

ದೇಶದ ಒಳಿತು-ಕೆಡುಕುಗಳನ್ನು ದೇಶದ ಒಳಗೆ ಚರ್ಚೆ ಮಾಡುವುದರಲ್ಲಿ ಒಂದು ಅರ್ಥವಿದೆ. ವಿದೇಶಿ ನೆಲದಲ್ಲಿ ನಿಂತು ದೇಶದ ಕುರಿತು ರಾಹುಲ್ ಗಾಂಧಿ ಏಕೆ ಟೀಕೆ ಮಾಡುತ್ತಾರೆ? ಅಸಂಖ್ಯ ಭಾರತೀಯರ ಪ್ರಶ್ನೆ ಇದು.
ಸತ್ಯ ಏನು ಗೊತ್ತೇ? ದೇಶಭಕ್ತ ಸಾಂಸ್ಕೃತಿಕ ಆರೆಸ್ಸೆಸ್ ಇರಲಿ, ಕಾಂಗ್ರೆಸ್ಸಿಗೆ ನಮ್ಮ ಸಂವಿಧಾನದಿಂದ ಹಿಡಿದು ವಂದೇ ಮಾತರಂವರೆಗೆ, ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಅವರಿಂದ ಹಿಡಿದು ಸರ್ದಾರ್ ಪಟೇಲರವರೆಗೆ, ಯಾವುದೇ ಸಂಸ್ಥೆಯ ಇಲ್ಲವೇ ಮಹನೀಯರ ಹೆಮ್ಮೆಯ ಮೈಲುಗಲ್ಲುಗಳನ್ನಾಗಲಿ, ಅವುಗಳಿಗೆ ಸಂಬಂಧಿಸಿದ ಹೆಚ್ಚುಗಾರಿಕೆ-ವಾರ್ಷಿಕೋತ್ಸವಗಳನ್ನಾಲಿ ಸಂಭ್ರಮಿಸಿರುವ ಉದಾಹರಣೆಗಳೇ ಕಡಿಮೆ. ಆ ಪಕ್ಷ ಏನಿದ್ದರೂ ನೆಹರು-ಗಾಂಧಿ(ಮಹಾತ್ಮ ಗಾಂಧಿ ಅಲ್ಲ) ಮನೆತನದ ಭಜನೆಗಷ್ಟೇ ಸೀಮಿತ. ‘ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ’ ಎಂಬ 70ರ ದಶಕದ ಭರೂಚ ಮನಸ್ಥಿತಿಯೇ ಈಗಲೂ ಜೀವಂತ. ವ್ಯತ್ಯಾಸ, ಇಂದಿರಾ ಜಾಗದಲ್ಲಿ ಅವರ ಈಗಿನ ಪೀಳಿಗೆಯನ್ನು ಊಹಿಸಿಕೊಳ್ಳಬೇಕಷ್ಟೆ! ಇದರ ಸಾಬೀತಿಗೆ ಇತಿಹಾಸಕ್ಕೆ ಹೋಗಬೇಕಿಲ್ಲ. ಇತ್ತೀಚಿನ ಹತ್ತು ವರ್ಷಗಳ ನಿದರ್ಶನಗಳನ್ನೇ ನೋಡೋಣ.
ಕಾಂಗ್ರೆಸ್ಸಿನ ಕಟ್ಟಕಡೆಯ ಪ್ರಧಾನಮಂತ್ರಿಯಾಗಿ ಮನಮೋಹನ ಸಿಂಗ್ 2013-14ರವರೆಗೆ ಅಧಿಕಾರ ನಡೆಸಿದರು. ಅದೇ 2013 ಜನವರಿ 12ರಿಂದ 2014ರ ಜನವರಿ 12ರವರೆಗೆ ಒಂದು ವರ್ಷಕಾಲ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನವನ್ನು ಭಾರತ ಮಾತ್ರವಲ್ಲ ಇಡೀ ಪ್ರಪಂಚ ಆಚರಣೆ ಮಾಡಿತು. ಆದರೆ ಆಗಿನ ಕಾಂಗ್ರೆಸ್ ಸರ್ಕಾರವಾಗಲಿ, ಕಾಂಗ್ರೆಸ್ ನಾಯಕರಾಗಲಿ ಆ ಕಡೆ ತಿರುಗಿಯೂ ನೋಡಲಿಲ್ಲ. ಅಂದಿನ ಮನಮೋಹನ ಸಿಂಗ್, ಸೋನಿಯಾ ನೇತೃತ್ವದ ಕೇಂದ್ರದ ಕಾಂಗ್ರೆಸ್ ಸರ್ಕಾರಕ್ಕೆ ಸ್ವಾಮಿ ವಿವೇಕಾನಂದರ ನೂರೈವತ್ತನೇ ಜನ್ಮದಿನ ಮಹತ್ವದ್ದು ಎನಿಸಲೇ ಇಲ್ಲ. ವಿವೇಕಾನಂದರು ಒಂದು ಜಾತಿ, ಧರ್ಮಕ್ಕೆ ಸೇರಿದವರಾಗಿರಲಿಲ್ಲ. ಅವರು ಇಡೀ ವಿಶ್ವ ಸಮುದಾಯಕ್ಕೆ ಸೇರಿದವರು. ಇಡೀ ವಿಶ್ವಕ್ಕೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದವರು. ಆದರೂ ಕಾಂಗ್ರೆಸ್ ಏಕೆ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಮರೆಯಿತು?
ಸ್ವಾಮಿ ವಿವೇಕಾನಂದರು ಹಿಂದು ಸನ್ಯಾಸಿ. ಹಾಗಾಗಿ ಮುಸ್ಲಿಂ ಓಲೈಕೆ ಮನಸ್ಥಿತಿಯ ಕಾಂಗ್ರೆಸ್ಸಿಗೆ ಅದು ಒಗ್ಗದ ವಿಚಾರ ಅಂತಲೇ ಇಟ್ಟುಕೊಳ್ಳೋಣ. 2019ರ ಅಕ್ಟೋಬರ್ 2ಕ್ಕೆ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ವರ್ಷ ಬಂತು. ಆದರೆ ಅದನ್ನೂ ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಣೆ ಮಾಡಲಿಲ್ಲ. ಆಫ್ರಿಕಾ, ಅಮೆರಿಕ ಸೇರಿ ಜಗತ್ತಿನ ಹತ್ತಾರು ದೇಶಗಳಲ್ಲಿ ಗಾಂಧೀಜಿ ಜಯಂತಿ ಆಚರಣೆ ನಡೆಯಿತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷಪೂರ್ತಿ ಮಹಾನ್ ಚೇತನ ಎಂ.ಕೆ. ಗಾಂಧಿಯನ್ನು ಸ್ಮರಿಸುವ, ಗೌರವಿಸುವ ಹತ್ತಾರು ಕಾರ್ಯಕ್ರಮಗಳನ್ನು ನಡೆಸಿತು. ಆದರೆ ಗಾಂಧೀಜಿ ವಾರಸುದಾರರು, ಜಿಪಿಎ ಹೋಲ್ಡರ್ ಎನ್ನುವಂತೆ ಈಗಲೂ ಕ್ಲೇಮ್ ಮಾಡಿಕೊಳ್ಳುವ ಕಾಂಗ್ರೆಸ್ ಗಾಂಧೀಜಿಯನ್ನು ಮರೆಯಿತು ಏಕೆ? ಏಕೆಂದರೆ ಸೋನಿಯಾ, ರಾಹುಲ್ ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿ, ಗಾಂಧೀಜಿ ತತ್ವ, ಸಿದ್ಧಾಂತ ಯಾವುದೂ ಬೇಡ. ಈಗಿನ ಕಾಂಗ್ರೆಸ್ ಹಿರಿಕಿರಿಯ ನಾಯಕರಿಗೂ ಅಷ್ಟೇ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗಿಂತ ದೊಡ್ಡ ಗಾಂಧಿ ಬೇರೆ ಯಾರೂ ಇಲ್ಲ ಮತ್ತು ಇದ್ದರೂ ಬೇಕಾಗಿಲ್ಲ. 2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಜೂನ್ 2ರಂದು ‘ಸ್ವಚ್ಛ ಭಾರತ’ ಅಭಿಯಾನ ಆರಂಭ ಮಾಡಿತು. ಆ ಮಹಾನ್ ಅಭಿಯಾನದ ರಾಯಭಾರಿ ಗಾಂಧೀಜಿಯಾದರೆ, ಗಾಂಧೀಜಿ ಕನ್ನಡಕದ ಚಿತ್ರವನ್ನು ಅಭಿಯಾನದ ಲೋಗೋವನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಸ್ವಚ್ಛ ಭಾರತ ಯೋಜನೆಯನ್ನು ಮತ್ತು ಗಾಂಧೀಜಿ ಕನ್ನಡಕವನ್ನು ಕೇಂದ್ರ ಸರ್ಕಾರ ಲೋಗೋವನ್ನಾಗಿ ಸ್ವೀಕರಿಸಿದ್ದಕ್ಕೆ ಕಾಂಗ್ರೆಸ್ ಕಟಕಿಯಾಡಿತು. ಆದರೆ, ಅದು 150ನೆಯ ಜಯಂತಿ ವೇಳೆ ಗಾಂಧೀಜಿಯನ್ನು ನೆನಪು ಮಾಡಿಕೊಳ್ಳಲೇ ಇಲ್ಲ!
ಮೊನ್ನೆ ಅಕ್ಟೋಬರ್ 31ಕ್ಕೆ ಭಾರತದ ಉಕ್ಕಿನ ಮನುಷ್ಯ/ಏಕತಾ ಪುರುಷ ಸರ್ದಾರ್ ಪಟೇಲ್ ಜನಿಸಿ 150 ವರ್ಷ ಆಯಿತು. ಕಾಂಗ್ರೆಸ್ಗೆ ಸರ್ದಾರ್ ನೆನಪಾದರೇ? ಆ ಬಗ್ಗೆ ಕೇಳಬೇಡಿ. ಗುಜರಾತಿನ ಕೆವಾಡಿಯಾದಲ್ಲಿ ಗುಜರಾತ್ ಸರ್ಕಾರ ಏಕತಾ ಮೂರ್ತಿ ಸ್ಥಾಪನೆ ಮಾಡಲು ಮುಂದಾದಾಗ ಕುಹಕ ಆಡಿದ್ದ, ಕಾಂಗ್ರೆಸ್ ನಾಯಕರ ಹೈಜಾಕ್ ಎಂದು ಟೀಕಿಸಿದ್ದ ಕಾಂಗ್ರೆಸ್ಸಿಗರು ಪಟೇಲರ 150ನೆಯ ಜನ್ಮವರ್ಷಾಚರಣೆ ಮಾಡಲಿಲ್ಲವೇಕೆ? ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆ ಪಡಲು ಪಟೇಲರಿಗಿಂತ ಹೆಚ್ಚು ಗ್ರೇಟ್ ನಾಯಕ ಮತ್ತಿನ್ನಾರು ಸಿಗಲು ಸಾಧ್ಯ. ಆದರೂ ಕಾಂಗ್ರೆಸ್ಸಿಗೆ ಪಟೇಲರು ಬೇಡ. ಏಕೆಂದರೆ ಪಟೇಲರನ್ನು ಸ್ಮರಿಸಿಕೊಂಡರೆ, ಮುಸ್ಲಿಮರು ಎಲ್ಲಿ ಬೇಸರಗೊಳ್ಳುತ್ತಾರೋ ಎಂಬುದು ಕಾಂಗ್ರೆಸ್ ಚಿಂತೆ. ಹೈದರಾಬಾದ್ ನಿಜಾಮನ ಬಗ್ಗುಬಡಿದ, ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಿದ, ಭಾರತದ ಸೇನೆಯನ್ನು ಬಲಪಡಿಸಿದ ಪಟೇಲ್ ಹೆಸರೆತ್ತಿದರೆ ಮುಸ್ಲಿಮ್ ವೋಟ್ ಬ್ಯಾಂಕ್ ಕೈತಪ್ಪಿ ಹೋಗುತ್ತದೆ ಎಂಬ ಭೀತಿ.
2016ರ ಏಪ್ರಿಲ್ 16ಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹುಟ್ಟಿ 125 ವರ್ಷ ಆಯಿತು. ಸದಾ ಸಂವಿಧಾನ ಕೈಯಲ್ಲಿ ಹಿಡಿದು ಓಡಾಡುವ, ದಲಿತರ ಪರ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಂಬೇಡ್ಕರ್ ಜನ್ಮವೆತ್ತಿದ 125ನೇ ವರ್ಷಾಚರಣೆಯನ್ನು ಪಕ್ಷದ ಮೂಲಕ ಅದ್ದೂರಿಯಾಗಿ ಮಾಡಬಹುದಿತ್ತಲ್ಲ? ಅಂಬೇಡ್ಕರ್ ಜನ್ಮಭೂಮಿ ಮಹಾರಾಷ್ಟ್ರದ, ಅವರು ಶಿಕ್ಷಣ ಪಡೆದ ಲಂಡನ್ ಮನೆ, ಬೌದ್ಧ ಧರ್ಮ ಸ್ವೀಕಾರ ಮಾಡಿದ ನಾಗಪುರ ದೀಕ್ಷಾಭೂಮಿ, ಮುಂಬೈನ ಮಹಾಪರಿನಿರ್ವಾಣ ಸ್ಥಳ- ಹೀಗೆ ಪಂಚ ತೀರ್ಥಕ್ಷೇತ್ರ ಹೆಸರಿನಲ್ಲಿ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಇದು ದಲಿತೋದ್ಧಾರದ ಬೂಟಾಟಿಕೆ ಅಲ್ಲವೇ? ಇದು ಸಂವಿಧಾನ ಕಾಳಜಿಯ ಪ್ರಹಸನ ಅಲ್ಲವೇ?
ಈಗ ವಂದೇಮಾತರಂಗೆ ಬರೋಣ. ಕೋಟ್ಯಂತರ ದೇಶವಾಸಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆ ರಚನೆಗೆ 150ನೇ ವರ್ಷಾಚರಣೆ ಸಂಭ್ರಮ. ಈ ಗೀತೆ ಈಗಲೂ ಕಾಂಗ್ರೆಸ್ ಸಮಾವೇಶದ ನಾಂದಿಗೀತೆ. ಆದರೆ, ಹಾಡಲು ಕಾಂಗ್ರೆಸ್ಸಿಗೆ ಈಗಲೂ ಹಿಂಜರಿಕೆ. ಮೂರ್ತಿಪೂಜೆ ಒಪ್ಪದ ಮುಸಲ್ಮಾನರು ಎಲ್ಲಿ ಬೇಸರ ಪಟ್ಟುಕೊಳ್ಳುವರೋ ಎಂಬ ಹಿಂಜರಿಕೆ. ಹಾಗಾದರೆ ಕಾಂಗ್ರೆಸ್ ಆದ್ಯತೆ ಏನು ಎಂಬುದು ದೇಶದ ಪ್ರತಿಯೊಬ್ಬ ಪ್ರಜ್ಞಾವಂತನಿಗೂ ಈಗ ಗೊತ್ತಾಗಿದೆ.
ಒಂದು ಕಡೆ ಬಿಹಾರದ ವಿಧಾನಸಭೆಗೆ ಮತದಾನ ನಡೆಯುತ್ತಿದೆ. ಅದೇ ವೇಳೆ ಐತಿಹಾಸಿಕವಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಇಡೀ ದೇಶ ಸಂಭ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವಗೆದ್ದ ನಾರಿಶಕ್ತಿ ಗೌರವ, ಸಮ್ಮಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಪಕ್ಷ ನಾಯಕ ವೋಟ್ ಚೋರಿ ಎಂಬ ಸುಳ್ಳಿನ ಸರಪಣಿ ಪೋಣಿಸಿಕೊಂಡು ಪ್ರೆಸ್ವಿುೕಟ್ ಮಾಡುವುದರಲ್ಲಿ ಬಿಜಿ!
ರಾಹುಲ್ ಗಾಂಧಿ ಹೇಳುವ ಪ್ರಕರಣದಲ್ಲಿ ಹರಿಯಾಣದ ಮತದಾರ ಮ್ಯಾಥ್ಯೂ ಫೆರೆರೋ ಹೆಸರಿಗೆ ಬ್ರೆಜಿಲ್ನ ಲೀಸಾ ಫೋಟೋ ತಪ್ಪಾಗಿ ಮುದ್ರಣವಾಗಿದೆ. ಚುನಾವಣಾ ಆಯೋಗ ಕೊಡುವ ಮತದಾರರ ಗುರುತಿನ ಚೀಟಿಯಲ್ಲಿ ಇರುವ ಫೋಟೋಗಳು ನಮ್ಮದೇನಾ ಅಂತ ಶೇ.90ರಷ್ಟು ಮತದಾರರಿಗೆ ಅನುಮಾನ ಬರುತ್ತದೆ. ಒಂದುವೇಳೆ ಲೀಸಾ ಫೋಟೋ ಬದಲು ಹಂದಿಯೋ, ಕೋತಿಯೋ ಕತ್ತೆಯದ್ದೋ ಫೋಟೋ ಪ್ರಿಂಟ್ ಆಗಿದ್ದರೆ, ‘ಓ! ಹರಿಯಾಣದಲ್ಲಿ ಮನುಷ್ಯರು ಮಾತ್ರವಲ್ಲ ಹಂದಿ, ಕೋತಿ, ಕತ್ತೆಗಳೆಲ್ಲ ಮತದಾರರಾಗಿದ್ದಾರೆ’ ಎಂದು ರಾಹುಲ್ ಬೊಬ್ಬೆ ಹಾಕುತ್ತಿದ್ದರು.
ಇಂಥ ಅಪಸವ್ಯ ತಪ್ಪಿಸುವುದಕ್ಕೋಸ್ಕರವೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವುದು. ಸುಪ್ರೀಂ ಕೋರ್ಟ್ ಕೂಡ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಿದೆ.
ಒಂದು ವಿಷ್ಯ ಗೊತ್ತಿರಲಿ, ಇಂತಹ ಶತಸುಳ್ಳನ್ನೂ ನಂಬಿ ತೀರ್ವನಕ್ಕೆ ಬರುವ ದೊಡ್ಡ ಸಮೂಹ ನಮ್ಮ ದೇಶದಲ್ಲಿದೆ. ಹೀಗಾಗಿ ಬಿಹಾರದ ಚುನಾವಣಾ ಫಲಿತಾಂಶ ಏನು ಬೇಕಾದರೂ ಆಗಬಹುದು. ಪ್ರಜ್ಞಾವಂತ ಶಾಸಕ ಎಸ್. ಸುರೇಶಕುಮಾರ್ ಒಂದು ಮಾತು ಹೇಳಿದ್ದಾರೆ. ರಾಹುಲ್ ಹೇಗೆ ಅಂದರೆ ಗಾಂಧಿ ಹೇಳಿದ ಮೂರು ಕೋತಿಗಳ ಕಥೆಗೆ ತದ್ವಿರುದ್ಧ. ಕೆಟ್ಟದ್ದನ್ನು ನೋಡುವುದಿಲ್ಲ, ಆಡುವುದಿಲ್ಲ, ಕೇಳುವುದಿಲ್ಲ ಎಂಬುದು ಗಾಂಧಿ ಸಂದೇಶವಾದರೆ ರಾಹುಲ್ ಸಂದೇಶ ಒಳ್ಳೆಯದನ್ನು ನೋಡುವುದಿಲ್ಲ, ಒಳ್ಳೆಯದನ್ನು ಕೇಳುವುದಿಲ್ಲ ಮತ್ತು ಒಳ್ಳೆಯದನ್ನು ಆಡುವುದಿಲ್ಲ ಎಂದಾಗಿದೆ ಎಂಬ ವ್ಯಾಖ್ಯಾನ ಮಾಡಿದ್ದಾರೆ. ಅಯ್ಯೋ ರಾಮ....
ನಾವು ಆನ್ಲೈನ್ ವೋಟಿಂಗ್ ಬರಬೇಕೆಂದು ಬಯಸುವ ಯುಗದಲ್ಲಿದ್ದರೆ ಇವರು ಮತ್ತೆ ಬ್ಯಾಲಟ್ ಪೇಪರ್ನ ಯುಗಕ್ಕೆ ಮರಳುತ್ತಾರಂತೆ. ಈ ದೇಶವನ್ನು ಆ ಈಶನೆ ಕಾಪಾಡಬೇಕು.