ಮುಗಿದ ಮೇಲೆ ತಿರುಗಿ ನೋಡುವ ಹೊತ್ತು...

4-6841d9fe8c107
Published on
ಬದುಕೆನ್ನುವುದು

ಶೋಕ-ಪುಳಕಗಳ ಸಮಪಾಕ

ಖುಷಿಯ ಬೆನ್ನಲ್ಲೇ ದುಃಖ

ಸಂಭ್ರಮದ ಮನೆಯಲ್ಲಿ ಸೂತಕ

**

ತುಂಬಾ ವರ್ಷ ಕಾದುಕಾದು ದಕ್ಕಿದ ಪ್ರೀತಿ ಮತ್ತು ಪ್ರಶಸ್ತಿ ಎರಡಕ್ಕೂ ಮೌಲ್ಯ ಜಾಸ್ತಿಯಂತೆ. ಆದರೆ, ವಿಧಿಯಾಟವೆನ್ನುವುದು ಒಂದು ಕೊಟ್ಟು ಮತ್ತೇನೋ ಕಿತ್ತುಕೊಳ್ಳುವ ಬ್ಯಾಲೆನ್ಸಿಂಗ್ ಆಕ್ಟ್. ಆರ್​ಸಿಬಿ ತಂಡ ಸೋತು ಸೋತು ಸುಣ್ಣಾಗಿ ಹದಿನೆಂಟು ವರ್ಷ ಬಳಿಕ ಅಂತೂ ಐಪಿಎಲ್ ಗೆದ್ದೆವೆಂದು ಮೈಮರೆತು ಖುಷಿಪಡುವ ಹೊತ್ತಲ್ಲೇ ಸಂಭ್ರಮಾಚರಣೆಯೇ ನೆಪವಾಗಿ, ನೂಕುನುಗ್ಗಲಾಗಿ ಹನ್ನೊಂದು ಜನರ ಜೀವಹರಣವಾಗಿ, ಸಂಭ್ರಮಾಚರಣೆ ಶವಯಾತ್ರೆಯಾದ ವಿಧಿವಿಪರೀತಕ್ಕೆ ಏನನ್ನೋಣ. ಮನ ಮರುಗುವ, ಹೃದಯ ಭಾರವಾಗಿರುವ ಹೊತ್ತು ಇದು. ಆರ್​ಸಿಬಿ ಗೆಲುವಿನ ಹಬ್ಬ ಈ ರೀತಿ ಅಲ್ಪಾಯು ಆಗಬಾರದಿತ್ತು ಎನ್ನುವುದು ಕೊರಗು.

ಹೀಗೊಂದು ದುರಂತ ಸಂಭವಿಸಿದ್ದು ಒಂದೆಡೆಯಾದರೆ, ಪಹಲ್ಗಾಂ ನರಮೇಧ, ಪಾಕಿಸ್ತಾನದ ಉಗ್ರ ದುಸ್ಸಾಹಸ, ಭಾರತದ ಆಪರೇಷನ್ ಸಿಂಧೂರ ಪ್ರತೀಕಾರ ಹಿನ್ನೆಲೆಯಲ್ಲಿ ನಡುವೆ ಕೆಲವು ದಿನಗಳ ವಿರಾಮ ಪಡೆದುಕೊಂಡು ಎರಡು ಚರಣಗಳಲ್ಲಿ ನಡೆದ ಈ ಬಾರಿಯ ಐಪಿಎಲ್, ಆಟದ ಗುಣಮಟ್ಟ, ಸ್ಪರ್ಧಾತ್ಮಕತೆಯಿಂದ ಮೇಲ್ಮಟ್ಟದಲ್ಲಿತ್ತು. 10 ತಂಡ ಒಳಗೊಂಡ ಒಟ್ಟಾರೆ 74 ಪಂದ್ಯಗಳ ಟೂರ್ನಿಯಲ್ಲಿ ನೆನಪಿನಲ್ಲುಳಿದ ಸಾಹಸಗಳು ನೂರೆಂಟು. ಆಟ ಲೈವ್ ನೋಡಿದ ಮೇಲೂ ಬಿಡುವಿದ್ದಾಗ ಹೈಲೈಟ್ಸ್ ನೋಡಿ ಖುಷಿ ಪಡುವಂತೆ, ಟೂರ್ನಿಯಲ್ಲಿ ಹೈಲೈಟ್ ಆದ ಕೆಲವು ಅಂಶಗಳ ಮೆಲುಕು ಇಲ್ಲಿದೆ.

ಸೂರ್ಯ ಮುಳುಗದ ಅಭಿಯಾನ: 29, 48, 27*, 67, 28, 40, 26, 68*, 40*, 54, 48*, 35, 73*, 57, 33, 44... ಕನಿಷ್ಠವೆಂದರೆ 26, ಗರಿಷ್ಠ 73, ಸತತ 16 ಪಂದ್ಯಗಳಲ್ಲಿ ಎರಡಂಕಿ ರನ್ ಗಳಿಕೆ, ಒಟ್ಟಾರೆ 717 ರನ್. ಐಪಿಎಲ್ 18ನೇ ಆವೃತ್ತಿಯಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪ್ರದರ್ಶಿಸಿದ ಅಪರೂಪದ ಸ್ಥಿರತೆ. ಮುಂಬೈ ಇಂಡಿಯನ್ಸ್ ಪರ ಯಾರು ಆಡಲಿ, ಬಿಡಲಿ, ಸೂರ್ಯ ಮಾತ್ರ ಮಿನಿಮಮ್ ಗ್ಯಾರಂಟಿ ಆಟ ಆಡಿದರು. ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಎಂಐ ಆರಂಭಿಕ 4 ಸೋಲುಗಳ ಬಳಿಕ ಸತತ 6 ಗೆಲುವು, ಒಟ್ಟಾರೆ 9 ಗೆಲುವು ಗಳಿಸಿ ಟೂರ್ನಿಯಲ್ಲಿ 3ನೇ ಅತ್ಯುತ್ತಮ ತಂಡ ಎನಿಸಿಕೊಳ್ಳಲು ಸೂರ್ಯ 3ನೇ ಕ್ರಮಾಂಕದಲ್ಲಿ ಆಡಿದ ಸ್ಥಿರವಾದ ಆಟದ ಕೊಡುಗೆ ಬಹಳ ದೊಡ್ಡದು. ಅವರು 16 ಪಂದ್ಯಗಳಲ್ಲಿ 5 ಬಾರಿ 40ರ ಗಡಿಯಲ್ಲಿ ಔಟಾದರು. 5 ಬಾರಿ ಅರ್ಧ ಶತಕ ಗಳಿಸಿದರು. ಸೂರ್ಯ ಸ್ವಲ್ಪ ಸ್ವಾರ್ಥದಿಂದ, ನಿಧಾನಿಸಿ ಆಡಿದ್ದರೆ ಒಂದೆರಡು ಬಾರಿಯಾದರೂ ಶತಕದ ಗಡಿ ದಾಟಬಹುದಿತ್ತು, ಇನ್ನೊಂದಷ್ಟನ್ನು ಅರ್ಧ ಶತಕವಾಗಿ ಪರಿವರ್ತಿಸಬಹುದಿತ್ತು. ಆದರೆ, ತಂಡಹಿತಕ್ಕಾಗಿ ನಿಸ್ವಾರ್ಥ ಆಟದ ಮೂಲಕ ನೆನಪಿನಲ್ಲುಳಿಯುವ ಸಾಧನೆ ಮಾಡಿದರು.

ಕ್ರಿಕೆಟ್​ನಲ್ಲಿ ಕನ್ಸಿಸ್ಟೆನ್ಸಿಗೆ (ಸ್ಥಿರವಾದ ಆಟ) ಎಲ್ಲಿಲ್ಲದ ಮಹತ್ವ. 2014ರಲ್ಲಿ ಕೋಲ್ಕತ ನೈಟ್​ರೈಡರ್ಸ್ ಗೌತಮ್ ಗಂಭೀರ್ ನಾಯಕತ್ವದಲ್ಲಿ ಸತತ 9 ಪಂದ್ಯ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು. 2023ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸುವ ಮುನ್ನ ಸತತ 10 ಪಂದ್ಯ ಜಯಿಸಿತ್ತು. 2003ರಲ್ಲಿ ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸತತ 20 ಏಕದಿನ ಪಂದ್ಯಗಳನ್ನು ಜಯಿಸಿ ವಿಶ್ವದಾಖಲೆ ಮಾಡಿತ್ತು. ಈ ವರ್ಷ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭದ 5 ಪಂದ್ಯ ಗೆದ್ದು ಅಮೋಘ ಸ್ಥಿರತೆ ಪ್ರದರ್ಶಿಸಿದರೆ, ಡೆಲ್ಲಿ ಗೆಲುವಿನ ಸರಪಳಿ ಮುರಿದ ಮುಂಬೈ ಇಂಡಿಯನ್ಸ್ ಸತತ 6 ಪಂದ್ಯ ಗೆದ್ದು ಪ್ಲೇಆಫ್ ಅರ್ಹತೆ ಗಳಿಸಿಕೊಂಡಿತು.

ನೈನ್ ಮ್ಯಾನ್ ಷೋ- ಆರ್​ಸಿಬಿ: ಆರ್​ಸಿಬಿ ತಂಡ ಐಪಿಎಲ್​ನಲ್ಲಿ ಸತತ 17 ವರ್ಷ ಕಾಲ ವಿಫಲವಾಗಿದ್ದಕ್ಕೆ ವಿರಾಟ್ ಕೊಹ್ಲಿ ಮೇಲಿನ ಅತಿಯಾದ ಅವಲಂಬನೆ ಕಾರಣವಾಗಿತ್ತು. ಅಲ್ಲೊಂದು ಇಲ್ಲೊಂದು ಶ್ರೇಷ್ಠ ಪ್ರದರ್ಶನ ತೋರಿದರೂ, ಒಂದು ತಂಡವಾಗಿ ಸಾಂಘಿಕ ಶಕ್ತಿ ಪ್ರದರ್ಶಿಸಲು ತಂಡ ವಿಫಲವಾಗಿತ್ತು. ಆದರೆ, ಈ ವರ್ಷ ಆರ್​ಸಿಬಿ ಚಾಂಪಿಯನ್ ಪಟ್ಟಕ್ಕೇರುವ ಹಾದಿಯಲ್ಲಿ 16 ಪಂದ್ಯಗಳಲ್ಲಿ 9 ವಿವಿಧ ಆಟಗಾರರು ಪಂದ್ಯಶ್ರೇಷ್ಠರಾಗುವ ಮೂಲಕ ಸಾಂಘಿಕ ಶಕ್ತಿ (ಟೀಮ್ ಎಫರ್ಟ್) ತೋರಿದರು. ಕೃನಾಲ್ ಪಾಂಡ್ಯ (15 ಪಂದ್ಯ 17 ವಿಕೆಟ್, 109 ರನ್) ಫೈನಲ್ ಸಹಿತ 3 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠರಾದರೆ, ನಾಯಕ ರಜತ್ ಪಾಟೀದಾರ್ (15 ಪಂದ್ಯ 312 ರನ್) ಚೆನ್ನೈ ಮತ್ತು ಮುಂಬೈ ವಿರುದ್ಧ ಗೆಲುವಿನಲ್ಲಿ ಪ್ರಮುಖ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ (15 ಪಂದ್ಯ 657 ರನ್) ಆರ್​ಸಿಬಿ ಗೆದ್ದ 8 ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿ ಅಮೋಘ ಕೊಡುಗೆ ನೀಡಿದರು. ಟಿಮ್ ಡೇವಿಡ್ (187 ರನ್), ಜೋಷ್ ಹ್ಯಾಸಲ್​ವುಡ್ (22 ವಿಕೆಟ್), ಫಿಲ್ ಸಾಲ್ಟ್ (403 ರನ್), ಜಿತೇಶ್ ಶರ್ಮ (261 ರನ್), ಸುಯಶ್ ಶರ್ಮ (8 ವಿಕೆಟ್), ರೊಮಾರಿಯೊ ಶೆಫರ್ಡ್ ಹೀಗೆ ಒಬ್ಬೊಬ್ಬರು ಒಂದೊಂದು ಪಂದ್ಯದಲ್ಲಿ ಗೆಲುವಿನ ಆಟವಾಡಿ ಆರ್​ಸಿಬಿ ಟ್ರೋಫಿ ಹಾದಿ ಸುಗಮಗೊಳಿಸಿದರು.

ಬ್ಯಾಟರ್​ಗಳ ಸ್ವರ್ಗ: ಒಟ್ಟಾರೆ ನಿರ್ವಹಣೆ ದೃಷ್ಟಿಯಿಂದ ಈ ವರ್ಷ ಅತ್ಯಂತ ನಿರಾಸೆ ಉಂಟು ಮಾಡಿದ ತಂಡ ಸನ್​ರೈಸರ್ಸ್ ಹೈದರಾಬಾದ್. ತಂಡದಲ್ಲಿದ್ದ ಘಟಾನುಘಟಿಗಳ ಪಟ್ಟಿ ಆಧರಿಸಿ ಹೇಳುವುದಾದರೆ, ಚಾಂಪಿಯನ್ ಸಿಂಹಾಸನವನ್ನೇ ಏರಬೇಕಿದ್ದ ಸನ್​ರೈಸರ್ಸ್ 6ನೇ ಸ್ಥಾನ ಪಡೆದಿದ್ದು ಬಹಳ ಕಳಪೆಯಾಯಿತು. ಆದರೆ, ಅಲ್ಲೊಂದು ಇಲ್ಲೊಂದು ಪಂದ್ಯದಲ್ಲಿ ಪ್ರಚಂಡ ಪ್ರದರ್ಶನ ಮೆರೆದಿದ್ದೂ ಸನ್​ರೈಸರ್ಸ್ ತಂಡವೇ. ಪಂಜಾಬ್ ಕಿಂಗ್ಸ್ ವಿರುದ್ಧ 246 ರನ್​ಗಳ ಗುರಿಯನ್ನು ಬೆನ್ನಟ್ಟಿದ್ದು ನೆನಪಿನಲ್ಲುಳಿಯುವ ಸಾಧನೆ. ಅದು ಸಾಧ್ಯವಾಗಿದ್ದು ಅಭಿಷೇಕ್ ಶರ್ಮ ಎಂಬ ತುಪಾಕಿ ಬ್ಯಾಟರ್​ನಿಂದ. 55 ಎಸೆತಗಳಲ್ಲಿ 141 ರನ್ ಚಚ್ಚುವ ಮೂಲಕ ಸನ್​ರೈಸರ್ಸ್​ಗೆ ಗೆಲುವು ಕೊಡಿಸಿದ್ದರು.

ರಾಜಸ್ಥಾನ ರಾಯಲ್ಸ್ ಈ ಆವೃತ್ತಿಯಲ್ಲಿ ಅತ್ಯಂತ ಕಳಪೆ ಆಟವಾಡಿದರೂ, ತಂಡದ ಹಾಲುಗಲ್ಲದ ಬ್ಯಾಟರ್ ವೈಭವ್ ಸೂರ್ಯವಂಶಿ ಪ್ರಧಾನಿ ನರೇಂದ್ರ ಮೋದಿಯೇ ಮೆಚ್ಚುವಂಥ ಆಟ ಆಡಿದರು. ಅದರಲ್ಲೂ ಗುಜರಾತ್ ಟೈಟಾನ್ಸ್ ವಿರುದ್ಧ 14 ವರ್ಷದ ವೈಭವ್ 38 ಎಸೆತಗಳಲ್ಲಿ ಚಚ್ಚಿದ ಶತಕ (101 ರನ್, 11 ಸಿಕ್ಸರ್) ಅದ್ಭುತ. ಸನ್​ರೈಸರ್ಸ್ ತನ್ನ ಆರಂಭಿಕ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ 286 ರನ್​ಗಳ ಶಿಖರವೇರಿ ಆರ್ಭಟಿಸಲು ಕಾರಣವಾಗಿದ್ದು ಇಶಾನ್ ಕಿಶನ್​ರ ಅಮೋಘ ಶತಕ. ಹರಾಜಿನಲ್ಲಿ 27 ಕೋಟಿ ರೂ. ಮೌಲ್ಯ ಪಡೆದು, ಈ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರನೆನಿಸಿದ್ದ ಲಖನೌ ಸೂಪರ್​ಜೈಂಟ್ಸ್ ನಾಯಕ ರಿಷಬ್ ಪಂತ್ ಬ್ಯಾಟಿಂಗ್, ನಾಯಕತ್ವ ಎರಡರಲ್ಲೂ ಅತ್ಯಂತ ನಿರಾಸೆ ಅನುಭವಿಸಿದರೂ, ಆರ್​ಸಿಬಿ ವಿರುದ್ಧ ತಂಡದ ಕೊಟ್ಟಕೊನೆಯ ಲೀಗ್ ಪಂದ್ಯದಲ್ಲಿ ಅಜೇಯ ಶತಕ (118 ರನ್) ಬಾರಿಸುವ ಮೂಲಕ ಸಮರ್​ಸಾಲ್ಟ್ ಜಿಗಿತ ಪ್ರದರ್ಶಿಸಿ ಸಂಭ್ರಮಿಸಿದರು. 27 ಕೋಟಿ ರೂ. ಮೌಲ್ಯ ತಂದಿಟ್ಟ ಒತ್ತಡ, ದುರದೃಷ್ಟ ಹಾಗೂ ಆತ್ಮವಿಶ್ವಾಸದ ಕೊರತೆಯಿಂದ ಪಂತ್ ವ್ಯಕ್ತಿಗತವಾಗಿ ಹಾಗೂ ಲಖನೌ ತಂಡದ ನಿರಾಸೆಗೆ ಕಾರಣರಾದರು.

ಪಂಜಾಬ್​ನ ಯುವ ಬ್ಯಾಟರ್ ಪ್ರಿಯಾಂಶ್ ಆರ್ಯ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ 42 ಎಸೆತಗಳಲ್ಲಿ 103 ರನ್​ಗಳ ಶತಕದಾಟವಾಡಿದ್ದು ಮತ್ತೊಂದು ಮರೆಯಲಾರದ ಇನಿಂಗ್ಸ್. ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ಆರ್​ಸಿಬಿಗೆ ಗೆಲುವು ತಂದುಕೊಟ್ಟ ವೆಸ್ಟ್ ಇಂಡೀಸ್ ದಾಂಡಿಗ ರೊಮಾರಿಯೊ ಶೆಫರ್ಡ್​ರ 14 ಎಸೆತಗಳಲ್ಲಿ ಅಜೇಯ 53 ರನ್ ಸಾಹಸವೂ ಭಯಂಕರ. ಇಂಥ ಅನೇಕ ಇನಿಂಗ್ಸ್​ಗಳನ್ನು ಮೀರಿಸುವ ಬ್ಯಾಟಿಂಗ್ ಪ್ರದರ್ಶಿಸಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ 2ನೇ ಕ್ವಾಲಿಫೈಯರ್​ನಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್. 41 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್​ಗಳ ಅಜೇಯ 87 ರನ್ ಚಚ್ಚಿದ ಅಯ್ಯರ್, ಮುಂಬೈ ತಂಡವನ್ನು ಹೊರದಬ್ಬಿ, ಪಂಜಾಬ್ ಫೈನಲ್​ಗೇರಲು ಕಾರಣರಾದರು. ಪಂದ್ಯ ಮುಗಿದ ಬಳಿಕ ಆಟಗಾರರಿಗೆ ಹಸ್ತಲಾಘವ ಕೊಡಲಾಗದ ಮಟ್ಟಿಗೆ ಬಲಗೈ ನೋವು ಅನುಭವಿಸುತ್ತಿದ್ದರೂ, ಮುಂಬೈ ಬೌಲಿಂಗ್ ಚೆಂಡಾಡಿ ಸಿಕ್ಸರ್ ಮೇಲೆ ಸಿಕ್ಸರ್ ಅಟ್ಟುವ ಮೂಲಕ ಶ್ರೇಯಸ್ ಪವಾಡ ಮೆರೆದರು.

ನಾಯಕತ್ವ ಇಂಪಾರ್ಟೆಂಟ್: ವಿಶ್ವ ಕ್ರಿಕೆಟ್​ನಲ್ಲಿ ಹೆಸರು ಮಾಡಿರುವ ಪ್ರಚಂಡ ಬ್ಯಾಟರ್​ಗಳು, ಬೌಲರ್​ಗಳನ್ನು ಹರಾಜಿನಲ್ಲಿ ಖರೀದಿಸಿಬಿಟ್ಟರೆ, ಪ್ರಬಲ ತಂಡ ಕಟ್ಟಲು ಸಾಧ್ಯವಿಲ್ಲ ಎಂಬುದು ಈ ವರ್ಷ ಹಲವು ತಂಡಗಳಿಗೆ ಅರ್ಥವಾಯಿತು. ಅರ್ಧ ಭಾರತ ತಂಡವೇ ಇದ್ದರೂ, ಮುಂಬೈ ಇಂಡಿಯನ್ಸ್​ಗೆ ಫೈನಲ್ ತಲುಪಲಾಗಲಿಲ್ಲ. ಟ್ರಾವಿಸ್ ಹೆಡ್, ಇಶಾನ್ ಕಿಶನ್, ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸೆನ್​ರಂಥ ಗಂಡುಗಲಿಗಳಿದ್ದರೂ ಸನ್​ರೈಸರ್ಸ್ ಪ್ಲೇಆಫ್ ತಲುಪಲಿಲ್ಲ. ಅಂದರೆ, ಸ್ಪೋಟಕ ಬ್ಯಾಟರ್​ಗಳು, ಪ್ರಭಾವಿ ಬೌಲರ್​ಗಳಿಂದ ಉತ್ತಮ ಆಟ ಹೊರಸೆಳೆಯಬಲ್ಲ ಕೋಚ್​ಗಳು ಹಾಗೂ ನಾಯಕ ಎಷ್ಟು ಇಂಪಾರ್ಟೆಂಟ್ ಎನ್ನುವುದಕ್ಕೆ ಲೀಗ್ ಕನ್ನಡಿ ಹಿಡಿಯಿತು.

2ನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಸಲೀಸಾಗಿ 220-230 ರನ್ ಗಳಿಸಲು ಅವಕಾಶವಿತ್ತು. ಆದರೆ, 14 ರಿಂದ 20 ಓವರ್​ಗಳ ನಡುವೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಬೌಲರ್​ಗಳನ್ನು ಬದಲಾಯಿಸಿದ ರೀತಿ, ತೋರಿದ ಚಾಕಚಕ್ಯತೆ ಮುಂಬೈ ಬ್ಯಾಟರ್​ಗಳನ್ನು ತಬ್ಬಿಬ್ಬುಗೊಳಿಸಿತು. ತಂಡ 203 ರನ್​ಗೆ ಸೀಮಿತವಾಯಿತು. ಈ ಪಂದ್ಯದಲ್ಲಿ ಅಯ್ಯರ್ ನಾಯಕರಾಗಿ ತೋರಿದ ಪ್ರಬುದ್ಧತೆಯನ್ನು ಪಂಜಾಬ್ ಬ್ಯಾಟಿಂಗ್ ಮಾಡುವಾಗ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಪ್ರದರ್ಶಿಸಲು ವಿಫಲರಾದರು. ಮಧ್ಯಮ ಓವರ್​ಗಳಲ್ಲಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್​ರನ್ನು ಸೂಕ್ತವಾಗಿ ಬಳಸಿಕೊಳ್ಳಲಿಲ್ಲ. 18 ಓವರ್ ಒಳಗೆ ಟ್ರೆಂಟ್ ಬೌಲ್ಟ್, ಜಸ್​ಪ್ರೀತ್ ಬುಮ್ರಾ ಬೌಲಿಂಗ್ ಕೋಟಾ ಮುಗಿಸಿದ್ದರಿಂದ ಕೊನೆಯ 2 ಓವರ್​ಗಳಲ್ಲಿ ತಂಡಕ್ಕೆ ಬೌಲಿಂಗ್ ಆಯ್ಕೆಗಳೇ ಇರಲಿಲ್ಲ. 19ನೇ ಓವರ್​ನಲ್ಲಿ ಸ್ವತಃ ತಾವೇ ಬೌಲಿಂಗ್ ಮಾಡಿ ನಾಯಕ ಪಾಂಡ್ಯ ಸವಾಲಿಗೆ ಎದೆಗೊಡಬಹುದಿತ್ತು. ಆದರೆ, ಹಿಂಜರಿದರು. ಬದಲಿಗೆ ಹೊಸಬ ಅಶ್ವನಿಕುಮಾರ್​ರನ್ನು ಹುಲಿಯ ಬೋನಿಗೆ ದೂಡಿ ಬಲಿಪಶು ಮಾಡಿದರು. ಪಾಂಡ್ಯ ಲೀಗ್​ನಲ್ಲಿ ಸೆಲೆಬ್ರಿಟಿ ಕ್ರಿಕೆಟಿಗರ ಮ್ಯಾನೇಜರ್ ಆಗಿ ಕಂಡರೇ ಹೊರತು, ಅವರ ನಾಯಕತ್ವದಲ್ಲಿ ಯಾವುದೇ ಹೊಸ ಆಲೋಚನೆ, ಮಿಂಚಿನ ನಿರ್ಧಾರಗಳು ಕಂಡುಬರಲೇ ಇಲ್ಲ.

ನಾಯಕತ್ವದ ವಿಚಾರದಲ್ಲಿ ಅಯ್ಯರ್ ಬಿಟ್ಟರೆ, ಆರ್​ಸಿಬಿಯ ರಜತ್ ಪಾಟಿದಾರ್ ಹಾಗೂ ಭಾರತ ಟೆಸ್ಟ್ ತಂಡದ ನಾಯಕರಾಗಿ ಬಡ್ತಿ ಪಡೆದಿರುವ ಗುಜರಾತ್ ಟೈಟನ್ಸ್​ನ ಶುಭಮನ್ ಗಿಲ್ ಕೂಡ ಗಮನ ಸೆಳೆದರು. ಪಂಜಾಬ್ ಕಿಂಗ್ಸ್ ಹಾಗೂ ಸ್ಪೋಟಕ ಶ್ರೇಯಸ್ ಅಯ್ಯರ್ ವಿರುದ್ಧ ಕಡಿವಾಣ ಹೇರಲು ನಾಯಕರಾಗಿ ಮುಂಬೈನ ಪಾಂಡ್ಯಗೆ ಸಾಧ್ಯವಾಗದ್ದನ್ನು ಆರ್​ಸಿಬಿ ನಾಯಕ ಪಾಟಿದಾರ್ ಸಾಧಿಸಿದರು. ಫೈನಲ್​ನಲ್ಲಿ ಆರ್​ಸಿಬಿ 190 ರನ್ ಮೊತ್ತವನ್ನು ಯಶಸ್ವಿಯಾಗಿ ಕಾಪಾಡಿಕೊಂಡಿತು ಮಾತ್ರವಲ್ಲ, ಶ್ರೇಯಸ್ ಅಯ್ಯರ್ ಕೇವಲ 1 ರನ್​ಗೆ ಬಲೆಗೆ ಬಿದ್ದರು. ಇನ್ನೊಂದು ಲೀಗ್ ಪಂದ್ಯದಲ್ಲಿ 232 ರನ್ ಗುರಿ ಬೆನ್ನಟ್ಟಿ, 15.3 ಓವರ್​ಗಳಲ್ಲಿ 3 ವಿಕೆಟ್​ಗೆ 173 ರನ್ ಮಾಡಿದ್ದ ಆರ್​ಸಿಬಿ ,16 ರನ್ ಅಂತರದಲ್ಲಿ ಕೊನೆಯ 7 ವಿಕೆಟ್ ಕಳೆದುಕೊಂಡು 189 ರನ್​ಗೆ ಆಲೌಟ್ ಆಗಿದ್ದು ಕೂಡ ಸನ್​ರೈಸರ್ಸ್ ನಾಯಕ ಪ್ಯಾಟ್ ಕಮಿನ್ಸ್​ರ ಅಮೋಘ ನಾಯಕತ್ವದ ಕಾರಣದಿಂದ. ಇನ್ನೊಂದೆಡೆ ಸಾಯಿ ಸುದರ್ಶನ್ (759), ಶುಭಮಾನ್ ಗಿಲ್​ರ (650) ಆರಂಭಶೂರತ್ವದ ಬಲದಿಂದ ಪ್ಲೇಆಫ್ ತಲುಪಿದ್ದ ಗುಜರಾತ್​ಗೆ ಉತ್ತಮ ಫಿನಿಶರ್​ಗಳ ಕೊರತೆ ಕಾಡದಿದ್ದರೆ, ಸಮಚಿತ್ತದ ನಾಯಕ ಗಿಲ್ ತಂಡವನ್ನು ಇನ್ನೊಂದು ಹೆಜ್ಜೆ ಮುನ್ನಡೆಸುವ ಅವಕಾಶ ಹೊಂದಿದ್ದರು.

ಧೋನಿ, ಸಿಎಸ್​ಕೆ ಕಲಿತ ಪಾಠ: 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡದ ಈವರೆಗಿನ ಯಶಸ್ಸಿಗೆ ಎಂಎಸ್ ಧೋನಿ ಆತ್ಮದಂತಿದ್ದರು. ಆದರೆ, ಈ ವರ್ಷ ಸಿಎಸ್​ಕೆ ಲೀಗ್​ನ ಕೊಟ್ಟಕೊನೆಯ ತಂಡವಾಗಿ ಅನುಭವಿಸಿದ ಮುಖಭಂಗ, ಧೋನಿಯನ್ನು ಬಿಟ್ಟು ಬೇರೆ ದಿಕ್ಕಿನಲ್ಲಿ ನೋಡುವ ಅನಿವಾರ್ಯತೆ ಸೃಷ್ಟಿಸಿದೆ. ಕ್ರಿಕೆಟ್ ಇರಲಿ, ಜೀವನವಿರಲಿ, ಯಾವುದೂ ಶಾಶ್ವತವಲ್ಲ, ಯಾರೂ ಅನಿವಾರ್ಯರಲ್ಲ. ಧೋನಿ ತಂದುಕೊಟ್ಟ ಸವಿನೆನಪುಗಳಿಗೆ ಕೃತಜ್ಞತೆ ಹೇಳಿ, ಮುಂದಿನ ಋತುವಿಗೆ ಹೊಸ ತಂಡ ಕಟ್ಟುವ ಅನಿವಾರ್ಯಕ್ಕೆ ಸಿಎಸ್​ಕೆ ತೆರೆದುಕೊಳ್ಳಬೇಕಿದೆ. (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net