ಕ್ರೀಡೆಯಲ್ಲಿ ಭಾರತ ಸೂಪರ್ ಪವರ್ ಆಗುವುದು ಯಾವಾಗ?

Olympics
Published on
Savyasachi
ಎಪ್ಪತ್ತೆರಡು ಸಾವಿರ ಜನಸಂಖ್ಯೆಯ ಡೊಮಿನಿಕ ದ್ವೀಪಕ್ಕೆ ಟ್ರಿಪಲ್ ಜಂಪ್ ಚಿನ್ನ. 1 ಲಕ್ಷ 80 ಸಾವಿರ ಜನಸಂಖ್ಯೆಯ ಸೇಂಟ್ ಲೂಸಿಯ ದ್ವೀಪಕ್ಕೆ ಮಹಿಳೆಯರ 100 ಮೀ. ಓಟದಲ್ಲಿ ಚಿನ್ನ. 52 ಲಕ್ಷ ಜನಸಂಖ್ಯೆಯ ನ್ಯೂಜಿಲೆಂಡ್​ಗೆ 10 ಚಿನ್ನದ ಪದಕ. 140 ಕೋಟಿ ಜನಸಂಖ್ಯೆಯ ಭಾರತ ಗೆದ್ದ ಚಿನ್ನ ಶೂನ್ಯ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ವಿವಿಧ ರಾಷ್ಟ್ರಗಳ ಪದಕ ಸಾಧನೆ ಗಮನಿಸುವಾಗ, ಒಂದೆಡೆ ಅಚ್ಚರಿಯಾದರೆ, ಇನ್ನೊಂದೆಡೆ ನಾವೇಕೆ ಹೀಗೆ ಎಂಬ ಬೇಸರ.

ಜುಲೈ-ಆಗಸ್ಟ್​ನಲ್ಲಿ ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 184 ದೇಶಗಳ 10,500 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇದರಲ್ಲಿ 91 ದೇಶಗಳು ಪದಕ ಪಟ್ಟಿಯಲ್ಲಿ ಕಾಣಿಸಿಕೊಂಡವು. 594 ಅಥ್ಲೀಟ್​ಗಳ ಜಂಬೋಟೀಮ್ ಕಳುಹಿಸಿದ್ದ ಅಮೆರಿಕ 40 ಚಿನ್ನ, 44 ಬೆಳ್ಳಿ, 46 ಕಂಚಿನೊಂದಿಗೆ ಒಟ್ಟು 126 ಪದಕ ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಕೇವಲ 7 ಕ್ರೀಡಾಪಟುಗಳನ್ನು ಕಳುಹಿಸಿದ್ದ ಪಾಕಿಸ್ತಾನವೂ ಅರ್ಷದ್ ನದೀಂ ಜಾವೆಲಿನ್ ಚಿನ್ನ ಗೆಲ್ಲುವುದರೊಂದಿಗೆ ಪದಕ ಪಟ್ಟಿಯಲ್ಲಿ 63ನೇ ಸ್ಥಾನ ಸಂಪಾದಿಸಿತು. ಆದರೆ, 16 ವಿವಿಧ ಕ್ರೀಡೆಗಳಲ್ಲಿ 117 ಕ್ರೀಡಾಪಟುಗಳನ್ನು ಪ್ಯಾರಿಸ್​ಗೆ ಕಳಿಸಿದ್ದ ಭಾರತಕ್ಕೆ ದಕ್ಕಿದ್ದು ಕೇವಲ 6 ಪದಕ. ಕೇವಲ ಒಂದು ಬೆಳ್ಳಿ, 5 ಕಂಚು, 4 ನಾಲ್ಕನೇ ಸ್ಥಾನದ ಸಾಧನೆಯಷ್ಟೇ ಭಾರತ ಹೇಳಿಕೊಳ್ಳುವುದಕ್ಕೆ ಉಳಿದಿದ್ದು.

ಹೀಗೇಕಾಯಿತು?: ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಯ ದಿಕ್ಕಿನಲ್ಲಿ ಮುನ್ನುಗ್ಗುತ್ತಿರುವ, ಆರ್ಥಿಕತೆಯಲ್ಲೂ ವಿಶ್ವದಲ್ಲೇ 3ನೇ ಸ್ಥಾನಕ್ಕೆ ಲಗ್ಗೆ ಹಾಕಲು ತುದಿಗಾಲಲ್ಲಿ ನಿಂತಿರುವ ಭಾರತ ಒಲಿಂಪಿಕ್ಸ್​ನಲ್ಲಿ ಮುಗ್ಗರಿಸುತ್ತಿರುವುದೇಕೆ? 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನ ಗೆದ್ದಿದ್ದ ಚೀನಾ, ಅಲ್ಲಿಂದೀಚೆಗೆ ಒಟ್ಟು 303 ಚಿನ್ನ ಗೆದ್ದಿದೆ. ಆದರೆ, ಭಾರತ ಇಲ್ಲಿಯವರೆಗೆ ಗೆದ್ದಿರುವುದು ಕೇವಲ 10 ಚಿನ್ನ. ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿರುವ ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ

ಮಾತ್ರ ಸ್ಪರ್ಧೆ ಒಡ್ಡುವುದಿರಲಿ, ಕನಿಷ್ಠ ಗೌರವ ಉಳಿಸಿಕೊಳ್ಳುವಂಥ ಪ್ರದರ್ಶನ ನೀಡುವುದೂ ಏಕೆ ಸಾಧ್ಯವಾಗುತ್ತಿಲ್ಲ?
ಸರ್ಕಾರ ಮನಸ್ಸು ಮಾಡಬೇಕು: ಎಲ್ಲದಕ್ಕಿಂತ ಮೊದಲನೆಯದಾಗಿ ಸರ್ಕಾರ ಮನಸ್ಸು ಮಾಡಬೇಕು. ಚೀನಾ ಜಾಗತಿಕ ಸೂಪರ್ ಪವರ್ ಆಗಿ ಬೆಳೆಯುವುದಕ್ಕೆ, ಅಮೆರಿಕಕ್ಕೆ ಸೆಡ್ಡು ಹೊಡೆಯುವುದಕ್ಕೆ ಕ್ರೀಡೆಯನ್ನೂ ಒಂದು ಸಾಧನವಾಗಿ ಬಳಸಿಕೊಂಡಿತು. ಒಲಿಂಪಿಕ್ಸ್ ಯಶಸ್ಸಿಗಾಗಿ ದಶಕಗಳ ಪ್ಲಾ್ಯನಿಂಗ್ ನಡೆಸಿದ ಚೀನಾ ಕೊನೆಗೂ 1984ರ ಒಲಿಂಪಿಕ್ಸ್​ನಲ್ಲಿ ಪ್ರಪ್ರಥಮ ಚಿನ್ನ ಮಾತ್ರವಲ್ಲದೆ ಒಟ್ಟು 15 ಚಿನ್ನ ಗೆಲ್ಲುವ ಮೂಲಕ ತನ್ನ ಪ್ರವರ್ಧಮಾನ ಸಾರಿತು. ಅಲ್ಲಿಂದ ಮುಂದೆ ಕೂಟದಿಂದ ಕೂಟಕ್ಕೆ ಚೀನಾ ಪ್ರಾಬಲ್ಯ ವಿಸ್ತರಿಸಿತು. 2008ರಲ್ಲಿ ಬೀಜಿಂಗ್​ನಲ್ಲೇ ಒಲಿಂಪಿಕ್ಸ್ ನಡೆದಾಗ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೂ ಏರಿದ ಚೀನಾ, ಮೊನ್ನೆ ಪ್ಯಾರಿಸ್​ನಲ್ಲೂ ಅಮೆರಿಕದಷ್ಟೇ ಅಂದರೆ, ತಲಾ 40 ಚಿನ್ನ ಗೆದ್ದು ಅಗ್ರಗೌರವ ಹಂಚಿಕೊಂಡಿತು. ಚೀನಾಕ್ಕೆ ಸಾಧ್ಯವಾಗಿದ್ದು ಭಾರತಕ್ಕೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಕಾರಣ ಹಲವು.

ಭಾರತ ಒಲಿಂಪಿಕ್ಸ್ ಕೂಟದಲ್ಲಿ ಗಮನಾರ್ಹ ಸಾಧನೆ ಮಾಡಬೇಕಾದರೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಮೊಟ್ಟಮೊದಲನೆಯದಾಗಿ ಕ್ರೀಡಾ ಸಂಸ್ಥೆಗಳು, ಒಕ್ಕೂಟಗಳಿಂದ ರಾಜಕೀಯ ವ್ಯಕ್ತಿಗಳನ್ನು ಹೊರಹಾಕಬೇಕು. ದೇಶದ ಹೆಚ್ಚಿನ ಕ್ರೀಡಾ ಸಂಸ್ಥೆಗಳು ಕಳೆದ 20-30-40 ವರ್ಷಗಳಿಂದ ಕೆಲವು ಪಕ್ಷಗಳು, ಕೆಲವು ಕುಟುಂಬಗಳು, ಕೆಲವು ವ್ಯಕ್ತಿಗಳ ಹಿಡಿತದಲ್ಲೇ ಇದೆ. ಈ ಪಟ್ಟಭದ್ರರು ಎಷ್ಟು ಪ್ರಭಾವಿಗಳೆಂದರೆ, ಕೇಂದ್ರದಲ್ಲಿ ಬಂದ ಸರ್ಕಾರಗಳಿಗೆ 25 ವರ್ಷದಿಂದ ಒಂದು ಸಮಗ್ರ ಕ್ರೀಡಾನೀತಿ ಜಾರಿಗೆ ತರಲು ಬಿಡುತ್ತಿಲ್ಲ. ಕೇಂದ್ರ ಯಾವುದೇ ಸುಧಾರಣಾ ಕ್ರಮಕ್ಕೆ ಕೈಹಾಕಿದ ಕೂಡಲೇ ಈ ಪ್ರಭಾವಿಗಳು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸುತ್ತಾರೆ. ಸರ್ಕಾರದ ಹಸ್ತಕ್ಷೇಪದ ನೆಪದಲ್ಲಿ ಅಂತಾರಾಷ್ಟ್ರೀಯ ನಿಷೇಧದ ಬೆದರಿಕೆ ಒಡ್ಡುತ್ತಾರೆ. ಸುಪ್ರಿಂ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆಗಳನ್ನು ತರುತ್ತಾರೆ. ಈ ರಾಜಕೀಯವನ್ನು ಮೆಟ್ಟಿನಿಂತು ಒಲಿಂಪಿಕ್ಸ್​ನಲ್ಲಿ

ಸಾಧನೆಯ ಮೆಟ್ಟಿಲೇರಬೇಕಾದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಬಲವಾದ ಇಚ್ಛಾಶಕ್ತಿ ಬೇಕು, ಸ್ಪಷ್ಟವಾದ ಗುರಿ, ರೂಪುರೇಷೆ ಬೇಕು. ಓರ್ವ ಸಮರ್ಥ, ಕ್ರೀಡೆಯ ಬಗ್ಗೆ ಮಾಹಿತಿ, ಕಾಳಜಿ ಇರುವ ಸಂಪುಟ ದರ್ಜೆ ಕ್ರೀಡಾ ಸಚಿವ ಬೇಕು, ರಾಜಕೀಯಶಕ್ತಿ ಎದುರು ಹಾಕಿಕೊಂಡು ಜಯಿಸಬಲ್ಲ ಸಮರ್ಥ ಐಎಎಸ್ ಅಧಿಕಾರಿಗಳು ಕ್ರೀಡಾ ಸಚಿವಾಲಯಕ್ಕೆ ಬರಬೇಕು. ಒಲಿಂಪಿಕ್ಸ್​ಗೆ ದೇಶದ ಪ್ಲಾ್ಯನಿಂಗ್, ಧೋರಣೆ, ಹಣಕಾಸು ನೆರವು ಎಲ್ಲವೂ ಬದಲಾಗಬೇಕು.

ಸಸಿ ನೆಟ್ಟು ಬೆಳೆಸಬೇಕು: ಗಿಡವಾಗಿ ಬಗ್ಗದ್ದು, ಮರವಾಗಿ ಬಾಗೀತೇ ಎಂಬ ಗಾದೆಮಾತು ದೇಶಕ್ಕೆ ಅರ್ಥವಾಗುತ್ತಿಲ್ಲ. 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಚೀನಾದಲ್ಲಿ 2012ರಲ್ಲೇ ತರಬೇತಿ ಆರಂಭವಾಗಿರುತ್ತದೆ. ಅಂದರೆ, ನಿರ್ದಿಷ್ಟ ಕ್ರೀಡೆಗಳಿಗೆ ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಆಯ್ಕೆ ಮಾಡಿ ಅವರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತದೆ. ಚೀನಾ ಒಲಿಂಪಿಕ್ಸ್ ತಂಡಗಳನ್ನು ಗಮನಿಸಿದರೆ, ಸತತವಾಗಿ 2, 3, 4 ಒಲಿಂಪಿಕ್ಸ್​ನಲ್ಲಿ

ಸ್ಪರ್ಧಿಸುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇರುತ್ತದೆ. ಕೆಲವು ಚಾಂಪಿಯನ್ನರು ಮಾತ್ರ ಮರಳಿ ಬಂದಿರುತ್ತಾರೆ. ಉಳಿದಂತೆ 90 ಶೇ. ಪ್ರತೀ ಒಲಿಂಪಿಕ್ಸ್​ನಲ್ಲೂ ಹೊಸಬರಿರುತ್ತಾರೆ. ಅದರಲ್ಲೂ 16ರಿಂದ 25 ವಯೋಮಾನದವರೇ ಹೆಚ್ಚಿರುತ್ತಾರೆ. ಅಂದರೆ ಮಕ್ಕಳನ್ನು 5, 6, 7ನೇ ವಯಸ್ಸಿನಲ್ಲೇ ಆಯ್ಕೆ ಮಾಡಿಕೊಂಡು ಅವರಿಗೆ ಒಲಿಂಪಿಕ್ಸ್ ಸಲುವಾಗಿಯೇ ತರಬೇತಿ ನೀಡಲಾಗುತ್ತದೆ. ಆದರೆ, ಭಾರತದಲ್ಲಿ ಬಾಲ್ಯಾವಸ್ಥೆಯಿಂದಲೇ ಮಕ್ಕಳಿಗೆ ಒಲಿಂಪಿಕ್ಸ್​ಗೆಂದೇ ತರಬೇತಿ ನೀಡಿ ಸಜ್ಜುಗೊಳಿಸುವ ರಾಷ್ಟ್ರೀಯ ಕಾರ್ಯಕ್ರಮಗಳೇ ಇಲ್ಲ. ಬದಲಿಗೆ ನಮ್ಮ ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್ ಅಥವಾ ಟಾಪ್ಸ್​ನಂಥ ಕಾರ್ಯಕ್ರಮಗಳು ಬೇರೆಬೇರೆ ಕ್ರೀಡೆಗಳಲ್ಲಿ ವೈಯಕ್ತಿಕ ಪ್ರತಿಭೆ, ಪರಿಶ್ರಮದಿಂದ ಒಂದಷ್ಟು ಸಾಧನೆ ಮಾಡಿರುವ, ಹೆಸರು ಮಾಡಿರುವ ಕ್ರೀಡಾಪಟುಗಳ ಮೇಲೆ ಬಂಡವಾಳ ಹೂಡಿ, ಅವರಿಂದ ಪದಕ ನಿರೀಕ್ಷೆ ಮಾಡಲಾಗುತ್ತದೆ. ಸ್ವಂತ ಪರಿಶ್ರಮದಿಂದ ಮೇಲೆ ಬಂದ ಸೈನಾ ನೆಹ್ವಾಲ್, ಪಿವಿ ಸಿಂಧು, ಅಭಿನವ್ ಬಿಂದ್ರಾ ಅಥವಾ ನೀರಜ್ ಚೋಪ್ರಾ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದರೆ, ಅದು ಅವರ ವ್ಯಕ್ತಿಗತ ಸಾಧನೆಯೇ ಹೊರತು ದೇಶದ ಒಲಿಂಪಿಕ್ಸ್ ಕಾರ್ಯಕ್ರಮಗಳ ಯಶಸ್ಸಲ್ಲ.

ಕ್ರಿಯಾಯೋಜನೆ ಎಲ್ಲಿದೆ?: ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದಕ್ಕೆ ಒಂದು ಕ್ರಿಯಾಯೋಜನೆ ಬೇಕು. ಪ್ರತಿಯೊಂದು ಕ್ರೀಡೆಯಲ್ಲೂ ಒಲಿಂಪಿಕ್ಸ್ ಪದಕ ಸಾಧನೆಯ ಪ್ರದರ್ಶನ ಮಟ್ಟವನ್ನು ಮಾನದಂಡವಾಗಿಟ್ಟುಕೊಂಡು, ಅದಕ್ಕೆ ತಕ್ಕಂತೆ ತರಬೇತಿ ನೀಡಬೇಕು. ಒಲಿಂಪಿಕ್ಸ್​ನಲ್ಲಿ ಕೇವಲ ಈಜುಕೊಳವೊಂದರಲ್ಲೇ 37 ಚಿನ್ನಗಳು ನಿರ್ಧಾರವಾಗುತ್ತವೆ. ಅಥ್ಲೆಟಿಕ್ಸ್​ನಲ್ಲಿ 48 ಚಿನ್ನಗಳು ಪಣಕ್ಕಿರುತ್ತವೆ. ಮೊನ್ನೆ ಪ್ಯಾರಿಸ್​ನಲ್ಲಿ ಅಮೆರಿಕ ಅಥ್ಲೆಟಿಕ್ಸ್​ನಲ್ಲೇ 14 ಚಿನ್ನ, ಒಟ್ಟು 34 ಪದಕ ಗೆದ್ದುಕೊಂಡಿತು. ಈಜುಕೊಳದಲ್ಲಿ 8 ಚಿನ್ನ, 28 ಪದಕಕ್ಕೆ ಕೊರಳೊಡ್ಡಿತು. ಚೀನಾ ಡೈವಿಂಗ್​ನಲ್ಲಿ ಪಣಕ್ಕಿದ್ದ ಎಲ್ಲ 8ಕ್ಕೆ 8 ಚಿನ್ನ ಗೆದ್ದುಕೊಂಡಿತು. ಆದರೆ, ನಾವೇನಿದ್ದರೂ ಪ್ರತೀ ಬಾರಿ ಒಬ್ಬ ನೀರಜ್ ಚೋಪ್ರಾ, ಓರ್ವ ಸಿಂಧು ಅಥವ ಲಕ್ಷ್ಯ ಸೇನ್, ಹಾಕಿಯಲ್ಲೊಂದು, ಶೂಟಿಂಗ್, ಕುಸ್ತಿ, ಬಾಕ್ಸಿಂಗ್​ನಲ್ಲಿ ಅದೃಷ್ಟ ಒಲಿದರೆ ಒಂದೋ, ಎರಡೋ ಪದಕ, ಒಟ್ಟಾರೆ 10 ಪದಕ ಗಡಿ ದಾಟಿದರೆ, ‘ಅಬ್ ಕಿ ಬಾರ್ ದಸ್ ಕಿ ಪಾರ್’ ಎಂದು ಕನಸು ಕಾಣುವವರು. ದೇಶಕ್ಕೊಂದು ಸ್ಪಷ್ಟ ಕ್ರೀಡಾ ನೀತಿ ತಂದು, ಶಾಲಾ ಸಿಲಬಸ್​ನಲ್ಲಿ ಕ್ರೀಡೆಗಳಿಗೂ ಆದ್ಯತೆ ನೀಡಿ, ಪ್ರಾಥಮಿಕ ಶಾಲಾ ಮಟ್ಟದಿಂದಲೇ ಪ್ರತಿಭಾನ್ವೇಷಣೆ ನಡೆಸಿ, ಕ್ರೀಡಾ ಪ್ರಾಧಿಕಾರದಂಥ (ಸಾಯ್) ತರಬೇತಿ ಕೇಂದ್ರಗಳಿಗೆ ಕಾಯಕಲ್ಪ ನೀಡಿ, ಕ್ರೀಡಾ ಒಕ್ಕೂಟಗಳು, ಕ್ರೀಡಾಕೂಟಗಳು ಹಾಗೂ ಆಯ್ಕೆ ಪ್ರಕ್ರಿಯೆಗಳನ್ನು ರಾಜಕೀಯ ಮುಕ್ತಗೊಳಿಸಿ, ಪ್ರತಿಯೊಂದು ಒಲಿಂಪಿಕ್ಸ್​ಗೂ ಕನಿಷ್ಠ 8 ವರ್ಷ ಮೊದಲೇ ತಯಾರಿ ಆರಂಭಿಸಿದರೆ, ಆಗ ಭಾರತವೂ ಕ್ರೀಡೆಯಲ್ಲಿ ಸೂಪರ್ ಪವರ್ ಆಗುವ ದಿಕ್ಕಿನಲ್ಲಿ ಹೆಜ್ಜೆ ಇಡಬಹುದು.

ಅರ್ಹತೆಯಲ್ಲ, ಪದಕ ಗುರಿಯಾಗಲಿ: ಹಿಂದೆಲ್ಲ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆ ಎಂಬ ಭಾವನೆ ಇತ್ತು. ಅಂಥವರಿಗೆ ದೇಶದಲ್ಲಿ ಸನ್ಮಾನಗಳಾಗುತ್ತಿದ್ದವು. ಈಗಲೂ ಅಥ್ಲೆಟಿಕ್ಸ್​ನಿಂದ ಈಜು ಸ್ಪರ್ಧೆಯವರೆಗೆ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್​ಗೆ ಅರ್ಹತೆ ಗಳಿಸುವುದೇ ಗುರಿಯಾಗಿ ಹೊಂದಿರುತ್ತಾರೆ. ಉದಾಹರಣೆಗೆ ಹೇಳುವುದಾದರೆ, 100 ಮೀ. ಬ್ಯಾಕ್​ಸ್ಟ್ರೋಕ್ ಈಜಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸುವುದಕ್ಕೆ 54.01ಸೆ.ಗಳಲ್ಲಿ ಈಜಿದರೆ ಸಾಕಿತ್ತು. 2021ರ ಕೂಟವೊಂದರಲ್ಲಿ 53.77ಸೆ.ಗಳಲ್ಲಿ ಈಜಿದ್ದ ಶ್ರೀಹರಿ ನಟರಾಜ್ ಒಲಿಂಪಿಕ್ಸ್ ಅರ್ಹತೆ ಪಡೆದರು. ಆದರೆ, ಪ್ಯಾರಿಸ್​ನಲ್ಲಿ ಇಟಲಿಯ ಥಾಮಸ್ ಸೆಸ್ಸಾನ್ 52 ಸೆ.ಗಳಲ್ಲಿ ಈ ಸ್ಪರ್ಧೆ ಈಜಿ ಚಿನ್ನದ ಪದಕ ಗೆದ್ದರು. ಶ್ರೀಹರಿ ಅರ್ಹತಾ ಸುತ್ತಿನಲ್ಲಿ 55.01 ಸೆ. ನಿರ್ವಹಣೆಯೊಂದಿಗೆ 46 ಸ್ಪರ್ಧಿಗಳ ಕಣದಲ್ಲಿ 33ನೇ ಸ್ಥಾನ ಪಡೆದರು. 100 ಮೀ. ಬ್ಯಾಕ್​ಸ್ಟ್ರೋಕ್ ಈಜಿನಲ್ಲಿ ಶ್ರೀಹರಿಯ ಅತ್ಯುತ್ತಮ ನಿರ್ವಹಣೆಯೇ 53.77ಸೆ. ಅಂದರೆ, ಶ್ರೀಹರಿ ತಮ್ಮ ಪ್ರದರ್ಶನವನ್ನು 1.77ಸೆ. ಉತ್ತಮ ಪಡಿಸಿಕೊಳ್ಳದೆ ಪದಕ ಗೆಲ್ಲುವ ಅವಕಾಶವೇ ಇಲ್ಲ. ಕೇವಲ ಒಂದೂವರೆ ಸೆಕೆಂಡ್​ನಲ್ಲಿ ಏನಿದೆ ಎನ್ನುವವರಿಗೆ, ಈಜುಕೊಳದಲ್ಲಿ ಒಂದು ಸೆಕೆಂಡ್ ಅಂತರದಲ್ಲಿ 33 ಈಜುಪಟುಗಳು ಸ್ಥಾನ ಪಡೆದಿರುತ್ತಾರೆ. ಅಂದರೆ,

ಒಲಿಂಪಿಕ್ಸ್​ನ ಪ್ರತೀ ಸ್ಪರ್ಧೆಯಲ್ಲೂ ಅರ್ಹತಾ ಸಮಯಕ್ಕೂ, ಪದಕ ಗೆಲ್ಲುವ ಸಮಯಕ್ಕೂ ಅಜಗಜಾಂತರವಿರುತ್ತದೆ. ಇದನ್ನೇ ಜಾವೆಲಿನ್ ಲೆಕ್ಕಾಚಾರದಲ್ಲಿ ಹೇಳುವುದಾದರೂ, ಒಲಿಂಪಿಕ್ಸ್ ಅರ್ಹತೆಗೆ 84 ಮೀ. ದೂರಕ್ಕೆ ಭರ್ಜಿ ಎಸೆದರೆ ಸಾಕಿತ್ತು. ಆದರೆ, ಫೈನಲ್​ನಲ್ಲಿ ಪಾಕಿಸ್ತಾನದ ನದೀಂ 92.97ಮೀ. ದೂರಕ್ಕೆ ಭರ್ಜಿ ಎಸೆದು ಚಿನ್ನ ಗೆದ್ದರು. ಅಂದರೆ, ಒಲಿಂಪಿಕ್ಸ್​ನಲ್ಲಿ ಅರ್ಹತಾ ಮಾನದಂಡಕ್ಕೂ ಪದಕದ ಸಾಧನೆಗೂ ಅಗಾಧ ವ್ಯತ್ಯಾಸವಿರುತ್ತದೆ. ನಮ್ಮ ಗುರಿ ಪದಕ ಸಾಧನೆಗೆ ಅಗತ್ಯವಾದ ನಿರ್ವಹಣೆಯ ಮೇಲಿದ್ದರಷ್ಟೇ ಯಶಸ್ಸು ಸಾಧ್ಯ.

ಹಣ ಚೆಲ್ಲಬೇಕು: ಪ್ಯಾರಿಸ್ ಒಲಿಂಪಿಕ್ಸ್ ತರಬೇತಿ ಸಲುವಾಗಿ ಭಾರತ ಕಳೆದ ಮೂರು ವರ್ಷಗಳಲ್ಲಿ 470 ಕೋಟಿ ರೂ. ಖರ್ಚು ಮಾಡಿದೆ. ಅಮೆರಿಕ, ಚೀನಾ ವಾರ್ಷಿಕ ಬಜೆಟ್​ನಲ್ಲಿ ಕ್ರೀಡೆಗೆ ಮೀಸಲಿಡುವ ಹಣ ಗಮನಿಸುವಾಗ ಇದು ಆನೆ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯೇ ಸರಿ. ಹಾಗೆಂದು ಸಾವಿರಾರು ಕೋಟಿ ಹಣ ಸುರಿದರೆ ಪದಕ ಬುಟ್ಟಿಗೆ ಬಂದು ಬೀಳುವುದಿಲ್ಲ. ಪ್ರತಿಭಾನ್ವೇಷಣೆಗೆ, ಮೂಲಸೌಕರ್ಯಗಳಿಗೆ, ಒಲಿಂಪಿಕ್ಸ್ ದರ್ಜೆಯ ತರಬೇತಿಗೆ ಹಣವನ್ನು ಯೋಜನಾಬದ್ಧವಾಗಿ ಬಳಸಬೇಕು. ಪ್ಯಾರಿಸ್ ಸಲುವಾಗಿ ಭಾರತ ಅಥ್ಲೆಟಿಕ್ಸ್ ತಯಾರಿಗೆ 96.08 ಕೋಟಿ ರೂ. ಬ್ಯಾಡ್ಮಿಂಟನ್​ಗೆ 72.02 ಕೋಟಿ ರೂ., ಬಾಕ್ಸಿಂಗ್​ಗೆ 60.93 ಕೋಟಿ ರೂ., ಶೂಟಿಂಗ್ ಸ್ಪರ್ಧಿಗಳಿಗೆ 60.42 ಕೋಟಿ ರೂ. ಖರ್ಚು ಮಾಡಿತ್ತು. ಹಾಕಿ ತಂಡದ ಮೇಲೆ 41 ಕೋಟಿ ರೂ., ಕುಸ್ತಿ ಪಟುಗಳ ಮೇಲೆ 37 ಕೋಟಿ ರೂ. ಬಂಡವಾಳ ಹೂಡಿತ್ತು. ಈಜು ಸ್ಪರ್ಧೆಗೂ 3 ಕೋಟಿ. ಕುದುರೆ ಸವಾರಿಗೂ 95 ಲಕ್ಷ ರೂ. ನೆರವು ನೀಡಲಾಗಿತ್ತು. ಒಲಿಂಪಿಕ್ಸ್ ಅರ್ಹತೆ ಪಡೆದ ಎಲ್ಲ ಕ್ರೀಡಾಪಟುಗಳಿಗೆ 10ಕ್ಕಿಂತ ಅಧಿಕ ರಾಷ್ಟ್ರೀಯ ಶಿಬಿರಗಳು, ಕೈತುಂಬ ವಿದೇಶಿ ಪ್ರವಾಸಗಳನ್ನು ಪ್ರಾಯೋಜಿಸಿತ್ತು. ಇದಲ್ಲದೆ ವ್ಯಕ್ತಿಗತವಾಗಿಯೂ ತಮ್ಮ ಆಯ್ಕೆಯ ಕೋಚ್​ಗಳು, ಸಹಾಯಕ ಸಿಬ್ಬಂದಿ ನೇಮಿಸಿಕೊಳ್ಳುವುದಕ್ಕೆ, ವಿದೇಶದಲ್ಲಿ ತರಬೇತಿ ಪಡೆಯುವುದಕ್ಕೆ ನೆರವಾಗಿತ್ತು.

ದೊಡ್ಡಾಟ ಆಡಬೇಕು: ಹಾಕಿಯಲ್ಲಿ ಭಾರತ ಸತತ 2ನೇ ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದು ಸಾಧನೆ ಮಾಡಿತು. ಸ್ವಲ್ಪ ಅದೃಷ್ಟ ಕೈಹಿಡಿದಿದ್ದರೆ ಚಿನ್ನ, ಬೆಳ್ಳಿಗೂ ಯತ್ನಿಸಬಹುದಿತ್ತು. ತಂಡ 40 ವರ್ಷ ಬಳಿಕ ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ದೊಡ್ಡ ಸಾಧನೆ. ಆದರೂ, ಬೆಲ್ಜಿಯಂ, ನೆದರ್​ಲ್ಯಾಂಡ್​ನಂಥ ತಂಡಗಳನ್ನು ನಿರಂತರವಾಗಿ ಸೋಲಿಸುವ ಮಟ್ಟಕ್ಕೇರುವವರೆಗೆ ಭಾರತ ಒಲಿಂಪಿಕ್ಸ್ ಚಿನ್ನದ ಕನಸು ಕಾಣುವುದು ಕಷ್ಟ. ಹಾಕಿ ತಂಡದ ಗುರಿ ಮುಂದಿನ ನಾಲ್ಕು ವರ್ಷಗಳಲ್ಲಿ ಬೆಲ್ಜಿಯಂ, ನೆದರ್​ಲ್ಯಾಂಡ್, ಆಸ್ಟ್ರೇಲಿಯಾಗಳನ್ನು ಹೆಚ್ಚು ಬಾರಿ ಸೋಲಿಸುವುದೇ ಆಗಿರಬೇಕು. ಪ್ಯಾರಿಸ್​ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಪಣಕ್ಕಿದ್ದ ಎಲ್ಲ 5 ಚಿನ್ನಗಳನ್ನು ದಕ್ಷಿಣ ಕೊರಿಯಾ ಬಾಚಿಕೊಂಡಿತು. ಟೇಬಲ್ ಟೆನಿಸ್​ನಲ್ಲಿ ಪಣಕ್ಕಿದ್ದ ಎಲ್ಲ 5 ಚಿನ್ನ ಚೀನಾ ಪಾಲಾಯಿತು. ಶೂಟಿಂಗ್​ನಲ್ಲಿ ಮನು ಭಾಕರ್ 2 ಕಂಚು ಗೆದ್ದರೂ, ಅಲ್ಲಿಯೂ ಕೊರಿಯಾ, ಚೀನಾ ಪ್ರಾಬಲ್ಯ ಮೆರೆದವು. ಸ್ಥಿರತೆ, ನಿಖರತೆ, ಏಕಾಗ್ರತೆಯೇ ಮುಖ್ಯವಾದ ಆರ್ಚರಿ, ಶೂಟಿಂಗ್​ನಂಥ ಕ್ರೀಡೆಗಳಲ್ಲಿ ಭಾರತೀಯರಿಗೆ ಇನ್ನಷ್ಟು ಕಠಿಣ ಮಾನಸಿಕ ತರಬೇತಿ ಅವಶ್ಯಕ ಎನ್ನುವುದು ಮತ್ತೆ ಸಾಬೀತಾಯಿತು. 2012ರಿಂದ ಸತತ 4ನೇ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಬಿಲ್ಗಾರ್ತಿ ದೀಪಿಕಾ ಕುಮಾರಿ ಒಲಿಂಪಿಕ್ಸ್ ಪದಕ ಗೆಲ್ಲುವುದಕ್ಕೆ ಬೇಕಾದ ಮಾನಸಿಕ ಗಟ್ಟಿತನ ತಮ್ಮಲ್ಲಿ ಇಲ್ಲವೆಂಬುದನ್ನು ಮತ್ತೆ ಸಾಬೀತು ಪಡಿಸಿದರು. ದೀಪಿಕಾ ಮಾತ್ರವಲ್ಲ, ಆರ್ಚರಿ, ಶೂಟಿಂಗ್​ನಲ್ಲಿ ಭಾರತದ ಬಹುತೇಕ ಸ್ಪರ್ಧಿಗಳ ಹಣೆಬರಹ ಇದೇ ಆಗಿತ್ತು. ಒಲಿಂಪಿಕ್ಸ್​ನಲ್ಲಿ ಸತತವಾಗಿ, ಸ್ಥಿರವಾಗಿ 10ಕ್ಕಿಂತ ಹೆಚ್ಚು ಅಂಕಕ್ಕೆ ಗುರಿ ಇಡುವ ಬಿಲ್ಗಾರರು, ಶೂಟರ್​ಗಳು ಮಾತ್ರ ಪದಕ ಸ್ಪರ್ಧೆಯಲ್ಲಿರುತ್ತಾರೆ. ಅಲ್ಲೊಂದು ಇಲ್ಲೊಂದು 10 ಅಂಕ ಗಳಿಸಿ ಉಳಿದಂತೆ 8, 9ರ ಸರಣಿಯಲ್ಲಿ ಗಳಿಸುವ ಅಂಕಗಳು ಏನೇನೂ ಸಾಲದು.

ಪ್ರಿಯವಾದ ಸುಳ್ಳಿಗಿಂತ ಅಪ್ರಿಯವಾದರೂ ಸತ್ಯವೇ ಲೇಸು. ವೈಫಲ್ಯವನ್ನು ಅದೃಷ್ಟ, ಸಂದರ್ಭ, ಸನ್ನಿವೇಶಗಳ ಮೇಲೆ ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದು ಸುಲಭ. ಆದರೆ, ಸತ್ಯವನ್ನು ಹೆಚ್ಚು ಕಾಲ ಕತ್ತಲಕೋಣೆಯಲ್ಲಿ ಅಡಗಿಸಿಡಲು ಸಾಧ್ಯವಿಲ್ಲ. ಜಾಗತಿಕ ಸೂಪರ್ ಪವರ್ ಎಂದು ಗುರುತಿಸಿಕೊಳ್ಳುವುದಕ್ಕೆ ಕ್ರೀಡೆಯೂ ಒಂದು ಮಾರ್ಗ ಎಂದು ನಂಬುವುದೇ ಆದಲ್ಲಿ, ದೇಶ ಕೆಲವು ನಿರ್ದಾಕ್ಷಿಣ್ಯ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ. ಇಲ್ಲವಾದರೆ, ಇನ್ನು ಹತ್ತು ಒಲಿಂಪಿಕ್ಸ್ ಕಳೆದರೂ ನಾವು ‘ಅಬ್ ಕಿ ಬಾರ್, ದಸ್ ಕಿ ಪಾರ್’ ದಾಟಿ ಮುಂದೆ ಸಾಗುವುದಿಲ್ಲ.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net