ರುಂಡವಿಲ್ಲದ ಮುಂಡದ ರಹಸ್ಯ ಬಯಲಾದಾಗ...

Arrest
Published on

ಅದೊಂದು ದಿನ ರೈಲು ಹಳಿಯ ಮೇಲೆ ಮಹಿಳೆಯೊಬ್ಬಳ ದೇಹ ಬಿದ್ದಿದೆ ಎಂಬ ಮಾಹಿತಿ ಬಂದ ಮೇರೆಗೆ ರೈಲ್ವೆ ಪೊಲೀಸರು ಸ್ಥಳಕ್ಕೆ ಹೋದರು. ಪ್ರತಿದಿನವೂ ಹಲವಾರು ಜನರು ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವ ಕಾರಣ ಇದೂ ಅಂತಹುದೇ ಆಗಿರಬೇಕೆಂದು ಅವರು ಭಾವಿಸಿದರು. ರೈಲು ಹಳಿಗಳ ಪಕ್ಕದಲ್ಲಿ ರುಂಡವಿಲ್ಲದ ಮಹಿಳೆಯ ದೇಹ ಬಿದ್ದಿತ್ತು. ದೇಹವು ಛಿದ್ರಗೊಂಡಿತ್ತು. ರುಂಡಕ್ಕಾಗಿ ಅಕ್ಕಪಕ್ಕದಲ್ಲಿ ಹುಡುಕಿದರೂ ಸಿಗಲಿಲ್ಲ. ಯಾವುದೋ ನಾಯಿ, ನರಿ ಅದನ್ನು ಕಚ್ಚಿಕೊಂಡು ಹೋಗಿರಬೇಕೆಂದು ಪೊಲೀಸರು ಭಾವಿಸಿ, ಉಳಿದ ದೇಹದ ಮೇಲೆ ಪಂಚನಾಮೆ ಮಾಡಿದರು.

ಆ ಮಹಿಳೆ 5 ಅಡಿ 2 ಅಂಗುಲ ಎತ್ತರವಾಗಿದ್ದು, ಕೆಂಪು ಕಾಟನ್ ಸೀರೆ ತೊಟ್ಟಿದ್ದಳು. ಆಕೆಯ ಎಡ ಅಂಗೈ ಮತ್ತು ಮೊಣಕೈನ ಮೇಲೆ ಹಚ್ಚೆ ಗುರುತುಗಳು ಇದ್ದವು. ಆಕೆ ಎಲ್ಲಿಯೋ ಹತ್ತಿರದ ಗ್ರಾಮದವಳಿರಬೇಕೆಂದು ಭಾವಿಸಿದ ಪೊಲೀಸರು ಸುತ್ತಮುತ್ತಲಲ್ಲಿ ವಿಚಾರಿಸಿದಾಗ ಯಾವ ಮಾಹಿತಿಯೂ ಸಿಗಲಿಲ್ಲ. ರೈಲ್ವೆ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಮುಂಡದ ಚಿತ್ರಗಳನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ರವಾನಿಸಿದರು. ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಯಿತು. ಈ ಘಟನೆಯಾದ ಮರುದಿನ ಮುಂಜಾನೆ ಉತ್ತರ ಕರ್ನಾಟಕದ ಜಿಲ್ಲೆಯೊಂದರ ಗ್ರಾನೈಟ್ ಪಾಲಿಷ್ ಮಾಡುವ ಕಾರ್ಖಾನೆಗೆ ತಮಿಳುನಾಡಿನಿಂದ ಕಲ್ಲಿನ ಸ್ಲಾಬುಗಳು ತುಂಬಿದ್ದ ಒಂದು ಟ್ರಕ್ ಬಂದು ನಿಂತಿತು. ಕಲ್ಲುಗಳನ್ನು ಇಳಿಸುವಾಗ ಚಾಲಕ ಕಲ್ಯಾಣ ಸುಂದರ್ ಲಾರಿಯ ಒಂದು ಮೂಲೆಯಲ್ಲಿ ಗೊಬ್ಬರ ತುಂಬುವ ಪಾಲಿಥಿನ್ ಚೀಲ ಕಂಡ. ಆತ ಆ ಚೀಲವನ್ನು ತೆರೆದಾಗ ಒಳಗಿದ್ದ ವಸ್ತುವನ್ನು ನೋಡಿ ಗಾಬರಿಗೊಂಡು ಚೀರುತ್ತ ಅದನ್ನು ದೂರಕ್ಕೆ ಎಸೆದ. ಆ ಬ್ಯಾಗಿನಲ್ಲಿ ಮಹಿಳೆಯೊಬ್ಬಳ ರುಂಡವಿದ್ದು ಕುತ್ತಿಗೆಯ ಮೇಲೆ ರಕ್ತ ಹೆಪ್ಪುಗಟ್ಟಿ ನೋಡಲು ಭೀಕರವಾಗಿ ಕಾಣುತ್ತಿತ್ತು. ಪೊಲೀಸರಿಗೆ ಮಾಹಿತಿ ಹೋಯಿತು.

ಪೊಲೀಸರು ಆ ರುಂಡವನ್ನು ಹೊರಕ್ಕೆ ತೆಗೆದು ನೋಡಿದರು. ನರೆತ ಕೂದಲು, ಮುರಿದ ಹಲ್ಲುಗಳು ಮತ್ತು ಸುಕ್ಕಾದ ಮುಖವಿದ್ದ ಕಾರಣ ಮೃತಳು ಸುಮಾರು 60 ರಿಂದ 70 ವರ್ಷದ ಮಹಿಳೆಯೆಂದು ಅಂದಾಜಿಸಿದರು.ಆ ಚೀಲದ ಮೇಲೆ ಯಾವುದೇ ರೀತಿಯ ಕುರುಹು ಇರಲಿಲ್ಲ. ರುಂಡವನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದಾಗ ವ್ಯೆದ್ಯರೂ ಅದೇ ಅಭಿಪ್ರಾಯ ನೀಡಿದ್ದಲ್ಲದೆ, ಇದು ಕೊಲೆಯೆಂದು ಕಾಣತ್ತದೆ ಎಂದರು. ಪೊಲೀಸರು ಕೊಲೆ ಮತ್ತು ಸಾಕ್ಷ್ಯ ನಾಶ ಪ್ರಕರಣ ದಾಖಲು ಮಾಡಿಕೊಂಡು ಮೃತಳ ಗುರುತನ್ನು ಪಡೆಯಲು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಿದರು. ಏತನ್ಮಧ್ಯೆ ಅವರಿಗೆ ಕೆಲ ದಿನಗಳ ಹಿಂದೆ ರೈಲ್ವೆ ಹಳಿಯ ಮೇಲೆ ರುಂಡವಿಲ್ಲದ ದೇಹ ಸಿಕ್ಕ ಬಗ್ಗೆ ಮಾಹಿತಿ ಬಂದಾಗ ತನಿಖಾಧಿಕಾರಿ ರೈಲ್ವೆ ಪೊಲೀಸರನ್ನು ಸಂರ್ಪಸಿ ಆ ರುಂಡವನ್ನು ಮುಂಡವಿಲ್ಲದ ದೇಹದ ಜತೆಗೆ ಹೋಲಿಸಲು ದೇಹವನ್ನು ಸಂರಕ್ಷಿಸಿಟ್ಟಿದ್ದ ಜಿಲ್ಲಾಸ್ಪತ್ರೆಗೆ ತಂದರು. ವೈದ್ಯರು ಅದು ಒಬ್ಬಳದ್ದೇ ಎಂದು ಅಭಿಪ್ರಾಯಪಟ್ಟು ಅದು ಕೊಲೆಯ ಕೇಸೆಂದು ದೃಢಪಡಿಸಿದರು. ಆಗ ಉತ್ತರ ಕರ್ನಾಟಕ ಪೊಲೀಸರು ಪ್ರಕರಣವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದರು. ರೈಲು ಹಳಿಗಳ ಮೇಲೆ ಶವ ಸಿಕ್ಕ ಎರಡು ದಿನಗಳ ನಂತರ ಮೈಸೂರು ಜಿಲ್ಲೆಯ ಸೋಮಣ್ಣ ಎನ್ನುವವನು ಪಕ್ಕದ ಜಿಲ್ಲಾ ಕೇಂದ್ರದ ನಗರ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ತಾಯಿ ತಿಮ್ಮಕ್ಕ ಎರಡು ದಿನಗಳ ಹಿಂದೆ ವಾಡಿಕೆಯಂತೆ ತನ್ನ ಮೃತ ತಂದೆಯ ಮಾಸಾಶನವನ್ನು ತರಲು ಹೋದವಳು ಮನೆಗೆ ವಾಪಸಾಗಿಲ್ಲ, ಹುಡುಕಿ ಕೊಡಿ ಎಂದ. ಆಕೆ ಸುಮಾರು 65 ವರ್ಷದವಳೆಂದು ತಿಳಿಸಿ ಫೋಟೋ ತೋರಿಸಿದ. ಎರಡು ದಿನಗಳ ಹಿಂದೆ ಅದೇ ನಗರದ ಸಮೀಪ ರೈಲ್ವೆ ಹಳಿಯ ಮೇಲೆ ರುಂಡವಿಲ್ಲದ ಶವ ಸಿಕ್ಕ ಮಾಹಿತಿ ತಿಳಿದಿದ್ದ ಆ ಠಾಣೆಯ ರೈಟರ್ ಸೋಮಣ್ಣನನ್ನು ರೈಲ್ವೆ ಪೊಲೀಸ್ ಠಾಣೆಗೆ ಹೋಗಲು ಸೂಚಿಸಿದ. ರೈಲ್ವೆ ಪೊಲೀಸರು ಅವನನ್ನು ಶವಾಗಾರಕ್ಕೆ ಕರೆದೊಯ್ದು ಅಲ್ಲಿದ್ದ ರುಂಡ-ಮುಂಡಗಳೆರಡನ್ನೂ ತೋರಿಸಿದರು. ಶವದ ಕೈಮೇಲಿದ್ದ ಹಚ್ಚೆಯ ಗುರುತುಗಳು, ರುಂಡ ಮತ್ತು ಶವದ ಮೇಲಿದ್ದ ಸೀರೆಯನ್ನು ಗುರುತಿಸಿ ಆ ಶವವು ತನ್ನ ತಾಯಿ ತಿಮ್ಮಕ್ಕಳದೇ ಸಂಶಯವಿಲ್ಲವೆಂದ. ಇದಲ್ಲದೆ ಆತ ತಂದಿದ್ದ ಫೋಟೋ ಸಹ ಮೃತಳನ್ನು ಹೋಲುತ್ತಿತ್ತು. ಆತ ಪೊಲೀಸರಿಗೆ ಹೀಗೆ ಹೇಳಿದ: ‘ನನ್ನ ತಂದೆ ರುದ್ರೇಗೌಡ ಇದೇ ಊರಿನ ಹೊರವಲಯದಲ್ಲಿ ಜಮೀನು ಹೊಂದಿದ್ದು ಅವರಿಗೆ ನಾವಿಬ್ಬರು ಗಂಡುಮಕ್ಕಳು. ನನ್ನ ಹಿರಿಯ ಸೋದರ ಪತ್ನಿಯೊಡನೆ ತಂದೆ-ತಾಯಿ ಜತೆಯಲ್ಲಿ ವಾಸವಾಗಿದ್ದ. ನಾನು ನೌಕರಿ ಸಲುವಾಗಿ ಮೈಸೂರಿಗೆ ಹೋದೆ. ತಂದೆ ಈಗ ವರ್ಷದ ಹಿಂದೆ ಅಸುನೀಗಿದರು. ತಾಯಿ ಅಣ್ಣ, ಅತ್ತಿಗೆ ಜತೆಗೇ ವಾಸಿಸುತ್ತಿದ್ದಳು. 2 ವರ್ಷಗಳ ಹಿಂದೆ ಅಣ್ಣ ಅನಾರೋಗ್ಯದಿಂದ ಮೃತಪಟ್ಟ ನಂತರ ತಾಯಿಗೆ ಅತ್ತಿಗೆಯ ಜತೆ ವಾಸಿಸುವುದು ಸರಿಹೊಂದದೆ ನನ್ನ ಮನೆಗೆ ಬಂದಳು. ಪ್ರತಿ ತಿಂಗಳೂ ವೃದ್ಧಾಪ್ಯವೇತನ ಪಡೆಯಲು ಇಲ್ಲಿಗೆ ಬರುತ್ತಿದ್ದಳು. ನನ್ನ ಸೋದರ ಸತ್ತ ನಂತರ ಅತ್ತಿಗೆ ಸುಮಾ, ರವಿ ಎನ್ನುವ ಅರೆಸರ್ಕಾರಿ ಸಂಸ್ಥೆಯ ನೌಕರನ ಜತೆಗೆ ಅನೈತಿಕ ಸಂಬಂಧ ಬೆಳೆಸಿರುವುದಾಗಿ ತಿಳಿಯಿತು. ಆಕೆಗೆ ಬೇಡವೆಂದು ಎಷ್ಟು ಹೇಳಿದರೂ ನಮ್ಮ ಮಾತನ್ನು ಕೇಳಲಿಲ್ಲ. ಆಗ ನನ್ನ ತಾಯಿ ಅತ್ತಿಗೆಯ ವಿರುದ್ಧ ಹಿರಿಯ ನಾಗರಿಕರ ಸಂರಕ್ಷಣಾ ಕಾಯಿದೆಯಡಿ ಕೇಸ್ ದಾಖಲಿಸಿದಳು. ನನ್ನ ತಾಯಿಗೆ ಅತ್ತಿಗೆ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿತು. ಅತ್ತಿಗೆ ಸಮಯಾವಕಾಶ ಕೇಳಿದ ಕಾರಣ ಪ್ರತಿ ತಿಂಗಳೂ 2000 ರೂ. ಕೊಡುವಂತೆ ನಿರ್ಧಾರವಾಯಿತು. ನನ್ನ ತಾಯಿಯಂತೂ ಅತ್ತಿಗೆಯನ್ನು ನೋಡಿದಾಗಲೆಲ್ಲ ಆಕೆಯ ಅನೈತಿಕ ಸಂಬಂಧದ ಬಗ್ಗೆ ಮೂದಲಿಸುತ್ತಿದ್ದಳು. ಇದಲ್ಲದೆ ನ್ಯಾಯಾಲಯ ಹೇಳಿರುವ ಪೂರ್ತಿ ಪರಿಹಾರ ಹಣವನ್ನು ಕೂಡಲೇ ನೀಡಲು ಪೀಡಿಸುತ್ತಿದ್ದಳು. ಇದೇ ಕಾರಣಕ್ಕಾಗಿ ಅತ್ತಿಗೆ ಮತ್ತು ರವಿ ಸೇರಿಕೊಂಡು ಕೊಲೆ ಮಾಡಿರಬಹುದು.’ ತನಿಖಾಧಿಕಾರಿ ಅದೇ ನಗರದಲ್ಲಿ ವಾಸಿಸುತ್ತಿದ್ದ ರವಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಆತ ಹೀಗೆ ಹೇಳಿದ: ‘ನಾನು ಸುಮಾಳ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ನಿಜ. ತಿಮ್ಮಕ್ಕ ತನ್ನ ಹಣವನ್ನು ಕೊಡಲು ಸುಮಾಳನ್ನು ಪದೇಪದೆ ಪೀಡಿಸುತ್ತಿದ್ದದ್ದಲ್ಲದೆ ನಮ್ಮ ಬಗ್ಗೆ ಕೆಟ್ಟದಾಗಿ ಊರಿನಲ್ಲೆಲ್ಲ ಮಾತನಾಡುತ್ತಿದ್ದಳು. ಹೀಗಾಗಿ ಅವಳನ್ನು ಮುಗಿಸಬೇಕೆಂದು ತೀರ್ವನಿಸಿದೆವು. ತಿಮ್ಮಕ್ಕ ಮಾಸಾಶನ ಪಡೆಯಲು ಇಲ್ಲಿಗೆ ಬಂದಾಗ ನಾನು ಅವಳನ್ನು ಕಚೇರಿಯ ಹೊರಗೆ ಭೇಟಿಯಾಗಿ ‘ಸುಮಾ ನಿನಗೆ ಕೊಡಬೇಕಾಗಿರುವ ಬಾಕಿ ಹಣವನ್ನು ಕೊಡುತ್ತೇನೆ’ ಎಂದು ಹೇಳಿ ನನ್ನ ಮನೆಗೆ ಕರೆದುಕೊಂಡು ಬಂದೆ. ಅಲ್ಲಿ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಸಾಯಿಸಿದೆ. ಅವಳ ಮೈಮೇಲಿದ್ದ ಎಲ್ಲ ಒಡವೆ ಮತ್ತು ಹಣವನ್ನು ತೆಗೆದುಕೊಂಡೆ. ನಂತರ ಗೂಡ್ಸ್ ಟೆಂಪೋ ಬಾಡಿಗೆಗೆ ಪಡೆದು ಶವವನ್ನು ಹಾಕಿಕೊಂಡು ದಫನ್ ಮಾಡಲು ಚಿತಾಗಾರಕ್ಕೆ ಕೊಂಡೊಯ್ದೆ. ಬಾಡಿಗೆ ವಾಹನವನ್ನು ನಾನೇ ಓಡಿಸುತ್ತಿದ್ದೆ.

ಆದರೆ ರಾತ್ರಿಯ ವೇಳೆಯಲ್ಲಿ ನಾನೊಬ್ಬನೇ ಶವ ತಂದದ್ದನ್ನು ಕಂಡು ಚಿತಾಗಾರದ ಮ್ಯಾನೇಜರ್​ಗೆ ಸಂಶಯ ಬಂದಿತು. ಆತ ಮೃತಳ ಇತರ ಸಂಬಂಧಿಕರನ್ನು ಕರೆತರಲು ಸೂಚಿಸಿದ್ದಲ್ಲದೆ ಮರಣದ ಸರ್ಟಿಫಿಕೆಟ್ ತರಲು ಹೇಳಿದ. ಹಾಗಾಗಿ ಶವವನ್ನು ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಎಸೆಯಬೇಕೆಂದು ತರುತ್ತಿದ್ದೆ. ಆಗ ಎದುರಿನಲ್ಲಿ ರೈಲ್ವೆ ಹಳಿಗಳು ಕಂಡವು. ರಾತ್ರಿಯಾದ ಕಾರಣ ಅಲ್ಲಿ ಯಾರೂ ಇರಲಿಲ್ಲ. ಶವವನ್ನು ವಾಹನದಿಂದ ಹೊರತೆಗೆದು ಎರಡು ಹಳಿಗಳ ಮಧ್ಯದಲ್ಲಿಟ್ಟೆ. ಕೆಲಕಾಲದ ನಂತರ ಬಂದ ಒಂದು ರೈಲು ಶವದ ಮೇಲೆ ಹಾದು ಹೋಗಿ ದೇಹವು ಛಿದ್ರವಾಗಿ ರುಂಡವು ಮುಂಡದಿಂದ ಬೇರ್ಪಟ್ಟಿತು. ತಿಮ್ಮಕ್ಕಳ ಗುರುತು ಯಾರಿಗೂ ತಿಳಿಯಬಾರದೆಂದು ಚೀಲದಲ್ಲಿ ಆಕೆಯ ರುಂಡವನ್ನು ಹಾಕಿಕೊಂಡು ಅದನ್ನು ಎಲ್ಲಿಯಾದರೂ ಹೂಳಬೇಕೆಂದು ವಾಪಸ್ ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಟೋಲ್​ಗೇಟ್ ಬಳಿ ಒಂದು ಕಲ್ಲಿನ ಲಾರಿ ನಿಂತಿದ್ದನ್ನು ಕಂಡೆ. ಅದರಲ್ಲಿ ಚೀಲವನ್ನು ಎಸೆದು ಮನೆಗೆ ಬಂದೆ.’ ಅವನ ಮನೆಯಿಂದ ತಿಮ್ಮಕ್ಕನ ಒಡವೆಗಳನ್ನು ಜಪ್ತಿ ಮಾಡಿದ್ದಲ್ಲದೆ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಸುಮಾಳನ್ನೂ ಬಂಧಿಸಲಾಯಿತು. ಇಬ್ಬರ ಮೇಲೆಯೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಡಿವಿಜಿಯವರು ಕಗ್ಗದಲ್ಲಿ ‘ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ, ವಿಹಿತದ ಸ್ಥಾನದಿಂ ಸಹಜಗುಣಬಲದಿಂದಿಹಪರ ಸಮನ್ವಯದೆ ಸರ್ವಹಿತ ಸಂಸ್ಥಿತಿಗೆ ಸಹಕರಿಪುದಲೆ ಧರ್ಮ ಮಂಕುತಿಮ್ಮ’ ಎಂದಂತೆ ಮೂರು ಬೇರೆ ಬೇರೆ ಪೊಲೀಸ್ ಠಾಣೆಗಳ ನಡುವೆ ಸಂವಹನ ಮತ್ತು ಹೊಂದಾಣಿಕೆಯಿರದೇ ಹೋಗಿದ್ದಲ್ಲಿ ಈ ಪ್ರಕರಣ ಬೆಳಕಿಗೇ ಬರುತ್ತಿರಲಿಲ್ಲ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net