ಷರಾಗಳು ಮತ್ತು ಪ್ರಶ್ನೆಗಳ ಬೆನ್ನತ್ತಿ ಹೋದಾಗ...

Trump Biden
ಟ್ರಂಪ್, ಬೈಡೆನ್
Published on
ಇಪ್ಪತ್ತು ವರ್ಷಗಳ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಅಮೆರಿಕನ್ ಸೇನೆ ಅಫ್ಘಾನಿಸ್ತಾನದಿಂದ ಹೊರನಡೆದಿದೆ. ಅಮೆರಿಕ ಓಡಿಹೋಗಿದೆ, ನಂಬಿದವರನ್ನು ಕೈಬಿಟ್ಟಿದೆ, ತನ್ನ ಜಾಗತಿಕ ಜವಾಬ್ದಾರಿಗಳನ್ನು ಮರೆತಿದೆ ಎಂಬ ಪುಂಖಾನುಪುಂಖ ಷರಾಗಳ ಹಿಂದೆಯೇ ಅಮೆರಿಕ ಹೀಗೆ ಓಡಿಹೋಗಬಹುದೇ, ನಂಬಿದವರನ್ನು ಹೀಗೆ ಕೈಬಿಡಬಹುದೇ, ಜವಾಬ್ದಾರಿಗಳನ್ನು ಹೀಗೆ ಮರೆಯಬಹುದೇ ಎಂಬ ಪ್ರಶ್ನೆಗಳೂ ಮೊಳಗತೊಡಗಿವೆ. ಈ ಷರಾಗಳು ಮತ್ತು ಪ್ರಶ್ನೆಗಳ ಬೆನ್ನುಹತ್ತಿಹೋಗುವುದು ಇಂದಿನ ‘ಜಗದಗಲ’ದ ವಸ್ತುವಿಷಯ.

2001 ಸೆಪ್ಟೆಂಬರ್ 11ರಂದು ತನ್ನ ಮೇಲೆ ದಾಳಿಯೆಸಗಿದ್ದು ಅಲ್-ಖಯೀದಾ ಎಂದು ಅಮೆರಿಕಕ್ಕೆ ತಿಳಿಯಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಯಾಕೆಂದರೆ ಆ ಭಯೋತ್ಪಾದಕ ಸಂಘಟನೆ ಕೆನ್ಯಾ ಮತ್ತು ತಾಂಜಾನಿಯಾಗಳಲ್ಲಿ ಅಮೆರಿಕನ್ ರಾಯಭಾರ ಕಚೇರಿಗಳ ಮೇಲೆ ದಾಳಿಯೆಸಗಿ ನೂರಾರು ಜನರನ್ನು ಕೊಂದಿತ್ತು, ಏಡನ್ ಬಂದರಿನಲ್ಲಿ ಲಂಗರು ಹಾಕಿದ್ದ ಅಮೆರಿಕನ್ ಯುದ್ಧನೌಕೆ ಯುಎಸ್​ಎಸ್ ಕೋಲ್ ಮೇಲೂ ದಾಳಿಯೆಸಗಿತ್ತು, ಹೀಗೆ ತನ್ನ ಅಮೆರಿಕನ್-ವಿರೋಧಿ ಭಯೋತ್ಪಾದಕ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಬಂದಿತ್ತು. ಆದರೆ ತಕ್ಷಣಕ್ಕೆ ಉತ್ತರ ಸಿಗದ ಪ್ರಶ್ನೆಯೆಂದರೆ ಒಸಾಮಾ ಬಿನ್ ಲಾಡೆನ್ ಅಡಗಿರುವುದೆಲ್ಲಿ ಎನ್ನುವುದಾಗಿತ್ತು.

1990ರ ದಶಕದ ಉತ್ತರಾರ್ಧದಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದಂತೇ ಅಲ್-ಖಯೀದಾ ಅಲ್ಲಿ ನೆಲೆ ಗಳಿಸಿಕೊಳ್ಳತೊಡಗಿದ್ದರೂ ಆ ದಿನಗಳಲ್ಲಿ ಅದರ ಮುಖ್ಯ ನೆಲೆ ಈಶಾನ್ಯ ಆಫ್ರಿಕಾದ ಅಶಾಂತ ಸುಡಾನ್ ಆಗಿತ್ತು. ಹೀಗಾಗಿ ಸಹಜವಾಗಿಯೇ ಅಮೆರಿಕದ ಹುಡುಕಾಟದ ಕಣ್ಣು ಮೊದಲು ಹೊರಳಿದ್ದು ಅತ್ತಲೇ. ಒಂದುವೇಳೆ ಲಾಡೆನ್ ಸುಡಾನ್​ನಲ್ಲಿದ್ದಾನೆಂದು ಸೂಚನೆ ಸಿಕ್ಕಿಬಿಟ್ಟಿದ್ದರೆ ಅಫ್ಘಾನಿಸ್ತಾನದ ಕಡೆ ಅಮೆರಿಕದ ಗಮನ ಹೋಗುತ್ತಲೇ ಇರಲಿಲ್ಲ. ಅದು ಸುಡಾನ್ ಮೇಲೆ ಉಗ್ರವಾಗಿ ಎರಗಿಬಿಡುತ್ತಿತ್ತು. ಆದರೆ ಅಲ್-ಖಯೀದಾ ಪ್ರಸರಿಸಿದ ಕೆಲವು ಚಿತ್ರಗಳು, ಒಸಾಮಾನ ಸಂದೇಶಗಳ ವಿಡಿಯೋಗಳು ಅವನ ನೆಲೆ ಅಫ್ಘಾನಿಸ್ತಾನದ ತೋರಾ ಬೋರಾ ಬೆಟ್ಟಪ್ರದೇಶ ಎಂಬ ರಹಸ್ಯವನ್ನು ಬಯಲಮಾಡಿದೊಡನೇ ಅಮೆರಿಕ ತನ್ನ ಗಮನವನ್ನು ಇತ್ತ ಹೊರಳಿಸಿತು.

ಅಷ್ಟರಲ್ಲಾಗಲೇ ತಾಲಿಬಾನ್ ತನ್ನ ಕರಾಳ ಆಳ್ವಿಕೆಯ ಅರ್ಧ ದಶಕವನ್ನು ಪೂರ್ಣಗೊಳಿಸಿತ್ತು, ಸಹಸ್ರಾರು ವಿರೋಧಿಗಳನ್ನು ಕ್ರೂರವಾಗಿ ಕೊಂದಿತ್ತು, ಶಿಯಾ, ಹಿಂದೂ, ಸಿಖ್ ಅಲ್ಪಸಂಖ್ಯಾತರನ್ನು ನಿರ್ದಯೆಯಿಂದ ಕಾಣುತ್ತಿತ್ತು, ಬಾಮಿಯನ್ ಬುದ್ಧನನ್ನು ಹಾಳುಗೆಡವಿತು. ಅದಾವುದೂ ಅಮೆರಿಕವನ್ನು ಕೆರಳಿಸಿರಲಿಲ್ಲ. ಅಂತಿಮವಾಗಿ ಅಮೆರಿಕದ ದೃಷ್ಟಿಯಲ್ಲಿ ತಾಲಿಬಾನ್ ಎಸಗಿದ್ದ ‘ಅಕ್ಷಮ್ಯ ಅಪರಾಧ’ ವೆಂದರೆ ಅಲ್-ಖಯೀದಾಗೆ ಆಶ್ರಯ ನೀಡಿದ್ದು. ಒಂದುವೇಳೆ ತಾಲಿಬಾನ್ ಹಾಗೆ ಮಾಡಿಲ್ಲದಿದ್ದರೆ ಅಮೆರಿಕನ್ ಸೇನೆ ಅದರ ಮೇಲೆ ಎರಗುತ್ತಿರಲಿಲ್ಲ,

ಆ ಮೂಲಭೂತವಾದಿ ಭಯೋತ್ಪಾದಕ ಸಂಘಟನೆ ತನ್ನ ದುರಾಡಳಿತವನ್ನು ಇಂದಿಗೂ ನಿರಾತಂಕವಾಗಿ ನಡೆಸಿಕೊಂಡೇ ಬಂದಿರುತ್ತಿತ್ತು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಮುಖ್ಯ ಗುರಿಯಾಗಿದ್ದದ್ದು ಅಲ್-ಖಯೀದಾ, ತಾಲಿಬಾನ್ ಅಲ್ಲ. ಈ ಐತಿಹಾಸಿಕ ವಾಸ್ತವವನ್ನು ಗುರುತಿಸಿದರೆ ವರ್ತಮಾನದ ಬಗೆಗಿನ ಅದೆಷ್ಟೋ ಗೊಂದಲಗಳು ನಿವಾರಣೆಯಾಗುತ್ತವೆ.

ಎಂಟು ವರ್ಷಗಳ ರಿಪಬ್ಲಿಕನ್ ಆಡಳಿತದಲ್ಲಿ ಒಸಾಮಾನನ್ನು ಹುಡುಕಿ ಕೊಲ್ಲುವ ಗುರಿಯೊಂದರ ಹೊರತಾಗಿ ತನ್ನ ಬಹುತೇಕ ಗುರಿಗಳನ್ನು ಅಮೆರಿಕ ಸಾಧಿಸಿತು. ಅಲ್-ಖಯೀದಾ ತನ್ನ ನೆಲೆಯನ್ನು ಕಳೆದುಕೊಂಡಿತ್ತು, ತಾಲಿಬಾನ್​ಗೂ ಎತ್ತಂಗಡಿಯಾಗಿ ಅದು ನೆರೆಯ ಪಾಕಿಸ್ತಾನದ ಖೈಬರ್-ಪಖ್ತೂನ್​ಖ್ವಾ ಪ್ರಾಂತ್ಯದಲ್ಲಿ ಅಡಗಿ ಅನಿಶ್ಚಿತ ಭವಿಷ್ಯವನ್ನೆದುರಿಸುತ್ತಿತ್ತು.ಆದರೆ ಪರಿಸ್ಥಿತಿ ಬದಲಾಗತೊಡಗಿದ್ದು 2009ರ ಜನವರಿಯಲ್ಲಿ ಆರಂಭವಾದ ಡೆಮೋಕ್ರಾಟಿಕ್ ಆಡಳಿತ ಕಾಲದಲ್ಲಿ.

ಒಸಾಮಾನಿಗಾಗಿ ನಡೆಯುತ್ತಿದ್ದ ಹುಡುಕಾಟ ಯಶಸ್ವಿಗೊಂಡದ್ದು 2011ರಲ್ಲಿ. ಅದರ ಹೊರತಾಗಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತಾವಧಿಯಲ್ಲಿ ‘ಭಯೋತ್ಪಾದನೆ ವಿರುದ್ಧದ ಸಮರ’ ವಿಷಯದಲ್ಲಿ ಮತ್ತೇನೂ ದೊಡ್ಡ ಸಾಧನೆಯನ್ನು ನಾವು ಕಾಣುವುದಿಲ್ಲ. ಹತ್ತು ವರ್ಷಗಳಿಂದ ಅಮೆರಿಕನ್ ಸೇನೆ ಹುಡುಕುತ್ತಿದ್ದ ಒಸಾಮಾ ಕೊನೆಗೆ ಸಿಕ್ಕಿದ್ದು ಪಾಕಿಸ್ತಾನೀ ರಾಜಧಾನಿಗೆ ಅನತಿ ದೂರದ ಅಬ್ಬೊಟಾಬಾದ್​ನಲ್ಲಿ, ಅದೂ ಪಾಕ್ ಸೇನೆಯ ರಕ್ಷಣೆಯಲ್ಲೇ ಎಂದು ತಿಳಿದರೂ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮಕ್ಕೆ ಒಬಾಮ ಸರ್ಕಾರ ಮುಂದಾಗಲಿಲ್ಲ, ಅದಕ್ಕೆ ನೀಡುತ್ತಿದ್ದ ಹಣವನ್ನು ಕಡಿತಗೊಳಿಸಲಿಲ್ಲ ಎಂಬ ವಿಷಯಗಳು ‘ಭಯೋತ್ಪಾದನೆ ವಿರುದ್ಧದ ಸಮರ’ ಹಳ್ಳ ಹಿಡಿದದ್ದನ್ನು ಮೌನವಾಗಿ ಸಾರುತ್ತವೆ. ಪ್ರಶ್ನೆಗಳೇಳಬೇಕಾದ್ದು ಇಲ್ಲಿ. ಆದರೆ ಅಮೆರಿಕ ಮತ್ತು ಜಾಗತಿಕ ಮಾಧ್ಯಮಕ್ಷೇತ್ರವನ್ನು ಆವರಿಸಿಕೊಂಡಿರುವ ಎಡಪಂಥೀಯರು ಪ್ರಶ್ನೆಗಳ ದಿಕ್ಕನ್ನೇ ಬದಲಾಯಿಸುವುದರಲ್ಲಿ ಯಶಸ್ವಿಯಾದರು. ಪರಿಣಾಮವಾಗಿ, ಪಾಕ್ ಆಶ್ರಯದಲ್ಲಿ ತಾಲಿಬಾನ್ ಮರುಜೀವ ಗಳಿಸಿಕೊಂಡು, ರೆಕ್ಕೆಪುಕ್ಕಗಳನ್ನು ಚಿಗುರಿಸಿಕೊಂಡು ಪೊಗದಸ್ತಾಗಿ ಬೆಳೆಯಿತು. ಬರಾಕ್ ಒಬಾಮ ಅಧಿಕಾರ ತ್ಯಜಿಸುವ ಹೊತ್ತಿಗೆ ಅಫ್ಘಾನಿಸ್ತಾನದ ಬಹುತೇಕ ಹಳ್ಳಿಗಾಡಿನಲ್ಲಿ ತಾಲಿಬಾನಿಗಳ ಪ್ರಭಾವ ವೃದ್ಧಿಸಿತ್ತು. ಜತೆಗೆ ಒಸಾಮಾ ನಂತರ ಅಲ್-ಖಯೀದಾದ ನಾಯಕನಾದ ಅಯ್ಮೆನ್ ಅಲ್-ಜವಾಹಿರಿ ಅಫ್ಘಾನಿಸ್ತಾನದಲ್ಲೇ ಅಡಗಿರುವನೆಂದು ಸುದ್ದಿ! ತಾಲಿಬಾನ್ ವಿರುದ್ಧ ಸಮರ್ಥವಾಗಿ ಹೋರಾಡುವ ಸ್ಥೈರ್ಯವಿರಲಿ, ಮನೋಭಾವವೇ ಅಧ್ಯಕ್ಷ ಅಶ್ರಫ್ ಘಾನಿಗೆ ಇರಲಿಲ್ಲ. ಹದಿವಯಸ್ಸಿನಲ್ಲೇ ಅಮೆರಿಕಕ್ಕೆ ಹೋಗಿ ಶಿಕ್ಷಣ ಪಡೆದು ಅಲ್ಲಿಯೇ ವಿವಿಧ ವೃತ್ತಿ ಹಿಡಿದು ನೆಲೆಸಿದ್ದ ಈ ‘ಅಮೆರಿಕನ್ ಅಫ್ಘನ್’ ಮತ್ತೆ ತಾಯ್ನಾಡಿಗೆ ಹಿಂತಿರುಗಿದ್ದು 2002ರಲ್ಲಿ ಅಮೆರಿಕದ ಹಸ್ತಕನಾಗಿ. 2014ರಲ್ಲಿ ಅಮೆರಿಕನ್ನರ ಪಿತೂರಿಯಿಂದಲೇ ಅಫ್ಘಾನಿಸ್ತಾನದ ಅಧ್ಯಕ್ಷರಾದ ಘಾನಿಗೆ ದೇಶದ ಬಗ್ಗೆ ಪ್ರೀತಿ, ನಿಷ್ಠೆ ಇರಲಿಲ್ಲ.

ರಿಪಬ್ಲಿಕನ್ ಅಧ್ಯಕ್ಷ ಜಾರ್ಜ್ ಬುಷ್ ಬೆಂಬಲಿಸಿದ್ದು ನಿಸ್ವಾರ್ಥಿ ರಾಷ್ಟ್ರಪ್ರೇಮಿ ಹಮೀದ್ ಕರ್ಜಾಯ್ ಅವರನ್ನು. ಅವರದೇ ಗುಣಗಳನ್ನು ಹೊಂದಿದ್ದ ಅಬ್ದುಲ್ಲಾ ಅಬ್ದುಲ್ಲಾರನ್ನು ಮೂಲೆಗೊತ್ತಿ ಬರಾಕ್ ಒಬಾಮ ಮುಂಚೂಣಿಗೆ ತಂದದ್ದು ಭ್ರಷ್ಟಾಚಾರಿ ಅಶ್ರಫ್ ಘಾನಿಯವರನ್ನು. ಭಯೋತ್ಪಾದನೆ ವಿರುದ್ಧ ಸಮರದ ಬಗ್ಗೆ, ನತದೃಷ್ಟ ಅಫ್ಘಾನಿಸ್ತಾನದ ಭವಿಷ್ಯದ ಬಗ್ಗೆ ಬುಷ್ ಮತ್ತು ಒಬಾಮರಿಗಿದ್ದ ನಿಷ್ಠೆಯ ಮಟ್ಟದ ಚಿತ್ರಣ ಇದರಿಂದ ನಿಮಗೆ ಸಿಗಬಹುದು.

ಇದೆಲ್ಲವನ್ನೂ ಗಮನಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಅನಿಸಿದ್ದು ಅಫ್ಘಾನಿಸ್ತಾನದಲ್ಲಿ ಅಮೆರಿಕ ವ್ಯರ್ಥ ಯುದ್ಧದಲ್ಲಿ ತನ್ನ ಶಕ್ತಿ ವ್ಯಯಿಸುತ್ತಿದೆ, ತನ್ನ ಯೋಧರನ್ನು ಬಲಿಗೊಡುತ್ತಿದೆ ಎಂದು. ಒಬಾಮ ಕಾಲದಲ್ಲಿ ಅಮೆರಿಕದಿಂದ ಪಾಕಿಸ್ತಾನಕ್ಕೆ ಹರಿದುಹೋಗುತ್ತಿದ್ದ ವಾರ್ಷಿಕ 2,633 ಮಿಲಿಯನ್ ಡಾಲರ್ ಧನರಾಶಿಯನ್ನು ಟ್ರಂಪ್ ತಮ್ಮ ಆಳ್ವಿಕೆಯ ಮೊದಲ ವರ್ಷದಲ್ಲಿ 526 ಮಿಲಿಯನ್ ಡಾಲರ್​ಗಳಿಗೆ, ಮುಂದಿನ ವರ್ಷದಲ್ಲಿ 400 ಮಿಲಿಯನ್ ಡಾಲರ್​ಗಳಿಗೂ ಕಡಿಮೆಗೆ ಇಳಿಸಿದರು. ಇಷ್ಟಾಗಿಯೂ ತಾಲಿಬಾನ್​ಗೆ ಪಾಕಿಸ್ತಾನದಿಂದ ಸಿಗುವ ಬೆಂಬಲ ಕಡಿಮೆಯಾಗುತ್ತದೆಂದು ಅವರಿಗೆ ಮನವರಿಕೆಯಾಗಲಿಲ್ಲ. ಜತೆಗೆ ಅವರಿಗೆ ಪ್ರಥಮ ಆದ್ಯತೆಯಾಗಿ ಕಂಡದ್ದ್ದು ಚೀನಾ. ಹೀಗಾಗಿ ನಿರರ್ಥಕ ಯುದ್ಧಗಳಲ್ಲಾಗುತ್ತಿದ್ದ ಶಕ್ತಿವ್ಯಯವನ್ನು ನಿಲ್ಲಿಸಿ ಚೀನಾದತ್ತ ಗಮನ ನೀಡಲು ನಿರ್ಧರಿಸಿದರು. ತಾಲಿಬಾನೀ ನಾಯಕರ ಜತೆ ದೋಹಾದಲ್ಲಿ ಮಾತುಕತೆಗಳನ್ನವರು 2018ರ ಜುಲೈನಲ್ಲಿ ಆರಂಭಿಸಿದರೂ ಅದು ‘ಸರಿಯಾದ’ ಹಾದಿಯಲ್ಲಿ ಸಾಗದೇಹೋದಾಗ ಮುಂದಿನ ಮಾತುಕತೆಗೆ ಅವರು ಆಯ್ದುಕೊಂಡ ವ್ಯಕ್ತಿ ಮುಲ್ಲಾ ಅಬ್ದುಲ್ ಘಾನಿ ಬರದರ್.

ಮುಲ್ಲಾ ಬರದರ್ ಜತೆ 2010ರಿಂದ ಅಮೆರಿಕ ವರ್ತಿಸಿದ ಬಗೆಯನ್ನು ನೋಡಿದರೆ ಅವನನ್ನು ತಮ್ಮ ‘ಮನುಷ್ಯ’ನನ್ನಾಗಿ ಒಬಾಮ ಸರ್ಕಾರ ತಯಾರು ಮಾಡಿದ್ದು ಸ್ಪಷ್ಟವಾಗುತ್ತದೆ. ಮುಲ್ಲಾ ಬರದರ್ ತಾಲಿಬಾನ್​ನ ಸಹಸಂಸ್ಥಾಪಕ ಅಂದರೆ ಮುಲ್ಲಾ ಒಮರ್ ಜತೆಗೂಡಿ 1994ರಲ್ಲಿ ತಾಲಿಬಾನ್ ಅನ್ನು ಸೃಷ್ಟಿಸಿದ್ದಾತ. 2001ರಿಂದಲೂ ಅಮೆರಿಕನ್ ಸೇನೆ ಅವನಿಗಾಗಿ ಇಡೀ ಅಫ್ಘಾನಿಸ್ತಾನವನ್ನು ಜಾಲಾಡಿತ್ತು. ಅಂತಿಮವಾಗಿ 2010ರಲ್ಲಿ ಅವನು ಸಿಕ್ಕಿದ್ದೆಲ್ಲಿ ಗೊತ್ತೇ? ಪಾಕಿಸ್ತಾನೀ ಬಂದರು ನಗರ ಕರಾಚಿಯಲ್ಲಿ! ಬುಷ್ ಆಡಳಿತಾವಧಿಯಲ್ಲಿ ಸೆರೆಸಿಕ್ಕಿದ ಪ್ರಮುಖ ಅಲ್-ಖಯೀದಾ ಮತ್ತು ತಾಲಿಬಾನ್ ನಾಯಕರನ್ನು ಅಮೆರಿಕನ್ ಸೇನೆ ಎತ್ತಿಕೊಂಡು ಹೋಗಿ ದೂರದ ಗ್ವಂತನಾಮೋ ಬೇ ನೆಲೆಯಲ್ಲಿಟ್ಟುಕೊಂಡು ಇತರರ ಬಗ್ಗೆ ಮಾಹಿತಿಗಳಿಗಾಗಿ ಹಿಂಡಿ ಹಿಪ್ಪೆ ಮಾಡುತ್ತಿತ್ತು. ಆದರೆ ಒಬಾಮ ಆಡಳಿತಾವಧಿಯಲ್ಲಿ ಸೆರೆಸಿಕ್ಕಿದ್ದು ಮುಲ್ಲಾ ಬರದರ್​ನ ಅದೃಷ್ಟ. ಪಾಕಿಸ್ತಾನಿಯರ ಜತೆಗೂಡಿ ಅಮೆರಿಕನ್ನರು ಬರದರ್​ನನ್ನು ಹಿಡಿದರೂ ಅವನನ್ನು ಪಾಕಿಸ್ತಾನೀ ಕಾರಾಗೃಹದಲ್ಲೇ ಇರಿಸಲಾಯಿತು. ಕೊನೆಗೆ ಅವನನ್ನು ಬಿಡುಗಡೆ ಮಾಡವಂತೆ 2018ರ ಅಕ್ಟೋಬರ್​ನಲ್ಲಿ ಪಾಕಿಸ್ತಾನೀಯರಿಗೆ ಹೇಳಿದ್ದೂ ಅಮೆರಿಕನ್ನರೇ.

ಬಿಡುಗಡೆಯಾದ ಮೇಲೆ ಮುಲ್ಲಾ ಬರದರ್ ಖತರ್​ನ ರಾಜಧಾನಿ ದೋಹಾಗೆ ಹೋಗಿ, ಅಲ್ಲಾಗಲೇ ಖತರೀ ಸರ್ಕಾರದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ತಾಲಿಬಾನ್​ನ ಕಚೇರಿ ಸೇರಿಕೊಂಡ. ಟ್ರಂಪ್ ಸರ್ಕಾರ ಅವನೊಂದಿಗೇ ಮಾತುಕತೆ ಆರಂಭಿಸಿತು! ಇದೆಲ್ಲ ಏನು ಹೇಳುತ್ತದೆ? ಅಫ್ಘಾನಿಸ್ತಾನದಿಂದ ಅಮೆರಿಕ ಹೊರನಡೆಯುವ ಬಗ್ಗೆ ‘ಮಾತುಕತೆ’ ನಿಜವಾಗಿಯೂ ಆರಂಭವಾದದ್ದು ದೋಹಾದಲ್ಲಿ ಅಲ್ಲ, ಬದಲಿಗೆ ಬಹಳ ಹಿಂದೆಯೇ ಪಾಕಿಸ್ತಾನೀ ಕಾರಾಗೃಹದಲ್ಲೇ ಎಂದಲ್ಲವೇ?

ಬರದರ್​ನನ್ನು ಮೊದಲಿಗೆ ತಮ್ಮ ಪರವಾಗಿ ‘ಅಪ್ರೂವರ್’ ಆಗುವಂತೆ ಮನವೊಲಿಸಿ ತಮ್ಮವನನ್ನಾಗಿ ಮಾಡಿಕೊಂಡದ್ದು ಅಧ್ಯಕ್ಷ ಒಬಾಮ ಕಾಲದಲ್ಲೇ, ಅವನನ್ನು ಅಷ್ಟು ವರ್ಷಗಳು ಜೀವಂತವಾಗಿ ಇರಿಸಿಕೊಂಡದ್ದೇ ಅದಕ್ಕಾಗಿ ಎನ್ನುವುದು ಚುಕ್ಕೆಗಳನ್ನು ಜೋಡಿಸುತ್ತ ಹೋದರೆ ನಮಗೆ ಸಿಗುವ ಚಿತ್ರ. ಒಬಾಮ ಆಡಳಿತ ‘ತಯಾರಿಸಿಟ್ಟಿದ್ದ’ ಬರದರ್​ನನ್ನು ಬಿಡುಗಡೆ ಮಾಡಿ, ಅಮೆರಿಕನ್ ‘ಸಂದೇಶ’ವನ್ನು ಅವನು ದೋಹಾದಲ್ಲಿದ್ದ ಇತರ ತಾಲಿಬಾನಿ ನಾಯಕರಾದ ಮುಲ್ಲಾ ಹಿಬಾತುಲ್ಲಾ ಅಖುಂಡ್​ಜಾದಾ ಮತ್ತು

ಮುಲ್ಲಾ ಮಹಮದ್ ಯಾಕೂಬ್ ಜತೆ ಹಂಚಿಕೊಳ್ಳಲು ಅವಕಾಶ ನೀಡಿ, ಆಮೇಲೆ ಮೊದಲೇ ಯೋಜಿತವಾಗಿದ್ದಂತೆ ಅವನೊಂದಿಗೆ ಬಹಿರಂಗವಾಗಿ ಮಾತುಕತೆ ನಡೆಸುವ ‘ನಾಟಕ’ವನ್ನು ಆಡಲೇಬೇಕಾದ ಒತ್ತಡಕ್ಕೆ ಟ್ರಂಪ್ ಸರ್ಕಾರ ಸಿಲುಕಿಹೋಯಿತು. ಜತೆಗೆ, ಅಮೆರಿಕ ಜತೆಗೆ ಮಾತುಕತೆ ನಡೆಸಲು ಅವಶ್ಯಕವಾದ ಅಧಿಕೃತತೆಯನ್ನು ಬರದರ್ ಪಡೆದುಕೊಂಡದ್ದು ದೋಹಾದಲ್ಲಿ ಅಸ್ತಿತ್ವಕ್ಕೆ ಬಂದ ಅಫ್ಘಾನಿಸ್ತಾನದ ನಿರ್ವಾಸಿತ ಸರ್ಕಾರದ ಅಧ್ಯಕ್ಷ ಪದವಿಯನ್ನು ಅಲಂಕರಿಸಿ. ಇಂದು ಅದೇ ಬರದರ್ ಕಾಬುಲ್​ನಲ್ಲೇ ತಾಲಿಬಾನಿಗಳು ಸ್ಥಾಪಿಸಲಿರುವ ಸರ್ಕಾರದ ಅಧ್ಯಕ್ಷನಾಗಲಿದ್ದಾನೆ! ಅಂದರೆ ಅಮೆರಿಕದ ಮನುಷ್ಯ ಬರದರ್ ಅಫ್ಘಾನಿಸ್ತಾನದ ಅಧ್ಯಕ್ಷ! (ಎಷ್ಟು ಕಾಲದವರೆಗೆ ಅವನು ಅಮೆರಿಕನ್ ಮನುಷ್ಯನಾಗಿಯೇ ಉಳಿಯುತ್ತಾನೆ ಎಂದು ಈಗಲೇ ಹೇಳಲಾಗುವುದಿಲ್ಲ)

ಇನ್ನು, ತಾಲಿಬಾನ್ ಜತೆ ಮಾತುಕತೆಯಾಡಲು ಅಮೆರಿಕ ಆಯ್ದುಕೊಂಡ ಝಾಲ್ಮೆ ಖಲೀಲ್​ಜಾದ್​ನದು ಇನ್ನೊಂದು ಕಥೆ. ಹದಿವಯಸ್ಸಿನಲ್ಲೇ ಅಮೆರಿಕಕ್ಕೆ ಹೋಗಿ ಅಲ್ಲೇ ನೆಲೆಸಿ ಅಮೆರಿಕನ್ನನೇ ಆಗಿಹೋದ ಈತನಿಗೂ ಅಫ್ಘನ್ ಜನತೆ ಬಗ್ಗೆ ಯಾವ ಪ್ರೀತಿಯೂ ಇಲ್ಲ. ಅಶ್ರಫ್ ಘಾನಿ ಮತ್ತು ಝಾಲ್ಮೆ ಖಲೀಲ್​ಜಾದ್ ಅಫ್ಘಾನಿಸ್ತಾನವನ್ನು ಮತ್ತೆ ತಾಲಿಬಾನ್ ಕೈಗೆ ಹಾಕುವುದರಲ್ಲಿ ಸಮಾನಮನಸ್ಕರು!

ಇನ್ನು ಅಮೆರಿಕ ಅಫ್ಘಾನಿಸ್ತಾನದಿಂದ ಓಡಿಹೋಗಿದೆಯೇ? 1975 ಏಪ್ರಿಲ್ 17ರಂದು ಕಾಂಬೋಡಿಯಾದ ರಾಜಧಾನಿ ನಾಮ್ೆನ್ ಕಮ್ಯೂನಿಸ್ಟ್ ಖ್ಮೀರ್ ರೂಜ್ ಕೈವಶವಾದಾಗ ಅಲ್ಲಿದ್ದ ಅಮೆರಿಕನ್ ರಾಯಭಾರಿ ಅಮೆರಿಕನ್ ಧ್ವಜವನ್ನು ಕಂಕುಳಲ್ಲಿ ಸಿಕ್ಕಸಿಕೊಂಡು ಓಡಿದ್ದ. ಹದಿಮೂರು ದಿನಗಳ ನಂತರ ಪಕ್ಕದ ದಕ್ಷಿಣ ವಿಯೆಟ್ನಾಂನ ರಾಜಧಾನಿ ಸೈಗಾನ್ ಕಮ್ಯೂನಿಸ್ಟರ ಕೈವಶವಾದಾಗ ಅಮೆರಿಕನ್ ರಾಜತಂತ್ರಜ್ಞರನ್ನು ರಾಯಭಾರ ಕಚೇರಿಯ ಟೆರೇಸ್ ಮೇಲೆ ಒಟ್ಟುಗೂಡಿಸಿ ಹೆಲಿಕಾಪ್ಟರ್​ಗಳ ಮೂಲಕ ಬಂದರಿನಲ್ಲಿದ್ದ ಅಮೆರಿಕನ್ ನೌಕೆಗೆ ಸಾಗಿಸಲಾಯಿತು. ‘ಓಡಿಹೋಗುವುದು’ ಅಂದರೆ ಅದು. ಅಫ್ಘಾನಿಸ್ತಾನದಿಂದ ಅಮೆರಿಕನ್ನರು ಹಾಗೇನೂ ಓಡಿಲ್ಲ. ರಾಜಧಾನಿಯನ್ನು ಆಕ್ರಮಿಸಿಕೊಂಡ ತಾಲಿಬಾನಿಗಳು ವಿಮಾನನಿಲ್ದಾಣವನ್ನು ಮಾತ್ರ ಅಮೆರಿಕನ್ನರ ಕೈಯಲ್ಲೇ ಬಿಟ್ಟಿದ್ದಾರೆ, ಅಮೆರಿಕನ್ನರು ಆಗಸ್ಟ್ 14ರಿಂದ 24ರ ಬೆಳಗಿನವರೆಗೆ 38 ಸಾವಿರ ಜನರನ್ನು ಹೊರಸಾಗಿಸಿದ್ದಾರೆ! ಜೀವಹಾನಿಯಾಗದೇ ವ್ಯವಸ್ಥಿತವಾಗಿ ಹೊರಹೋಗಲು ತಾಲಿಬಾನಿಗಳೊಂದಿಗೆ ಅಮೆರಿಕನ್ನರು ಮಾಡಿಕೊಂಡ ಒಪ್ಪಂದದ ಪರಿಣಾಮ ಇದು.

‘ಜಗತ್ತಿಗೆ ಇಂದು ಚೀನಾ ದೊಡ್ಡ ಪಿಡುಗು’ ಎಂಬ ಟ್ರಂಪ್​ರ ಅಭಿಪ್ರಾಯವನ್ನು ಬೈಡೆನ್ ಒಪ್ಪಿಕೊಂಡಿರುವಂತಿದೆ. ಚೀನಾದಿಂದ ಆಕ್ರಮಣದ ಭೀತಿ ಎದುರಿಸುತ್ತಿರುವ ತೈವಾನ್​ಗೆ ಬೈಡೆನ್ ಸರ್ಕಾರ 30 ಸಾವಿರ ಸೈನಿಕರನ್ನು ರಹಸ್ಯವಾಗಿ ಕಳುಹಿಸಿದೆ ಎಂದು ಅಮೆರಿಕನ್ ಸೆನೇಟರ್ ಒಬ್ಬರೇ ಕಳೆದವಾರ ಹೇಳಿದ ಸುದ್ದಿಯನ್ನು ‘ಸಂಬಂಧಪಟ್ಟ’ ಎಲ್ಲರೂ ನಿರಾಕರಿಸಿದ್ದಾರೆ. ನಿರಾಕರಣೆ ಸಹಜವೇ ಬಿಡಿ. ಈ ಸುದ್ದಿ ನಿಜವೇ ಆಗಿದ್ದರೆ ಅಮೆರಿಕ ತನ್ನ ಜಾಗತಿಕ ಜವಾಬ್ದಾರಿಗಳನ್ನು ಮರೆತಿಲ್ಲ. ಬದಲಾಗಿ, ಮುಖ್ಯ ಜವಾಬ್ದಾರಿ ಯಾವುದೆಂದು ಅರಿಯುವ ವಿವೇಕವನ್ನು ಪ್ರದರ್ಶಿಸುತ್ತಲೇ ಇದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net