

ಐತಿಹಾಸಿಕವಾಗಿ ಚೀನೀ ಸಾಮ್ರಾಜ್ಯದ ಲಕ್ಷಣವೆಂದರೆ ಪ್ರಬಲ ಕೇಂದ್ರ ಸರ್ಕಾರವಿದ್ದಾಗಲೆಲ್ಲಾ ಅದರ ಅಧಿಕಾರ ಹಾನ್ ಚೀನೀ ಪ್ರದೇಶಗಳನ್ನು (ಈಗಿನ ಪೂರ್ವ-ಮಧ್ಯ ಚೀನಾ) ದಾಟಿ ಸುತ್ತಲಿನ ಮಂಚೂರಿಯಾ, ಮಂಗೋಲಿಯಾ, ಷಿನ್ಜಿಯಾಂಗ್ ಮತ್ತು ಟಿಬೆಟ್ಗಳ ಹಾಗೂ ಕೆಲವೊಮ್ಮೆ ಕೊರಿಯಾ ಮತ್ತು ವಿಯೆಟ್ನಾಂಗಳ ಮೇಲೆ ಸಹ ವಿಸ್ತರಿಸುತ್ತಿತ್ತು. ಕೇಂದ್ರ ಸರ್ಕಾರ ಶಕ್ತಿಹೀನವಾದಾಗಲೆಲ್ಲಾ ಆ ಪ್ರದೇಶಗಳು ಸ್ವತಂತ್ರವಾಗುತ್ತಿದ್ದವು ಮತ್ತು ಕೇಂದ್ರ ಸರ್ಕಾರ ಮತ್ತೆ ಶಕ್ತಿಯುತವಾಗುವವರೆಗೂ ಅವುಗಳ ಸ್ವತಂತ್ರ ಅಸ್ತಿತ್ವ ಮುಂದುವರಿಯುತ್ತಿತ್ತು. ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದದ್ದು ಹೀಗೆಯೇ. ಹತ್ತೊಂಬತ್ತನೇ ಶತಮಾನದಲ್ಲಿ ಯೂರೋಪಿಯನ್ ವಸಾಹತುಶಾಹಿ ಒತ್ತಡ ಮತ್ತು ಆಂತರಿಕ ಕ್ಷೋಭೆಗಳಿಂದಾಗಿ ಚೀನೀ ರಾಜಪ್ರಭುತ್ವದ ಶಕ್ತಿ ಕುಂದಿದಾಗ ಟಿಬೆಟ್, ಷಿನ್ಜಿಯಾಂಗ್ ಮತ್ತು ಮಂಗೋಲಿಯಾಗಳು ಸ್ವತಂತ್ರವಾದವು. ಕೊರಿಯಾವನ್ನು ಜಪಾನ್ ಹಿಡಿತಕ್ಕೆ ತೆಗೆದುಕೊಂಡದ್ದಲ್ಲದೇ ಮಂಚೂರಿಯಾವನ್ನು ತನ್ನ ಕೈಗೊಂಬೆ ರಾಷ್ಟ್ರವನ್ನಾಗಿಸಿಕೊಂಡಿತು. 1949ರಲ್ಲಿ ಬಲಾಢ್ಯ ಕಮ್ಯೂನಿಸ್ಟ್ ಕೇಂದ್ರ ಸರ್ಕಾರದ ಸ್ಥಾಪನೆಯೊಂದಿಗೆ ಇತಿಹಾಸದ ಪುನರಾವರ್ತನೆಯಾಯಿತು. ‘ಕಳೆದುಹೋದ’ ಪ್ರದೇಶಗಳನ್ನು ಮತ್ತೆ ತಾಯಿನಾಡಿನೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮವನ್ನು ರೂಪಿಸಿದ ಸಿಸಿಪಿ ಸರ್ಕಾರ ತನ್ನ ಪೀಪಲ್ಸ್ ಲಿಬರೇಷನ್ ಆರ್ವಿುಯನ್ನುಪಯೋಗಿಸಿ ವಿಶಾಲ ಷಿನ್ಜಿಯಾಂಗ್ ಮತ್ತು ಟಿಬೆಟ್ಗಳನ್ನು ಆಕ್ರಮಿಸಿಕೊಂಡಿತು. ಮಂಚೂರಿಯಾವನ್ನು ಅದಾಗಲೇ ರಶಿಯನ್ನರು ಜಪಾನೀಯರಿಂದ ಕಿತ್ತು ಚೀನಾಗೆ ಕೊಟ್ಟಾಗಿತ್ತು. ಹೀಗೆ ಮಾವೋ ಝೆದಾಂಗ್ ಮಾಡಿದ್ದು ಕಮ್ಯೂನಿಸ್ಟ್ ಚೀನಾದ ಭೌಗೋಳಿಕ ವಿಸ್ತರಣೆ ಅಂದರೆ ಹಿಂದಿನ ಚೀನೀ ಸಾಮ್ರಾಜ್ಯಶಾಹಿಯ ಪುನರ್ನಿರ್ವಣ. ಮಾವೋ ನಿರ್ವಿುಸಿದ ಚೀನೀ ಕಮ್ಯೂನಿಸ್ಟ್ ಸಾಮ್ರಾಜ್ಯವನ್ನು ಬಲಾಢ್ಯ ಆರ್ಥಿಕ ಶಕ್ತಿಯಾಗಿಸಹೊರಟಿದ್ದು ಡೆಂಗ್ ಷಿಯಾವೋಪಿಂಗ್.
1976ರಲ್ಲಿ ಮಾವೋ ನಿಧನಾನಂತರ ಸಿಸಿಪಿಯೊಳಗೇ ಒಳಜಗಳಗಳು ಉಂಟಾದವು. ಅದಕ್ಕೆ ಪ್ರಮುಖ ಕಾರಣ ಮಾವೋರ ನಾಲ್ಕನೆಯ ಪತ್ನಿ, ‘ಹಸಿರು ನದಿ’ ಎಂಬರ್ಥದ ಹೆಸರಿನ ಚಿಯಾಂಗ್ ಚಿಂಗ್ ಮೂವರು ಹಿಂಬಾಲಕರನ್ನು ಕಟ್ಟಿಕೊಂಡು ಕುಖ್ಯಾತ ‘ಗ್ಯಾಂಗ್ ಆಫ್ ಫೋರ್’ ಕಟ್ಟಿ, ಅಧಿಕಾರಕ್ಕೇರಲು ಹವಣಿಸಿದ್ದು. ಆದರೆ ಕೆಂಪು ಚೀನಾ ಮೇಲೆ ಹಸಿರು ನದಿಯ ಪ್ರಭಾವ ಸಿಸಿಪಿ ವರಿಷ್ಠ ನಾಯಕರಿಗೆ ಸಮ್ಮತವೆನಿಸಲಿಲ್ಲ. ಪರಿಣಾಮವಾಗಿ ಕೆಲದಿನಗಳ ಅಸ್ಥಿರತೆ, ಹುವಾ ಕುವೋಫೆಂಗ್ರ ತಾತ್ಕಾಲಿಕ ಪ್ರಾಬಲ್ಯ ಕೊನೆಗೊಂಡು 1978ರಲ್ಲಿ ದೆಂಗ್ ಷಿಯಾವೋಪಿಂಗ್ ಸಿಸಿಪಿಯ ಸರ್ವಸಮ್ಮತ ನಾಯಕರಾದದ್ದೇ ಚೀನಾದ ಭವಿಷ್ಯವೇ ಬದಲಾಗಿಹೋಯಿತು.
ಕಮ್ಯೂನಿಸ್ಟ್ ನೀತಿಗಳಿಂದಾಗಿ ಸೋವಿಯೆತ್ ಯೂನಿಯನ್ ಸಿಲುಕಿದ ಆರ್ಥಿಕ ಸಂಕಷ್ಟ ಮತ್ತದರ ಭೀಕರ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ದೆಂಗ್ 1978ರಲ್ಲೇ ಆರ್ಥಿಕ ರಂಗದಲ್ಲಿ ಉದಾರೀಕರಣದ ಪ್ರಕ್ರಿಯೆ ಆರಂಭಿಸಿದರು. ‘ನಮಗೆ ಅಗತ್ಯವಾದ ಆರ್ಥಿಕ ಸೌಲಭ್ಯಗಳನ್ನು ಕೊಡುವುದರಲ್ಲಿ ಕಮ್ಯೂನಿಸಂ ವಿಫಲವಾದಾಗ ಅಗತ್ಯವಿರುವಷ್ಟು ಬಂಡವಾಳಶಾಹಿ ವ್ಯವಸ್ಥೆಯನ್ನು ನಾವು ಅಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ’ ಎಂದು ಆ ಹೊಸಮಾರ್ಗ ಪ್ರವರ್ತಕ ವಾದಿಸಿದರು. ‘ನಮಗೆ ಬೇಕಾಗಿರುವುದು ಆರ್ಥಿಕ ಪ್ರಗತಿ, ಅದಕ್ಕೆ ಕಮ್ಯೂನಿಸಂ ಮಾರ್ಗವಾದರೇನು, ಬಂಡವಾಳಶಾಹಿ ಮಾರ್ಗವಾದರೇನು’ ಎಂದು ಸೂಚಿಸಲು ಅವರು ಬಳಸಿದ ‘ಇಲಿ ಹಿಡಿಯಬಲ್ಲ ಬೆಕ್ಕು ಕಪ್ಪಾಗಿದ್ದರೇನು, ಬಿಳಿದಾಗಿದ್ದರೇನು?’ ಎಂಬ ಉಪಮೆ ಚೀನೀ ಕಮ್ಯೂನಿಸ್ಟರಿಗಷ್ಟೇ ಅಲ್ಲ, ಜಗತ್ತಿನ ಎಲ್ಲರಿಗೂ ಒಂದು ಹೊಸ ದಿಕ್ಕನ್ನೇ ತೋರಿಸಿತು. ತಮ್ಮ ಮಾತನ್ನು ತಮ್ಮ ನಿರ್ದೇಶನದಲ್ಲೇ ಅನುಷ್ಠಾನಕ್ಕೆ ತಂದ ದೆಂಗ್ ರಾಜಕೀಯರಂಗದಲ್ಲಿ ಕಮ್ಯೂನಿಸಂ, ಆರ್ಥಿಕರಂಗದಲ್ಲಿ ಅಗತ್ಯವಿರುವಷ್ಟು ಕ್ಯಾಪಿಟಲಿಸಂ ಎಂಬ ನೀತಿ ರೂಪಿಸಿದರು. ಪರಿಣಾಮ ಅದ್ಭುತ. ವಿಶೇಷ ಆರ್ಥಿಕ ವಲಯಗಳನ್ನೊಳಗೊಂಡಂತೆ ಚೀನಾ ನೀಡಿದ ಸವಲತ್ತುಗಳನ್ನು ಉಪಯೋಗಿಸಿಕೊಂಡ ವಿಶ್ವದ ಸಾವಿರಾರು ಕೈಗಾರಿಕಾ ಸಂಸ್ಥೆಗಳು ಆ ದೇಶದಲ್ಲಿ ಭಾರೀ ಬಂಡವಾಳ ಹೂಡಿದವು. ತತ್ಪರಿಣಾಮವಾಗಿ ಚೀನಾದ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ತಾರಾಮಾರು ಏರತೊಡಗಿತು. ವಿಪುಲ ಉದ್ಯೋಗಾವಕಾಶಗಳನ್ನು ಪಡೆದ ಚೀನೀಯರು ಬಡತನದಿಂದ ತ್ವರಿತವಾಗಿ ಹೊರಬರತೊಡಗಿದರು. ಈ ಬೆಳವಣಿಗೆಗಳು ಆರ್ಥಿಕವಾಗಿ ಒಳ್ಳೆಯದೆನಿಸಿದರೂ, ಸಿಸಿಪಿಯ ಏಕಾಧಿಕಾರಕ್ಕೆ ಅವು ಕುತ್ತಾಗುವ ಸಂದರ್ಭವೊದಗಿದ್ದೊಂದು ಮಹತ್ತರ ಪ್ರಕರಣ.
ಆರ್ಥಿಕವಾಗಿ ಎಂದೋ ವಿಫಲವಾಗಿದ್ದ ಸೋವಿಯೆತ್ ಯೂನಿಯನ್ ಮತ್ತು ಪೂರ್ವ ಯೂರೋಪಿಯನ್ ಕಮ್ಯೂನಿಸ್ಟ್ ಸತ್ತೆಗಳು 1980ರ ದಶಕದ ಉತ್ತರಾರ್ಧದಲ್ಲಿ ರಾಜಕೀಯವಾಗಿಯೂ ವಿಫಲಗೊಂಡು ತಟಪಟನೆ ಉರುಳತೊಡಗಿದಾಗ ಅದರಿಂದ ಪ್ರಭಾವಿತರಾದ ಚೀನೀ ವಿದ್ಯಾರ್ಥಿಗಳು 1989ರ ಬೇಸಗೆಯಲ್ಲಿ ತಿಯೆನಾನ್ವೆುನ್ ಚೌಕದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಯ ಪರವಾಗಿ ಪ್ರದರ್ಶನಕ್ಕಿಳಿದರು. ಅಂತಿಮವಾಗಿ ಆ ವಿದ್ಯಾರ್ಥಿ ಆಂದೋಲನವನ್ನು ಹತ್ತಿಕ್ಕಲು ಸಿಸಿಪಿ ಸೇನೆಯನ್ನು ಬಳಸಬೇಕಾಯಿತು. ‘ತಿಯೆನಾನ್ವೆುನ್ ಹತ್ಯಾಕಾಂಡ’ ಎಂದು ಇತಿಹಾಸದಲ್ಲಿ ದಾಖಲಾಗಿರುವ ಈ ರಕ್ತಸಿಕ್ತ ಪ್ರಕರಣದಲ್ಲಿ ಹತ್ಯೆಗೀಡಾದ ಯುವ ವಿದ್ಯಾರ್ಥಿಗಳ ಸಂಖ್ಯೆ ಮೂರರಿಂದ ಹತ್ತು ಸಾವಿರ ಇರಬಹುದೆಂದು ಹೊರಜಗತ್ತು ಅಂದಾಜಿಸಿದೆ.
ಈ ಬೆಳವಣಿಗೆಯನ್ನೊಂದು ಪಾಠದಂತೆ ತೆಗೆದುಕೊಂಡ ಸಿಸಿಪಿ ಮುಂದೆ ಅಂತಹದು ಘಟಿಸುವುದನ್ನು ತಡೆಯಲು ಯೋಜಿಸಿದ ಕ್ರಮ ಆಸಕ್ತಿಕರ. ತನ್ನ ಜನತೆಗೆ ಹೊಸ ಹೊಸ ಆರ್ಥಿಕ ಆಮಿಷಗಳನ್ನೊಡ್ಡುವುದರ ಮೂಲಕ ಮತ್ತು ಅವರನ್ನು ಶಾಶ್ವತವಾಗಿ ಅದರ ಸುಳಿಯೊಳಗೆ ಸಿಲುಕಿಸಿಬಿಡುವ ಮೂಲಕ ಅವರ ಮನಸ್ಸಿನಲ್ಲಿ ರಾಜಕೀಯ ಚಿಂತನೆಗಳು ಮೊಳೆಯದಂತೆ, ಬೆಳೆಯದಂತೆ ಮಾಡಲು ಸಿಸಿಪಿ ಹಂಚಿಕೆ ರೂಪಿಸಿತು. ಅದರಂತೆ, ರಾಜಕೀಯ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪಕ್ಷದ ಏಕಸ್ವಾಮ್ಯವನ್ನು ಉಳಿಸಿಕೊಂಡು, ಆರ್ಥಿಕ ಕ್ಷೇತ್ರದಲ್ಲಿ ಬಂಡವಾಳಶಾಹಿಯನ್ನು ಆಳವಡಿಸಿಕೊಳ್ಳಲು 1994ರಲ್ಲಿ ಜರುಗಿದ ಸಿಸಿಪಿಯ ಹದಿನಾಲ್ಕನೇ ನ್ಯಾಷನಲ್ ಕಾಂಗ್ರೆಸ್ನಲ್ಲಿ ನಿರ್ಣಯಿಸಲಾಯಿತು. ದೆಂಗ್ 1978ರಲ್ಲಿ ಜಾರಿಗೆ ತಂದಿದ್ದ ಸೀಮಿತ ಆರ್ಥಿಕ ಸುಧಾರಣೆಗಳನ್ನು ವಿಸ್ತರಿಸಿ, ವಿದೇಶೀ ಹೂಡಿಕೆದಾರರಿಗೆ ವಿಶೇಷ ಸವಲತ್ತುಗಳನ್ನು ವ್ಯಾಪಕವಾಗಿ ಒದಗಿಸುವುದರ ಮೂಲಕ ತ್ವರಿತ ಕೈಗಾರಿಕೀಕರಣಕ್ಕೆ ನಾಂದಿ ಹಾಡಲಾಯಿತು. ಪರಿಣಾಮವಾಗಿ ಹೊಸ ಶತಮಾನದ ಹೊತ್ತಿಗೆ ಚೀನಾ ‘ಜಗತ್ತಿನ ಕಾರ್ಖಾನೆ’ ಎಂದು ಬಿರುದಾಂಕಿತಗೊಂಡಿತು. ಇದರ ಪರಿಣಾಮ ಚೀನೀ ಯುವಜನತೆಯ ಮೇಲೆ ಏನಾಗಿತ್ತು ಎನ್ನುವುದು ನಮ್ಮೀ ಅವಲೋಕನಕ್ಕೆ ಮುಖ್ಯ.
‘ಇತಿಹಾಸದ ಆರ್ಥಿಕ ವ್ಯಾಖ್ಯಾನ’ ಎನ್ನುವುದು ಕಾರ್ಲ್ ಮಾರ್ಕ್್ಸ ಕಮ್ಯೂನಿಸಂನ ಒಂದು ಬಹುಮುಖ್ಯ ಅಂಶ. ಇತಿಹಾಸವನ್ನು ರೂಪಿಸುವಲ್ಲಿ ಆರ್ಥಿಕತೆಯ ಮುಖ್ಯ ಪಾತ್ರವನ್ನು ಅದು ಗುರುತಿಸುತ್ತದೆ. ಚೀನಾದಲ್ಲಿ ಸರ್ಕಾರ ಒದಗಿಸಿದ ವಿಪುಲ ಉದ್ಯೋಗಾವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ ಚೀನೀ ಯುವಜನತೆ, ಆದಾಯ ಮತ್ತದು ತರುವ ಕೊಳ್ಳುವ ಸಾಮರ್ಥ್ಯ ಅದರಿಂದ ತಾವು ಹೊಂದಬಹುದಾದ ಐಷಾರಾಮಿ ವಸ್ತುಗಳು ಮತ್ತು ಒಂದಕ್ಕಿಂತ ಹೆಚ್ಚು (ಆದರೆ ಕಳಪೆ!) ಮನೆಗಳ ಆಮಿಷದಲ್ಲಿ ಹೊರಬರಲಾರದಂತೆ ಸಿಲುಕಿಹೋಗಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಚಿಂತಿಸಲು ಅವರಿಗೀಗ ಸಮಯವಿಲ್ಲ. ಚೀನಾದಲ್ಲಿ ಇತಿಹಾಸವನ್ನು ಆರ್ಥಿಕತೆ ಪ್ರಭಾವಿಸುತ್ತಿರುವುದು ಹೀಗೆ. ಕಾರ್ಲ್ ಮಾರ್ಕ್್ಸ ‘ಇತಿಹಾಸದ ಆರ್ಥಿಕ ವ್ಯಾಖ್ಯಾನ’ಕ್ಕೆ ಸಿಸಿಪಿ ನೀಡುತ್ತಿರುವ ಹೊಸ ರೂಪ ಇದು.
ಒಟ್ಟಾರೆ ಈ ಎಲ್ಲಾ ಕ್ರಮಗಳಿಂದ ವಿಶ್ವದ ಮೂರನೆಯ ಬೃಹತ್ ಅರ್ಥವ್ಯವಸ್ಥೆಯ ಸ್ಥಾನಕ್ಕೆ 2000ದಲ್ಲಿ, ಎರಡನೆಯ ಸ್ಥಾನಕ್ಕೆ 2010ರಲ್ಲಿ ಜಿಗಿದ ಚೀನಾ 2015ರ ಹೊತ್ತಿಗೆ ಹನ್ನೊಂದು ಟ್ರಿಲಿಯನ್ ಡಾಲರ್ ಮೌಲ್ಯದ ಜಿಡಿಪಿಯನ್ನು ಸಾಧಿಸಿ, ಮೂರು ಟ್ರಿಲಿಯನ್ ಡಾಲರ್ ವಿದೇಶೀ ವಿನಿಮಯದ ಅಗಾಧ ಭಂಡಾರವನ್ನು ಸಂಗ್ರಹಿಸಿತು. 1991ರಲ್ಲಿ ಸೋವಿಯೆತ್ ಯೂನಿಯನ್ ಕುಸಿದಾಗ ತೆರವಾಗಿದ್ದ ಎರಡನೆಯ ಸೂಪರ್ ಪವರ್ ಸ್ಥಾನಕ್ಕೆ ತನ್ನ ಹಕ್ಕುದಾರಿಕೆ ಸ್ಥಾಪಿಸಲು ಚೀನಾವನ್ನು ಪ್ರೇರೇಪಿಸಿದ ಅಂಶ ಇದು.
ನಾಲ್ಕು ದಶಕಗಳ ಹಿಂದೆ ಚೀನಾದ ಆರ್ಥಿಕ ಅಭ್ಯುದಯಕ್ಕೆ ನಾಂದಿ ಹಾಡಿದ ದೆಂಗ್ ಷಿಯಾವೋಪಿಂಗ್ ಸಿಸಿಪಿಗೆ ಕೊಟ್ಟ ಮಂತ್ರ- ‘Hide your strength, Bide your time‘ಎಂದು. ಅದರ ಪ್ರಕಾರ ಚೀನೀ ರಾಜಕೀಯ ನಾಯಕರು ಮತ್ತು ರಾಜತಂತ್ರಜ್ಞರು ತಮ್ಮ ದೇಶದ ಶಕ್ತಿಯ ಬಗ್ಗೆ ಕಡಿಮೆ ಮಾತಾಡುವುದನ್ನೂ, ಯಾವುದೇ ಕೃತ್ಯಕ್ಕೆ ಸೂಕ್ತ ಸಮಯಕ್ಕಾಗಿ ಕಾಯುವುದನ್ನೂ ಅಭ್ಯಾಸ ಮಾಡಿಕೊಂಡರು. ದೆಂಗ್ರ ಉತ್ತರಾಧಿಕಾರಿಗಳಾದ ಜಿಯಾಂಗ್ ಝೆಮಿನ್ (1992-2002) ಮತ್ತು ಹು ಜಿಂಟಾವೋ (2002-2012) ಇದೇ ನೀತಿಯನ್ನು ಮುಂದುವರಿಸಿದರು. ಆ ಪ್ರಕಾರ ಆ ಎರಡು ದಶಕಗಳಲ್ಲಿ ಚೀನಾದ ಆರ್ಥಿಕ ಮತ್ತು ಸೇನಾ ಶಕ್ತಿಗಳು ಅಗಾಧವಾಗಿ ಏರಿದರೂ ಅವುಗಳ ಪ್ರದರ್ಶನಕ್ಕೆ ಚೀನಾ ಮುಂದಾಗಲಿಲ್ಲ. ಹೀಗಾಗಿ, ಅಂತಾರಾಷ್ಟ್ರಿಯ ರಂಗದಲ್ಲಿ ಚೀನಾದ್ದು ‘ಶಾಂತಿಯುತ ಉತ್ಕರ್ಷ’ ಅಂದರೆ ಜಾಗತಿಕ ಮಹಾಶಕ್ತಿಯಾಗಿ ಚೀನಾದ ಉದಯ ಇತರರಿಗೆ ಅಪಾಯಕಾರಿಯಲ್ಲ ಎಂಬ ಅಭಿಪ್ರಾಯಕ್ಕೆ ಹೊರಜಗತ್ತು ಬಂತು. ಅದನ್ನು ಬದಲಾಯಿಸಿದ್ದು 2012ರ ಅಂತ್ಯದಲ್ಲಿ ಅಧ್ಯಕ್ಷ ಗದ್ದುಗೆಗೇರಿದ ಷಿ ಜಿನ್ಪಿಂಗ್.
ನಾಲ್ಕು ವರ್ಷಗಳ ಹಿಂದೆ ಶ್ವೇತಭವನ ಪ್ರವೇಶಿಸಿದ ಡೊನಾಲ್ಡ್ ಟ್ರಂಪ್ ಜಾಗತೀಕರಣದ ಕುರಿತಾದ ತಮ್ಮ ನಕಾರಾತ್ಮಕ ನಿಲುವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿ, ಜಾಗತೀಕರಣ ಪ್ರಕ್ರಿಯೆಯಿಂದ ಅಮೆರಿಕಾವನ್ನು ಹೊರಗೊಯ್ಯುವ ಮಾತಾಡಿದಾಗ ತಕ್ಷಣ ಪ್ರತಿಕ್ರಿಯಿಸಿದ ಜಿನ್ಪಿಂಗ್, ಅಮೆರಿಕಾ ತೆರವು ಮಾಡುವ ಸ್ಥಾನವನ್ನು ತುಂಬಲು ಚೀನಾ ತಯಾರಾಗಿರುವುದೆಂದು ಘೊಷಿಸಿದರು. ಅವರ ಮಾತಿನ ಅರ್ಥ, ವಿಶ್ವ ಅರ್ಥವ್ಯವಸ್ಥೆಯ ನಾಯಕತ್ವವನ್ನು ಅಮೆರಿಕಾದಿಂದ ತನ್ನ ಕೈಗೆ ತೆಗೆದುಕೊಳ್ಳಲು ಚೀನಾ ಸಿದ್ಧವಾಗಿದೆ ಎಂದಾಗಿತ್ತು. ತನ್ನ ದೇಶದ ಅಗಾಧ ಆರ್ಥಿಕ ಸಾಮರ್ಥ್ಯನ್ನು ರಾಜಕೀಯ-ಸೇನಾ ಶಕ್ತಿಯನ್ನಾಗಿ ಬದಲಾಯಿಸಲು ಜಿನ್ಪಿಂಗ್ ಹೊರಟದ್ದು ಸ್ಪಷ್ಟವಾಗಿತ್ತು.
ಆದರೆ ಈ ಹಾದಿಯಲ್ಲಿ ಜಿನ್ಪಿಂಗ್ ಜಗತ್ತಿನ ಮುಂದೆ ಅನಾವರಣಗೊಳಿಸಹೊರಟ ಚೀನಾಗೆ ವಿಶ್ವರಾಜಕೀಯದಲ್ಲಿ ಒಂದಕ್ಕಿಂತ ಹೆಚ್ಚು ರೂಪಗಳಿದ್ದವು. ಅದು 15-17ನೇ ಶತಮಾನಗಳ ಯೂರೋಪಿಯನ್ ವಸಾಹತುಶಾಹಿ ರಾಷ್ಟ್ರಗಳ ಇಪ್ಪತ್ತೊಂದನೇ ಶತಮಾನದ ಅವತಾರದಂತಿರುವುದರ ಜತೆ 1933-39ರ ನಡುವಿನ ಅಡಾಲ್ಪ್ ಹಿಟ್ಲರ್ ನಾಯಕತ್ವದ ಜರ್ಮನಿಯ ಅಪರಾವತಾರದಂತೆಯೂ ಕಾಣಿಸಿಕೊಳ್ಳತೊಡಗಿತು. ದೂರದೂರದ ಬಡದೇಶಗಳನ್ನು ಸಾಲಸಂಕೋಲೆಯಲ್ಲಿ ಕೆಡವಿಕೊಳ್ಳುವ ಹಾಗೂ ಹತ್ತಿರದ ದೇಶಗಳ ನೆಲ-ಜಲ ಪ್ರದೇಶಗಳನ್ನು ಕಬಳಿಸುವ ಮೂಲಕ ವಿಶ್ವಶಾಂತಿಗೆ ಚೀನಾ ಕಂಟಕವಾಗಲಿದೆಯೆಂದು ಜಗತ್ತು ಆತಂಕಪಡುತ್ತಿದ್ದಾಗಲೇ ಆ ಕರಾಳ ಕಮ್ಯೂನಿಸ್ಟ್ ಕೋಟೆಯಿಂದ ಹೊರಬಿದ್ದದ್ದು ಘಾತಕ ಕರೊನಾವೈರಸ್.
ಕೋವಿಡ್-19 ಮಹಾಮಾರಿಯನ್ನು ಜಗತ್ತಿಗೆ ಹರಡಿದ್ದಲ್ಲದೇ ಅದನ್ನೊಂದು ಅಸ್ತ್ರವನ್ನಾಗಿ ಬಳಸಿ ಜಾಗತಿಕ ರಾಜಕಾರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ಸಿಸಿಪಿ ಹೊರಟಿದ್ದನ್ನು ಕಳೆದ ಒಂದೂವರೆ ವರ್ಷದಲ್ಲಿ ಜಗತ್ತು ನೋಡುತ್ತಿದೆ. ಚೀನಾದ ಬೇಜವಾಬ್ದಾರಿ ನಡವಳಿಕೆ ಹಾಗೂ ಕುತ್ಸಿತ ರಾಜಕಾರಣವನ್ನು ಜಗತ್ತು ಪ್ರಶ್ನಿಸತೊಡಗಿದ್ದು ಸಹಜವೇ. ಅಮೆರಿಕಾ, ಆಸ್ಟ್ರೇಲಿಯಾದ ವಾಗ್ದಾಳಿಗಳಿಗೆ ಪ್ರತಿಯಾಗಿ ಚೀನಾದ ಪರವಾಗಿ, ಅದರ ಅಧ್ಯಕ್ಷನ ಪರವಾಗಿ ಹೇಳಿಕೆಗಳನ್ನು ನೀಡತೊಡಗಿದ್ದು ಸಿಸಿಪಿಯ ಮುಖವಾಣಿ ‘ಗ್ಲೋಬಲ್ ಟೈಮ್್ಸ’ ಪತ್ರಿಕೆಯ ಹರಕುಬಾಯಿಯ ಪ್ರಧಾನ ಸಂಪಾದಕ ಹು ಷಿಜಿನ್, ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಜಿಯಾಂಗ್ ಮತ್ತು ವಿವಿಧ ದೇಶಗಳಲ್ಲಿನ ಚೀನೀ ರಾಯಭಾರಿಗಳು. ಇವರ ಹೇಳಿಕೆಗಳು ಅಸಹ್ಯಕರ, ಅರಾಜತಾಂತ್ರಿಕ ಭಾಷೆ ಮತ್ತು ಬೆದರಿಕೆಗಳಿಂದ ಕೂಡಿವೆ. ಜತೆಗೆ ಭಾರತ, ತೈವಾನ್, ಜಪಾನ್ ಮತ್ತು ವಿಯೆಟ್ನಾಂಗಳಿಗೆ ಸಿಸಿಪಿ ಮತ್ತೆಮತ್ತೆ ಯುದ್ಧದ ಬೆದರಿಕೆಯೊಡ್ಡುತ್ತಿದೆ. ಇಂದು ಸಿಸಿಪಿ ಜಗತ್ತಿಗೆ ತೋರಿಸುತ್ತಿರುವುದು ಈ ಮುಖವನ್ನು. ಅದು ಇದೇ ಜುಲೈ 1ರಂದು ಸಿಸಿಪಿಯ ಶತಮಾನೋತ್ಸದಲ್ಲಿ ಢಾಳಾಗಿ ವ್ಯಕ್ತವಾಯಿತು. ಅಲ್ಲಿ ಜಿನ್ಪಿಂಗ್ ಜಗತ್ತನ್ನು ಹೆದರಿಸಹೊರಟದ್ದು ಈ ಮಾತುಗಳಿಂದ- ‘ಚೀನಾವನ್ನು ಇತರರು ಶೋಷಿಸುವ ದಿನಗಳು ಹೊರಟುಹೋಗಿವೆ... ಚೀನಾಗೆ ಹಾನಿಯೆಸಗಲು ಹೊರಟವರು 1.4 ಬಿಲಿಯನ್ ಚೀನೀಯರು ನಿರ್ವಿುಸಿರುವ ಉಕ್ಕಿನ ಗೋಡೆಗೆ ತಲೆ ಚಚ್ಚಿಕೊಂಡು... ರಕ್ತ ಹರಿಸಿಕೊಳ್ಳುತ್ತಾರೆ...’
ಆದರೆ ವಾಸ್ತವವೆಂದರೆ ಚೀನಾ ಆರಂಭಿಸಿರುವ ಶೋಷಣೆಗೆ, ನವವಸಾಹತೀಕರಣಕ್ಕೆ ಜಗತ್ತೀಗ ಪ್ರತಿಕ್ರಿಯಿಸತೊಡಗಿದೆ. ತನ್ನದೇ ಜನರ ಮಾನವಹಕ್ಕುಗಳಿಗೆ, ಜೀವಕ್ಕೆ ಬೆಲೆಯನ್ನೇ ನೀಡದೆ ದಮನಿಸಿದ; ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಬೀದಿರೌಡಿಯಂತೆ ವರ್ತಿಸಿದ ಸಿಸಿಪಿ ವಿರುದ್ಧ ಜಗತ್ತು ನಿಧಾನವಾಗಿಯಾದರೂ ನಿರ್ವಿುಸತೊಡಗಿರುವ ಉಕ್ಕಿನ ಗೋಡೆಗೆ ಜಿನ್ಪಿಂಗ್ರ ಸಿಸಿಪಿ ತಲೆ ಚಚ್ಚಿಕೊಂಡು ರಕ್ತ ಹರಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿರುವಂತೆ ಕಾಣುತ್ತಿದೆ. ಹೇಳಹೊರಟರೆ ಸಿಸಿಪಿಯ ಬಗ್ಗೆ ಸಂಪುಟಗಟ್ಟಲೆ ಹೇಳುವುದಿದೆ. ಆದರೆ ಅಫ್ಘಾನಿಸ್ತಾನ ಕೈಬೀಸಿ ಕರೆಯುತ್ತಿರುವುದರಿಂದಾಗಿ ಸಿಸಿಪಿಯ ಕರ್ಮಕಾಂಡ ಇಲ್ಲಿಗೆ ಸಮಾಪ್ತ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)