ಹಿಂದೂ ನಿಂದನೆಗೆ ಕಾಂಗ್ರೆಸ್ ಯಾವಾಗಲೂ ಏಕೆ ಮುಂದು?

Column F
Published on
ಹಿಂದೂಗಳ ಸಂವೇದನೆಗಳಿಗೆ ಘಾಸಿ ಎಸಗುವಂತಹ ಎರಡು ಹೇಳಿಕೆಗಳು ಕಳೆದೊಂದು ವಾರದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರಿಂದ ಬಂದಿವೆ. ಮೊದಲಿಗೆ, ಹಿಂದೂ ಎಂಬ ಪದ ಹೊರಗಿನಿಂದ ಬಂದದ್ದು, ಅದು ಹೊಲಸು ಅರ್ಥವನ್ನು ಹೊಂದಿದೆ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಮತ್ತು ಮಾಜಿ ಮಂತ್ರಿ ಸತೀಶ್ ಜಾರಕಿಹೊಳಿ ಹೇಳಿದರು. ನಂತರ, ನೂರು ಅಡಿಗಳೆತ್ತರದ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ನಿರ್ವಿುಸುವುದಾಗಿ ಮತ್ತೊಬ್ಬರು ಕಾಂಗ್ರೆಸ್ ನೇತಾರ ಮತ್ತು ಮಾಜಿ ಮಂತ್ರಿ ತನ್ವೀರ್ ಸೇಠ್ ಘೊಷಿಸಿದರು. ಈ ಅನಪೇಕ್ಷಣೀಯ ಹಾಗೂ ಅಸಂವೇದನಾಶೀಲ ಹೇಳಿಕೆ ಮತ್ತು ಘೊಷಣೆಗಳ ಜತೆಗೆ ಪ್ರಾಚೀನ ಚೋಳ ಸಾಮ್ರಾಟ ರಾಜೇಂದ್ರ ಚೋಳನ ಕುರಿತಾಗಿ ನಿರ್ದೇಶಕ ಮಣಿರತ್ನಂ ಅವರ ‘ಪೊಣ್ಣಿಯಿನ್ ಸೆಲ್ವನ್’ ಚಲನಚಿತ್ರದ ಬಗ್ಗೆ ನೆರೆಯ ತಮಿಳುನಾಡಿನಲ್ಲಿ ಎದ್ದ ಅರ್ಥಹೀನ ವಿವಾದವನ್ನೂ ಸೇರಿಸಿಕೊಂಡು ಹಿಂದೂ ನಿಂದನೆ ಅವ್ಯಾಹತವಾಗಿ ನಡೆಯುತ್ತಿರುವುದರತ್ತ ಕ್ಷಕಿರಣ ಬೀರುವುದು ಈ ಲೇಖನದ ಉದ್ದೇಶ.

ಪಕ್ಷದಲ್ಲೇ ಎದ್ದ ವಿರೋಧದಿಂದಾಗಿ ಜಾರಕಿಹೊಳಿಯವರು ಹೇಳಿಕೆ ಹಿಂತೆಗೆದುಕೊಂಡರಾದರೂ ಅವರ ಮಾತುಗಳು ಧ್ವನಿಸಿದ ಹಿಂದೂ ನಿಂದನೆ, ಮುಖ್ಯವಾಗಿ ಹಿಂದೂ-ವಿರೋಧ ಅವರದೇ ಕಾಂಗ್ರೆಸ್ ಪಕ್ಷದಲ್ಲಿ ಬಹಳ ಹಿಂದಿನಿಂದಲೂ ಕಾಣಿಸಿಕೊಳ್ಳುವುದನ್ನು ಗುರುತಿಸಬಹುದು. ಅಲ್ಲದೇ ಹಿಂದೂ ನಿಂದನೆ ಜಾಗತಿಕವಾಗಿಯೂ ಪ್ರಚಲಿತವಿದೆ.

ಮೊದಲಿಗೆ, ಹಿಂದೂ ಪದ ನಮ್ಮದಲ್ಲ, ಹೊರಗಿನದು ಎನ್ನುವ ಜಾರಕಿಹೊಳಿ ಮಾತಿನಲ್ಲಿ ಐತಿಹಾಸಿಕ ಸತ್ಯದ ಅಂಶವಿದೆ ಮತ್ತು ಅದು ಬಹುಶಃ ಎಲ್ಲರಿಗೂ ತಿಳಿದೇ ಇದೆ. ಆದರೆ ಅದನ್ನು ವಿಸ್ತರಿಸುತ್ತಾ ಹೋದರೆ ನಮಗೆದುರಾಗುವ ಸತ್ಯಗಳು ಜಾರಕಿಹೊಳಿಯವರ ಮಾತಿನಲ್ಲಿದ್ದ ನಿಂದನೆಯ ಭಾವ ಒಪ್ಪತಕ್ಕದ್ದಲ್ಲ ಎಂಬ ಸತ್ಯವನ್ನೂ ಮನವರಿಕೆ ಮಾಡಿಕೊಡುತ್ತವೆ.

ಹಿಂದೂ ಪದ ಮೂಲತಃ ಪ್ರಾಚೀನ ಪರ್ಶಿಯನ್ ಭಾಷೆಯದು ಎನ್ನುವುದಕ್ಕೆ ಒಂದನೆಯ ಡೇರಿಯಸ್​ನ ಕಾಲದಿಂದಲೂ ಉದಾಹರಣೆಗಳು ಸಿಗುತ್ತವೆ, ನಿಜ. ಆದರೆ ಅದರ ಮೂಲ ಭಾರತದ್ದೇ ಎನ್ನುವುದೂ ನಿಜ. ಪ್ರಾಚೀನ ಪರ್ಶಿಯನ್ ಭಾಷೆಯಲ್ಲಿ ‘ಸ’ಕಾರ ‘ಹ’ಕಾರವಾಗಿ ಬದಲಾಗುವ ಕಾರಣ ಅಂದಿನ ಭಾರತದ ಮಹಾನ್ ನದಿ ಸಿಂಧೂ ಪರ್ಶಿಯನ್ ನಾಲಿಗೆಯಲ್ಲಿ ‘ಹಿಂದೂ’ ಆಗಿ ಮಾರ್ಪಾಡುಗೊಂಡಿತು. ಪರ್ಶಿಯನ್ನರು ಕೇವಲ ನದಿಯನ್ನಷ್ಟೇ ಹಿಂದೂ ಎಂದು ಕರೆಯಲಿಲ್ಲ, ಅದರ ಜತೆಗೆ ನದಿ ಹರಿಯುತ್ತಿದ್ದ ಪ್ರದೇಶಕ್ಕೂ, ಅಲ್ಲಿನ ನಿವಾಸಿಗಳಿಗೂ ಹಿಂದೂ ಎಂಬ ಹೆಸರು ಬಂತು. ಅಂದಿನಿಂದಲೂ ಪಶ್ಚಿಮ ಏಶಿಯದ ಭಾಷೆಗಳೆಲ್ಲವೂ ಈ ನಾಡನ್ನು ‘ಹಿಂದ್’ ಎಂದು ಹೆಸರಿಸುತ್ತವೆ. ಅದನ್ನೇ ಗ್ರೀಕರು ‘ಇಂಡಿಯಾ’ ಎಂದು ಮಾರ್ಪಡಿಸಿಕೊಂಡರು ಮತ್ತದು ಆಯಾ ಭಾಷಿಕ ಉಚ್ಚಾರಣಾ ಭೇದಗಳೊಂದಿಗೆ ಎಲ್ಲ ಯೂರೋಪಿಯನ್ ಭಾಷೆಗಳಲ್ಲೂ ಪ್ರಚಲಿತವಾಗಿದೆ. ಹೀಗಾಗಿ ಹಿಂದೂ ಪದ ಹೊರಗಿನಿಂದ ಬಂದ ಕಾರಣ ಅದು ನಮ್ಮದಲ್ಲ ಎನ್ನುವುದಾದರೆ, ಹೊರಗಿನಿಂದ ಬಂದ ‘ಇಂಡಿಯಾ’ ಎಂಬ ಹೆಸರನ್ನೂ ನಾವು ಅದೇ ದೃಷ್ಟಿಯಿಂದ ನೋಡಬೇಕಾಗುತ್ತದೆ. ಈ ಮನೋಭಾವಕ್ಕೆ ಬದಲಾಗಿ, ಪರ್ಶಿಯನ್​ನ ಹಿಂದೂ ಮತ್ತು ಗ್ರೀಕ್​ನ ಇಂಡಿಯಾ ಎರಡಕ್ಕೂ ಮೂಲ ನಮ್ಮ ಸಿಂಧೂ ಎಂದು ಅರಿತರೆ ಯಾವ ಸಮಸ್ಯೆಯೂ ಇರುವುದಿಲ್ಲ. ಆ ಎರಡೂ ಪದಗಳು ಪರಕೀಯವೆನಿಸುವುದಿಲ್ಲ.

ಹಿಂದೂ ಎಂಬ ಪದವನ್ನು ಪರ್ಶಿಯನ್ನರು ಈ ನಾಡಿನ ನಿವಾಸಿಗಳಿಗೂ ಅನ್ವಯಿಸಿದ್ದು ಇಂದಿಗೂ ಚಲಾವಣೆಯಲ್ಲಿದೆ. ಈಗಲೂ ಅರಬ್ಬರು ಭಾರತೀಯರನ್ನು ಕರೆಯುವುದು ‘ಅಲ್ ಹಿಂದೀ’ ಎಂದು. ಅದೇ ಯೂರೋಪ್​ನಲ್ಲೂ ಪ್ರಚಲಿತವಿರುವುದನ್ನು ನಮ್ಮ ಮಾಜಿ ರಾಷ್ಟ್ರಾಧ್ಯಕ್ಷ ಡಾ. ಝುಕೀರ್ ಹುಸೇನ್ ರಶಿಯಾದಲ್ಲಿ ಸ್ವಾನುಭವದಿಂದ ಅರಿತ ಪ್ರಕರಣವಿದೆ. ಅಲ್ಲಿಗೆ ಭೇಟಿ ನೀಡಿದ್ದ ಅವರನ್ನು ಸ್ಥಳೀಯ ನಾಯಕರೊಬ್ಬರು ‘ಇವರೊಬ್ಬರು ಹಿಂದೂ’ ಎಂದು ಪರಿಚಯಿಸಿದಾಗ ಡಾ. ಹುಸೇನರು ಅದನ್ನು ನಿರಾಕರಿಸಿ ತಾವೊಬ್ಬ ಮುಸ್ಲಿಂ, ಹಿಂದೂ ಅಲ್ಲ ಅಂದರು. ಆಗ ಅವರಿಗೆ ಅಲ್ಲಿನ ಜನ ತಿಳಿಸಿದ್ದು ಅವರ ಭಾಷೆಯಲ್ಲಿ ಹಿಂದೂ ಅಂದರೆ ಭಾರತೀಯ, ಭಾರತ ದೇಶದ ನಿವಾಸಿ ಎಂದು, ಹಿಂದೂ ಧರ್ವಿುಯ ಎಂದಲ್ಲ ಎಂದು!

ಹಿಂದೂ ಶಬ್ದ ಸಿಂಧೂ ಶಬ್ದದಿಂದ ಬಂದ ಕಾರಣ ಅದು ಜಾರಕಿಹೊಳಿಯವರ ಅಭಿಪ್ರಾಯದಂತೆ ‘ಹೊಲಸು’ ಪದವಾಗಲು ಸಾಧ್ಯವಿಲ್ಲ. ಹಾಗೆ ಯೋಚಿಸುವುದಾದರೆ ಆ ನದಿಯ ಹೆಸರನ್ನು ಹೊತ್ತ ಸಿಂಧ್ ಪ್ರಾಂತ್ಯ ‘ಹೊಲಸು ಪ್ರಾಂತ್ಯ’ವೇ? ನಮ್ಮ ಮಹಾಭಾರತದಲ್ಲೇ ಉಲ್ಲೇಖಿತವಾಗಿರುವಂತೆ ಸಿಂಧ್​ನ ಹೆಸರು ‘ಸಿಂಧೂ ದೇಶ’ ಎಂದು (ಅಲ್ಲಿನ ಅರಸ, ಧೃತರಾಷ್ಟ್ರನ ಏಕೈಕ ಅಳಿಯ ಜಯದ್ರಥನಿಗೆ ಸೈಂಧವ ಎಂಬ ಹೆಸರಿದ್ದುದನ್ನು ನೆನಪಿಸಿಕೊಳ್ಳಿ). ಆ ಪ್ರಾಚೀನ ಹೆಸರನ್ನು ಸಿಂಧಿಗಳು ಇಂದೂ ಮರೆತಿಲ್ಲ, ಕಡೆಗಣಿಸಿಲ್ಲ. ಆ ಪ್ರಾಂತ್ಯವನ್ನು ಪಾಕಿಸ್ತಾನದಿಂದ ಪ್ರತ್ಯೇಕಗೊಳಿಸಿ ಸಿಂಧೂ ದೇಶ ಎಂಬ ಹೊಸ ರಾಷ್ಟ್ರ ನಿರ್ವಿುಸಲು (ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶವನ್ನಾಗಿಸಿದಂತೆ) ಅಲ್ಲಿ ಐದಾರು ದಶಕಗಳಿಂದಲೂ ಹೋರಾಟ ನಡೆಯುತ್ತಿದೆ.

ಹಿಂದೂಗಳ ಬಗ್ಗೆ ಹಗುರವಾಗಿ ಮಾತಾಡುವ, ಹಿಂದೂ ಸಂವೇದನೆಗಳಿಗೆ ಘಾಸಿಯೆಸಗುವಂತಹ ನಡವಳಿಕೆಗಳಲ್ಲಿ ತೊಡಗುವ ಮನೋಭಾವ ಕಾಂಗ್ರೆಸ್ಸಿಗರಲ್ಲಿ ವ್ಯಾಪಕವಾಗಿರುವುದು ಏಕೆ? ಇದರ ಮೂಲವನ್ನು ಹುಡುಕಹೊರಟರೆ ಅದನ್ನು ಕಾಂಗ್ರೆಸ್ ನಾಯಕ ಜವಾಹರ್​ಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಅನುಸರಿಸಿದ ನೀತಿಗಳಲ್ಲೇ ಕಾಣಬಹುದು. ಸೆಕ್ಯುಲರಿಸಂನ ಅರ್ಥ ರಾಜ್ಯ ಮತ್ತು ಧರ್ಮ ಒಂದರ ವ್ಯವಹಾರಗಳಲ್ಲಿ ಇನ್ನೊಂದು ಮಧ್ಯಪ್ರವೇಶಿಸಕೂಡದು ಎನ್ನುವುದಾಗಿದೆ. ಭಾರತೀಯ ಸಂದರ್ಭದಲ್ಲಿ ಅದು ಪ್ರಾರಂಭಿಕ ವರ್ಷಗಳಲ್ಲಿ ಭಾರತ ಗಣರಾಜ್ಯ ತನ್ನ ಅಧಿಕೃತ ಧರ್ಮವೆಂದು ಯಾವ ಧರ್ಮವನ್ನೂ ಅಂಗೀಕರಿಸಿಲ್ಲ ಮತ್ತು ಸರ್ಕಾರ ಯಾವುದೇ ಒಂದು ನಿರ್ದಿಷ್ಟ ಧರ್ಮದ ಪರವಾಗಿ ನೀತಿಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದಿಲ್ಲ ಎನ್ನುವುದಾಗಿತ್ತು. ಆದರೆ ನೆಹರೂ ಸರ್ಕಾರ ಈ ನಿಯಮಕ್ಕೆ ಹೊರತಾದ ನೀತಿನಿಲುವುಗಳನ್ನು ಅನುಸರಿಸಿದ್ದಕ್ಕೆ ಉದಾಹರಣೆಗಳಿವೆ. ಇದರಲ್ಲಿ ಮುಖ್ಯವಾದದ್ದು ಪೂವೋತ್ತರ ರಾಜ್ಯಗಳ ವಿಚಾರದಲ್ಲಿ ತಮ್ಮ ಸಲಹೆಗಾರರನ್ನಾಗಿ ಡಾ. ವೆರಿಯರ್ ಎಲ್ವಿನ್ ಅವರನ್ನು ನೇಮಿಸಿಕೊಂಡದ್ದು ಮತ್ತು ಅವರಿಗೆ ನೀಡಿದ ಸ್ವಾತಂತ್ರ್ಯ. ಎಲ್ವಿನ್ ಬುಡಕಟ್ಟು ಜನಾಂಗಗಳ ವಿದ್ವಾಂಸರಷ್ಟೇ ಆಗಿರಲಿಲ್ಲ. ಅದಕ್ಕೂ ಮುಖ್ಯವಾಗಿ ಅವರು ಕ್ರಿಶ್ಚಿಯನ್ ಧರ್ಮಪ್ರಚಾರಕರಾಗಿದ್ದರು. ನಾಗಾ ಪ್ರದೇಶಗಳಿಗೆ ಹಿಂದೂ ಸಾಧುಸಂತರ ಪ್ರವೇಶವನ್ನು ನಿಷೇಧಿಸಬೇಕೆಂಬ ಅವರ ನಿಲುವನ್ನು ನೆಹರೂ ಒಪ್ಪಿಕೊಂಡದ್ದು, ಅದೇ ಪ್ರದೇಶಕ್ಕೆ ಕ್ರಿಶ್ಚಿಯನ್ ಮಿಷನರಿಗಳ ಪ್ರವೇಶ ಮತ್ತು ಧರ್ಮಪ್ರಚಾರಕ್ಕೆ ಯಾವ ತಡೆಯನ್ನೂ ಒಡ್ಡದ್ದು ಪ್ರಧಾನಿಯಾಗಿ ನೆಹರೂ ಹಿಂದೂ ಧರ್ಮದ ವಿರುದ್ಧ ಹಾಗೂ ಕ್ರಿಶ್ಚಿಯನ್ ಧರ್ಮದ ಪರವಾಗಿ ನಿಂತದ್ದನ್ನು ತೋರಿಸುತ್ತದೆ. ಜತೆಗೆ, ಪೂವೋತ್ತರ ರಾಜ್ಯಗಳಲ್ಲಿ ಸಂಪರ್ಕ ವ್ಯವಸ್ಥೆಯ ನಿರ್ಮಾಣ ಮುಂತಾದ ಅಭಿವೃದ್ಧಿಶೀಲ ಯೋಜನೆಗಳು ಅಲ್ಲಿನ ಜನತೆಯ ಬುಡಕಟ್ಟು ಅಸ್ಮಿತೆಗಳಿಗೆ, ಅವರ ಜೀವನವಿಧಾನಗಳಿಗೆ ಹಾನಿಕರವಾಗುತ್ತವೆ ಎಂಬ ನಿಲುವಿನ ಎಲ್ವಿನ್​ರ ವಿಚಾರಗಳನ್ನು ನೆಹರೂ ಸರ್ಕಾರ ಪುರಸ್ಕರಿಸಿದ್ದರಿಂದಾಗಿ ಅಲ್ಲಿ ಆರ್ಥಿಕ ಪ್ರಗತಿ ನಿರ್ಲಕ್ಷ್ಯಕ್ಕೊಳಗಾಯಿತು. ಹಾಗೆ ಆರ್ಥಿಕವಾಗಿ ಹಿಂದೆಯೇ ಉಳಿದ ಮತ್ತು ದೇಶದ ಬದುಕಿನ ಮುಖ್ಯಧಾರೆಯಿಂದ ದೂರವೇ ಉಳಿದ ಪೂವೋತ್ತರ ಭಾರತ ಎಲ್ವಿನ್ ಮತ್ತವರ ಸಹಯೋಗಿಗಳ ಧರ್ಮಪ್ರಚಾರಕ್ಕೆ ಫಲವತ್ತಾದ ನೆಲವಾಯಿತು. ಧರ್ಮಪ್ರಚಾರಕರಾದ ಎಲ್ವಿನ್ ತಮಗೆ ಅನುಕೂಲವಾಗುವಂತೆ ಯೋಚಿಸಿದ್ದು ಸಹಜವೇ. ಆದರೆ ದೇಶದ ಪ್ರಧಾನಿಯಾಗಿ ನೆಹರೂ ಅದಕ್ಕೆ ಸಮ್ಮತಿಸಿದ್ದು, ಪೂರಕವಾಗಿ ಸರ್ಕಾರಿ ನೀತಿಗಳನ್ನು ರೂಪಿಸಿದ್ದು ಏಕೆ? ಅವರ ಈ ನೀತಿಗಳು ಹಿಂದೂಗಳ ಬಗ್ಗೆ ಅವರಿಗಿದ್ದ ನಿರ್ಲಕ್ಷ್ಯ ಮತ್ತು ಇತರ ಧರ್ವಿುಯರ ಬಗೆಗಿದ್ದ ಕಾಳಜಿ ಅಥವಾ ಪ್ರೀತಿಯ ದ್ಯೋತಕ ಎಂದು ಹೇಳದೇ ವಿಧಿಯಿಲ್ಲ.

ನಂತರದ ಕಾಂಗ್ರೆಸ್ ಸರ್ಕಾರಗಳು ನೆಹರೂರ ನೀತಿಗಳನ್ನೇ ಮುಂದುವರಿಸಿದ ಕಾರಣ ಪೂವೋತ್ತರ ರಾಜ್ಯಗಳಲ್ಲದೇ ಜಾರ್ಖಂಡ್, ತಮಿಳುನಾಡು ಮುಂತಾದೆಡೆಗಳಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ವೇಗವಾಗಿ ಏರತೊಡಗಿದ್ದನ್ನು ಎಲ್ಲ ಜನಗಣತಿಗಳೂ ದಾಖಲಿಸಿಯೇ ಇವೆ. ಇದೇ ಬಗೆಯ ನೀತಿಯನ್ನು ಮುಸ್ಲಿಂ ಧರ್ಮದ ಪರವಾಗಿಯೂ ನೆಹರೂ ಅನುಸರಿಸಿದ್ದು, ಮುಂದಿನ ಕಾಂಗ್ರೆಸ್ ಸರ್ಕಾರಗಳು ಅದನ್ನು ಮುಂದುವರಿಸಿಕೊಂಡು ಬಂದದ್ದು ಕಂಡುಬರುತ್ತದೆ. ವಕ್ಪ್ ಆಸ್ತಿಯ ಕುರಿತಾಗಿ ನೆಹರೂರಿಂದ ಆರಂಭವಾಗಿ ನರಸಿಂಹರಾವ್​ವರೆಗೆ ವಿವಿಧ ಕಾಂಗ್ರೆಸ್ ಸರ್ಕಾರಗಳು ತಳೆದ ನೀತಿ ಮತ್ತು ರೂಪಿಸಿದ ಕಾನೂನುಗಳಿಂದಾಗಿ ಇಂದು ವಕ್ಪ್ ಬೋರ್ಡ್ ಗಳು ಹೊಂದಿರುವ ಆಸ್ತಿ ರೈಲ್ವೆಯ ನಂತರ ದೇಶದಲ್ಲೇ ಎರಡನೆಯ ಅತಿ ದೊಡ್ಡದು! ಇದೇ ಅವಧಿಯಲ್ಲಿ ಸರ್ಕಾರೀ ನೀತಿಗಳಿಂದಾಗಿಯೇ ಹಿಂದೂ ದೇವಸ್ಥಾನಗಳ ಆಸ್ತಿ ನಿರಂತರವಾಗಿ ಕುಗ್ಗುತ್ತಾ ಬಂದಿದೆ. ಅಷ್ಟೇ ಅಲ್ಲ, ವಕ್ಪ್ ಬೋರ್ಡ್ ಸರ್ಕಾರದ ಭಾಗವಾಗಿದೆ! ‘ಸೆಕ್ಯುಲರ್’ ದೇಶದಲ್ಲಿ ಇದು ಹೇಗಾಯಿತು?

ಕಾಂಗ್ರೆಸ್​ನ ಈ ಮೇಲ್ಪಂಕ್ತಿಯನ್ನೇ ಇತರ ತಥಾಕಥಿತ ಸೆಕ್ಯುಲರ್ ರಾಜಕೀಯ ಪಕ್ಷಗಳು ಅನುಸರಿಸಿದ್ದರಿಂದಾಗಿ ಒಂದಲ್ಲಾ ಒಂದು ಅವಧಿ ಯಲ್ಲಿ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಸರ್ಕಾರಿ ನೀತಿಗಳು ಹಿಂದೂಗಳ ವಿರುದ್ಧ ವಾಗಿ ಮತ್ತು ಇತರ ಧರ್ವಿುಯರ ಪರವಾಗಿ ರೂಪಿತಗೊಂಡಿವೆ. ಇದರ ದುಷ್ಪರಿಣಾಮ ಗಳನ್ನು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ವ್ಯಾಪಕವಾಗಿ ಕಾಣುತ್ತಿದ್ದೇವೆ, ಕಾಂಗ್ರೆಸ್ ಭಾಗಿಯಾಗಿದ್ದ ಸರ್ಕಾರವಿದ್ದಾಗ ಮಹಾರಾಷ್ಟ್ರದಲ್ಲೂ ಕಂಡಿದ್ದೇವೆ.

ನೆಹರೂ ಆರಂಭಿಸಿದ ಮತ್ತು ನಂತರ ಇತರರು ಮುಂದುವರಿಸಿದ ಹಿಂದೂ- ವಿರೋಧಿ ನೀತಿಗಳಿಗೆ ಹಿಂದೂಗಳಿಂದ ಸೂಕ್ತ ಹಾಗೂ ಪರಿಣಾಮಕಾರಿ ವಿರೋಧ ವ್ಯಕ್ತವಾಗದ ಕಾರಣ ಹಿಂದೂಗಳ ವಿರುದ್ಧ ಮಾತಾಡುವುದು, ಅವರ ಧಾರ್ವಿುಕ ಭಾವನೆಗಳಿಗೆ ಧಕ್ಕೆಯೊದಗುವಂತೆ ನಡೆದುಕೊಳ್ಳುವುದು ಕಾಂಗ್ರೆಸ್ ನೇತಾರರ ಸ್ವಭಾವವೇ ಆಗಿಹೋಗಿದೆ, ಪ್ರಮುಖ ಕಾಂಗ್ರೆಸ್ ನೇತಾರರು ‘ಕೇಸರಿ ಭಯೋತ್ಪಾದನೆ’ ಎಂಬುದನ್ನು ಸೃಷ್ಟಿಸುತ್ತಾರೆ, 26/11 ಮುಂಬೈ ದಾಳಿಗೆ ‘ಹಿಂದೂ ಭಯೋತ್ಪಾದಕರನ್ನು’ ಹೊಣೆಯಾಗಿಸುತ್ತಾರೆ, ಶ್ರೀಕೃಷ್ಣ ಜಿಹಾದ್ ಬೋಧಿಸಿದ ಎಂದು ಹೇಳುತ್ತಾರೆ, ವಿಷ್ಣುವಿನ ಅವತಾರವಾದ ಪರಶುರಾಮ ಒಬ್ಬ ಭಯೋತ್ಪಾದಕ ಹಾಗೂ ಅತ್ಯಾಚಾರಿಯಾಗಿದ್ದ ಎಂದು ಹೇಳುತ್ತಾರೆ, ಹಿಂದೂ ಧರ್ಮಗ್ರಂಥಗಳಲ್ಲಿ ಪುರುಷಪ್ರಧಾನತೆ, ‘ಮೀ ಟೂ’ಗಳು ತುಂಬಿವೆ ಎಂದು ಲೇಖನಗಳನ್ನು ಬರೆಯುತ್ತಾರೆ, ನಡುರಸ್ತೆಯಲ್ಲಿ ಕರುವನ್ನು ಕಡಿಯುತ್ತಾರೆ; ಕಾಂಗ್ರೆಸ್ ಸರ್ಕಾರಗಳು ಹಿಂದೂಗಳನ್ನು ಬಂಧಿಸಿ ಹಿಂಸಿಸುತ್ತವೆ, ಕೋಮುಗಲಭೆಗಳಿಗೆಲ್ಲಾ ಬಹುಸಂಖ್ಯಾತರೇ ಅಂದರೆ ಹಿಂದೂಗಳೇ ಜವಾಬ್ದಾರರು ಎಂದು ಹೇಳುವ ಕಾನೂನನ್ನು ತರಲು ಯೋಚಿಸುತ್ತವೆ; ಲಷ್ಕರ್-ಎ-ತೋಯ್ಬಾದಿಂದ ನಮಗೆ ಅಪಾಯವಿಲ್ಲ, ನಮಗಿರುವ ಅಪಾಯ ಹಿಂದೂ ಭಯೋತ್ಪಾದನೆಯದು ಎಂದು ರಾಹುಲ್ ಗಾಂಧಿ ಅಮೆರಿಕಾದ ರಾಯಭಾರಿಗೆ ಹೇಳುತ್ತಾರೆ, ಭಾರತ್ ಜೋಡೋ ಯಾತ್ರೆಯಲ್ಲಿ ಉಗ್ರ ಹಿಂದೂ-ವಿರೋಧಿ ಜಾರ್ಜ್ ಪೊನ್ನಯ್ಯರನ್ನು ಭೇಟಿಯಾಗುತ್ತಾರೆ. ಪಟ್ಟಿ ಉದ್ದವಿದೆ ಮತ್ತು ಅದಕ್ಕೀಗ ಜಾರಕಿಹೊಳಿ ಸೇರಿದ್ದಾರೆ.

ಈ ನಡುವೆ ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ವಿುಸುವ ಮಾತಾಡುತ್ತಾರೆ, ಅದನ್ನು ಸಮರ್ಥಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಿರ್ವಿುಸಲಿ ಬಿಡಿ ಟಿಪ್ಪು ಅದಕ್ಕೆ ಯೋಗ್ಯನಲ್ಲವೇ? ಎಂದು ಹೇಳುತ್ತಾರೆ. ಇಲ್ಲಿ ಪ್ರಶ್ನೆಯೇಳುವುದು ಈ ಬಗೆಯ ಮಾತುಗಳ ಔಚಿತ್ಯದ ಬಗ್ಗೆ. ಮೋಸಕ್ಕೆ ಬಲಿಯಾದ ಮೈಸೂರು ಅರಸು ಮನೆತನ, ಮೇಲುಕೋಟೆ, ಮಂಗಳೂರಿನ ನೆತ್ತರ ಕೆರೆ, ಗಡಾಯಿ ಕಲ್ಲಿನ ಟಿಪ್ಪು ಡ್ರಾಪ್​ಗಳನ್ನು ನಾಡಿನ ಜನ ಮರೆತಿಲ್ಲ. ಇಂತಹ ಸನ್ನಿವೇಶದಲ್ಲಿ ಟಿಪ್ಪುವನ್ನು ವೈಭವೀಕರಿಸುವ ಮಾತುಗಳನ್ನಾಡುವುದು ಹಿಂದೂ ಸಂವೇದನೆಗಳಿಗೆ ಧಕ್ಕೆಯೊದಗಿಸುತ್ತದೆ. ಟಿಪ್ಪುವಿನ ಕೈಗೆ ಅಂಟಿರುವ ರಕ್ತವನ್ನು ಆತ ಮಾಡಿದ ಕೆಲವು ‘ಒಳ್ಳೆಯ’ ಕೃತ್ಯಗಳು ತೊಳೆಯಲಾರವು. ಹಿಂದೂಗಳ ಶಾಂತ ಪ್ರವೃತ್ತಿಯನ್ನು ಬಲಹೀನತೆ ಎಂದು ಅಸಡ್ಡೆಯಿಂದ ಕಾಣುವ ಮನೋಭಾವವನ್ನು ಕಾಂಗ್ರೆಸ್ಸಿಗರು ಮತ್ತು ಅವರನ್ನು ಅನುಕರಿಸುವ ಇತರರು ಇನ್ನಾದರೂ ಅರಿಯಬೇಕು.

ಕೊನೆಯಲ್ಲಿ ‘ಪೊಣ್ಣಿಯನ್ ಸೆಲ್ವನ್’ ಚಿತ್ರದ ಬಗ್ಗೆ. ರಾಜೇಂದ್ರ ಚೋಳನ ಕಾಲದಲ್ಲಿ ಹಿಂದೂ ಧರ್ಮ ಇರಲೇ ಇಲ್ಲ, ಆದ್ದರಿಂದ ಅವನನ್ನು ಹಿಂದೂ ಎನ್ನುವಂತೆ ಮಣಿರತ್ನಂ ಚಿತ್ರಿಸಿರುವುದು ತಪ್ಪು ಎಂದು ತಮಿಳುನಾಡಿನ ತಥಾಕಥಿತ ಸೆಕ್ಯುಲರಿಸ್ಟರು ವಾದಿಸುವುದು ಅವರ ಬೌದ್ಧಿಕ ದಿವಾಳಿತನದ ದ್ಯೋತಕ. ಚೋಳ ರಾಜವಂಶ ಅಸ್ತಿತ್ವಕ್ಕೆ ಬರುವುದಕ್ಕೂ ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ಸಿಂಧೂವಿನಿಂದ ಹಿಂದೂ ಪದ ಉತ್ಪತ್ತಿಯಾಗಿತ್ತು, ಮತ್ತು ಅದು ನದಿ, ನೆಲ, ಜನ, ಜೀವನವಿಧಾನ, ಧಾರ್ವಿುಕ ನಂಬಿಕೆ ಹಾಗೂ ಆಚರಣೆಗಳು ಎಲ್ಲದಕ್ಕೂ ಅನ್ವಯವಾಗುತ್ತಿತ್ತು. ಆ ಆಚರಣೆಗಳಲ್ಲಿ ಚೋಳ ಅರಸರು ಅನುಸರಿಸಿದ, ಹಿಂದೂ ಆಚರಣೆಗಳು, ಆರಾಧಿಸಿದ ಹಿಂದೂ ದೈವಗಳೆಲ್ಲವೂ ಸೇರಿದ್ದವು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net