

ಸರ್ಕಾರಿ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ 2011ರಲ್ಲಿ ಆರಂಭಿಸಿದ ಮಹತ್ವಾಕಾಂಕ್ಷೆಯ ಸಕಾಲ ಯೋಜನೆ ಈಗ ದಿಕ್ಕುತಪ್ಪಿದಂತೆ ಕಾಣುತ್ತಿದೆ. ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವ ಬಗ್ಗೆ ರಾಜ್ಯ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಸರ್ಕಾರಕ್ಕೆ ವಸ್ತುಸ್ಥಿತಿಯ ವರದಿ ಸಲ್ಲಿಸಲು ನಾಲ್ಕು ವಾರಗಳ ಗಡುವು ನೀಡಿದೆ.
ಸಾರ್ವಜನಿಕರ ಪ್ರತಿದಿನದ ಅವಶ್ಯಕತೆಗಳಾದ ವಿವಿಧ ರೀತಿಯ ಪ್ರಮಾಣಪತ್ರಗಳು, ಪಹಣಿ ಮತ್ತಿತರ ಭೂಸಂಬಂಧಿತ ದಾಖಲೆಗಳು, ಅವುಗಳ ದೃಢೀಕರಣ, ಸ್ಥಳೀಯ ಸಂಸ್ಥೆಗಳಲ್ಲಿನ ಖಾತಾ ನೋಂದಣಿ, ವರ್ಗಾವಣೆ, ವಿಲೀನ ಮತ್ತಿತರ ಕೆಲಸಗಳು ಮುಂತಾದವು ಈ ಸಕಾಲ ಯೋಜನೆ ವ್ಯಾಪ್ತಿಗೆ ಬರುತ್ತವೆ. ನಗರಾಭಿವೃದ್ಧಿ, ಕಂದಾಯ, ಸಾರಿಗೆ, ಆರೋಗ್ಯ ಕುಟುಂಬ ಕಲ್ಯಾಣ, ಶಿಕ್ಷಣ, ಸಮಾಜ ಕಲ್ಯಾಣ, ಆಹಾರ, ನಾಗರಿಕ ಸರಬರಾಜು, ಗ್ರಾಮೀಣಾಭಿವೃದ್ಧಿ, ಕಾರ್ವಿುಕ, ಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಾಣಿಜ್ಯ, ಸಹಕಾರ, ಕೃಷಿ, ಅರಣ್ಯ ಮುಂತಾಗಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯೂ ಇದೆ. ಅರ್ಜಿ ಇತ್ಯರ್ಥ ವಿಳಂಬವಾದರೆ ಮೇಲ್ಮನವಿ ಸಲ್ಲಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಅವರ ಕೆಲಸಗಳು ನಿರ್ದಿಷ್ಟ ಕಾಲಮಿತಿಯೊಳಗೆ ಈಡೇರಬೇಕು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಸದುದ್ದೇಶ ಇಟ್ಟುಕೊಂಡು ಆರಂಭಿಸಲಾದ ಯೋಜನೆಯೊಂದು ಈ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಖೇದಕರ ಸಂಗತಿ. ಆಡಳಿತದ ನಿರ್ಲಕ್ಷ್ಯ, ಅಧಿಕಾರಿಗಳ ಕಾರ್ಯವೈಖರಿ ಮತ್ತು ತಾಂತ್ರಿಕ ದೋಷಗಳಿಂದಾಗಿ ಈ ಯೋಜನೆ ತನ್ನ ಉದ್ದೇಶಿತ ಗುರಿಯನ್ನು ತಲುಪದಂತೆ ಆಗಿದೆ. ಅರ್ಜಿಗಳನ್ನು ಇತ್ಯರ್ಥಪಡಿಸುವಲ್ಲಿ ಆಗುತ್ತಿರುವ ವಿಳಂಬ, ಅಸ್ಪಷ್ಟ ನಿಯಮಗಳು ಮತ್ತು ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳು ಯೋಜನೆಯನ್ನು ವಿಫಲಗೊಳಿಸುತ್ತಿವೆ. ಇದರಿಂದ ನಾಗರಿಕರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ವಿಶ್ವಾಸಾರ್ಹತೆಯೂ ಕಡಿಮೆಯಾಗುತ್ತಿದೆ.
ಈ ನ್ಯೂನತೆಗಳನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಮೊದಲಿಗೆ, ಸಕಾಲ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿ, ಪಾರದರ್ಶಕತೆಯನ್ನು ಹೆಚ್ಚಿಸಬೇಕು. ಅರ್ಜಿಗಳ ಟ್ರಾ್ಯಕಿಂಗ್ ವ್ಯವಸ್ಥೆಯನ್ನು ಬಲಪಡಿಸಿ, ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ಜೊತೆಗೆ, ಇಲಾಖೆಗಳ ನಡುವಿನ ಸಮನ್ವಯವನ್ನು ಸುಧಾರಿಸಿ, ಸಮಯಬದ್ಧವಾಗಿ ಕೆಲಸ ಮಾಡುವಂತೆ ಖಾತರಿಪಡಿಸಬೇಕು.
ಹೈಕೋರ್ಟ್ನ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ, ನಿರ್ದಿಷ್ಟ ಸಮಯದ ಒಳಗೆ ಸೇವೆ ಪಡೆಯುವ ನಾಗರಿಕರ ಹಕ್ಕು ಮೊಟಕುಗೊಂಡಂತೆ ಆಗುತ್ತದೆ. ಜನರ ಜೀವನವನ್ನು ಸುಗಮಗೊಳಿಸುವ ದಿಸೆಯಲ್ಲಿ ಇದೊಂದು ಪ್ರಮುಖ ಹೆಜ್ಜೆ. ದಕ್ಷ, ಪಾರದರ್ಶಕ, ಮತ್ತು ಸಕಾಲಿಕ ಸೇವೆಯ ವ್ಯವಸ್ಥೆ ರಾಜ್ಯದ ಆಡಳಿತದ ಗುಣಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈಗಿನ ನಿರ್ಲಕ್ಷ್ಯ ಹೀಗೆಯೇ ಮುಂದುವರಿದರೆ, ಸಕಾಲ ಕೇವಲ ಕಾಗದದ ಯೋಜನೆಯಾಗಿ ಉಳಿಯುತ್ತದೆ. ಅಧಿಕಾರಿಗಳು ಕೂಡಲೇ ಜಾಗೃತವಾಗಿ ಕಾರ್ಯಪ್ರವೃತ್ತರಾಗದಿದ್ದರೆ, ಇಡೀ ವ್ಯವಸ್ಥೆಯ ಬಗ್ಗೆ ಜನರ ನಂಬಿಕೆ ಕಳೆದುಹೋಗುವ ಅಪಾಯವಿದೆ. ಸಕಾಲದ ಯಶಸ್ಸು ರಾಜ್ಯದ ಆಡಳಿತದ ಯಶಸ್ಸಿನ ಸಂಕೇತವಾಗುತ್ತದೆ.