

ಹಣವಿಲ್ಲದೆ ಚುನಾವಣೆಗಳಲ್ಲಿ ಗೆದ್ದು ಬರಲಾಗದು. ಪುಂಡಸೇನಾ ಬಲವಿಲ್ಲದೆ, ಬೆದರಿಸದೆ, ಅಧಿಕಾರ, ಮಂತ್ರಿ ಪದವಿ ಗಳಿಸಲಾರರು. ಪತ್ರಿಕಾ, ಟಿ.ವಿ.ಗಳ ಅಬ್ಬರ, ಅಪಪ್ರಚಾರವಿಲ್ಲದೆ ಎದುರಾಳಿಗಳನ್ನು ಇವರು ಮಣಿಸಲಾರರು. ಧರ್ಮ? ಊಹುಂ! ಸತ್ಯ? ಊಹುಂ! ವಚನನಿಷ್ಠೆ? -ಅಯ್ಯೋ ಪಾಪ! ಇವರ ಒಳಗೇ ಬೇರೆ, ಹೊರಗೇ ಬೇರೆ. ಇವರನ್ನು ಹೀಗೆಂದು, ಯಾವುದೇ ಒಂದು ಪಕ್ಷದಲ್ಲಿ ಸದಾ ನೀವು ಗುರುತಿಸಲಾರಿರಿ! ದಿನಾ ಒಂದು ಬಣ್ಣ, ಗಳಿಗೆಗೊಂದು ಮಾತು, ಹಗಲು-ರಾತ್ರಿಗಳಲ್ಲಿ ಕಾಣುವ ಸ್ವರೂಪಗಳೇ ಬೇರೆ! ಬಿಳೀ ಟೋಪಿ, ಕೆಂಪು, ಕಪು್ಪ ಬುರುಡೆ ಅಥವಾ ಬೊಕ್ಕುತಲೆ-ಏನೇ ಇರಲಿ ಇವರು ಬದಲಾಗುವುದಿಲ್ಲ! ಬ್ರಿಟಿಷರು, ಮೊಗಲರು ಬರುವ ಪೂರ್ವದಲ್ಲಿ ಪುಂಡರಸರು ‘ಛಪ್ಪನ್ನೈವತ್ತಾರು’ ಬಿಡಿ ಬಿಡಿ ಭಾರತ ಭಾಗಗಳಲ್ಲಿ ಗದ್ದುಗೆ ಹಿಡಿದು ಆಳುತ್ತ, ಒಬ್ಬರೊಬ್ಬರನ್ನ ಸದಾ ದ್ವೇಷಿಸುತ್ತ, ರಾಷ್ಟ್ರವೆಂಬ ಕಲ್ಪನೆಯೂ, ಆ ಧ್ಯೇಯಕ್ಕೆ ನಿಷ್ಠೆಯೂ ಇಲ್ಲದ ದುಷ್ಕಾಲದಲ್ಲೇ ಪರರ ಆಕ್ರಮಣ ಆಯಿತಲ್ಲ?
ಅದೇ ಸ್ಥಿತಿ ಈಗಲೂ ಈ ಸುಲ್ತಾನರಿಗೆ, ನವಾಬರಿಗೆ, ಪಾಳೇಗಾರರಿಗೆ. ಇಂದು ಮೋದಿಯವರ ಗಂಭೀರ ಭಾಷಣವನ್ನು, ಅವರ ಪಾಸಿಟಿವ್ ಚಿಂತನೆಗಳನ್ನೂ, ಸಮಾಧಾನ, ಸಮಾಶ್ವಾಸನೆಗಳ ಹೃದಯಾಳವನ್ನೂ, ಕಳಕಳಿಯನ್ನೂ ಕೇಳಿದ ಮೇಲೆ, ಈ ಪ್ರಶ್ನೆ ಕೇಳಬೇಕೆನಿಸಿದೆ. ಮಾಜಿ ಪ್ರಧಾನಿಗಳೇ! ಎಂದಾದರೂ ಹೀಗೆ ಗಂಭೀರ ಭಾಷಣ, ಅರ್ಥಪೂರ್ಣ, ಹೃದಯಪೂರ್ಣ ಮಾತುಗಳನ್ನು ನಿಮ್ಮ ಜನ್ಮದಲ್ಲೇ ಒಮ್ಮೆಯಾದರೂ ಆಡಿದ್ದೀರಾ? ಹಾಗೆ ನಡೆದಿದ್ದೀರಾ? ‘ಫೂಲಿಂಗ್ ದ ಮಾಸಸ್’ ಎಂಬ ರೀತಿಯ ನರಿಯ ಮರುಳು ಮಾತಿನ ನೆಹ್ರೂ, ಇಂದಿರಾರ ಕಾಲ ‘ಗರೀಬಿ ಹಟಾವೋ’ ಹೋಯ್ತು. ಸಮಗ್ರ ಭಾರತ ಹಿತಚಿಂತನೆಯ ಹೃದಯವೇ ನಿಮಗಿಲ್ಲ, ಮಾತೇನು ಬಂತು?
ಯುಧಿಷ್ಠಿರ ಅಂದಿನ ಕ್ಷತ್ರಿಯರ ಕಚ್ಚಾಟ ರೀತಿಯನ್ನು ಮಹಾಭಾರತದಲ್ಲಿ ವರ್ಣಿಸುತ್ತಾನೆ. ಹೀನೋಪಮೆಯಾದರೂ ವಾಸ್ತವ, ಗಣನೀಯ, ಹೃದ್ಯ ಈ ನಿದರ್ಶನ. ಎರಡು ನಾಯಿಗಳು ಒಂದು ಎಂಜಲಿಗೆ, ಪರಸ್ಪರ ದಿಕ್ಕುಗಳಿಂದ ಹಾರಿ ಬರುತ್ತವೆ. ಒಮ್ಮೆಲೆಗೇ ಎರಗುವುದಿಲ್ಲ. ‘ಲಾಂಗೂಲ ಚಾಲನಂ’= ಬಾಲ ಆಡಿಸುವುದು, ‘ಆರಾವಂ’- ಗುರ್ಗುರ್ ಎನ್ನುತ್ತ, ‘ದಂತದರ್ಶನಂ’=ಬಾಯಿ ತೆರೆದು ಹಲ್ಲು ತೋರಿಸುವುದು, ‘ಪರಿವರ್ತನಂ’=ಒಂದರ ಹಿಂದೆ ಒಂದು ಸುತ್ತಾಡುತ್ತ, ಎಗರಿ ಮೇಲೆ ಬೀಳುವುದು, ಆಮೇಲೆ? ‘ತತೋ ಯುದ್ಧ ಪ್ರವರ್ತತೆ’=ಈಗ ಒಂದರ ಮೇಲೊಂದು ಬಿದ್ದು ಕಚ್ಚಾಡಿ ಸಾಯಿಸುವುದು. ಇಂದೂ ಹಾಗಿಲ್ಲವೇ? ಇಲ್ಲೊಬ್ಬರು ಮುಖ್ಯಮಂತ್ರಿ ಪದವಿ ಅಧಿಕಾರ ಸ್ವೀಕಾರಕ್ಕೆ ಏರಿದಾಗ ವಿಧಾನಸೌಧದ ಮುಂದೆ, ‘ಛಪ್ಪನ್ನೈವತ್ತಾರು’ ಪ್ರತಿ ಅರಸರೂ, ಅಧಿಕಾರರೂಢರು, ಅಧಿಕಾರಭ್ರಷ್ಟರು, ಎಲ್ಲ ಆಹ್ವಾನಿತರೂ, ಹಾಜರಾಗಿ, ಒಬ್ಬರ ಎಡಗೈಯ್ಯನ್ನು, ಇನ್ನೊಬ್ಬರ ಬಲಗೈ ಹಿಡಿದು, ಛತ್ರಿಯಂತೆ ಮೇಲೆತ್ತಿ, ‘ಭಾಯಿಭಾಯಿ’ ಎಂದು ಬಾಯಿಬಾಯಿ ಬಡಿದುಕೊಂಡರಲ್ಲ? ಏನಾಯ್ತು? ರತ್ನಗಳು!
ಮಮತಾ, ಮಾಯಾ, ನಾಯ್ಡು, ಕೆಸಿಆರ್, ಪಿಣರಾಯ್, ಸ್ಟಾಲಿನ್, ಸೋನಿಯಾ, ರಾಹುಲ್-ಯಾರೆಲ್ಲ ಹಿಂದುತ್ವದ್ವೇಷಿಗಳೋ, ಏಕರೂಪ ರಾಷ್ಟ್ರಕಲ್ಪನೆಗೆ ವಿರೋಧಿಗಳೋ, ಎಲ್ಲ ಸೇರಿ ಬೃಹತ್ ‘ಘಟಬಂಧನ’ ಆಗಿಯೇ ಹೋಯ್ತೆಂದು ಹಿಗ್ಗಿದ್ದು, ಭ್ರಾಂತಿ ಕಳೆದು, ಮಡಕೆ ಒಡೆದು ಹೋದ ಮೇಲೆಯೂ ಇವರಾರಿಗೂ ಸತ್ಯಸ್ಥಿತಿಯ ಅರಿವಾಗಲೇ ಇಲ್ಲ. ಹಿಂದೂದ್ವೇಷ, ಮೈನಾರಿಟಿ ಓಲೈಕೆಗಳು ಒಗ್ಗೂಡಿಸುವುದಿಲ್ಲ. ಒಗ್ಗೂಡಿಸುವ ಶಕ್ತಿ ರಾಷ್ಟ್ರಪ್ರೇಮಕ್ಕೆ ಮಾತ್ರ ಇರುತ್ತದೆ. ಏಕೆಂದರೆ, ನೈಜ ರಾಷ್ಟ್ರಪ್ರೇಮಕ್ಕೆ ಸ್ವಾರ್ಥತ್ಯಾಗವೇ ಒಂದು ಆಧಾರಸ್ತಂಭ. ಬಹಳ ದೊಡ್ಡ ತ್ಯಾಗಿಗಳ ಬಗ್ಗೆ ಮಾತಾಡುತ್ತ, ಜನರಿಗೆ ಟೋಪಿ ಹಾಕುತ್ತ, ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುತ್ತ, ಗ್ರಾಮ ಪಂಚಾಯ್ತಿ ಮಟ್ಟದ ಸ್ವಂತಹಿತ ಸಾಧನೆಯ ಬುದ್ಧಿಯವರಿಗೆ ಮೋದಿ, ಯಾವ ಜನ್ಮಕ್ಕೂ ಅರ್ಥವಾಗಲಾರರು. ಅಂದ ಮೇಲೆ ಮೋದಿ ದ್ವೇಷ ಬಿಡುವುದು ಹೇಗೆ? ಏನಿರಯ್ಯ, ಕರೊನಾ ರೋಗವನ್ನು ಭಾರತದಲ್ಲಿ ಮೋದಿ ಉತ್ಪಾದಿಸಿದರೆ? ಹೊರಹಾಕಲು ಪಡುತ್ತಿರುವ ಪಾಡೇನು? ಅಲ್ಲಿ ಜನಸಾಮಾನ್ಯರ ಸಹನೆ, ಸಹಕಾರ, ತ್ಯಾಗಗಳು ಕಣ್ಣಿಗೆ ಕಾಣುವುದು, ನಿಮಗೆ ವೋಟುಬ್ಯಾಂಕಿಗೆ ಅಸಲಾಗಬೇಕೆ? ಇದು ನಿಮಗೆ ಬಂಡವಾಳವೇ? ಬಾದರಾಯಣಪುರವೋ? ಪಾದರಾಯನಪುರವೋ? ವಿದೇಶಿ ಮೌಲ್ವಿಗಳಿಗೆ ಅಲ್ಲೇನು ಕೆಲಸ? ಅದರಲ್ಲಿ ರಾಷ್ಟ್ರಾಭ್ಯುದಯವೇನು? ಇವರು ತಾವೂ ಸೋಂಕಿಗೊಳಗಾಗಿ, ಇತರರಿಗೂ ಅಂಟಿಸುತ್ತಿರುವ ಮಹಾ ಕಾಯಕದಲ್ಲಿ, ನಿಮ್ಮ ಲಾಭವೇನಿರಯ್ಯ?
ಪೊಲೀಸರು, ಆಶಾ ಕಾರ್ಯಕರ್ತೆಯರು, ವೈದ್ಯರು, ನಾನಾ ಸಿಬ್ಬಂದಿ ಇವರನ್ನು ಉಳಿಸಲು ಯತ್ನಿಸುತ್ತಾರೆ; ಪುಂಡರನ್ನು ಜೈಲಿಗೆ ಹಾಕುತ್ತಾರೆ! ಪೊಲೀಸರಿಗೂ ಅಂಟು ಸೋಂಕು ಹತ್ತುತ್ತದೆ, ಸೇವಾಕರ್ತರ ನಿಸ್ವಾರ್ಥ ಸೇವೆಯ ಬಗೆಗೆ ಒಂದೂ ಮಾತಾಡದ ನಿಮ್ಮಲ್ಲಿ ಮನುಷ್ಯತ್ವ ಎಷ್ಟರ ಮಟ್ಟಿಗಿದೆ? ಅವರನ್ನು ಸುರಕ್ಷೆಗಾಗಿ ಎಲ್ಲೆಲ್ಲೊ ಸಾಗಿಸುವಾಗ, ಸೋಂಕಿತರ, ಆರೋಪಿಗಳ ಪ್ರತಿಭಟನೆ ಒಂದು ಕಡೆ, ಅವರನ್ನು ವೋಟುಬ್ಯಾಂಕೆಂದು ಭಾವಿಸಿ, ದುರ್ವರ್ತನೆಯನ್ನು ಖಂಡಿಸದೆ, ಕೋಪವನ್ನು ಈಗಿನ ಸರ್ಕಾರದ ಮೇಲೆಯೇ ತಿರುಗಿಸಿ, ನೀವಾಡುವ ಕೆಟ್ಟ ಭಾಷೆಯ ಮಾತುಗಳು ಮುದ್ರಿಸಲೂ ಅಸಹ್ಯ. ಅಲ್ಲಿ ‘ನಿಮ್ಮ ಬೌಂಡರಿ’ಯ ಹಿತಾಸಕ್ತಿ! ಅಲ್ಲವಯ್ಯ, ರೋಗಕ್ಕೆ ಬೌಂಡರಿ ಇದೆಯೇ? ಬೌಂಡರಿ ಇರುವುದು ಸ್ವಾರ್ಥಕ್ಕಲ್ಲವೇ?
ಈಸೋಪನ ಕಥೆಯೊಂದು ನೆನಪಾಗುತ್ತದೆ. ಒಂದು ಹಾವು ಒಮ್ಮೆ ಬಡಗಿಯೊಬ್ಬನ ಸಾಧನ ‘ಅರ’ ಎಂಬುದನ್ನು ಆಹಾರವೆಂದು ಭ್ರಮಿಸಿ, ತಿನ್ನಲು ಆರಂಭಿಸಿ ಬಾಯಿ ಹಾಕಿತ್ತು. ಆಗ ಅರದಿಂದ ಹಾವಿನ ಬಾಯಿಗೆ ಉಜ್ಜಿ ಉಜ್ಜಿ ರಕ್ತ ಹೊರ ಬಂದಿತು. ಆ ರಕ್ತ ಅರದಿಂದ ಬಂದದ್ದು ಎಂದು ತಿಳಿದು, ಅದನ್ನೇ ಚೀಪುತ್ತ, ಕುಡಿಯುತ್ತ, ಕೊನೆಗೆ ಹಾವು ಸತ್ತು ಹೋಯಿತು. ಮಾಜಿಗಳೇ! ಇತರರ ರಕ್ತವೆಂದು ತಿಳಿದು ಕುಡಿಯುತ್ತ, ನೀವು ನಿಮ್ಮ ರಕ್ತವನ್ನೇ ಹೀರುತ್ತ ಸಾಯುತ್ತಿರುವುದಕ್ಕಾಗಿ ಈ ಅಜ್ಞಾನ, ಸ್ವಾರ್ಥ, ಮೊಂಡಿಗಾಗಿ ನಾನು ಮರುಗುತ್ತೇನೆ. ಮಹಾಭಾರತದಲ್ಲಿ ಒಬ್ಬನೇ ಧೃತರಾಷ್ಟ್ರ. ಈಗ? ಆ ಒಬ್ಬನಿಂದ ಅಂದು ರಾಷ್ಟ್ರವೇ ನಾಶವಾಯ್ತು. ಈಗ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಒಬ್ಬೊಬ್ಬ, ಇಬ್ಬರಿಬ್ಬರು, ಅನೇಕಾನೇಕ ಧೃತರಾಷ್ಟ್ರರು! ತಮಿಳುನಾಡು, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ, ಕಾಶ್ಮೀರ-ಎಲ್ಲೂ! ಹಲವಾರು ಧೃತರಾಷ್ಟ್ರರು ಕೈ ಕೈ ಹಿಡಿದು ಮೇಲೆತ್ತಿ ಘಟಬಂಧನ ಮಾಡಿಕೊಂಡರೆ, ಮಹಾಭಾರತದ ದುಷ್ಟ ‘ಚತುಷ್ಪಯ’ದ ಒಕ್ಕೂಟವಾಗುತ್ತದೆ. ಗಾಂಧಾರದ ಶಕುನಿಗೆ ಇಲ್ಲೇನು ಕೆಲಸ ಇತ್ತು? ಅಂಗದೇಶದ ದೊರೆಯಾಗಿ (ಕಾನೂನು ಬಾಹಿರವಾಗಿ) ಪಟ್ಟ ಪಡೆದ ಕರ್ಣ, ಏಕೆ ಒಮ್ಮೆಯೂ ಅಲ್ಲಿಗೆ ಹೋಗಲಿಲ್ಲ?
ಚುನಾವಣೆಯೆಂಬುದು ಪಗಡೆಯಾಟದ ಜೂಜಿನಂತಾಗಿರುವುದಕ್ಕೆ ಯಾರು ಹೊಣೆ? ನಿಮ್ಮ ಲಾಭ ಎಷ್ಟು ದಿನ? ಮೋದಿಯವರ ಸುಧಾರಣೆಗಳು-ರಾಜಕೀಯ, ಆರ್ಥಿಕ, ಸಾಮಾಜಿಕ, ಕೌಟುಂಬಿಕ ಮುಖಗಳಲ್ಲಿ ಲಂಚಪ್ರಪಂಚದ ಬುಡಕ್ಕೇ ಬೆಂಕಿ ಹಾಕುತ್ತಿವೆ. ಅದು ನಿಮ್ಮ ಭಯ! 72 ವರ್ಷಗಳಲ್ಲಿ ಬೆಳೆದು ನಿಂತ ಅತಿಕ್ರಮ, ದುರಾಡಳಿತಗಳ ಬೇರನ್ನೇ ಮೋದಿ ನಾಶ ಮಾಡುತ್ತಿದ್ದಾರೆ. ಇದು ಭಾಜಪದ ಅನೇಕಾನೇಕ ಪ್ರಸಿದ್ಧ ನಾಯಕರಿಗೂ ತಿಳಿಯದೆ, ಆಡ್ವಾಣಿ, ಯಶವಂತ ಸಿನ್ಹಾ, ಅರುಣ್ ಶೌರಿಯಂಥ ಪ್ರತಿಭಾವಂತರೂ, ಮೋದಿ ಬಗೆಗೆ ತಿಳಿಯದೆ, ಅಡ್ಡಾದಿಡ್ಡಿ ಮಾತಾಡಿ, ಈಗ ಶಾಂತರಾಗಿದ್ದಾರೆ. ಬಹುಕಾಲ ಕತ್ತಲೆಯಲ್ಲೇ ಇದ್ದವರಿಗೆ, ಒಮ್ಮೆಲೆಗೇ ಬೆಳಕು ಕಂಡರೆ ಕಣ್ಣು ಕುರುಡೇ ಆಗುತ್ತದೆ. ಹೆಂಡವೇ ಆಹಾರವಾದವನಿಗೆ ಅದು ಸಿಗದಾಗ, ಆ ‘ಹಸಿವಿ’ನಿಂದಲೇ ಸಾಯುತ್ತಾನೆ! ಪಾಕ್ನ ಹಿಂದಿನ ಅಧ್ಯಕ್ಷ ಭುಟ್ಟೋ ಸಾಹೇಬನಿಗೆ, ನೇಣಿಗೇರಿಸುವ ಮುನ್ನ ‘ನಿನ್ನ ಕೊನೆಯ ಬಯಕೆಯೇನು?’ ಎಂದಾಗ ‘ಎರಡು ಬಾಟಲು ಹೆಂಡ’ ಎಂದು ಕೇಳಿ ಪಡೆದು ಕುಡಿದೇ ನೇಣಿಗೇರಿದನೆಂದು ವರದಿ! ಎಷ್ಟೋ ಮಂದಿ ಯೋಗ್ಯತೆ ಮೀರಿ ಮಂತ್ರಿ, ಮುಖ್ಯಮಂತ್ರಿ ಆದರು. ಕುತಂತ್ರದಿಂದ! ಮೇಲೇರಿದರೂ ಕೆಳಗಿನ ಬುದ್ಧಿ ಬಿಡಲಿಲ್ಲ. ಪುರಂದರ ದಾಸರ ಹಾಡೊಂದಿದೆ-‘ಎಲ್ಲಾ ನಾ ಬಲ್ಲೆ ಎಂಬುವಿರಲ್ಲ? ಅವಗುಣ ಬಿಡಲಿಲ್ಲ...’ ಇತ್ಯಾದಿ.
ಯೋಗ್ಯತೆ ಇಲ್ಲದೆ ದುರ್ಯೋಧನ ರಾಷ್ಟ್ರ ಹಿಡಿದ. ಉದ್ಧಾರವಾದನೆ? ಕರ್ಣ ಮೇಲೇರಲು ಪ್ರಬಲರು ಅವಕಾಶ ಕೊಡಲಿಲ್ಲ-ಪರಶುರಾಮರು ಕ್ಷತ್ರ ನಿಮೂಲನೆಯ ಮಹಾಕಾರ್ಯದಲ್ಲಿ ಇವನನ್ನು ಸರಿಯಾಗಿ ಗುರುತಿಸಿದ್ದೇ ಶಾಪವಿತ್ತರು. ಬರೀ ‘ಜಾತಿ ಸಮಾನತೆಯ’ ಪ್ರಶ್ನೆ ಇದಲ್ಲ. ಯೋಗ್ಯತೆಯ ಪ್ರಶ್ನೆಯಲ್ಲಿ ಸುಳ್ಳು, ವಂಚನೆ, ಮೋಸಗಳೂ ಗಣನೀಯ. ಆಕಸ್ಮಿಕ ರಾಷ್ಟ್ರಪತಿಗಳು ಎಷ್ಟು ಜನ ಆದರು? ‘ಇಂದಿರಾರ ಮನೆಕಸ ಗುಡಿಸಲೂ ಸಿದ್ಧ’ ಎಂದು ಪ್ರತಿಜ್ಞಾವಿಧಿ ಸಂದರ್ಭದಲ್ಲಿ ಜೈಲ್ ಸಿಂಗರು ಹೇಳಿದರಲ್ಲ? ‘ಗ್ಯಾನಿ’ಗಳು! ಆಕಸ್ಮಿಕ ಪ್ರಧಾನಿಗಳೂ, ಮುಖ್ಯಮಂತ್ರಿಗಳೂ ಎಷ್ಟು ಜನ ಆದರು? ಆಕಸ್ಮಿಕಗಳು ದೈವಪ್ರಯುಕ್ತವಾದರೆ ಮೋದಿಯವರು ಎಂಥ ಅಗ್ನಿಪರೀಕ್ಷೆಯಲ್ಲೂ ಪಾರಾಗಿ ಬರುತ್ತಾರೆ. ಪಾಂಡವರ ‘ಅರಗಿನಮನೆ’ ದಹನಯತ್ನ, ‘ದ್ರೌಪದೀಮಾನಹರಣ ಯತ್ನ’, ‘ದುರ್ದ್ಯೂತ’, ವನವಾಸ, ಅಜ್ಞಾತವಾಸಗಳು ಹಿಂದಿನ ‘ಆಕಸ್ಮಿಕಗಳು’. ಯೋಗ್ಯತೆ ಇದ್ದೇ ಗೆಲವು. ಇಲ್ಲವಾದರೆ ಸಾವು!
ಈಗ ಪ್ರಶ್ನೆ. ‘ಕರೊನಾ’ ತಡೆಯುವುದು. ಇರಲಿ, ಬಿಡಿ. ನಿಮ್ಮ ಕೈಲಿ ಆಗದು. ನೊಂದವರಿಗೆ ನಿಮ್ಮ ಪರಿಹಾರವೇನು? ಅನೇಕ ಹಿರಿಯರು ಸ್ವಂತ ಹಣದಲ್ಲಿ ಸಾವಿರಾರು ಹಸಿದವರಿಗೆ ದಿನಾ ಅನ್ನ ಹಾಕುತ್ತಿದ್ದಾರೆ. ಇದು ‘ಭಾಗ್ಯ’ ಬಳುವಳಿಯಲ್ಲ. ಸೋಮಾರಿತನದ ಪ್ರಮೋಷನ್ ಅಲ್ಲ! ಒಬ್ಬ ಬ್ಯಾಂಕು ಕ್ಯಾಷಿಯರ್ ಹೇಳುತ್ತಿದ್ದ-‘ಇಂದು ಒಂದೂವರೆ ಕೋಟಿ ಹಣ ಬಟವಾಡೆ ಮಾಡಿದೆ. ನೆನ್ನೆ ಐವತ್ತು ಲಕ್ಷ...’ ಹೀಗೆ. ಹಣ ಅವರಪ್ಪನ ಮನೆಯದಲ್ಲ ಅಂತ ಅವನು ತಿಳಿಯಲೇ ಇಲ್ಲ! ಹಾಗಿದೆ ಮಾಜಿಗಳ ಬಡಾಯಿ. ಕೈ, ಬಾಯಿ, ಕಚ್ಚೆ ಶುದ್ಧಿಗಳಿಗೆ ‘ತ್ರಿಕರಣ’ ಶುದ್ಧಿ ಎನ್ನುತ್ತಾರೆ. ಬಸವಣ್ಣನವರ ‘ಕಳಬೇಡ, ಕೊಲ ಬೇಡ’ ವಚನದ ಜಪ ನಿಮ್ಮ ಕೃತ್ಯವನ್ನು ಇನ್ನೂ ಮುಚ್ಚಿಡಲಾರದು. ವಚನಕಾರರೆಲ್ಲಿ? ವಚನಭ್ರಷ್ಟರೆಲ್ಲಿ? ಬಾಯಿಹರುಕರೆಲ್ಲಿ?