

| ಉಮೇಶ್ ಕುಮಾರ್ ಶಿಮ್ಲಡ್ಕ
ದಿನಕಳೆದಂತೆ ಸಾಮಾನ್ಯ ಜನರ ಬದುಕಿನ ಬವಣೆ ಹೆಚ್ಚುತ್ತ ಸಾಗುತ್ತಿದೆ. ಕಾರಣ ಬೆಲೆ ಏರಿಕೆ. ಆದಾಯ ಇಳಿಕೆ. ಕೋವಿಡ್ ಸಂಕಷ್ಟದ ಸರಪಣಿ ಬಿಗಿಯಾಗಿದೆ ಎಂಬುದು ವಾಸ್ತವ. ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತ ಸಾಗಿ 100 ರೂಪಾಯಿ ಗಡಿ ದಾಟಿದ್ದು, ಅಗತ್ಯ ವಸ್ತುಗಳ ಬೆಲೆ ಏರುವಂತೆ ಮಾಡಿದೆ. ಈ ನಡುವೆ, ಮನೆಬಳಕೆಯ 14.2 ಕಿಲೋ ತೂಕದ ಎಲ್ಪಿಜಿ ಸಿಲಿಂಡರ್ ದರ ಕೂಡ 850 ರೂಪಾಯಿ ದಾಟಿದೆ. ವಾಣಿಜ್ಯ ಬಳಕೆಯ 19 ಕಿಲೋ ತೂಕದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 1,500 ರೂಪಾಯಿ ಮೇಲಿದೆ. ಅಲ್ಲಿಗೆ ಮನೆಬಳಕೆ ಎಲ್ಪಿಜಿ ಸಿಲಿಂಡರ್ ಮತ್ತು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ದರ ಹೆಚ್ಚು ಕಡಿಮೆ ಹತ್ತಿರ ಹತ್ತಿರ ಬಂದಂತಾಗಿದೆ. ಈ ವಿದ್ಯಮಾನದ ತೆರೆಮರೆಯ ಲೆಕ್ಕಾಚಾರವನ್ನು ಗಮನಿಸುವ ಪ್ರಯತ್ನ ಇಲ್ಲಿದೆ. ದೇಶದಲ್ಲಿ
ಎಲ್ಪಿಜಿ ದರವನ್ನು ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ. ಇದು 2020ರ ಅಕ್ಟೋಬರ್ನಲ್ಲಿ ಟನ್ಗೆ 359 ಅಮೆರಿಕ ಡಾಲರ್ ಇದ್ದದ್ದು, 2021ರ ಏಪ್ರಿಲ್ನಲ್ಲಿ ಟನ್ಗೆ 607 ಡಾಲರ್ ಆಗಿದೆ. ಭಾರತದ ಎಲ್ಪಿಜಿ ಅಗತ್ಯದ ಪೈಕಿ ಶೇಕಡ 55 ಪಾಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸಗಟುದರ ಸೂಚ್ಯಂಕದ ಲೆಕ್ಕಾಚಾರದಲ್ಲಿ ಎಲ್ಪಿಜಿ ಪಾಲು ಶೇಕಡ 0.64 ಇದೆ. ಸಬ್ಸಿಡಿ ನೀಡುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದ ಹೊರೆ ಜನರ ಮೇಲೆ ಬೀಳದಂತೆ ಸರ್ಕಾರ ನೋಡಿಕೊಳ್ಳುತ್ತಿತ್ತು. ನಮ್ಮ ದೇಶದಲ್ಲಿನ ಎಲ್ಪಿಜಿ ಮಾರುಕಟ್ಟೆಯ ವ್ಯಾಪ್ತಿಯ ಮಹತ್ವ ಬಿಂಬಿಸಲು ಈ ಲೆಕ್ಕಾಚಾರ ಬುನಾದಿ ಎನಿಸುತ್ತದೆ.
ಸರ್ಕಾರಕ್ಕೆ ಹೊರೆಯಾದ ಸಬ್ಸಿಡಿ!: ಸಾಮಾನ್ಯ ಜನರಿಗೆ ಹೊರೆಯಾಗದಿರಲಿ ಎಂದು ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಬ್ಸಿಡಿ ನೀಡುತ್ತಿತ್ತು. ಆದರೆ, ಅರ್ಹ ಫಲಾನುಭವಿಗಳಾದ ಸಾಮಾನ್ಯರಿಗೆ ಸಿಗಬೇಕಾಗಿದ್ದ ಸವಲತ್ತುಗಳನ್ನು ‘ಹೊಣೆಗಾರಿಕೆ ಮರೆತ’ ಅನರ್ಹ ಫಲಾನುಭವಿಗಳು ಬೇಕಾಬಿಟ್ಟಿ ಬಳಸಿಕೊಂಡರು. ಸಬ್ಸಿಡಿ ಸರ್ಕಾರಕ್ಕೆ ಹೊರೆಯಾಯಿತು. ವಿಶೇಷವಾಗಿ ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆ ಹಾಗೂ ಎಲ್ಪಿಜಿ ಸಬ್ಸಿಡಿ ಪ್ರಮುಖವಾದುದು. ಈ ಹಿಂದೆಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿ ಕಡಿತಗೊಳಿಸಿ ಅವುಗಳ ಬೆಲೆ ನಿರ್ಧರಿಸುವ ಹೊಣೆಗಾರಿಕೆಯನ್ನು ಕಂಪನಿಗಳಿಗೇ ಬಿಟ್ಟುಕೊಟ್ಟಿದೆ. ಈಗ ಕೆಳ ಮತ್ತು ಮೇಲ್ಮಧ್ಯಮ ವರ್ಗದವರು ಇದರ ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ.
ಸಬ್ಸಿಡಿ ಹಿಂತೆಗೆತದ ಸುತ್ತ ಮುತ್ತ: ಪೆಟ್ರೋಲ್, ಡೀಸೆಲ್ಗಳ ಸಬ್ಸಿಡಿ ಕೊನೆಗೊಳಿಸಿ ಮುಕ್ತ ಮಾರುಕಟ್ಟೆಗೆ ಬಿಟ್ಟುಕೊಟ್ಟಂತೆ ಮನೆ ಬಳಕೆಯ ಎಲ್ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ಹಿಂತೆಗೆತದ ಇತಿಹಾಸವನ್ನು ಗಮನಿಸಿದರೆ, ಜನರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಈ ಹಿಂದಿನ ಕೇಂದ್ರ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸಬ್ಸಿಡಿ ಹೆಸರಿನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಯಿಲ್ ಬಾಂಡ್ಗಳನ್ನು ವಿತರಿಸಿತ್ತು. ಇದರ ಮೌಲ್ಯವೇ 1.31 ಲಕ್ಷ ಕೋಟಿ ರೂಪಾಯಿ. ಇದನ್ನು ಭರಿಸುವ ಕೆಲಸವನ್ನು ಕಳೆದ ಏಳು ವರ್ಷಗಳಿಂದ ಮಾಡುತ್ತ ಬಂದಿರುವುದಾಗಿ ಹಾಲಿ ಸರ್ಕಾರ ಹೇಳಿಕೊಂಡಿದೆ.
ಬಿಸಿ ತಟ್ಟಲಾರಂಭಿಸಿದ್ದು ಯಾವಾಗ ?: ಮನೆಬಳಕೆಯ ಎಲ್ಪಿಜಿ ಸಿಲಿಂಡರ್ ದರ 2021ರ ಫೆಬ್ರವರಿಯಲ್ಲಿ 700 ರೂಪಾಯಿ ಗಡಿ ದಾಟಿದಾಗ ಎಲ್ಲರಿಗೂ ಅದರ ಬಿಸಿ ತಟ್ಟಲಾರಂಭಿಸಿತು. ಮೇ ತಿಂಗಳಲ್ಲಿ ಇದು 800 ರೂಪಾಯಿ ಗಡಿ ದಾಟಿತು. ಈಗ ಕೆಲವು ದಿನಗಳ ಹಿಂದೆ ಇದು 850ರ ಗಡಿ ದಾಟಿ 900 ರೂಪಾಯಿ ಆಸುಪಾಸು ತಲುಪಿದೆ.
ಬೆಲೆ ಏರಿಕೆ ಪರಿಣಾಮ: ಬೆಲೆ ಏರಿಕೆ ಪರಿಣಾಮ ಪ್ರಧಾನಮಂತ್ರಿ ಉಜ್ವಲಾ ಯೋಜನಾ ಸ್ಕೀಮ್ಲ್ಲಿ ಮನೆಬಳಕೆಯ ಎಲ್ಪಿಜಿ ಸಂಪರ್ಕ ಪಡೆದ 8 ಕೋಟಿ ಫಲಾನುಭವಿಗಳ ಪೈಕಿ 3.2 ಕೋಟಿ ಫಲಾನುಭವಿಗಳು ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದು ಈ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದ ಡೇಟಾದಲ್ಲಿರುವ ಅಂಶ. ಇದೇ ರೀತಿ, 2020 ಮೇ ತಿಂಗಳಿಂದೀಚೆಗೆ ಶೇಕಡ 43.3 ದರ ಏರಿಕೆಯಾದ ಕಾರಣ ಮನೆ ಬಳಕೆಯ ಎಲ್ಪಿಜಿ ಸಿಲಿಂಡರ್ (14.2 ಕಿಲೋ) ಬಳಕೆ ಪ್ರಮಾಣ ಇಳಿಕೆಯಾಗಿದೆ.
ಪಹಲ್ ಯೋಜನೆ: ಎಲ್ಪಿಜಿ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (ಡಿಬಿಟಿಎಲ್) ಅಥವಾ ಪಹಲ್ ಯೋಜನೆಯನ್ನು ಸರ್ಕಾರ 2013ರ ಜೂನ್ 1ರಂದು ಜಾರಿಗೊಳಿಸಿತು. 2015ರ ಜನವರಿ 1ರ ವೇಳೆಗೆ ಎಲ್ಲ ಗ್ರಾಹಕರೂ ಈ ಯೋಜನೆ ವ್ಯಾಪ್ತಿಗೆ ಸೇರಿದರು. ಇದರಿಂದ ಆದ ಪ್ರಯೋಜನ ಎಂದರೆ 4.49 ಕೋಟಿ ಡುಪ್ಲಿಕೇಟ್, ನಕಲಿ/ಅಸ್ತಿತ್ವದಲ್ಲಿ ಇಲ್ಲದ ನಿಷ್ಕ್ರಿಯ ಎಲ್ಪಿಜಿ ಸಂಪರ್ಕ ಪತ್ತೆಯಾದವು. ಅಲ್ಲದೆ, 1.08 ಕೋಟಿ ಬಳಕೆದಾರರು ‘ಗಿವ್ಇಟ್ ಅಪ್’ ಅಭಿಯಾನದಲ್ಲಿ ಭಾಗಿಯಾಗಿ ಸಬ್ಸಿಡಿ ಬಿಟ್ಟುಕೊಟ್ಟಿದ್ದರು. ಅಲ್ಲದೆ, 10 ಲಕ್ಷ ರೂ. ಮೇಲ್ಪಟ್ಟ ವಾರ್ಷಿಕ ಆದಾಯ ಇರುವವರು ಮಾರುಕಟ್ಟೆ ದರ ಪಾವತಿಸಿ ಮನೆಬಳಕೆಯ ಎಲ್ಪಿಜಿ ಸಿಲಿಂಡರ್ ಖರೀದಿಸಲು ಸರ್ಕಾರ 2015ರಲ್ಲೇ ನಿರ್ದೇಶಿಸಿತ್ತು. ಇದರಿಂದಾಗಿ ಸರ್ಕಾರಕ್ಕೆ 2020ರ ಮಾರ್ಚ್ 31ರ ವೇಳೆಗೆ ಸರ್ಕಾರಕ್ಕೆ 71,301 ಕೋಟಿ ರೂಪಾಯಿ ಉಳಿತಾಯವಾಗಿದೆ.
ಸರ್ಕಾರದ ಉಳಿತಾಯ: ಕೇಂದ್ರ ಸರ್ಕಾರದ ಮುಂಗಡ ಪತ್ರದ ಅಂದಾಜು ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಪಿಜಿ ಸಬ್ಸಿಡಿಗೆ 14,073 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 36,178 ಕೋಟಿ ರೂಪಾಯಿ ಇತ್ತು. ಪಹಲ್ ಯೋಜನೆ ಮೂಲಕ ಕಳೆದ ಹಣಕಾಸು ವರ್ಷ ಎಲ್ಪಿಜಿ ಸಬ್ಸಿಡಿಗಾಗಿ 25,520 ಕೋಟಿ ರೂಪಾಯಿ ವ್ಯಯಿಸಿತ್ತು. 9,690 ಕೋಟಿ ರೂಪಾಯಿಯನ್ನು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೂಲಕ ಬಡವರ ಮನೆಗೆ ಎಲ್ಪಿಜಿ ಸಂಪರ್ಕ ಒದಗಿಸಲುಖರ್ಚು ಮಾಡಿತ್ತು. ಪಹಲ್ಗೆ ಈ ವರ್ಷ 12,480 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ.