ಆ ಕ್ಷಣದಲ್ಲಿ ಮಾತೆಯೇ ರಕ್ಕಸಿಯಾದಾಗ ಏನಾಗುತ್ತದೆ ಎಂಬ ಬಗ್ಗೆ ಡಾ. ಡಿ.ವಿ. ಗುರುಪ್ರಸಾದ್​ ಅವರ ವಿವರಣೆ

edit 3
Published on

ಉತ್ತರ ಕರ್ನಾಟಕದ ನಗರವೊಂದರಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಶಿವಕುಮಾರ್ ಶ್ರೀಮಂತ, ಪ್ರಭಾವಶಾಲಿ ಕುಟುಂಬಕ್ಕೆ ಸೇರಿದ್ದು ಜನಾನುರಾಗಿಯಾಗಿದ್ದ. ಆತನ ಪತ್ನಿ ಶೋಭಾ ಮಹಾರಾಷ್ಟ್ರದವಳಾಗಿದ್ದು ಇಂಜನಿಯರಿಂಗ್ ಪದವೀಧರೆಯಾಗಿ ಕೆಲಕಾಲ ಪುಣೆಯಲ್ಲಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಯಾದ ನಂತರ ಗಂಡನ ಮನೆಯವರ ಆಗ್ರಹದ ಮೇರೆಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಳು.

ಶಿವಕುಮಾರ್ -ಶೋಭಾರಿಗೆ ತಮ್ಮ ಏಕಮಾತ್ರ ಪುತ್ರ ಸಂತೋಷ್ ಅಮೆರಿಕೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಹಂಬಲವಿತ್ತು. ಆತ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದ. ತಮ್ಮ ಸಂಸಾರ ಸುಖಸಾಗರದಲ್ಲಿ ತೇಲಾಡುತ್ತಿರುವ ಅನುಭವ ಅವರಿಗಾಗಿತ್ತು.

ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಕಚೇರಿಯ ಕೆಲಸಕ್ಕೆಂದು ಶಿವಕುಮಾರ್ ಬೇರೆ ಊರಿಗೆ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮರಣಹೊಂದಿದಾಗ ಶೋಭಾಗೆ ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತಾಯಿತು. ಆಗ ಆಕೆಗೆ ಸುಮಾರು 40 ವರ್ಷ ವಯಸ್ಸಾಗಿತ್ತು. ಕುಟುಂಬದ ಹಿರಿಯರು ಮರುಮದುವೆ ಮಾಡಿಕೊ ಎಂದಾಗ, ‘ನಾವು ಸಂತೋಷನನ್ನು ಅಮೆರಿಕೆಯಲ್ಲಿ ಓದಿಸಿ ಮುಂದೆ ತರಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೆವು, ನಾನು ಬೇರೊಬ್ಬನ ಜತೆಗೆ ವಿವಾಹವಾದರೆ ಈ ಉದ್ದೇಶ ಈಡೇರುವುದಿಲ್ಲ’ ಎಂದು ಹೇಳಿ ಶೋಭಾ ನಿರಾಕರಿಸಿದ್ದಳು. ಆಕೆಯ ಮಾತಾಪಿತರು ನಮ್ಮ ಮನೆಯಲ್ಲಿರು ಎಂದು ಆಹ್ವಾನಿಸಿದರೂ ಒಪ್ಪಲಿಲ್ಲ. ಆರ್ಥಿಕವಾಗಿ ತೊಂದರೆ ಇರಲಿಲ್ಲವಾದರೂ ಕಾಲ ಕಳೆಯಲು ತನ್ನದೇ ಒಂದು ಸಣ್ಣ ಬಿಸಿನೆಸ್ ಪ್ರಾರಂಭಿಸಿದಳು. ಏತನ್ಮಧ್ಯೆ ಸಂತೋಷ್ ತನ್ನ ಕೋರ್ಸಿನ ಎರಡನೆಯ ವರ್ಷಕ್ಕೆ ಬಂದಿದ್ದ. ಶೋಭಾಳಾದರೋ ತನ್ನ ಬಿಸಿನೆಸ್ ಜತೆಗೆ ಕ್ಲಬ್​ಗಳಿಗೆ ಹೋಗುವುದು, ಗೆಳತಿಯರೊಡನೆ ಸಮಯ ಕಳೆಯುವುದು ಮತ್ತಿತರ ಚಟುವಟಿಕೆಗಳಲ್ಲಿ ಗಮನ ಹರಿಸಿದ್ದಳು. ಗಂಡನಿಲ್ಲದ ಜೀವನಕ್ಕೆ ಆಕೆ ಹೇಗೋ ಒಗ್ಗಿಹೋಗಿದ್ದಳು.

ಒಂದು ದಿನ ಸಂತೋಷ್ ತನ್ನ ಜತೆಗೆ ಅಭ್ಯಾಸ ಮಾಡಲೆಂದು ಗೆಳೆಯ ಗೋವಿಂದನನ್ನು ಮನೆಗೆ ಕರೆದುಕೊಂಡು ಬಂದ. ಗೋವಿಂದ ಸಂತೋಷ್​ಗಿಂತ ಒಂದೂವರೆ ವರ್ಷ ದೊಡ್ಡವನಾಗಿದ್ದ. ಆರು ಅಡಿ ಎತ್ತರದ ಆಜಾನುಬಾಹುವಾಗಿದ್ದ ಆತ ಉತ್ತಮ ಈಜುಪಟುವೂ ಆಗಿದ್ದ. ವಾರಕ್ಕೆ ಎರಡು ಮೂರು ಬಾರಿಯಾದರೂ ಗೋವಿಂದ್ ಬರುತ್ತಿದ್ದ ಕಾರಣ ಶೋಭಾಗೆ ಅವನ ಪರಿಚಯವಾಯಿತು. ಅವನನ್ನು ಎರಡು ಮೂರು ಬಾರಿ ಭೇಟಿಯಾದ ಬಳಿಕ ಅವನ ಸಂಗಕ್ಕಾಗಿ ಹಂಬಲವೂ ಮೂಡತೊಡಗಿತು. ಅವರು ಅಭ್ಯಾಸ ಮಾಡುತ್ತಿರುವಾಗ ಶೋಭಾ ಯಾವುದಾದರೊಂದು ನೆಪ ಮಾಡಿಕೊಂಡು ಮಗನ ಕೋಣೆಗೆ ಹೋಗುತ್ತಿದ್ದಳು. ಗೋವಿಂದನ ಜತೆಗೆ ದೈಹಿಕ ಸಂಪರ್ಕ ಮಾಡಬೇಕೆಂಬ ಹಂಬಲ ಆಕೆಗೆ ತೀವ್ರವಾಗತೊಡಗಿತು.

ಒಂದು ದಿನ ಸಂತೋಷ್ ಇಲ್ಲದಿದ್ದಾಗ, ಗೋವಿಂದ್ ಬಂದ. ಮಗ ಹೊರಗೆ ಹೋಗಿದ್ದು ಅರ್ಧ ತಾಸಿನ ನಂತರ ಬರುತ್ತಾನೆ ಎಂದು ಹೇಳಿದ ಶೋಭಾ ಚಹಾ ಮಾಡಿ ಕೊಟ್ಟಳು. ‘ಸಂತೋಷ ಬರುವವರೆಗೆ ನಾವಿಬ್ಬರೂ ಸಿನಿಮಾ ನೋಡೋಣ’ ಎಂದು ಗೋವಿಂದನನ್ನು ತನ್ನ ಶಯ್ಯಾಗೃಹಕ್ಕೆ ಕರೆದುಕೊಂಡು ಹೋದ ಶೋಭಾ ಆತನನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ಲ್ಯಾಪ್​ಟಾಪಿನಲ್ಲಿ ಬ್ಲೂ ಫಿಲಂ ಹಾಕಿದಳು. ಗೋವಿಂದ್ ಬಿಸಿರಕ್ತದ ಯುವಕ. ಅವರಿಬ್ಬರ ಮಧ್ಯೆ ಲೈಂಗಿಕ ಕ್ರಿಯೆಯೂ ನಡೆಯಿತು. ತಮ್ಮ ಸಂಪರ್ಕವು ಹೀಗೆಯೇ ಮುಂದುವರಿಯಬೇಕೆಂದು ಶೋಭಾ ಸೂಚಿಸಿದಳು.

ಅವರ ಅನೈತಿಕ ಸಂಪರ್ಕ ವಾರಕ್ಕೊಮ್ಮೆಯಾದರೂ ನಡೆಯುತ್ತಿತ್ತು. ಗೆಳೆಯ ಮನೆಯಲ್ಲಿಲ್ಲದ ಸಮಯ ನೋಡಿಕೊಂಡೇ ಗೋವಿಂದ್ ಬರುತ್ತಿದ್ದ. ಒಂದು ದಿನ ಅಕಸ್ಮಾತ್ತಾಗಿ ಸಂತೋಷ್ ಮನೆಗೆ ವಾಪಸಾದಾಗ ಗೋವಿಂದ್ ತನ್ನ ತಾಯಿಯ ಕೋಣೆಯಿಂದ ನಗುನಗುತ್ತಾ ಹೊರಬರುತ್ತಿದ್ದುದನ್ನು ಕಂಡು ಅನುಮಾನಗೊಂಡ. ‘ನಾನು ಮನೆಯಲ್ಲಿ ಇರದಿರುವುದು ನಿನಗೆ ತಿಳಿದಿದ್ದರೂ ಇಲ್ಲಿಗೇಕೆ ಬಂದೆ, ಏನನ್ನು ಮಾಡುತ್ತಿದ್ದೆ’ ಎಂದು ಕೇಳಿದಾಗ ಗೋವಿಂದ್ ಏನನ್ನೋ ಬಡಬಡಿಸಿ ಹೊರಟುಹೋದ. ಕೊನೆಗೆ, ತಾಯಿಯ ಜತೆಗೆ ಗೆಳೆಯ ಸಂಬಂಧವಿರಿಸಿಕೊಂಡದ್ದನ್ನು ಅರಿತು ಸಂತೋಷ್ ತೀವ್ರವಾಗಿ ಮನನೊಂದ. ತಾಯಿಯ ಸಮಾನರಾದವರ ಜತೆಗೆ ಈ ರೀತಿ ಸಂಬಂಧ ಪಾಪದ ಕೆಲಸವೆಂದು ಗೆಳೆಯನಿಗೆ ತಿಳಿಸಿ ಇನ್ನು ನಮ್ಮ ಮನೆಗೆ ಬರಬೇಡ ಎಂದ. ಈ ಸಂಬಂಧ ಕಡಿಯದಿದ್ದಲ್ಲಿ ತಾನು ಮನೆಯನ್ನೇ ಬಿಟ್ಟು ಹೋಗುವುದಾಗಿ ತಾಯಿಗೆ ಹೇಳಿದ.

ಕೆಲ ಕಾಲಾನಂತರ ಶೋಭಾಳಿಗೆ ಗೋವಿಂದ್​ನ ಸಖ್ಯವಿಲ್ಲದ ಜೀವನ ಬೇಸರ ತರಿಸಿ ಆಕೆ ಅವನಿಗಾಗಿ ಹಾತೊರೆಯತೊಡಗಿದಳು. ಅವನನ್ನು ಗುಟ್ಟಾಗಿ ಸಂರ್ಪಸಿ ಹೋಟೆಲ್ಲುಗಳಲ್ಲಿ ರೂಂ ಬುಕ್ ಮಾಡಿ ಸಂಬಂಧವನ್ನು ಮುಂದುವರಿಸಿದಳು. ‘ಇತರರಿಗೆ ತಿಳಿಯದಂತೆ ನಾವು ಈ ರೀತಿ ಎಷ್ಟು ಬಾರಿ ಕೂಡಲು ಸಾಧ್ಯ, ಇನ್ನು ಮುಂದೆ ನಾವು ದೂರವಿರುವುದೇ ಲೇಸು’ ಎಂದು ಗೋವಿಂದ್ ಸೂಚಿಸಿದಾಗ ಗಾಬರಿಯಾದ ಶೋಭಾ ‘ನಾವು ಏಕೆ ದೂರವಾಗಬೇಕು? ಸಂತೋಷನನ್ನೇ ದೂರ ಮಾಡಿದರೆ ಸಾಕಲ್ಲ. ಆತನನ್ನು ಕೊಂದು ಇಬ್ಬರೂ ಬೇರೆ ಊರಿಗೆ ಹೋಗಿ ಸುಖವಾಗಿ ಜೀವಿಸೋಣ, ನನ್ನ ಆಸ್ತಿಯೆಲ್ಲಾ ನಿನ್ನದಾಗುತ್ತದೆ’ ಎಂದಳು. ಗೋವಿಂದ್ ಬೆವೆತುಹೋದ. ‘ನಾನು ಈ ಕಾರ್ಯದಲ್ಲಿ ನಿಮ್ಮ ಜತೆಗಾರನಾಗಲಾರೆ’ ಎಂದು ಖಡಾಖಂಡಿತವಾಗಿ ಹೇಳಿದ. ಶೋಭಾ ತಮ್ಮಿಬ್ಬರ ಮಿಲನದ ವಿಡಿಯೋವನ್ನು ಜಾಹೀರು ಮಾಡುವುದಾಗಿ ಹೆದರಿಸಿದಾಗ ಈ ಕುಕೃತ್ಯಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ. ಒಂದು ಸಂಜೆ ಶೋಭಾ ಚಹಾದಲ್ಲಿ ನಿದ್ರೆಮಾತ್ರೆ ಬೆರೆಸಿ ಸಂತೋಷ್​ಗೆ ಕೊಟ್ಟಳು. ಆತ ಗಾಢನಿದ್ರೆಗೆ ಜಾರಿದಾಗ ಗೋವಿಂದನನ್ನು ಮನೆಗೆ ಕರೆದಳು. ಇಬ್ಬರೂ ಸೇರಿ ಸಂತೋಷನ ಮುಖಕ್ಕೆ ತಲೆದಿಂಬನ್ನು ಬಲವಾಗಿ ಅದುಮಿ ಹಿಡಿದು ಉಸಿರುಗಟ್ಟಿಸಿ ಕೊಂದರು. ಆನಂತರ ಶೋಭಾಳ ಕಾರಿನ ಡಿಕ್ಕಿಯಲ್ಲಿ ಶವವನ್ನು ಹಾಕಿದರು. ಅದೇ ರಾತ್ರಿ ಶೋಭಾ ತಾನೇ ಕಾರನ್ನು ಡ್ರೖೆವ್ ಮಾಡಿಕೊಂಡು ಗೋವಿಂದನ ಜತೆಗೆ ಸುಮಾರು ನೂರು ಕಿ.ಮೀ ದೂರದಲ್ಲಿದ್ದ ಬೆಟ್ಟ ಪ್ರದೇಶವೊಂದಕ್ಕೆ ಹೋದಳು. ಇಬ್ಬರೂ ಶವವನ್ನು ಹತ್ತಿರದ ನದಿಯಲ್ಲಿ ಎಸೆದರು.

ಮಗನಿಗೆ ಅಮೆರಿಕಾದ ವಿಶ್ವವಿದ್ಯಾಲಯವೊಂದರಲ್ಲಿ ಸ್ಕಾಲರ್​ಷಿಪ್ ಸಿಗುವ ಸಾಧ್ಯತೆ ಬಲವಾದ ಕಾರಣ ಆತ ಜರೂರಾಗಿ ವಿದೇಶ ಪ್ರಯಾಣ ಮಾಡಿದ ಎಂದು ಕುಟುಂಬದ ಎಲ್ಲರಿಗೂ ಶೋಭಾ ಹೇಳಿದಳು. ಯಾರಿಗೂ ಸಂಶಯ ಬಾರದಿದ್ದಾಗ ತನ್ನ ಹಾದಿಯ ಮುಳ್ಳನ್ನು ಕಿತ್ತೆನೆಂದು ಸಂತಸಗೊಂಡು ಗೋವಿಂದ್​ನನ್ನು ಪದೇಪದೆ ಮನೆಗೆ ಕರೆಸಿಕೊಳ್ಳಲಾರಂಭಿಸಿದಳು. ಕ್ರಮೇಣ ಗೋವಿಂದನಿಗೆ ಶೋಭಾಳ ಮೇಲಿದ್ದ ಆಸಕ್ತಿ ಕಡಿಮೆಯಾಯಿತು. ತನ್ನ ವಿದ್ಯಾಭ್ಯಾಸವೂ ಕುಂಠಿತಗೊಳ್ಳುತ್ತದೆ ಎಂದೆನಿಸಿ ಆತ ಆಕೆಯ ಮನೆಗೆ ಬರುವುದನ್ನು ನಿಲ್ಲಿಸಿದ. ಇದರಿಂದ ಕೋಪಗೊಂಡ ಶೋಭಾ ಗೋವಿಂದನನ್ನು ಬ್ಲಾಕ್​ವೆುೕಲ್ ಮಾಡಲಾರಂಭಿಸಿದಳು. ಸಂತೋಷನನ್ನು ಕೊಲೆ ಮಾಡಿದ ಬಗ್ಗೆ ಪೊಲೀಸರಿಗೆ ದೂರು ಕೊಡುವೆ ಎಂದು ಹೆದರಿಸತೊಡಗಿದಳು.

ಗೋವಿಂದ್ ಅವಳ ಜತೆಗಿನ ಸಂಪರ್ಕವನ್ನು ಮುಂದುವರಿಸಿದರೂ ಆತನಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಕೊನೆಗೆ ರೋಸಿಹೋದ ಆತ ತಾನೇತಾನಾಗಿ ಪೊಲೀಸ್ ಠಾಣೆಗೆ ಹೋಗಿ ಸಂತೋಷನನ್ನು ಕೊಲೆ ಮಾಡಿರುವ ವಿಷಯ ತಿಳಿಸಿ ಶವ ಎಸೆದಿದ್ದ ಸ್ಥಳವನ್ನು ತೋರಿಸಿದ. ನದಿಯಲ್ಲಿ ಹರಿದುಹೋಗಿದ್ದ ಆ ಶವವು ಬೇರೊಂದು ಜಿಲ್ಲೆಯಲ್ಲಿ ಸಿಕ್ಕು ಸಂಬಂಧಿಸಿದ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿತ್ತು. ಹೂತಿದ್ದ ಶವವನ್ನು ಹೊರತೆಗೆದಾಗ ಕೇವಲ ಅಸ್ಥಿಪಂಜರವಷ್ಟೇ ಸಿಕ್ಕಿತು. ತಲೆಬುರುಡೆಯ ಸೂಪರ್ ಇಂಪೊಸಿಷನ್ ಮತ್ತು ಡಿ.ಎನ್.ಎ ಪೊ›ಫೈಲಿಂಗ್ ತಂತ್ರಜ್ಞಾನದಿಂದ ಶವವು ಸಂತೋಷನದೇ ಎಂದು ಸಾಬೀತು ಮಾಡಲಾಯಿತು. ಕೊಲೆ ಹಾಗೂ ಸಾಕ್ಷ್ಯಾಧಾರ ನಾಶದ ಆರೋಪದ ಮೇಲೆ ಪೊಲೀಸರು ಗೋವಿಂದ ಮತ್ತು ಶೋಭಾಳನ್ನು ಬಂಧಿಸಿದರು. ಕೊಲೆಗಾಗಲೀ ಶವದ ವಿಲೇವಾರಿಗಾಗಲೀ ಯಾರೂ ಪ್ರತ್ಯಕ್ಷದರ್ಶಿಗಳಿರಲಿಲ್ಲ. ಈ ಪ್ರಕರಣವು ಕೇವಲ ಸಾಂರ್ದಭಿಕ ಸಾಕ್ಷ್ಯದ ಮೇಲೆಯೇ ಅವಲಂಬಿತವಾದ್ದರಿಂದ ಗೋವಿಂದ್​ನ ಹೇಳಿಕೆಯೇ ಮುಖ್ಯವಾಗಿತ್ತು. ಹೀಗಾಗಿ ಆತ ಆರೋಪಿಯಾಗಿದ್ದರೂ ಆತನನ್ನು ಅಪೂ›ವರ್ (ಮಾಫಿ ಸಾಕ್ಷಿದಾರ)ನನ್ನಾಗಿ ಮಾಡಲಾಯಿತು. ನ್ಯಾಯಾಲಯವು ಶೋಭಾಗೆ ಐದು ವರ್ಷಗಳ ಕಾರಾಗೃಹವಾಸವನ್ನು ವಿಧಿಸಿ, ಗೋವಿಂದ್​ನನ್ನು ಬಿಡುಗಡೆ ಮಾಡಿತು.

‘ಕುಪುತ್ರೋ ಜಾಯೇತ, ಕ್ವಚಿದಪಿ ಕುಮಾತಾ ನ ಭವತಿ’ (ಕೆಟ್ಟ ಮಗ ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ) ಎನ್ನುವ ಸಂಸ್ಕೃತದ ನುಡಿಯಿದೆ. ಶೋಭಾಳ ಪ್ರಕರಣ ಈ ನುಡಿಗೆ ಅಪವಾದವಾಗಿದ್ದು ಕಾಮೋದ್ರೇಕವು ಎಂತಹ ಅಪರಾಧಗಳನ್ನಾದರೂ ಮಾಡಿಸಬಲ್ಲದೆಂಬುದನ್ನು ಸಾಬೀತುಪಡಿಸುತ್ತದೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net