

ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಈವರೆಗೆ 3000 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ದೋಚಿರುವುದು ಆಘಾತಕಾರಿ ವಿಚಾರ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದೇಶದ ಜನರನ್ನು ಬೆದರಿಸಿ 3 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹಾಗೂ ಸಿಬಿಐ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಹರಿಯಾಣದ ವೃದ್ಧ ದಂಪತಿ ತಾವು ಡಿಟಜಿಲ್ ಬಂಧನದಲ್ಲಿ 1.5 ಕೋಟಿ ರೂ. ಕಳೆದುಕೊಂಡಿರುವ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಇಂಥ ಸೈಬರ್ ಅಪರಾಧಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡಲು ನ್ಯಾಯಪೀಠ ತೀರ್ವನಿಸಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐ ಸಲ್ಲಿಸಿದ್ದ ಎರಡು ವರದಿಗಳನ್ನು ಪರಿಶೀಲನೆ ನಡೆಸಿದ ಕೋರ್ಟ್, ದೇಶಾದ್ಯಂತ ಹಿರಿಯ ನಾಗರಿಕರನ್ನೊಳಗೊಂಡಂತೆ ಸಾವಿರಾರು ಕೋಟಿ ರೂ. ದೋಚಲಾಗಿದೆ. ಕಠಿಣ ಆದೇಶ ಹೊರಡಿಸದಿದ್ದರೆ ಸಮಸ್ಯೆ ದೊಡ್ಡದಾಗುತ್ತದೆ. ನಮ್ಮ ಏಜೆನ್ಸಿಗಳ ಕೈ ಬಲಪಡಿಸುವ ಅಗತ್ಯವಿದೆ ಎಂದು ಹೇಳಿರುವುದು ಸೂಕ್ತವಾಗಿದೆ.
ಡಿಜಿಟಲ್ ಬಂಧನದ ಕರಾಳ ಜಾಲ ವ್ಯಾಪಕವಾಗಿ ಆವರಿಸಿಕೊಂಡಿದೆ. ಆಗ್ನೇಯ ಏಷ್ಯಾ ಭಾಗದಲ್ಲಿನ ಕೆಲವು ದೇಶಗಳಲ್ಲಿ ಸೈಬರ್ ಅಪರಾಧ ಎಸಗಲು ದೊಡ್ಡ ಮಟ್ಟದ ಕೇಂದ್ರಗಳನ್ನು (ಸ್ಕಾ್ಯಮ್್ಸ ಕಾಂಪೌಂಡ್ಸ್) ಸ್ಥಾಪಿಸಲಾಗಿದೆ. ಅಲ್ಲಿಂದಲೇ ಸೈಬರ್ ಅಪರಾಧ ಸಿಂಡಿಕೇಟ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕೇಂದ್ರಗಳಲ್ಲಿ ಆರ್ಥಿಕ ಮತ್ತು ತಾಂತ್ರಿಕವಾದ ಎಲ್ಲ ಸೌಲಭ್ಯಗಳು ಇವೆ. ಅಲ್ಲದೆ, ಇಂಥ ಸಿಂಥಿಕೇಟ್ಗಳನ್ನು ನಿರ್ವಹಿಸಲು ಜನರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಕಚೇರಿ ತೆರೆದು, ಇಲ್ಲಿಂದಲೇ ಅಮೆರಿಕ, ಕೆನಡಾ ದೇಶದ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಅಕ್ಟೋಬರ್ ಎರಡನೇ ವಾರದಲ್ಲಿ ಬಲೆಗೆ ಕೆಡವಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬೇರೆ ಬೇರೆ ರಾಜ್ಯಗಳ ಒಟ್ಟು 16 ದುರುಳರನ್ನು ಬಂಧಿಸಿದ ಪೊಲೀಸರು, 41 ಕಂಪ್ಯೂಟರ್ ಸೇರಿದಂತೆ ಕಾಲ್ ಸೆಂಟರ್ನಲ್ಲಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ವಿದೇಶಗಳಲ್ಲೇ ಕುಳಿತುಕೊಂಡು ಸೈಬರ್ ಅಪರಾಧ ಎಸಗುತ್ತಿರುವ ಹಾಗೂ ಅಮಾಯಕರ ಹಣ ದೋಚುತ್ತಿರುವ ಜಾಲಗಳನ್ನು ಪತ್ತೆ ಹಚ್ಚಿ, ಕಾನೂನಿನ ಕ್ರಮಕ್ಕೆ ಒಳಪಡಿಸುವುದು ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಸಹಕಾರ ಕೋರಿ, ಸಂಬಂಧಿತ ದೇಶಗಳೊಂದಿಗೆ ಮಾತುಕತೆ ನಡೆಸಬೇಕು. ಡಿಜಿಟಲ್ ಬಂಧನದ ಪ್ರಕರಣಗಳು ಭಾರತಕ್ಕೆ ಮಾತ್ರವಲ್ಲದೆ ಹಲವು ದೇಶಗಳಿಗೆ ಮಾರಕವಾಗಿ ಪರಿಣಮಿಸಿರುವುದರಿಂದ, ಇದರ ನಿವಾರಣೆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಂಘಟಿತ ಪ್ರಯತ್ನಗಳು ನಡೆಯಬೇಕು. ಸುಪ್ರೀಂ ಕೋರ್ಟ್ ಹೇಳಿರುವಂತೆ ಇಂಥ ಪ್ರಕರಣಗಳ ತನಿಖೆಗೆ ತನಿಖಾ ಏಜೆನ್ಸಿಗಳನ್ನು ಬಲಗೊಳಿಸಬೇಕು.