ಆ ಕ್ಷಣ... | ಕರೊನಾ ಹೆಸರಲ್ಲಿ ಪತ್ನಿಯ ಸ್ಕೆಚ್!

A kshana
Published on
ಮಹಾನಗರವೊಂದರಲ್ಲಿನ ಖಾಸಗಿ ಸಂಸ್ಥೆಯಲ್ಲಿ 40 ವರ್ಷದ ಬಿಪಿನ್ ಮ್ಯಾನೇಜರ್ ಆಗಿದ್ದ. ಆತನ ಪತ್ನಿ 31 ವರ್ಷದ ಸುಜಾತಾ ಅವನ ತವರು ಜಿಲ್ಲೆಯವಳೇ ಆಗಿದ್ದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಲಗ್ನವಾಗಿ ಆರು ವರ್ಷವಾದರೂ ಅವರಿಗೆ ಮಕ್ಕಳಾಗಿರಲಿಲ್ಲ. ‘ನನಗೆ ಒಬ್ಬಂಟಿಗಳಾಗಿ ಮನೆಯಲ್ಲಿರಲು ಬೋರ್ ಆಗುತ್ತಿದೆ, ಯಾವುದಾದರೂ ಕೆಲಸಕ್ಕೆ ಸೇರುತ್ತೇನೆ’ ಎಂದು ಒಂದು ದಿನ ಸುಜಾತಾ ಹೇಳಿದಾಗ, ಬಿಪಿನ್ ಮರುಮಾತಾಡದೆ ಒಪ್ಪಿದ.

ತನ್ನ ಬಡಾವಣೆಯಲ್ಲಿಯೇ ಇದ್ದ ಸೀರೆಯಂಗಡಿಯೊಂದರಲ್ಲಿ ಸುಜಾತಾ ಸೇಲ್ಸ್​ಗರ್ಲ್ ಆಗಿ ಕೆಲಸಕ್ಕೆ ಸೇರಿದಳು. ಅದೇ ಅಂಗಡಿಯಲ್ಲಿ 24 ವರ್ಷದ ಶೇಖರ್ ಕೆಲಸಮಾಡುತ್ತಿದ್ದ. ಸ್ಪುರದ್ರೂಪಿಯಲ್ಲದಿದ್ದರೂ ಮಾತಿನ ಮೋಡಿಯಿಂದಲೇ ಗ್ರಾಹಕರನ್ನು ಮರುಳುಮಾಡುತ್ತಿದ್ದ ಅವನತ್ತ ಸುಜಾತಾ ಸಹಜವಾಗಿಯೇ ಆಕರ್ಷಿತಳಾದಳು. ಇಬ್ಬರೂ ಜತೆಯಾಗಿ ಹೋಟೆಲುಗಳಿಗೆ, ಸಿನಿಮಾಗಳಿಗೆ ಹೋಗುತ್ತಿದ್ದಂತೆ ದೈಹಿಕ ಸಂಬಂಧವೂ ಬೆಳೆಯಿತು.

ತನ್ನ ಕೆಲಸಕಾರ್ಯಗಳಲ್ಲೇ ಮಗ್ನನಾಗಿ ತಡರಾತ್ರಿ ಮನೆಗೆ ವಾಪಸಾಗುತ್ತಿದ್ದ ಬಿಪಿನ್​ಗೆ ಸುಜಾತಾ ಬಗ್ಗೆ ಸ್ವಲ್ಪವೂ ಸಂಶಯ ಬಂದಿರಲಿಲ್ಲ. ಒಂದು ಸಂಜೆ ಸುಜಾತಾ ಶೇಖರನಿಗೆ ‘ನಾವಿಬ್ಬರೂ ಮದುವೆಯಾಗೋಣ, ನಾನು ಗಂಡನನ್ನು ಬಿಟ್ಟು ಬರಲು ತಯಾರಾಗಿದ್ದೇನೆ’ ಎಂದಾಗ ಆತ ತಬ್ಬಿಬ್ಬಾದ. ಆದರೂ ಸಾವರಿಸಿಕೊಂಡು ‘ನಾನೇನೋ ನಿನ್ನನ್ನು ಮದುವೆಯಾಗಲು ತಯಾರಾಗಿರುವೆ, ಆದರೆ ನನ್ನ ಸದ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಈ ನೌಕರಿಯಿಂದ ಬರುವ ಅಲ್ಪ ಸಂಬಳದಲ್ಲೇ ರೋಗದಿಂದಿರುವ ನನ್ನ ವೃದ್ಧ ತಾಯಿಯನ್ನು ನೋಡಿಕೊಳ್ಳಬೇಕು, ಮನೆಯನ್ನೂ ನಿಭಾಯಿಸಬೇಕು, ಈಗ ಮದುವೆ ಬೇಡ, ನಾವಿಬ್ಬರೂ ಸ್ನೇಹಿತರಾಗಿಯೇ ಉಳಿಯೋಣ’ ಎಂದ. ಸುಜಾತಾ ಬೇಸರಗೊಂಡರೂ ಮರುಮಾತನಾಡಲಿಲ್ಲ.

ಏತನ್ಮಧ್ಯೆ, ಬಿಪಿನ್ ಅದೇ ನಗರದಲ್ಲಿ ಸೈಟ್ ಖರೀದಿಸಲು ಪ್ರಯತ್ನಿಸುತ್ತಿದ್ದ. ಕಡೆಗೂ ಆತನಿಗೆ ಇಷ್ಟವಾದ ಸೈಟ್ ಲಭ್ಯವಾಯಿತು. ಅದರ ಖರೀದಿಗಾಗಿ 40 ಲಕ್ಷ ರೂ. ಹೊಂದಿಸಿದ್ದ ಬಿಪಿನ್ ಕೆಲವೇ ದಿನಗಳಲ್ಲಿ ಖರೀದಿಯ ಪ್ರಕ್ರಿಯೆ ನಡೆಯುತ್ತಿದ್ದ ಕಾರಣ ಅಷ್ಟೂ ಹಣವನ್ನು ಮನೆಯಲ್ಲಿಯೇ ತಂದಿಟ್ಟು ತಿಜೋರಿಯಲ್ಲಿ ಜೋಪಾನ ಮಾಡಿದ.

ಹಣದ ಬಗ್ಗೆ ಸುಜಾತಾಳಿಗೆ ತಿಳಿಸಿದಾಗ ಆಕೆಯ ಮನಸ್ಸಿನಲ್ಲಿ ಯೋಜನೆಯೊಂದು ರೂಪುಗೊಂಡಿತು. ಆಕೆ ಅಂದು ಅಂಗಡಿಗೆ ಹೋದಾಗ ಶೇಖರ್​ನನ್ನುದ್ದೇಶಿಸಿ, ‘ನಮ್ಮಿಬ್ಬರ ಸಮಸ್ಯೆಗೆ ಭಗವಂತನೇ ಉತ್ತರ ನೀಡಿದ್ದಾನೆ. ನನ್ನ ಗಂಡ ಮನೆಯಲ್ಲಿ 40 ಲಕ್ಷರೂ ನಗದನ್ನು ತಂದಿಟ್ಟಿದ್ದಾನೆ. ನಾವು ಅದನ್ನು ಲಪಟಾಯಿಸಿ ನಂತರ ಮದುವೆ ಮಾಡಿಕೊಳ್ಳೋಣ. ನಾನೂ ಸಂಪಾದನೆ ಮಾಡಿ ಮನೆಯ ಖರ್ಚನ್ನು ಸರಿದೂಗಿಸುವೆ’ ಎಂದಳು. ‘ನೀನೇ ಆ ಹಣವನ್ನು ಕಳ್ಳತನ ಮಾಡಿ ಮನೆಯಿಂದ ಓಡಿ ಬಾ’ ಎಂದು ಶೇಖರ್ ಸೂಚಿಸಿದಾಗ, ‘ಹಾಗೆ ಮಾಡಿದರೆ ನನ್ನ ಮೇಲೆಯೇ ಅನುಮಾನ ಬಂದು ಸಿಕ್ಕಿಬೀಳುವುದಿಲ್ಲವೇ? ಬೇರೆಯೇ ಉಪಾಯ ಮಾಡಬೇಕು’ ಎಂದಳು.

ಶೇಖರ್ ಸುಜಾತಾಳನ್ನು ತನ್ನ ಗೆಳೆಯನಾದ ಮೆಲ್ವಿನ್​ನ ಮನೆಗೆ ಕರೆದೊಯ್ದ. ಅಲ್ಲಿ ಅವನ ಇತರ ಗೆಳೆಯರಾದ ಪವನ್ ಮತ್ತು ತೇಜು ಎನ್ನುವವರಿದ್ದರು. ಬಿಪಿನ್​ನನ್ನು ಅಪಹರಿಸಿ ಬಿಡುಗಡೆ ಮಾಡಲು ಒಂದು ಕೋಟಿ ರೂ. ಬೇಡಿಕೆಯನ್ನಿಟ್ಟು ಬಂದ ಹಣದಲ್ಲಿ ಮೂವರು ಸ್ನೇಹಿತರು ಐದು ಲಕ್ಷ ರೂ ಪಡೆದು ಉಳಿದಿದ್ದನ್ನು ಶೇಖರ್ ಮತ್ತು ಸುಜಾತಾರ ಮುಂದಿನ ಸಂಸಾರಕ್ಕಾಗಿ ಇಟ್ಟುಕೊಳ್ಳಬೇಕು ಎಂದು ಎಲ್ಲರೂ ತೀರ್ವನಿಸಿದರು. ಮೆಲ್ವಿನ್ ಖಾಸಗಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕನಾಗಿದ್ದು ಆತನ ಆಂಬುಲೆನ್ಸ್​ನಲ್ಲಿ ಬಿಪಿನ್​ನನ್ನು ಅಪಹರಿಸಿ ಪವನ್​ನ ಸಂಬಂಧಿಕರ ತೋಟದ ಮನೆಯಲ್ಲಿ ಕೂಡಿಹಾಕಬೇಕೆಂದು ತೀರ್ವನವಾಯಿತು. ಮಾರನೆಯ ಬೆಳಿಗ್ಗೆಯೇ ಅಪಹರಣದ ಮುಹೂರ್ತ ನಿಗದಿಯಾಯಿತು.

ಬೆಳಗ್ಗೆ ಸುಜಾತಾ ಹಾಸಿಗೆಯಿಂದ ಏಳಲಿಲ್ಲ. ಏನಾಗಿದೆ ಎಂದು ಆತಂಕದಿಂದ ಬಿಪಿನ್ ಕೇಳಿದಾಗ ‘ಬಹಳ ಹೊಟ್ಟೆನೋಯುತ್ತಿದೆ, ಮೆಡಿಕಲ್ ಶಾಪ್​ಗೆ ಹೋಗಿ ಮಾತ್ರೆ ತೆಗೆದುಕೊಂಡು ಬನ್ನಿ’ ಎಂದಳು. ಅಂತೆಯೇ ಬಿಪಿನ್ ಮನೆಯ ಬಳಿಯಿದ್ದ ಮೆಡಿಕಲ್ ಶಾಪ್​ಗೆ ಹೋದ. ಆಗ ಅಂಗಡಿಯ ಬಳಿ ಆಂಬುಲೆನ್ಸ್​ನಲ್ಲಿ ಕಾದು ಕುಳಿತಿದ್ದ ಪವನ್ ಮತ್ತು ತೇಜು ಅವನನ್ನು ಹಿಂದಿನಿಂದ ಬಿಗಿಯಾಗಿ ಹಿಡಿದರು. ಗಾಬರಿಯಾದ ಅಂಗಡಿಯವನಿಗೆ ‘ಈ ವ್ಯಕ್ತಿಗೆ ಕೋವಿಡ್ ರೋಗ ಬಂದಿದೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಿಬಂದಿದ್ದಾನೆ’ ಎಂದು ಹೇಳಿ ಬಲವಂತವಾಗಿ ಬಿಪಿನ್​ನನ್ನು ಎಳೆದುಕೊಂಡು ಆಂಬುಲೆನ್ಸ್​ನಲ್ಲಿ ಕೂರಿಸಿದರು. ನಂತರ ಬಿಪಿನ್​ನ ಕಣ್ಣಿಗೆ ಬಟ್ಟೆ ಕಟ್ಟಿ ಪಕ್ಕದ ಜಿಲ್ಲೆಯಲ್ಲಿನ ತೋಟದ ಮನೆಯೊಂದಕ್ಕೆ ಕರೆದೊಯ್ದರು. ಅಲ್ಲಿ ಅವನನ್ನು ಮನಬಂದಂತೆ ಥಳಿಸಿ, ‘ನೀನು ಒಂದು ಕೋಟಿ ರೂ ಕೊಟ್ಟರೆ ಬಿಡುಗಡೆ ಮಾಡುತ್ತೇವೆ, ಇಲ್ಲದಿದ್ದರೆ ನಿನ್ನನ್ನು ಇಲ್ಲೇ ಕೊಲೆ ಮಾಡಿ ದೇಹವನ್ನು ಬಾವಿಯಲ್ಲಿ ಬಿಸಾಕುತ್ತೇವೆ’ ಎಂದರು. ಬಿಪಿನ್​ನ ಪರ್ಸ್​ನಿಂದ ಡೆಬಿಟ್, ಕ್ರೆಡಿಟ್ ಕಾರ್ಡ್​ಗಳನ್ನು ಕಸಿದುಕೊಂಡು ಅದರ ಪಾಸ್​ವರ್ಡ್ ಹೇಳಲು ಹೇಳಿದರು. ಬಿಪಿನ್ ಬೇಕೆಂತಲೇ ತಪ್ಪು ಪಾಸ್​ವರ್ಡ್ ಕೊಟ್ಟ. ಅಪಹರಣಕಾರರು ಎ.ಟಿ.ಎಂನಿಂದ ಹಣ ತೆಗೆಯಲು ಸಾಧ್ಯವಾಗದ ಕಾರಣ ಕೋಪಗೊಂಡು ಬಿಪಿನ್​ನನ್ನು ಮತ್ತಷ್ಟು ಥಳಿಸಿದರು. ಕೂಡಲೇ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಸಿದರು.

ಗಾಯಗೊಂಡಿದ್ದ ಬಿಪಿನ್ ತನಗೆ ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲವೆಂದು ಅಂಗಲಾಚಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಶೇಖರ್ ‘ಕಡೆಯ ಪಕ್ಷ ಐವತ್ತು ಲಕ್ಷ ರೂಗಳನ್ನಾದರೂ ಕೊಟ್ಟರೆ ನಿನ್ನನ್ನು ಬಿಡುತ್ತೇವೆ’ ಎಂದ. ಪ್ರಯತ್ನಿಸುವೆ ಎಂದ ಬಿಪಿನ್ ತನ್ನ ಮೊಬೈಲ್ ಫೋನಿನಿಂದಲೇ ಗೆಳೆಯರಾದ ಬಾಲಾಜಿ ಮತ್ತು ವಿಶ್ವನಾಥ್​ಗೆ ಕರೆ ಮಾಡಿ ‘ಅರ್ಜೆಂಟಾಗಿ 40 ಲಕ್ಷ ರೂಪಾಯಿಯ ಅವಶ್ಯಕತೆಯಿದೆ. ನಾಳೆ ಮುಂಜಾನೆಯೇ ನಗದು ಹಣವನ್ನು ಮನೆಯಲ್ಲಿರುವ ಸುಜಾತಾಗೆ ಮುಟ್ಟಿಸಿ’ ಎಂದು ಹೇಳಿ ತಟ್ಟೆಂದು ಫೋನ್ ಇಟ್ಟ. ಏಕಾಏಕಿ ಭಾರೀ ಮೊತ್ತದ ಹಣವನ್ನು ಬಿಪಿನ್ ಕೇಳುತ್ತಿರುವ ಬಗ್ಗೆ ಬಾಲಾಜಿಗೆ ಅನುಮಾನ ಬಂದು ಆತ ವಿಶ್ವನಾಥ್​ಗೆ ವಿಷಯ ತಿಳಿಸಿದ. ತನಗೂ ಇದೇ ರೀತಿಯ ಕರೆ ಬಂತು ಎಂದು ಹೇಳಿದ ವಿಶ್ವನಾಥ್, ಕೂಡಲೇ ಬಿಪಿನ್​ನ ಮನೆಗೆ ಹೋಗಿ ವಿಚಾರಿಸೋಣವೆಂದ.

ಮಾರನೆಯ ದಿನ ಬೆಳಿಗ್ಗೆಯೇ ಇಬ್ಬರೂ ಸುಜಾತಾಳ ಮನೆಗೆ ಹೋದಾಗ ಆಕೆ, ಬಿಪಿನ್ ಮನೆಯಲ್ಲಿಲ್ಲ, ಅವನಿಗೆ ಕರೋನಾ ಬಂದಿರುವ ಕಾರಣ ಖಾಸಗಿ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದಾನೆ ಎಂದಳು. ಬಿಪಿನ್ ಆಸ್ಪತ್ರೆಯ ಖರ್ಚಿಗಾಗಿ ಹಣವನ್ನು ಕೇಳುತ್ತಿರಬಹುದು ಎಂದು ಊಹಿಸಿದ ಸ್ನೇಹಿತರು ಸುಜಾತಾ ಹೇಳಿದ ಆಸ್ಪತ್ರೆಗೆ ಹೋದರು. ಅಲ್ಲಿ ಬಿಪಿನ್ ಹೆಸರಿನ ಯಾರೂ ದಾಖಲಾಗಿಲ್ಲ ಎಂದು ತಿಳಿದಾಗ ಗಾಬರಿಗೊಂಡು ಸುಜಾತಾಳ ಮನೆಗೆ ವಾಪಸಾದರು. ‘ಬಿಪಿನ್​ನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದಿರಬಹುದು, ಅವನಿಗೆ ಕರೊನಾ ದೃಢಪಟ್ಟಿರುವ ಬಗ್ಗೆ ನೀಡಿರುವ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ ಇಲ್ಲಿದೆ’ ಎಂದು ಅದನ್ನು ತೋರಿಸಿದಳು. ಆದರೆ ಅವಳ ವರ್ತನೆಯಿಂದ ಅನುಮಾನಗೊಂಡ ಬಾಲಾಜಿ, ಬಿಪಿನ್​ನನ್ನು ಅಪಹರಿಸಿರಬಹುದೆಂದು ರ್ತಸಿ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಸುಜಾತಾಗೆ ತಿಳಿಸಿ ಪೊಲೀಸ್ ಠಾಣೆಗೆ ಹೋದ. ಬಿಪಿನ್ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಆತ ಹಣ ಕೇಳಿ ಫೋನ್ ಮಾಡಿದ್ದಾಗಿ ತಿಳಿಸಿದ. ಅನುಮಾನಗೊಂಡ ಪೊಲೀಸರು ಬಿಪಿನ್​ನ ಫೋನನ್ನು ಲೊಕೇಷನ್ ಸರ್ಚ್​ಗೆ ಹಾಕಿಸಿದರು.

ಪೊಲೀಸರು ಸುಜಾತಾಳನ್ನು ವಿಚಾರಿಸಿದಾಗ ಆಕೆ ತನ್ನ ಗಂಡನಿಗೆ ಕರೊನಾ ಬಂದಿದೆಯೆಂದೇ ಸಾಧಿಸಿದಳು. ಪೊಲೀಸರು ಹೋದ ಕೂಡಲೇ ಆಕೆ ಶೇಖರನಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿ ಬಿಪಿನ್​ನನ್ನು ಕೊಲೆ ಮಾಡಲು ಸೂಚಿಸಿದಳು. ಈ ಸೂಚನೆಗೆ ಒಪ್ಪದ ಶೇಖರ ‘ನಿನ್ನೆ ರಾತ್ರಿ ಬಿಪಿನ್​ನ ಫೋನ್​ನಿಂದಲೇ ಇಬ್ಬರೂ ಗೆಳೆಯರಿಗೆ ಕರೆ ಹೋಗಿರುವುದರಿಂದ ನಾವಿರುವ ತಾಣವನ್ನು ಪೊಲೀಸರು ಖಂಡಿತವಾಗಿಯೂ ಕಂಡುಹಿಡಿಯುತ್ತಾರೆ, ನಾನು ಕೊಲೆಗೆ ಒಪ್ಪುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿ ಬಿಪಿನ್​ನನ್ನು ದೂರದ ಊರೊಂದಕ್ಕೆ ಕರೆದೊಯ್ದು ಅಲ್ಲಿ ಬಿಡುಗಡೆ ಮಾಡಿದ. ಅದೇ ರಾತ್ರಿ ಮನೆಗೆ ವಾಪಸಾದ ಬಿಪಿನ್ ತನ್ನ ಗೆಳೆಯರೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ನಡೆದ ವಿಷಯವನ್ನು ತಿಳಿಸಿದ. ಈಗಾಗಲೇ ದಾಖಲಾಗಿದ್ದ ಕಾಣೆಯಾದ ಪ್ರಕರಣವನ್ನು ಅಪಹರಣ, ಗಾಯ ಮತ್ತು ಸುಲಿಗೆಯ ಪ್ರಯತ್ನದ ಪ್ರಕರಣವನ್ನಾಗಿ ಪರಿವರ್ತಿಸಲಾಯಿತು. ಸುಜಾತಾಳ ಫೋನಿನ ವಿವರಗಳನ್ನು ಪಡೆದು ಬಿಪಿನ್ ಕಾಣೆಯಾದ ಸಮಯದಿಂದ ಆಕೆ ಶೇಖರನ ಫೋನ್​ಗೆ ಪದೇಪದೆ ಕರೆ ಮಾಡಿರುವುದನ್ನು ಗಮನಿಸಿ ಶೇಖರನನ್ನು ಪತ್ತೆ ಮಾಡಲಾಯಿತು. ಅವನ ಹೇಳಿಕೆಯ ಮೇರೆಗೆ ಸುಜಾತಾಳನ್ನು ಪ್ರಶ್ನಿಸಿದಾಗ ಆಕೆ ತಾನು ಮಾಡಿದ್ದ ಒಳಸಂಚನ್ನು ಒಪ್ಪಿಕೊಂಡಳು.

ಆನಂತರ ಮೆಲ್ವಿನ್, ಪವನ್ ಮತ್ತು ತೇಜುವನ್ನು ಬಂಧಿಸಲಾಯಿತು. ಕರೋನಾ ರೋಗವಿದೆಯೆಂದು ಪ್ರಮಾಣಪತ್ರ ನೀಡಿದ ಡಾ.ಗಂಗಾಧರನನ್ನು ಬಂಧಿಸಿದಾಗ, ಮೆಲ್ವಿನ್ ತನ್ನ ಆಸ್ಪತ್ರೆಯ ಆಂಬುಲೆನ್ಸ್​ನ ಚಾಲಕನಾಗಿರುವ ಕಾರಣ ಅವನ ವಿನಂತಿ ಮೇರೆಗೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಕೊಟ್ಟೆ ಎಂದ. ಅವನನ್ನೂ ಬಂಧಿಸಿ ಎಲ್ಲರ ಮೇಲೆಯೂ ಒಳಸಂಚು, ಅಪಹರಣ, ಅಕ್ರಮ ಬಂಧನ, ಸುಲಿಗೆ ಮುಂತಾದ ಆರೋಪಗಳಿರುವ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ. ಒಂದು ವೇಳೆ ಆರೋಪ ಸಾಬೀತಾದರೆ ಎಲ್ಲರಿಗೂ ಜೈಲು ಶಿಕ್ಷೆ ಖಚಿತ. ‘ಇಂಬರಿಯದಾಕೆಯ ನಂಬುಗೆಗೊಂಡರೆ ತುಂಬಿದ ತೊರೆಯ ನಡುವೆಯೇ ಮಾಮರದ ಕೊಂಬು ಕಾತಂತೆ ಸರ್ವಜ್ಞ’ ಎನ್ನುವಂತೆ ಸುಜಾತಳನ್ನು ಸಂಪೂರ್ಣವಾಗಿ ನಂಬಿದ್ದು ಬಿಪಿನ್​ನ ಹುಂಬತನವೇ ಅಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net