

ನಾ ಫೋನ್ ಎತ್ತೊದಕ್ಕ ಅಕಿ, ‘ಅವ್ವ ಇವತ್ತ ಮುಂಜಾನೆ ಹೋದ್ಲಪಾ. ಈಗ ನಮ್ಮ ಮನೆಯವರ ಎಲ್ಲ ಮುಗಿಸಿಕೊಂಡ ಬಂದರು’ ಅಂದ್ಲು. ನಂಗ ಒಮ್ಮಿಕ್ಕಲೇ ಗಾಬರಿ ಆತ. ಅವರವ್ವ ಅಂದರ ನನಗ ಖಾಸ ಸೋದರತ್ತಿ, ನಾವೆಲ್ಲ ಸರಸಕ್ಕ ಅತ್ಯಾ ಅಂತ ಕರಿತಿದ್ವಿ. ನಾ ‘ಅಯ್ಯೋ ದೇವರ ಏನಾಗಿತ್ತ್?’ ಅಂತ ಕೇಳಿದರ, ‘ಗಾಬರಿ ಆಗಬ್ಯಾಡ. ಅಕಿಗೇನ ಕರೊನಾ ಆಗಿದ್ದಿಲ್ಲ, ವಯಸ್ಸ ಆಗಿತ್ತ ಹಾರ್ಟ್ಅಟ್ಯಾಕ ಆಗಿ ಹೋದ್ಲ’ ಅಂತ ಅಂದ್ಲು. ಹಂಗ ನಮ್ಮ ಅತ್ತಿಗೆ 88 ದಾಟಿತ್ತ ಬಿಡ್ರಿ, ನಮ್ಮಪ್ಪನಕಿಂತ ದೊಡ್ದೊಕಿ, ಇಷ್ಟ ವರ್ಷ ಇದ್ದದ್ದ ಗ್ರೇಟ್. ಆದರು ಹಿರೇಮನಷ್ಯಾಳು, ವಟ- ವಟಾ ಅಂತ ಎಲ್ಲಾರ ಜೀವಾ ತಿನ್ನೋ ಜೀವಾ ಅಂತ ಒಂದ ಇತ್ತ ಅದು ಹೋತಲಾ ಅಂತ ಕೆಟ್ಟ ಅನಸ್ತ.
‘ಹುಬ್ಬಳ್ಳಿ-ಧಾರವಾಡ ಮಂದಿಗೆಲ್ಲ ನೀನ ಹೇಳಿ ಬಿಡ, ನಾ ಎಲ್ಲೆ ಮತ್ತ ಎಲ್ಲಾರಿಗೂ ಫೋನ್ ಮಾಡ್ಕೋತ ಕೂಡ್ಲಿ’ ಅಂತ ಹೇಳಿ ಫೋನ್ ಇಟ್ಟಳು. ನಾ ಯಾರ ಯಾರಿಗೆ ನೀರ ಅದ, ಮೈಲಗಿ ಅದ ಅವರಿಗೆ ಮುದ್ದಾಂ ಹೇಳಿ ನಮ್ಮ ಮನ್ಯಾಗಿನವರಿಗೆ ಪೆಂಡಿಂಗ್ ಇಟ್ಟೆ. ಇನ್ನ ನಮ್ಮವ್ವಗ ಹೇಳಿದರ ಇಕಿ ಅಲ್ಲೆ ಮುಟ್ಟಬ್ಯಾಡಾ, ಇಲ್ಲೇ ಮುಟ್ಟಬ್ಯಾಡಾ ಅಂತ ಏನೇನರ ರೂಲ್ಸ್ ತಗಿತಾಳ ತಡಿ ಅಂತ ವಿಚಾರ ಮಾಡಿ ನನ್ನವು ಇಂಪಾರ್ಟೇಂಟ್ ಕೆಲಸ ಎಲ್ಲ ಮುಗಿಸ್ಕೊಂಡ ಮನಿಗೆ ಹೋಗಿ ಊಟಾ ಹೊಡದ ಆಮ್ಯಾಲೆ ನಮ್ಮವ್ವಗ, ‘ಅವ್ವಾ ಸರಸಕ್ಕ ಅತ್ಯಾ ಹೋದ್ಲಂತ ಇವತ್ತ ಮುಂಜಾನೆ’ ಅಂತ ಅಗದಿ ಕ್ಯಾಜುವಲ್ ಆಗಿ ಹೇಳಿದೆ. ನಮ್ಮವ್ವ ಯಾಕ ಏನಾಗಿತ್ತು ಅಂತ ಎಲ್ಲ ಕಥಿ ಕೇಳಿ ಕಡಿಕೆ, ‘ಶಾಣ್ಯಾ ಇದ್ದೀ ಇಷ್ಟೋ ತನಕ ಬಿಟ್ಟ ಈಗ ಹೇಳ್ತಿ ಅಲಾ, ನಿನಗೂ ನೀರ ಅದ ನೀರ ಹಾಕ್ಕೊ ನಡಿ’ ಅಂತ ಬಚ್ಚಲಕ್ಕ ಅಟ್ಟಿದ್ಲು.
ಹಂಗ ನಮ್ಮ ಸರಸಕ್ಕ ಅತ್ಯಾ ಇವತ್ತ ನಾಳೆ ಅಂತ ಅನಲಿಕತ್ತ ಒಂದ ಎರಡ ವರ್ಷ ಆಗಿತ್ತ. ಹಿಂಗಾಗಿ ಅಕಿ ಹೋಗಿದ್ದು ಭಾಳ ದುಃಖ ಅನಸಲಿಲ್ಲ, ಟ್ಟಚ್ಚಠಿಜ್ಚಿಚ್ಝ್ಝ ಹೇಳಬೇಕಂದರ ಛಲೋನ ಆತ ಅನ್ನರಿ. ಪಾಪ ಅಕಿನೂ ಅನುಭವಸೋಕಿ, ಮಾಡೋರ ಅನುಭವಸೋರ. ನಾ ಬಚ್ಚಲದಿಂದ ಇನ್ನೂ ಹೊರಗ ಬರೋ ಪುರಸತ್ತ ಇಲ್ಲದ ನಮ್ಮವ್ವ ಮುಂದಿಂದ ಹೆಂಗ ಅಂತ ಅಂದ್ಲು. ‘ನೀ ಮುಂದಿಂದ ನಂಗ ಕೇಳಿದರ ನಂಗೇನ ಗೊತ್ತ... ನೀ ಏನ ಮಾತಾಡಸಲಿಕ್ಕೆ, ಧರ್ವೇದಕ ಬಿಡಲಿಕ್ಕೆ ಪುಣೆಕ್ಕ ಹೋಗೋಕಿನ’ ಅಂತ ನಾ ಅಂದರ, ‘ಹಂಗ ಅಲ್ಲೋ... ಹಿರೇಮನಷ್ಯಾಳಪಾ, ಎಲ್ಲ ಪ್ರಾಂತಾಗಿ ಮಾಡಬೇಕು’ ಅಂತ ರಾಗಾ ತಗದ್ಲು. ‘ನಮ್ಮವ್ವಾ... ನೀ ನನ್ನ ಜೀವಾ ತಿನ್ನಬ್ಯಾಡ, ಕ್ರಿಯಾಕರ್ವ ಎಲ್ಲ ಅಕಿ ಮಗಾ-ಅಳಿಯಾ ಮಾಡ್ಕೋತಾರ, ನಮಗ್ಯಾರಿಗೂ ಅಲ್ಲೆ ಹೋಗಲಿಕ್ಕೆ ಆಗಂಗಿಲ್ಲ, ಎರಡ ರವಾ ಉಂಡಿ ಕೋರಿಯರ್ ಒಳಗ ತರಿಸ್ಗೋತೇನಿ, ನೀ ಸುಮ್ಮನ ಕೂಡ’ ಅಂತ ಜೋರ ಮಾಡಿದೆ.
ಹಂಗ ನಾವ ಮಾತಾಡಸಲಿಕ್ಕೆ ಮಹಾರಾಷ್ಟ್ರಕ್ಕ ಏನೋ ಹೋಗಬಹುದು. ಆದರ ವಾಪಸ್ ಬರಬೇಕಾರ ಬಾರ್ಡರ್ನಾಗ ಭಾಳ ತ್ರಾಸ ಇತ್ತ. ಕರ್ನಾಟಕ ಬಾರ್ಡರ್ ಒಳಗ ಆರ್ಟಿಪಿಸಿಆರ್ ಟೆಸ್ಟ್ ಕಂಪಲ್ಸರಿ ಇತ್ತ. ‘ಇಕಾ, ನೋಡಿಲ್ಲೆ ನಿಂಗ ಮೊದ್ಲ ಮೈಲಗಿ ಇರ್ತದ, ಮ್ಯಾಲೆ ನೀ ಮಾತಾಡಸಲಿಕ್ಕೆ ಹೋಗಿ ಬರಬೇಕಾರ ಬಾರ್ಡರನಾಗ ಆರ್ಟಿಪಿಸಿಆರ್ ಟೆಸ್ಟ್ ಚೆಕ್ ಮಾಡಿದ ಮ್ಯಾಲೆ ಪಾಸಿಟಿವ್ ಬಂದರ ಮತ್ತ ಕ್ವಾರಂಟೈನ್ ಮಾಡ್ತಾರ. ಹಿಂಗ ಮೈಲಗಿ ಒಳಗ ಕ್ವಾರೆಂಟೈನ್ ಮಾಡಿದರ ಮೈಲಗಿ ದೊಡ್ಡದೊ ಇಲ್ಲ ಕ್ವಾರೆಂಟೈನ್ ದೊಡ್ಡದೊ ಅಂತ ಜೆ.ವಿ.ಆಚಾರ ಡಾಕ್ಟರಗೆ ಕೇಳಬೇಕೊ ಇಲ್ಲ ರವಿ ಆಚಾರ್ಯರಿಗೆ ಕೇಳಬೇಕೊ ನಂಗೊತ್ತಿಲ್ಲ, ಹಿಂಗಾಗಿ ನೀ ಮಾತಾಡಸಲಿಕ್ಕೆ ಹೋಗೊದ ಮರತ ಬಿಡ’ ಅಂತ ನಮ್ಮವ್ವಗ ಗಪ್ ಕೂಡಿಸಿದೆ.
ಅಲ್ಲ, ಇಲ್ಲೆ ನಾವ ದೋಸ್ತರ ಏನರ ಇಂಪಾರ್ಟೇಂಟ್ ಕೆಲಸ ಇದ್ದಾಗ ಮಹಾರಾಷ್ಟ್ರಕ್ಕ ವಾಯಾ ಗೋವಾ ಅಡ್ಡಾಡತಿದ್ವೆ. ಹಂಗ ನಮಗ ಗೋವಾಕ್ಕ ಹೋಗ್ಲಿಕ್ಕೆ ಏನರ ನೇವಾ ಸಿಕ್ಕರ ಸಾಕ ಬಿಡ್ರಿ. ಆದರ ಧರ್ವೇದಕ ಬಿಡಲಿಕ್ಕೆ ಯಾರ ವಾಯಾ ಗೋವಾ ಹೋಗ್ತಾರ ನೀವ ಹೇಳ್ರಿ? ಹಂಗ ನಾ ವಾಯಾ ಗೋವಾ ಧರ್ವೇದಕ ಬಿಡಲಿಕ್ಕೆ ಹೋಗಿದ್ದೆ ಅಂದರ ಯಾರರ ನಂಬತಾರ? ಆದರೂ ನಮ್ಮವ್ವನ ಕಾಟಕ್ಕ ಮುಂದಿನ ಕಾರ್ಯಕ್ರಮ ಹೆಂಗ ಅಂತ ಕೇಳಲಿಕ್ಕೆ ಸುಮಕ್ಕಗ ಫೋನ್ ಮಾಡಿದೆ.
‘ನಾವ ಎಲ್ಲ ಇಲ್ಲೇ ಮನಿಪೂರ್ತೇಕ ಮಾಡ್ಕೋತೇವಿ, ನೀವೇನ ತ್ರಾಸ ತೊಗೊಂಡ ಬರಲಿಕ್ಕೆ ಹೋಗಬ್ಯಾಡ್ರಿ, ರವಾ ಉಂಡಿ ಕೋರಿಯರ್ ಕಳಸ್ತೇವಿ’ ಅಂತ ಅಗದಿ ಪ್ರಾ್ಯಕ್ಟಿಕಲ್ ಆಗಿ ಹೇಳಿದ್ಲು. ಹೇಳಿಕೇಳಿ ಮರಾಠಿ ಮಾಣುಸ್, ಭಾರಿ ಪ್ರಾ್ಯಕ್ಟಿಕಲ್ ಇರ್ತಾರ. ನಂಗೂ ಅದ ಬೇಕಾಗಿತ್ತ. ಆದರ ನಮ್ಮವ್ವ ಸುಮ್ಮನ ಕೂಡ್ಲಿಲ್ಲ, ‘ಅಲ್ಲೋ ನಾವ ತವರಮನಿಯವರ ಆಗಿ ಧರ್ವೇದಕಕ್ಕ ಹೋಗಲಿಲ್ಲ ಅಂದರ ಹೆಂಗ, ಅದರಾಗ ನೀ ಸೋದರಮಾವನ ಮಗಾಪಾ, ಹೋಗಬೇಕ’ ಅಂತ ಗಂಟ ಬಿದ್ಲು. ನಂಗ ಹುಚ್ಚ ಹಿಡಿಯೋದ ಒಂದ ಬಾಕಿ ಇತ್ತ. ಅಷ್ಟರಾಗ ನನ್ನ ಹೆಂಡ್ತಿ ಸುಮ್ಮನ ಕೂಡಬೇಕೊ ಬ್ಯಾಡೋ, ‘ವಾಟ್ಸ್ಆಪ್ ಒಳಗ ವಿಡಿಯೋ ಕಾಲ್ ಹಚ್ಚಿ ಕೊಡ್ತೇನಿ, ಇಲ್ಲಿಂದ ಧರ್ವೇದಕ ಬಿಡ್ರಿ’ ಅಂತ ಅಂದ್ಳು. ‘ನೀ ಗಪ್ ಕೂಡ, ಏನೇನರ ಮಾತಾಡಬ್ಯಾಡ. ನಾ ಲಗ್ನ ಆಗಿ ಹೋಸ್ದಾಗಿ ಬಂದಾಗ ನಮ್ಮನ್ನ ಮನಿ ತುಂಬಿಸಿಕೊಂಡೇಕಿನ ಸರಸಕ್ಕ, ಆಡೂರ ಮನೆತನದ ಸೊಸೆಯಂದರೆಲ್ಲ ನಮ್ಮ ಅತ್ತಿಕಿಂತಾ ಜಾಸ್ತಿ ಸರಸಕ್ಕಗ ಹೆದರತಿದ್ವಿ, ಅಷ್ಟ ಸ್ಟ್ರಿಕ್ಟ ಇದ್ಲು...’ ಅಂತ ಸರಸಕ್ಕನ ಮ್ಯಾಲಿನ ಸಿಟ್ಟ ತನ್ನ ಸೊಸಿ ಮ್ಯಾಲೆ ಹಾಕಿ ಬೈದ್ಲು.
ನಮ್ಮವ್ವ ಐವತ್ತ ವರ್ಷದ ಹಿಂದಿನ ಫ್ಲಾ್ಯಶ್ಬ್ಯಾಕಿಗೆ ಹೋಗಿದ್ದ ನೋಡಿ ಇನ್ನ ಇಕಿ ಹಳೇ ಸುದ್ದಿ ಎಲ್ಲ ತಕ್ಕೊಂಡ ಕೂಡ್ತಾಳ ಅಂತ ನಾ, ‘ಸಾಕ ಮುಗಸ.. ನೀ ಮಾತಾಡಸಲಿಕ್ಕೆ ಹೋಗ್ತಿದ್ದರ ಹೋಗ, ಪುಣಾದಾಗಿನ ಪರಿಸ್ಥಿತಿ ಹೆಂಗ ಅದ ಅಂತ ನಿಂಗ ಹೇಳೇನಿ, ಇನ್ನ ಅದಕ್ಕೂ ಮೀರಿ ಹೋಗಿ ನಿನಗೇನರ ಮತ್ತೇನರ ಹೆಚ್ಚುಕಡಮಿ ಆಗಿ ಮಂದಿ ನನಗ ಮಾತಾಡಸಲಿಕ್ಕೆ ಬರೋಹಂಗ ಆದರ ನಂಗೋತ್ತಿಲ್ಲ ಮತ್ತ’ ಅಂದ ಮ್ಯಾಲೆ ಸ್ವಲ್ಪ ಶಾಂತ ಆದ್ಲ. ಮುಂದ ರಾತ್ರಿ ಸುಮ್ಮಕ್ಕಗ ಮತ್ತ ಫೋನ್ ಮಾಡಿ ನಮ್ಮವ್ವನ ಕೈಯಾಗ ಕೊಟ್ಟೆ, ನಮ್ಮವ್ವ, ‘ಎಲ್ಲ ಮುಗಿತಿನ್ವಾ, ಪಾಪ..ನಿಮ್ಮವ್ವ ಭಾಳ ಅನುಭವಿಸಿದ್ಲು. ಆದರೂ ಇನ್ನೊಂದ ಸ್ವಲ್ಪ ದಿವಸ ಇರಬೇಕಿತ್ತು’ ಅಂತ ಅದು-ಇದು ಮಾತಾಡಿ ಲಾಸ್ಟಿಗೆ ‘ನಮಗೇನ ಮಾತಾಡಸಲಿಕ್ಕೆ, ಧರ್ವೇದಕಕ್ಕ ಬರಲಿಕ್ಕೆ ಆಗಂಗಿಲ್ವಾ, ನೀನ ಇತ್ತಲಾಗ ಬಂದಾಗ ನಮ್ಮ ಮನಿಗೆ ಬಂದ ಮಾತಾಡಿಸ್ಗೊಂಡ ಹೋಗು’ ಅಂತ ಅಂದ ಬಿಟ್ಲು.
ನಾ ಒಮ್ಮಿಕ್ಕಲೇ ಗಾಬರಿ ಆದೆ. ಹೆಂತಾ ಪರಿವರ್ತನೆ ಬಂತ ನಮ್ಮವ್ವನ ಒಳಗ ಅನಸ್ತ. ನಾ ಬರೇ ನೀ ಪುಣಾಕ್ಕ ಮಾತಾಡಸಲಿಕ್ಕೆ ಹೋದರ ಜನಾ ನಂಗ ಮಾತಾಡಸಲಿಕ್ಕೆ ಬರ್ತಾರ ಅಂದಿದ್ದಕ್ಕ ಇಕಿ ಪಾಪ ಆ ಸತ್ತವರ ಮನ್ಯಾಗಿನವರಿಗೆ ನೀವ ನಮ್ಮ ಮನಿಕಡೆ ಬಂದಾಗ ಮಾತಾಡಿಸ್ಗೊಂಡ ಹೋಗ್ರಿ ಅಂದ್ಲಲಾ ಅಂತ ಆಶ್ಚರ್ಯ ಆತ. ಆದರ ಭಾರಿ ಪ್ರಾ್ಯಕ್ಟಿಕಲ್ ಅನಸ್ತ ಬಿಡ್ರಿ. ಹಂಗ ಕರೊನಾ ಜೀವನದಾಗ ಎಲ್ಲಾರಿಗೂ ಭಾಳ ಪಾಠಾ ಕಲಿಸೇದ ತೋಗೊರಿ. ಈಗ ಪ್ರಾ್ಯಕ್ಟಿಕಲ್ ಆಗಿ ನಾವ ಜೀವಂತ ಇರೋದ ಇಂಪಾರ್ಟೆಂಟ್ ಹೊರತು ಮೈಲಗಿ-ಮಡಿ-ರಿದ್ದಿ ಅಂತ ಕೂತಗೊಂಡರ ಆಗಂಗಿಲ್ಲ. ಕಾಲಾಯ ತಸ್ಮೈ ನಮಃ.
(ಲೇಖಕರು ಹಾಸ್ಯ ಬರಹಗಾರರು)