

ಇಪ್ಪತ್ತೆಂಟು ವರ್ಷದ ಸುಖೀ ಸಿಂಗ್ ಉತ್ತರಪ್ರದೇಶದ ಶಹಜಹಾನ್ಪುರ ನಗರದ ಬಳಿಯಿದ್ದ ಬಸಂತಪುರ ಗ್ರಾಮದ ಪ್ರಗತಿಪರ ರೈತನ ಪುತ್ರ. ಅವನಿಗಿದ್ದ ಇಬ್ಬರೂ ಸೋದರಿಯರು ಲಗ್ನವಾಗಿ ಕೆನಡಾ ಮತ್ತು ಚಂಡೀಗಢದಲ್ಲಿದ್ದರು. ಬಹಳಷ್ಟು ಸಿಖ್ ಯುವಕರಂತೆ ಸುಖೀಗೆ ವಿದೇಶದ ವ್ಯಾಮೋಹ. ತಂದೆ-ತಾಯಿಯ ವಿರೋಧದ ನಡುವೆಯೂ ಸತತ ಪ್ರಯತ್ನ ಮಾಡಿ ಆತ ಇಂಗ್ಲೆಂಡಿನ ಇಮಿಗ್ರೆಂಟ್ ವೀಸಾ ಪಡೆದ. ಮದುವೆ ಮಾಡಿಕೊಂಡೇ ಹೊರದೇಶಕ್ಕೆ ಹೋಗಬೇಕೆಂದು ಅವನ ತಂದೆ-ತಾಯಿ ತಾಕೀತು ಮಾಡಿದಾಗ ಸುಖೀ ಪಂಜಾಬಿನ 26 ವರ್ಷದ ಅರ್ಚನಾಳನ್ನು ವಿವಾಹವಾದ. ಮದುವೆಯಾದ ಕೂಡಲೇ ಇಂಗ್ಲೆಂಡ್ಗೆ ಹೊರಟ ಸುಖೀ ಬೇಗನೇ ಪತ್ನಿಯನ್ನು ತನ್ನೂರಿಗೆ ಕರೆಸಿಕೊಳ್ಳುವುದಾಗಿ ಹೇಳಿದ. ಲಂಡನ್ನಲ್ಲಿ ಸುಖೀ ಚಿಕ್ಕದೊಂದು ಸಮೋಸಾ ಅಂಗಡಿಯನ್ನು ತೆರೆದು ಉತ್ತಮವಾಗಿ ವ್ಯಾಪಾರ ಮಾಡತೊಡಗಿದ.
ಇಂಗ್ಲೆಂಡಿನ ವೀಸಾ ಪಡೆಯಲು ಅರ್ಚನಾ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿತ್ತು. ಆಗ ಅವಳಿಗೆ ಸಹಾಯ ಮಾಡಲು ಬಂದವನೇ ಸುಖೀನ ಸಹಪಾಠಿ ಭೂಪಿಂದರ್ ಸಿಂಗ್. ಪದವೀಧರನಾಗಿದ್ದ ಭೂಪಿಂದರ್, ಅರ್ಚನಾಳಿದ್ದ ಊರಿನಲ್ಲೇ ಅಂಗಡಿಯೊಂದನ್ನಿಟ್ಟಿದ್ದ. ಆತ ಪ್ರತಿದಿನವೂ ಅರ್ಚನಾಳ ಮನೆಗೆ ಬಂದು ಅವಳಿಗೆ ಇಂಗ್ಲಿಷ್ ಕಲಿಸತೊಡಗಿದ. ಕಾಲಕ್ರಮೇಣ ಅರ್ಚನಾಳ ಜತೆ ಆತ ದೈಹಿಕ ಸಂಪರ್ಕವನ್ನೂ ಬೆಳೆಸಿದ. ಆರು ತಿಂಗಳ ನಂತರ ಅರ್ಚನಾಗೆ ವೀಸಾ ದೊರಕಿತು. ಅದೇ ಸಮಯಕ್ಕೆ ಸುಖೀನ ತಂದೆ ದೈವಾಧೀನರಾದರು. ಸುಖೀ ಭಾರತಕ್ಕೆ ಬಂದು ತಂದೆಯ ಕರ್ಮಗಳನ್ನು ಮಾಡಿದ. ನಂತರ ಅರ್ಚನಾಳನ್ನು ತನ್ನೊಡನೆ ಲಂಡನ್ಗೆ ಕರೆದೊಯ್ದ.
ಅರ್ಚನಾ ಅಂಗಡಿ ನಡೆಸಲು ಗಂಡನ ನೆರವಾದಳು. ಎರಡೇ ವರ್ಷಗಳಲ್ಲಿ ಸುಖೀನ ಬಿಜಿನೆಸ್ ಅಭಿವೃದ್ಧಿಯಾಗಿ ಆತ ಪಂಜಾಬಿ ರೆಸ್ಟೊರೆಂಟ್ ತೆಗೆದ. ಈ ದಂಪತಿಗೆ ಮೂರು ವರ್ಷಗಳ ಅಂತರದಲ್ಲಿ ಇಬ್ಬರು ಗಂಡುಮಕ್ಕಳು ಜನಿಸಿದರು. ಅವರೇ ಅರ್ಜುನ್ ಮತ್ತು ಆರ್ಯನ್. ಕುಟುಂಬವು ಆರಾಮದ ಜೀವನ ನಡೆಸಿತ್ತು. ಒಂದು ವರ್ಷದ ನಂತರ ಅರ್ಚನಾಳ ತಂದೆ-ತಾಯಿಯೂ ಇಂಗ್ಲೆಂಡಿಗೆ ವಲಸೆ ಬಂದು ಬರ್ವಿುಂಗ್ಹ್ಯಾಂ ನಗರದಲ್ಲಿ ವಾಸಿಸತೊಡಗಿದರು. ಇತ್ತ ಭೂಪಿಂದರ್ ಸಿಂಗ್ ಸಹ ಮದುವೆ ಮಾಡಿಕೊಂಡು ಬೆಲ್ಜಿಯಂ ದೇಶಕ್ಕೆ ವಲಸೆ ಹೋಗಿ ಅಲ್ಲಿ ಒಂದು ಬಿಜಿನೆಸ್ ಆರಂಭಿಸಿದ್ದ. ಆತ ಎರಡು-ಮೂರು ತಿಂಗಳಿಗೊಮ್ಮೆ ಇಂಗ್ಲೆಂಡಿಗೆ ಹೋಗಿ ಸುಖೀನ ಕುಟುಂಬದೊಡನೆ ಸಮಯ ಕಳೆಯುತ್ತಿದ್ದ. ಹಾಗೆಯೇ ಸುಖೀ ಸಹ ಕುಟುಂಬದೊಡನೆ ಬೆಲ್ಜಿಯಂಗೆ ಬರುತ್ತಿದ್ದ. ಇಂತಹ ಸಂದರ್ಭಗಳಲ್ಲಿ ಭೂಪಿಂದರ್ ಮತ್ತು ಅರ್ಚನಾ ಗುಟ್ಟಾಗಿ ತಮ್ಮ ದೈಹಿಕ ಸಂಬಂಧವನ್ನು ಮುಂದುವರಿಸಿದರು. ಸುಖೀಗಾಗಲೀ, ಭೂಪಿಯ ಪತ್ನಿಗಾಗಲೀ ಈ ವಿಷಯದ ಸುಳಿವೂ ಸಿಗದಂತೆ ಇಬ್ಬರೂ ಎಚ್ಚರ ವಹಿಸಿದರು.
ಕಾಲಕ್ರಮೇಣ ಇವರ ನಡುವಿನ ಪ್ರೇಮ ಎಷ್ಟು ಗಾಢವಾಯಿತೆಂದರೆ ಇಬ್ಬರೂ ಒಬ್ಬರನ್ನಗಲಿ ಇನ್ನೊಬ್ಬರು ಇರದಂತಾಯಿತು. ಕಡೆಗೆ ಇಬ್ಬರೂ ಲಗ್ನ ಮಾಡಿಕೊಂಡು ಬೇರೊಂದು ದೇಶಕ್ಕೆ ಹೋಗಿ ವಾಸಿಸಲು ತೀರ್ವನಿಸಿದರು. ಆ ಸಮಯದಲ್ಲಿ ಅರ್ಚನಾಳ ಮಕ್ಕಳು 10 ಮತ್ತು 7 ವಯಸ್ಸಿನವರಾಗಿದ್ದು ಭೂಪಿಂದರ್ಗೆ ಮಕ್ಕಳಿರಲಿಲ್ಲ. ಸರಿಸುಮಾರು ಇದೇ ಸಮಯಕ್ಕೆ ಸುಖೀ ತನ್ನ ಜೀವದ ಮೇಲೆ ಹತ್ತು ಲಕ್ಷ ಪೌಂಡ್ ವಿಮಾ ಪಾಲಿಸಿ ಮಾಡಿಸಿ ಅರ್ಚನಾಳನ್ನೇ ನಾಮಿನಿ ಮಾಡಿದ. ಈ ವಿಷಯವನ್ನರಿತ ಕೂಡಲೇ ಅರ್ಚನಾ ಭೂಪಿಂದರ್ನನ್ನು ಸಂರ್ಪಸಿ ತನ್ನ ಗಂಡನನ್ನು ಕೊಂದು ಅವನ ವಿಮೆಯ ಹಣದಿಂದ ತಾವು ಮುಂದಿನ ಜೀವನ ಸಾಗಿಸಬಹುದೆಂದು ತಿಳಿಸಿದಳು. ಇದಕ್ಕೊಪ್ಪಿದ ಭೂಪಿಂದರ್ ಇಂಗ್ಲೆಂಡ್ ಅಥವಾ ಬೆಲ್ಜಿಯಂನಲ್ಲಿ ಕೊಲೆ ಮಾಡುವುದು ಸುಲಭವಲ್ಲವೆಂದು ಹೇಳಿ ಸುಖೀಯನ್ನು ಭಾರತದಲ್ಲಿಯೇ ಕೊಲ್ಲಬೇಕೆಂದು ಸೂಚಿಸಿದ. ಭಾರತದ ಪೊಲೀಸರು ಹಣ ಕೊಟ್ಟರೆ ಎಂಥ ಪ್ರಕರಣವನ್ನಾದರೂ ಮುಚ್ಚಿಹಾಕುತ್ತಾರೆ ಎಂದ.
ಈ ಯೋಜನೆಯಂತೆ 2016ರ ಆದಿಭಾಗದಲ್ಲಿ ಅರ್ಚನಾ ತನ್ನ ಗಂಡನಿಗೆ, ‘ನಾವು ನಮ್ಮೂರಿಗೆ ಹೋಗಿ ಮೂರು ವರ್ಷಗಳಾಗುತ್ತ ಬಂದವು. ಈ ವರ್ಷದ ಮಕ್ಕಳ ರಜೆ ಸಮಯದಲ್ಲಿ ನಾವು 45 ದಿನಗಳಾದರೂ ಭಾರತಕ್ಕೆ ಹೋಗೋಣ’ ಎಂದಳು. ಇದಕ್ಕೊಪ್ಪಿದ ಆತ ಲಂಡನ್ನಲ್ಲಿದ್ದ ತನ್ನ ದೊಡ್ಡಪ್ಪನ ಮಗನಿಗೆ ತನ್ನ ವ್ಯಾಪಾರ ನೋಡಿಕೊಳ್ಳಲು ಸೂಚಿಸಿ ಜುಲೈ 28ರಂದು ಕುಟುಂಬದ ಜತೆ ತನ್ನೂರಿಗೆ ಆಗಮಿಸಿದ. ಅವರೆಲ್ಲರ ಜತೆಯೇ ಭೂಪಿಂದರ್ ಕೂಡ ಭಾರತಕ್ಕೆ ಬಂದ. ಎಲ್ಲರೂ ಬಸಂತಪುರ ಗ್ರಾಮದ ಸುಖೀನ ತೋಟದ ಮನೆಯಲ್ಲಿ ವಸತಿ ಹೂಡಿದರು. ಮಗ ಮತ್ತು ಮೊಮ್ಮಕ್ಕಳನ್ನು ಕಂಡ ಸುಖೀನ ತಾಯಿ ವಂಶ್ ಕೌರ್ಗೆ ಆದ ಸಂತಸ ಅಷ್ಟಿಷ್ಟಲ್ಲ. ‘ಇಂಗ್ಲೆಂಡ್ ಬಿಟ್ಟು ಇಲ್ಲಿಗೇ ಬಂದು ಈ ತೋಟವನ್ನು ನೋಡಿಕೋ’ ಎಂದಾಕೆ ಮಗನಿಗೆ ಬಲವಂತ ಮಾಡತೊಡಗಿದಳು.
ವಾರವೊಂದರ ನಂತರ ಅರ್ಚನಾಳ ತಂದೆ-ತಾಯಿಯೂ ಇಂಗ್ಲೆಂಡಿನಿಂದ ಭಾರತಕ್ಕೆ ಆಗಮಿಸಿ ಅವರೂ ಬಸಂತಪುರದ ಫಾಮರ್್ಹೌಸಿಗೆ ಬಂದರು. ಇಡೀ ಕುಟುಂಬವೇ ಒಂದು ವ್ಯಾನ್ ಮಾಡಿಕೊಂಡು ಸುತ್ತಮುತ್ತಲಿನ ಪ್ರವಾಸಿತಾಣಗಳಿಗೆ ಹೋಗಿ ತಮ್ಮ ಹಾಲಿಡೇ ಎಂಜಾಯ್ ಮಾಡಿದರು. ಹತ್ತು ದಿನಗಳು ಎಲ್ಲರೂ ಒಟ್ಟಾಗಿ ಕಳೆದ ನಂತರ 2016ರ ಆಗಸ್ಟ್ 22ರಂದು ಭೂಪಿಂದರ್ ತನ್ನ ಊರಿಗೆ ಮರಳುವೆ ಎಂದು ತಿಳಿಸಿದ. ಅವನು ಹೋಗುವಾಗ ಅರ್ಚನಾಳನ್ನು ಗುಟ್ಟಾಗಿ ಭೇಟಿಯಾಗಿ ಅವಳ ಕೈಗೆ ಒಂದು ಪ್ಯಾಕೆಟ್ ಕೊಟ್ಟ. ‘ಇದರಲ್ಲಿ ನಿದ್ರೆಗುಳಿಗೆಗಳ ಪುಡಿಯಿದೆ. ಯಾರಿಗೂ ಕಾಣದಂತೆ ಒಂದು ಕಡೆ ಅಡಗಿಸಿ ಇಡು. ಮುಂದೇನು ಮಾಡಬೇಕೆಂದು ನಾನು ಆನಂತರ ತಿಳಿಸುವೆ’ ಎಂದು ಹೇಳಿದ. ಅವನು ಹೋದ ಮಾರನೆಯ ದಿನವೇ ಅರ್ಚನಾಳ ತಂದೆ-ತಾಯಿ ಪಂಜಾಬಿನ ತಮ್ಮ ಗ್ರಾಮಕ್ಕೆ ಹೊರಟುಹೋದರು. ಎಂಟು ದಿನಗಳ ಬಳಿಕ, ಅಂದರೆ ಆಗಸ್ಟ್ 30 ರಂದು, ಭೂಪಿಂದರ್ ಶಹಜಹಾನ್ಪುರಕ್ಕೆ ಪುನಃ ಬಂದ. ಬಂದವನೇ ಸ್ಥಳೀಯ ಹೋಟೆಲ್ ಒಂದರಲ್ಲಿ ರೂಮ್ ಪಡೆದು ಅರ್ಚನಾಳನ್ನು ಫೋನ್ ಮೂಲಕ ಸಂರ್ಪಸಿದ. ‘ನಾನು ನಿನಗೆ ಕೊಟ್ಟಿರುವ ನಿದ್ರೆಮಾತ್ರೆಯ ಪುಡಿಯನ್ನು ನಾಳೆ ರಾತ್ರಿ ಸುಖೀ ಮತ್ತು ಇಬ್ಬರು ಮಕ್ಕಳ ಊಟದಲ್ಲಿ ಬೆರೆಸು, ಎಲ್ಲರೂ ನಿದ್ರೆಗೆ ಜಾರಿದಾಗ ನನಗೆ ಮಿಸ್್ಡ ಕಾಲ್ ಕೊಡು’ ಎಂದ.
ಆನಂತರ ಆತ ತನ್ನ ಹೋಟೆಲ್ಲಿನ ಎದುರಿಗೇ ಇದ್ದ ಟ್ಯಾಕ್ಸಿಸ್ಟಾ್ಯಂಡಿಗೆ ಹೋದ. ಅಲ್ಲಿ ನಿಂತಿದ್ದ ಒಂದು ಟ್ಯಾಕ್ಸಿ ಚಾಲಕನ ಬಳಿಗೆ ಹೋಗಿ ತನ್ನನ್ನು ಮಾರುಕಟ್ಟೆಗೆ ಕರೆದೊಯ್ಯಲು ಸೂಚಿಸಿದ. ಎರಡು ಬೇರೆ-ಬೇರೆ ಅಂಗಡಿಗಳಲ್ಲಿ ಒಂದು ಕಿಟ್ಬ್ಯಾಗ್ ಮತ್ತು ಇತರ ವಸ್ತುಗಳನ್ನು ಖರೀದಿಸಿ ಹೋಟೆಲ್ಲಿಗೆ ವಾಪಸ್ ಬಂದ. ಟ್ಯಾಕ್ಸಿಯಿಂದ ಇಳಿಯುವಾಗ, ‘ನಾಳೆಯೂ ನನಗೆ ನಿನ್ನ ಅವಶ್ಯಕತೆಯಿದೆ, ನಾನು ಕರೆದಾಗ ನೀನು ಬರಬೇಕು’ ಎಂದು ಹೇಳಿ ಚಾಲಕನ ಮೊಬೈಲ್ ನಂಬರ್ ಪಡೆದ.
ಸೆಪ್ಟೆಂಬರ್ 1ರ ರಾತ್ರಿ ಅರ್ಚನಾ ಬಿರಿಯಾನಿಯನ್ನು ತಯಾರಿಸಿ ನಿದ್ರೆಮಾತ್ರೆಯ ಪುಡಿಯನ್ನು ಬೆರೆಸಿದಳು. ವಂಶ್ ಕೌರ್ ರಾತ್ರಿಯೂಟವನ್ನು ಮಾಡುತ್ತಿರಲಿಲ್ಲವಾದ್ದರಿಂದ ಸುಖೀ ಮತ್ತು ಮಕ್ಕಳು ಮಾತ್ರ ಊಟಕ್ಕೆ ಕೂತರು. ಹಿರಿಯ ಮಗ ಅರ್ಜುನ್ ತನಗೆ ಮ್ಯಾಗಿ ಬೇಕೆಂದು ಹಠ ಹಿಡಿದ. ಅವನಿಗೆ ವಂಶ್ ಕೌರ್ ಮ್ಯಾಗಿ ನೂಡಲ್ ಮಾಡಿಕೊಟ್ಟಳು. ಸುಖೀ ಮತ್ತು ಆರ್ಯನ್ನಿಗೆ ಅರ್ಚನಾ ನಿದ್ರೆಮಾತ್ರೆ ಹಾಕಿದ್ದ ಊಟವನ್ನೇ ಬಡಿಸಿದಳಲ್ಲದೆ ಉಳಿದ ಬಿರಿಯಾನಿಯನ್ನು ಮನೆಯಲ್ಲಿದ್ದ ಎರಡು ನಾಯಿಗಳಿಗೂ ಉಣಬಡಿಸಿದಳು.
ಸುಖೀ ತೋಟದ ಮನೆಯ ತಾರಸಿಯ ಮೇಲಿದ್ದ ಕೋಣೆಯಲ್ಲಿ ಮಲಗುತ್ತಿದ್ದ. ಅರ್ಚನಾ ತನ್ನ ಮಕ್ಕಳೊಂದಿಗೆ ಕೆಳಗಿದ್ದ ಕೋಣೆಯಲ್ಲಿ ಮಲಗುತ್ತಿದ್ದಳು. ಏಕೆಂದರೆ ಕೆಳಗಿನ ಕೋಣೆಗೆ ಮಾತ್ರ ಅಟ್ಯಾಚ್ ಬಾತ್ರೂಮ್ ಇತ್ತು. ಆ ರಾತ್ರಿ ಊಟವಾದ ನಂತರ ಎಂದಿನಂತೆ ಸುಖೀ ತಾರಸಿಯ ಕೋಣೆಗೆ ಹೋದ. ತಾನೂ ಆ ರಾತ್ರಿ ಮಹಡಿಯ ಕೋಣೆಯಲ್ಲಿಯೇ ಮಲಗುವುದಾಗಿ ಅವನಿಗೆ ಹೇಳಿದ ಅರ್ಚನಾ ಆ ಕೋಣೆಗೆ ತನ್ನ ಮಕ್ಕಳನ್ನೂ ಕರೆದೊಯ್ದಳು. ಒಂದು ಮಂಚದಲ್ಲಿ ಸುಖೀ, ಒಂದರಲ್ಲಿ ಅರ್ಜುನ್, ಮೂರನೆಯ ಮಂಚದಲ್ಲಿ ಅರ್ಚನಾ ತನ್ನ ಎರಡನೆಯ ಮಗ ಆರ್ಯನ್ ಜತೆ ಮಲಗಿದಳು.
ಸುಖೀ ಮತ್ತು ಬಾಲಕರಿಬ್ಬರೂ ಬೇಗನೇ ನಿದ್ರೆಗೆ ಜಾರಿದರು. ಆಗ ಅರ್ಚನಾ ಕೆಳಗಡೆ ಬಂದು ನಾಯಿಗಳಿದ್ದ ಷೆಡ್ಗೆ ಬಂದಳು. ನಿದ್ರೆಮಾತ್ರೆ ಪ್ರಭಾವದಿಂದ ಎರಡೂ ನಾಯಿಗಳು ಗಾಢನಿದ್ರೆಯಲ್ಲಿದ್ದವು. ಅವುಗಳಿದ್ದ ಷೆಡ್ನ ಬಾಗಿಲಿಗೆ ಬೆಡ್ಷೀಟ್ ಹೊದಿಸಿ ಅವಕ್ಕೆ ಹೊರಗಿನ ಪ್ರಪಂಚವೇ ಕಾಣದಂತೆ ಮಾಡಿದಳು. ನಂತರ ಭೂಪಿಂದರ್ಗೆ ಕಾಲ್ ಮಾಡಿ ‘ಎಲ್ಲವೂ ರೆಡಿ’ ಎಂದು ಹೇಳಿ ಮಹಡಿಯ ಕೋಣೆಗೆ ಹೋಗಿ ಮಲಗಿದಳು.
ಅರ್ಚನಾಳ ಫೋನ್ ಬಂದ ಕೂಡಲೇ ಭೂಪಿಂದರ್ ಟ್ಯಾಕ್ಸಿ ಚಾಲಕನಿಗೆ ಕರೆಮಾಡಿ ತಯಾರಿರಲು ಸೂಚಿಸಿದ. ಐದೇ ನಿಮಿಷಗಳಲ್ಲಿ ತನ್ನ ಕೈಯಲ್ಲಿ ಹಿಂದಿನ ರಾತ್ರಿ ಖರೀದಿಸಿದ್ದ ಕಿಟ್ಬ್ಯಾಗ್ ಹಿಡಿದು ಟ್ಯಾಕ್ಸಿ ಬಳಿಗೆ ಬಂದ. ಚಾಲಕನಿಗೆ ವಸಂತಪುರಕ್ಕೆ ಹೋಗಲು ಸೂಚಿಸಿದ. ವಸಂತಪುರದ ಹೊರವಲಯದಲ್ಲಿದ್ದ ಸುಖೀನ ತೋಟದ ಮನೆಯ ಬಾಗಿಲಿಗೆ ಬಂದ ಕೂಡಲೇ ಟ್ಯಾಕ್ಸಿಯನ್ನು ನಿಲ್ಲಿಸಲು ಹೇಳಿ, ‘ನಾನು ಅರ್ಧಗಂಟೆಯಲ್ಲಿ ಮರಳುವೆ. ಇಲ್ಲಿಯೇ ನನಗಾಗಿ ಕಾಯುತ್ತಿರು’ ಎಂದು ಚಾಲಕನಿಗೆ ಸೂಚಿಸಿದ. ಕಿಟ್ಬ್ಯಾಗ್ ಸಮೇತ ತೋಟದ ಮನೆಗೆ ಹೋದ.
ಮನೆಯಲ್ಲಿದ್ದ ನಾಯಿಗಳು ನಿದ್ರೆಗೆ ಜಾರಿದ್ದವು. ಮಹಡಿಯ ಕೋಣೆಗೆ ಹೋಗಲು ಹೊರಗಿನಿಂದಲೇ ಮೆಟ್ಟಿಲುಗಳು ಇದ್ದದ್ದರಿಂದ ಭೂಪಿಂದರ್ ಸುಲಭವಾಗಿ ಅಲ್ಲಿಗೆ ಹೋದ. ಅರ್ಚನಾ ಮಹಡಿಯ ಕೋಣೆಯಲ್ಲಿ ದೀಪವನ್ನು ಹಾಕಿದ್ದಳು. ಭೂಪಿಂದರ್ನನ್ನು ನೋಡಿದವಳೇ ತನ್ನ ಮಂಚದಿಂದೆದ್ದು ಬಂದಳು. ನಿದ್ರೆಮಾತ್ರೆಯ ಪ್ರಭಾವದಿಂದ ಸುಖೀ ಗಾಢನಿದ್ರೆಯಲ್ಲಿದ್ದ. ಮಕ್ಕಳಿಬ್ಬರೂ ಗೊರಕೆ ಹೊಡೆಯುತ್ತ ಮಲಗಿದ್ದರು. ಎಲ್ಲರ ಮೈಯನ್ನೂ ಅರ್ಚನಾ ಅಲುಗಾಡಿಸಿದಳು. ಯಾರೂ ಎಚ್ಚರಗೊಳ್ಳಲಿಲ್ಲ. ಭೂಪಿಂದರ್ ಕೋಣೆಯೊಳಗೆ ಬಂದು ತನ್ನ ಕಿಟ್ಬ್ಯಾಗ್ ಬಿಚ್ಚಿ ಅದರಲ್ಲಿದ್ದ ವಸ್ತುಗಳನ್ನು ಹೊರತೆಗೆದ.
(ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)