ಹೊಸ ನೀರು ಸೇರಿದರೆ ಹಳ್ಳ ಹೊಳೆಯುತ್ತದೆ…

ದ
Published on

ಲ್ಯಾಟರಲ್ ಎಂಟ್ರಿ ಏಕೆ ಬೇಕು ಎಂಬ ಪ್ರಶ್ನೆ ಮತ್ತು ಚರ್ಚೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ತಾಜಾ, ನವೀನ ಪ್ರತಿಭೆಗಳನ್ನು ಸರ್ಕಾರಿ ವ್ಯವಸ್ಥೆಗೆ ತರುವುದು ಮತ್ತು ಮಧ್ಯಮ ಆಡಳಿತ ಹಂತದಲ್ಲಿ ಅವರ ವಿಶೇಷ ಜ್ಞಾನ ಮತ್ತು ಅನುಭವವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಈ ಪರಿಕಲ್ಪನೆಯ ಒಟ್ಟಾರೆ ಸಾರ.

ದಿಕ್ಸೂಚಿ
ಪಿ. ವಿ. ನರಸಿಂಹ ರಾವ್ ಅವರು ಅಂದಿನ ಪ್ರಧಾನಿ. 1991ರ ಕಾಲಘಟ್ಟ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ರಾಜಕೀಯ ತಂತ್ರಗಾರ ನಿಪುಣ ರಾವ್ ಸಹಜವಾಗಿ ಚಿಂತೆಯಲ್ಲಿದ್ದರು. ಆಗ ಛಕ್ಕನೆ ಅವರಿಗೊಂದು ಪರಿಹಾರದ ಸೆಳಕು ಕಂಡಿತು. ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರಾಗಿ ಸಂಪುಟಕ್ಕೆ ಸೇರಿಸಿಕೊಂಡರು. ಈ ಹೆಜ್ಜೆ ಆಗ ಅನೇಕರನ್ನು ಅಚ್ಚರಿಗೆ ಕೆಡವಿದ್ದು ಸುಳ್ಳಲ್ಲ. ‘ಮನಮೋಹನ್ ಸಿಂಗ್ ಹಣಕಾಸು ವಿಚಾರ ಬಲ್ಲರು ಎಂಬುದೇನೋ ನಿಜ. ಆದರೆ ರಾಜಕೀಯದ ವ್ಯಾಕರಣ ಅವರಿಗೇನು ಗೊತ್ತು’ ಎಂದು ಕೆಲವರು ಆಡಿಕೊಂಡರು. ಆದರೆ ರಾವ್-ಸಿಂಗ್ ಜೋಡಿ ಜಾದೂ ಮಾಡಿತು. 1991ರ ಕೇಂದ್ರ ಮುಂಗಡಪತ್ರವು ಭಾರತದಲ್ಲಿ ಉದಾರೀಕರಣದ ಬಾಗಿಲು ತೆರೆಯಿತು. ಆರ್ಥಿಕ ಉದಾರೀಕರಣದ ಪರ-ವಿರೋಧ ಚರ್ಚೆಗಳು ಏನೇ ಇರಲಿ, ಈ ಹೆಜ್ಜೆ ದೇಶದ ಚಿತ್ರಣವನ್ನು ಬದಲಿಸಿತು. ಆ ಸಂಕೀರ್ಣ ಸಮಯದಲ್ಲಿ ಸಿಂಗ್ ಆಗಮನವಾದದ್ದು ನರಸಿಂಹರಾಯರ ಭಾರವನ್ನು ಹಗುರಗೊಳಿಸಿತು. ಮೊದಲು ಅನುಮಾನ ವ್ಯಕ್ತಪಡಿಸಿದವರೇ ನಂತರ ‘ಸಿಂಗ್ ಈಸ್ ಕಿಂಗ್’ ಎನ್ನುವಂತಾಯಿತು.

ಹಾಗೆ ನೋಡಿದರೆ ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರದ ವೃತ್ತದಲ್ಲಿ ಬಂದಿದ್ದು ಅದೇ ಮೊದಲೇನಲ್ಲ. ಆಕ್ಸಫರ್ಡ್​ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ನಂತರ ಅವರು 1966-69ರ ಅವಧಿಯಲ್ಲಿ ವಿಶ್ವಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು. ಅಂದು ಕೇಂದ್ರ ಸಚಿವರಾಗಿದ್ದ ಲಲಿತ್ ನಾರಾಯಣ ಮಿಶ್ರಾ ಅವರು ಮನಮೋಹನ್ ಸಿಂಗ್ ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣರಾದರು. ಸಿಂಗ್ ಅವರನ್ನು 1971ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಲಹೆಗಾರರಾಗಿ ನೇಮಿಸಿದರು. ತರುವಾಯ 1970 ಮತ್ತು 80ರ ದಶಕದಲ್ಲಿ ಸಿಂಗ್ ಅವರು ಕೇಂದ್ರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದರು. ಮುಖ್ಯ ಆರ್ಥಿಕ ಸಲಹೆಗಾರ (1972-76), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ (1982-85), ಯೋಜನಾ ಆಯೋಗದ ಚುಕ್ಕಾಣಿ (1985-87) ಹೀಗೆ. ಕೊನೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಅವಧಿಯಲ್ಲಿ ಪ್ರಧಾನಿ ಹುದ್ದೆಯೇ ಮನಮೋಹನ್ ಸಿಂಗ್ ಅವರಿಗೆ ಒಲಿದು ಬಂತು. ಅದೂ ಸತತ ಎರಡು ಬಾರಿ. ಪ್ರಧಾನಿಯಾಗಿ ಅವರ ಕಾರ್ಯನಿರ್ವಹಣೆ-ಸಾಧನೆಯ ವಿಮರ್ಶೆ ಬೇರೆಯದೇ ಚರ್ಚಾ ವಿಷಯ ಎನ್ನಿ.

ಈಚೆಗೆ ಲ್ಯಾಟರಲ್ ಎಂಟ್ರಿ (ಪರ್ಯಾಯ ನೇಮಕಾತಿ ವಿಧಾನ) ವಿಷಯ ಭಾರೀ ಚರ್ಚೆಯಲ್ಲಿ ಇರುವ ಕಾರಣಕ್ಕೆ ಮನಮೋಹನ್ ಸಿಂಗ್ ಅವರ ನಿದರ್ಶನ ನೀಡಬೇಕಾಯಿತು. ಇನ್ಪೋಸಿಸ್ ಮಾಜಿ ಅಧ್ಯಕ್ಷ ನಂದನ್ ನೀಲೇಕಣಿ ಅವರು ಕೇಂದ್ರದ ಆಧಾರ್ ಪ್ರಾಧಿಕಾರದ ನೇತೃತ್ವ ವಹಿಸಿದ್ದು ಕೂಡ ಇಲ್ಲಿ ನೆನಪಿಗೆ ಬರುತ್ತಿದೆ.

ಅಷ್ಟಕ್ಕೂ ಆಗಿದ್ದೇನು ಅಂದರೆ... ಕೇಂದ್ರ ಲೋಕಸೇವಾ ಆಯೋಗವು ಆಗಸ್ಟ್ 17ರಂದು ಲ್ಯಾಟರಲ್ ನೇಮಕಾತಿಗೆ ಸಂಬಂಧಿಸಿದಂತೆ ಜಾಹೀರಾತು ಪ್ರಕಟಿಸಿತ್ತು. ವಿವಿಧ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಹುದ್ದೆಗಳು ಇದರಲ್ಲಿ ಸೇರಿದ್ದವು. ಖಾಸಗಿ ವಲಯ, ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳ ಅಭ್ಯರ್ಥಿಗಳಿಗೆ ಇಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ಒಟ್ಟು 45 ಹುದ್ದೆಗಳಿಗೆ ನೇಮಕ ಆಗಬೇಕಿತ್ತು. ಆದರೆ ಈ ಬಗ್ಗೆ ತಕರಾರು ಎದ್ದಿತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ರೀತಿಯ ನೇಮಕದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ಅಲ್ಲದೆ ಆಳುವ ಎನ್​ಡಿಎ ಮೈತ್ರಿಕೂಟದ ಭಾಗವಾದ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಕೂಡ ಈ ವಿಧಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಈ ಜಾಹೀರಾತನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿತು.

‘ಬಿಜೆಪಿ ಮೀಸಲಾತಿವಿರೋಧಿ’ ಎಂಬ ಆರೋಪವನ್ನು ಈ ಸಲದ ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ನಿರಂತರವಾಗಿ ಪ್ರಸ್ತಾಪಿಸಿತ್ತು. ಈ ಸಂಕಥನವು ಕೆಲ ಮಟ್ಟಿಗೆ ಪರಿಣಾಮವನ್ನು ಸಹ ಬೀರಿತು. ಆದ್ದರಿಂದ ಲ್ಯಾಟರಲ್ ನೇಮಕಾತಿ ವಿಚಾರವಾಗಿ ಮೀಸಲಾತಿ ಉಲ್ಲೇಖ ಆದಾಗ ಸರ್ಕಾರ ಕೂಡಲೇ ಎಚ್ಚೆತ್ತಿತು. ಪ್ರಧಾನಿ ನರೇಂದ್ರ ಮೋದಿ ಈ ಸೂಕ್ಷ ್ಮನ್ನು ಚೆನ್ನಾಗಿ ಬಲ್ಲರು. ಅಲ್ಲಿಗೆ ವಿಷಯ-ವಿವಾದ ಒಂದು ಹಂತಕ್ಕೆ ನಿಲುಗಡೆ ಕಂಡಿತು.

ಹಾಗಾದರೆ ಈ ಲ್ಯಾಟರಲ್ ಎಂಟ್ರಿ ಏಕೆ ಬೇಕು? ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ತಾಜಾ, ನವೀನ ಪ್ರತಿಭೆಗಳನ್ನು ಸರ್ಕಾರಿ ವ್ಯವಸ್ಥೆಗೆ ತರುವುದು ಮತ್ತು ಮಧ್ಯಮ ಆಡಳಿತ ಹಂತದಲ್ಲಿ ಅವರ ವಿಶೇಷ ಜ್ಞಾನ ಮತ್ತು ಅನುಭವವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಈ ಪರಿಕಲ್ಪನೆಯ ಒಟ್ಟಾರೆ ಸಾರ ಎಂಬುದಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಹೇಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೂಡ ಇಂಥ ನೇಮಕಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಅವಕಾಶ ಮಾಡಿರುವುದು ಇಲ್ಲಿ ಉಲ್ಲೇಖನೀಯ. ಇಂಥ ಒಂದು ಚಿತ್ರವನ್ನು ಹಾಗೇ ಒಮ್ಮೆ ಕಲ್ಪಿಸುವುದಾದರೆ- ಮಾಹಿತಿ-ತಂತ್ರಜ್ಞಾನ ಅಥವಾ ಐಟಿ ವಲಯದ ಬಗ್ಗೆ ಇನ್ಪೋಸಿಸ್ ನಾರಾಯಣಮೂರ್ತಿ ಅವರು ಪಾಠ ಮಾಡಿದರೆ, ಆಟೋಮೊಬೈಲ್ ಉದ್ಯಮದ ಕುರಿತು ರತನ್ ಟಾಟಾ ಅವರೇ ವಿವರಣೆ ನೀಡಿದರೆ ಅದರ ಸೊಗಸೇ ಬೇರೆ ಅಲ್ಲವೇ?

ಲ್ಯಾಟರಲ್ ನೇಮಕಾತಿ ಹೊಸ ಪರಿಕಲ್ಪನೆಯೇ? ಅಲ್ಲ. ಸರ್ಕಾರಿ ಸೇವೆಗೆ ಲ್ಯಾಟರಲ್ ಎಂಟ್ರಿ ವಿಧಾನಕ್ಕೆ 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಚಿಸಿದ್ದ ಎರಡನೇ ಆಡಳಿತ ಸುಧಾರಣೆ ಆಯೋಗವು ಶಿಫಾರಸು ಮಾಡಿತ್ತು. ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಪರ್ಯಾಯ ನೇಮಕಾತಿಗೆ ಯತ್ನಗಳು ನಡೆದಿದ್ದವು. ಆದರೆ ಅದು ಯಶಸ್ವಿಯಾಗಲಿಲ್ಲ. 2017ರಲ್ಲಿ ನೀತಿ ಆಯೋಗ ಕೂಡ ಈ ವಿಧಾನದ ನೇಮಕಕ್ಕೆ ಶಿಫಾರಸು ಮಾಡಿತ್ತು.

ಕೇಂದ್ರದಲ್ಲಿ ಐಎಎಸ್ ಅಧಿಕಾರಿಗಳ ಕೊರತೆ ಇರುವುದು ಸಹ ಸರ್ಕಾರಗಳು ಈ ರೀತಿ ಚಿಂತನೆ ನಡೆಸುವುದಕ್ಕೆ ಒಂದು ಕಾರಣ ಇರಬಹುದು. 2023-24ರ ಸಂಸದೀಯ ಸಮಿತಿಯೊಂದರ ವರದಿ ಪ್ರಕಾರ, ಕೇಂದ್ರಕ್ಕೆ ಅಗತ್ಯವಾದ ಐಎಎಸ್ ಅಧಿಕಾರಿಗಳ ಸಂಖ್ಯೆ 1,469 ಇದ್ದರೆ, ಆಗ ಕಾರ್ಯನಿರ್ವಹಿಸುತ್ತಿದ್ದವರ ಸಂಖ್ಯೆ 442 ಮಾತ್ರ.

2019ರಿಂದ ಈಚೆಗೆ 69 ಹುದ್ದೆಗಳನ್ನು ಪರ್ಯಾಯ ವಿಧಾನದ ಮೂಲಕ ಭರ್ತಿ ಮಾಡಲಾಗಿದೆ. ಇವರಲ್ಲಿ ಸುಮಾರು ಏಳು ಮಂದಿ ಅರ್ಧದಲ್ಲೇ ಬಿಟ್ಟು ನಡೆದಿದ್ದಾರೆ ಎಂಬ ಮಾಹಿತಿ ಇದೆ. ಹಾಗೆ ನೋಡಿದರೆ ಇಂಥ ನೇಮಕಾತಿಗೆ ಅರ್ಜಿ ಹಾಕುವವರು ಸಾಕಷ್ಟು ಸಂಖ್ಯೆಯಲ್ಲಿಯೇ ಇದ್ದಾರೆ ಎಂದು ಹೇಳಬಹುದು. ಉದಾಹರಣೆಗೆ, 2021ರಲ್ಲಿ ಲೋಕಸೇವಾ ಆಯೋಗವು ಮೂರು ಜಂಟಿ ಕಾರ್ಯದರ್ಶಿ ಹುದ್ದೆಗೆ, 27 ನಿರ್ದೇಶಕರ ಹುದ್ದೆಗೆ ಮತ್ತು 13 ಉಪ ಕಾರ್ಯದರ್ಶಿ ಹುದ್ದೆ ತುಂಬಲು ಅರ್ಜಿ ಕರೆದಿತ್ತು. ಇದಕ್ಕೆ ಕ್ರಮವಾಗಿ, 295, 1,247 ಮತ್ತು 489 ಅರ್ಜಿಗಳು ಬಂದಿದ್ದವು. ಈ ಪೈಕಿ 31 ಹುದ್ದೆಗಳ ಭರ್ತಿಗೆ ಆಯೋಗ ಶಿಫಾರಸು ಮಾಡಿತ್ತು.

ಧಾರ್ವಿುಕ ರಂಗದಲ್ಲಿ ‘ಚಾತುರ್ವಸ’ ಎಂಬ ಆಚರಣೆ ಇದೆ. ಗುರುಪೂರ್ಣಿಮೆಯಂದು ಆರಂಭಿಸುವ ವ್ರತ ಇದು. ಈ ಅವಧಿಯಲ್ಲಿ ಸಾಧು-ಸಂತರು ಹೊರಗಿನ ಸಂಚಾರವನ್ನು ಕಡಿಮೆ ಮಾಡಿ ಆಂತರಿಕ ಸಂಚಾರವನ್ನು ಹೆಚ್ಚಿಸುತ್ತಾರೆ. ಒಂದೇ ಕಡೆಗೆ ನೆಲೆ ನಿಂತು ಮೌನ-ಅಧ್ಯಯನದ ಮೂಲಕ ಅಂತಃಶಕ್ತಿಯನ್ನು ವರ್ಧಿಸಿಕೊಳ್ಳುತ್ತಾರೆ. ಅರ್ಥಾತ್ ತಮ್ಮನ್ನು ತಾವು ನವೀಕರಿಸಿಕೊಳ್ಳುತ್ತಾರೆ. ವಾಸ್ತವದಲ್ಲಿ ನೋಡಿದರೆ, ಸ್ವಾಮಿಗಳು ಮಾತ್ರವಲ್ಲ ಎಲ್ಲರೂ ಕಾಲಕಾಲಕ್ಕೆ ತಮ್ಮನ್ನು ತಾವು ಪುನರ್ನವೀಕರಿಸಿಕೊಳ್ಳುವುದು ಅಗತ್ಯ. ಇದರಿಂದ ವ್ಯಕ್ತಿಯ ಸೃಜನಶೀಲತೆ ಮತ್ತು ಕಾರ್ಯಶಕ್ತಿ ಅಧಿಕವಾಗುತ್ತದೆ. ಹೊಸ ಹೊಸ ಹೊಳಹುಗಳು ಮೊಳೆಯುತ್ತವೆ. ಹಾಗೇ ಸರ್ಕಾರಿ ವ್ಯವಸ್ಥೆ ಸಹ ತನ್ನನ್ನು ತಾನು ನವೀಕರಿಸಿಕೊಳ್ಳುವುದು ಅಪೇಕ್ಷಣೀಯ. ಅದರಲ್ಲೂ ತಂತ್ರಜ್ಞಾನ ದಿನದಿನಕ್ಕೂ ಹೊಸ ಅವತಾರ ತಾಳುವುದರಿಂದ ಅದಕ್ಕೆ ತಕ್ಕಂತೆ ಸಜ್ಜಾಗಬೇಕಾಗುತ್ತದೆ. ಸರ್ಕಾರಗಳು ಮತ್ತು ಸರ್ಕಾರಿ ನೌಕರರ ಮೇಲೆ ಜನರಿಗಿರುವ ನಿರೀಕ್ಷೆಗಳು ಮತ್ತು ಅಪೇಕ್ಷೆಗೆ ಸ್ಪಂದಿಸಬೇಕು ಎಂದಾದಲ್ಲಿ ಮಾಮೂಲು ಜಾಡಿನ ಹೊರತಾಗಿ ಹೊಸ ಚಿಂತನೆ, ಆಲೋಚನಾಕ್ರಮಗಳು ಆ ವ್ಯವಸ್ಥೆಯನ್ನು ಪ್ರವೇಶಿಸಬೇಕು. ಈ ನಿಟ್ಟಿನಲ್ಲಿ ನೋಡಿದಾಗ, ಸೂಕ್ತ ಮೀಸಲಾತಿ ನೀತಿ ಅಳವಡಿಸಿಕೊಂಡು ಲ್ಯಾಟರಲ್ ಎಂಟ್ರಿ ನಡೆಸುವುದು ಸೂಕ್ತ ಎಂಬುದು ಕೆಲವು ತಜ್ಞರ ಅಭಿಮತ. ಆಯಾ ವಿಷಯ ತಜ್ಞರು ಆಯಾ ಇಲಾಖೆಯಲ್ಲಿ ಇದ್ದರೆ ಗುಣಮಟ್ಟದ ಮತ್ತು ಸುಗಮ ಕಾರ್ಯಚಟುವಟಿಕೆಗಳಿಗೆ ಅನುವಾಗುತ್ತದೆ ಎಂಬುದು ಇವರ ಪ್ರತಿಪಾದನೆ. ನೌಕರರು ಸಹ ಇಂಥ ತಜ್ಞರಿಂದ ಕಲಿಯುವ ಅವಕಾಶವನ್ನಾಗಿ ಬಳಸಿಕೊಳ್ಳಬಹುದು. ಹೀಗೆ ನೇಮಕಗೊಂಡವರ ಅವಧಿ ಮೂರರಿಂದ ಐದು ವರ್ಷದಷ್ಟು ಇರುತ್ತದೆ. ಅಷ್ಟಕ್ಕೂ ಕೇಂದ್ರ ಸರ್ಕಾರಿ ನೌಕರರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಲ್ಯಾಟರಲ್ ನೇಮಕಾತಿ ಪ್ರಮಾಣ ತುಂಬ ಕಡಿಮೆ.

ಆದರೆ ಇಲ್ಲಿ ಪ್ರಶ್ನೆ ಇದ್ದೇ ಇದೆ. ಹೀಗೆ ಲ್ಯಾಟರಲ್ ಎಂಟ್ರಿ ಮೂಲಕ ಬರುವ ‘ಹೊರಗಿನವರನ್ನು’ ಸರ್ಕಾರಿ ಅಧಿಕಾರಶಾಹಿ ವ್ಯವಸ್ಥೆ ಒಪ್ಪಿಕೊಳ್ಳುತ್ತದೆಯೇ? ಅವರು ತಮ್ಮ ಎಣಿಕೆಯಂತೆ ಕಾರ್ಯ ನಿರ್ವಹಿಸುವ ವಾತಾವರಣವನ್ನು ಕಲ್ಪಿಸುತ್ತದೆಯೇ? ಒಂದೊಮ್ಮೆ ಇಂತಹ ವಾತಾವರಣ ಸಿಗದಿದ್ದಲ್ಲಿ ಹೀಗೆ ಬರುವವರು ನಿಲ್ಲುತ್ತಾರೆಯೇ? ಇದೇನೇ ಇದ್ದರೂ, ಸರ್ಕಾರಿ ವ್ಯವಸ್ಥೆಗೆ ಹೊಸ ಆಲೋಚನೆ ಮತ್ತು ಸ್ಪರ್ಶ ಬೇಕು ಎಂಬ ವಿಷಯದಲ್ಲಿ ಯಾರದೂ ಭಿನ್ನಾಭಿಪ್ರಾಯ ಇರಲಿಕ್ಕಿಲ್ಲ.

ರಾಜಕೀಯ ರಂಗದ ಕುರಿತು ಕೂಡ ಇಂತಹುದೇ ಅನಿಸಿಕೆ ಇದೆ. ಅಂದರೆ, ಇತರ ಕ್ಷೇತ್ರಗಳ ಸಾಧಕರು ರಾಜಕೀಯ ರಂಗ ಪ್ರವೇಶಿಸಿ ವ್ಯವಸ್ಥೆಯ ಸುಧಾರಣೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕು ಎಂದು.

ಕೊನೇ ಮಾತು: ಹಳ್ಳದ ನೀರು ಹರಿಯದೆ ಸ್ಥಗಿತಗೊಂಡರೆ ಮಲಿನವಾಗುತ್ತದೆ. ಅದಕ್ಕೆ ಹೊಸ ನೀರು ಸೇರಿಕೊಂಡರೆ ಸ್ವಚ್ಛಗೊಂಡು ಹರಿಯತೊಡಗುತ್ತದೆ. ಅಂದರೆ ನವೀಕರಣದ ಪ್ರಕ್ರಿಯೆಯಲ್ಲಿ ನವನೀತ ಸಿಗುತ್ತದೆ. ಇದು ನಿಸರ್ಗ ನಿಯಮ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net