

ಈ ಬಾರಿಯ ಸಂಸತ್ತಿನ ಅಧಿವೇಶನ ಬರೀ ಗದ್ದಲ, ಗೊಂದಲಗಳಿಂದಲೇ ಸುದ್ದಿ ಮಾಡಿದೆ. ಇದೆಂಥ ಅವ್ಯವಸ್ಥೆ? ಸಂಸತ್ತಿನ ಅಧಿವೇಶನದ ಮಹತ್ವ, ಅದರ ಉದ್ದೇಶವನ್ನು ಅರಿಯುವಲ್ಲಿಯೂ ಇಂದಿನ ರಾಜಕೀಯ ನಾಯಕರು ವಿಫಲರಾಗಿದ್ದಾರೆಯೇ? ಸರ್ಕಾರದ ನಿರ್ಧಾರ ತಪು್ಪ ಎನಿಸಿದರೆ ಅದನ್ನು ಖಂಡಿಸಲು, ವಿರೋಧ ಮಾಡಲು ರಚನಾತ್ಮಕ ಮಾರ್ಗಗಳಿವೆ. ಪ್ರತಿಪಕ್ಷಗಳು ಅದನ್ನು ಅನುಸರಿಸುವುದನ್ನು ಬಿಟ್ಟು ಕಲಾಪಗಳನ್ನೇ ನಡೆಯದಂತೆ ಮಾಡಿದರೆ ಏನರ್ಥ? ಇದರಿಂದ ಜನಸಾಮಾನ್ಯರ ತೆರಿಗೆ ಹಣ ಪೋಲಾಗುತ್ತಿದೆ ಎಂಬ ವಿವೇಚನೆ ಬೇಡವೇ? ಮೊದಲೇ ಕೋವಿಡ್ ಸಂಕಷ್ಟದಿಂದ ಆರ್ಥಿಕ ಸಮಸ್ಯೆಯೂ ತಲೆದೋರಿದ್ದು, ಉದ್ಯೋಗನಷ್ಟ, ಬೆಲೆಯೇರಿಕೆ ಜನಸಾಮಾನ್ಯರ ಚಿಂತೆಗೆ ಕಾರಣವಾಗಿದೆ.
ಜನರ ಸಮಸ್ಯೆಗೆ ದನಿಯಾಗುತ್ತೇವೆ ಎಂದು ಆಶ್ವಾಸನೆ ನೀಡಿ ಸಂಸತ್ತು ಪ್ರವೇಶಿಸುವ ರಾಜಕಾರಣಿಗಳು ಜನಹಿತದ ಕತ್ತನ್ನೇ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಸುಗಮ ಕಲಾಪ ನಡೆದರೆ ಮಾತ್ರ ಆರೋಗ್ಯಕರ ಚರ್ಚೆ ಸಾಗಿ ಹಲವು ವಿಷಯಗಳ ಬಗ್ಗೆ ಹೊಸ ಹೊಳಹು ಸಿಗಲು ಸಾಧ್ಯ. ಚರ್ಚೆಗೇ ಅವಕಾಶ ಕೊಡದಿರುವುದು ವಿರೋಧದ ಕ್ರಮವಲ್ಲ. ಈ ಬಗ್ಗೆ ಪ್ರಧಾನಿಯೂ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದ ಸರ್ಕಾರವಿರಲಿ, ವಿರೋಧ ಪಕ್ಷದಲ್ಲಿ ಯಾರೇ ಕೂತಿರಲಿ ಸಂಸದೀಯ ಮೌಲ್ಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಅತಿ ಅವಶ್ಯ. ಇಲ್ಲದಿದ್ದರೆ ಜನರ ನಂಬಿಕೆಗೆ ಪೆಟ್ಟು ನೀಡಿದಂತೆ. ಹಾಗಾದರೆ ಪ್ರಜಾಪ್ರಭುತ್ವದ ಆಶಯಗಳು ಮಸುಕಾಗುತ್ತವೆ. ಇನ್ನಾದರೂ ಇಂಥ ಅಪಸವ್ಯಗಳನ್ನು ತಡೆದು ಸದನದಲ್ಲಿ ಆರೋಗ್ಯಕರ ಚರ್ಚೆಯ ವಾತಾವರಣ ನಿರ್ವಣವಾಗಬೇಕು. ಇದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯ.
| ರವಿ ಮಂಗಳೂರು