೋಗ ತೊರೆಯುವಂತೆ ಆಕೆಗೆ ಹಲವು ಬಾರಿ ಬೆದರಿಕೆ ಒಡ್ಡಿದ್ದರು. ಸರಳಾ ಮಣಿಯಲಿಲ್ಲ.
ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ತೊಡಕಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವುದು ತುಂಬ ಸವಾಲಿನ ಕೆಲಸ ಆಗಿತ್ತು. ಕೇಂದ್ರ ಸರ್ಕಾರ 2019ರ ಆಗಸ್ಟ್
ನಲ್ಲಿ ದಿಟ್ಟ ನಿರ್ಧಾರದ ಮೂಲಕ ಇದನ್ನು ಸಾಧ್ಯವಾಗಿಸಿತು. ಆ ಬಳಿಕ ಹೊಮ್ಮಿದ ಆಶಯವೆಂದರೆ ಕಾಶ್ಮೀರದ ಮೂಲನಿವಾಸಿಗಳಾದ ಪಂಡಿತರು ಅಲ್ಲಿ ಮರಳಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ವಾತಾವರಣ ರೂಪುಗೊಳ್ಳಬೇಕು ಎಂಬುದು. ಹಲವು ದಶಕಗಳಿಂದ ಭಯೋತ್ಪಾದನೆಯ ಅಟ್ಟಹಾಸಕ್ಕೆ ನಲುಗಿರುವ ಜಮ್ಮು-ಕಾಶ್ಮೀರ ಹಂತಹಂತವಾಗಿ ಸಹಜ ಸ್ಥಿತಿಗೆ ಬರುತ್ತಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುತ್ತಿರುವುದು ತಲ್ಲಣ, ಭೀತಿ ಮೂಡಿಸಿದೆ.
2022ರ ಮೇ 12ರಂದು ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರ ಹತ್ಯೆ ನಡೆದಿತ್ತು. ಈ ಘಟನೆ ನಡೆದ ಕೆಲ ದಿನಗಳಲ್ಲೇ ಉಗ್ರರು ಜಮ್ಮುವಿನ ಗೋಪಾಲಪುರದ ಪ್ರೌಢಶಾಲೆಯಲ್ಲಿ ಪಂಡಿತ ಸಮುದಾಯದ ರಜನಿ ಬಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಸಾಂಭಾ ನಿವಾಸಿಯಾಗಿದ್ದ ರಜನಿ ಘಟನೆಯ ಎರಡು ತಿಂಗಳ ಹಿಂದಷ್ಟೇ ಇಲ್ಲಿಗೆ ಆಗಮಿಸಿ, ಪತಿ ಹಾಗೂ ಮಗಳೊಂದಿಗೆ ನೆಲೆಸಿದ್ದರು. ಈ ರೀತಿ ದಾಳಿಗಳು ನಡೆಯುತ್ತಿದ್ದರೆ ಪಂಡಿತರಲ್ಲಿ ಸುರಕ್ಷತೆಯ ಭಾವ ಹೇಗೆ ನೆಲೆಸಬಲ್ಲದು?
ಅಂದು 1990ರ ಏಪ್ರಿಲ್ 14. ಸರಳಾ ಕಾಲೇಜಿನ ಹಾಸ್ಟೇಲಿನಲ್ಲಿ ಇದ್ದಳು. ರಕ್ತಪಿಪಾಸು ಭಯೋತ್ಪಾದಕರು ಹಾಸ್ಟೇಲಿಗೆ ನುಗ್ಗಿ ಸರಳಾಳನ್ನು ಅಪಹರಿಸಿ, ಅಪರಿಚಿತ ಪ್ರದೇಶಕ್ಕೆ ಕೊಂಡೊಯ್ದರು. ಆ ರಾಕ್ಷಸರು ಒಂದಲ್ಲ, ಎರಡಲ್ಲ ನಾಲ್ಕು ದಿನಗಳ ಕಾಲ ಸರಳಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಸಾಮೂಹಿಕ ಅತ್ಯಾಚಾರದ ಬಳಿಕ ಈ ಜಿಹಾದಿಗಳು ಆಕೆಯನ್ನು ತುಂಡು ತುಂಡು ಮಾಡಿ ಬರ್ಬರವಾಗಿ ಹತ್ಯೆ ಮಾಡಿದರು. ಬಳಿಕ ಶವವನ್ನು ಶ್ರೀನಗರದ ಲಾಲ್ ಚೌಕ್ನ ರಸ್ತೆಬದಿಯಲ್ಲಿ ಎಸೆದುಹೋದರು. ಶವ ವಿಕೃತವಾಗಿತ್ತು. ಕೈ-ಕಾಲು ಕಟ್ಟಿಹಾಕಲಾಗಿತ್ತು. ಬಾಯಿಗೆ ಬಟ್ಟೆ ತೂರುಕಲಾಗಿತ್ತು. ಜನರಲ್ಲಿ ಭಯ ಮೂಡಿಸಲೆಂದೇ ಉಗ್ರರು ಹೀಗೆ ಪೈಶಾಚಿಕವಾಗಿ ಹತ್ಯೆ ಮಾಡಿದ್ದರು. ಅಷ್ಟೇ ಅಲ್ಲ, ‘ಯಾರೂ ಸರಳಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ’ ಎಂದು ಬೆದರಿಕೆ ಒಡ್ಡಿದರು. ರೋಗಿಗಳ ಸೇವೆ, ಉಪಚಾರ, ಆರೈಕೆಯಲ್ಲಿ ಬದುಕು ಸಾಗಿಸುತ್ತ ಧೈರ್ಯವಾಗಿ ಬದುಕುತ್ತಿದ್ದ ಸರಳಾ ಎಂಬ ದಿಟ್ಟೆ ರಕ್ಕಸರ ಕ್ರೂರತನಕ್ಕೆ, ಪೈಶಾಚಿಕತೆಗೆ ಬಲಿಯಾದಳು. ಈ ಘಟನೆ ಅದೆಷ್ಟು ಭೀತಿ ಮೂಡಿಸಿತು ಎಂದರೆ ಕಾಶ್ಮೀರದಲ್ಲಿ ಅಳಿದುಳಿದಿದ್ದ ಪಂಡಿತರು ಅಲ್ಲಿಂದ ಪಲಾಯನಗೈದರು.
ಸರಳಾ ಹತ್ಯೆ ನಡೆದು 35 ವರ್ಷಗಳು ಕಳೆದಿವೆ. ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಆದರೆ, ಜಮ್ಮು-ಕಾಶ್ಮೀರ ಸ್ಟೇಟ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎಸ್ಐಎ) ಈ ಪ್ರಕರಣದ ಬಗ್ಗೆ ಮರು ತನಿಖೆ ಆರಂಭಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 12ರಂದು ಶ್ರೀನಗರದಲ್ಲಿ ಎಂಟು ಸ್ಥಳಗಳ ಮೇಲೆ ಶೋಧಕ್ಕಾಗಿ ದಾಳಿ ನಡೆಸಿದೆ. ಜೆಕೆಎಲ್ಎಫ್ ಮುಖ್ಯಸ್ಥ ಯಾಸೀನ್ ಮಲೀಕ್ ಮನೆಯನ್ನೂ ಶೋಧಕ್ಕೆ ಒಳಪಡಿಸಲಾಗಿದೆ. ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಅಪರಾಧಕ್ಕಾಗಿ ಯಾಸೀನ್ ಮಲೀಕ್ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, 2022ರಿಂದ ತಿಹಾರ್ ಜೈಲಿನಲ್ಲಿದ್ದಾನೆ.
ಎಸ್ಐಎ ಮೂಲಗಳ 8 ಸ್ಥಳಗಳ ಮೇಲೆ ನಡೆಸಿರುವ ದಾಳಿಯ ವೇಳೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು, ಮುಂದಿನ ತನಿಖೆಗೆ ಅನುಕೂಲವಾಗಲಿದೆ. ಮತ್ತು ಇನ್ನಾದರೂ ಸರಳಾ ಹಂತಕರಿಗೆ ಶಿಕ್ಷೆಯಾಗುವ ನಿರೀಕ್ಷೆ ಗರಿಗೆದರಿದೆ.
ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ 2008ರಲ್ಲಿ ವರದಿಯೊಂದನ್ನು ಜಾರಿ ಮಾಡಿತ್ತು. ಅದರ ಪ್ರಕಾರ 1989ರಿಂದ 2008ರವರೆಗೆ 209 ಕಾಶ್ಮೀರಿ ಪಂಡಿತರ ಭೀಕರ ಹತ್ಯೆ ನಡೆದಿದೆ. ಈ ಸಂಬಂಧ 140 ಪ್ರಕರಣಗಳು ದಾಖಲಾಗಿವೆ. 24 ಪ್ರಕರಣಗಳಲ್ಲಿ ಆರೋಪಪತ್ರ ದಾಖಲಿಸಲಾಗಿದೆ.
90ರ ದಶಕದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರದ ಪರಿಣಾಮ ಲಕ್ಷಾಂತರ ಕಾಶ್ಮೀರಿ ಪಂಡಿತರ ಬದುಕೇ ಶೋಚನೀಯವಾಯಿತು. ಸಿರಿವಂತ, ಮರ್ಯಾದಸ್ತ ಕುಟುಂಬಗಳಿಗೆ ಸೇರಿದ್ದ ಈ ಪಂಡಿತರು ತಮ್ಮದೆಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾದರು. ಜೀವ ಉಳಿದರೆ ಸಾಕು ಎಂಬ ಧಾವಂತದಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಹೋಗಿ ನೆಲೆಸಿದರು. ಆಸ್ತಿಪಾಸ್ತಿ ಸೇರಿ ತಾಯ್ನಾಡಿನ ನಂಟನ್ನು ಕಳೆದುಕೊಂಡು ಗೂಳೆ ಹೋದ ಈ ಜನರ ಬದುಕು ಹಲವು ಸಂಕಷ್ಟಗಳನ್ನು ಕಂಡಿತು. ಕೆಲವರು ಜಮ್ಮು-ಕಾಶ್ಮೀರದಲ್ಲೇ ಟೆಂಟ್ ನಿರ್ವಿುಸಿಕೊಂಡು ವಾಸಿಸಿದರು.
ಪುನರ್ ವಸತಿಗಾಗಿ ಆಗ್ರಹಿಸಿ ಹಲವು ಬಗೆಯ ಹೋರಾಟ ಮಾಡಿದರು. ಸರ್ಕಾರಗಳ ಗಮನ ಸೆಳೆದರು. ಜಮ್ಮು-ಕಾಶ್ಮೀರದಿಂದ ಸಂವಿಧಾನದ 371ನೇ ವಿಧಿಯನ್ನು ಹಿಂಪಡೆದ ನಿರ್ಣಯ ಇವರಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಇದೆಲ್ಲದರ ಬೆನ್ನಲ್ಲೇ, ಕಾಶ್ಮೀರಿ ಪಂಡಿತರ ಪುನರ್ ವಸತಿಗಾಗಿ ವಿಶೇಷ ಟೌನ್ಶಿಪ್ಗಳನ್ನು ನಿರ್ವಿುಸುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಕಾಶ್ಮೀರದ ಹತ್ತು ಜಿಲ್ಲೆಗಳಲ್ಲಿ ಟೌನ್ಶಿಪ್ ನಿರ್ವಿುಸಲು ಉದ್ದೇಶಿಸಿರುವ ಸರ್ಕಾರ, ಹೊಸದಾಗಿ ಬದುಕು ಕಟ್ಟಿಕೊಳ್ಳಲು ಪೂರಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದಿದೆ. ಭಯೋತ್ಪಾದಕರಿಂದ ಹಾಳಾದ, ಅಪವಿತ್ರಗೊಂಡ ದೇವಸ್ಥಾನಗಳ ಮರುನಿರ್ವಣದ ಆಶ್ವಾಸನೆಯೂ ನೀಡಿದೆ.
ಆಲ್ ಪಾರ್ಟಿಸ್ ಹುರಿಯತ್ ಕಾನ್ಪರೆನ್ಸ್ (ಎಪಿಎಚ್ಸಿ)
ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್)
ಲಷ್ಕರ್ ಇ ಜಬ್ಬಾರ್ (ಎಲ್ಇಜೆ)
ಲಷ್ಕರ್ ಇ ಉಮರ್ (ಎಲ್ಇಒ)
ತೆಹ್ರಿಕ್ ಉಲ್ ಮುಜಾಹಿದಿನ್ (ಟಿಯುಎಮ್)
ಕಾಶ್ಮೀರಿ ಹಿಂದುಗಳನ್ನು ಕಾಶ್ಮೀರಿ ಪಂಡಿತರು ಎಂದು ಕರೆಯಲಾಗುತ್ತದೆ. ಈ ಪೈಕಿ ಹೆಚ್ಚಿನವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅಲ್ಲಿಂದ ವಲಸೆಬಂದ ಹಿಂದುಗಳು ‘ಪನುನ್ ಕಾಶ್ಮೀರ್’ ‘ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ’ ಮುಂತಾದ ಸಂಘಟನೆಗಳನ್ನು ಹುಟ್ಟುಹಾಕಿಕೊಂಡು ಕಾಶ್ಮೀರದ ತಮ್ಮ ಮೂಲನೆಲೆಗಳಲ್ಲಿ ನೆಲೆಸಲು ಸೂಕ್ತ ವ್ಯವಸ್ಥೆ ಹಾಗೂ ವಾತಾವರಣ ನಿರ್ವಿುಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. 1990ರ ಡಿಸೆಂಬರ್ ತಿಂಗಳಲ್ಲಿ ಸ್ಥಾಪನೆಯಾಗಿರುವ ‘ಪನುನ್ ಕಾಶ್ಮೀರ್’ ಸಂಘಟನೆ ಕಾಶ್ಮೀರದ ಹಿಂದುಗಳಿಗಾಗಿ ಕಣಿವೆಯಲ್ಲಿ ಪ್ರತ್ಯೇಕ ರಾಜ್ಯ ನಿರ್ವಿುಸಬೇಕೆಂದು ಹೋರಾಟ ನಡೆಸುತ್ತಿದೆ.
ಜೈಷ್ ಇ ಮೊಹಮ್ಮದ್
ಲಷ್ಕರ್ ಇ ತೊಯ್ಬಾ
ಇಂಡಿಯನ್ ಮುಜಾಹಿದ್ದಿನ್
ಅಲ್ ಕೈದಾ (ಗಜಾವತ್ ಅಂಸಾರ್-ಭಾರತೀಯ ಶಾಖೆಯ ಹೆಸರು)
ಹಿಜ್ಬುಲ್ ಮುಜಾಹಿದಿನ್
ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್
ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ
ಹರ್ಕತ್ ಉಲ್ ಮುಜಾಹಿದಿನ್
ಅಲ್ ಬದರ್
ಅಲ್ ಉಮರ್ ಮುಜಾಹಿದಿನ್