ಸಮಸ್ಯೆಗೆ ಎಲ್ಲಿದೆ ಪರಿಹಾರ?

Manollasa
Published on

| ಡ್ಯಾನಿ ಪಿರೇರಾ

ತನಗೆ ವಿಚಿತ್ರ ರೋಗವೊಂದು ಅಡರಿದೆ ಎಂದು ರೋಗಿಯೊಬ್ಬ ವೈದ್ಯರ ಬಳಿ ಹೋಗಿ, ‘ನನ್ನ ಕೈ ಬೆರಳಿನಿಂದ ದೇಹದ ಯಾವುದೇ ಭಾಗ ಮುಟ್ಟಿದರೂ ಅಲ್ಲಿ ನೋಯುತ್ತದೆ, ದಯಮಾಡಿ ಈ ಕಾಯಿಲೆಗೆ ಸೂಕ್ತ ಪರಿಹಾರ ಸೂಚಿಸಿ’ ಎಂದು ನಿವೇದಿಸಿದ. ವೈದ್ಯರು ಚಿಕಿತ್ಸೆ ಪ್ರಾರಂಭಿಸಿದರು. ಅವನ ತಲೆ, ಹೊಟ್ಟೆ, ಎದೆ, ಕಾಲುಗಳು ಮತ್ತು ದೇಹದ ಬಹುಮುಖ್ಯ ಅಂಗಗಳನ್ನೆಲ್ಲ ಪರೀಕ್ಷಿಸಿದರು. ಎಲ್ಲವೂ ಸರಿಯಾಗಿಯೇ ಇತ್ತು. ರಕ್ತ ಪರೀಕ್ಷೆ, ಎಕ್ಸ್-ರೇ ಮಾಡಿದ್ದೂ ಆಯಿತು. ಯಾವ ಪ್ರಯೋಜನವೂ ಆಗಲಿಲ್ಲ. ಕಾಯಿಲೆಯನ್ನು ಗುರುತಿಸುವುದೇ ದೊಡ್ಡ ಸಮಸ್ಯೆಯಾಯಿತು! ಒಂದು ದಿನ ವೈದ್ಯರು ಅದೇನು ಯೋಚಿಸಿದರೋ ಏನೋ! ‘ಎಲ್ಲಿ ನಿನ್ನ ಕೈ ಬೆರಳನ್ನು ತೋರಿಸು’ ಎಂದರು. ರೋಗಿ ಹಾಗೇ ಮಾಡಿದ. ಬೆರಳು ನೋಡಿದ ವೈದ್ಯರು, ಅದರ ತುದಿಗೆ ಹುಣ್ಣಾಗಿರುವುದನ್ನು ಗಮನಿಸಿದರು. ನೋವಿನ ಕಾರಣವನ್ನು ಪತ್ತೆ ಮಾಡಿದರು. ಬೆರಳಲ್ಲಿ ಹುಣ್ಣಿದ್ದರೆ, ಯಾವ ಅಂಗವನ್ನು ಮುಟ್ಟಿದರು ಸಹಜವಾಗಿ ನೋವಾಗುತ್ತದೆ. ಆಗ ದೇಹದ ಇತರ ಅಂಗಗಳಿಗೆ ಪರೀಕ್ಷೆ ಅಥವಾ ಚಿಕಿತ್ಸೆ ನೀಡಿದರೇನು ಲಾಭ?!

ನಿಜ, ಮನುಷ್ಯನ ಸ್ಥಿತಿಯೂ ಹೀಗೆಯೇ. ಸಮಸ್ಯೆ ಇರುವ ಕಡೆ ಬಿಟ್ಟು ಉಳಿದೆಡೆ ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ. ನಮ್ಮ ಅಸಂತೋಷ, ಅಸಮಾಧಾನ, ಅಸಹನೆ, ಸಂಕಟ, ದುಃಖ, ನಿರಾಶೆ, ದುರಾಸೆ, ಅಹಂಕಾರ ಎಲ್ಲವೂ ಹೊರಗಿನಿಂದ ಬಂದ ಸಮಸ್ಯೆಗಳು ಎಂದು ಭಾವಿಸಿ ಅವ್ಯಕ್ತ ಸಂಕಟವನ್ನು ಅನುಭವಿಸುತ್ತೇವೆ. ಎಲ್ಲೆಲ್ಲೋ ಹೋಗಿ ಆ ಸಂಕಟಕ್ಕೆ ಪರಿಹಾರ ಹುಡುಕುತ್ತೇವೆ. ಈ ನಡುವೆ ಆತ್ಮೀಯರ ಸಾಂತ್ವನದ ಮಾತು ಹೇಳಿದ ಕೆಲಹೊತ್ತು ನಮ್ಮ ಸಮಸ್ಯೆ ಪರಿಹಾರವಾಯಿತು ಎಂದು ಭಾವಿಸಿ ನಿರಾಳತೆ ಅನುಭವಿಸುತ್ತೇವೆ. ದಿನ ಸರಿದಂತೆ ಮತ್ತದೇ ಸಂಕಟದ ಬಾಧೆಯನ್ನು ಶರೀರ ಮತ್ತು ಮನಸ್ಸು ಅನುಭವಿಸುತ್ತದೆ.

ಕಾರಣ, ಸಮಸ್ಯೆಗಳು ಹೊರಗಿನಿಂದ ಬಾರದೇ ನಮ್ಮೊಳಗೇ ಉದ್ಭವಗೊಂಡದ್ದಾಗಿವೆ. ಒಳಗಿನ ಸುಖ ಬಿಟ್ಟು ಹೊರಗಿನ ಸಂತೋಷವನ್ನು ಅರಸಲು ಹೊರಟ ನಮ್ಮ ಮನಸ್ಸು ಸಂಕಟವನ್ನು ಅನುಭವಿಸದೇ ಇರಲು ಹೇಗೆ ಸಾಧ್ಯ?! ಸುಖ, ಆನಂದ, ಆರೋಗ್ಯ ಇವು ನಾವು ಯಾರಿಂದ ಪಡೆಯಬಹುದು?! ಅದು ಅಂಗಡಿಯಲ್ಲಿ ಕೊಂಡುಕೊಳ್ಳುವ ವಸ್ತುವೇ?! ಹಾಗಾದರೆ ಅದು ಎಲ್ಲಿ ಲಭ್ಯ?! ಮಹಾಭಾರತದ ಶ್ಲೋಕವೊಂದು ಹೀಗೆ ಹೇಳುತ್ತದೆ-

ಆರೋಗ್ಯಂ ಅನೃಣ್ಯಂ ಅವಿಪ್ರವಾಸಃ

ಸಂಪ್ರತ್ಯಯಾ ವೃತ್ತಿಃ ಅಭೀತಿವಾಸಃ|

ಸದ್ಭಿಃ ಮನುಷ್ಯೆಃ ಸಹ ಸಂಪ್ರಯೋಗಃ

ಷಡ್ ಜೀವಲೋಕಸ್ಯ ಸುಖಾನಿ ರಾಜನ್||

ಅಂದರೆ ಆರೋಗ್ಯ, ಸಾಲರಹಿತ ಜೀವನ, ಆತ್ಮೀಯರ ಒಡನಾಟ, ನಂಬಿಕೆಯೋಗ್ಯ ಉದ್ಯೋಗ, ಭಯವಿಲ್ಲದ ಜೀವನ, ಸಜ್ಜನರ ಸಹವಾಸ ಈ ಆರು ಪ್ರಾಪಂಚಿಕ ಸುಖಗಳಾಗಿವೆ ಎಂದು.

ಹೌದು, ಈ ಸುಖಗಳು ಮನುಷ್ಯನಿಗೆ ದೊರೆಯುವಂತಾದರೆ ಅಥವಾ ನಾವು ಇದನ್ನು ಗಳಿಸಬಲ್ಲೆವಾದರೆ ನಾವು ಹೊರಗೆ ಸುಖ-ಸಂತೋಷಗಳನ್ನು ಹುಡುಕ ಬೇಕಿಲ್ಲ ಮತ್ತು ಅವುಗಳೆಲ್ಲ ಹೊರಗೆ ಸಿಗುಬಹುದಾದ ವಸ್ತುಗಳೂ ಅಲ್ಲ, ಅಲ್ಲವೇ?!

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net