ದಾನವನಾದ ದೇವಮಾನವ: ಆ ಕ್ಷಣ ಅಂಕಣ...

Aa kshana
Published on
ಪಟ್ಟಣವೊಂದರಲ್ಲಿ ಆಟೋ ಚಾಲಕನಾಗಿದ್ದ ಬಸವರಾಜು, ತನ್ನ ಪತ್ನಿ ಕಮಲಾ ಮತ್ತು ಒಬ್ಬಳೇ ಮಗಳು ಸರಳಾರೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಸರಳಾ ಹತ್ತನೆಯ ತರಗತಿ ಓದುತ್ತಿದ್ದಳು. ಬಸವರಾಜನಿಗೆ ಉಬ್ಬಸ ರೋಗವಿತ್ತು. ಹಲವು ವೈದ್ಯರಿಗೆ ತೋರಿಸಿದ್ದರೂ ರೋಗ ಮಾಯವಾಗಿರದ ಕಾರಣ ಖಿನ್ನತೆಗೊಳಗಾಗಿದ್ದ. ಒಂದು ದಿನ ಅವನ ಆಟೋದಲ್ಲಿ ಬಂದ ಪ್ರಯಾಣಿಕರೊಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತ ಅದೇ ಊರಿನಲ್ಲಿರುವ ಆಶ್ರಮವೊಂದರ ಸ್ವಾಮೀಜಿ ಹಲವಾರು ಜನರ ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿರುವುದಾಗಿಯೂ, ತನ್ನ ರೋಗವನ್ನೂ ಪರಿಹಾರ ಮಾಡಿರುವುದಾಗಿಯೂ ತಿಳಿಸಿ ಅವರನ್ನೊಮ್ಮೆ ಕಾಣಲು ಸೂಚಿಸಿ ವಿಳಾಸವನ್ನು ನೀಡಿದರು.

ಬಸವರಾಜು ಪತ್ನಿಯ ಜೊತೆಗೆ ಊರ ಹೊರಗಿನ ತೋಟದಲ್ಲಿದ್ದ ಆ ಆಶ್ರಮಕ್ಕೆ ಹೋದ. ಅಲ್ಲಿ ಷೆಡ್ ಅನ್ನು ದೇವಸ್ಥಾನವಾಗಿ ಪರಿವರ್ತಿಸಲಾಗಿದ್ದು ಅಲ್ಲಿನ ಸ್ವಾಮೀಜಿಯಾಗಿದ್ದ ಸತ್ಯನಾರಾಯಣ ಷೆಡ್ಡಿನ ಪಕ್ಕದಲ್ಲೇ ತನ್ನ ಮನೆ ಮಾಡಿಕೊಂಡಿದ್ದ. ಆತ ಪ್ರತಿದಿನ ಮೂರು ಬಾರಿ ದೇವರಪೂಜೆ ಮಾಡಿ ಪೂಜೆಯ ನಂತರ ತನ್ನನ್ನು ಭೇಟಿಯಾಗಲು ಬಂದ ಜನರನ್ನು ಕಂಡು ಅವರ ಸಮಸ್ಯೆಗಳನ್ನು ಕೇಳುತ್ತಿದ್ದ. ಬರುವವರಿಗೆ ಪ್ರಸಾದವೆಂದು ಹೇಳಿ ವಿಭೂತಿಯನ್ನು ಕೊಡುತ್ತಿದ್ದ. ಆತ ಯಾರಿಂದಲೂ ಹಣ ಕೇಳದೆ ಇಷ್ಟಬಂದಷ್ಟು ಹಣವನ್ನು ಹುಂಡಿಯೊಳಗೆ ಹಾಕಲು ಹೇಳುತ್ತಿದ್ದ.

ಸತ್ಯನಾರಾಯಣನಿಗೆ ಅವನ ಪತ್ನಿ ಲಕ್ಷ್ಮಿಯೇ ಸಹಾಯಕಿಯಾಗಿದ್ದಳು. ಆಕೆ ಗಂಡನ ಪೂಜಾ ವಿಧಿಗಳಲ್ಲಿ ನೆರವಾಗುತ್ತಿದ್ದುದಲ್ಲದೇ ದೇವಸ್ಥಾನದ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಳು. ನಿತ್ಯ ಸುಮಾರು ಐವತ್ತು ಜನರು ಆಶ್ರಮಕ್ಕೆ ಬರುತ್ತಿದ್ದರು.

ಬಸವರಾಜು ಆರೋಗ್ಯದ ಸಮಸ್ಯೆ ಹೇಳಿಕೊಂಡಾಗ, ಸತ್ಯನಾರಾಯಣ, ‘ನೀನೇನೂ ಚಿಂತಿಸಬೇಡ, ನಾನು ದೇವರನ್ನು ಪೂಜಿಸಿ ನಿನಗೆ ಮಂತ್ರಿಸಿದ ವಿಭೂತಿ ನೀಡುವೆ. ಮನೆಗೆ ಹೋಗಿ ಅದನ್ನು ನೀರಿನಲ್ಲಿ ಬೆರೆಸಿ ಸೇವಿಸು, ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ’ ಎಂದು ಹೇಳಿ ವಿಭೂತಿಯನ್ನು ನೀಡಿದ. ಮಾರನೆಯ ದಿನದಿಂದಲೇ ಬಸವರಾಜು ಸ್ವಾಮೀಜಿಯ ಸಲಹೆ ಪಾಲಿಸಿದ. ಎರಡು ವಾರಗಳ ನಂತರ ಅವನಿಗೆ ತನ್ನ ದೇಹಸ್ಥಿತಿಯಲ್ಲಿ ಬದಲಾವಣೆಯಾದಂತೆ ಅನಿಸಿತು. ಹೀಗಾಗಿ ಆತನಿಗೆ ಮತ್ತು ಪತ್ನಿಗೆ ಸತ್ಯನಾರಾಯಣನ ಮೇಲೆ ಭರವಸೆ ಮೂಡಿತು. ಇಬ್ಬರೂ ಪ್ರತಿವಾರವೂ ಆಶ್ರಮಕ್ಕೆ ಹೋಗತೊಡಗಿದರು. ಕೆಲವೊಮ್ಮೆ ಸರಳಾಳನ್ನೂ ಕರೆದೊಯ್ಯುತ್ತಿದ್ದರು.

ಒಂದು ದಿನ ಬಸವರಾಜು ಮತ್ತು ಕಮಲಾ ತುರ್ತು ಕೆಲಸಕ್ಕಾಗಿ ಬೇರೆ ಊರಿಗೆ ಹೋಗಬೇಕಾಗಿದ್ದ ಕಾರಣ ಸರಳಾಳಿಗೆ ಆಶ್ರಮಕ್ಕೆ ಹೋಗಿ ವಿಭೂತಿ ತರಲು ಸೂಚಿಸಿದರು. ಸರಳಾ ಹೋದಾಗ ಮಧ್ಯಾಹ್ನದ ಸಮಯವಾಗಿದ್ದು ಆಶ್ರಮದಲ್ಲಿ ಬೇರೆ ಯಾರೂ ಇರದೆ ನಿರ್ಜನವಾಗಿತ್ತು. ಸರಳಾಳನ್ನು ಭೇಟಿಯಾದ ಲಕ್ಷ್ಮಿ, ಸ್ವಾಮೀಜಿ ಸ್ನಾನ ಮಾಡುತ್ತಿದ್ದಾರೆಂದು ತಿಳಿಸಿ ಕಾಯಲು ಹೇಳಿದಳು. ಸ್ನಾನ ಮುಗಿಸಿ ಹೊರಗೆ ಬಂದ ಸತ್ಯನಾರಾಯಣ ಸರಳಾಳನ್ನು ನೋಡಿ, ‘ನೀನೇಕೆ ಅಪ್ಪ ಅಮ್ಮನ ಜೊತೆ ಪ್ರತಿವಾರವೂ ಆಶ್ರಮಕ್ಕೆ ಬರುವುದಿಲ್ಲ?’ ಎಂದು ಕೇಳಿ, ‘ಈಗ ಮಟಮಟ ಮಧ್ಯಾಹ್ನವಾಗಿದೆ. ಸ್ವಲ್ಪ ತಂಪುಪಾನೀಯ ಸೇವಿಸಿ ಹೋಗು’ ಎಂದ. ಲಕ್ಷ್ಮಿ ಅವಳಿಗೆ ತಂಪುಪಾನೀಯ ಕೊಟ್ಟಳು.

ಆ ಪಾನೀಯ ಕುಡಿಯುತ್ತಿದ್ದಂತೆಯೇ ಸರಳಾಗೆ ಮಂಪರು ಬಂದ ಹಾಗಾಯಿತು. ಮುಂದೇನಾಯಿತು ಎಂದು ಆಕೆಗೆ ತಿಳಿಯಲಿಲ್ಲ. ಮಂಪರಿನಿಂದ ಎಚ್ಚೆತ್ತಾಗ ದೊಡ್ಡ ಮಂಚದಲ್ಲಿ ಮಲಗಿದ್ದಳು. ಆಕೆ ಸಂಪೂರ್ಣವಾಗಿ ವಿವಸ್ತ್ರಳಾಗಿದ್ದಲ್ಲದೆ, ಆಕೆಯ ಎಡಭಾಗದಲ್ಲಿ ಸತ್ಯನಾರಾಯಣನೂ ಬಲಭಾಗದಲ್ಲಿ ಲಕ್ಷ್ಮಿಯೂ ಮಲಗಿದ್ದು ಅವರೂ ವಿವಸ್ತ್ರರೇ ಆಗಿದ್ದರು. ಗಾಬರಿಗೊಂಡ ಸರಳಾ ಮಂಚದಿಂದ ಕೆಳಕ್ಕೆ ಜಿಗಿದು, ‘ನಾನೆಲ್ಲಿದ್ದೇನೆ, ನನಗೇನಾಯಿತು?’ ಎಂದು ಕೇಳಿದಾಗ, ಲಕ್ಷ್ಮಿ, ‘ನೀನು ಗುರುಗಳ ಆಶ್ರಮದಲ್ಲಿರುವೆ. ನಿನ್ನ ದೇಹದಲ್ಲಿ ಭೂತ-ಪ್ರೇತಗಳು ಆವರಿಸಿಕೊಂಡಿರುವುದನ್ನು ಸ್ವಾಮೀಜಿ ಕಂಡರು. ಅವರಿಗೆ ದಿವ್ಯದೃಷ್ಟಿ ಮೂಲಕ ನೀನು ಪಾಪದ ಕೂಪದಲ್ಲಿ ಮುಳುಗಿರುವೆ ಎಂದು ತಿಳಿಯಿತು. ಅದಕ್ಕಾಗಿಯೇ ಅವರು ನಿನಗೆ ತಂಪುಪಾನೀಯದಲ್ಲಿ ಔಷಧವನ್ನು ಹಾಕಿ ಕೊಡಲು ಸೂಚಿಸಿದರು. ಔಷಧದಿಂದ ನಿನಗೆ ನಿದ್ದೆ ಬಂದಿತು. ಆ ಸಮಯದಲ್ಲಿ ನಾವಿಬ್ಬರೂ ನಿನ್ನನ್ನು ನಮ್ಮ ಮಧ್ಯೆಯಿಟ್ಟುಕೊಂಡು ನಿನ್ನ ಮೇಲೆ ಪೂಜೆ ಮಾಡಿ ನಿನ್ನನ್ನು ಹೊಕ್ಕಿದ್ದ ಭೂತಗಳನ್ನು ಹೊಡೆದೋಡಿಸಿದ್ದೇವೆ’ ಎಂದಳು. ತೀರಾ ಗಾಬರಿಯಾಗಿದ್ದ ಸರಳಾ ಮಾತನಾಡದೆ ವಿಭೂತಿಯನ್ನು ಪಡೆದು ಮನೆಗೆ ಹೊರಟು ಬಂದಳು.

ಮಗಳು ಮಂಕಾಗಿರುವುದನ್ನು ಗಮನಿಸಿದ ಕಮಲಾ ಆಶ್ರಮದಲ್ಲೇನಾಯಿತೆಂದು ವಿಚಾರಿಸಿದಳು. ಆದರೆ ಸರಳಾ ಹೇಳಲಿಲ್ಲ. ತಂದೆ-ತಾಯಿಯಿಬ್ಬರೂ ಸ್ವಾಮೀಜಿಯ ಪರಮಭಕ್ತರಾಗಿದ್ದ ಕಾರಣ ನಿಜ ಹೇಳಿದರೂ ಅವರು ನಂಬುವುದಿಲ್ಲವೆಂದು ಆಕೆ ರ್ತಸಿದ್ದಳು. ಆ ಘಟನೆಯನ್ನು ಮರೆತು ಆಕೆ ವಿದ್ಯಾಭ್ಯಾಸದಲ್ಲಿ ಗಮನವಿತ್ತಳು.

ಒಂದು ತಿಂಗಳ ನಂತರ ಸರಳಾ ಮಾರುಕಟ್ಟೆಗೆ ಹೋಗಿದ್ದಾಗ ಅಕಸ್ಮಾತ್ತಾಗಿ ಲಕ್ಷ್ಮಿ ಎದುರಾಗಿ ಅವಳನ್ನು ಪಕ್ಕಕ್ಕೆ ಕರೆದೊಯ್ದು, ಒಂದೈದು ನಿಮಿಷ ಆಶ್ರಮಕ್ಕೆ ಬಂದು ಹೋಗು ಎಂದಳು. ‘ನನಗೆ ಬರಲಾಗುವುದಿಲ್ಲ, ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇನ್ನೇನು ಬರುತ್ತಲಿವೆ’ ಎಂದು ಸರಳಾ ಉತ್ತರಿಸಿದಾಗ, ‘ನಿನಗೆ ಒಂದು ಮುಖ್ಯ ವಿಷಯ ತೋರಿಸಬೇಕು’ ಎಂದ ಲಕ್ಷ್ಮಿ ತನ್ನ ಮೊಬೈಲ್​ನಲ್ಲಿ ಸರಳಾಗೆ ಒಂದು ವಿಡಿಯೋ ತೋರಿಸಿದಳು. ಸುಮಾರು ಮೂರು ನಿಮಿಷಗಳ ಆ ವಿಡಿಯೋದಲಿ, ವಿವಸ್ತ್ರಳಾಗಿದ್ದ ಸರಳಾಳನ್ನು ಸತ್ಯನಾರಾಯಣ ಅತ್ಯಾಚಾರ ಮಾಡುತ್ತಿದ್ದುದು ದಾಖಲಾಗಿತ್ತು. ‘ನೀನು ಆಶ್ರಮಕ್ಕೆ ಬರದೇ ಹೋದರೆ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ’ ಎಂದು ಲಕ್ಷ್ಮಿ ಹೇಳಿದಾಗ ಭಯಬೀತಳಾದ ಸರಳಾ ‘ನಾಳೆ ಬರುತ್ತೇನೆ’ ಎಂದು ಹೇಳಿ ಮಾರನೆಯ ದಿನ ಶಾಲೆಗೆ ಹೋಗದೆ ಆಶ್ರಮಕ್ಕೆ ಹೋದಳು. ಸತ್ಯನಾರಾಯಣ ಮತ್ತೊಮ್ಮೆ ಸರಳಾಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡ.

ಕೆಲ ದಿನಗಳ ನಂತರ ಹತ್ತನೆಯ ತರಗತಿಯ ಪರೀಕ್ಷೆಗಳು ಬಂದ ಕಾರಣ ಸರಳಾ ಮನೆ ಬಿಟ್ಟು ಎಲ್ಲಿಯೂ ಹೋಗಲಿಲ್ಲ. ಪರೀಕ್ಷೆಯ ಫಲಿತಾಂಶ ಬಂದ ಮಾರನೆಯ ದಿನವೇ ಬಸವರಾಜುವಿನ ಸಂಬಂಧಿಕರೊಬ್ಬರು ಸರಳಾಳಿಗೆ ಮದುವೆಯ ಪ್ರಸ್ತಾಪ ತಂದರು. ಬಸವರಾಜು ಮಗಳ ಮದುವೆಯನ್ನು ಒಂದೇ ತಿಂಗಳ ನಂತರ ಅದ್ದೂರಿಯಾಗಿಯೇ ಮಾಡಿದ. ಸತ್ಯನಾರಾಯಣ ಮತ್ತು ಲಕ್ಷ್ಮಿಯನ್ನು ಆಹ್ವಾನಿಸಲು ಆತ ಮರೆಯಲಿಲ್ಲ.

ಮದುವೆಯಾದ ನಂತರ ಸರಳಾ ಬೇರೆ ಊರಿನಲ್ಲಿದ್ದ ತನ್ನ ಗಂಡ ವೇಣುವಿನ ಮನೆಗೆ ಹೋದಳು. ಅಷ್ಟರಲ್ಲಿ ವೇಣುವಿಗೆ ದುಬೈನಲ್ಲಿ ಕೆಲಸ ಸಿಕ್ಕ ಕಾರಣ ಸರಳಾಳನ್ನು ಬಸವರಾಜುವಿನ ಮನೆಯಲ್ಲಿಯೇ ಬಿಟ್ಟು ತಾನೊಬ್ಬನೇ ದುಬೈಗೆ ಹೋದ. ಸರಳಾ ಊರಿಗೆ ಬಂದ ವಿಷಯ ತಿಳಿದ ಲಕ್ಷ್ಮಿ, ಬಸವರಾಜುವಿನ ಮೂಲಕ ಸರಳಾಳಿಗೆ ಆಶ್ರಮಕ್ಕೆ ಬರಹೇಳಿದಳು. ಒಲ್ಲದ ಮನಸ್ಸಿನಿಂದ ಸರಳಾ ಆಶ್ರಮಕ್ಕೆ ಹೋದಾಗ ಮತ್ತೆ ಸತ್ಯನಾರಾಯಣನೊಡನೆ ಲೈಂಗಿಕ ಸಂಪರ್ಕ ಮಾಡಲು ಲಕ್ಷ್ಮಿ ಅವಳನ್ನು ಒತ್ತಾಯಿಸಿದಳು. ಸರಳಾ ಒಪ್ಪದಿದ್ದಾಗ, ‘ನಿನ್ನ ವಿಡಿಯೋ ಮತ್ತು ಬೆತ್ತಲೆ ಫೋಟೋಗಳನ್ನು ನಿನ್ನ ಗಂಡನಿಗೆ ವಾಟ್ಸಪ್​ನಲ್ಲಿ ಕಳುಹಿಸಿದರೆ ಏನಾಗುತ್ತದೆ ಗೊತ್ತಿದೆಯೇ’ ಎಂದು ಹೆದರಿಸಿದಳು. ತನ್ನ ಜೀವನ ಹಾಳಾಗುತ್ತದೆ ಎನ್ನುವ ಭಯದಿಂದ ಸರಳಾ ಒಪ್ಪಬೇಕಾಯಿತು. ಸತ್ಯನಾರಾಯಣ ಮುಂದಿನ ಒಂದು ವರ್ಷ ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ. ಇಷ್ಟರಲ್ಲಿ ರಜೆಗೆಂದು ವೇಣು ಹದಿನೈದು ದಿನಗಳ ಕಾಲ ಊರಿಗೆ ಬಂದು ದುಬೈಗೆ ವಾಪಸ್ಸಾದ. ಆತ ಹೋದ ಒಂದು ತಿಂಗಳ ನಂತರ ಸರಳಾ ಗರ್ಭಿಣಿಯಾದಳು. ಈ ಸುದ್ದಿ ಕೇಳಿ ಎರಡೂ ಕುಟುಂಬಗಳಿಗೆ ಖುಷಿಯಾದರೂ ಸರಳಾಗೆ ಖಿನ್ನತೆ ಆವರಿಸಿತು. ಏಕೆಂದರೆ ಅವಳಿಗೆ ಮಗು ವೇಣುವಿನದಲ್ಲವೇನೋ ಎಂಬ ಅನುಮಾನವಿತ್ತು. ಸ್ವಾಮೀಜಿ ಬಲಾತ್ಕಾರ ಮಾಡಿದ ವಿಷಯವನ್ನು ಗಂಡನಿಗೆ ಹೇಳಬೇಕೆಂದು ಆಕೆ ಮನಸ್ಸು ಮಾಡಿದರೂ ಧೈರ್ಯ ಬರಲಿಲ್ಲ. ಮುಂದೆ ಗಂಡು ಮಗು ಜನಿಸಿದ ಕೂಡಲೇ ಸರಳಾ ನಡೆದ ವಿಷಯವನ್ನು ವೇಣುವಿನಿಂದ ಇನ್ನು ಮುಚ್ಚಿಡಬಾರದೆಂದು ನಿಶ್ಚಯಿಸಿ ಫೋನ್ ಮೂಲಕ ತಿಳಿಸಿದಳು. ಇದನ್ನು ಕೇಳಿದ ವೇಣು ಗಾಬರಿಯಾದ. ಏನೂ ಮಾತನಾಡದೆ ಅವಳ ಕರೆಯನ್ನು ಕತ್ತರಿಸಿದ. ಸರಳಾಗೆ ಮುಂದೇನಾಗುವುದೋ ಎಂಬ ಚಿಂತೆ ಕಾಡತೊಡಗಿತು.

ಮಾರನೆಯ ದಿನ ವೇಣು ಅವಳಿಗೆ ಫೋನ್ ಮಾಡಿ ಸತ್ಯನಾರಾಯಣನ ವಿರುದ್ಧ ಪೊಲೀಸರಿಗೆ ದೂರು ನೀಡಲು ಸೂಚಿಸಿದ. ಅಂತೆಯೇ ಸರಳಾ ಮಹಿಳಾ ಸಂಘಟನೆಯೊಂದರ ಸದಸ್ಯರ ನೆರವಿನಿಂದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಳು. ಅತ್ಯಾಚಾರ ನಡೆದ ಸಮಯದಲ್ಲಿ ಸರಳಾ ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಪೋಕ್ಸೋ ಕಾಯಿದೆಯಡಿ ದೂರು ದಾಖಲಾಗಿ ಪೊಲೀಸರು ಸತ್ಯನಾರಾಯಣ ಮತ್ತು ಲಕ್ಷ್ಮಿಯನ್ನು ಬಂಧಿಸಿದರು. ಲಕ್ಷ್ಮಿಯ ಫೋನನ್ನು ಜಪ್ತುಮಾಡಿಕೊಂಡು ಅದರಲ್ಲಿ ಸರಳಾಳ ಮೇಲೆ ಅತ್ಯಾಚಾರವಾಗಿದ್ದ ದೃಶ್ಯಗಳಿರುವುದನ್ನು ಪೊಲೀಸರು ಸಾಕ್ಷ್ಯವನ್ನಾಗಿ ಪರಿಗಣಿಸಿದರು. ಸರಳಾಳ ಮಗು ಸತ್ಯನಾರಾಯಣನದೇ ಎಂದು ಡಿಎನ್​ಎ ಪರೀಕ್ಷೆಯಿಂದ ಸಾಬೀತಾಯಿತು. ನ್ಯಾಯಾಲಯವು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತು.

‘ಕ್ಷಮೆಯು ಭೂತಕಾಲವನ್ನು ಬದಲಿಸುವುದಿಲ್ಲ, ಆದರೆ ಅದು ಭವಿಷ್ಯವನ್ನು ವಿಸ್ತರಿಸುತ್ತದೆ’ ಎಂದ ಅಮೆರಿಕದ ಲೇಖಕ ಪಾಲ್ ಬೋಯೆಸ್​ನ ಮಾತುಗಳನ್ನು ಅನುಸರಿಸಿದ ವೇಣು ದುಬೈನಿಂದ ಭಾರತಕ್ಕೆ ವಾಪಸಾಗಿ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಪತ್ನಿಯ ಬೆಂಬಲಕ್ಕೆ ನಿಂತ. ಪತ್ನಿ ಹಾಗೂ ಮಗುವೊಂದಿಗೆ ಈಗಾತ ಸುಖೀಜೀವನ ನಡೆಸುತ್ತಿದ್ದಾನೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net