

ನಿಯತ್ತಿನ ವ್ಯಕ್ತಿಯೆಂದು ಹೆಸರು ಪಡೆದಿದ್ದ ಸುರೇಶ್, ಕಂಪನಿಯ ಎಲ್ಲ ಕೆಲಸಗಳನ್ನು ಚೊಕ್ಕವಾಗಿ ಮಾಡುತ್ತಿದ್ದ. ಅವನ ಬಗ್ಗೆ ಕಂಪನಿ ಮಾಲೀಕರಿಗೆ ನಂಬಿಕೆಯಿತ್ತು. ಹೀಗಾಗಿ ಕಂಪನಿಯು ಬ್ಯಾಂಕ್ನಿಂದ ಮಾಡುವ ಎಲೆಕ್ಟ್ರಾನಿಕ್ ವ್ಯವಹಾರಗಳಿಗೆ ಸುರೇಶ್ನ ಮೊಬೈಲ್ ಫೋನ್ ನಂಬರ್ ಅನ್ನೇ ಮಾಲೀಕರು ನೀಡಿದ್ದರು.
ಎಂದಿನಂತೆ ಆ ಸಂಸ್ಥೆಯ ಲೆಕ್ಕ ಪತ್ರಗಳ ವಾರ್ಷಿಕ ಆಡಿಟ್ ಅನ್ನು ಖಾಸಗಿ ಆಡಿಟಿಂಗ್ ಸಂಸ್ಥೆಯೊಂದು ನಡೆಸಿತು. ಆಗ ಒಂದು ಕೋಟಿ ಎಂಟು ಲಕ್ಷ ರೂ.ಗಳ ವೆಚ್ಚದ ಬಗ್ಗೆ ಯಾವ ಲೆಕ್ಕವೂ ಸಿಗಲಿಲ್ಲ. ಕಂಪನಿಯು ಪ್ರತಿ ವರ್ಷ ಸಂದಾಯ ಮಾಡಬೇಕಾಗಿದ್ದ ಆದಾಯ ತೆರಿಗೆಯಲ್ಲಿ 26 ಲಕ್ಷ ರೂ.ಗಳ ಬಾಕಿಯನ್ನು ಉಳಿಸಿಕೊಂಡಿದ್ದು ಜಿಎಸ್ಟಿಗಾಗಿ ಕೊಡಬೇಕಾದ 48 ಲಕ್ಷ ರೂ. ಹಣವನ್ನು ತುಂಬಿಯೇ ಇರಲಿಲ್ಲ. ಇದಲ್ಲದೇ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ನ ಕಂಪನಿಯ ಕೊಡುಗೆಯಾದ 32 ಲಕ್ಷ ರೂ.ಗಳನ್ನು ಸಹ ತುಂಬಿರಲಿಲ್ಲ. ಸಾಲದೆಂಬಂತೆ ಉದ್ಯೋಗಿಗಳ ವೇತನದಲ್ಲಿಯೂ 23 ಲಕ್ಷ ರೂ.ಗಳನ್ನು ಕಡಿತ ಮಾಡಲಾಗಿದ್ದು ಆ ಹಣದ ಬಗ್ಗೆಯೂ ಯಾವ ಲೆಕ್ಕವೂ ಇರಲಿಲ್ಲ.
ಇವೆಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದ ಕೂಡಲೇ ಕಂಪನಿಯ ಮಾಲೀಕರು ಆಡಿಟರ್ಗಳ ಸಮ್ಮುಖದಲ್ಲಿಯೇ ಸುರೇಶನನ್ನು ವಿಚಾರಣೆಗೆ ಒಳಪಡಿಸಿದರು. ಆತ ತನಗೇನೂ ಗೊತ್ತಿಲ್ಲ ಎಂದು ಆರಂಭದಲ್ಲಿ ಹೇಳಿದನಾದರೂ ಆಡಿಟರ್ಗಳು ಕೇಳಿದ ಪ್ರಶ್ನೆಗಳಿಗೆ ವಿವರಣೆ ಕೊಡಲು ತಡಕಾಡಿದ. ಕಡೆಗೆ ಅಷ್ಟೂ ಹಣವನ್ನು ಸ್ವಂತಕ್ಕಾಗಿ ತಾನೇ ಉಪಯೋಗ ಮಾಡಿಕೊಂಡಿದ್ದೇನೆ ಎಂದು ತಪ್ಪೊಪ್ಪಿಕೊಂಡ.
‘‘30 ವರ್ಷಗಳ ಕಾಲ ನೀನು ನಮ್ಮಲ್ಲಿ ಒಂದೇ ಒಂದು ಕಂಪ್ಲೇಂಟ್ ಇಲ್ಲದಂತೆ ಕೆಲಸ ಮಾಡಿದ್ದೆ, ಈಗ ಹೀಗೇಕೆ ಮಾಡಿದೆ?’ ಎಂದು ಕಂಪನಿಯ ಮಾಲೀಕರು ಕೇಳಿದಾಗ ಸುರೇಶ್ ಹೀಗೆಂದ:
‘‘ಎರಡು ವರ್ಷಗಳ ಹಿಂದೆ ನನ್ನನ್ನು ಯಾರೋ ಒಂದು ವಾಟ್ಸ್ಯಾಪ್ ಗುಂಪಿಗೆ ಸೇರಿಸಿಕೊಂಡರು. ಅದು ಷೇರುಗಳನ್ನು ಕೊಳ್ಳುವ ಹಾಗೂ ಮಾರುವ ಬಗ್ಗೆ ಟಿಪ್ಸ್ ಕೊಡುವ ಗುಂಪಾಗಿತ್ತು. ನನ್ನ ಅನುಮತಿಯಿಲ್ಲದೇ ನನ್ನನ್ನು ಆ ಗುಂಪಿಗೆ ಸೇರಿಸಿದ್ದರೂ ಅದರಲ್ಲಿ ಬರುತ್ತಿದ್ದ ವಿಷಯಗಳ ಬಗ್ಗೆ ನನಗೆ ಆಸಕ್ತಿ ಮೂಡಿತು. ನಾನು ಆ ಗ್ರೂಪ್ನಲ್ಲಿ ಮುಂದುವರೆದೆ. ಪ್ರತಿದಿನವೂ ಗ್ರೂಪ್ನ ಸದಸ್ಯರು ತಾವು ಷೇರನ್ನು ಖರೀದಿಸಿ ಲಾಭ ಪಡೆದ ಮಾಹಿತಿಯನ್ನು ನೀಡುತ್ತಿದ್ದರು. ಕೆಲವರು ತಾವು ಒಂದೇ ದಿನದಲ್ಲಿ ಹತ್ತು ಲಕ್ಷ ರೂ. ಗಳಿಸಿದೆ ಎಂದು ಹೇಳಿದರೆ, ಇನ್ನೂ ಕೆಲವರು ಇಂತಹ ಕಂಪನಿಯಗಳ ಷೇರನ್ನು ಕೊಂಡುಕೊಳ್ಳಿ ಎಂದು ಹೇಳುತ್ತಿದ್ದರು. ಆ ಸಮಯದಲ್ಲಿ ನನ್ನ ಬಳಿ ಸುಮಾರು 25000 ರೂ.ಗಳ ಉಳಿತಾಯ ಹಣ ಇತ್ತು. ಈ ಹಣವನ್ನು ತೊಡಗಿಸಿದರೆ ನಾನೂ ಶ್ರೀಮಂತನಾಗಬಹುದು ಎಂದು ಯೋಚಿಸಿ ಯಾವ ಕಂಪನಿಯ ಷೇರಿಗೆ ಹಣ ಹಾಕಿದರೆ ಒಳ್ಳೆಯದು ಎಂಬ ಪ್ರಶ್ನೆಯನ್ನು ನಾನು ಗುಂಪಿನಲ್ಲಿ ಬಿಟ್ಟೆ. ಆಗ ಗುಂಪಿನ ಆಡಳಿತಗಾರನಿಂದ ನನಗೆ ಒಂದು ಸಂದೇಶ ಬಂದಿತು. ನೀವು ನೇರವಾಗಿ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡತೊಡಗಿದರೆ ನಿಮಗೆ ನಷ್ಟವಾಗುತ್ತದೆ. ನನ್ನ ಕಂಪನಿ ನಿಮ್ಮಂತಹವರಿಗಾಗಿಯೇ ವಿಶೇಷ ಆಪ್ ಮಾಡಿದೆ. ಅದರ ಮೂಲಕ ನಿಮ್ಮ ಹಣವನ್ನು ಲಾಭದಾಯಕ ಕಂಪನಿಗಳಲ್ಲಿ ಹೂಡಿಸಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಬರೆದಿತ್ತು. ನಾನು ಕೂಡಲೇ ಆ ಆಪ್ ಅನ್ನು ನನ್ನ ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಕೊಂಡೆ. ಮುಂದಿನ ವಾರ ಕಂಪನಿಯೊಂದರ ಷೇರನ್ನು ಖರೀದಿಸಲು ನನಗೆ ಅದೇ ಆಪ್ ಮೂಲಕ ಆಫರ್ ಬಂದಿತು. ನಾನು ಆಪ್ ಮೂಲಕವೇ ಆ ಷೇರಿಗಾಗಿ 10,000 ರೂ. ನೀಡಿದೆ. ಮಾರನೆಯ ದಿನ ಆ ಹಣ ದುಪ್ಪಟ್ಟಾಗಿ ನನ್ನ ಗೂಗಲ್ ಪೇ ಅಕೌಂಟ್ಗೆ 20,000 ರೂ. ಸಂದಾಯವಾಯಿತು. ಒಂದೇ ದಿನದಲ್ಲಿ ನಾನು ನನ್ನ ಹಣವನ್ನು ದ್ವಿಗುಣಗೊಳಿಸಿದ್ದರಿಂದ ನನ್ನ ಖುಷಿಗೆ ಪಾರವೇ ಇರಲಿಲ್ಲ. ಕೆಲದಿನಗಳ ಬಳಿಕ ಇನ್ನೊಂದು ಕಂಪನಿಯಲ್ಲಿ ಹಣ ತೊಡಗಿಸಲು ನನಗೆ ಸೂಚನೆ ಬಂದಿತು. ನಾನು ಈ ಹಿಂದೆ ಗಳಿಸಿದ್ದ 20,000 ರೂ.ಗೆ ಇನ್ನೂ 30,000 ರೂ. ಸೇರಿಸಿ 50,000 ರೂ. ಹೂಡಿದೆ. ಮಾರನೆಯ ದಿನ ನನಗೆ ನಾನು ಹಣ ಹೂಡಿದ್ದ ಕಂಪನಿಯ ಷೇರು ಬೆಲೆ ಮಧ್ಯಾಹ್ನದ ವೇಳೆಗೆ ಬಿದ್ದುಹೋಯಿತೆಂದೂ ಆ ಕಾರಣಕ್ಕಾಗಿ ನಷ್ಟವನ್ನು ಕಡಿತ ಮಾಡಿಕೊಳ್ಳಲು ನಾನು ಆ ಮುಂಜಾನೆ ಖರೀದಿಸಿದ್ದ ಷೇರುಗಳನ್ನು ಕಡಿಮೆ ಬೆಲೆಗೆ ಮಾರಬೇಕಾಯಿತೆಂದೂ ತಿಳಿಸಿದ ಆ ಸಂಸ್ಥೆ ನನ್ನ ಅಕೌಂಟಿಗೆ 15000 ರೂ. ಮಾತ್ರ ತುಂಬಿತು. 35000 ರೂ. ಕಳೆದುಕೊಂಡು ಬೇಸರಗೊಂಡ ನಾನು ಮುಂದಿನ 15 ದಿನಗಳು ಯಾವ ವ್ಯವಹಾರವನ್ನೂ ಮಾಡಲೇ ಇಲ್ಲ. ಆದರೆ ಆ ಆಪ್ ಸುಮ್ಮನಿರಬೇಕಲ್ಲ, ಪ್ರತಿದಿನವೂ ಹೊಸ ಹೊಸ ಆಮಿಷಗಳನ್ನು ಒಡ್ಡುತ್ತಿತ್ತು. ನಮ್ಮ ಗುಂಪಿನ ಇಂತಹವರು ಒಂದೇ ದಿನದಲ್ಲಿ ಮೂರು ಲಕ್ಷ ರೂ. ಗಳಿಸಿದರು, ಇಂತಹವರು 5 ಲಕ್ಷ ರೂ. ಗಳಿಸಿದರು ಎಂದು ಅವರ ಫೋಟೋಗಳನ್ನು, ಸಂದರ್ಶನಗಳನ್ನು ಹಾಕುತ್ತಿತ್ತು. ಅವುಗಳನ್ನು ಓದಿ ನನಗೆ ಮತ್ತೆ ಷೇರುಪೇಟೆಯಲ್ಲಿ ಹಣವನ್ನು ಹೂಡಬೇಕೆಂಬ ಬಯಕೆಯಾಯಿತು. ಪ್ರತಿದಿನವೂ ಸಾವಿರ ರೂಪಾಯಿಗಳಿಗಿಂತ ಹೆಚ್ಚಿಗೆ ತೊಡಗಿಸಬಾರದೆಂದು ನಿರ್ಧರಿಸಿ ಅಷ್ಟು ಹಣಕ್ಕಿಂತ ಹೆಚ್ಚಾಗಿ ತೊಡಗಿಸಲಿಲ್ಲ. ಕೆಲವು ದಿನ ಅಷ್ಟೂ ಹಣವನ್ನು ಕಳೆದುಕೊಳ್ಳುತ್ತಿದ್ದೆ, ಇನ್ನು ಕೆಲವು ದಿನ ಹತ್ತು ಸಾವಿರ ರೂ. ಲಾಭ ಗಳಿಸುತ್ತಿದ್ದೆ. ಹೀಗೆಯೇ ಆರು ತಿಂಗಳ ಕಾಲ ಈ ವ್ಯವಹಾರವನ್ನು ಮಾಡಿದೆ. ನಂತರ ಅಲ್ಲಿಯವರೆಗೆ ನನಗಾಗಿದ್ದ ಲಾಭ ನಷ್ಟದ ಲೆಕ್ಕಾಚಾರವನ್ನು ನೋಡಿದಾಗ ನನಗೆ 10000 ರೂ. ಲಾಭವಾಗಿತ್ತು. ಆಗ ನಾನು ನಮ್ಮ ಆಪ್ನಲ್ಲಿ ಸಲಹೆ ಕೊಡುವ ಪರಿಣಿತರೊಬ್ಬರನ್ನು ಏನು ಮಾಡಬೇಕೆಂದು ಕೇಳಿದೆ. ಆತ ನಿಮ್ಮ ಹಣವನ್ನು ನಾವು ಸೇಫಾಗಿರುವ ಷೇರುಗಳಲ್ಲೇ ಹೂಡಿಕೆ ಮಾಡುತ್ತಿದ್ದೇವೆ. ಹೀಗಾಗಿ ನಿಮಗೆ ಲಾಭವೂ ಕಡಿಮೆ, ನಷ್ಟವೂ ಕಡಿಮೆ. ನೀವು ಬೇಗನೇ ಬೆಲೆ ಏರುವಂತಹ ಕೆಲವು ಷೇರುಗಳಲ್ಲಿ ಹಣವನ್ನು ಹೂಡಿದರೆ ಹೆಚ್ಚು ಹಣ ಗಳಿಸಬಹುದು. ಆದರೆ ಅದರಲ್ಲಿ ರಿಸ್ಕ್ ಕೂಡ ಬಹಳ ಇರುತ್ತದೆ. ನೀವು ಒಂದೇ ಬಾರಿ ಒಂದು ಲಕ್ಷ ರೂ. ಹಾಕಿ ನೋಡಿ, ನಿಮಗೆ ಅದೃಷ್ಟವಿದ್ದರೆ ಅದು ಒಂದೇ ದಿನದಲ್ಲಿ ಮೂರು ಪಟ್ಟು ಏರಬಹುದು ಎಂದ. ಆದರೆ ಷೇರುಪೇಟೆಯಲ್ಲಿ ಹೂಡಲು ನನ್ನ ಬಳಿ ಅಷ್ಟು ಹಣವಿರಲಿಲ್ಲ. ಒಂದು ಲಕ್ಷ ರೂ. ಎಲ್ಲಿಂದ ತರಲಿ ಎಂದು ಯೋಚಿಸಿದಾಗ ನನಗೆ ಆ ದಿನವೇ ನಮ್ಮ ಕಚೇರಿಯಲ್ಲಿ ಪ್ರಾವಿಡೆಂಟ್ ಫಂಡ್ಗೆಂದು ತುಂಬಲು ಬ್ಯಾಂಕಿನಿಂದ ಐದು ಲಕ್ಷ ರೂ.ಗಳನ್ನು ತರಿಸಿದ್ದು ನೆನಪಾಯಿತು. ಆ ಹಣವನ್ನು ಸರ್ಕಾರಕ್ಕೆ ತುಂಬಲು 2-3 ದಿನಗಳ ಸಮಯಾವಕಾಶವಿತ್ತು. ನಾನು ಆ ಹಣದಲ್ಲಿ ಒಂದು ಲಕ್ಷ ರೂ.ಗಳನ್ನು ಬ್ಯಾಂಕಿನ ನನ್ನ ಖಾತೆಗೆ ಹಾಕಿಕೊಂಡು ಅದನ್ನು ಷೇರುಗಳಲ್ಲಿ ತೊಡಗಿಸಲು ಕೊಟ್ಟೆ. ನನಗೆ ಷೇರುಪೇಟೆಯಲ್ಲಿ ಲಾಭ ಬಂದ ಕೂಡಲೇ ಆ ಹಣವನ್ನು ಕಚೇರಿಗೆ ಹಿಂದಿರುಗಿಸಲು ನಿಶ್ಚಯಿಸಿದ್ದೆ. ಮಾರನೆಯ ಸಂಜೆ ನನಗೆ ದೊಡ್ಡ ಆಘಾತವಾಯಿತು. ನಾನು ಹೂಡಿದ್ದ ಹಣವೆಲ್ಲ ನಷ್ಟವಾಗಿತ್ತು. ನಾನು ದುರುಪಯೋಗ ಮಾಡಿದ್ದ ಹಣವನ್ನು ಹೊಂದಿಸಲು ಕಂಪನಿಯ ಇನ್ನೊಂದು ಖಾತೆಯಿಂದ ಹಣವನ್ನು ವರ್ಗಾಯಿಸಿ ಕೊಡಬೇಕಾದ ಹಣವನ್ನು ಪ್ರಾವಿಡೆಂಟ್ ಫಂಡ್ಗೆಂದು ತುಂಬಿದೆ. ಎರಡು ದಿನಗಳ ನಂತರ ಕಂಪನಿಯ ಖಾತೆಯಿಂದ ಪುನಃ ಐದು ಲಕ್ಷ ರೂ.ಗಳನ್ನು ದುರುಪಯೋಗ ಮಾಡಿ ಷೇರುಗಳಲ್ಲಿ ಹೂಡಿದೆ. ಹೀಗೆಯೇ ಪ್ರತಿ ವಾರವೂ ಕಂಪನಿಯ ಹಣ ಕದಿಯುತ್ತಾ ಬಂದೆ. ನಾನು ಷೇರುಪೇಟೆಯಲ್ಲಿ ಹಣ ಗಳಿಸಿದಾಗಲೆಲ್ಲ ಅದರಲ್ಲಿ ಶೇ. 50ರಷ್ಟು ಹಣವನ್ನು ಕಂಪನಿಯ ಅಕೌಂಟ್ಗೆ ತುಂಬುತ್ತಿದ್ದೆ. ನನ್ನ ಅದೃಷ್ಟಕ್ಕೆ ಆ ವರ್ಷ ಕಂಪನಿಯ ಲೆಕ್ಕಪತ್ರಗಳ ಆಡಿಟ್ ಮಾಡಿದಾಗ ಕಾಣೆಯಾದ ಹಣದ ಬಗ್ಗೆ ನಾನು ಏನೇನೋ ಸಬೂಬು ನೀಡಿ ಲೆಕ್ಕ ಪರಿಶೋಧಕರಿಗೆ ಎಲ್ಲವೂ ಸರಿಯಾಗಿದೆಯೆಂದು ಮನನ ಮಾಡಿಕೊಟ್ಟೆ. ಹೀಗಾಗಿ ನನಗೆ ಧೈರ್ಯ ಬಂದಿತು. ಈ ವರ್ಷ ನಾನು ಹೆಚ್ಚಿಗೆ ಆಸೆಗೆ ಬಿದ್ದು ಒಂದು ಕೋಟಿಯಷ್ಟು ಹಣ ದುರುಪಯೋಗ ಮಾಡಿಕೊಂಡು ಆ ಎಲ್ಲ ಹಣವನ್ನೂ ನನ್ನ ಆಪ್ನಲ್ಲಿ ಹೇಳಿದಂತೆ ತೊಡಗಿಸಿ ಅಷ್ಟೂ ಹಣವನ್ನು ಕಳೆದುಕೊಂಡಿರುವೆ. ಈಗ ನನ್ನ ಬಳಿ ಒಂದು ಪೈಸೆಯೂ ಇಲ್ಲ. ನೀವು ಯಾವ ಕ್ರಮವನ್ನಾದರೂ ತೆಗೆದುಕೊಳ್ಳಿ, ಆದರೆ ನಾನೂ ಮೋಸದ ಜಾಲಕ್ಕೆ ಒಳಗಾಗಿದ್ದೇನೆ ಎನ್ನುವುದನ್ನು ಗಮನದಲ್ಲಿಡಿ.’
ಸುರೇಶ್ನ ವಿರುದ್ಧ ಕಂಪನಿಯ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವುದು, ವಂಚನೆ, ಹಣ ದುರುಪಯೋಗ ಮಾಡಿದ ಪ್ರಕರಣವನ್ನು ದಾಖಲಿಸಿ ಅವನನ್ನು ನೌಕರಿಯಿಂದ ವಜಾ ಮಾಡಿದರು.
ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದ ನಂತರ ಸುರೇಶ್ ತನಗೆ ಮೊಬೈಲ್ ಆಪ್ ಮೂಲಕ ಮೋಸ ಮಾಡಿದವರ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ. ಅದು ದಾಖಲಾಗುವ ಸಮಯದಲ್ಲಿ ಪೊಲೀಸರು ಅವನಂತೆ ನೂರಾರು ಜನರು ಇದೇ ರೀತಿಯಾಗಿ ಆಪ್ಗಳನ್ನು ಡೌನ್ ಲೋಡ್ ಮಾಡಿಕೊಂಡು ಅವುಗಳಲ್ಲಿ ಹಣವನ್ನು ತೊಡಗಿಸಿ ಮೂರ್ಖರಾಗಿದ್ದಾರೆಂದು ತಿಳಿಸಿ ಮೋಸ ಮಾಡಿದವರು ಇನ್ನೂ ಪತ್ತೆಯಾಗಿಲ್ಲ ಎಂದರು.
‘‘ಶೀಘ್ರದಲ್ಲಿಯೇ ಹಣ ಗಳಿಸಬೇಕೆನ್ನುವವರು ಎರಡು ಮುಖ್ಯ ತಪ್ಪುಗಳನ್ನು ಮಾಡುತ್ತಾರೆ- ತಮಗೆ ಸರಿಯಾಗಿ ಅರ್ಥವಾಗದ ಯೋಜನೆಗಳಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎನ್ನುತ್ತಾನೆ ಅಮೆರಿಕದ ಸಂವಹನ ತಜ್ಞ ಲ್ಯಾರಿ ಬರ್ಕೆಟ್. ಯಾವುದೇ ಕಾರಣಕ್ಕೂ ವಾಟ್ಸ್ಯಾಪ್ ಗುಂಪುಗಳು, ಆಪ್ಗಳು ಮುಂತಾದವುಗಳಿಂದ ಬರುವ ಅಗೋಚರ ಸಲಹೆಗಳಿಗಾಗಿ ಮರುಳಾಗದಿರಿ. ಷೇರು ಪೇಟೆಯಲ್ಲಿ ಹಣ ತೊಡಗಿಸಬೇಕೆಂದರೆ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು ಒಳಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)