

‘ಅತಿ ಬೇಡವೆಲ್ಲಿಯುಂ ಮಂಕುತಿಮ್ಮ’- ಡಿವಿಜಿಯವರ ಈ ಕಿವಿಮಾತು ಪ್ರಸಕ್ತ ಪರಿಸ್ಥಿತಿಯಲ್ಲಿ ಬಹಳ ಪ್ರಸ್ತುತ. ವೈಶ್ವಿಕ ಮಹಾಮಾರಿ ಕರೊನಾ ಜೊತೆ ಇಡೀ ವಿಶ್ವವೇ ಸೆಣಸುತ್ತಿರುವ ಈ ಸಂಕಷ್ಟದ ದಿನಗಳ ಮಧ್ಯೆಯೇ ಗಡಿ ಭಾಗಗಳಲ್ಲಿ ಚೀನಾದ ಉದ್ಧಟತನ ನಮ್ಮ ಹಲವು ಧೀರ ಯೋಧರನ್ನು ಬಲಿ ತೆಗೆದುಕೊಂಡಿದೆ. ‘ದುರ್ಭಿಕ್ಷದಲ್ಲಿ ಅಧಿಕ ಮಾಸ’ ಎಂಬಂತೆ ವಕ್ಕರಿಸಿರುವ ಈ ಆಪತ್ತು ದೇಶಕ್ಕೆ ದೊಡ್ಡ ಸವಾಲನ್ನು ಎಸೆದಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜಕೀಯ ಲಾಭಗಳಿಗೋಸ್ಕರ ಹಲವು ಕಡೆಗಳಿಂದ ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ನಿಲುವು-ನಿರ್ಧಾರಗಳ ಬಗ್ಗೆ ವಿಪರೀತವಾದ ಟೀಕೆಯಷ್ಟೇ ಅಲ್ಲದೆ ಅನವಶ್ಯಕ ಸಲಹೆಗಳ ಸರಮಾಲೆಯೂ ಹರಿದುಬರುತ್ತಿದೆ.
ಪ್ರಜಾಪ್ರಭುತ್ವದಲ್ಲಿ ವಿಮರ್ಶೆ ಅಗತ್ಯ, ಆದರೆ ದೇಶದ ಭದ್ರತೆಯಂಥ ಸೂಕ್ಷ್ಮ ವಿಚಾರಗಳಲ್ಲಿ ಕಾಳಜಿ ವಹಿಸಿ ಜವಾಬ್ದಾರಿಯುತ ವಿಮರ್ಶೆ ಮಾಡಬೇಕೇ ಹೊರತು ಅತಿ ಸೂಕ್ಷ್ಮವಾದ ವಿಚಾರಗಳನ್ನು ಬಹಿರಂಗಪಡಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವುದರಿಂದ ಶತ್ರುವಿಗೆ ಬೇಕಾದ ಮಾಹಿತಿಯನ್ನು ‘ಸುಲಿದ ಬಾಳೆಯ ಹಣ್ಣಿನಂದದಿ’ ನಾವೇ ಕೊಟ್ಟಂತಾಗುತ್ತದೆ. ಟಿಕ್ಟಾಕ್ ಹಾಗೂ ಚೀನಾ ಮೂಲದ ಇತರ ಆಪ್ಗಳನ್ನು ನಿಷೇಧಿಸಿರುವುದೂ ಈ ದಿಶೆಯಲ್ಲಿಯೇ. ಈ ನಿಟ್ಟಿನಲ್ಲಿ ಕಾನೂನಿನ ಚೌಕಟ್ಟು ಹಾಗೂ ನ್ಯಾಯಾಲಯ ಅದನ್ನು ವಿಶ್ಲೇಷಿಸಿರುವ ರೀತಿ- ಇದರ ಒಂದು ಪಕ್ಷಿನೋಟ ಸಂದರ್ಭೇಚಿತ.
2000ನೇ ಇಸವಿಯಲ್ಲಿ ಮಾಹಿತಿ-ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂತು. 2009ರಲ್ಲಿ ಆ ಕಾಯ್ದೆಗೆ ಒಂದು ತಿದ್ದುಪಡಿ ಮಾಡಿ ಕಲಂ 66-A, 69-A ಮುಂತಾದವುಗಳನ್ನು ಸೇರಿಸಲಾಯಿತು. ಕಲಂ 69-A ಪ್ರಕಾರ ದೇಶದ ಸುರಕ್ಷತೆ, ಭದ್ರತೆ ಹಾಗೂ ಸಾರ್ವಭೌಮತೆಗಳಿಗೆ ಹಾನಿಯುಂಟಾಗುವ ಸಂಭವ ಇದ್ದಲ್ಲಿ ಇಂಟರ್ನೆಟ್ ಮೂಲಕ ಪ್ರಸಾರವಾಗುವ ಯಾವುದೇ ಮಾಹಿತಿ ಅಥವಾ ವಿಷಯಗಳನ್ನು ತಡೆಯುವ ಹಕ್ಕು ಸರ್ಕಾರಕ್ಕಿದೆ. ಟಿಕ್ಟಾಕ್ ನಿಷೇಧಗೊಂಡಿರುವುದು ಈ ಹಿನ್ನೆಲೆಯಲ್ಲಿ. ಈ ಆಪ್ನ ಮಾಲೀಕತ್ವ ಚೀನಾದ ಕಂಪನಿಯೊಂದರದ್ದು. ಚೀನಾದ ಗುಪ್ತಚರ ಇಲಾಖೆಗೆ ಸಂಬಂಧಿಸಿದ ಕಾನೂನಿನ ಪ್ರಕಾರ ಆ ದೇಶದ ಯಾವುದೇ ಕಂಪನಿಗಾಗಲೀ ಗುಪ್ತಚರ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾದ ಬಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಅಲ್ಲಿನ ಸೈಬರ್ ಸೆಕ್ಯೂರಿಟಿ ಕಾನೂನಿನ ಪ್ರಕಾರ ಆ ಕಂಪನಿಗಳು ಅಲ್ಲಿನ ಸರ್ಕಾರದ ಪರಿವೀಕ್ಷಣೆಗೆ ಒಳಪಟ್ಟಿರುತ್ತವೆ.
ಟಿಕ್ಟಾಕ್ನ ಮಾಲೀಕತ್ವ ಹೊಂದಿರುವ ‘ಬೈಟ್ ಡಾನ್ಸ್’ ಎಂಬ ಕಂಪನಿ ಚೀನಾ ಸರ್ಕಾರಕ್ಕೆ ಯಾವ ರೀತಿ ಶರಣಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. 2019ರಲ್ಲಿ ‘ಗಾರ್ಡಿಯನ್’ ಪತ್ರಿಕೆಗೆ ದೊರಕಿದ ಮಾಹಿತಿ ಪ್ರಕಾರ ಆ ಕಂಪನಿ ತನ್ನ ಇಚ್ಛಾನುಸಾರ ಬಳಕೆದಾರರ ಸಂದೇಶಗಳನ್ನು ಅಳಿಸಿ ಹಾಕಿದೆ. ಚೀನಾದೊಂದಿಗೆ ಸೆಣೆಸುತ್ತಿರುವ ಟಿಬೆಟ್ನ ಸ್ವಾತಂತ್ರ್ಯ ಹೋರಾಟದ ಬಗ್ಗೆ, ಟಿಯಾನನ್ಮೆನ್ ಸ್ಕೆ್ವೕರ್ನಲ್ಲಿ ಪ್ರತಿಭಟನಾಕಾರರನ್ನು ಹತ್ಯೆಗೈದ ಬಗ್ಗೆ ಸಂದೇಶಗಳನ್ನು ಅಳಿಸಿಹಾಕಿದೆ. ಚೀನಾ ಸರ್ಕಾರದ ಆದೇಶಗಳಿಗೆ ಟಿಕ್ಟಾಕ್ ಹೇಗೆ ಮಣಿದಿದೆ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಹೇಗೆ ಪ್ರಭಾವಗೊಳಿಸುವ ಶಕ್ತಿ ಹೊಂದಿದೆ ಎಂಬುದು ಗೋಚರವಾಗುತ್ತದೆ. ಸಾಲದ್ದಕ್ಕೆ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿ, ಅವರ ಓಡಾಟದ ಸ್ಥಳಗಳು ಮಿಕ್ಕೆಲ್ಲ ಡೇಟಾ ಆ ಕಂಪನಿ ಸರ್ಕಾರದ ಜೊತೆ ಹಂಚಿಕೊಳ್ಳುವುದಕ್ಕೆ ಒಪ್ಪಿಗೆ ಕೊಡಬೇಕು. ಇಂತಹ ಅಪಾಯಕರ ಆಪ್ ನಿಜಕ್ಕೂ ಸದ್ದಿಲ್ಲದೇ ಸ್ಪೋಟಗೊಳ್ಳಬಹುದಾದ ಬಾಂಬ್ ಎಂದು ಅರಿತುಕೊಳ್ಳಬೇಕಲ್ಲವೇ? ಚೀನಾ ಮೂಲದ ಇಂತಹ ಆಪ್ಗಳನ್ನು ನಿಷೇಧಿಸಿರುವ ಭಾರತ ಸರ್ಕಾರದ ನಿಲುವಿಗೆ ಅಮೆರಿಕ ಪೂರ್ಣ ಬೆಂಬಲ ವ್ಯಕ್ತಪಡಿಸುವುದಲ್ಲದೆ, ಹುವಾಯ್ ಮುಂತಾದ ಚೀನೀ ಕಂಪನಿಗಳನ್ನು ನಿಷೇಧಿಸಿದೆ.
ಭಾರತ ಸರ್ಕಾರಕ್ಕೆ ಹೀಗೆ ನಿಷೇಧಿಸುವ ಹಕ್ಕು ನೀಡುವ ಮಾಹಿತಿ-ತಂತ್ರಜ್ಞಾನ ಕಾಯ್ದೆಯ ಕಲಂ 69-A ಬಗ್ಗೆ ಸ್ವಲ್ಪ ಅರಿವು ಅಗತ್ಯ. ಈ ಕಲಂ ಹಾಗೂ ಕಲಂ 66-A ಎರಡರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. 2015ರಲ್ಲಿ ತೀರ್ವನಗೊಂಡ ಶ್ರೇಯಾ ಸಿಂಘಲ್ ಪ್ರಕರಣದಲ್ಲಿ ಕಲಂ 66-A ಅಸಿಂಧು ಎಂದು ಘೊಷಿಸುವ ತೀರ್ಪಿನಲ್ಲೇ ಕಲಂ 69-A ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಟಿಕ್ಟಾಕ್ನ ಜಾತಕ ಇದಾದರೆ, ಏತನ್ಮಧ್ಯೆ ನಟ ಕಮಲ್ಹಾಸನ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಲಡಾಖ್ನ ಗಡಿಪ್ರದೇಶದಲ್ಲಿ ಯಾವ ರೀತಿ ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಯಿತು, ಚೀನಾದ ಸೈನ್ಯ ಗಡಿ ದಾಟಿ ಎಷ್ಟು ಒಳಗೆ ನುಗ್ಗಿತು, ಎಷ್ಟು ಮಂದಿ ಚೀನಾ ಸೈನಿಕರನ್ನು ಭಾರತ ಹೊಡೆದುರುಳಿಸಿತು, ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ಮಾಹಿತಿ ಪಡೆಯುವುದು ಪ್ರಜೆಗಳ ಹಕ್ಕು ಎಂದು ವಾದಿಸಿದ್ದಾರೆ. ಸರ್ಕಾರ ಪ್ರಜೆಗಳ ಭಾವನೆಗಳ ಜೊತೆ ಆಟವಾಡುತ್ತಿದೆ ಎಂದೆಲ್ಲ ಕಮಲ್ ಟೀಕಿಸಿದ್ದಾರೆ. ಇನ್ನೂ ಹಲವರು ಸರ್ಕಾರ ಲಡಾಖ್ನಲ್ಲಿ ಚೀನಾ ಜೊತೆ ನಡೆದ ಸಂಘರ್ಷದ ಪೂರ್ಣ ಮಾಹಿತಿ ಜನತೆಯ ಮುಂದಿಡಬೇಕೆಂದು ಒತ್ತಾಯಿಸಿದ್ದಾರೆ. ಪಾಂಗಾಂಗ್ ಸರೋವರದ ಸುತ್ತಮುತ್ತಲಿನ ಪ್ರದೇಶಕ್ಕೂ ಚೀನಾ ಕಾಲಿಟ್ಟಿದೆ ಎಂಬ ಮಾತಿನ ಮಧ್ಯೆ ಸರ್ಕಾರ ಯಾವ ರೀತಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಸಲಹೆಗಳು ಸಾಗರೋಪಾದಿಯಲ್ಲಿ ಹರಿದುಬರುತ್ತಿವೆ. ಇದೇ ಜೂನ್ 30ರಂದು ಪ್ರಧಾನ ಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಚೀನಾದ ಬಗ್ಗೆ ಪ್ರಸ್ತಾಪಿಸಲಿಲ್ಲ. ಪ್ರಧಾನಿ ಚೀನಾದ ಬಗ್ಗೆ ಮಾತನಾಡಲು ಹೆದರಿದ್ದಾರೆ ಎಂದೂ ಟೀಕಿಸಲಾಯಿತು. ಒಂದು ಚುನಾಯಿತ ಸರ್ಕಾರ ದೇಶದ ಸುರಕ್ಷತೆಯ ಜವಾಬ್ದಾರಿ ಹೊತ್ತ ಮೇಲೆ ಯುದ್ಧದ ವಾತಾವರಣ ಸೃಷ್ಟಿಯಾದಾಗ ಒಗ್ಗಟ್ಟು ಪ್ರದರ್ಶಿಸಬೇಕೇ ಅಥವಾ ಮಾಹಿತಿ ಹಕ್ಕಿನ ಬಗ್ಗೆ ವಿತಂಡವಾದ ಮಾಡಬೇಕೇ ಎಂಬುದು ಈಗಿನ ಪ್ರಶ್ನೆ.
ದೇಶದ ರಕ್ಷಣಾ ವ್ಯವಸ್ಥೆ, ಆಂತರಿಕ ಭದ್ರತೆ, ಸಾರ್ವಭೌಮತೆ ಇತ್ಯಾದಿ ಸೂಕ್ಷ್ಮ ವಿಷಯಗಳ ಮಾಹಿತಿಗೆ ಸಂಬಂಧಿಸಿದ ಕಾನೂನು ಮುಖ್ಯವಾಗಿ ‘ಅಧಿಕೃತ ರಹಸ್ಯಗಳ ಕಾಯ್ದೆ’, ‘ಭಾರತೀಯ ಸಾಕ್ಷಾ್ಯಧಾರಗಳ ಕಾಯ್ದೆ’ ಹಾಗೂ ಇತ್ತೀಚಿನ ದಿನಗಳಲ್ಲಿ ‘ಮಾಹಿತಿ ಹಕ್ಕು ಕಾಯ್ದೆ’- ಇವುಗಳಲ್ಲಿ ಅಡಕವಾಗಿವೆ. ಪ್ರಜಾತಂತ್ರದಲ್ಲಿ ಸರ್ಕಾರದ ಎಲ್ಲ ನಡವಳಿಕೆ ಹಾಗೂ ವ್ಯವಹಾರಗಳ ಬಗ್ಗೆ ಪ್ರಜೆಗಳಿಗೆ ಮಾಹಿತಿ ದೊರಕಬೇಕು, ಸರ್ಕಾರದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಇರಬೇಕು ಎಂದು ನ್ಯಾಯಾಲಯ ಮುಂಚಿನಿಂದಲೂ ನಿಲುವು ತೆಗೆದುಕೊಂಡಿದೆ. 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯಾದ ಮೇಲೆ ಪ್ರಜೆಗಳ ಈ ಹಕ್ಕಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಆದರೆ ಎಂದೆಂದಿಗೂ ನ್ಯಾಯಾಲಯ ಸತತವಾಗಿ ಎತ್ತಿಹಿಡಿದಿರುವ ಒಂದು ನೀತಿಯೇನೆಂದರೆ ದೇಶದ ಸುರಕ್ಷತೆ, ಭದ್ರತೆ ಆದಿಯಾಗಿ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳು ವಿಶೇಷ ಸವಲತ್ತುಗಳಿಗೊಳಪಟ್ಟಿವೆ, ಆದ್ದರಿಂದ ಅಂಥ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವ ಬಾಧ್ಯತೆ ಸರ್ಕಾರಕಿಲ್ಲ ಎಂದು.
ಅಧಿಕೃತ ರಹಸ್ಯಗಳ ಕುರಿತ ಕಾಯ್ದೆ ಸ್ವಾತಂತ್ರ್ಯಪೂರ್ವದ ಒಂದು ಕಾನೂನು. 1923ರಲ್ಲಿ ಜಾರಿಗೆ ಬಂದ ಈ ಕಾನೂನು ಬ್ರಿಟನ್ ಮೊದಲನೇ ಮಹಾಯುದ್ಧದಲ್ಲಿ ಕಲಿತ ಪಾಠಗಳನ್ನು ಭಾರತಕ್ಕೆ ಜಾರಿ ಮಾಡಿದ ಕಾನೂನಿನಲ್ಲಿ ಸಂಯೋಜಿಸುವ ಉದ್ದೇಶದಿಂದ ರೂಪಿಸಿತು. ಶತ್ರು ದೇಶಗಳೊಂದಿಗೆ ಯುದ್ಧ, ಅದಕ್ಕೆ ಸಂಬಂಧಿಸಿದ ಗುಪ್ತಚರ ಹಾಗೂ ರಹಸ್ಯ ಮಾಹಿತಿಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ಕಾನೂನಾತ್ಮಕ ವ್ಯವಸ್ಥೆ. ದೇಶದ ಸುರಕ್ಷೆ ಹಾಗೂ ಸಾರ್ವಭೌಮತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಅನಧಿಕೃತ ವ್ಯಕ್ತಿಗಳ ಮೂಲಕ ಶತ್ರುಗಳ ಕೈ ಸೇರುವುದನ್ನು ತಡೆಯಲು ಇದೊಂದು ಪ್ರಭಾವಿ ಕಾನೂನು. ಮೇಲ್ನೋಟಕ್ಕೆ ಕಠಿಣವಾಗಿ ಕಾಣುವ ಈ ಕಾನೂನು ದೇಶದ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯವಶ್ಯಕ. ಈ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟಿನ ಮುಂದೆ ಪ್ರಶ್ನಿಸಲಾಗಿತ್ತು. 1997ರಲ್ಲಿ ಇತ್ಯರ್ಥವಾದ ದಿನೇಶ್ ತ್ರಿವೇದಿ ಪ್ರಕರಣದಲ್ಲಿ ನ್ಯಾಯಾಲಯ ಈ ಕಾನೂನಿನ ಸಿಂಧುತ್ವವನ್ನು ಪರೀಕ್ಷಿಸುವ ಅವಶ್ಯಕತೆ ಇರುವುದಿಲ್ಲವೆಂದೂ, ದೇಶದ ಸುರಕ್ಷತೆಗೆ ಸಂಬಂಧಪಟ್ಟ ಸೂಕ್ಷ್ಮ ವಿಚಾರಗಳನ್ನು ಬಹಿರಂಗಗೊಳಿಸಬೇಕಾದ ಅವಶ್ಯಕತೆಯೂ ಇರುವುದಿಲ್ಲ ಎಂದು ತೀರ್ಪಿತ್ತಿದೆ.
1993ರಲ್ಲಿ ಇತ್ಯರ್ಥವಾದ ಆರ್.ಕೆ.ಜೈನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ತರವಾದ ವಿಷಯವನ್ನು ಪ್ರಸ್ತಾಪಿಸಿದೆ. ‘Salus populi suprema lex (ಸಾರ್ವಜನಿಕ ಒಳಿತಿಗಿಂತ ಮಿಗಿಲಾದ ಕಾನೂನಿಲ್ಲ) ಎಂಬ ಲ್ಯಾಟಿನ್ ಹೇಳಿಕೆಯನ್ನು ಆಧರಿಸಿ, ಸೂಕ್ಷ್ಮ ವಿಚಾರಗಳನ್ನು ಬಹಿರಂಗಗೊಳಿಸಿದರೆ ಸೇನೆ ಹಾಗೂ ಸೈನಿಕರ ಜೀವಕ್ಕೆ ಅಪಾಯ ಉಂಟುಮಾಡಿದ ಹಾಗಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಗೆ ಬಂತು. ಅಧಿಕೃತ ರಹಸ್ಯಗಳ ಕಾಯ್ದೆಯನ್ನು ಮಾಹಿತಿ ಹಕ್ಕಿನ ಕಾಯ್ದೆಗೆ ಒಳಪಟ್ಟು ಜಾರಿ ಮಾಡಬೇಕಾದ ಪರಿಸ್ಥಿತಿ ಒದಗಿದ್ದರೂ ಮಾಹಿತಿ ಹಕ್ಕಿನ ಕಾಯ್ದೆ ಸರ್ಕಾರದ ಗುಪ್ತಚರ ವಿಭಾಗ ಹಾಗೂ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಅನ್ವಯ ಆಗುವುದಿಲ್ಲ ಎಂದು ಕಲಂ 24ರಲ್ಲಿ ಸ್ಪಷ್ಟೀಕರಿಸಲಾಗಿದೆ.
ಇಷ್ಟೆಲ್ಲದರ ಸಾರಾಂಶ ಏನೆಂದರೆ ದೇಶದ ಸುರಕ್ಷತೆ, ಸಾರ್ವಭೌಮತೆಯೇ ಸರ್ವೇಪರಿ. ಪ್ರಜೆಗಳ ಹಕ್ಕುಗಳು ಕೂಡ ಸಾಂವಿಧಾನಿಕವಾಗಿ ದೇಶದ ಒಳಿತಿಗೆ ಮಣಿಯಬೇಕು. ರಾಜತಾಂತ್ರಿಕತೆ, ರಕ್ಷಣಾ ನೀತಿ, ಸಾರ್ವಭೌಮತ್ವದ ಕಾಪಾಡುವಿಕೆ ಇವೆಲ್ಲ ಅತಿ ಸೂಕ್ಷ್ಮವಾದ ವಿಷಯಗಳು. ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿ ಪ್ರಜೆಗಳ ಹಕ್ಕುಗಳು ಹಾಗೂ ದೇಶದ ಹಿತಾಸಕ್ತಿಗಳನ್ನು ಸಮತೋಲಿತ ರೀತಿಯಲ್ಲಿ ಸಂರಕ್ಷಿಸಲಾಗಿದೆ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ಭರವಸೆಯಿಟ್ಟು, ಆಪತ್ಕಾಲದಲ್ಲಿ ಒಗ್ಗಟ್ಟು ಪ್ರದರ್ಶಿಸುವುದು ಸಂವಿಧಾನದಡಿ ನಮ್ಮೆಲ್ಲರ ಮೂಲಭೂತ ಕರ್ತವ್ಯ ಕೂಡ. ‘ಡೌಟಿಂಗ್ ಥಾಮಸ್’ ಗಳಾಗದೆ ನಮ್ಮ ಹಕ್ಕುಭಾದ್ಯತೆಗಳನ್ನು ಪ್ರಬುದ್ಧತೆಯಿಂದ ನಿಭಾಯಿಸೋಣ. ದೇಶವನ್ನು ಸಂರಕ್ಷಿಸುವ ದಿಶೆಯಲ್ಲಿ ತೆಗೆದುಕೊಂಡ ನಿರ್ಧಾರ ಠೀಕ್ಠಾಕ್ ಆಗಿದೆ.
(ಲೇಖಕರು ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ವಕೀಲರು)