

2005ರ ಒಂದು ದಿನ ಶಾಲೆಗೆ ಹೋದ 10 ವರ್ಷದ ಅರುಣ್ ಮನೆಗೆ ಮರಳಲೇ ಇಲ್ಲ. ಮಹಿಪಾಲ್ ಸಿಂಗ್ ಮಗನನ್ನು ಹುಡುಕುತ್ತ ಊರೂರು ಅಲೆದ. ವೃತ್ತಪತ್ರಿಕೆಗಳಲ್ಲಿ ಮಗನ ಫೋಟೋಗಳನ್ನು ಪ್ರಕಟಿಸಿದ. ಒಂದು ತಿಂಗಳಾದರೂ ಅರುಣ್ ಸಿಗದಾದಾಗ ಪೊಲೀಸ್ ಠಾಣೆಗೆ ಹೋಗಿ ದೂರಿತ್ತ. ಪೊಲೀಸರು ದೂರು ದಾಖಲಿಸಿ ಎಷ್ಟೇ ಪ್ರಯತ್ನ ಮಾಡಿದರೂ ಅರುಣ್ ಪತ್ತೆಯಾಗಲಿಲ್ಲ. ಅರುಣ್ನನ್ನು ಕಳ್ಳರ ತಂಡ ಅಪಹರಿಸಿ ಯಾರಿಗಾದರೂ ಮಾರಿರಬೇಕು ಎಂದು ಭಾವಿಸಿದ ಮಹಿಪಾಲ್ ಸಿಂಗ್ನ ಕುಟುಂಬ ಅವನನ್ನು ಹುಡುಕುವುದನ್ನು ನಿಲ್ಲಿಸಿತು. ಆದರೆ ಅವನಿಗಾಗಿ ಕೊರಗುವುದನ್ನೇನೂ ನಿಲ್ಲಿಸಲಿಲ್ಲ.
‘ನಿನ್ನ ಮಗ ಸತ್ತಿರಬಹುದು’ ಎಂದು ಯಾರೇ ಹೇಳಿದರೂ ಮಹಿಪಾಲ್ ನಂಬದೆ ‘ನನ್ನ ಮಗ ಎಂದಾದರೊಂದು ದಿನ ನನ್ನ ಬಳಿ ಬಂದೇ ಬರುತ್ತಾನೆ’ ಎಂದು ದೃಢವಿಶ್ವಾಸದಿಂದ ಹೇಳುತ್ತಿದ್ದ. ಕೆಲ ವರ್ಷಗಳ ನಂತರ ಮಗಳಿಗೆ ಮದುವೆ ಮಾಡಿ ತನ್ನ ಜಮೀನನ್ನು ನೋಡಿಕೊಳ್ಳುತ್ತ ಕಾಲಕಳೆಯುತ್ತಿದ್ದ. ಅವನ ಪತ್ನಿ ಲಕ್ಷ್ಮಿ ದೇವರುದಿಂಡಿರೆನ್ನುತ್ತ ದೇವಸ್ಥಾನಗಳಲ್ಲಿಯೇ ತನ್ನ ವಿರಾಮದ ಸಮಯವನ್ನು ಕಳೆಯುತ್ತಿದ್ದಳು. ಸಾಧುಸಂತರ ಸತ್ಸಂಗ ಕೇಳುತ್ತ, ಪೂಜೆಪುನಸ್ಕಾರಗಳಲ್ಲಿ ತಲ್ಲೀನಳಾಗಿರುತ್ತಿದ್ದಳು.
2022ರ ಜೂನ್ ತಿಂಗಳ ಮಧ್ಯಭಾಗದ ಒಂದು ದಿನ ಅವರಿದ್ದ ಗ್ರಾಮಕ್ಕೆ ಯುವ ಸಾಧುವೊಬ್ಬ ಬಂದು ಊರ ಭವಾನಿ ಮಂದಿರದಲ್ಲಿ ವಾಸ್ತವ್ಯ ಹೂಡಿದ. ಪ್ರತಿ ಸಂಜೆಯೂ ಪಂಚಾಯಿತಿ ಕಟ್ಟೆಯ ಮೇಲೆ ಕುಳಿತು ಪೌರಾಣಿಕ ನೀತಿಕಥೆಗಳನ್ನು ಹೇಳುತ್ತಿದ್ದ. ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾದ ನಂತರ ನಾನು ಅಲ್ಲಿಗೆ ಹೋಗಿ ಅಲ್ಲಿಯೇ ನೆಲೆಸುತ್ತೇನೆ’ ಎಂದಾತ ಹೇಳುತ್ತಿದ್ದ. ಗ್ರಾಮದ ಜನರು ಕೊಟ್ಟ ಊಟ, ಉಪಾಹಾರಗಳನ್ನು ಸೇವಿಸುತ್ತಿದ್ದ. ಸುಮಾರು ಹದಿನೈದು ದಿನಗಳ ವಾಸ್ತವ್ಯದ ನಂತರ ಆ ಸಾಧು ತನ್ನ ಪ್ರವಚನವನ್ನು ಕೇಳಲು ಬಂದಿದ್ದ ಮಹಿಪಾಲ್ ಸಿಂಗ್ನ ಸೋದರ ಭೋಪಾಲ್ ಸಿಂಗ್ನನ್ನು ಪಕ್ಕಕ್ಕೆ ಕರೆದು ತನ್ನನ್ನು ರಾತ್ರಿ ಏಕಾಂತದಲ್ಲಿ ನೋಡಲು ಹೇಳಿದ. ಭೋಪಾಲ್ ಸಾಧುವನ್ನು ಭೇಟಿಯಾದಾಗ, ‘ನಿನಗೊಂದು ಗುಟ್ಟನ್ನು ನಾನು ಹೇಳುತ್ತೇನೆ, ನೀನು ಅದನ್ನು ನಿನ್ನಲ್ಲೇ ಇಟ್ಟುಕೊಂಡಿರಬೇಕು. ಯಾರಿಗೂ ಹೇಳಬಾರದು’ ಎಂದ. ಭೋಪಾಲ್ ಸಿಂಗ್ ಒಪ್ಪಿದಾಗ, ‘ನಾನು ಯಾರು ಎಂದು ನಿನಗೆ ತಿಳಿದಿದೆಯೇ?’ ಎಂದು ಪ್ರಶ್ನಿಸಿದ. ಗೊತ್ತಿಲ್ಲವೆಂದ ಭೋಪಾಲ್. ‘ನಾನೇ ನಿನ್ನ ಸೋದರ ಮಹಿಪಾಲ್ ಸಿಂಗ್ನ ಮಗ ಅರುಣ್ ಸಿಂಗ್. ಈಗ ಹದಿನೇಳು ವರ್ಷಗಳ ಹಿಂದೆ ನಾನು ಶಾಲೆಗೆ ಹೋಗಿದ್ದಾಗ ಕೆಲವು ಮಕ್ಕಳ ಕಳ್ಳರು ನನ್ನನ್ನು ಅಪಹರಿಸಿಕೊಂಡು ಹೋಗಿ ನನ್ನನ್ನು ಹರಿದ್ವಾರದ ಬಳಿ ಇರುವ ಆಶ್ರಮವೊಂದರಲ್ಲಿ ಬಿಟ್ಟರು. ಒಂದು ವರ್ಷದ ನಂತರ ನನಗೆ ಸಂನ್ಯಾಸದ ದೀಕ್ಷೆಯನ್ನು ಕೊಟ್ಟು ನನ್ನನ್ನು ಸಂನ್ಯಾಸಿಯನ್ನಾಗಿ ಮಾಡಿದರು. ನಾನು ಊರೂರು ಅಲೆಯುತ್ತ ಧರ್ಮಪ್ರಚಾರ ಮಾಡತೊಡಗಿರುವೆ. ಕಳೆದ ತಿಂಗಳು ನಾನು ಈ ಗ್ರಾಮಕ್ಕೆ ಬಂದಾಗ ನನಗೆ ಹಳೆಯ ನೆನಪುಗಳೆಲ್ಲ ಮರುಕಳುಹಿಸಿದವು. ನನ್ನ ಅಪ್ಪ, ಅಮ್ಮನನ್ನು ನಾನು ನೋಡಿದೆ. ಅವರು ತಮ್ಮ ಒಬ್ಬನೇ ಮಗ ಕಳೆದಿದ್ದಾನೆ ಎಂದು ಕೊರಗುತ್ತಿದ್ದಾರೆ. ನಾನು ಈ ಗ್ರಾಮದಿಂದ ಹೊರಟ ಬಳಿಕ ನಿಮ್ಮ ಮಗ ಸತ್ತಿಲ್ಲ, ಬದುಕಿದ್ದಾನೆ ಎಂದು ಅವರಿಗೆ ತಿಳಿಸಿ ಸಾಂತ್ವನ ಹೇಳು’ ಎಂದ.
ಭೋಪಾಲ್ ಸಿಂಗ್ಗೆ ತಾನು ಏನು ಕೇಳುತ್ತಿದ್ದೇನೆ ಎನ್ನುವುದನ್ನೇ ನಂಬಲಾಗದಂತೆ ಆಯಿತು. ಆತ ಅದೇ ರಾತ್ರಿಯೇ ತನ್ನ ಸೋದರ ಮತ್ತು ಅತ್ತಿಗೆಗೆ ನಡೆದ ವಿಷಯ ತಿಳಿಸಿದ. ಮಾರನೆಯ ದಿನ ಅವರೆಲ್ಲರೂ ಗ್ರಾಮದ ಇತರರಿಗೆ ಈ ವಿಷಯ ತಿಳಿಸಿದರು. ಆನಂತರ ಮಹಿಪಾಲ್ ಸಿಂಗ್ನ ಕುಟುಂಬ ಸದಸ್ಯರು ಗ್ರಾಮದ ಹಿರಿಯರೊಂದಿಗೆ ಆ ಸಾಧುವನ್ನು ಭೇಟಿಯಾದರು. ತಾನು ಭೋಪಾಲ್ ಸಿಂಗ್ಗೆ ಹೇಳಿದ್ದನ್ನೇ ಪುನರುಚ್ಚರಿಸಿದ ಆತ ತಾನೇ ಕಳೆದುಹೋಗಿದ್ದ ಅರುಣ್ ಸಿಂಗ್ ಎಂದು ಪರಿಚಯಿಸಿಕೊಂಡು ತನ್ನನ್ನು ಎಲ್ಲರೂ ಪ್ರೀತಿಯಿಂದ ‘ಪಿಂಕೂ’ ಎಂದೇ ಕರೆಯುತ್ತಿದ್ದರು ಎಂದ.
ಹಲವು ವರ್ಷಗಳ ನಂತರ ತಮ್ಮ ಪುತ್ರ ಪತ್ತೆಯಾದದ್ದನ್ನು ಕಂಡು ಮಹಿಪಾಲ್ನ ಕುಟುಂಬಕ್ಕೆ ಆದ ಸಂತಸಕ್ಕೆ ಪಾರವೇ ಇರಲಿಲ್ಲ. ಮಹಿಪಾಲ್ ಸಿಂಗ್ ಅವನಿಗೆ ಹಾರ ಹಾಕಿ, ‘ನಮ್ಮ ಕುಟುಂಬದ ವಾರಸುದಾರ ನೀನೇ ಆಗಿರುವುದರಿಂದ ಕೂಡಲೇ ನೀನು ಈ ಸಾಧುಸಂತರ ಜೀವನವನ್ನು ತೊರೆದು ನಮ್ಮ ಮನೆಗೆ ಬಂದು ವಾಸ ಮಾಡು’ ಎಂದ. ಆಗ ಆ ಸಾಧು, ‘ನಾನು ಈ ಜೀವನವನ್ನು ತ್ಯಜಿಸುವುದು ಸುಲಭವಲ್ಲ. ನನಗೆ ವಿಶೇಷವಾದ ದೀಕ್ಷೆ ಕೊಟ್ಟಿದ್ದು ಸಾಯುವವರೆಗೆ ನಾನು ಗೃಹಸ್ಥಾಶ್ರಮಕ್ಕೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿರುವೆ. ಒಂದು ವೇಳೆ ನಾನೇನಾದರೂ ಮೊದಲಿನ ಜೀವನಕ್ಕೆ ಮರಳಬೇಕಾದರೆ ನಮ್ಮ ಮಠಕ್ಕೆ 10 ಲಕ್ಷ ರೂಪಾಯಿ ತಪ್ಪುಕಾಣಿಕೆಯನ್ನು ಕೊಡಬೇಕು. ಇದಲ್ಲದೆ ಪ್ರಾಯಶ್ಚಿತ್ತದ ರೂಪದಲ್ಲಿ ನಾವು 300 ಜನ ಸಾಧುಸಂತರಿಗೆ ಊಟ ಹಾಕುವುದಲ್ಲದೆ ಬಟ್ಟೆಯನ್ನು ದಾನವಾಗಿ ಕೊಡಬೇಕು’ ಎಂದ.
ಇದನ್ನು ಕೇಳಿ ಗಾಬರಿಯಾದ ಮಹಿಪಾಲ್ ಸಿಂಗ್ ತನ್ನ ತೀರ್ವನವನ್ನು ನಂತರ ತಿಳಿಸುವುದಾಗಿ ಹೇಳಿ ಮನೆಗೆ ಮರಳಿದ. ಮನೆಯಲ್ಲಿ ಕುಟುಂಬದ ಸದಸ್ಯರು ಮತ್ತು ಗ್ರಾಮದ ಮುಖಂಡರೊಡನೆ ಈ ವಿಷಯದ ಬಗ್ಗೆ ರ್ಚಚಿಸಿದ. ಎಲ್ಲರ ಅಭಿಪ್ರಾಯವೂ ಅರುಣ್ ಸಿಂಗ್ನನ್ನು ಮನೆಗೆ ಕರೆದುಕೊಂಡು ಬರಬೇಕು ಎನ್ನುವುದಾಗಿತ್ತು. ಇದರ ಮೇರೆಗೆ ಮಹಿಪಾಲ್ ಸಿಂಗ್ ತನ್ನ ಜಮೀನು ಮಾರಿ ಸ್ವಲ್ಪ ಹಣವನ್ನು ಹೊಂದಿಸಿ ನಂತರ ಅವರಿವರಿಂದ ಎರಡು ಲಕ್ಷ ರೂಪಾಯಿ ಸಾಲ ಮಾಡಿದ.
ಆನಂತರ ಕೈಯಲ್ಲಿ 10 ಲಕ್ಷ ರೂ. ಇಟ್ಟುಕೊಂಡು ಇತರ ಗ್ರಾಮಸ್ಥರೊಡನೆ ಸಾಧುವಿನ ಬಳಿಗೆ ಹೋಗಿ ತನ್ನನ್ನು ಮಠಕ್ಕೆ ಕರೆದುಕೊಂಡು ಹೋಗಲು ಕೋರಿದ. ಆದರೆ ಆ ಸಾಧು, ‘ನಾನು ನಿಮ್ಮ ಜೊತೆ ಬರುವ ಹಾಗಿಲ್ಲ, ನೀವು ಹಣವನ್ನು ನನ್ನ ಕೈಗೆ ಕೊಡಿ. ನಾನು ಹಣವನ್ನು ಮಠಕ್ಕೆ ಮುಟ್ಟಿಸಿ ಇಲ್ಲಿಗೆ ವಾಪಸ್ ಬರುತ್ತೇನೆ’ ಎಂದ. ಅಲ್ಲಿದ್ದ ಗ್ರಾಮಸ್ಥ ಭಜನ್ ಸಿಂಗ್ ಈ ಸೂಚನೆಗೆ ಒಪ್ಪಲಿಲ್ಲ. ‘ಹಾಗಾದರೆ ನೀನು ಇಲ್ಲಿಯೇ ಇರು, ನಾವೇ ನಿನ್ನ ಮಠಕ್ಕೆ ಹೋಗಿ ಹಣವನ್ನೊಪ್ಪಿಸಿ ಬರುತ್ತೇವೆ’ ಎಂದ. ಅದಕ್ಕೂ ಆ ಸಂತ ಒಪ್ಪಲಿಲ್ಲ. ಆಗ ಭಜನ್ ಸಿಂಗ್ ಈ ವಿಷಯದ ಬಗ್ಗೆ ಯೋಚಿಸಲು ತಮಗೆ ಸಮಯ ಬೇಕಾಗುತ್ತದೆ ಎಂದು ಆ ಸಾಧುವಿಗೆ ಹೇಳಿ ಅವನ ಮಠದ ಬಗ್ಗೆ ಅವನಿಂದಲೇ ವಿವರಗಳನ್ನು ಕೇಳಿ ತಿಳಿದುಕೊಂಡ. ಬಳಿಕ ಗ್ರಾಮದ ಮುಖಂಡರನ್ನು ತನ್ನ ಮನೆಗೆ ಕರೆದುಕೊಂಡು ಬಂದ. ತಾನು ಈ ಬಗ್ಗೆ ವಿಚಾರಿಸಿ ಹೇಳುವವರೆಗೆ ದುಡುಕಿನ ತೀರ್ಮಾನ ತೆಗೆದುಕೊಳ್ಳದಂತೆ ಎಲ್ಲರನ್ನೂ ಒಪ್ಪಿಸಿದ.
ಅದೇ ದಿನವೇ ಭಜನ್ ಸಿಂಗ್ ಯಾರಿಗೂ ತಿಳಿಯದಂತೆ ಹರಿದ್ವಾರದ ಮಠಕ್ಕೆ ಹೋದ. ತಾನು ತನ್ನ ಮೊಬೈಲಿನಲ್ಲಿ ಸೆರೆಹಿಡಿದಿದ್ದ ತಮ್ಮ ಗ್ರಾಮಕ್ಕೆ ಬಂದಿದ್ದ ಸಾಧುವಿನ ಫೋಟೋವನ್ನು ಮಠದ ಹಿರಿಯ ಸ್ವಾಮೀಜಿಗೆ ತೋರಿಸಿ ಅವನ ಬಗ್ಗೆ ವಿಚಾರಿಸಿದ. ಆ ಸ್ವಾಮೀಜಿ, ‘ಈತ ನಮ್ಮ ಮಠದ ಸಾಧುವೆನ್ನುವುದು ಸತ್ಯ. ಅವನ ಪೂರ್ವಾಶ್ರಮದ ಹೆಸರು ಮನೋಜ್ ಎಂದಾಗಿದ್ದು ಆತ ಬಿಹಾರದ ಬೇಗುಸರಾಯ್ ನಿವಾಸಿ. ಸುಮಾರು ಒಂಬತ್ತು ತಿಂಗಳ ಹಿಂದೆ ನಮ್ಮ ಮಠಕ್ಕೆ ಬಂದು ಸಾಧುವಾಗಿ ಪರಿವರ್ತನೆ ಹೊಂದಿ ದೀಕ್ಷೆ ಪಡೆದಿದ್ದಾನೆ. ಕೆಲ ತಿಂಗಳ ಹಿಂದೆ ಯಾರಿಗೂ ಹೇಳದೆ ಮಠವನ್ನು ಬಿಟ್ಟು ಓಡಿಹೋಗಿದ್ದಾನೆ’ ಎಂದರು. ತಮ್ಮ ಮಠದ ನಿಯಮದಂತೆ ಸ್ವಾಮೀಜಿಯಾಗಿ ದೀಕ್ಷೆ ಪಡೆದವರು ತಮ್ಮ ಪೂರ್ವಾಶ್ರಮಕ್ಕೆ ಮರಳಲು ಯಾವುದೇ ನಿರ್ಬಂಧವಿಲ್ಲ ಎಂದರು.
ಕೂಡಲೇ ತನ್ನ ಗ್ರಾಮಕ್ಕೆ ಮರಳಿದ ಭಜನ್ ಸಿಂಗ್ ನಡೆದ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ. ಆನಂತರ ಎಲ್ಲರೂ ಪೊಲೀಸರಿಗೆ ನಕಲಿ ಸಾಧುವಿನ ಬಗ್ಗೆ ದೂರಿತ್ತರು. ಪೊಲೀಸರ ಮುಂದೆ ತಾನು ಮೋಸಗಾರ ಎಂದು ಒಪ್ಪಿಕೊಂಡ ಆ ನಕಲಿ ಸಾಧು ತನ್ನ ಹೆಸರನ್ನು ನಫೀಜ್ ಎಂದ. ‘ಅರುಣ್ ತಪ್ಪಿಸಿಕೊಂಡಿದ್ದು ನಿನಗೆ ಹೇಗೆ ಗೊತ್ತಾಯಿತು?’ ಎಂದು ಆತನನ್ನು ಕೇಳಿದಾಗ, ‘ನಾನು ಸುಮಾರು ಒಂದು ವರ್ಷದ ಹಿಂದೆ ಈ ಗ್ರಾಮದ ನೆರೆಯ ಗ್ರಾಮದಲ್ಲಿರುವ ನನ್ನ ದೂರದ ಸಂಬಂಧಿಕನೊಬ್ಬನನ್ನು ನೋಡಲು ಬಂದಾಗ ನನಗೆ ಈ ಗ್ರಾಮದಲ್ಲಿ ಅರುಣ್ ಸಿಂಗ್ ಎನ್ನುವ ಬಾಲಕ ನಾಪತ್ತೆಯಾಗಿದ್ದ ಮಾಹಿತಿ ತಿಳಿಯಿತು. ಆ ಬಾಲಕನ ಕುಟುಂಬವು ಸ್ಥಿತಿವಂತವೆಂದು ನನಗೆ ತಿಳಿದು ಬಂದಾಗ ಅವರಿಂದ ಹಣ ಹೊಡೆಯಲು ನಾನೇ ಈ ನಾಟಕ ರೂಪಿಸಿದೆ. ನಾನು ವಾಸವಿದ್ದ ಮಠದಲ್ಲಿಯೂ ನನ್ನ ಹೆಸರು, ವಿಳಾಸಗಳನ್ನು ಸುಳ್ಳು ನೀಡಿದೆ. ಆನಂತರ ನಾನೇ ಅರುಣ್ ಎಂದು ಹೇಳುವ ನಾಟಕವಾಡಿದೆ’ ಎಂದ. ಇನ್ನೊಬ್ಬನಂತೆ ನಟಿಸಿ ವಂಚಿಸುವ ಪ್ರಯತ್ನದ ಆರೋಪದ ಮೇಲೆ ನಫೀಜ್ನನ್ನು ಪೊಲೀಸರು ಬಂಧಿಸಿದರು.
ದಶಕಗಳ ಹಿಂದೆ ಕಾಣೆಯಾದ ಮಗ ಅಕಸ್ಮಾತ್ತಾಗಿ ಪತ್ತೆಯಾಗಿ ‘ನಾನೇ ನಿಮ್ಮ ಮಗ’ ಎಂದಾಗ ಯಾವ ಕುಟುಂಬವೇ ಆಗಲೀ ಆತನ ಹೇಳಿಕೆಯ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಲು ಹೋಗುವುದಿಲ್ಲ. ಇದನ್ನೇ ನಫೀಜ್ ತನ್ನ ಲಾಭಕ್ಕೆ ಬಳಸಲೆತ್ನಿಸಿದ. ಮಹಿಪಾಲ್ ಸಿಂಗ್ ಹಣ ಕಳೆದುಕೊಳ್ಳದೆ ಹೋದರೂ ಈ ಘಟನೆಯಿಂದ ಅವನ ಕುಟುಂಬಕ್ಕಾದ ನೋವು ಅಪಾರ. ಇಂತಹ ಸನ್ನಿವೇಶಗಳ ಬಗ್ಗೆ ಡಿ.ವಿ.ಜಿಯವರು ಹೀಗೆನ್ನುತ್ತಾರೆ: ಕಾಕತಾಳೀಯ ಕತೆ ಲೋಕಚರಿತೆಯಲೆಷ್ಟೋ, ಟೀಕೆಗೆಟುಕವು ನಮಗೆ ಕಾರ್ಯಕಾರಣಗಳ್, ಏಕೋ ಕಣ್ಣಲೆಯುವುದು, ಏನೋ ಅದ ಪಿಡಿಯುವುದು, ವ್ಯಾಕುಲತೆ ಫಲಿತಾಂಶ-ಮಂಕುತಿಮ್ಮ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)