

ಹಿರಿಯರೊಬ್ಬರು ಹೇಳಿದ ಘಟನೆ- ಅದೊಂದು ಹೆಚ್ಚಿನ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳ ತರಗತಿ. ಅಧ್ಯಾಪಕರೋರ್ವರು ಅವರ ಸಂಖ್ಯೆಗೆ ಅನುಗುಣವಾಗಿ ಬಲೂನುಗಳನ್ನು ಕೊಟ್ಟು ಅವುಗಳನ್ನು ಊದಿ ಗಾಳಿ ತುಂಬಿ ಅದರ ಮೇಲೆ ಹೆಸರು ಬರೆದು ಕೊಠಡಿಯಲ್ಲಿ ಹಾಕಬೇಕು ಎಂದು ಸೂಚಿಸಿದರು. ಅದರಂತೆ ವಿದ್ಯಾರ್ಥಿಗಳು ಮಾಡಿದರು. ಕೊಠಡಿ ತುಂಬ ಬಲೂನುಗಳು ತುಂಬಿದವು. ಅಧ್ಯಾಪಕರು ಅವುಗಳ ಸ್ಥಾನಪಲ್ಲಟವಾಗುವಂತೆ ಮಾಡಿ ಹೊರ ಬಂದು ವಿದ್ಯಾರ್ಥಿಗಳನ್ನು ಕರೆದು ‘ನಿಮಗೆ ಐದು ನಿಮಿಷಗಳ ಕಾಲಾವಕಾಶ ಕೊಡಲಾಗುತ್ತದೆ. ನಿಮ್ಮ ಹೆಸರಿರುವ ಬಲೂನುಗಳನ್ನು ಮಾತ್ರ ತರಬೇಕು, ಬೇರೊಬ್ಬರಿಗೆ ಹುಡುಕಲು ಸಹಾಯ ಮಾಡುವಂತಿಲ್ಲ’ ಎಂದರು. ಅದರಂತೆ ವಿದ್ಯಾರ್ಥಿಗಳು ಅವರವರ ಬಲೂನುಗಳನ್ನು ಹುಡುಕಿ ತರಲು ಮುಗಿಬಿದ್ದರು. ಬಲೂನು ಹುಡುಕುವ ಧಾವಂತದಲ್ಲಿ ಗದ್ದಲ ನಡೆಯಿತೇ ಹೊರತು ಯಾರೊಬ್ಬರೂ ಆ ಐದು ನಿಮಿಷದಲ್ಲಿ ಅವರ ಹೆಸರಿರುವ ಬಲೂನು ತರುವುದರಲ್ಲಿ ಯಶಸ್ವಿಯಾಗದೆ ನಿರಾಶರಾದರು. ನಂತರ ಅಧ್ಯಾಪಕರು ಅವರ ಈ ಆಟದ ನಿಯಮವನ್ನು ತುಸು ಬದಲಿಸಿ, ‘ನೋಡಿ, ಐದು ನಿಮಿಷದೊಳಗೆ ಈಗ ಅದೇ ಬಲೂನುಗಳನ್ನು ಒಬ್ಬರು ಒಂದನ್ನು ಎತ್ತಿಕೊಂಡು ಅದರ ಮೇಲೆ ಯಾರ ಹೆಸರಿರುತ್ತದೋ ಅವರಿಗೆ ತಲುಪಿಸಬೇಕು ಎಂದು ಸೂಚನೆಕೊಟ್ಟರು. ಆ ನಿಯಮದಂತೆ ವಿದ್ಯಾರ್ಥಿಗಳು ಧಾವಂತವಿಲ್ಲದೆ ಸಾವಕಾಶವಾಗಿ ಒಂದೊಂದು ಬಲೂನನ್ನು ಎತ್ತಿಕೊಂಡು ಅದರ ಮೇಲಿದ್ದ ಹೆಸರಿನವರಿಗೆ ತಲುಪಿಸಿದರು. ಈ ಕೆಲಸ ಗೊಂದಲವಿಲ್ಲದೆ ಐದು ನಿಮಿಷಗಳೊಳಗೆ ಮುಗಿಸಿ ನಿರಾಳರಾದರು. ಅಧ್ಯಾಪಕರು ಈ ಆಟದ ಬಗ್ಗೆ ವಿವರಿಸುತ್ತ- ‘ಈ ಬಲೂನಗಳನ್ನು ನಮ್ಮೊಳಗಿನ ಶಾಂತಿ, ನೆಮ್ಮದಿ, ಆನಂದ ಎಂದುಕೊಂಡು ಪ್ರತಿಯೊಬ್ಬ ಹುಡುಕುತ್ತಿದ್ದರೆ ನಾವೆಂದೂ ಅದನ್ನು ಕಂಡುಕೊಳ್ಳಲಾರೆವು ಮತ್ತು ಅದೆಂದೂ ನಮಗೆ ಸಿಗದು. ಅದೇ ಇತರರ ಶಾಂತಿ, ನೆಮ್ಮದಿ, ಆನಂದದ ಬಗ್ಗೆಯೂ ಕಾಳಜಿ ವಹಿಸಿ ಅದನ್ನು ಹುಡುಕಿಕೊಡುವ ಪ್ರಯತ್ನದಲ್ಲಿ ನಾವು ತೊಡಗಿದೆವಾದರೆ, ಇತರರ ಮೊಗದಲ್ಲಿ ಖುಷಿ ಕಾಣುತ್ತೇವೆ. ಅಲ್ಲದೆ, ನಮ್ಮೊಳಗೂ ಆ ಶಾಂತಿ, ನೆಮ್ಮದಿ, ಆನಂದ ನೆಲೆಗೊಳ್ಳಲು ಸಾಧ್ಯವಿದೆ’ ಎಂಬ ನೀತಿಯನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರು.
ಹೌದು, ನಾವು ಸುಖ-ಶಾಂತಿಯನ್ನು ಎಲ್ಲೋ ಹುಡುಕುತ್ತೇವೆ. ಸಿಗದಿದ್ದಾಗ ನಮ್ಮೊಳಗೆ ಖಿನ್ನತೆ ಆವರಿಸಿಕೊಳ್ಳುತ್ತದೆ. ಕಾರಣ ನಮ್ಮೊಳಗಿರುವ ಆನಂದ ಹುಡುಕದೆ ಇನ್ನೆಲ್ಲೋ ಹುಡುಕುವ ಪ್ರಯತ್ನದಲ್ಲಿ ತೊಡಗಿ ನಿರಾಶರಾಗುತ್ತೇವೆ. ಹಾಗಾದರೆ ಆ ಆನಂದ ಎಲ್ಲಿ ಸಿಗುತ್ತದೆ? ಆ ಆನಂದ ಸಿಕ್ಕಾಗ ನಮ್ಮ ವರ್ತನೆ ಹೇಗಿರಬೇಕು? ಎಂಬುದನ್ನು ಕವಿಸಂತ ನರಸಿಂಹ ಮೆಹ್ತಾ ಅವರ ಭಜನೆಯ ಸಾಲುಗಳು ವಿವರಿಸಿವೆ-
ವೈಷ್ಣವ ಜನ ತೋ ತೆನೆ ಕಹಿಯೆ ಜೆ
ಪೀಡ್ ಪರಾಯೀ ಜಾನೇರೆ
ಪರ್ ದುಃಖಿ ಉಪಕಾರ್ ಕರೆ ತೊಯೆ
ಮನ್ ಅಭಿಮಾನ್ ನಾ ಆನೇ ರೇ?
ಅಂದರೆ ‘ಎಲ್ಲರ ನೋವನ್ನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ. ಲೋಭ ವಿಲ್ಲದ ಉಪಕಾರವೇ ಸುಖವು ಗರ್ವವು ಬರದಿರೆ ಮನದಲ್ಲಿ’ ಎಂದು. ಹೌದು, ಪರರ ಸಂತೋಷದಲ್ಲಿ ಶಾಂತಿ-ನೆಮ್ಮದಿ ಕಾಣುವ ಆ ಸುಖಕ್ಕೆ ಸಾಟಿ ಯಾವುದಿದೆ?!
(ಲೇಖಕರು ಅಧ್ಯಾಪಕರು)