ಜೋಡಿಹಕ್ಕಿಗಳು ಬೇರೆಬೇರೆ ಹಾರುತ್ತಿರುವುದೇಕೆ?

3-6879372d47b9e
Published on
ಜಗತ್ತು ಕ್ಷಣಿಕ, ಸಂಪತ್ತು ನಶ್ವರ...

ಇಂಥ ಮಾತುಗಳಿಗೆ ನಿತ್ಯ ಬದುಕಿನಲ್ಲಿ ಪ್ರತ್ಯಕ್ಷ ಉದಾಹರಣೆಗಳನ್ನು ಕಾಣುತ್ತಲೇ ಇರುತ್ತೇವೆ. ಆದರೆ, ‘ಅವರಿಗಾಗಿದ್ದು ನನಗೆ ಆಗಬೇಕಿಲ್ಲ, ನನ್ನ ಬದುಕು ಎಲ್ಲರ ಹಾಗಲ್ಲ’ ಎಂಬ ಸಮಾಧಾನದಿಂದ ಮುಂದೆ ಸಾಗುತ್ತಿರುತ್ತೇವೆ.

ಆದರೂ, ಸಂಬಂಧಗಳೆನ್ನುವುದು ಬೆಣ್ಣೆಯಲ್ಲಿ ಸಿಲುಕಿದ ಕೂದಲಿನ ಹಾಗೆ, ಕೈ ಜಿಡ್ಡು ಮಾಡಿಕೊಳ್ಳದೆ ಕೂದಲು ತೆಗೆಯುವುದು ಸಾಧ್ಯವಿಲ್ಲ. ಸಂಬಂಧಗಳೆನ್ನುವುದು ಮುಳ್ಳಿನ ಮೇಲೆ ಹರವಿದ ಬಟ್ಟೆಯ ಹಾಗೆ. ನಾಜೂಕಾಗಿ ತೆಗೆಯದಿದ್ದಲ್ಲಿ ಬಟ್ಟೆ (ಬದುಕು) ಹರಿದುಹೋಗುತ್ತದೆ.

ಜಗತ್ತು ಆಧುನಿಕವಾದಷ್ಟೂ ಮನುಷ್ಯ ಸಂಬಂಧಗಳು ವ್ಯಾವಹಾರಿಕವಾಗುತ್ತಿವೆ. ಮೌಲ್ಯ ಕಳೆದುಕೊಳ್ಳುತ್ತಿವೆ. ಕಮಲಪತ್ರದ ಮೇಲಿನ ಮಂಜಿನ ಹನಿಯ ಹಾಗೆ, ‘ಇರಬೇಕು, ಇರದಂತಿರಬೇಕು, ಏನನ್ನೂ ಅಂಟಿಸಿಕೊಳ್ಳದಂತಿರಬೇಕು’ ಎಂಬಂತೆ ಸಂಬಂಧಗಳೂ ಕಿರಿದಾಗುತ್ತಿವೆ. ಬದುಕೆನ್ನುವುದು ಮೆಟ್ರೋ ಪಯಣದಂತೆ ಆಗಿಬಿಟ್ಟಿದೆ. ಯಾವುದೋ ನಿಲ್ದಾಣದಲ್ಲಿ ಹತ್ತುತ್ತೇವೆ. ಇನ್ನೆಲ್ಲೋ ಇಳಿದುಹೋಗುತ್ತೇವೆ. ನಡುವೆ ಒಂದಷ್ಟು, ನಿತ್ಯ ಕಾಣುವ ಪರಿಚಿತ ಮುಖಗಳು, ಮುಗುಳ್ನಗುವಿನ ಸಂಬಂಧಗಳು, ಯಾವ ನಿಲ್ದಾಣದಲ್ಲಿ ಶುರುವಾಗುತ್ತವೋ? ಎಲ್ಲಿ ಅಂತ್ಯ ಕಾಣುತ್ತವೋ? ಅಕ್ಕಪಕ್ಕ ಕುಳಿತು ಸಾಗಿದರೂ ನಿಲ್ದಾಣಗಳು ಒಂದೇ ಅಲ್ಲ, ಬದುಕಿನ ಉದ್ದೇಶಗಳು ಒಂದೇ ಅಲ್ಲ, ನಿಲುಗಡೆ ಬಂದಾಗ ಬೇರೆಯಾಗುವುದಕ್ಕೆ, ಇಳಿದುಹೋಗುವುದಕ್ಕೆಂದೇ ಸೃಷ್ಟಿಯಾದ ಅರೆಕಾಲಿಕ ಸಂಬಂಧಗಳು ಅವು.

ಜೀವನ ಸಂಬಂಧಗಳೂ ಹೀಗೆಯೇ ಆಗಿಬಿಟ್ಟಿದೆ. ಒಂದೇ ಮನೆಯಲ್ಲಿದ್ದರೂ ಮನಸ್ಸುಗಳು ಒಂದಾಗಿರುವುದಿಲ್ಲ. ಒಟ್ಟಿಗೆ ಜೀವನ ಸಾಗಿಸುತ್ತಿದ್ದರೂ ಉದ್ದೇಶ ಒಂದೇ ಆಗಿರುವುದಿಲ್ಲ. ಸಂಬಂಧಗಳೇ ಅನುಕೂಲಸಿಂಧು ಆಗಿಬಿಟ್ಟಾಗ ಬದುಕಿಗೆಲ್ಲಿ ಬೆಲೆ?

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ | ಮಳೆ ಸುರಿಸಿ ಹಗುರಾದ ಮುಗಿಲಿನಂತೆ || ಎಂದು ಕವಿ ಎಚ್ಚೆಸ್ವಿ ಬದುಕಿಗೆ ಅನ್ವಯಿಸಿ ಹೇಳಿದರು. ಆದರೆ, ಸಮಾಜ ‘ಜತೆಯಲ್ಲಿದ್ದರೂ ನಮ್ಮವರಲ್ಲ, ಸಹವಾಸಿಗಳೇ ಹೊರತು, ಸತಿಪತಿಗಳಲ್ಲ’ ಎಂಬಂತೆ ಬದುಕನ್ನು ಮಾರ್ಪಡಿಸಿಕೊಂಡು, ಲಿವ್ ಇನ್ ಎಂಬ ಆಧುನಿಕ ಪರಿಭಾಷೆಯಲ್ಲಿ ಬದುಕನ್ನು ಒಂದು ಹೃಸ್ವ, ಮತ್ತೊಂದು ದೀರ್ಘಾಕ್ಷರಕ್ಕೆ ಸೀಮಿತಗೊಳಿಸಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿದೆ.

ಆಡುವ ಮಕ್ಕಳು ಮನೆಯ ಕಟ್ಟಿದರು | ಆಟ ಸಾಕೆಂದು ಮುರಿದು ಓಡಿದರು|| ಎಂದು ಬದುಕಿನ ಕ್ಷಣಿಕತೆಯನ್ನು ಪುರಂದರ ದಾಸರು ವರ್ಣಿಸುತ್ತಾರೆ. ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ | ಆ ಕ್ಷಣದಲ್ಲಿ ಹಾರಿ ಹೋದಂತೆ|| ವಸ್ತಿಗಾರನು ವಸ್ತಿ ಬಂದಂತೆ | ಹೊತ್ತಾರೆ ಎದ್ದು ಹೊರಟುಹೋದಂತೆ|| ಅಂದರೆ, ನಾವೆಲ್ಲರೂ ಈ ಭೂಮಿಗೆ ಇದ್ದು ಹೋಗಲು ಬಂದವರೇ ಹೊರತು, ಶಾಶ್ವತವಾಗಿ ಬೇರೂರಲು ಬಂದವರಲ್ಲ. ಹಾಗಾಗಿ ಕ್ಷಣದ ಬದುಕನ್ನು ಸಾರ್ಥಕವಾಗಿ ಬದುಕಬೇಕು ಎಂಬರ್ಥದಲ್ಲಿ ದಾಸರು ಕಿವಿಮಾತು ಹೇಳಿದ್ದರು. ಇಂಥ ಪಾರಮಾರ್ಥದ ಮಾತುಗಳು ಇಂದಿನ ಲೌಕಿಕ ಬದುಕಿನ ವ್ಯವಹಾರಗಳಿಗೆ ಕನ್ನಡಿ ಹಿಡಿಯುವಂತಿರುವುದು ಸತ್ಯಸ್ಯಸತ್ಯ.

ಭಾರತೀಯ ಕಲ್ಪನೆಯಲ್ಲಿ ದಾಂಪತ್ಯವೆಂದರೆ ಜನ್ಮಜನ್ಮಗಳ ಅನುಬಂಧ. ಸಪ್ತಪದಿ ತುಳಿದು, ಪರಸ್ಪರರ ಕೈಹಿಡಿದು ಸಾಗುವುದೆಂದರೆ, ಏಳು ಜನ್ಮಗಳ ಸಂಬಂಧ. ಎರಡು ದೇಹ, ಒಂದು ಜೀವ ಎಂಬಂಥ ಆತ್ಮಾನುಬಂಧ... ಇತ್ಯಾದಿ. ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ..’ ಎಂದು ಬೇಂದ್ರೆ ಸಂಬಂಧಗಳನ್ನು ವಿವರಿಸಿದ್ದು ಇದೇ ಅರ್ಥದಲ್ಲಿ. ‘ಇಷ್ಟವಾದವರು ಜತೆಯಲ್ಲಿರುವಾಗ ಬದುಕು ಬುಲೆಟ್ ರೈಲಿನಂತೆ ಸಾಗುತ್ತದೆ. ಜತೆಯಲ್ಲಿರುವವರು ಇಷ್ಟವಿಲ್ಲದೇ ಇರುವಾಗ ಒಂದೊಂದು ದಿನವೂ ಯುಗದಂತೆ ಭಾಸವಾಗುತ್ತದೆ’. ಹಾಗಾಗಿಯೇ ಒಟ್ಟಿಗಿದ್ದು ಬದುಕು ಭಾರವಾಗಿಸಿಕೊಳ್ಳುವುದಕ್ಕಿಂತ ತೊರೆದು ಹಗುರಾಗುವಂಥ ಸಂಬಂಧಗಳ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಬದುಕಿನಲ್ಲಿ ವಿಚ್ಛೇದನವೆನ್ನುವುದು ಊಟ, ನಿದ್ರೆ, ಮೈಥುನದಷ್ಟೇ ಸಹಜಸಂಗತಿಯಾಗುತ್ತಿದೆ.

ಸಮಾಜದಲ್ಲಿ ಮದುವೆ ಎನ್ನುವುದೊಂದು ಉದ್ಯಮವಾಗಿ ಬೆಳೆದುಬಿಟ್ಟಿದೆ. ಒಂದು ಮದುವೆ ನಡೆದರೆ, ಅದು ಒಂದು ಗಂಡುಹೆಣ್ಣಿನ ಜೀವನ ಬೆಸೆಯುವುದಷ್ಟೇ ಅಲ್ಲ; ಅನೇಕ ಕುಟುಂಬಗಳಿಗೆ ಜೀವನೋಪಾಯವೂ ಆಗಿರುತ್ತದೆ! ಅದೇ ಕಾರಣಕ್ಕೆ ಬೆಂಗಳೂರಿನಂಥ ನಗರಗಳಲ್ಲಿ ಯಾವ ಕಲ್ಯಾಣ ಮಂಟಪಗಳೂ ಖಾಲಿ ಇರುವುದಿಲ್ಲ! ಸ್ವಲ್ಪ ಅಚ್ಚುಕಟ್ಟಾಗಿರುವ, ಅನುಕೂಲತೆ ಹೊಂದಿರುವ ಯಾವ ಕಲ್ಯಾಣ ಮಂಟಪಗಳೂ ನಷ್ಟದಲ್ಲಿ ನಡೆಯುವುದಿಲ್ಲ. ಅದೇ ರೀತಿ ವಿಚ್ಛೇದನವೂ ಒಂದು ವ್ಯವಹಾರವೇ. ಹಿಂದೆಲ್ಲ ಒಮ್ಮೆ ಮದುವೆ ಆಯಿತೆಂದರೆ, ‘ಋಣಾನುಬಂಧ ರೂಪೇಣ ಪತಿಪತ್ನಿಸುತಾಲಯ’ ಎಂದುಕೊಂಡು ‘ನನ್ನ ಋಣ, ನನ್ನ ಹಣೆಬರಹ, ಪಾಲಿಗೆ ಬಂದಿದ್ದೇ ಪಂಚಾಮೃತ’ ಎಂದು ಹೊಂದಾಣಿಕೆಯಲ್ಲಿ ಬದುಕುವ ಸಂಸ್ಕಾರವಿರುತ್ತಿತ್ತು. ಆದರೆ, ಈಗ ಹಾಗಿಲ್ಲ. ಹೊಂದಾಣಿಕೆ ಆಗದಿದ್ದಾಗ; ಒಟ್ಟಿಗೆ ಬದುಕುವುದು ಅಸಹನೀಯವಾದಾಗ ಬಿಟ್ಟು ಹೋಗುವುದು ಬದುಕಿನ ಸಹಜ ಪ್ರಕ್ರಿಯೆ ಆಗಿಬಿಟ್ಟಿದೆ. ‘ತೊರೆದು ಜೀವಿಸಬಹುದೇ?’ ಎಂಬ ಪ್ರಶ್ನೆಗೆ ತೊರೆದು ಜೀವಿಸುವುದೇ ಒಳ್ಳೆಯದು ಎಂಬ ಅನುಕೂಲಸಿಂಧು ಉತ್ತರಕ್ಕೆ ಸಮಾಜ ರೂಢಿಸಿಕೊಳ್ಳುತ್ತಿದೆ.

ಒಟ್ಟಿಗಿದ್ದು ಬದುಕು ನರಕವಾಗಿಸಿಕೊಳ್ಳುವುದಕ್ಕಿಂತ ದೂರವಾಗಿ ನೆಮ್ಮದಿ ಕಂಡುಕೊಳ್ಳುವುದು ತಪ್ಪೇನಲ್ಲ ಎಂಬ ಸಮರ್ಥನೆಯಲ್ಲಿ ಆಧುನಿಕ ಸಮಾಜ ಪಕ್ವಗೊಳ್ಳುತ್ತಿದೆ. ನೆಪ ಮಾತ್ರಕ್ಕೆ ದಾಂಪತ್ಯದ ಕಟ್ಟಿನೊಳಗಿದ್ದರೂ, ವಿವಾಹಬಾಹಿರ ಸಂಬಂಧಗಳ ಮೂಲಕ ಒಬ್ಬರನ್ನೊಬ್ಬರು ವಂಚಿಸುವ ಮಿಥ್ಯದ ಬದುಕಿಗಿಂತ, ಜನ್ಮಾಂತರದ ನಂಟನ್ನು ಕತ್ತಿ, ಕೊಡಲಿಯಿಂದ ಕಡಿದುಕೊಳ್ಳುತ್ತ, ಜೀವ ಬಲಿ ಪಡೆಯುವ ಕೊಲೆಗಾರರಾಗುವುದಕ್ಕಿಂತ ದೂರವಿದ್ದು ಪರಸ್ಪರರ ಭಾವನೆಯನ್ನು ಗೌರವಿಸುತ್ತ ತಮ್ಮ ಬದುಕಿನ ಖುಷಿಯನ್ನು ಅನ್ಯದಿಕ್ಕಿನಲ್ಲಿ ಹುಡುಕಿಕೊಳ್ಳುವ ಜೀವನವಿಧಾನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುತ್ತಲೂ ಇದೆ. ಅದೇ ಕಾರಣಕ್ಕೆ ಇಂದು ವಿವಾಹದಷ್ಟೇ ವಿಚ್ಛೇದನವೂ ವ್ಯಾಪಕವಾಗಿರುವುದು. ಬೆಂಗಳೂರಿನಂಥ ಮಹಾನಗರಗಳಲ್ಲಿ ಕೌಟುಂಬಿಕ ನ್ಯಾಯಾಲಯಗಳೂ ಒಂದು ದಿನವೂ ಖಾಲಿ ಇರುವುದಿಲ್ಲ! ಆಪ್ತ ಸಮಾಲೋಚಕರಿಗೆ, ವಿಚ್ಛೇದನ ವಕೀಲರಿಗೆ ಬಿಡುವೆನ್ನುವುದೇ ಇರುವುದಿಲ್ಲ.

ಮದುವೆ ಸಾರ್ವತ್ರಿಕ ಸಂಭ್ರಮವಾದರೆ, ವಿಚ್ಛೇದನ ವೈಯಕ್ತಿಕ. ಪರಸ್ಪರ ದೂರವಾಗುವುದಕ್ಕೆ ಕಾರಣಗಳು ಅನೇಕ. ಪ್ರತಿಯೊಬ್ಬರಿಗೂ ಅದು ಪ್ರತ್ಯೇಕ. ಜನಸಾಮಾನ್ಯರಲ್ಲಿ ನೂರು ಮದುವೆಗಳಲ್ಲಿ 30ರಿಂದ 40 ಪ್ರತಿಶತ ವಿಚ್ಛೇದನ ಹೊಸಿಲು ತುಳಿಯುತ್ತಿದ್ದರೆ, ಸೆಲೆಬ್ರಿಟಿ ದಾಂಪತ್ಯಗಳಲ್ಲಿ ವಿಚ್ಛೇದನದ ಪ್ರಮಾಣ ದುಪ್ಪಟ್ಟು. ಜಗತ್ತು ಗುರುತಿಸುವಂತೆ ಸಾಧನೆ ಮಾಡಿದ ಇಬ್ಬರು ಸೆಲೆಬ್ರಿಟಿಗಳು ಪರಸ್ಪರ ಕೈಹಿಡಿದು ಜೋಡಿಹಕ್ಕಿಗಳಂತೆ ವಿವಾಹದ ನಂಟು ಜೋಡಿಸಿಕೊಂಡಾಗ ಎಷ್ಟು ಅನುರೂಪ ಜೋಡಿ ಎಂದು ಖುಷಿಪಟ್ಟಿರುತ್ತೇವೆ. ಆದರೆ, ಕೆಲವೇ ದಿನಗಳಲ್ಲಿ ‘ನನ್ನ ಬದುಕು, ನನ್ನ ಆಯ್ಕೆ’ ಎಂದು ಆ ಜೋಡಿಗಳು ದೂರವಾದಾಗ ಛೇ! ಹೀಗೇಕಾಯಿತು ಎಂದು ಬೇಸರಿಸುತ್ತೇವೆ.

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮೊನ್ನೆ ಮೊನ್ನೆ ಪಾರುಪಲ್ಲಿ ಕಶ್ಯಪ್ ಜತೆಗಿನ ದಾಂಪತ್ಯ ಕಡಿದುಕೊಳ್ಳುವ ವಿಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಕಟಿಸಿದಾಗಲೂ ಅದೇ ರೀತಿ ಆಶ್ಚರ್ಯವೆನಿಸಿತು. ಅವರಿಬ್ಬರದು ಸುಮಾರು ಇಪ್ಪತ್ತು ವರ್ಷಗಳ ಪರಿಚಯ, ಹದಿನೈದು ವರ್ಷಗಳ ಪ್ರೀತಿ. ಆದರೂ, ಏಳು ವರ್ಷಕ್ಕಿಂತ ಹೆಚ್ಚಿಗೆ ಒಂದು ದಿನವೂ ಒಟ್ಟಿಗಿರುವುದು ಅವರಿಂದ ಸಾಧ್ಯವಾಗಲಿಲ್ಲ. ಪರಸ್ಪರರ ನೆಮ್ಮದಿಗಾಗಿ, ಬೆಳವಣಿಗೆಗಾಗಿ, ಆರೋಗ್ಯಕ್ಕಾಗಿ ದೂರವಾಗುತ್ತಿದ್ದೇವೆ ಎಂಬ ನಿಗೂಢ ಸಂದೇಶದ ಮೂಲಕ ಸೈನಾ ವಿಚ್ಛೇದನದ ವಿಷಯ ಸಾರಿದರು. ಸೈನಾರ ಈ ಪೋಸ್ಟ್​ಗೆ ಕೆಲವೇ ಗಂಟೆ ಮೊದಲು ಕಶ್ಯಪ್ ನೆದರ್ಲೆಂಡ್​ನಲ್ಲಿ ಸ್ನೇಹಿತರ ಜತೆ ಸಂಭ್ರಮಿಸುತ್ತಿರುವ ಫೋಟೋ ಪೋಸ್ಟ್ ಮಾಡಿ ‘ಜೀವದ ಒಡನಾಡಿಗಳು’ ಎಂಬರ್ಥದ ಶೀರ್ಷಿಕೆ ನೀಡಿದ್ದರು. ಆ ಚಿತ್ರದಲ್ಲಿ ಸೈನಾ ಇರಲಿಲ್ಲ!

ಹೀಗೇಕಾಗುತ್ತಿದೆ? ಕ್ರೀಡಾಜಗತ್ತಿನಲ್ಲಿ, ಸೆಲೆಬ್ರಿಟಿ ವಲಯದಲ್ಲಿ ಸೈನಾ ವಿಚ್ಛೇದನ ಮೊದಲೂ ಅಲ್ಲ, ಕೊನೆಯದೂ ಅಲ್ಲ. ಭಾರತದಲ್ಲಿ ಕೋಟಿ ಹೃದಯಗಳನ್ನು ಛಿದ್ರಗೊಳಿಸಿ ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್​ರನ್ನು ವರಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಕೆಲವೇ ವರ್ಷಗಳ ದಾಂಪತ್ಯ ಸರ್ಕಸ್ ಬಳಿಕ ವಿಚ್ಛೇದನ ಬಹಿರಂಗ ಪಡಿಸಿದ್ದರು. ಬ್ಯಾಡ್ಮಿಂಟನ್​ನ ಮತ್ತೋರ್ವ ಗ್ಲಾಮರ್ ಗೊಂಬೆ ಜ್ವಾಲಾ ಗುಟ್ಟ ಮತ್ತು ಷಟ್ಲರ್ ಚೇತನ್ ಆನಂದ್ ವಿವಾಹವೂ ಆರು ವರ್ಷವೂ ಬಾಳಿಕೆ ಬರಲಿಲ್ಲ. ಬೆಲಾರಸ್ ಚೆಲುವೆ ನಟಾಶಾ ಸ್ಟಾ್ಯಂಕೊವಿಕ್ ಜತೆ ಎರಡೆರಡು ಬಾರಿ ಮದುವೆ ಮಾಡಿಕೊಂಡರೂ, ಹಾರ್ದಿಕ್ ಪಾಂಡ್ಯ ಸಂಸಾರ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಬಾಳಲಿಲ್ಲ.

ತನಗಿಂತ ಹತ್ತು ವರ್ಷ ಹಿರಿಯಳಾದ, ಮೊದಲ ವಿವಾಹದಿಂದ 2 ಮಕ್ಕಳಿದ್ದ ಆಸ್ಟ್ರೇಲಿಯಾದ ಕಿಕ್​ಬಾಕ್ಸರ್ ಆಯೆಷಾ ಮುಖರ್ಜಿ ಜತೆಗಿನ ದಾಂಪತ್ಯದ ಸಲುವಾಗಿ ಶಿಖರ್ ಧವನ್ ವೃತ್ತಿಜೀವನವೇ ಮೊಟಕಾಯಿತು. ಕೊನೆಗೆ ಅವರ ದಾಂಪತ್ಯವೂ ದೀರ್ಘಾಯುಷ್ಯ ಹೊಂದಿರಲಿಲ್ಲ. ಆಯೆಷಾ ಜತೆಗಿನ ಕಾನೂನು ಜಂಜಡದಿಂದಾಗಿ ಮಗನ ಮುಖ ನೋಡುವುದಕ್ಕೂ ಧವನ್ ಕಷ್ಟ ಪಡುತ್ತಿದ್ದಾರೆ. ಬುಮ್ರಾ ಜತೆ ಭಾರತದ ವೇಗದ ಬೌಲಿಂಗ್ ನೊಗ ಹೊರಬೇಕಿದ್ದ ವೇಗಿ ಮೊಹಮ್ಮದ್ ಶಮಿ ಕೂಡ ಪರಿತ್ಯಕ್ತ ಪತ್ನಿ ಹಸೀನ್ ಜಹಾನ್ ಜತೆಗಿನ ಕೋರ್ಟ್ ಕರಕರೆ, ಜೀವನಾಂಶದ ಕಿರಿಕಿರಿಯ ನಡುವೆ ನೆಮ್ಮದಿ ಕೆಡಿಸಿಕೊಂಡು ಒದ್ದಾಟ ನಡೆಸಿದ್ದಾರೆ. ಕರೊನಾ ಕಾಲಘಟ್ಟದಲ್ಲಿ ಪರಿಚಯವಾದ ರೀಲ್ಸ್ ರಾಣಿ ಧನಶ್ರೀ ವರ್ಮ ಜತೆ ಅವಸರದ ದಾಂಪತ್ಯ ಪ್ರವೇಶಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ನೆಟ್ಟಗೆ ಮೂರು ವರ್ಷವೂ ಒಟ್ಟಿಗಿರಲಾರದೆ ದೊಡ್ಡ ಮೊತ್ತದ ಜೀವನಾಂಶ ಕೊಟ್ಟು ಬಿಡುಗಡೆ ಪಡೆದರು.

ಇವೆಲ್ಲ ಕೆಲವು ಉದಾಹರಣೆಗಳು ಮಾತ್ರ, ದಿನೇಶ್ ಕಾರ್ತಿಕ್​ರಿಂದ ಮೊಹ್ಮದ್ ಅಜರುದ್ದೀನ್, ಮಹೇಶ್ ಭೂಪತಿ, ಲಿಯಾಂಡರ್ ಪೇಸ್, ಮೇರಿಕೊಮ್ರೆಗೆ ಭಾರತದ ಕ್ರೀಡಾ ಜಗತ್ತಿನಲ್ಲಿ ವಿಚ್ಛೇದನಗಳಿಗೆ ಲೆಕ್ಕವೇ ಇಲ್ಲ. ಇನ್ನು ಜಾಗತಿಕವಾಗಿ ಸೆಲೆಬ್ರಿಟಿ ವಿವಾಹಗಳಿಗಿಂತ ವಿಚ್ಛೇದನಗಳ ಸಂಖ್ಯೆಯೇ ಹೆಚ್ಚಿದೆ. ಹೀಗೇಕಾಗುತ್ತಿದೆ ಎಂಬ ಪ್ರಶ್ನೆಗೆ ಏಕರೂಪದ ಸಿದ್ಧ ಉತ್ತರವಿಲ್ಲ. ಏಕೆಂದರೆ, ಪ್ರತಿಯೊಬ್ಬರ ಬದುಕಿನ ಆಯ್ಕೆಗಳು, ಆಕರ್ಷಣೆಗಳು ಭಿನ್ನ. ಕಾರಣಗಳೂ ಅಷ್ಟೇ..

ಸೆಲೆಬ್ರಿಟಿಗಳಲ್ಲಿ ಆಕರ್ಷಣೆಗಳೂ ಬೇಗ, ಭ್ರಮನಿರಸನಗಳೂ ಅಷ್ಟೇ ವೇಗ. ಅದಕ್ಕೆ ಅವರ ವೃತ್ತಿಜೀವನ, ಜೀವನಶೈಲಿ, ಮನೋಧರ್ಮ, ಹಣ ಎಲ್ಲವೂ ಕಾರಣ. ಸೆಲೆಬ್ರಿಟಿಗಳಲ್ಲಿ ಆತನಿರಲಿ, ಆಕೆಯಿರಲಿ ಅವಲಂಬನೆ ಕಡಿಮೆ, ಸ್ವತಂತ್ರ ಭಾವನೆ ಜಾಸ್ತಿ. ನನ್ನ ಬದುಕು, ನನ್ನ ಶ್ರಮ, ನನ್ನ ಸಾಧನೆ, ಯಾರಿಗೇನು ಕಡಿಮೆ ಎಂಬ ಭಾವನೆ ಅವರಲ್ಲಿ ಸದಾ ಜಾಗೃತವಾಗಿರುತ್ತದೆ. ಜತೆಗೆ ಬದುಕಿನ ಆಕರ್ಷಣೆಗಳು, ನಿರಂತರ ಓಡಾಟದಲ್ಲಿ ಬೆಸೆದುಕೊಳ್ಳುವ ಹೊಸ ಒಡನಾಟಗಳು, ಸನ್ನಿವೇಶಗಳು ಸಂಬಂಧಗಳನ್ನು ಶಿಥಿಲಗೊಳಿಸುತ್ತ ಸಾಗುತ್ತವೆ. ಅದರಲ್ಲೂ ಕ್ರೀಡಾಪಟುಗಳು ವರ್ಷದ ಮುಕ್ಕಾಲು ಭಾಗ ಪ್ರವಾಸಗಳಲ್ಲಿರುತ್ತಾರೆ. ವಿವಾಹವಾದ ಕೆಲವು ವರ್ಷ ಜೋಡಿಹಕ್ಕಿಗಳಂತೆ ದೇಶ- ಜಗತ್ತು ಸುತ್ತಾಡುತ್ತ ಆನಂದಿಸಿದರೂ, ಮಕ್ಕಳಾದಂತೆ, ಕುಟುಂಬ ವಿಸ್ತಾರವಾದಂತೆ ಅಂತರವೂ ಬೆಳೆಯುತ್ತದೆ. ಇದರ ನಡುವೆ ಹೊಸ ಸಂಬಂಧಗಳು ಬೆಳೆಯುತ್ತವೆ. ಇನ್ನು ಅನೇಕ ಸೆಲೆಬ್ರಿಟಿಗಳಲ್ಲಿ ವಿವಾಹವೆನ್ನುವುದು ದುಡುಕಿನ ನಿರ್ಧಾರವೂ ಆಗಿರುತ್ತದೆ.

ಆಕರ್ಷಣೆಗಳಿಗೂ ಜನ್ಮಾಂತರದ ಅನುಬಂಧಕ್ಕೂ ವ್ಯತ್ಯಾಸ ತಿಳಿಯುವ ಮೊದಲೇ ಅನೇಕರು ನಂಟಿನ ಗಂಟು ಕಟ್ಟಿಬಿಟ್ಟಿರುತ್ತಾರೆ. ಸಿನಿಮಾ ನಟನಿರಲಿ, ಕ್ರೀಡಾಪಟುವಿರಲಿ ತನ್ನ ಆದ್ಯತೆ ಖಾಸಗಿ ಬದುಕೋ, ವೃತ್ತಿಬದುಕೋ ಎಂದು ಅರ್ಥವಾಗುವ ಮೊದಲೇ ಸಂಬಂಧದಲ್ಲಿ ಮುಳುಗಿ, ನಂತರ ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ವೃತ್ತಿಜೀವನದ ಉತ್ತುಂಗದಲ್ಲಿರುವಾಗ ಅಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂದ-ಚಂದ, ಆಕರ್ಷಣೆ, ಅಂತಸ್ತಿನಿಂದ ಬೆಳೆಯುವ ಸಂಬಂಧಗಳು, ಒಟ್ಟಿಗಿರುವಾಗ ಪರಸ್ಪರರ ಭಾವನೆ ಅರಿಯಲಾಗದೆ, ಮನಸ್ಸನ್ನು ಅರ್ಥ ಮಾಡಿಕೊಳ್ಳಲಾಗದೆ, ನಿತ್ಯ ಕುರುಕ್ಷೇತ್ರದ ಜಂಜಡದಿಂದ ಘಾಸಿಗೊಳ್ಳುತ್ತಾರೆ. ಇನ್ನು ಕೆಲವರ ಪಾಲಿಗೆ ದೂರದ ಬೆಟ್ಟ ನುಣ್ಣಗೆ. ಭ್ರಮೆಯ ಪೊರೆ ಕಳಚಿ, ಪರಸ್ಪರರ ಹುಳುಕು ಪರಿಚಯವಾದಾಗ ಅಸಹನೀಯ ಸ್ಥಿತಿ ತಲುಪುತ್ತಾರೆ.

ಕ್ರೀಡಾಪಟುಗಳು, ಸಿನಿಮಾ ತಾರೆಗಳಿಗೆ ಅಭಿಮಾನದಿಂದ ಮುಗಿಬೀಳುವವರು, ಸಂಬಂಧಕ್ಕಾಗಿ ಹಾತೊರೆಯುವವರು ಹೇರಳ. ಅಂಥವರ ಮೋಡಿಗೆ ಸಿಲುಕಿ, ಬಿಡಿಸಿಕೊಳ್ಳಲಾಗದೆ, ಬ್ಲಾ್ಯಕ್​ವೆುೕಲ್​ಗೊಳಗಾಗಿ ಬಲವಂತದ ವಿವಾಹವಾಗುವವರ ಸಂಖ್ಯೆಯೂ ಕಡಿಮೆ ಇಲ್ಲ. ಅಂಥವರು ಕಷ್ಟ ಪಟ್ಟು ಗಳಿಸಿದ ಹಣ, ಹೆಸರು ಎಲ್ಲವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿರುತ್ತಾರೆ. ಎಷ್ಟೋ ಬಾರಿ ಒಟ್ಟಿಗಿರಲೆಂದೇ ಹುಟ್ಟಿದವರು ಎಂಬ ಭಾವನೆಯಿಂದ ಇಷ್ಟಪಟ್ಟು ಮದುವೆ ಆದ ಮೇಲೂ ವಿಚ್ಛೇದನದ ಬಾಗಿಲು ದಾಟಿದ ದಿನೇಶ್ ಕಾರ್ತಿಕ್​ರಂಥ ಉದಾಹರಣೆಗಳಿವೆ. ಇಂಥ ಕಾರಣಕ್ಕೆ ವಿದೇಶಗಳಲ್ಲಿ ಸೆಲೆಬ್ರಿಟಿಗಳು ಪ್ರೀತಿಸಿಯೇ ಮದುವೆ ಆದರೂ, ವಿವಾಹಪೂರ್ವ ಒಪ್ಪಂದ ಮಾಡಿಕೊಳ್ಳುವ ಮೂಲಕ, ವಿಚ್ಛೇದನದ ಸಂದರ್ಭ ಎದುರಾದಲ್ಲಿ ಎಷ್ಟು ಹಣ ಬಿಟ್ಟುಕೊಡಬೇಕೆಂಬ ಷರತ್ತಿನ ಸಂಬಂಧಕ್ಕೆ ಒಳಪಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ವಿಚ್ಛೇದಿತ ಪತ್ನಿಗೆ ಹೆಚ್ಚಿನ ಜೀವನಾಂಶ ಕೊಡಬೇಕಾದೀತೆಂಬ ಕಾರಣಕ್ಕೆ ತಮ್ಮೆಲ್ಲ ಆಸ್ತಿಯನ್ನು ತಾಯಿಯ ಹೆಸರಲ್ಲಿ ನೋಂದಣಿ ಮಾಡಿಸಿದ್ದರು ಎಂಬ ವದಂತಿಗಳಿದ್ದವು. ಇಂಥ ಉದಾಹರಣೆಗಳು ಸಾವಿರ.

ಸೂರ್ಯ ಮುಳುಗುವುದನ್ನು ನೋಡಬಾರದೆಂಬ ಮಾತಿದೆ. ಸೂರ್ಯ ಮಾತ್ರವಲ್ಲ, ಯಾರೊಬ್ಬರ ಜೀವನ ಅಥವಾ ದಾಂಪತ್ಯ ಮುಳುಗುವುದನ್ನು ನೋಡಬಾರದು. ಒಟ್ಟಿಗೆ ಸಾಗಬೇಕೆಂದು ಬೆಸೆದ ಸಂಬಂಧಗಳು ವಿರುದ್ಧ ದಿಕ್ಕಿನಲ್ಲಿ ಸಾಗುವುದು ಖುಷಿ ಪಡುವ ವಿಚಾರವಂತೂ ಅಲ್ಲ. ಆದರೂ, ಒಟ್ಟಿಗಿದ್ದು ಬದುಕು ನರಕವಾಗಿಸಿಕೊಳ್ಳುವುದಕ್ಕಿಂತ, ಒಬ್ಬರಿಗೊಬ್ಬರು ಆತ್ಮವಂಚನೆ ಮಾಡಿಕೊಂಡು ಬದುಕುವುದಕ್ಕಿಂತ, ಹೊಡೆದಾಡಿಕೊಂಡು ಕೋರ್ಟ್ ಮೆಟ್ಟಿಲೇರುವುದಕ್ಕಿಂತ, ಜೀವ ತೆಗೆದು ಜೈಲು ಸೇರುವುದಕ್ಕಿಂತ, ಸೌಹಾರ್ದಯುತವಾಗಿ ಸಂಬಂಧ ಕಡಿದುಕೊಂಡು, ಪರಸ್ಪರ ಗೌರವ ಉಳಿಸಿಕೊಂಡು, ಘನತೆಯಿಂದ ಬಾಳುವುದು ಮೇಲು.

ಅಷ್ಟಕ್ಕೂ ಅನ್ನದ ಋಣ, ನೀರಿನ ಋಣ, ದಾಂಪತ್ಯದ ಋಣ ಇರುವಷ್ಟೇ ಗಟ್ಟಿ. ಋಣ ಇಲ್ಲದಿದ್ದರೆ ತಿಪ್ಪರಲಾಗ ಹಾಕಿದರೂ ಬಯಸಿದ್ದನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಋಣ ತೀರಿದ ಮೇಲೆ ಒಂದು ಕ್ಷಣವೂ ಉಳಿಸಿಕೊಳ್ಳುವುದೂ ಸಾಧ್ಯವಾಗುವುದಿಲ್ಲ.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net